“ಮುದವಲ್ಲವೇ ಮೌನದಾಲಿಂಗನ”: ನಾಗರೇಖಾ ಗಾಂವಕರ, ದಾಂಡೇಲಿ

“ಸಾಯ್‍ಲೆನ್ಸ  ಇಜ್ ದ್ ಬೆಷ್ಟ್ ಆನ್ಸರ್ ಫಾರ್ ಆಲ್ ಸ್ಟುಪಿಡ್ ಕ್ವೆಶ್ಚನ್ಸ್,

ಸ್ಮಾಯ್ಲಿಂಗ ಇಜ್ ದ್ ಬೆಷ್ಟ್ ರಿಯಾಕ್ಷನ್ ಇನ್ ಅಲ್ ಕ್ರಿಟಿಕಲ್ ಸಿಚ್ಯುಯೇಶನ್”. ಎಷ್ಟು ಸುಂದರವಾಗಿ ಹೇಳಿದ್ದಾರೆ ಅಲ್ವೆ?

ಮೌನ ಮತ್ತು ಮುಗುಳು ನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ ಮುಗುಳುನಗೆಯ ಮುಖಾರವಿಂದದಲಿ ಮೌನದ ರಿಂಗಣ ಮನಮೋಹಕ. ಬಹಳ ಸಂದರ್ಭಗಳಲ್ಲಿ ಕೆಲವು ಮೂರ್ಖ ಪ್ರಶ್ನೆಗಳಿಗೆ ಮೌನವೇ ಸರಿಯಾದ ಉತ್ತರ. ಹಾಗೆ ಮುಗುಳುನಗೆ ಒಂದು ಉದ್ದಿಪನ ಮಾತ್ರೆಯಂತೆ. ಅತಿ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಷಗಳಲ್ಲಿ ಕೆಲವೊಮ್ಮೆ ಒಂದು ಸುಂದರ ಮುಗುಳು ನಗೆಯು ಎದುರಿನ ವ್ಯಕ್ತಿಯ ಕಠೋರ ಮನಸ್ಥತಿಯನ್ನು ಬದಲಿಸಿ ಮೃದುವಾಗುವಂತೆ ಮಾಡಬಲ್ಲದು. ಅಲ್ಲದೇ ಅದು ಶಾಂತಚಿತ್ತತೆ ಸಂಕೇತವೂ ಹೌದು.

“ನಗು ಮನದಿ ಲೋಗರ ವಿಕಾರಂಗಳನು ನೋಡಿ

ಬಿಗಿ ತುಟಿಯ  ದುಡಿವಂದು ನೋವಪಡುವಂದು

ಪೋಗು ವಿಶ್ವಜೀವನದ ಜೀವಾಂತರಂಗದಲಿ

ನಗುನಗುತ ಬಾಳ್, ತೆರಳು-ಮಂಕುತಿಮ್ಮ” ಎಂದು ಖ್ಯಾತ ಕವಿ ಡಿ. ವಿ. ಜಿ ಹೇಳಿದ್ದಾರೆ. ಜನರ  ವಿಕಾರಗಳನ್ನು ನಗುಮುಖದಿಂದಲೆ ನೋಡುತ್ತ, ನೋವು, ಕಷ್ಟಗಳನ್ನು ನಗುಮುಖದಿಂದಲೆ ಸಹಿಸಿ, ವಿಶ್ವಜೀವನದ ಸಮಷ್ಟಿಯಲ್ಲಿ ನಾವೂ ಒಂದಾಗಿ, ನಗುನಗುತ್ತ ಬದುಕಿ, ಬಾಳ ಪಯಣವನ್ನು ಸಾಗಿಸಬೇಕೆಂದ ಹಿರಿಯರ ವಾಣಿ ಎಷ್ಟೊಂದು ಮನನೀಯ.

ಮಾತು ಬೆಳ್ಳಿಯಾದರೆ ಮೌನ ಬಂಗಾರ ಎಂಬುದು ಜನಪದರ ಅನುಭವ ವೇದ್ಯ ನುಡಿ. ನಾಲಿಗೆಗೆ ಬಣ್ಣಿಸಲಾಗದ ಎಷ್ಟೋ ವಿಷಯಗಳನ್ನು ಮೌನ ನಾಲಿಗೆಗಿಂತ ಪರಿಣಾಮಕಾರಿಯಾಗಿ ಗಟ್ಟಿಯಾಗಿ ಹೇಳುವುದು. ಹೆಚ್ಚಾಗಿ ಭಾರತೀಯರು  ಮಾತುಗಾರರು. ಅದರಲ್ಲೂ ಭಾರತೀಯ ಮಹಿಳೆಯರು ವಾಚಾಳಿಗಳು. ಮಾತಿನಲ್ಲಿ ಮನೆ , ಮಹಡಿ, ಮದುವೆ ಕೂಡ ಮಾಡಿಬಿಡಬಲ್ಲ ಮಾತುಗಾತಿಯರು. ಮಾತೆಂದರೆ ಜಗತ್ತು ಹರಿದು ಬೀಳುತ್ತಿದ್ದರೂ ಲಕ್ಷ್ಯೀಸದೇ ಮಾತಿನ ಭರಾಟೆಯಲ್ಲಿ ಮುಳುಗೇಳುವ ಮಹಿಳಾ ಮಣಿಗಳು ನಾವಲ್ಲವೇ? ಗೆಳತಿಯರೊಡನೆ  ಹರಟಲು ಬಿಡಲೊಲ್ಲದ ಗಂಡನ ಮೇಲೆ ಹರಿಹಾಯದ ಹೆಂಗಳೆಯರಿರುವರೇ? ಮಾತು ಮಾತಿಗೂ ಮುನಿಸು ತೋರುವ ಮಡದಿಯರು ಇಲ್ಲವೆಂದಲ್ಲ. ಎಲ್ಲ ಮಾತಿನಿಂದ, ಮಾತೆಂಬ ಮತ್ತಿನಿಂದ. ಎಳೆಯ ವಯಸ್ಸಿನಲ್ಲಿ ಚಟಪಟ ಮಾತನ್ನಾಡುತ್ತಿರುವ ಪುಟ್ಟ ಹುಡುಗಿ ಹದಿಹರೆಯಕ್ಕೆ ಬರುತ್ತಿದ್ದಂತೆ ಮೌನಗೌರಿಯಾಗುವುದು, ಎಲ್ಲರಿಂದ ಗುಣಗಾನಕ್ಕೊಳಗಾಗುವುದು ಗಮನಿಸಿದರೆ ಮಾತಿಗಿಂತ ಮೌನದ ಬೆಲೆ ಜಾಸ್ತಿ ಎನಿಸುವುದು. ಆದರೆ ಅದೇ ಹುಡುಗಿ ಮದುವೆಯಾಗಿ ಒಂದೆರಡು ಹಡೆಯುತ್ತಲೇ ಮತ್ತೆ ಮಾತಿನ ಮಲ್ಲಿಯಾಗುವುದು ಮಾತ್ರ ವಿಪರ್ಯಾಸ. ಅಲ್ಲವೇ? ಇದೆಂಥಾ ವಿಚಿತ್ರ.

ಮೌನದ ಲಾಭವೇನು? ಎಂಬುದನ್ನು ಪರಾಮರ್ಶಿಸಿದರೆ ಪ್ರಪ್ರಥಮವಾಗಿ ಅದು ಮನಃಶ್ಯಾಂತಿ. ಶಂಕರಾರ್ಚಾರು ಮೌನವನ್ನು ಯೋಗಕ್ಕೆ ಸಮೀಕರಿಸಿ ಅದು ಯೋಗದ ಪ್ರಥಮ ದ್ವಾರವೆಂದು ಹೇಳಿದ್ದಾರೆ. ”ಯೋಗಸ್ಯ ಪ್ರಥಮಂ ದ್ವಾರಂ ವಾಙ್ನರೋಧಃ”ಎಂದಿದ್ದಾರೆ. ಮೌನದಿಂದ   ಶಕ್ತಿಯ ಅಪವ್ಯಯವನ್ನು ತಡೆಗಟ್ಟಬಹುದು. ಮೌನ ಮಲ್ಲಿಗೆಯ ಪರಿಮಳವಿದ್ದಂತೆ. ಅದರ ಅಸ್ತಿತ್ವವೇ ಅದರ ಪ್ರಾಮುಖ್ಯತೆ. ಮೌನಮಾಲೆಯ ಹಿಡಿದು, ಮನದ ಇಂಗಿತವರಿಯುವ ಮನದೊಡತಿ ಇದ್ದರೆ ಪತಿಯಾದವನ ಮನಸ್ಸು ಆಕೆಯನ್ನು ಮನದಣಿಯೇ ಮೋಹಿಸುವುದಂತೆ. ಮಾತೆಂಬ ಬಿಸಿಲಿಂದ ಮನಸ್ಸು ಬೆಂದು ಸಂಬಂಧಗಳು ಸಡಿಲವಾಗುದುಂಟು. ಅತಿಯಾದ ಮಾತಿನಿಂದ ಅನಾಹುತಗಳೇ ಹೆಚ್ಚು. ಮಾತಿನಿಂದ ಅಸಂಬದ್ಧ, ಅನಪೇಕ್ಷಿತ ಸನ್ನಿವೇಶಗಳು ಎದುರಾಗಬಹುದು. ಸರ್ವೆಸಾಮಾನ್ಯವಾಗಿ ಪ್ರತಿಯೊಬ್ಬನ ಬದುಕಿನಲ್ಲೂ ಒಂದಿಲ್ಲೊಂದು ಸಂದರ್ಭದಲ್ಲಿ “ನಾನು ಹೀಗೆ ಮಾತನಾಡಬಾರದಾಗಿತ್ತು”ಎಂದು ಯೋಚಿಸದೆ ಇರಲು ಸಾಧ್ಯವೇ ಇಲ್ಲ. ಕಾರಣ ಅತಿ ಮಾತು. ನಮ್ಮ ಮಾತು ಹಿತಮಿತವಾಗಿದ್ದಷ್ಟು ನಮಗೂ ಪರರಿಗೂ ಉಪಕಾರ.

ಮಾತಿನ ಅವಾಂತರ , ಅದರಿಂದಾಗುವ ನೋವು  ಮಾತಿನ ಬಾಣಕ್ಕೆ ಗುರಿಯಾದವನಿಗೆ ಗೊತ್ತು. ಅತಿ ಮಾತಿನಿಂದಾಗುವ ವಿಪರೀತ ಪ್ರಸಂಗಗಳು ಪ್ರತಿಯೊಬ್ಬರ ಬದುಕಿನಲ್ಲಿ ಪ್ರತಿನಿತ್ಯ ಪಾಠ ಕಲಿಸುತ್ತಿದ್ದರೂ ವಾಚಾಳೀತನವೆಂಬ ಮಹಾರೋಗದಿಂದ ಮುಕ್ತಿ ಪಡೆಯಲು ಅವರು ಬಯಸುವುದಿಲ್ಲ. ಅದೊಂದು ಚಟವಿದ್ದಂತೆ. ವಾಚಾಳಿಯಾದವಗೆ ಅಡ್ಡ ಹೆಸರಿಂದ ಅಪಹಾಸ್ಯ ಮಾಡಿ ಕರೆದರೂ ಆತ ಜಪ್ಪಯ್ಯ ಎನ್ನದೆ ತನ್ನ ಹಳೇ ಖಯಾಲಿ ಬಿಡಲಾರ. ಮಾತಿನಿಂದ ದ್ವೇಷಗಳನ್ನು ಕಟ್ಟಿಕೊಳ್ಳುತ್ತಾ ಹೋಗುವುದಾದರೆ, ಮೌನದಿಂದ ಮಾನವನ್ನು, ಗೌರವವನ್ನು ಒಳ್ಳೆಯ ಸ್ನೇಹಿತರನ್ನೂ ಗಳಿಸಬಹುದಂತೆ. ‘ಮಾತು ಕುತ್ತಾದರೆ, ಮೌನ ಮುತ್ತಾಗಬಹುದು’ ಅಂತಲೇ ಮೌನಿ ಸಾಧಕನೆನಿಸಿಕೊಳ್ಳುತ್ತಾನೆ. ಅವನಾಡುವ ಕೆಲವೇ ಮಾತುಗಳು ತೂಕದ ನುಡಿಗಳಾಗಿರುತ್ತವೆ. ಮಾತು ತಪಸ್ಸಿನಿಂದ ಬಂದದ್ದೆನಿಸುತ್ತದೆ. ಮೌನಾಭ್ಯಾಸ ತಪಸ್ಸಿದ್ದಂತೆ. ಬಹಳ ಕಠಿಣ. ಕೆಲವೊಮ್ಮೆ ಮೌನವೇ ಮಾತಾಗುತ್ತದೆ. ಮಾತಿನಿಂದ ವ್ಯಕ್ತಪಡಿಸಲಾಗದ ಭಾವನೆಗಳು ಬರಿಯ ಕಣ್ಣಿನ ಮೂಲಕವೇ ಸೂಕ್ಷವಾಗಿ ವಿನಿಮಯವಾಗುತ್ತವೆ. ಮಾತಿಗೂ ಮೀರಿದ ಕೆಲವು ಆಪ್ತ ಭಾವನೆಗಳು ಮೌನದಲ್ಲಿ ವಿಜೃಂಬಿಸಬಲ್ಲವು. ಅದರಲ್ಲೂ ಪತಿ-ಪತ್ನಿಯರ ಟಿಟಜಿಟನಡುವಿನ ಪ್ರೇಮಪೂರಿತ ನವಿರು ಭಾವನೆಗಳು, ತಾಯಿ-ಮಗುವಿನ ನಡುವಿನ ಸೂಕ್ಷ ಸಂವೇದನೆಗಳು ಬಹುತೇಕ ಮೌನವಾಹಿನಿಯಾಗಿಯೇ ರವಾನೆಯಾಗುತ್ತಿರುತ್ತವೆ.

ಇಷ್ಟೆಲ್ಲಾ ಹೇಳಿದ ಅರ್ಥ ಮಾತನ್ನೆ ನಿಲ್ಲಿಸಿಬಿಡಬೇಕೆಂದಲ್ಲ. ಮಿತವಾಗಿರಲೆಂದು, ಅನಾವಶ್ಯಕ ಕಾಲಹರಣವಾಗದಿರಲೆಂದು. ಯಾವ ಕಡೆಯಿಂದಲೂ ಅತಿಯಾಗದಿರಲೆಂದು. ಹಿಂದಿಯಲ್ಲಿ ಒಂದು ಮಾತಿದೆ.

“ಅತಿ ಭಲಾ ನ ಬೋಲನಾ, ಅತಿ ಭಲೀ ನ ಚುಪ್ಪ್

ಅತಿ ಭಲಾ ನ ಬರಸನಾ, ಅತಿಭಲೀ ನ ಧುಷ್ಪ್”

ಅತಿಯಾಗಿ ಮಾತನಾಡುವುದು ಒಳ್ಳೆಯದಲ್ಲ. ಹಾಗೆ ಅತಿ ಮೌನವೂ ಹಿತವಲ್ಲ. ಅತಿಯಾಗಿ ಮಳೆ ಸುರಿದರೂ ಸರಿಯಲ್ಲ. ಅಂತೆ ಅತಿಯಾದ ಬಿಸಿಲಿನ ಝಳವು ಹಿತವಲ್ಲ. ಯಾವುದೇ ಆದರೂ ಒಂದು ಮಟ್ಟದಲ್ಲಿದ್ದರೆ ಚೆನ್ನ. ಅಂದರೆ ಮಾತ್ರ ಅದಕ್ಕೆ ಸಿಗಬೇಕಾದ ಮಾನ ಮರ್ಯಾದೆಗಳು ಸಿಗುತ್ತವೆ. ‘ಮೌನೇನ ಕಲಹಂ ನಾಸ್ತಿ’-‘ಮೌನದಿಂದ ಕಲಹವಿಲ್ಲ’.

ನಾಗರೇಖಾ ಗಾಂವಕರ, ದಾಂಡೇಲಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x