ಜರ್ಮನಿಯ ಹಿಟ್ಲರ್ ಹೆಸರು ಯಾರಿಗೆ ಗೊತ್ತಿಲ್ಲ? ಖೈದಿಗಳನ್ನು ಕೊಲ್ಲಲು ವಿಷದ ಅನಿಲದ ಕೊಠಡಿಯನ್ನೇ ನಿರ್ಮಿಸಿದ್ದ ಕುಖ್ಯಾತಿ ಒಳಗಾಗಿದ್ದವ. ಹಿಂಸೆಯ ಪ್ರತಿರೂಪ! ಲಕ್ಷಾಂತರ ಯಹೂದಿಗಳು ಈ ಸರ್ವಾಧಿಕಾರಿಯ ಹಿಂಸೆಗೆ, ಕ್ರೂರತ್ವಕ್ಕೆ ಬಲಿಯಾದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸವೆಂದರೆ ಒಳಿತು-ಕೆಡುಕುಗಳ ಸಮಗ್ರ ಮಾಹಿತಿ. ಇದರಲ್ಲಿ ಒಳಿತನ್ನೂ ನೋಡಬಹುದು, ಕೆಡುಕನ್ನು ಕಾಣಬಹುದು. ಪ್ರಸ್ತುತ ವಿದ್ಯಮಾನಗಳು ಮುಂದೊಂದು ದಿನ ಇತಿಹಾಸದ ಪುಟದಲ್ಲಿ ಸೇರುತ್ತವೆ. ಆಧುನಿಕ ಅಭಿವೃದ್ಧಿ, ಐಷಾರಾಮಿತನಗಳು ಇಡೀ ವಿಶ್ವವನ್ನೇ ಹಿಟ್ಲರ್‍ನ ವಿಷಕಾರಕ ಕೊಠಡಿಯನ್ನಾಗಿ ಮಾಡುತ್ತಿವೆ. ಇದರಲ್ಲಿ ಮೊದಲಿಗೆ ಬಲಿಯಾಗುವವರು ಮಾತ್ರ ಬಡದೇಶದ ಜನರು, ಕೃಷಿಕರು, ದ್ವೀಪವಾಸಿಗಳು ಇತ್ಯಾದಿಗಳು. ಇದು ಹೇಗೆ ಎಂಬುದನ್ನು ಕೊಂಚ ನೋಡೋಣ.
ನಮಗೆ ಕುತುಬ್ ಮಿನಾರ್ ಗೊತ್ತು, ಕುತುಬ್‍ದಿಯಾ ಬಹುಷ: ಬಹುತೇಕರಿಗೆ ಈ ಹೆಸರು ತಿಳಿದಿರಲಾರದು. ಬಾಂಗ್ಲಾದೇಶದ ಈ ದ್ವೀಪದ ಹೆಸರು ಕುತುಬ್‍ದಿಯಾ. ಮೂಲತ: ಕಾಕ್ಸ್ ಬಜಾರ್ ಜಿಲ್ಲೆ ಆಡಳಿತಕ್ಕೆ ಒಳಪಟ್ಟಿರುವ ಈ ದ್ವೀಪವನ್ನು 1983ರಲ್ಲಿ ಉಪಜಿಲ್ಲೆಯೆಂದು ಘೋಷಿಸಲಾಯಿತು, ಸುಮಾರು 1,25 ಸಾವಿರ ಜನಸಂಖ್ಯೆ ಇರುವ ಈ ದ್ವೀಪದಲ್ಲಿನ ನಿವಾಸಿಗಳ ಮುಖ್ಯ ಕಸುಬು ಮೀನುಗಾರಿಕೆ. ಹೆಚ್ಚಿನವರ ಮನೆಯಲ್ಲಿ ವಿದ್ಯುಚ್ಛಕ್ತಿ ಸಂಪರ್ಕವೂ ಇಲ್ಲ. ಪಳೆಯುಳಕೆ ಇಂಧನಗಳನ್ನೂ ಬಳಸುವುದೂ ಇಲ್ಲ. ಆದರೂ ಇವರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಜನ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಮೀನುಗಾರಿಕೆ ಹಾಗೂ ಉಪ್ಪು ತಯಾರಿಕೆ ಬಿಟ್ಟರೆ ಇವರಿಗೆ ಬೇರೆ ಕಸುಬು ಗೊತ್ತಿಲ್ಲ. ದ್ವೀಪದಂಚಿನ ಕಾಂಡ್ಲಾ ಕಾಡುಗಳು ಮುಳುಗಿ ಹೋಗಿದೆ. ಕಾಂಡ್ಲಾ ವನವನ್ನು ಮುಳುಗಿಸಿದ ಸಮುದ್ರ ಇದೀಗ ಇಡೀ ದ್ವೀಪವನ್ನು ಆಪೋಶನ ತೆಗೆದುಕೊಳ್ಳುವತ್ತ ಹೊರಟಿದೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಸಮುದ್ರ ಮಟ್ಟ ನಿಧಾನಗತಿಯಲ್ಲಿ ಏರಿಕೆಯಾಗುತ್ತಿತ್ತು, ದೊಡ್ಡ ಅಲೆಗಳು ಎದ್ದರೆ, ತೀರವಾಸಿಗಳ ಮನೆಯೊಳಗೆ ನೀರು ನುಗ್ಗುತ್ತಿತ್ತು. ನೀರು ದ್ವೀಪದ ಒಳಗೆ ನುಗ್ಗದಂತೆ ಸರ್ಕಾರ ಸಮುದ್ರ ಅಂಚಿಗೆ ಸಿಮೇಂಟ್ ಕಟ್ಟೆಯನ್ನು ಕಟ್ಟಿತ್ತು. ಅಲೆಗಳ ಹೊಡೆತಕ್ಕೆ ಮಾನವ ನಿರ್ಮಿತ ಕಟ್ಟೆ ಕುಸಿದುಹೋಗುತ್ತಿದೆ.
ಪೆಸಿಫಿಕ್ ಮಹಾಸಾಗರದ ಸೊಲೋಮನ್ ದ್ವೀಪ ಸಮೂಹಗಳಲ್ಲಿ ಸುಮಾರು 5 ಲಕ್ಷ ಜನಸಂಖ್ಯೆ ಇದೆ. ಕಳೆದ ನಲವತ್ತು ವರ್ಷಗಳ ಅಂಕಿ-ಅಂಶದಂತೆ ಪ್ರತಿ ವರ್ಷ 3 ಮಿಲಿಮೀಟರ್‍ನಷ್ಟು ಸಮುದ್ರದ ಮಟ್ಟ ಹೆಚ್ಚಾಗುತ್ತಿದೆ. ಇದೀಗ ತನ್ನ ವೇಗವನ್ನು ವೃದ್ಧಿಸಿಕೊಂಡು ವರ್ಷಕ್ಕೆ 7 ಮಿಲಿಮೀಟರ್‍ನಷ್ಟಾಗಿದೆ. ಈಗಾಗಲೇ ಜನವಸತಿಯಿಲ್ಲದ 5 ದ್ವೀಪಗಳು ಮುಳುಗಿಹೋಗಿವೆ. ದ್ವೀಪದಲ್ಲಿನ ಭೂವಾಸಿ ಪ್ರಬೇಧಗಳು ನಾಶವಾಗಿವೆ. 2050ರ ಹೊತ್ತಿಗೆ ಪ್ರಪಂಚದಲ್ಲಿರುವ ಇನ್ನಷ್ಟು ದ್ವೀಪಸಮೂಹಗಳು ಮುಳುಗಿಹೋಗಲಿವೆ. ಇದರಲ್ಲಿ ಜನಸಂಖ್ಯೆ ಇರುವ ದ್ವೀಪಗಳು ಸೇರುತ್ತವೆ. ಬಾಂಗ್ಲಾದ ಕುತುಬ್‍ದಿಯಾ ಮುಳುಗುತ್ತಿರುವುದು ಇಡೀ ಬಾಂಗ್ಲಾದೇಶ ಮುಳುಗಿಹೋಗುವುದಕ್ಕೆ ಮುನ್ಸೂಚನೆಯಾಗಿದೆ.
ಆ ದಿನ ಬೆಳಗಿನ ಜಾವದ 4 ಗಂಟೆ ಆಂಜಿ ಹೆಪಿಸಸ್‍ಗೆ ಯಾರೋ ಕರೆದಂತೆ ಕೇಳಿಸಿತು. ಎಚ್ಚರಾಗಿ ನೋಡಿದರೆ ಫ್ಲೈವುಡ್ಡಿನಿಂದ ನಿರ್ಮಿಸಿದ ಅವಳ ಮನೆ ಪೂರ್ತಿ ಅಕ್ವೇರಿಯಂತಾಗಿದೆ. ಸಮುದ್ರದ ಉಪ್ಪು ನೀರು ಮನೆಯನ್ನೇ ಮುಳುಗಿಸಿದೆ. ಇದೇನು ಕೆಟ್ಟ ಕನಸೋ ಅಥವಾ ನಿಜವೋ ಎಂದು ಅರಿತುಕೊಳ್ಳಲು ಕೈಯನ್ನು ನೆಕ್ಕಿಕೊಳ್ಳುತ್ತಾಳೆ. ಉಪ್ಪು ನೀರು! ಕಪಾಟಿನಲ್ಲಿರುವ ಬೈಬಲ್ ಹಾಗೂ ಮಗುವನ್ನು ಎತ್ತಿಕೊಂಡು ತಗ್ಗಿನ ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ಓಡುತ್ತಾಳೆ. ಪಕ್ಕದ ಮನೆಯವರು ಅದಾಗಲೇ ಮೇಲೆ ಹತ್ತಿ ಹೋಗಿದ್ದಾರೆ. ಇದು ಆಸ್ಟ್ರೇಲಿಯಾ ಹಾಗೂ ಹವಾಯಿ ನಡುವೆ ಬರುವ ಮಾರ್ಷಲ್ ದ್ವೀಪದ ಕತೆ. ಇದೇ ಸಂದರ್ಭದಲ್ಲಿ ಮೊಜಿ ಅಂಗಾರ ಎಂಬುವವನ 7 ತಿಂಗಳ ಮಗುವನ್ನು ಸಮುದ್ರದ ಅಲೆ ಹೊತ್ತೊಯಿತು. ಈಗಾಗಲೇ ಈ ದ್ವೀಪ ಸಮೂಹದಲ್ಲಿ ನೂರಾರು ಹವಳದ ದಿಬ್ಬಗಳು ನೀರಿನಡಿಯಲ್ಲಿ ಮುಳುಗಿಹೋಗಿವೆ. ಒಂದು ಕಾಲದಲ್ಲಿ ಜೋಗುಳದ ಸದ್ದಿನಂತೆ ತೋರುತ್ತಿದ್ದ ಸಮುದ್ರದ ಅಲೆಗಳೀಗ ರಾಕ್ಷಸ ರೂಪ ತಾಳಿವೆ. ಅವುಗಳ ಭೀಕರತೆ ಎಷ್ಟು ಜೋರಾಗಿದೆ ಎಂದರೆ, ಅಲೆಗಳ ಸದ್ದಿನಿಂದ ಸರಿಯಾಗಿ ನಿದ್ದೆ ಮಾಡುವುದು ಕಷ್ಟವಾಗಿದೆ. ಇಡೀ ಬದುಕು ಅನಿಶ್ಚತತೆಯಿಂದ ಕೂಡಿದೆ. ನಮ್ಮ ದ್ವೀಪದ ಬಹುತೇಕರು ಭಯದಿಂದಲೇ ಬದುಕುತ್ತಿದ್ದಾರೆ.
ಕಿರಿಬಾಟಿ, ಮಾಲ್ಡೀವ್ಸ್ ಹಾಗೂ ಮಾರ್ಷಲ್ ದ್ವೀಪ ದೇಶಗಳ ಪ್ರದೇಶವು ಸಮುದ್ರದ ಮೇಲ್ಮೈಯಿಂದ ತುಸುವೇ ಮೇಲೆ ಚಾಚಿಕೊಂಡಿವೆ. ಹವಾಗುಣ ಬದಲಾವಣೆಯಿಂದಾಗಿ ಈ ದ್ವೀಪ ದೇಶಗಳು ಮುಳುಗುವ ಭೀತಿಯನ್ನು ಎದುರಿಸುತ್ತಿವೆ. ಹಾಗಂತ ತಕ್ಷಣದಲ್ಲಿ ಈ ದೇಶಗಳು ಮುಳುಗಿ ಹೋಗುವುದಿಲ್ಲ. ಇನೈದು-ಹತ್ತು-ಇಪ್ಪತ್ತು ವರ್ಷಗಳಲ್ಲಿ ಮುಳುಗಲಿಕ್ಕಿಲ್ಲವಾದರೂ, ನಮ್ಮ ಜೀವಿತಾವಧಿಯಲ್ಲಿ ಮುಳುಗಿಹೋಗಲಿವೆ. ಆಗ ಹೊಸ ಭೂಪಟವನ್ನೇ ವಿಶ್ವಸಂಸ್ಥೆ ತಯಾರಿಸಬೇಕಾಗುತ್ತದೆ. ಪ್ಯಾರೀಸ್ ಹವಾಗುಣ ಬದಲಾವಣೆ ಶೃಂಗದ ಒಡಂಬಡಿಕೆಯಂತೆ ಈ ಶತಮಾನದ ಅಂತ್ಯದೊಳಗೆ ಭೂಮಿಯ ಒಟ್ಟಾರೆ ಬಿಸಿಯೇರಿಕೆಯನ್ನು 2 ಡಿಗ್ರಿಗಳಷ್ಟಾದರೂ ಕಡಿಮೆ ಮಾಡಲೇ ಬೇಕು ಅಥವಾ 2 ಡಿಗ್ರಿಗಿಂತ ಹೆಚ್ಚಾಗದಂತೆ ತಡೆಯಬೇಕು. ಈ ಕ್ರಮವನ್ನು ಕೈಗೊಂಡರೂ, ಹವಾಗುಣ ಬದಲಾವಣೆಯ ವೈಪರೀತ್ಯವನ್ನು ನಿಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ಬಿಸಿಯಾಗಿರುವ ವಾತಾವರಣ ತನ್ನ ಪರಿಣಾಮವನ್ನು ಬೀರಿಯೇ ಬೀರುತ್ತದೆ ಎನ್ನುತ್ತಾರೆ ಜರ್ಮನಿಯ ಪಾಟ್ಸ್‍ಡ್ಯಾಮ್ ಯೂನಿವರ್ಸಿಟಿಯ ಫ್ರೊಫೆಸರ್ ಸ್ಟೀಫನ್ ರಾಂಸ್ಟಾಫ್.
ಕಾಣುತ್ತಿರುವುದನ್ನು ನಂಬಲೇಬೇಕು. ನನ್ನ ದೇಶ ಮುಳುಗುತ್ತಿದೆ. ಇಷ್ಟು ಸುಂದರವಾದ ಪರಿಸರ, ಜನ, ಜೀವಿವೈವಿಧ್ಯ, ಸಂಸ್ಕøತಿ, ಸಂಸಾರ ಹೀಗೆ ಸಕಲವೂ ನೀರಿನಡಿಯ ಅವಶೇಷವಾಗುತ್ತದೆ. ಶ್ರೀಮಂತ ರಾಷ್ಟ್ರಗಳು ನಮ್ಮ ಕೂಗನ್ನು ಅಸಡ್ಡೆಯಿಂದಲೇ ನೋಡುತ್ತಿದ್ದಾರೆ. ವಸುದೈವ ಕುಟುಂಬಕಂ ಎಂಬ ಮಾತಿಗೆ ಅರ್ಥವೇ ಇಲ್ಲವಾಗಿದೆ. ಇವತ್ತು ನಮ್ಮನ್ನು ಈ ಪರಿ ಭಾದಿಸುತ್ತಿರುವ ವೈಪರೀತ್ಯ ಮುಂದೊಂದು ಅವರನ್ನೂ ಬಿಡುವುದಿಲ್ಲ. ಸಾರ್ವತ್ರಿಕವಾಗಿ ಇದನ್ನು ಎದುರಿಸುವ ಪ್ರಯತ್ನ ಮಾಡದಿದ್ದಲ್ಲಿ ಸರ್ವನಾಶ ಖಂಡಿತ ಹಾಗೂ ಇದನ್ನು ನಾವು ಕಾಣುತ್ತಿದ್ದೇವೆ ಎನ್ನುತ್ತಾರೆ ಮಾರ್ಷಲ್ ಮಾಜಿ ಅಮೇರಿಕಾದ ರಾಯಭಾರಿ ಹಾಗೂ ಅಲ್ಲಿನ ಮೊಟ್ಟಮೊದಲ ಅಧ್ಯಕ್ಷರ ಪುತ್ರಿ ರಾಜಕುಮಾರಿ ಅಮಾಟಿಯಾ ಕುಬುವಾ.
ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ? ಇದೀಗ ಮಾರ್ಷಲಿಗರ ಚಿತ್ತ ಜಾನ್ ಮೂಡಿ ಎಂಬ ಮನುಷ್ಯನತ್ತ ನೆಟ್ಟಿದೆ. ಕೊಂಚ ಹಿಂದಕ್ಕೆ ಹೋಗೋಣ. ಅಮೆರಿಕ ತನ್ನ ಮಿಲಿಟರಿ ನೆಲೆಯನ್ನಾಗಿ ಫೆಸಿಫಿಕ್ ಸಾಗರದಲ್ಲಿ ಅನೇಕ ಹವಳ ದಿಬ್ಬಗಳನ್ನು ಬಳಸಿಕೊಂಡಿತ್ತು. ಮಾರ್ಷಲ್ ದ್ವೀಪದಲ್ಲೂ ತನ್ನ ಮಿಲಿಟರಿ ನೆಲೆಯನ್ನು ಸ್ಥಾಪಿಸಿಕೊಂಡಿತ್ತು. ಅಲ್ಲಿ ಪರಮಾಣು ಪರೀಕ್ಷೆಯನ್ನೂ ನಡೆಸಿತ್ತು. ಪರಮಾಣು ವಿಕಿರಣದಿಂದ ಈ ಹಿಂದೆ ಅಲ್ಲಿನ ಜನ ತೊಂದರೆಗೊಳಗಾಗಿದ್ದರು. ಹಲವು ಜನ ಹೊಸ-ಹೊಸ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ಅಸುನೀಗಿದ್ದರು. ಈ ಘಟನೆಯಿಂದ ಮಾರ್ಷಲ್ ದ್ವೀಪದಲ್ಲಿ ಪರಮಾಣು ಪರೀಕ್ಷೆಯನ್ನು ಅಮೆರಿಕ ಹಿಂದೆ ತೆಗೆದುಕೊಂಡಿತು. ಇದರಿಂದಾದ ಒಂದು ಉಪಯೋಗವೆಂದರೆ, ಅಮೆರಿಕ ದೇಶಕ್ಕೆ ಮಾರ್ಷಲ್ ದ್ವೀಪದೇಶದಿಂದ ವಲಸೆ ಹೋಗಬೇಕೆಂದರೆ ಅವರಿಗೆ ವೀಸಾದ ಅವಶ್ಯಕತೆ ಇರಲಿಲ್ಲ. ಇದರ ಅನುಕೂಲ ಪಡೆದು ಜಾನ್ ಮೂಡಿ 1979ರಲ್ಲೇ ಅಮೆರಿಕಕ್ಕೆ ವಲಸೆ ಹೋದ. ಆಗ ಹವಾಮಾನ ವೈಪರೀತ್ಯದ ತೀಕ್ಷ್ಣತೆ ಇಷ್ಟು ಇರಲಿಲ್ಲ. ಅಲ್ಲಿಗೆ ಹೋದವನು ಕೋಳಿ ಸುಲಿಯುವ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿನ ಆಕರ್ಷಕ ಸಂಬಳ ಜಾನ್ ಮೂಡಿಯ ಕುಟುಂಬದ ಇತರರನ್ನೂ ಆಕರ್ಷಿಸಿತು. ಕ್ರಮೇಣ ಅಮೆರಿಕಾಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಯಿತು. ವರ್ಷಕ್ಕೊಮ್ಮೆ ಊರಿಗೆ ಬರುವ ಜಾನ್ ಮೂಡಿ ಮಾರ್ಷಲ್ ಪ್ರದೇಶದ ಕೇಂದ್ರ ಬಿಂದುವಾಗಿ ಬಿಟ್ಟಿದ್ದಾನೆ. ಸಮುದ್ರ ಮಟ್ಟ ಏರಿಕೆಯಿಂದಾಗಿ ಮಾರ್ಷಲ್ ದ್ವೀಪ ಮುಳುಗಿಹೋಗುವುದು ಖಚಿತವಾಗಿದೆ. ಜನ ಅನಿವಾರ್ಯವಾಗಿ ಬೇರೆ ನೆಲೆಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ಈಗ ಅವರಿಗೊಂದು ಆಶಾಕಿರಣವೆಂದರೆ ಅಮೆರಿಕದ ಕೋಳಿ ಸುಲಿಯುವ ಕಾರ್ಖಾನೆಗಳು. ಈ ತರಹದ ಅನಿವಾರ್ಯತೆ ಸೃಷ್ಟಿಯಾದ ಹೊತ್ತಿನಲ್ಲೇ, ಅಮೆರಿಕದ ಜನತೆ ಟ್ರಂಪ್ ಎಂಬ ಮನುಷ್ಯನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದೆ. ಈತನ ಧೋರಣೆ ಕೊಂಚ ವಿಚಿತ್ರವಾಗಿದೆ. ವಲಸಿಗರಿಗೆ ಮಣೆ ಹಾಕಿಯೇ ಅಮೆರಿಕ ಹಾಳಾಗಿದೆ ಎಂಬುದು ಹೊಸ ಅಧ್ಯಕ್ಷರ ಅಭಿಮತವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಮೆರಿಕಾದಲ್ಲಿ ವಲಸಿಗರಿಗೆ ಆದ್ಯತೆ ಕಡಿಮೆಯಾಗುವ ಲಕ್ಷಣಗಳಿವೆ. ಆಗ ಮಾರ್ಷಲಿಗರು ಎಲ್ಲಿಗೆ ಹೋಗುತ್ತಾರೆ ಎಂಬುದು ಭೂತಾಕಾರದ ಪ್ರಶ್ನೆಯಾಗಿದೆ.
ಪೋಸ್ಟ್ ಟ್ರುಥ್ ಸಿನಾರಿಯೋ ಅಥವಾ ಬಿಹೇವಿಯರ್ ಅಂದರೆ ಮುಂದೆ ನಿಶ್ಚಿತವಾಗಿ ಘಟಿಸುವ ಘಟನೆ ಅಥವಾ ವಿದ್ಯಮಾನಗಳ ಬಗ್ಗೆ ಉದ್ಧೇಶಪೂರ್ವಕ ಅಸಡ್ಡೆ ಮಾಡುವ ಕ್ರಿಯೆ. ಉದ್ಧೇಶಪೂರ್ವಕವಾಗಿ, ಪೂರ್ವನಿಯೋಜಿತವಾಗಿ ಒಬ್ಬ ಒಂದು ಹತ್ಯೆ ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಕಾನೂನಿನ ಕೈಗೆ ಸಿಗದಿರಬಹುದು ಅಥವಾ ಸಿಕ್ಕಿದರೂ ಪಾರಾಗಿಬಿಡಬಹುದು ಎಂಬ ಮನೋಭಾವಕ್ಕೆ ಇದನ್ನು ಹೋಲಿಸಬಹುದು. ಪೂರ್ವಯೋಜಿತವಾಗಿ ಹತ್ಯೆ ಎಸಗುವಾಗ ಆ ವ್ಯಕ್ತಿಗೆ ನಿಶ್ಚಿತವಾಗಿ ಪರಿಣಾಮದ ಬಗ್ಗೆಯೂ ತಿಳಿದಿರುತ್ತದೆ. ಕಾನೂನು ತನ್ನನ್ನು ಶಿಕ್ಷೆಗೊಳಪಡಿಸಬಹುದು ಅಥವಾ ಮರಣವನ್ನೇ ವಿಧಿಸಬಹುದು. ಪರಿಣಾಮ ಗೊತ್ತಿದ್ದೂ ಉಪೇಕ್ಷೆ ಮಾಡಿ ನಿರ್ವಹಿಸುವ ಸ್ವಂತ ಹಿತಾಸಕ್ತಿಯ ಕಾರ್ಯಕ್ಕೆ ಹೀಗೆ ಹೇಳುವ ರೂಢಿಯಿದೆ. ಜಾಗತಿಕವಾಗಿ ಪರಿಸರದ ಕುರಿತಾಗಿ ಕೂಡ ಇದೇ ಮನೋಧೋರಣೆ ವ್ಯಕ್ತವಾಗುತ್ತಿದೆ. ಇಂಗ್ಲೆಂಡ್ ದೇಶ ತನಗೆ ತನ್ನ ದೇಶವೇ ಮುಖ್ಯ, ಹವಾಗುಣ ಬದಲಾವಣೆ ಇತ್ಯಾದಿಗಳೆಲ್ಲಾ ಆಮೇಲೆ ಎನ್ನುವ ಹಂತಕ್ಕೆ ಮುಟ್ಟಿದೆ. ಇಂಗ್ಲೆಂಡ್ ಒಂದೇ ಅಲ್ಲ ಇದರ ಸಾಲಿನಲ್ಲಿ ಅಮೆರಿಕ, ಫ್ರಾನ್ಸ್‍ಗಳೂ ಇವೆ. ನಿಧಾನವಾಗಿ ಸ್ವಹಿತಾಸಕ್ತಿ ಮೇಲುಗೈ ಪಡೆಯುತ್ತಿದೆ. ಮುಳುಗುತ್ತಿರುವ ಕಿರಿಬಾಟಿ, ಮಾರ್ಷಲ್, ಬಾಂಗ್ಲಾ ಅಥವಾ ಮಾಲ್ಡೀವ್ಸ್ ದೇಶಗಳ ಬಗ್ಗೆ ಜಾಗತಿಕವಾದ ಕಾಳಜಿ ಕಣ್ಮರೆಯಾಗಿದೆ. ಹಿಂದುಳಿದ ಹಾಗೂ ಅತಿಜನಸಂಖ್ಯೆ ಹೊಂದಿರುವ ಏಷ್ಯಾ ಖಂಡಕ್ಕೆ ಮೊದಲು ವಿಪತ್ತು ಬಾಧಿಸಲಿದೆ.
ವಿಷಯಗಳ ಆದ್ಯತೆಯಲ್ಲಿ ವಿಶ್ವಸಂಸ್ಥೆ ಕೂಡ 'ಪೋಸ್ಟ್ ಟ್ರುಥ್ ಬಿಹೇವಿಯರ್' ಗೆ ಒಳಪಟ್ಟಿದೆ ಎಂದು ಅನಿಸುತ್ತಿದೆ. ನಿಮ್ಮ ಬರಹಕ್ಕೆ ಧನ್ಯವಾದಗಳು.
ಧನ್ಯವಾದಗಳು