ಅನಿ ಹನಿ

ಮೂಕಪ್ರೇಮ:ಅನಿತಾ ನರೇಶ್ ಮಂಚಿ ಅಂಕಣ


ಮನುಷ್ಯ ಕೂಡಾ ಪ್ರಾಣಿಗಳ ಕೆಟಗರಿಗೆ ಸೇರುತ್ತಾನಾದರೂ ತಾನು ಅವರಿಂದ ಮೇಲೆ ಎಂಬ ಗರಿಯನ್ನು ತಲೆಯ ಮೇಲೆ ಇಟ್ಟುಕೊಂಡೇ ಹುಟ್ಟಿ ಬರುತ್ತಾನೆ. ತಾನು ಎಲ್ಲಾ ಪ್ರಾಣಿಗಳನ್ನು ನನ್ನ ತಾಳಕ್ಕೆ ಕುಣಿಸಬಲ್ಲೆ ಎಂಬ ಹಮ್ಮು ಅವನದ್ದು. ಹಲವು ಬಾರಿ ಇದು ಸತ್ಯ ಎನ್ನಿಸಿದರೂ ಅವುಗಳೂ ಕೂಡಾ  ಬುದ್ಧಿವಂತಿಕೆಯಲ್ಲಿ ನಮ್ಮಿಂದ ಕಡಿಮೆಯಿಲ್ಲ ಎಂಬುದೇ ಪರಮಸತ್ಯ. ಇದಕ್ಕೆ ಹಲವು ನಿದರ್ಶನಗಳು ಅವುಗಳ ಒಡನಾಟವನ್ನಿಟ್ಟುಕೊಂಡವರ ನಿತ್ಯದ ಬದುಕಿನಲ್ಲಿ ಸಿಕ್ಕೇ ಸಿಗುತ್ತವೆ. ಇದರಲ್ಲಿ ಕೆಲವೊಂದು ನಗು ತರಿಸಿದರೆ ಇನ್ನು ಕೆಲವು ಪೇಚಿಗೆ ಸಿಕ್ಕಿಸುತ್ತವೆ. 

ನಮ್ಮ ಮನೆಯ ನಾಯಿ ಮರಿಗಳು ಟೈಗರ್ ಮತ್ತು ಫ್ರಾಂಕಿ. ಎರಡೂ ಊಟ ತಿಂಡಿಯ ವಿಷಯದಲ್ಲಿ ಬಹಳ ಚ್ಯೂಸಿ. ತುಪ್ಪ ಹಾಕಿ ಫ್ರೈ ಮಾಡಿದ ದೋಸೆ ಚಪಾತಿಗಳು ಅವರ ಮೆಚ್ಚಿನ  ತಿನಿಸುಗಳಾದರೆ ಹಬೆಯಲ್ಲಿ ಬೇಯಿಸಿದ ಇಡ್ಲಿ, ಕಡುಬುಗಳನ್ನು ಕಣ್ಣೆತ್ತಿ ಕೂಡಾ ನೋಡುತ್ತಿರಲಿಲ್ಲ. ಹೊಟ್ಟೆಯಲ್ಲಿ ಹುಟ್ಟಿದ ಮಗನಿಗೂ ಯಾವುದನ್ನೂ ಬೇಡ ಎನ್ನದೇ ಎಲ್ಲಾ ಬಗೆಯ ತಿಂಡಿ ತಿನಿಸುಗಳನ್ನು ತಿನ್ನಬೇಕು ಎಂದು ತಾಕೀತು ಮಾಡಿ ಅವನನ್ನು ಸರ್ವಭಕ್ಷಕನನ್ನಾಗಿ ಮಾಡಿದ ಹೆಗ್ಗಳಿಕೆ ನನ್ನದು. ಹಾಗಿರುವಾಗ ಈ ಪುಟ್ಟ ಮರಿಗಳಿಗೆ  ಇವತ್ತು ಇಡ್ಲಿ ತಿನ್ನಲು ಕಲಿಸಿಯೇ ತೀರುತ್ತೇನೆಂದು  ಪಣ ತೊಟ್ಟೆ. ಆ ದಿನ ಮಾಡಿದ ಇಡ್ಲಿಯನ್ನು ಅವುಗಳ ಎದುರೇ ತಿಂದು ಇದೂ ಕೂಡಾ ತಿನ್ನುವ ವಸ್ತುವೇ ಎಂದು ಅವುಗಳಿಗೆ ಮನದಟ್ಟು ಮಾಡುವ ಪ್ರಯತ್ನಕ್ಕೆ ತೊಡಗಿದ್ದೆ.  ತಿಂಡಿಗಾಗಿ ಕಾಯುತ್ತಾ ಕುಳಿತಿದ್ದ ಅವುಗಳು ಇಡ್ಲಿಯನ್ನು ಕಂಡು ಬಾಲ ಅಲ್ಲಾಡಿಸುವುದನ್ನು ನಿಲ್ಲಿಸಿದವು. ನಾನು ಹಿಡಿದ ಹಠ ಬಿಡಬೇಕಲ್ಲ. ಆದರೆ ನಾನು ಅವುಗಳಿಗೆ ತಿಂಡಿ ಹಾಕುವ ಬದಲು ಇಡ್ಲಿಯನ್ನು ತುಂಡು ಮಾಡಿ  ನನ್ನ ಬಾಯಿಗೆ  ಹಾಕಿಕೊಂಡು ನಿಧಾನಕ್ಕೆ ಜಗಿದು ಜಗಿದು ತಿಂದೆ. ಅವುಗಳು ನನ್ನನ್ನೇ ನೋಡುತ್ತಾ ಕುಳಿತಿದ್ದವು. ಈಗ ಅವುಗಳಿಗೆ ಇಡ್ಲಿ ಎಂಬುದು ತಿನ್ನುವ ಸೊತ್ತು ಎಂದು ಗೊತ್ತಾಗಿರಬಹುದು ಎಂದುಕೊಂಡು ತೊಳೆಯಬೇಕಿದ್ದ  ನನ್ನ ಖಾಲಿ ತಟ್ಟೆಯನ್ನು ಅಲ್ಲೇ ಇಟ್ಟು ಒಳಗೆ ಹೋಗಿ ಎರಡು ಇಡ್ಲಿ ತಂದು ಅವುಗಳ ಮುಂದಿಟ್ಟೆ. ಒಂದು ಮರಿ ಗಬಕ್ಕನೆ ಇಡ್ಲಿಗೆ ಬಾಯಿ ಹಾಕಿದರೂ ಅದೇ ವೇಗದಲ್ಲಿ ಕೆಳಗೆಸೆದು ಬೇರೆತ್ತಲೋ ನೋಡಿತು. ಇನ್ನೊಂದಂತೂ ಅದನ್ನು ನೋಡುವುದೇ ಅಪರಾಧವೇನೋ ಎಂಬಂತೆ ಮುಖಭಾವ ಹೊತ್ತು ಕುಳಿತಿತ್ತು. ಸ್ವಲ್ಪ ಹೊತ್ತು ಪೂಸಿ ಮಾಡಿದೆ, ಗದರಿಸಿದೆ.. ಉಹೂಂ.. ಏನು ಮಾಡಿದರೂ ಇಡ್ಲಿಯನ್ನು ತಿನ್ನಿಸಲು ಸಾಧ್ಯವಾಗಲಿಲ್ಲ. ಸಿಟ್ಟಿನಿಂದ ಆ ಇಡ್ಲಿಯನ್ನು ತೋಟಕ್ಕೆಸೆದು ಇವತ್ತು ನಿಮಗೆ ಉಪವಾಸ ಎಂದು ಅವುಗಳಿಗೆ ಬಯ್ದು ಒಳ ಹೋದೆ. ಒಂದರ್ಧ ಘಂಟೆ ಕಳೆದಾಗ ನನ್ನ ಮನಸ್ಸು ಕರಗಿ ಪಾಪ ಪುಟ್ಟು ಮರಿಗಳು ಎಷ್ಟು ಹೊತ್ತು ಹಸಿವು ತಡೆದಾವು ಎಂದುಕೊಂಡು ಅವುಗಳ ಪ್ರೀತಿಯ ಚಪಾತಿ ಮಾಡಿ ತೆಗೆದುಕೊಂಡು ಅವರ ಬಳಿಗೆ ಹೋದೆ. ತಲೆಯನ್ನು ಕಾಲುಗಳ ನಡುವೆ ಹುದುಗಿಸಿ ಮಲಗಿದ್ದ ಎರಡೂ ಮರಿಗಳು ನನ್ನ ಕೈಯಲ್ಲಿದ್ದ ಚಪಾತಿಗೆ  ಬಾಲ ಅಲ್ಲಾಡಿಸುತ್ತಾ ಎದ್ದವು. ಆದರೆ ನನಗೆ  ಅಲ್ಲಿ ನಿಜಕ್ಕೂ ಇನ್ನೊಂದು  ಅಚ್ಚರಿ ಕಾದಿತ್ತು. ಅಲ್ಲೇ ಪಕ್ಕದಲ್ಲಿ ನಾನಿಟ್ಟು ಹೋಗಿದ್ದ ತಟ್ಟೆಯಲ್ಲಿ ಎರಡು ಇಡ್ಲಿಗಳು ನನ್ನನ್ನು ಕಾಯುತ್ತಾ ಕುಳಿತಿದ್ದವು. ಅರ್ರೇ.. ಇದೆಲ್ಲಿಂದ ಬಂತಪ್ಪಾ ಎಂದುಕೊಂಡು ನೋಡಿದರೆ ನಾಯಿ ಮರಿಗಳ ಕಾಲಲ್ಲಿ ಕೆಸರು ಮೆತ್ತಿರುವುದು ಕಾಣಿಸಿತು. ತೋಟಕ್ಕೆ ನಾನು ಎಸೆದ ಇಡ್ಲಿಗಳನ್ನು ಹೆಕ್ಕಿ ತಂದು ನನ್ನ ತಟ್ಟೆಯಲ್ಲಿಟ್ಟಿದ್ದವು. ನಗಬೇಕೋ ಅಳಬೇಕೋ ತಿಳಿಯದೆ ನಿಂತಿದ್ದೆ. 

ಇದೊಂದು  ಅಂದ ಕಾಲತ್ತಿಲ್ ವಿಷಯ. ಸರಿಯಾಗಿ ಒಂಬತ್ತು ಗಂಟೆಗೆ ಹೊರಡುತ್ತಿದ್ದ ವಿಜಯ ಮೋಟಾರ್ ಸರ್ವಿಸ್ ಬಸ್ಸನ್ನೇರಿ ಕುಳಿತಿದ್ದೆ.  ಶಾಲೆಯ ಚೀಲ ನನ್ನ ಪಕ್ಕದ ಸೀಟನ್ನು ಅಲಂಕರಿಸಿತ್ತು. ಬಸ್ಸು ಹೊರಡುವ ವೇಳೆಯಾದರೂ ಇನ್ನೂ ಬಾರದ ಗೆಳತಿಗಾಗಿ ಕುತ್ತಿಗೆ ಉದ್ದ ಮಾಡಿ ಕಾಯುತ್ತಾ ಕುಳಿತಿದ್ದೆ. ಆಗಲೇ ಬ್ರೇಂ.. ಎಂಬ ಶಬ್ಧವೂ ಕೈಯಲ್ಲಿ ಕೋಲು ಹಿಡಿದು  ತನ್ನ ಹಿಂದೆ ಬರುತ್ತಿರುವ ಎಮ್ಮೆಯ ಕರುವನ್ನು ಓಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಾ ಬರುತ್ತಿರುವ  ಗೆಳತಿಯು ಕಾಣಿಸಿದಳು. ಇದು ನಿತ್ಯದ ದೃಶ್ಯವಾದರೂ ಬಸ್ಸಿನಲ್ಲಿ ಇರುವವರಿಗೆ ಪುಕ್ಕಟೆ ಮನರಂಜನೆ. ಅವಳು ಮನೆಯಿಂದ ಹೊರಡುವಾಗಲೀ ಅವಳ ಬೆನ್ನು ಹಿಡಿಯುತ್ತಿದ್ದ ಮನೆಯ ಎಮ್ಮೆ ಕರು ಅವಳು ಹೋದಲ್ಲೆಲ್ಲಾ ಬೆನ್ನು ಬಿಡದೆ ಹಿಂಬಾಲಿಸುತ್ತಿತ್ತು. ಕೆಲವೊಮ್ಮೆ ಬಸ್ಸನ್ನು ಏರಲು ಪ್ರಯತ್ನಿಸುತ್ತಿದ್ದ ಅದನ್ನು ನೋಡಿ ನಗದಿರಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಆ ಮುಗ್ದ ಪ್ರೀತಿಗೆ ಬಸ್ಸಿನಲ್ಲಿದ್ದವರೆಲ್ಲಾ ಮರುಳಾಗಿದ್ದಂತೂ ಸುಳ್ಳಲ್ಲ.

ನಮ್ಮ ಪರಿಚಯದ ಹಿರಿಯರೊಬ್ಬರು ಬೆಳ್ಳಂಬೆಳಗ್ಗಿನ ಬಸ್ಸು ಹಿಡಿಯಲು ಇನ್ನೂ ಚುಮುಚುಮು ಬೆಳಕು ಮೂಡುವ ಮೊದಲೇ ರಸ್ತೆ ಬದಿಯ ಮೋರಿಯಲ್ಲಿ ಬಂದು ಕುಳಿತಿದ್ದರು. ಸ್ವಲ್ಪವೇ ಹೊತ್ತಿನಲ್ಲಿ ಅವರ ಮನೆಯ ನಾಯಿ ಕಾಳು ಕೂಡ ಬಾಲ ಅಲ್ಲಾಡಿಸುತ್ತಾ ಅವರನ್ನು ಸೇರಿಕೊಂಡಿತು. ಅದು ಹೀಗೆ ಅವರನ್ನು ಹಿಂಬಾಲಿಸುವುದೇನೂ ಹೊಸತಲ್ಲವಾದ್ದರಿಂದ ತನ್ನ ಪಾಡಿಗೆ ಕುಳಿತೇ ಇದ್ದರು. ಬಸ್ಸಿನ ಸ್ವರ ದೂರದಲ್ಲಿ ಕೇಳುತ್ತಿದ್ದಂತೆ ಕುಳಿತಲ್ಲಿಂದ ಎದ್ದು ನಿಂತ ಅವರ ಪಕ್ಕ ಬಂದ ನಾಯಿ ಪಕ್ಕನೆ  ಕಾಲೆತ್ತಿ ಅವರ ಬಟ್ಟೆಗೆ ಮೂತ್ರ ಮಾಡಿ ಮನೆಯ ದಾರಿ ಹಿಡಿಯಿತು. ಆ ಹೊತ್ತಲ್ಲಿ  ಅವರಿಗೆ ಬಂದ ಸಿಟ್ಟಿಗೆ ನಾಯಿ ಏನಾದರೂ ಕೈಗೆ ಸಿಕ್ಕಿದ್ದರೆ ಪೆಟ್ಟು ತಿಂದು ಸತ್ತೇ ಹೋಗುತ್ತಿತ್ತೇನೋ.. ಆದರೆ ಮನೆಯವರೆಲ್ಲ ಸುದ್ಧಿ ತಿಳಿದು ಹೊಟ್ಟೆ ಹಿಡಿದುಕೊಂಡು ನಗುವಾಗ ಅವರಿಗೂ ನಗದಿರಲಾಗಲಿಲ್ಲ. 

ನನ್ನಣ್ಣನ ಕಥೆಯಂತೂ ಇನ್ನೂ ಅಮೋಘ. ನಾಯಿ ಎಂದರೆ ಅವನಿಗೆ ನಾರಾಯಣನೇ.. ಅದಕ್ಕೆ ಸಂಕೋಲೆಯ ಬಂಧನವಿಲ್ಲ. ಇಡೀ ಮನೆಯಲ್ಲಿ ಎಲ್ಲಿ ಬೇಕಾದರೂ ಸುತ್ತಲು ಸ್ವತಂತ್ರ. ಮಲಗಲು ಅವನ ಮಂಚದ ಒಂದು ಭಾಗವೇ ಅದರದ್ದು.ಮನೆಯಲ್ಲಿ ಏನೇ ಮಾಡಿದರೂ ಮೊದಲ ನೈವೇದ್ಯ ಅದಕ್ಕೆ. ಅದು ಕೂಡಾ ಅಷ್ಟೇ  ಇಡೀ ದಿನ ಅಣ್ಣನೊಂದಿಗೆ ತೋಟ ಸುತ್ತಲು ಸೈ. ಅದೂ ಬೇಸಿಗೆಯಲ್ಲಿ ಸ್ಪಿಂಕ್ಲರ್ ನೀರು ಹಾರುತ್ತಿರುವ ತೋಟದಲ್ಲಂತೂ ಇದು ಕೂಡಾ ನೀರಿನಲ್ಲಿ ಆಟವಾಡುತ್ತಾ ಹೊತ್ತು ಕಳೆಯುತ್ತಿತ್ತು. ಅವನ ಬೈಕ್ ಸ್ಟಾರ್‍ಟ್ ಆದ ಸದ್ದು ಕೇಳಿದರೆ ಸಾಕು ಎಷ್ಟೇ ದೂರವಾದರೂ ಬೈಕಿನೊಂದಿಗೆ ಓಡುತ್ತಾ ಹಿಂಬಾಲಿಸುತ್ತಿತ್ತು. ಅವನ ಊರಿನವರೆಲ್ಲಾ ಅಣ್ಣನ ಹೆಸರನ್ನು ನಾಯಿಯ ಹೆಸರಿನೊಂದಿಗೇ ಗುರುತಿಸುವಷ್ಟು ಅನುಬಂಧ ಅವರದ್ದು. 
 ಮನೆಯಿಂದ ಮೂರ್ನಾಲ್ಕು ಕಿ ಮೀ ದೂರದಲ್ಲಿ ತುಂಗಾ ನದಿ. ಮನೆಗೆ ಬಂದಿದ್ದ ನೆಂಟರೊಂದಿಗೆ ಅಣ್ಣನ ಸವಾರಿ ಹೊರಟಿತ್ತು ನದಿಯಲ್ಲಿ ಈಜಲು. ಅಣ್ಣ ಹೊರಟ ಎಂದ ಮೇಲೆ  ನಾಯಿಯೂ ಜೊತೆಗೆ ಎಂದು ಪ್ರತ್ಯೇಕವಾಗಿ ಹೇಳಬೇಕೆಂದೇನಿಲ್ಲ ಅಲ್ವಾ.. ಅದಕ್ಕೂ ನೀರಿನಲ್ಲಿ ಈಜುವುದೆಂದರೆ ಬಾರೀ ಕುಷಿ. 

ನೀರಿಗೆ ಎಲ್ಲರೂ ಹಾರಿ ಮನಸೋ ಇಚ್ಚೆ ಈಜಿದ್ದಾಯಿತು. ಆಗಲೇ ಅವರಲ್ಲಿ ಪಂದ್ಯವೇರ್ಪಟ್ಟಿತು. ಯಾರು ಹೆಚ್ಚು ಕಾಲ ನೀರಲ್ಲಿ ಮುಳುಗಿ ಇರಬಲ್ಲರು ಅಂತ. 
ಸರಿ ಒಬ್ಬೊಬ್ಬರೇ ಮೂಗು ಹಿಡಿದು ಮುಳುಗಿ ಹೂ..ಹಾ.. ಎಂದು ನೀರಿಳಿಯುವ ಮುಖ ಒರಸಿಕೊಳ್ಳುತ್ತಾ ತಲೆ ಎತ್ತ ತೊಡಗಿದರು. ಈಗ ನನ್ನ ಅಣ್ಣನ ಸರದಿ. ಮೂಗು ಮುಚ್ಚಿ ನೀರಲ್ಲಿ ಮುಳುಗಿದ. ಅಲ್ಲಿಯವರೆಗೆ ಅತ್ತಿತ್ತ ನೋಡುತ್ತಾ ಕುಳಿತಿದ್ದ ನಾಯಿ ಯಾವಾಗ ಅವನ ತಲೆ ಪೂರಾ ಮುಳುಗಿತೋ ಆಗ ಪಕ್ಕನೆ ನೀರಿಗೆ ಹಾರಿತು. ಅವನಿದ್ದ ಜಾಗಕ್ಕೆ ಹೋಗಿ ಸೀದಾ ಬಾಯಿ ಹಾಕಿದ್ದ ಅವನ ತಲೆಗೇ .. ಅವನು ಏನಾಯಿತು ಎಂದು ಅರ್ಥವಾಗದೇ ಬೊಬ್ಬೆ ಹೊಡೆದ. ನಾಯಿ ಬಲವಾಗಿ ಅವನ ಕೂದಲು ಜಗ್ಗಿ  ಎಳೆದು ಅವನನ್ನು  ದಡಕ್ಕೆ ತಂದು ತನ್ನ ಮೈ ಕುಲುಕಿಸಿ ಕೂದಲನ್ನು ಒಣಗಿಸುವ ಪ್ರಯತ್ನದಲ್ಲಿತ್ತು.  ಎಲ್ಲರೂ ಜೋರಾಗಿ ನಗುತ್ತಿದ್ದರೆ ನಾಯಿ ಮತ್ತೆ ಅಣ್ಣನ ಹತ್ತಿರ ಬಂದು ಅವನನ್ನು ನೆಕ್ಕತೊಡಗಿತು. 

 ಮೊದಲು ನಾವಿದ್ದ ಮನೆಯ  ಪಕ್ಕದ ಮನೆಯವರಲ್ಲಿ ಎರಡು ಚೆಂದದ ಕೆಂಪು  ಹಸುಗಳಿತ್ತು. ಹಳ್ಳಿ ಆದ ಕಾರಣ ಕಲ್ಲಿನ ಕಚ್ಚಾ ರಸ್ತೆ ಮಾತ್ರ ನಮ್ಮಲ್ಲಿಗೆ ಬರಲು ದಾರಿ. ಈ ರಸ್ತೆಎನ್ನುವುದು ಮಳೆಗಾಲದಲ್ಲಿ ಮನುಷ್ಯರು ನಡೆದಾಡುವಷ್ಟು ಜಾಗ ಮಾತ್ರ ಸ್ವಚ್ಚವಿದ್ದು ಉಳಿದೆಲ್ಲಾ ಕಡೆ ಹುಲ್ಲು, ಕಳೆಗಿಡಗಳಿಂದ ಮುಚ್ಚಿ ಹೋಗುತ್ತಿತ್ತು. ಈ ಹಸುಗಳಿಗೆ ಅದೇ ಹುಲ್ಲು ಆಹಾರವಾದ ಕಾರಣ ಇವುಗಳು ರಸ್ತೆಯನ್ನು ತಮ್ಮದೇ ಎಂದು ತಿಳಿದುಕೊಂಡಿದ್ದವು. ಇಡೀ ದಿನ ಅಲ್ಲೇ ಕುಳಿತು ಮಲಗಿ ನಡೆದು ಕಾಲ ಕಳೆಯುತ್ತಿದ್ದವು. ಆಗಲೇ ಘನ ಸರ್ಕಾರ ನಮ್ಮ ಹಳ್ಳಿಗೂ ಒಂದು ಬಸ್ಸು ಓಡಿಸುವ ಮನಸ್ಸು ಮಾಡಿದ್ದು. ಆ ಬಸ್ಸು ಇದೇ ರಸ್ತೆಯಲ್ಲಿ ದಿನಕ್ಕೆರಡು ಬಾರಿ ಓಡಾಡುತ್ತಿತ್ತು. ಕೆಲವೇ ಕಡೆ ಜನರನ್ನು ಹತ್ತಿಸಿಕೊಳ್ಳುವುದು ಇಳಿಸುವುದು ಎಂಬ ಕಾನೂನು ಹೊಂದಿದ್ದ ಆ ಬಸ್ಸಿನ ನೀತಿಯಿಂದಾಗಿ  ನಮ್ಮ ಮನೆ ಎದುರೇ ಬಸ್ಸು ಓಡಾಡಿದರೂ ನಾವು ಬಸ್ಸು ಹತ್ತಬೇಕಾದರೆ  ಅರ್ಧ ಕಿ ಮೀ ನಡೆಯಬೇಕಿತ್ತು. ಈ ಬಸ್ಸು ರಸ್ತೆಗೆ ಬಂದದ್ದೇ ನಮ್ಮ ಹಸುಗಳಿಗ್ಯಾಕೋ ತಮ್ಮ ಜಾಗದ ಹಕ್ಕನ್ನು ಯಾರೋ ಕಸಿದುಕೊಂಡಂತಹ ಸಿಟ್ಟು.  ಬಸ್ಸು ಬರುವ ಸದ್ದು  ಕೇಳಿದ ಕೂಡಲೇ ರಸ್ತೆ ಮಧ್ಯದಲ್ಲಿ ಬಂದು ಮಲಗಿಕೊಳ್ಳುತ್ತಿದ್ದವು. ಎಷ್ಟೇ ಹಾರ್ನ್ ಹಾಕಿದರೂ ಅವು ಅಲ್ಲಾಡುತ್ತಿರಲಿಲ್ಲ. ಈಗ  ಬಸ್ಸಿಗೆ ಅನಿವಾರ್ಯವಾಗಿ ಬ್ರೇಕ್ ಹಾಕಿ  ಕಂಡೆಕ್ಟರ್ ಇಳಿದು ಬಂದು ಇವುಗಳನ್ನು ಬದಿಗೆ ಓಡಿಸಬೇಕಿತ್ತು.  ಅವುಗಳೇನು ಅವನನ್ನು ನೋಡಿದ ಕೂಡಲೇ ಎದ್ದು ಹೋಗುತ್ತಿರಲಿಲ್ಲ. ಬಾಯಲ್ಲಿ  ಬೊಬ್ಬೆ ಹೊಡೆದು ಅವುಗಳ ಬೆನ್ನಿಗೆ ಏಟು ಕೊಟ್ಟು ಕಷ್ಟ ಪಟ್ಟು ಏಳಿಸಬೇಕಿತ್ತು.  ಇದಕ್ಕೆ ಹೇಗಿದ್ದರೂ  ಹತ್ತು ನಿಮಿಷ ತಗಲುತ್ತಿತ್ತು. ನಮ್ಮ ಸುತ್ತು ಮುತ್ತಲಿನವರೆಲ್ಲಾ ಇದರಿಂದಾಗಿ ಬಸ್ಸು ನಿಲ್ದಾಣಕ್ಕೆ ಹೋಗದೇ ಇಲ್ಲೇ ಬಸ್ಸು ಹತ್ತುವ ಸೌಕರ್ಯ ಪಡೆದೆವು. ಬಸ್ಸಿನವರು ದಿನಾ ಹಸುಗಳಿಗೆ ಹಿಡಿ ಶಾಪ ಹಾಕುತ್ತಿದ್ದರೆ ನಾವುಗಳು ಅವುಗಳ ಸಾಮರ್ಥ್ಯವನ್ನು ಹೊಗಳುತ್ತಿದ್ದೆವು. ಹಸುಗಳಂತೂ ತಮ್ಮ ಬಸ್ಸು ದ್ವೇಷವನ್ನು ಕೊನೆಯವರೆಗೂ  ಬಿಟ್ಟುಕೊಡಲಿಲ್ಲ. ಯಾಕೆಂದರೆ ಅವುಗಳಿಗೆ ತಮ್ಮ ನೆಲದ ಬಗ್ಗೆ ಪ್ರೀತಿಯಿತ್ತು. 
ಬಹುಷಃ ಮನುಷ್ಯರಿಗೆ ಹೀಗೆ ನಿಸ್ವಾರ್ಥವಾಗಿ ಪ್ರೀತಿಸಲು, ಸಂಬಂಧಗಳನ್ನು ನಿಭಾಯಿಸಲು ಬಾರದೇನೋ.. ಇವರಿಂದ ನಾವು ಕಲಿಯುವುದು ಬೇಕಾದಷ್ಟಿದೆ. ಅವುಗಳ ಮೂಕಪ್ರೇಮವನ್ನು ಅರ್ಥಮಾಡಿಕೊಳ್ಳುವ ಮನಸ್ಸು ನಮ್ಮದಾಗಿದ್ದರೆ.. ನೀವೇನಂತೀರಿ?


 

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮೂಕಪ್ರೇಮ:ಅನಿತಾ ನರೇಶ್ ಮಂಚಿ ಅಂಕಣ

  1. ಪ್ರಾಣಿಗಳೂ ಬುದ್ಡಿ ಉಪಯೋಗಿಸುತ್ತವೆ.
    ಜಾಣತನ ಬರೇ ಮನುಜನ ಸ್ವತ್ತು ಅಲ್ಲ.
    ಆದರೆ ಅಹಂಕಾರಿ ಮಾನವ ಮಾತ್ರ ತಾನೆ
    ಮೇಲು ಎಂದು ತಿಳಿದುಕೊಂಡಿದ್ದಾನೆ. ಚೆನ್ನಾಗಿದೆ
    ಮಂಚಿ ಮೇಡಂ.

  2. ನಿಜ ಮೇಡಂ..ಪ್ರಾಣಿಗಳೂ ಎಷ್ಟೋ ಬಾರಿ ನಮ್ಮ ಖುಷಿಯ ಜಗದಲ್ಲಿ ಪಾತ್ರವನ್ನು ವಹಿಸಿಬಿಡುತ್ತದೆ..

Leave a Reply

Your email address will not be published. Required fields are marked *