ನನ್ನ ಮಿತ್ರರು, ಆತ್ಮೀಯರು ನನ್ನ ಲೇಖನಗಳನ್ನು ಓದಿ ಯಾವಾಗಲೂ ಬೇರೆ ಬೇರೆ ವಿಷಯದ ಬಗ್ಗೆ ಬರಿತಾ ಇದೀರಲ್ಲ ಯಾಕೆ ನೀವು ನಿಮ್ಮ ಜೀವನದಲ್ಲಿ ನಡೆದ ಯಾವುದಾದರೊಂದು ವಿಶೇಷ ಘಟನೆಯ ಬಗ್ಗೆ ಬರೆಯಬಾರದೇಕೆ? ಎಂದಾಗ ನಾನು ಒಂದು ಘಟನೆಯನ್ನು ಇಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನಷ್ಟೆ.
ಗಂಡುಮೆಟ್ಟಿದ ನಾಡು ಉತ್ತರ ಕರ್ನಾಟಕ. ಇಲ್ಲಿ ಪಂಜಾಬ (ಪಂಚ ನದಿಗಳ ಬೀಡು) ಎಂದೇ ಖ್ಯಾತಿಯಾದ ಬಿಜಾಪೂರ (ಇಂದು ವಿಜಯಪುರ ಆಗಿದೆ) ಜಿಲ್ಲೆಯ ಒಂದು ಗ್ರಾಮದಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಹಲವು ವರ್ಷಗಳ ಹಿಂದೆ ಅಲ್ಲಿ ನಡೆದ ಘಟನೆ ಇದಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನನ್ನ ವಿಷಯದಲ್ಲಿ ಪ್ರಥಮ ಬಂದವರಿಗೆ ಪುರಸ್ಕಾರ ನೀಡುತ್ತೇನೆಂದು ಶಾಲೆಯ ಮಧ್ಯಮಾವಧಿಯಲ್ಲಿ ಹೇಳಿದ್ದೆ. ಅದರಂತೆ ರಿಸಲ್ಟ್ ಬಂದ ದಿನ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರೊಂದಿಗೆ ಶಾಲೆಯ ಮುಖ್ಯೋಪಾಧ್ಯಾಯರ ಕಚೇರಿಯ ಮುಂದೆ ನಿಂತಿದ್ದೆವು, ಆಗ ಶಾಲೆಗೆ ಪ್ರಥಮ ಸ್ಥಾನ ಪಡೆದ ಹಾಗೂ ಧ್ವಿತೀಯ ಸ್ಧಾನ ಪಡೆದ ವಿದ್ಯಾರ್ಥಿನಿಯರಿಬ್ಬರೂ ಬಂದು ಭೇಟಿಯಾದರು. ಆಗ ನಾವೆಲ್ಲರೂ ಅವರಿಗೆ ವಿಶ್ ಮಾಡಿದೆವು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ನನ್ನ ಸಮೀಪ ಬಂದು ಮೆಲ್ಲಗೆ, ಸರ್ ಪ್ರಥಮ ಬಂದವರಿಗೆ ಬಹುಮಾನ ಕೊಡುತ್ತೇನೆಂದು ಹೇಳಿದ್ರಲ್ಲ ಯಾವಾಗ ಕೊಡ್ತೀರಿ! ಎಂದು ಕೇಳಿದಳು. ಆಗ ನಾನು ಈಗಲೇ ಕೊಡೋಣ ಎಂದೆ. ಅದನ್ನು ಪಕ್ಕದಲ್ಲಿದ್ದ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯು ಕೇಳಿಸಿಕೊಂಡಳು. ಅವಳೂ ನನ್ನ ಹತ್ತಿರ ಬಂದು ಸರ ನನಗೂ ಬಹುಮಾನ ಕೊಡಬೇಕು, ಏಕೆಂದರೆ ನಾನು ದ್ವಿತೀಯ ಸ್ಥಾನ ಬಂದಿರಬಹುದು ಆದರೆ ಪ್ರಥಮ ಸ್ಥಾನ ಬಂದವಳಿಗಿಂತ ಒಂದೇ ಅಂಕ ಕಡಿಮೆ ಪಡೆದಿದ್ದೇನೆ. ಹೀಗಾಗಿ ನನಗೂ ಬಹುಮಾನ ಕೊಡಬೇಕೆಂದು ಹೇಳಿದಳು. ನಾನು ಮುಗುಳ್ನಕ್ಕು ತಲೆ ಅಲ್ಲಾಡಿಸಿದೆ. ಆದರೆ ಬಹುಮಾನ ಏನಿತ್ತೆಂದರೆ ಒಂದು ಮುತ್ತು…!
ನಾವೆಲ್ಲರೂ ಕೆಲ ತಿಂಗಳ ಹಿಂದೆ ನಮ್ಮ ಶಾಲೆಯಿಂದ ಹೈದ್ರಾಬಾದಗೆ ಟೂರ್ ಹೋಗಿದ್ದೇವು, ಆಗ ನಾನು ಅಲ್ಲಿ ವಿಶಿಷ್ಟ ಹಾಗೂ ಆಕರ್ಶಕವಾದ 5 ಮುತ್ತುಗಳನ್ನು ( ರಿಂಗ್ ಮತ್ತು ಬ್ರೇಸ್ ಲೆಟ್) ಗೆ ಬಳಸುವಂತವುಗಳನ್ನು ಖರೀದಿಸಿದ್ದೆ. ಅದನ್ನು ನಮ್ಮ ಶಾಲೆಯ ಕೆಲ ವಿದ್ಯಾರ್ಥಿಗಳು ನೋಡಿದ್ದರು. ಕೆಲ ದಿನಗಳ ನಂತರ ನನ್ನ ಕ್ಲಾಸಿನಲ್ಲಿ ಇದರ ಬಗ್ಗೆ ಚರ್ಚೆಯಾಯಿತು. ಆಗ ವಿದ್ಯಾರ್ಥಿಗಳು ಆ ಮುತ್ತುಗಳು ಬೇಕೆಂದು ಕೇಳಿದರು. ನಾನು ಎಲ್ಲರಿಗೂ ಇದನ್ನು ಕೊಡಲು ಸಾಧ್ಯವಿಲ್ಲ ಆದರೆ ವಾರ್ಷಿಕ ಪರೀಕ್ಷೆಯಲ್ಲಿ ಯಾರು ನನ್ನ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದು ಪ್ರಥಮ ಸ್ಥಾನ ಪಡೆಯುತ್ತಾರೋ ಅವರಿಗೆ ಅದರಲ್ಲಿನ ಒಂದು ಮುತ್ತನ್ನು ಕೊಡುತ್ತೇನೆಂದು ಹೇಳಿದ್ದೆ, ಅದರಂತೆ ವಿದ್ಯಾರ್ಥಿನಿ ಈಗ ಆ ಮುತ್ತಿನ ಬಗ್ಗೆ ಕೇಳುತ್ತಿದ್ದಳು. ಆಗ ನಾನು ಆಯ್ತು ನಿನಗೆ ಮುತ್ತು ಕೊಡುತ್ತೇನೆ ಸ್ಟಾಫ್ ರೂಮ್ ಗೆ ಬಾ ಎಂದು ಹೇಳಿ ಮುಂದೆ ಹೊರಟೆ. ಆಗ ನನ್ನ ಹಿಂದೆಯೇ ವಿದ್ಯಾರ್ಥಿನಿಯು ಬಂದಳು ನಾನು ಪಿಜನ್ ಬಾಕ್ಸ್ ನಿಂದ ಮುತ್ತಿನ ಡಬ್ಬಿಯನ್ನು ತೆಗೆದು ನಿನಗಿಷ್ಟವಾದ ಒಂದು ಮುತ್ತನ್ನು ತಗೋ ಎಂದೆ. ಆಗ ತನಗಿಷ್ಟವಾದ ಮುತ್ತನ್ನು ಪಡೆದು ಸಂತೋಷದಿಂದ ವಿದ್ಯಾರ್ಥಿನಿಯು ವೇಗವಾಗಿ ಹೊರಬಂದಳು. ಅವಳ ಸಂತೋಷವನ್ನು ಕಂಡು ದ್ವಿತೀಯ ಸ್ಧಾನ ಪಡೆದ ವಿದ್ಯಾರ್ಥಿನಿಯೂ ಸ್ಟಾಫ್ ರೂಮ್ ನ ಹತ್ತಿರ ಬಂದು ಸರ ನನಗೂ ಒಂದು ಮುತ್ತು ಕೊಡಿ ಎಂದಳು. ನಾನು ಹಾಗೆ ಇಲ್ಲ ಎಲ್ಲರಿಗೂ ಕೊಡೊಲ್ಲ ಎಂದೆ. ಅದಕ್ಕವಳು ನನಗೇನು ಗೊತ್ತಿಲ್ಲಾ ಸರ ಈಗ ನೀವು ಅವಳಿಗೆ ಕೊಟ್ಟಿದ್ದೀರಿ ನನಗೂ ಒಂದು ಮುತ್ತು ಕೊಡಬೇಕು ಎಂದಳು. ನಾನು ಅವಳ ಆಸೆಯನ್ನು ತಿರಸ್ಕರಿಸಲಾರದಾದೆನು. ಅವಳಿಗೆ ಸ್ಟಾಫ್ ರೂಮ್ ಗೆ ಬಾ ಕೊಡುತ್ತೇನೆಂದು ಹೇಳಿ ಇಬ್ಬರೂ ಕೂಡಿ ಸ್ಟಾಫ್ ರೂಮ್ ಗೆ ಹೋದೆವು. ಇದನ್ನೆಲ್ಲವೂ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕಿಯೊಬ್ಬರು ಗಮನಿಸುತ್ತಿದ್ದರು.
ಅದರಂತೆ ಆ ವಿದ್ಯಾರ್ಥಿನಿಗೊಂದು ಮುತ್ತು ಕೊಟ್ಟೆ ಅವಳು ಮುತ್ತನ್ನು ಪದೆದು ಸಂತೋಷದಿಂದ ಸ್ಟಾಫ್ ರೂಮ್ ನಿಂದ ಓಡುತ್ತ ವೇಗವಾಗಿ ಹೊರಬಂದಳು. ಅದನ್ನು ಗಮನಿಸಿ ನಮ್ಮ ಶಾಲೆಯ ಸಹ ಶಿಕ್ಷಕಿ ಸ್ಟಾಫ್ ರೂಮ್ ಒಳಗೆ ಬಂದು, ಸರ್ ಏನು ಮಾಡ್ತಾ ಇದ್ರಿ ಅಂದ್ರು. ನಾನು ವಿದ್ಯಾರ್ಥಿನಿಗೆ ಮುತ್ತು ಕೊಡ್ತಾ ಇದ್ದೆ ಎಂದೆ. ಅವರು ಗಾಬರಿಯಿಂದ ನನ್ನನ್ನೇ ನೋಡುತ್ತಾ ನಿಂತರು. ನನಗೆ ಏನ್ ಸಾರ್ ಅಂದ್ರು. ನಾನು ಅದೇ ಮಾತನ್ನೆ ಪುನರುಚ್ಚರಿಸಿದೆ. ಆಗ ನಾನು, ನಿಮಗೂ ಒಂದು ಮುತ್ತು ಕೊಡ್ಲಾ ಮೇಡಮ್! ಎಂದೆ, ಅವರು ಗಾಬರಿಯಾಗಿ ಏನೂ ಮಾತನಾಡಲಿಲ್ಲಾ. ನಾನು ನನ್ನ ಕೈಯಲ್ಲಿದ್ದ ಮುತ್ತುಗಳನ್ನು ಅವರ ಮುಖದ ಮುಂದೆ ಹಿಡಿದು, ಪರವಾಗಿಲ್ಲ ನೀವೇ ಯಾವುದಾದರೊಂದು ಮುತ್ತನ್ನು ಆಯ್ದುಕೊಳ್ಳಿ ಅಂದೆ. ಆಗ ಅವರು ನನ್ನ ಕೈಯಲ್ಲಿದ್ದ ಮುತ್ತುಗಳನ್ನು ನೋಡುತ್ತಿದ್ದಂತೆಯೇ ಮುಗುಳ್ನಕ್ಕು ಓ! ಈ ಮುತ್ತಾ ಎಂದರು. ಹಾಂ! ಎಂದು ಹೇಳಿದೆ. ಇವುಗಳನ್ನು ಎಲ್ಲಿಂದ ತಂದಿದ್ದು ಮತ್ತು ವಿದ್ಯಾರ್ಥಿನಿಯರಿಗೆ ಏಕೆ ಕೊಟ್ಟೆ ಎಂಬೆಲ್ಲ ವಿಷಯವನ್ನು ಹೇಳಿದೆ. ಅವರೂ ಒಂದು ಮುತ್ತನ್ನು ತೆಗೆದುಕೊಂಡರು. ನಾನು ಸ್ಟಾಫ್ ರೂಮ್ ನಿಂದ ಹೊರಬರುವಾಗ ಮುಖ್ಯೋಪಾಧ್ಯಾಯರು ತಮ್ಮ ಕೊಠಡಿಯ ಮುಂದೆ ನಿಂತಿದ್ದರು. ಅವರು ನನ್ನನ್ನು ನೋಡಿ, ರೀ ಬರ್ರೀ ಇಲ್ಲಿ ಎಂದು ಅವರ ಕೊಠಡಿಯತ್ತ ಸಾಗುತ್ತ ಹೇಳಿದರು. ನಾನೂ ಕೂಡ ಅವರ ಕೊಠಡಿಯತ್ತ ಸಾಗಿದೆ. ಅವರ ಕೊಠಡಿಗೆ ಹೋದ ನಂತರ ಕುತ್ಕೊಳ್ರಿ ಅಂದ್ರು. ನಾನು ಕುಳಿತುಕೊಂಡೆ.
ತಕ್ಷಣ ಅವರು ಏನ್ರೀ ಆ ಹುಡುಗಿಯರಿಗೆ ಸ್ಟಾಫ್ ರೂಮ್ ಗೆ ಕರಕೊಂಡ ಹೋಗಿ ಏನ್ರಿ ಕೊಟ್ರಿ! ಎಂದರು. ನಾನು ಮೆಲ್ಲಗೆ ಮುತ್ತು ಎಂದೆ. ಅದ್ಯಾಕ್ರೀ ಕೊಟ್ರೀ! ಅಂದರು. ಸರ್ ನಾನು ರಿಸಲ್ಟ್ ಬಂದ ನಂತರ ಒಂದು ಮುತ್ತು ಕೊಡುತ್ತೇನೆ ಅಂತ ವಿದ್ಯಾರ್ಥಿನಿಗೆ ಹೇಳಿದ್ದ್ದೆ ಅದಕ್ಕೆ ಕೊಟ್ಟೆ ಎಂದೆ. ಆಗ ಅವರು ಒಬ್ಬರಿಗೆ ಕೊಟ್ಟಿರೋ ಮತ್ತ ಯಾರಿಗಾದ್ರೂ ಕೊಟ್ಟಿರಿ ಅಂದ್ರು. ಆಗ ನಾನು ಧ್ವಿತೀಯ ಸ್ಥಾನ ಬಂದ ವಿದ್ಯಾರ್ಥಿನಿಗೂ ಕೊಟ್ಟೆ. ಅಲ್ಲದೇ ಮತ್ತೆ ಇದೀಗ ಬರುವಾಗ ಸ್ಟಾಫ್ ರೂಮ್ ನಲ್ಲಿ ಬಂದ ಸಹ ಶಿಕ್ಷಕಿಗೂ ಕೊಟ್ಟಿದ್ದೀನಿ ಸರ್ ಎಂದೆ. ಮುಖ್ಯೋಪಾದ್ಯಾಯರು ನೀವು ಯಾರಿಗೂ ಬಿಡಾಂಗ ಕಾಣಾಂಗಿಲ್ಲ ಅಂದ್ರು. ಆಗ ನಾನು ಸರ್ ನಿಮಗೂ ಕೊಡಲೇನು ಎಂದೆ. ಅವರು ಕೋಪದಿಂದ ರೀ ನನಗೇನು ಅಂಥ ಆಸಕ್ತಿಗಳಿಲ್ಲ ಎಂದರು. ಆಗ ನಾನು ಸರ್ ನೀವು ತಪ್ಪು ತಿಳಿಯೋಲ್ಲಾ ಅಂದರೆ ಒಂದು ಮಾತು ಕೇಳಲಾ ಅಂದೆ. ಆಗ ಅವರು ಹೂಂ ಹೇಳ್ರೀ! ಅಂದರು. ಸರ್ ನಿಮಗೆ ಮುತ್ತು ಬ್ಯಾಡ ಅಂದ್ರಿ ನಿಮಗೇನು ಅಭ್ಯಂತರ ಇಲ್ಲ ಅಂದರ ನಿಮ್ಮ ಹೆಂಡ್ತೀಗಿ ಕೊಡಲೇನು? ಎಂದೆ. ಆಗ ಮುಖ್ಯೋಪಾಧ್ಯಾಯರು ಅವ್ಳಿಗೆ ಕೊಡೋಕೆ ನಾನಿಲ್ಲ ಏನ್ರೀ, ನೀವೇನು ಕೊಡೋದೊ ಅಂದ್ರು. ಆಗ ಅವರ ಮುಖ ಸಿಟ್ಟಿನಿಂದ ಕೆಂಪಾಗಿತ್ತು. ಇನ್ನು ಒಂದು ಮಾತನಾಡಿದ್ರೆ ನನ್ನ ಶರ್ಟ ಹಿಡಿದು ಹೊರಗೆ ಹಾಕತಾ ಇದ್ದರೇನೊ? ಅದೇ ಸಮಯದಲ್ಲಿ ಸಹ ಶಿಕ್ಷಕಿ ಮುಖ್ಯೋಪಾಧ್ಯಾಯರ ರೂಮ್ ಒಳಗೆ ಬಂದು ಅವರು ನನ್ನನ್ನು ನೋಡಿ ಮುಗುಳ್ನಕ್ಕರು, ನಾನೂ ಮುಗುಳ್ನಕ್ಕೆ ಇದನ್ನು ಮುಖ್ಯೋಪಾಧ್ಯಾಯರು ಗಮನಿಸಿ ಅವರಿಗೆ ಎಲ್ರಿ ಹೋಗಿದ್ರಿ ಇಷ್ಟೊತ್ತು ಅಂದರು.
ಆಗ ಸರ್ ಇವ್ರು ನನಗೆ ಒಂದು ಮುತ್ತು ಕೊಟ್ರು ಸರ್! ಈ ಶಬ್ಧವನ್ನು ಕೇಳಿ ಮುಖ್ಯೋಪಾಧ್ಯಾಯರು ತಮ್ಮ ಖುರ್ಚಿಯಿಂದಲೇ ಎದ್ದರು ಆಗ ಸಹ ಶಿಕ್ಷಕಿಯು ತಮ್ಮ ಮಾತನ್ನು ಮುಂದುವರೆಸುತ್ತ, ಇವರು ಕೊಟ್ಟ ಮುತ್ತನ್ನು ನನ್ನ ಬ್ಯಾಗ್ ನಲ್ಲಿಡಲು ಹೋಗಿದ್ದೆ ಸರ್ ಎಂದರು. ಆಗ ಮುಖ್ಯೋಪಾಧ್ಯಾಯರು ಮುತ್ತನ್ನು ಬ್ಯಾಗನಲ್ಲಿಟ್ಟ್ರಾ, ಅದೆಂಥ ಮುತ್ತು ಎಂದರು. ಆಗ ಹೈದರಾಬಾದನಿಂದ ತಂದ ಮುತ್ತಿನ ಕಥೆಯನ್ನೆಲ್ಲ ಹೇಳಿದರು. ಇದನ್ನು ಕೇಳಿ ಮುಖ್ಯೋಪಾಧ್ಯಾಯರ ಬಾಯಿ ಎರಡು ಕಿಲೋಮೀಟರ್‍ನಷ್ಟು ಅಗಲಮಾಡಿ ಮುಗುಳ್ನಗೆ ಬೀರುತ್ತ ನಾಚಿ ನೀರಾಗಿ, ತಮ್ಮ ಮೈಮೇಲೆ ಬಂದಿದ್ದ ಬಿ.ಪಿ.ಯ ಭೂತವನ್ನು ಶಾಂತವಾಗಿಸುತ್ತ ಉಸ್ಸೆಂದು! ಉಸಿರು ಬಿಡುತ್ತ ತಮ್ಮ ಕುರ್ಚಿಯ ಮೇಲೆ ಕುಳಿತು, ನನ್ನ ಕಡೆಗೆ ನೋಡುತ್ತಾ ಏನ್ರೀ ಇಲ್ಲಿಯವರೆಗೆ ಈ ಮುತ್ತಿನ ಬಗ್ಗೇನಾ ಮಾತಾಡ್ತಿರೋದು ಅಂದ್ರು. ಆಗ ನಾನು ಹೌದು ಸಾರ್ ಅನ್ನುತ್ತ, ಮತ್ತೆ ನೀವು ಯಾವ ಮುತ್ತಿನ ಬಗ್ಗೆ ಅಂತ ತಿಳಿದುಕೊಂಡಿದ್ರಿ ಅಂದೆ. ಅವರು ಏನಿಲ್ಲ ಬಿಡಿ ಅಂದ್ರು ಆಗ ನಾನು ಕೆಲ ಸಮಯದಿಂದ ನಡೆದ ಘಟನಾವಳಿಗಳನ್ನು ಸ್ವಲ್ಪ ಪುನರಾವಲೋಕನ ಮಾಡಿದೆ. ಆಗ ನನಗೆ ಸ್ವಲ್ಪ ಸ್ವಲ್ಪ ಅರ್ಥವಾಯಿತು. ಮುಖ್ಯೋಪಾಧ್ಯಾಯರು ಯಾವ ಮುತ್ತಿನ ಬಗ್ಗೆ ತಿಳಿದು ಸಿಟ್ಟಾಗಿದ್ದರು ಅಂತ. ಆಗಲೇ ನಾನು ಅಲ್ಲಿಂದ ಹೊರಬಂದು ನಡೆದ ಘಟನೆ ಬಗ್ಗೆ ಮನದಲ್ಲೇ ನಕ್ಕು ಒಂದು ನಿರ್ಧಾರಕ್ಕೆ ಬಂದೆ. ಈ ಮುತ್ತಿನಿಂದಲೇ ಇಷ್ಟೆಲ್ಲ ಗಮ್ಮತ್ತಾಯಿತಲ್ಲ, ಆದುದರಿಂದ ಇನ್ನು ಮುಂದೆ ಯಾರಿಗೂ ಮುತ್ತು ಕೊಡೊಲ್ಲಾ ಅಂತ…!
-ಎಂ.ಎಚ್.ಮೊಕಾಶಿ,
nice sir
Sir.
Very sweet article.and good experience in ur teaching keep it up.