ಕಥಾಲೋಕ

ಮೂಕ ಕಹಳೆ: ಗಿರಿಜಾ ಜ್ಞಾನಸುಂದರ್

ಕೈಯಲ್ಲಿ ಮಿಠಾಯಿ ಡಬ್ಬಿ ಹಿಡಿದು ಅಮ್ಮನ ಬಳಿ ಓಡಿ ಬಂದಳು ಆರತಿ, “ಅಮ್ಮ, ನಾನು     ಎಸ್ಎಸ್ಎಲ್ಸೀ ಪಾಸ್ ಆದೆ, ಫಸ್ಟ್ ಕ್ಲಾಸ್” ಎಂದು ಹೇಳುತ್ತಾ ಅಮ್ಮನ ಬಾಯಿಗೆ ಸಿಹಿಯನ್ನು ತುರುಕಿದ್ದಳು. ಅಮ್ಮನ ಖುಷಿಯನ್ನು ಅಮ್ಮ ತನ್ನ ಮುಗುಳ್ನಗೆಯಲ್ಲಿ ತಿಳಿಸಿದಳು. ಮನೆಯಲ್ಲಿ ಸಂಭ್ರಮ.

ಒಂದು ವಾರವಾಗಿತ್ತು. ಯಾವ ಕಾಲೇಜು ಸೇರುವುದು, ಯಾವ ವಿಷಯ ಓದುವುದು ಎಂದು ಚರ್ಚೆ ನಡೆಯುತ್ತಿತ್ತು. ಆರತಿಯ ಅಜ್ಜಿ ಮನೆಗೆ ಬಂದರು. ಅಜ್ಜಿಗೂ ಸಿಹಿ ಕೊಟ್ಟದಾಯಿತು, ಸಂತೋಷ ಹಂಚಿದ್ದಾಯಿತು. ಆದರೂ ಅಜ್ಜಿ ಯಾಕೋ ಸಂತೋಷದಲ್ಲಿದ್ದಂತಿರಲಿಲ್ಲ. ಆರತಿಯ ಅಮ್ಮ ತನ್ನಮ್ಮನನ್ನು ವಿಚಾರಿಸಿಕೊಂಡಳು “ಏನಾಯಿತು ಅವ್ವ, ಏನು ವಿಷಯ? ಮನೆಯಲ್ಲಿ ಎಲ್ಲರು ಚೆನ್ನಾಗಿದ್ದರೆ ತಾನೆ? ಏನೋ ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಿದ್ದೀಯ… ಹೇಳು” ಅವಳ ಅವ್ವ ನಿಧಾನವಾಗಿ ಮನಸ್ಸು ಬಿಚ್ಚತೊಡಗಿದಳು “ಇತ್ತೀಚಿಗೆ ಯಾಕೋ ಪುರುಷೋತ್ತಮ ತುಂಬ ವಿಚಿತ್ರವಾಗಿದ್ದಾನೆ ಅನ್ನಿಸುತ್ತಿದೆ ಕಣೆ, ಸಮಯಕ್ಕೆ ಸರಿಯಾಗಿ ಮನೆಗೆ ಬರೋಲ್ಲ, ಕೆಲಸಕ್ಕೆ ಆಗಾಗ್ಗೆ ಹೋಗಲ್ಲವಂತೆ, ಎಲ್ಲಿಗೆ ಹೋಗುತ್ತಾನೋ ತಿಳಿಯುತ್ತಿಲ್ಲ, ಕೇಳಿದರೆ ಕೂಗಾಡುತ್ತಾನೆ. ನನಗು ವಯಸ್ಸಾಯ್ತು. ಅವನಿಗೂ ಮೂವತ್ತಾಯ್ತು, ಮದುವೆ ಮಾಡೋಣ ಅಂತ ಯೋಚನೆ ಮಾಡ್ತಿದೀನಿ ಕಣೆ. ನೀನೇನಂತೀಯಾ?” “ಹೌದಮ್ಮ, ನಾನು ಹೇಳೋಣ ಅಂತಿದ್ದೆ. ಅವನಿಗೆ ಯಾವಾಗ್ಲಾದ್ರೂ ಸ್ವಲ್ಪ ಜವಾಬ್ದಾರಿ ಬರಬಹುದು, ಮದುವೆ ಮಾಡು.” “ಸರಳ…. ನಿನ್ನ ಒಂದ್ ಮಾತು ಕೇಳಲಾ? ಬೇಜಾರು ಮಾಡ್ಕೊಬಾರದು……. ನಿಂಗೇನು ಬೇಜಾರಿಲ್ಲಾಂದ್ರೆ ನಮ ಆರತಿನೇ ಅವ್ನಿಗೆ ತೊಗೊಳ್ಳೋಣ ಅಂತ… ಏನಂತೀಯಾ?” “ಅವ್ವಾ… ಅವಳಿನ್ನು ಸಣ್ಣವಳು. ಈಗಿನ್ನು ಹದಿನೈದು ತುಂಬಿದೆ.. ಏನ್ ಮಾತು ಅಂತ ಆಡತೀಯಾ….. ಪ್ರಪಂಚಾನೇ ಕಾಣದ ಹುಡುಗಿ ಅದು” “ಅಲ್ಲ ಕಣೆ, ನಮ್ಮನೇಲಿ ಓದಲಿ ಬಿಡು.. ನಾನು ಅವಳ ಅಜ್ಜಿನೆ ಅಲ್ವಾ, ಬೇಡ ಅಂತೇನ? ಅವನಿಗೂ ಒಂದು ಮೂಗುದಾರ ಹಾಕ್ಕಿದ್ದಂಗೆ ಆಗುತ್ತೆ. ಅವಳು ನನ್ನತ್ರ ಜೋಪಾನವಾಗಿರ್ತಳೆ. ಏನು ಕಷ್ಟ ಆಗಲ್ಲ.. ನಾನಿದೀನಲ್ಲ.. ಯೋಚನೆ ಮಾಡು. ನಿನ್ ಗಂಡನ ಹತ್ರ ಮಾತಾಡು….. ಇನ್ನೊಂದು ವಾರ ಬಿಟ್ಟು ನಿಮ್ ಅಭಿಪ್ರಾಯ ಹೇಳು. ಹುಡುಗಿಗೆ ಮದುವೆ ಅಂತೂ ಮಾಡಲೇ ಬೇಕು. ನಿನ್ ತಮ್ಮಂಗೆ ಕೊಟ್ಟು ಮಾಡಿದ್ರೆ ನಿಂಗು ಧೈರ್ಯ ಅಲ್ವಾ. ನಿನ್ ಮಗಳು ನಿನ್ ತವರು ಮನೆಲ್ಲೇ ಇರ್ತಳೆ”.

ಆರತಿ ತನ್ನ ಗೆಳತಿಯರ  ಜೊತೆ ಪ್ರವಾಸ ಹೋಗಬೇಕೆಂದು ಕೇಳಿದ್ದಳು. ಅವಳ ಅಪ್ಪ ಅಮ್ಮ ಅವಳನ್ನು ಕಳುಹಿಸಿ ಕೊಟ್ಟು ಮನೆಗೆ ಬಂದು ಅವಳ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಸರಳಾಳ ಗಂಡ ಸರ್ಕಾರೀ ಗುಮಾಸ್ತ. ಇದ್ದುದರಲ್ಲಿ ತನ್ನ ೩ ಜನ ಹೆಣ್ಣು ಮಕ್ಕಳು, ತನ್ನ ತಾಯಿ, ತಮ್ಮಂದಿರು ಎಲ್ಲರನ್ನು ನೋಡಿಕೊಳ್ಳುವುದು ಬಹಳ ಕಷ್ಟ ಆದರೂ, ಸ್ವಾಭಿಮಾನವನ್ನು ಬಿಡದೆ ಎಲ್ಲರನ್ನು ಸಮಾಧಾನ ಪಡಿಸುತ್ತಿದ್ದ. ಅವನಿಗೆ ತನ್ನ ಪ್ರೀತಿಯ ಮಗಳನ್ನು ಮದುವೆ ಮಾಡುವ ವಿಷಯ ಸ್ವಲ್ಪವೂ ಸಂತೋಷ ತರಲಿಲ್ಲ.. ಆದರೆ ಹಿರಿಯ ಮಗಳನ್ನು ತನ್ನ ಭಾವಮೈದುನನಿಗೆ ಕೊಟ್ಟರೆ ತಪ್ಪೇನಿಲ್ಲ. ಹುಡುಗ ಚೆನ್ನಾಗಿ ಓದಿದ್ದಾನೆ, ದೊಡ್ಡ ಕೆಲಸದಲ್ಲೇನು ಇಲ್ಲ, ಅಂಥಾ ಸ್ಥಿತಿವಂತರೇನಲ್ಲ. ಆದರೆ ನಮ್ಮ ಹುಡುಗನೇ ಆದ್ದರಿಂದ ಒಂದು ಧೈರ್ಯ. ಅವನ ಸಹಾಯಕ್ಕೆ ನಾನೇ ನಿಲ್ಲಬಹುದು ಅನ್ನೋ ಧೈರ್ಯ. ಕೊನೆಗೂ ಒಂದು ವಾರ ಯೋಚನೆ ಮಾಡಿ, ಮದುವೆ ಮಾಡುವ ತೀರ್ಮಾನಕ್ಕೆ ಬಂದರು. ಮಗಳನ್ನು ಕರೆದು ಒಪ್ಪಿಸಿದ್ದು ಆಯಿತು. ಪಾಪ, ಆ ಹುಡುಗಿಗೆ ಏನು ಹೇಳಬೇಕೆಂದು ತಿಳಿಯದ ವಯಸ್ಸು. ತನ್ನ ಪ್ರೀತಿಯ ಅಪ್ಪ ಹೇಳಿದ ಮೇಲೆ ಆಯಿತು ಎಂದು ಒಪ್ಪಿದಳು.

ತೀರಾ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಮುಗಿಯಿತು. ವಯಸ್ಸಿನಲ್ಲಿ ೧೫ ವರ್ಷ ದೊಡ್ಡ ಗಂಡ. ತೀರಾ ಮುಂಗೋಪಿ, ಸಿಡುಕ, ಒರಟ,ಬಲಿಷ್ಠ ದೇಹ.   ತನ್ನ ಮೈಮೇಲೆ ಎರಗಿ ತನ್ನ ದಾಹ ತೀರಿಸಿ ಕೊಳ್ಳುತ್ತಿದ್ದ. ಅವಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ವನ್ನು ಪ್ರೀತಿ ಎಂದು ಕರೆಯಲಾಗುತ್ತಿತ್ತು. ಅವಳಿಗೆ ಅದನ್ನು ಏನೆಂದು ತಿಳಿಯಲು ಬಹಳ ವರ್ಷಗಳೇ ಬೇಕಾಯಿತು. ಅದನ್ನು ತಿಳಿಯುವಷ್ಟರಲ್ಲಿ ೪  ತಿಂಗಳ ಗರ್ಭಿಣಿ. ತನ್ನ ತಾಯಿಯ ಬಳಿ ಬಂದು ತನ್ನ ದುಃಖ ಹೇಳಿಕೊಂಡಳು. “ಗಂಡಸರು ಹಾಗೆ ಮಗಳೇ, ನಾವು ಹೆಣ್ಣುಮಕ್ಕಳು ಸ್ವಲ್ಪ ಸಹಿಸಿಕೊಳ್ಳಬೇಕು, ಆಗಲೇ ಜೀವನ ಚೆನ್ನಾಗಿರೋದು. ಸ್ವಲ್ಪ ತಗ್ಗಿ ಬಗ್ಗಿ ನಡೀಬೇಕು. ಈಗ ಈ ಮಗು ಇಷ್ಟು ಬೇಗ ಬೇಡವಾಗಿತ್ತು. ಸರಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರೋಣ. ನನಗೆ ತಿಳಿದಿರುವ ಡಾಕ್ಟರ್ ಒಬ್ಬರು ಇದ್ದಾರೆ. ತೆಗಿಸಿಬಿಡೋಣ”.

ಆರತಿಗೆ ನಿದ್ದೆ ಬರಲಿಲ್ಲ, ತನ್ನೊಳಗಿನ ಜೀವ ಹೇಗಿದೆಯೋ ಏನೋ, ನನ್ನ ರಕ್ತ, ನನ್ನ ದೇಹ ಹಂಚಿಕೊಂಡು ನನ್ನೊಳಗೆ ಮಿಡಿಯುತ್ತಿದೆ ಒಂದು ಪುಟ್ಟ ಹೃದಯ. ಅದನ್ನು ಹೇಗೆ ಕೊಲ್ಲುವುದು? ಅದನ್ನು ಸಾಕಲು ನನಗೆ ಅಸಾಧ್ಯವೇ? ನಾನಿನ್ನು ಚಿಕ್ಕವಳು. ನಂಗೊಂದು ಚಿಕ್ಕ ಮಗು, ಅದನ್ನು ಹೇಗೆ ನೋಡಿಕೊಳ್ಳುವುದು? ಯೋಚಿಸುತ್ತ ಮಲಗಿದಳು.

ಆರತಿಯನ್ನು ಅವಳ ಅಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು. ಪರಿಚಯ ಇರುವ ಡಾಕ್ಟರ್ ಹತ್ತಿರ ಬಂದು “ನನ್ನ ಮಗಳಿಗೆ ಬೇಗ ಮದುವೆ ಮಾಡಿದ್ದೆವು. ಇನ್ನು ಚಿಕ್ಕ ಹುಡುಗಿ. ನನ್ನ ತಮ್ಮನೇ ಎಂದು ೧೫ಕ್ಕೆ ಮದುವೆ ಮಾಡಿದ್ದೆವು, ಈಗ ನೋಡಿದರೆ ಈಹುಡುಗಿ ಗರ್ಭಿಣಿ. ಇನ್ನು ೧೬ ವರ್ಷವು ತುಂಬಿಲ್ಲ. ಒಂದು ಮಗುವನ್ನು ಹೆರುವ ಶಕ್ತಿಯು ಇಲ್ಲ, ದಯವಿಟ್ಟು ನೀವು ಏನಾದರು ಮಾಡಬೇಕು ಮೇಡಂ” ಎಂದು ಕೈಮುಗಿದಳು. “ಏನಮ್ಮ, ನೀವು ವಿದ್ಯಾವಂತರಾಗಿ ಇಂಥ ಕೆಲಸ ಮಾಡಬಹುದಾ? ಇನ್ನು ಹದಿನೆಂಟು ಆಗಿಲ್ಲ, ಈ ಹುಡುಗಿಗೆ ಮದುವೆ.. ಗರ್ಭಿಣಿ ಕೂಡ.. ಛೆ! ನಿಮಗೆ ಏನು ಹೇಳುವುದು? ಸರಿ ಬನ್ನಿ ನೋಡೋಣ..” ಎಂದು ತಪಾಸಣೆ ಮಾಡಿ ನೋಡಿದರು. ಮಗು ಆರೋಗ್ಯವಾಗಿ ಬೆಳೆಯುತ್ತಿದೆ. ಹುಡುಗಿಯ ದೇಹ ಆರೋಗ್ಯವಾಗಿರುವುದರಿಂದ ಮಗುವಿಗೆ ಏನು ತೊಂದರೆ ಆಗುವುದಿಲ್ಲ. ಆದರೆ ಇಷ್ಟುಸಣ್ಣ ವಯಸ್ಸಿನಲ್ಲಿ ಈ ಗರ್ಭವನ್ನು ತೆಗೆದರೆ ತೊಂದರೆ ಆಗಬಹುದು ಎಂದು ಹೇಳಿ ಆರತಿಯನ್ನು ಅವಳ ಅಮ್ಮನನ್ನು ಕಳುಹಿಸಿದರು.

ಸರಿ ಇನ್ನು ಏನು ಮಾಡುವುದು …… ಇನ್ನು ಸೀಮಂತ, ಮಡಿಲು ತುಂಬುವುದು ಎಲ್ಲವು ನಡೆಯಿತು. ಆರತಿ ಆರೋಗ್ಯವಾದ ಒಂದು ಹೆಣ್ಣು ಮಗುವನ್ನು ಹೆತ್ತಳು. ಮಗುವನ್ನು ನೋಡಿಕೊಳ್ಳುವುದು ಏನು ತಿಳಿಯದ ಹುಡುಗಿ….. ಎಲ್ಲರಿಂದಲೂ ಕಲಿತು ಒಂದು ವರ್ಷ ತನ್ನ ತಂದೆತಾಯಂದಿರ ಜೊತೆ ಕಳೆದು ಮಗುವನ್ನು ಕರೆದುಕೊಂಡು ಗಂಡನ ಮನೆಗೆ ಬಂದಳು. ತುಂಬ ಮುದ್ದಾದ ಮಗು. ಆದರೆ ಗಂಡನಿಗೆ ಅವಳಲ್ಲಿ ಆಗಲಿ ಮಗುವಿನಲ್ಲಾಗಲಿ ಆಸಕ್ತಿ ಇಲ್ಲ. ಏನೋ ಮನೆಗೆ ಬರುತ್ತಾನೆ, ಹೋಗುತ್ತಾನೆ. ಅವಳ ಮನಸ್ಸಿನ  ಗೊಂದಲ ಹೆಚ್ಚಾಗುತ್ತಿತ್ತು. ದಿನೇ ದಿನೇ ಅವನ ನಡವಳಿಕೆಯಲ್ಲಿ ಅವಳಿಗೆ ಅನುಮಾನ ಬರುತ್ತಿತ್ತು. ಒಂದು ದಿನ ಮಗುವನ್ನು ತನ್ನ ಅಜ್ಜಿಯ ಬಳಿ ಬಿಟ್ಟು, ಅವಳ ಗಂಡನ ಕೆಲಸದ ಜಾಗಕ್ಕೆ ಬಂದಳು. ಮಧ್ಯಾಹ್ನ ಕಚೇರಿಯಲ್ಲಿ ಯಾರು ಇರಲಿಲ್ಲ. ಎಲ್ಲರು ಊಟಕ್ಕೆ ಹೋಗಿದ್ದರು. ಅವಳ ಗಂಡನ ಸಹೋದ್ಯೋಗಿ ಮತ್ತು ಹಿರಿಯರಾದ ವಿಶ್ವನಾಥಪ್ಪ ಇದ್ದರು. ಅವರಿಗೆ ಇವಳನ್ನು ಕಂಡು ಆಶ್ಚರ್ಯ! ” ಬಾಮ್ಮ. ಕೂತ್ಕೋ. ಹೇಗಿದ್ದೀ? ಮಗು ಹೇಗಿದೆ?” ವಿಚಾರಿಸುತ್ತಾ “ಪುರುಷೋತ್ತಮ ಯಾಕೋ ಈನಡುವೆ ಸ್ವಲ್ಪ ದಾರಿ ತಪ್ಪಿದ್ದಾನಮ್ಮಾ… ನಿನಗೆ ಹೇಗೆ ಹೇಳುವುದು ಎಂದು ಯೋಚಿಸುತ್ತಿದ್ದೆ…. ಅವನಿಗೆ ಮದುವೆಗೆ ಮುಂಚೆಯೇ ಸ್ವಲ್ಪ ದುಶ್ಚಟ ಇತ್ತು. ಮದುವೆ ಆದಮೇಲೆ ಸರಿ ಹೋಗಬಹುದು ಅಂದು ಕೊಂಡಿದ್ದೆ. ಆದರೆ ಅವನು ಸರಿಹೋದಂತೆ ಕಾಣುತ್ತಿಲ್ಲ. ಅವಳ ಮನೆಗೆ ಇನ್ನು ಹೋಗುತ್ತಾನೆ. ಕೆಲಸಕ್ಕೆ ಸರಿಯಾಗಿ ಬರುವುದಿಲ್ಲ. ನನ್ನ ಸಾಕಷ್ಟು ಹೇಳಿದ್ದೇನೆ. ಅವಳು ಸಾಮಾನ್ಯದವಳಲ್ಲ. ಬಹಳಷ್ಟು ಮನೆಗಳನ್ನು ಹಾಳು ಮಾಡಿದ್ದಾಳೆ. ನೀನು ಹೇಗಾದರೂ ಮಾಡಿ ನಿನ್ನ ಸಂಸಾರನ ಕಾಪಾಡ್ಕೋಬೇಕು” ಆರತಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ಇನ್ನು ಹದಿನೆಂಟು ವರ್ಷ ವಯಸ್ಸು. ಈ ವಯಸ್ಸಿಗೆ ಗಂಡ, ಮಗು, ಸಂಸಾರ. ಜೊತೆಯಲ್ಲಿ ಈ ಫಜೀತಿ. ಹೇಗೆ ಇದನ್ನು ಸರಿಪಡಿಸುವುದು. ತಿಳಿಯಲಿಲ್ಲ. ಮನೆಗೆ ಬಂದವಳೇ ಮಗುವನ್ನು ಕರೆದುಕೊಂಡು ಅಮ್ಮನ ಮನೆಗೆ ಬಂದಳು. ಬಂದವಳೇ ಕಣ್ಣೀರು ಹಾಕುತ್ತ ತನ್ನ ಕಥೆಯನ್ನು ಅಪ್ಪ ಅಮ್ಮನೆದುರು ಹೇಳಿಕೊಂಡಳು. ಅವಳ ಮಾತನ್ನು ಕೇಳಿದ ಅವಳ ಅಪ್ಪ “ನೋಡು ಮಗಳೇ, ಗಂಡಸು ಎಂದ ಮೇಲೆ ಇಂಥದ್ದೆಲ್ಲ ಇದ್ದದ್ದೇ. ಅವನಿಗೆ ಮದುವೆ ತಡವಾದ್ದರಿಂದ ಇವೆಲ್ಲ ಸಹಜ. ನೀನು ಅವನನ್ನು ಸರಿಪಡಿಸಬೇಕು… ಗಂಡನ ತಪ್ಪನ್ನು ಹೊಟ್ಟೆಗೆ ಹಾಕಿಕೊಂಡು ಅವನನ್ನು ತಿದ್ದಬೇಕು. ಹೆಣ್ಣು ಕ್ಷಮಯಾಧರಿತ್ರಿ.. ನಿನ್ನ ಒಳ್ಳೆಯತನದಿಂದ ಅವನನ್ನು ದಾರಿಗೆ ತರಬೇಕು. ನಾನು ಅವನಿಗೆ ಬುದ್ಧಿ ಹೇಳುತ್ತೇನೆ. ಆದರೆ ನೀನು ನಿನ್ನ ಸಂಸಾರವನ್ನು ನಿಭಾಯಿಸಬೇಕು. ಇಲ್ಲಿಗೆ ಬಂದು ಸೇರಿಕೊಳ್ಳುವುದು ಸರಿಯಲ್ಲ…. ಹೊರಡು. ಗಂಡನ್ನು ಬಿಟ್ಟು ಬರುವುದೊಂದೇ ದಾರಿಯಲ್ಲ” .

ಅಪ್ಪನ ಮಾತು ಕೇಳಿ ಆಘಾತವಾಗಿತ್ತು ಆರತಿಗೆ. ನನ್ನ ಭಾವನೆಗೆ ಬೆಲೆಯೇ ಇಲ್ಲವೇ. ತನ್ನ ಹೆತ್ತವರೇ ಹೀಗೆಂದಮೇಲೆ ನಾನೆಲ್ಲಿಹೋಗಲಿ? ಈ ಮಗು ಬೇರೆ… ಮಗುವೊಂದಿಲ್ಲದಿದ್ದರೆ ಯಾವುದಾದರೂ ಕೆರೆಗೋ ಬಾವಿಗೋ ಹಾರಬಹುದಿತ್ತು. ದೇವರಂಥ ಮಗು… ಅದರ ಪ್ರಾಣ ತೆಗೆಯುವುದಾದರೂ ಹೇಗೆ? ಛೆ! ಹಾಗಾಗಬಾರದು. ಹೇಗಾದರೂ ಮಾಡಿ ನನ್ನ ಜೀವನ ಸರಿಪಡಿಸಬೇಕು ಹಾಗು ಸಾರ್ಥಕ ಬದುಕು ಬದುಕಬೇಕು. ನನ್ನ ಜೀವನ ನನ್ನ ತಂಗಿಯರಿಗೆ ಮಾದರಿ ಆಗಬೇಕು.

ಕಣ್ಣೀರೊರೆಸಿಕ್ಕೊಳ್ಳುತ್ತ ಗಂಡನ ಮನೆಗೆ ಬಂದಳು. ಅಜ್ಜಿ ತನ್ನ ದಾರಿಯನ್ನೇ ನೋಡಿತ್ತಿದ್ದರು. “ಎಲ್ಲಿ ಹೋಗಿದ್ದೆ ಮಗು? ಏನು ಹೇಳಲಿಲ್ಲ? ಏನಾಯಿತು… ಆರೋಗ್ಯ ಸರಿ ತಾನೇ?” “ಏನಿಲ್ಲ ಅಜ್ಜಿ.. ಎಲ್ಲ ಸರಿ ಇದೆ,… ನಿನ್ನ ಮಗ ಮಾತ್ರ ಸರಿ ಇಲ್ಲ” ಎಂದು ನಡೆದುದ್ದನ್ನು ಹೇಳಿದಳು. “ಅವನು ಮದುವೆಗೆ ಮುಂಚೆ ಹೀಗಿದ್ದ… ನಿನ್ನ ಮದುವೆ ಆದಮೇಲೆ ಸರಿಹೋಗುತ್ತಾನೆಂದು ಯೋಚಿಸಿದ್ದೆ.. ಇನ್ನು ಅವಳ ಸಹವಾಸ ತಪ್ಪಿಲ್ಲ.. ಏನು ಮಾಡಲಿ ಭಗವಂತಾ!” ಎಂದು ಕಣ್ಣೀರು ಸುರಿಸಿದರು. ಇಬ್ಬರೂ ಸೇರಿ ಅವನನ್ನು ಸರಿ ಮಾಡುವ ದಾರಿ ಯೋಚಿಸುತ್ತ… ಅವನು ಬಂದದ್ದನ್ನು ಗಮನಿಸಲೇ ಇಲ್ಲ. ಪುರುಷೋತ್ತಮ ಬಂದವನೇ ಇವರ ಮಾತನ್ನು ಕೇಳಿಸಿಕೊಂಡು ಜೋರಾಗಿ ಕೂಗಾಡುತ್ತಾ “ಏನು, ಮನೆಯಲ್ಲಿ ಹೇಳೋರು ಕೇಳೋರು ಯಾರು ಇಲ್ವಾ? ಹಿಂಗೇ ಕೂತ್ಕೊಂಡು ಮಾತಾಡ್ತಿರಿ… ಮನೆ ಕೆಲಸ ಏನು ನಿಮ್ಮಪ್ಪ ಬಂದು ಮಾಡತಾರ? ಹೋಗು… ”

ಆರತಿಗೆ ತನ್ನ ಜೀವನ ಸರಿಹೋಗುವ ಲಕ್ಷಣಗಳು ಕಡಿಮೆ ಅನ್ನಿಸುತ್ತಿತ್ತು. ದಿನೇದಿನೇ ಅವನ ನಡತೆ ಹದಗೆಡುತ್ತಿತ್ತು. ಮನೆಗೆ ಬರುವುದು ಬಹಳ ತಡವಾಗುತ್ತಿತ್ತು. ಅವನ ಬಳಿ ಕೆಟ್ಟ ವಾಸನೆ ಸಹ ಬರುತ್ತಿತ್ತು. ಅವನಿಗೆ ತನ್ನ ಮುದ್ದಾದ ಮಗು ಎಂದು ಕಾಣಿಸುತ್ತಲೇ ಇರಲಿಲ್ಲ. ಅದರ ಮುದ್ದಾದ ಮಾತು, ಆಟ ಪಾಠ ಅವನ ಗಮನಕ್ಕೆ ಬರುತ್ತಲೇ ಇರಲಿಲ್ಲ. ಅವನಿಗೆ ಈ ಸಂಸಾರ ಬೇಕಿರಲಿಲ್ಲ. ಹೊರಗಿನವಳ ಒಡನಾಟ ಹೆಚ್ಚಾಗಿತ್ತು. ಒಮ್ಮೊಮ್ಮೆ ಮನೆಗೆ ಬರುತ್ತಲೇ ಇರಲಿಲ್ಲ. ಏನೋ ಒಂದು ಸುಳ್ಳು ಹೇಳಿ ಹೊರಗೆ ಉಳಿದು ಕೊಳ್ಳುತ್ತಿದ್ದ. ಮಗುವನ್ನು ಶಾಲೆ ಗೆ ಸೇರಿಸಬೇಕು, ಗಂಡನಿಂದ ಏನು ಸಹಾಯ ಸಿಗುವುದಿಲ್ಲ ಎಂದು ತಿಳಿದ ಆರತಿ ತನ್ನ ಬಿಡುವಿನ ವೇಳೆಯಲ್ಲಿ ಕಲಿತಿದ್ದ ಹೊಲಿಗೆ ಕೆಲಸವನ್ನು ತನ್ನ ಜೀವನಕ್ಕೆಂದು ಶುರು ಮಾಡಿದಳು. ಅದರಲ್ಲಿ ಬಂದ ಹಣದಲ್ಲಿ ಮಗುವನ್ನು ಶಾಲಿಗೆ ಸೇರಿಸಿದಳು. ಆಗಾಗ್ಗ ಅವಳ ಅಪ್ಪ ಅಮ್ಮ ಬಂದು ಅವಳಿಗೆ ಒಂದಷ್ಟು ಹಣ ಕೊಟ್ಟು ಹೋಗುತ್ತಿದ್ದರು. ಆದರೂ, ಜೀವನಕ್ಕೆ ಅದು ಸಾಲುತ್ತಿರಲಿಲ್ಲ. ಅವಳ ಹೊಲಿಗೆಯ ಕೆಲಸ ಹೆಚ್ಚು ಹೆಚ್ಚು ಮಾಡಬೇಕಾಯಿತು.

ಮಗಳು ಶಾಲೆಯಲ್ಲಿ ತುಂಬ ಚೆನ್ನಾಗಿ ಓದುವುದನ್ನು ಕಂಡು ಆರತಿಗೆ ಜೀವನ ಸಾರ್ಥಕವೆನಿಸಿತ್ತು. ಆದರೆ ತನ್ನ ಗಂಡನ ವರ್ತನೆ ಇನ್ನು ಬಿಗಡಾಯಿಸುತ್ತಿತ್ತು. ತಾನು ಸಂಜೆ ವೇಳೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಅದರಿಂದ ಸ್ವಲ್ಪ ಹಣ ಬರುತ್ತಿದ್ದು, ಜೀವನಕ್ಕೆ ಸಹಾಯ ವಾಗಿತ್ತು. ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ಮಗು ಉಮೇಶ ಬಹಳ ತುಂಟ. ಅವನನ್ನು ಹಿಡಿಯುವುದು ಅವಳಿಗೆ ಕಷ್ಟ ಆದರೂ. ಅವನು ತುಂಬ ಮುದ್ದಾಗಿದ್ದರಿಂದ ಅವನ ತುಂಟಾಟ ಅವಳಿಗೆ ಮೆಚ್ಚುಗೆಯಾಗಿತ್ತು. ಒಮ್ಮೆ ಅವನನ್ನು ಬಿಡಲು ಅವನ ಚಿಕ್ಕಪ್ಪ ಬಂದಿದ್ದರು. ಅವನ ಓದಿನ ಬಗ್ಗೆ ವಿಚಾರಿಸುತ್ತಾ ಆರತಿಯ ಕೆಲಸ, ಜೀವನ ಹೀಗೆ ಮಾತು ನಡೆದಿತ್ತು. ತುಂಬ ಸಮಾಧಾನಸ್ಥ, ಮನಸ್ಪೂರ್ತಿ ನಗುವ, ಮಾತನಾಡಿಸುವ ವ್ಯಕ್ತಿ. ನೋಡಲು ಆಕರ್ಷಕ ಹಾಗು ಎತ್ತರದವಾಗಿದ್ದ ಅವರನ್ನು ಎಂಥ ಹುಡುಗಿಯು ಮತ್ತೊಮ್ಮೆ ನೋಡಬೇಕೆನಿಸುವಷ್ಟು ಚಂದದ ಮನುಷ್ಯ. ಅವನು ತನ್ನನ್ನು ಮಾತನಾಡಿಸುವಾಗ ಮನಸ್ಸು ಚಂಚಲ ಅನ್ನಿಸಿತು. ತನ್ನ ಚಂಚಲತೆಯ ಬಗ್ಗೆ ತನಗೆ ತಪ್ಪಿತಸ್ಥ ಭಾವ ಮೂಡಿತು.

ಆಗಾಗ್ಗೆ ಬಂದು ಹೋಗುತ್ತಿದ್ದ ಉಮೇಶನ ಚಿಕ್ಕಪ್ಪ ಮಧು ತನ್ನನ್ನು ಆಕರ್ಷಿಸಿದ್ದು, ಆರತಿಗೆ ಅದರ ಬಗ್ಗೆ ಭಯ ಶುರುವಾಗಿತ್ತು. ತಾನೇಕೆ ಹೀಗಾಗಿದ್ದೇನೆ? ಒಂದು ಮಗುವಿನ ತಾಯಿ.. ಜವಾಬ್ದಾರಿ ಇರುವ ಹೆಣ್ಣು ನಾನು…. ನನಗೇಕೆ ಇಂಥ ಭಾವನೆ?  ತನ್ನ ಬಯಕೆಗಳನ್ನು ತಿಳಿಯುವ ನಲ್ಲನಿಲ್ಲ, ಪ್ರೀತಿಯಿಂದ ಬಳಸುವ ಬಂಧನವಿಲ್ಲ, ಬಹಳ ಚಿಕ್ಕ ವಯಸ್ಸಿಗೆ ಭಾರವಾದ ಜೀವನ, ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸವೆಸುತ್ತಿರುವ ದೇಹ. ಇನ್ನು ಚಿಕ್ಕ ವಯಸ್ಸು, ಯಾರಿಗೆ ಹೇಳುವುದು ನನ್ನ ಮನಸ್ಸಿನ ದುಗುಡ? ಗಂಡನ ಬಳಿ ಮಾತನಾಡಲು ಹೋಗಿ ಬಹಳ ನೊಂದಿದ್ದೇನೆ.. ಅವನ ಗಲಾಟೆಯಿಂದ ನೊಂದಿದ್ದಾರೆ ಅಜ್ಜಿ. ಕಣ್ಣೀರಿಡುತ್ತ ನಿದ್ದೆಗೆ ಜಾರಿದ್ದಳು. ಬಹಳ ಹೊತ್ತಾದರೂ ಗಂಡನ ಸುಳಿವಿರಲಿಲ್ಲ. ಅವನು ಮನೆಗೆ ಬರುವ ಲಕ್ಷಣವು ಇರಲಿಲ್ಲ.

ಅಂದು ಆರತಿ ಹುಟ್ಟಿದ ದಿನ. ಇಪ್ಪತ್ನಾಲ್ಕು ವರ್ಷ. ಇನ್ನು ಇಪ್ಪತ್ನಾಲ್ಕು ಅಷ್ಟೇ. ಆದರೆ ಜೀವನ ಸಾಕೆನಿಸಿವಷ್ಟು ಮಟ್ಟಿಗೆ ನೋವು. ತನ್ನ ಮನಸ್ಸು ಮತ್ತೊಬ್ಬನೆಡೆಗೆ ವಾಲುತ್ತಿರುವುದನ್ನು ತಪ್ಪು ಎಂದು ಸಾರಿ ಸಾರಿ ಹೇಳುತ್ತಿರುವ ಮನಸ್ಸನ್ನು ಸಮಾಧಾನಗೊಳಿಸುವುದು ಆರತಿಗೆ ಕಷ್ಟವಾಗಿತ್ತು. ತಾನಾಗಿರುವುದು ಒಂದು ಹೆಣ್ಣು ಮಗು. ನಾನು ತಪ್ಪು ದಾರಿ ಹಿಡಿದರೆ ನನ್ನ ಮಗಳು ತನ್ನದೇ ದಾರಿ ಹಿಡಿಯುತ್ತಾಳೆ, ಮಾತು ಕೇಳಿಲ್ಲವೇ “ನೂಲಿನಂತೆ ಸೀರೆ, ತಾಯಿಯಂತೆ ಮಗಳು”… ನನ್ನ ಮನಸ್ಸಿನ ತುಮುಲ, ಆಕರ್ಷಿತಗೊಂಡು ಪಶ್ಚಾತ್ತಾಪ ಭಾವನೆ ಅನುಭವಿಸುತ್ತಿರುವ ನೊಂದಿರುವ ಭಾವ.

ಆರತಿಯ  ಹುಟ್ಟುಹಬ್ಬಕ್ಕೆಂದು ಅವಳ ಅಪ್ಪ ಅಮ್ಮ ಅವಳ ತಂಗಿಯರೊಂದಿಗೆ ಉಡುಗೊರೆಯನ್ನು ತಂದಿದ್ದರು. ಅವಳ ಮಗು ಅಜ್ಜಿ ಯನ್ನು ಕರೆದುಕೊಂಡು ಹೊರಗೆ ಹೋಗಿದ್ದಳು. ಬಾಗಿಲು ಮುಂದಕ್ಕೆ ಹಾಕಿತ್ತು. ಒಳಗೆ ಏನು ಸದ್ದಿಲ್ಲ. ಆರತಿ ತನ್ನ ರೂಮಿನ ಫ್ಯಾನಿಗೆ ತನ್ನ ಕೊರಳನ್ನು ಕೊಟ್ಟು ನೇತಾಡುತ್ತಿದ್ದಳು. ತನ್ನ ಭಾವನೆಯೇ ತಪ್ಪು ಎಂದು ಅಂತಹ ಭಾವನೆಗೆ ಪ್ರಾಯಶ್ಚಿತ್ತವಾಗಿ ತನ್ನ ಜೀವವನ್ನೇ ಬಲಿಕೊಟ್ಟಿದ್ದಳು. ಅವಳ ಅಪ್ಪ ಅಮ್ಮನಿಗೆ ತಮ್ಮ ತಪ್ಪಿನ ಅರಿವಾಗಿತ್ತೋ ಇಲ್ಲವೋ ಅವಳ ಜೀವನ ಕೊನೆಯಾಗಿತ್ತು. ಸಂಸ್ಕಾರವನ್ನು ತಿಳಿಸಿಕೊಡುವ ಭರದಲ್ಲಿ ಭಾವನೆಗೆ ಬೆಲೆಯೇ ಇಲ್ಲದಂತಾಗಿತ್ತು. ಹೆಣ್ಣು ಮಾತ್ರ ಸಂಸಾರವನ್ನು ನಿಭಾಯಿಸಬೇಕೆಂಬ ಭರದಲ್ಲಿ ಜೀವ ಕೊಡಬೇಕಾಯ್ತು. ಅವಳ ವೇದನೆಯನ್ನು ಕೇಳುವ ಕಿವಿ ಎಲ್ಲೂ ಇರಲಿಲ್ಲ.

-ಗಿರಿಜಾ ಜ್ಞಾನಸುಂದರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮೂಕ ಕಹಳೆ: ಗಿರಿಜಾ ಜ್ಞಾನಸುಂದರ್

Leave a Reply

Your email address will not be published. Required fields are marked *