ಮುಳುಗದ ರವಿ…..: ಶೋಭಾ ಶಂಕರಾನಂದ

“ಪ್ರಿಯ ವೀಕ್ಷಕರೇ”…ಎಂದ ಕೂಡಲೇ…!!!! ಕೇಳುಗರು ಮತ್ತು ನೋಡುಗರೆಲ್ಲರೂ ಒಂದು ಕ್ಷಣ ತಮ್ಮನ್ನೇ ಮರೆತು ಮಂತ್ರ ಮುಗ್ಧರಂತೆ ಅತ್ತ ಗಮನವಿಟ್ಟು ಕೇಳಬೇಕು, ನೋಡಬೇಕು, ಹಾಗಿತ್ತು ಆ ಧ್ವನಿಯ ಆತ್ಮೀಯತೆ ಮತ್ತು ಗತ್ತು. ಆ ಧ್ವನಿ ಇನ್ನಿಲ್ಲ ಎಂದಾಗ ಏನೋ ಒಂಥರಾ ಸಂಕಟ ಮತ್ತು ತಳಮಳ. ಕಾರಣ… ಬಹುಶಃ ನಂಗೂ ಗೊತ್ತಿಲ್ಲ…..!!!??? ತಮ್ಮ ಬದುಕಿನುದ್ದಕ್ಕೂ ಬರವಣಿಗೆಯ ಮೂಲಕ ಹೋರಾಟವನ್ನೇ ಮಾಡುತ್ತಾ , ಹೇಳುವ ವಿಷಯವನ್ನು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿ, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಅವರ ಮೆಚ್ಚುಗೆ ಗಳಿಸಿ, ಗಮನ ಸೆಳೆದ ಅಕ್ಷರ ರಾಕ್ಷಸ ರವಿಬೆಳಗೆರೆ. ವೃತ್ತಿ ಮತ್ತು ಪ್ರವೃತ್ತಿ ಎರಡೂ ಬರವಣಿಗೆ ಆಗಿದ್ದು ಅದೇ ಅವರ ಶಕ್ತಿಯೂ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಬರವಣಿಗೆಯೇ ಬದುಕು – ಬದುಕೇ ಬರವಣಿಗೆ ಎಂದು ಬದುಕಿದವರು ಅದೇ ರೀತಿ ಜೀವನದ ಮೇಲೆ ಅದಮ್ಯ ಪ್ರೀತಿ ಹೊಂದಿದ್ದವರು ರವಿ ಬೆಳಗೆರೆ.. ವೃತ್ತಿ ಬದುಕಿನಲ್ಲಿ ಹಲವಾರು ಅಡೆತಡೆಗಳು ಕಂಡರೂ ಅವನ್ನು ಮೀರಿ ಬೆಳೆದವರು. ಪ್ರಾರಂಭದ ದಿನಗಳಲ್ಲಿ ಮನೆ ಮನೆಗೆ ಪೇಪರ್ ವಿತರಿಸಿ, ಹಾಲು ಹಾಕಿ, ಬಸ್ ನಿಲ್ದಾಣದಲ್ಲಿ ಬೇರೆ ಬೇರೆ ಊರುಗಳಿಗೆ ಬಸ್ ಗೆ ದಾರಿ ತೋರಿಸಿ, ನಂತರದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು.ಆದರೆ ಯಾವುದೂ ಅವರ ಕೈ ಹಿಡಿಯಲಿಲ್ಲ. ಬಹುಶಃ ಬರವಣಿಗೆ ಅವರನ್ನ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತಂದಿತ್ತು. ನಂತರದ ದಿನಗಳಲ್ಲಿ ಪತ್ರಿಕಾ ಲೋಕಕ್ಕೆ ಕಾಲಿಟ್ಟವರು ಹಿಂದಿರುಗಿ ನೋಡಿದ್ದೇ ಇಲ್ಲ.

೧೯೯೫ರಲ್ಲಿ ಹಾಯ್ ಬೆಂಗಳೂರು ಪತ್ರಿಕೆಯಿಂದ ಎಲ್ಲರ ಮನೆ ಮಾತಾದ ರವಿಬೆಳಗೆರೆ, “ಖಾಸ್ ಬಾತ್” ನಲ್ಲಿ ತಮ್ಮ ವೈಯುಕ್ತಿಕ ಬದುಕನ್ನೇ ಬಿಚ್ಚಿ ಓದುಗರ ಮುಂದೆ ಇಡುತ್ತಿದ್ದರು. ಇದು ಕೆಲವು ಮಡಿವಂತರಿಗೆ ಕಿರಿಕಿರಿ ಆಗಿದ್ದೂ ಉಂಟು. ಬೆಳಗೆರೆ ತಮಗೆ ಬೇಕು ಎನಿಸಿದಂತೆ ಬದುಕಿದವರು. ಅದರ ಪರಿಣಾಮ ಬಗ್ಗೆ ಎಂದೂ ಯೋಚನೆ ಮಾಡುತ್ತಿರಲಿಲ್ಲ. ಇತ್ತೀಚೆಗೆ ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ಹಾಗಾಗಿ ಒಂದು ವಿಡಿಯೋದಲ್ಲಿ, ಅವರೇ ಹೇಳಿದಂತೆ ಹತ್ತಿರ ಹತ್ತಿರ ೯೦ ಪುಸ್ತಕಗಳನ್ನು ಬರೆದು, ನೂರು ಪುಸ್ತಕ ಬರೆಯಲು ಶಕ್ತಿ ಬೇಕು ನಂಗೆ ಎಂದು ಕೇಳಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯಾಗಿತ್ತು…!! “ಓ ಮನಸೇ” .. ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತ ಪಾಕ್ಷಿಕ ಪತ್ರಿಕೆ. ಅದರಲ್ಲಿ ಓದುಗರ ವೈಯಕ್ತಿಕ ವಿಷಯಗಳಿಗೆ ಸ್ಪಂದಿಸಿ, ಕೆಲವರಿಗೆ ಅಪ್ಪನಾಗಿ, ಕೆಲವರಿಗೆ ಅಣ್ಣನಾಗಿ, ಕೆಲವರಿಗೆ ತಮ್ಮನಾಗಿ, ಕೆಲವರಿಗೆ ಸ್ನೇಹಿತನಾಗಿ, ಇನ್ನೂ ಕೆಲವರಿಗಂತೂ ಆತ್ಮೀಯ ರವಿಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದ ವಿಚಾರ ಮರೆಯಲು ಸಾಧ್ಯವೇ..!!??

ಭೂಗತ ಜಗತ್ತಿನ, ಪಾತಕಿಗಳ ಇತಿಹಾಸವನ್ನ ಬೆತ್ತಲಾಗಿಸಿದರು. ಅಲ್ಲಿ ನಡೆಯುತ್ತಿದ್ದ ಕರ್ಮ ಕಾಂಡಗಳ ವಿವರಣೆ ನೀಡುತ್ತಿದ್ದರು. ಇದರಿಂದ ಹಲವಾರು ಪ್ರತಿಷ್ಠಿತರ ಕೆಂಗಣ್ಣಿಗೆ ಗುರಿಯಾಗಿದ್ದು ಉಂಟು. ಅವರೇ ಒಂದು ಕಡೆ ಬರೆದ ನೆನಪು, “ನನ್ನ ಹಿಂದೆ ಯಾವಾಗಲೂ ಗೋಡೆ ಇರಬೇಕು ಹಾಗೆ ಕೂಡ್ತೀನಿ” ಅಂತಾ…..ಯಾಕೆ ಅಂದ್ರೆ ಅಷ್ಟೊಂದು ಕ್ರೈಂ ನ್ಯೂಸ್ ಕವರೇಜ್ ಮಾಡಿ ಓದುಗರ ಮುಂದೆ ತಂದು ಇಡ್ತಾ ಇದ್ರು. ರವಿಯವರ ಲೇಖನಿಯಿಂದ ಕಣ್ತಪ್ಪಿಸಿಕೊಂಡ ಕ್ಷೇತ್ರ ಬಹುಶಃ ಯಾವುದೂ ಇರಲಿಕ್ಕಿಲ್ಲ. ಕಾರ್ಗಿಲ್ ಯುದ್ಧಭೂಮಿಗೆ ತೆರಳಿ ಅಲ್ಲಿಂದ ರಿಪೋರ್ಟ್ ಮಾಡಿದ್ದು ಸಾಹಸ ಪ್ರವೃತ್ತಿಗೆ ಸಾಕ್ಷಿಯಾಗಿತ್ತು. ತೀರಾ ಇತ್ತೀಚೆಗೆ ಆರೋಗ್ಯ ಹದಗೆಟ್ಟ ಮೇಲೂ ಪುಲ್ವಾಮಾಗೆ ತೆರಳಿ ಅಲ್ಲಿಂದ ಮಹತ್ವದ ಮಾಹಿತಿ ನೀಡಿದ ದಿಟ್ಟತನವನ್ನ ನಾವು ಕಣ್ಣಾರೆ ನೋಡಿದೀವಿ. ಅವರೇ ಹೇಳುವಂತೆ, ವಾರಗಟ್ಟಲೆ, ತಿಂಗಳುಗಟ್ಟಲೆ ಹಗಲು ರಾತ್ರಿ ಎನ್ನದೇ ತಮ್ಮ ಆಫೀಸಿನಲ್ಲೇ ಬರೆಯುತ್ತಾ ಕಳೆದಿದ್ದು ಇದೆ. ಇದು ಅವರ ಬರವಣಿಗೆಯ ಹಸಿವಿನ ಪರಿಚಯ ಮಾಡಿಸುತ್ತದೆ. ಆದರೆ ಕೆಲವೊಮ್ಮೆ ರವಿಯವರ ಈ ನೇರ ಬರವಣಿಗೆ ಹಲವರ ವೈಯಕ್ತಿಕ ನೋವಿಗೆ ಕಾರಣವಾಗಿದ್ದು ಓಪನ್ ಸೀಕ್ರೆಟ್.

“ಎಲ್ಲರ ವೈಯಕ್ತಿಕ ಜೀವನವನ್ನು ಯಾಕೆ ಬರೀಬೇಕು ಈ ರವಿ ಬೆಳಗೆರೆ”, ಎಂದವರೂ ಕೂಡ, ಅವರ ಪತ್ರಿಕೆ ಮತ್ತು ಪುಸ್ತಕಗಳನ್ನ ಓದಿ, “ಏನ್ ಬರೀತಾನಪಾ ಬಡ್ಡೀ ಮಗ!!” ಎಂದು ಉದ್ಗಾರ ತೆಗೀತಾ ಇದ್ರು..!! ಅವರ ಧ್ವನಿಯ ಮೂಲಕ ಬಹಳ ಆಪ್ತವಾಗಿ ಮೂಡಿ ಬಂದ ಮನಸ್ಸಿನ ಕುರಿತಾಗಿ ಹೇಳುವಂಥ, “ಓ ಮನಸೇ” ಆಡಿಯೋ ಸಿಡಿ ಸರಣಿ ರೂಪದಲ್ಲಿ ಬಿಡುಗಡೆ ಗೊಂಡಿತು. ಅದರಲ್ಲಿ ಬದುಕಿನಿಂದ ವಿಮುಖರಾದವರಿಗೆ, ಬದುಕನ್ನು ಪ್ರೀತಿಸಲು ಹೇಳಿಕೊಟ್ಟು, ನೊಂದವರಿಗೆ ಜೀವನೋತ್ಸಾಹ ತುಂಬಿದರು. ರವಿ ಅವರ ಧ್ವನಿಯಲ್ಲಿ ಮೂಡಿದ ನುಡಿಗಳ ಆಪ್ಯಾಯತೆ ಇಂದಿಗೂ ಕೂಡ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ, ಜನಪ್ರಿಯ “ಎಂದೂ ಮರೆಯದ ಹಾಡು” ಎನ್ನುವ ಕಾರ್ಯಕ್ರಮದಲ್ಲಿ, ಚಿತ್ರಗೀತೆಗಳು ಜನ್ಮತಳೆದ ಸಂದರ್ಭ, ಹಾಡಿನ ರಚನೆಯ ಬಗ್ಗೆ, ಮತ್ತು ಸಂಗೀತಗಾರರ ಕುರಿತು ಅದ್ಭುತ ಸಾಲುಗಳಲ್ಲಿ ಮುತ್ತು ಪೋಣಿಸಿದಂತೆ, ವೀಕ್ಷಕರ ಮನಮುಟ್ಟುವಂತೆ ಹೇಳುತ್ತಿದ್ದ, ಅವರ ನಿರೂಪಣಾ ಕೌಶಲ್ಯ ಎಂಥವರನ್ನೂ ಮಂತ್ರ ಮುಗ್ಧರನ್ನಾಗುವಂತೆ ಮಾಡುತ್ತಿತ್ತು.

ಹೀಗೆ ಹೇಳ್ತಾ ಇದ್ರೆ ಸಮಯ ಸಾಲುವುದಿಲ್ಲ. ಕಡಿಮೆ ಸಮಯದಲ್ಲಿ ಅತೀ ಎತ್ತರಕ್ಕೆ ಬೆಳೆದು ನಿಂತ ಹಲವರಲ್ಲಿ ರವಿ ಬೆಳಗೆರೆ ಒಬ್ಬರು. ಹಾಗೆ ಬೆಳೆಯಲು ಕಾರಣ, ಅವರ ಕಷ್ಟದ ದಿನಗಳ ಜೀವನಪಾಠ, ಜೊತೆಗೆ ಅವರಿಗಿದ್ದ ಜ್ಞಾನದ ಹಸಿವು ಮತ್ತು ಬರೆಯುವ ಹವ್ಯಾಸದಿಂದ. ಕೊನೆಯವರೆಗೂ ಅವರು ಬರೆಯಲು ಬಳಸಿದ್ದು ಪೆನ್ ಮತ್ತು ಪೇಪರ್.. ಲ್ಯಾಪ್ ಟಾಪ್ ಇಲ್ಲ ಮೊಬೈಲ್ ಇಲ್ಲ… “ಅರೇ..!! ಪೆನ್ ಹಿಡಿದು ಬರೆಯುವ ಸುಖಾನೆ ಬೇರೆ” ಎನ್ನುತ್ತಿದ್ದರು. ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅವರಿಗೂ ಹಲವಾರು ದೌರ್ಬಲ್ಯಗಳು ಇದ್ದದ್ದು ನಿಜ. ಅವುಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿ ಇರಿಸಿಕೊಂಡು, ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿದ್ದರೆ, ಬಹುಶಃ ರವಿ ಬೆಳಗೆರೆ ಇಷ್ಟು ಬೇಗ ನಮ್ಮನ್ನೆಲ್ಲಾ ಅಗಲುವ ಸಂದರ್ಭ ಬರುತ್ತಿರಲಿಲ್ಲವೇನೋ..!!!??

ಪ್ರತಿಯೊಬ್ಬರಿಗೂ ಇರುವಂತೆ ಅವರಿಗೂ ಒಂದು ಖಾಸಗಿ ಬದುಕಿತ್ತು. ಅದರಲ್ಲಿ ಸಾಕಷ್ಟು ಏರುಪೇರುಗಳು ಇದ್ದವು. ಆದರೆ ಇವು ಯಾವುವೂ ಅವರ ಬರವಣಿಗೆಯ ಪ್ರೀತಿಯನ್ನ ಕುಗ್ಗಿಸಲಿಲ್ಲ. ಅವರ ತಾಯಿಯ ಬಗ್ಗೆ ಮಾತನಾಡುವಾಗ ಅತ್ಯಂತ ಭಾವುಕರಾಗಿ ಮಾತನಾಡುತ್ತಿದ್ದರು. ಒಂದೊಮ್ಮೆಯಂತೂ ಅವರ ತಾಯಿಯ ಆರೋಗ್ಯ ಸಮಸ್ಯೆಯನ್ನು ನೆನೆದು, ಅತೀವ ನೋವಿನಿಂದ “ನನ್ನ ಅಮ್ಮನ ಮುಟ್ಟಿನ ಬಟ್ಟೆಯನ್ನು ತೊಳೆದವನು ನಾನು” ಎಂದು ಗದ್ಗದಿತರಾಗುತ್ತಿದ್ದರು. ಆಗ ರವಿ ಜಗತ್ತಿನ ಎಲ್ಲಾ ತಾಯಂದಿರಿಗೆ ಅತ್ಯಂತ ಶ್ರೇಷ್ಠ ಮಗನಾಗಿ ಕಾಣುವುದು ಸತ್ಯ. ತಪ್ಪು ಮಾಡುವುದು ಮಾನವ ಸಹಜ ಗುಣ. ಆದರೆ ತಪ್ಪು ಒಪ್ಪಿಕೊಳ್ಳುವ ಧೈರ್ಯ ಸಾಹಸ ಇದ್ದರೆ ಮಾತ್ರ, ತಪ್ಪು ಮಾಡಬೇಕು, ಎನ್ನುತ್ತಿದ್ದರು. ರವಿಬೆಳಗೆರೆ ತಾವು ಮಾಡಿದ ತಪ್ಪನ್ನು ಪದೇ ಪದೇ ಓದುಗರ ಸಮ್ಮುಖದಲ್ಲಿ ‘ಖಾಸ್ ಬಾತ್’ ಎನ್ನುವ ಅಂಕಣದಲ್ಲಿ ಒಪ್ಪಿಕೊಳ್ಳುತ್ತಿದ್ದರು. “ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ” ಎನ್ನುವಂತೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ನಾವು ಕಾಣಬಹುದು. ಅದರಲ್ಲಿ ನಾವು ನಮಗೆ ಬೇಕಾದ ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಿದರೆ ಉತ್ತಮ ಭವಿಷ್ಯ ನಮ್ಮದಾಗುವುದು ಎನ್ನುವುದು ನನ್ನ ಬಲವಾದ ನಂಬಿಕೆ.

ರವಿಬೆಳಗೆರೆ ಅವರನ್ನು ಬೈಯುತ್ತಲೇ ಅವರ ಪತ್ರಿಕೆಗಳನ್ನು ಓದುತ್ತಾ ಬಂದವರು ಕೂಡಾ ಇಂದು ಅವರ ಅಗಲಿಕೆಯಿಂದ ಎರಡು ಹನಿ ಕಣ್ಣೀರು ಹಾಕಿರುವುದು ಮಾತ್ರ ನೂರಕ್ಕೆ ನೂರು ಸತ್ಯ. ಎಂದೆಂದಿಗೂ ಅವರ ಸರಳ ಮತ್ತು ನೇರ ಬರವಣಿಗೆಯಿಂದ ಅವರು ಓದುಗರ ಮನಸ್ಸಿನಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆ.. ಅವರ ಖಾಸಗಿ ಬದುಕಿನ ಕುರಿತು ಹೆಚ್ಚು ಯೋಚಿಸದೇ, ಅವರ ವೃತ್ತಿ ಜೀವನದ ಬಗ್ಗೆ ಗಮನಹರಿಸಿದರೆ, ಅಲ್ಲಿ ಒಬ್ಬ ಅಸಾಮಾನ್ಯ, ಅಸಾಧಾರಣ ಪ್ರತಿಭೆಯ ಗಣಿಯಂತೆ ಬರೆಯುವ ಪ್ರತಿಯೊಂದು ಅಕ್ಷರಕ್ಕೂ ಜೀವತುಂಬುವ, ರವಿಬೆಳಗೆರೆಯನ್ನು ಕಾಣಬಹುದು. ರವಿಯವರ ನೇರ ಬರವಣಿಗೆಯ ಶೈಲಿ ಓದುಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ…ಇಂದು ವಿಜಯವಾಣಿಯಲ್ಲಿ ಅವರ ಕೊನೆಯ ಅಂಕಣ “ಉಡುಗೊರೆ” ಎನ್ನುವ ಅರ್ಥಪೂರ್ಣ ಲೇಖನ ಓದಿದೆ. ನೂರಕ್ಕೆ ನೂರು ಸತ್ಯ ಎನ್ನುವಂತಿದೆ.

ಅವರ ಬರವಣಿಗೆಯ ಶೈಲಿಯಿಂದ ಪ್ರಭಾವಿತರಾದ ಎಷ್ಟೋ ಓದುಗರಲ್ಲಿ ನಾನು ಒಬ್ಬಳು. ಹೀಗೆ ಅವರ ಬಗ್ಗೆ ಬರೀಬೇಕು ಅನ್ನಿಸಿತು. ಕುಳಿತು ಬರೆದೆ ಅಷ್ಟೇ. ಬರೆಯಲು ಇನ್ನೂ ಬಹಳಾ ಬಹಳಾ ಇದೆ. ಬರೀತಾ ಹೋದ್ರೆ, ಸಮಯ ಸಾಲದು ಬಿಡಿ… ಹಬ್ಬದ ಕೆಲಸದ ಗಡಿಬಿಡಿಯಲ್ಲಿ ಪೋಸ್ಟ್ ಮಾಡಲು ಆಗಿರಲಿಲ್ಲ.. ಕೊನೆಯದಾಗಿ… ಬರೆಯುವವರು ಸಾಕಷ್ಟು ಇದಾರೆ. ಆದರೆ ರವಿಬೆಳಗೆರೆಯವರ ಶೈಲಿ ಮತ್ತು ಹೃದಯದ ಅಂತರಾಳದಿಂದ ಬರುತ್ತಿದ್ದ ಅವರ ಅದ್ಭುತವಾದ ನಿರೂಪಣಾ ಕೌಶಲ್ಯ ಎಂದೂ ನಮ್ಮ ಚಿತ್ತದಿಂದ ಮಾಸಲಾರದು..

ಧನ್ಯವಾದಗಳೊಂದಿಗೆ….

-ಶೋಭಾ ಶಂಕರಾನಂದ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x