ಚಿನಕುರುಳಿಯಂತೆ ಕಚಗುಳಿಯಿಡುವ ಮುಗ್ಧ ಸ್ನೇಹದ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ ಹೊಸ ಕವನ ಸಂಕಲನ 'ಕೋಳ್ಗಂಬ' ಕೈಯಲ್ಲಿ ಹಿಡಿದು ಕಿಟಕಿಯಲ್ಲಿ ತೂರಿಬರುವ ಮಳೆಹನಿಗಳಿಗೆ ಮುಖವೊಡ್ಡಿ ಕೂತಿದ್ದೆ. ಬಾಲ್ಯದ ಗೆಳತಿ ಸುಮಾ ಕರೆಮಾಡಿದಳು. ಕುಶಲೋಪರಿಯ ಸಾಂಪ್ರದಾಯಿಕತೆಯನ್ನೂ ಮರೆತು ನೇರವಾಗಿ ವಿಷಯಕ್ಕೆ ಬಂದಳು. ಮೀಡಿಯಾಗಳಲ್ಲೆಲ್ಲ ಮುಟ್ಟಿಗುಡುವ ಸೆನಿಟರಿ ಪ್ಯಾಡ್ ಗಳ ಮೇಲೆ ಹೇರಿದ ಜಿ ಎಸ್ ಟಿ ಯ ಕುರಿತು ಪರ ವೈರುಧ್ಯ ಅಭಿಪ್ರಾಯಗಳು ವ್ಯಕ್ತವಾಗ್ತಾ ಇದ್ಯಲ್ಲೇ ಅಂದ್ಲು. ಹೂಂ ಅಂದೆ. ಅವಳು ಮುಂದೇನೂ ಮಾತನಾಡದೇ ಮೌನ ಸಾಧಿಸಿದಳು. ಏನಿದೆ ಅವಳ ಮೌನದಲ್ಲಿ ? ಬಹುದೂರ ಕೂತು ಮೊಬೈಲ್ ಕಿವಿಗಿಟ್ಟುಕೊಂಡ ಅವಳ ಮುಖ ಲೆಂಡ್ ಫೋನ್ ಕಿವಿಗಿಟ್ಟುಕೊಂಡು ಗೋಡೆಗಾನಿಸಿ ನಿಂತ ನನಗೆ ಹೇಗೆ ಕಂಡೀತು? "ತೀರ ನಮಗೇನೆ ಸಂಬಂಧಪಟ್ಟ ವಿಷಯ .ಅದರ ಪರವೋ ಅಪರವೋ ಒಂದು ನಾಲ್ಕು ಸಾಲು ಬರೆಯೋಕೆ ಬರದ ನೀನು ಒಬ್ಬಳು ಬರಹಗಾರ್ತಿ" ಎಂಬ ವ್ಯಂಗ್ಯ ಇದ್ದಿರಬಹುದೇ, ಈಚೆ ಕಾಣದ ಆಚೆಯ ಅವಳ ಮುಖದಲ್ಲಿ? ಮುಟ್ಟು, ಅದು ಕೊಡುವ ನೋವು ಕಿರಿಕಿರಿ ಅದು ನೀಡುವ ಅಲವರಿಕೆ ಮುಜುಗುರ ಆ ಹರಿವಿನಲ್ಲಿ ಹಾದು ಹೋದವರಿಗೇ ಗೊತ್ತು. ಅದರಾಚೆ ನಿಂತವರಿಗೆ ಅದು ನಿಲುಕೋಕೆ ಅಸಾಧ್ಯ. ನಾಳೆ ಶೂಲಕ್ಕೇರಬೇಕೆಂಬ ಅರಿವಿನಲ್ಲಿ ಇಂದು ಬದುಕುವದಿದೆಯಲ್ಲ ಇದೊಂಥರ ಹಾಗೆಯೇ- ನಾಳೆ ನಾಡಿದ್ದು ನಾನು ಹೊರಗಾಗಬಹುದೆನ್ನುವ ಅರಿವಳಿಕೆ. ಅದರಲ್ಲೂ ತೀರ ಹಳ್ಳಿಗಳಲ್ಲಿ ಬಡವರ ಹಿಂದುಳಿದವರ ಗಲ್ಲಿಗಳಲ್ಲಿ ಇರುವ ಒಂದಂಕಣದ ಪುಟ್ಟ ಗೂಡುಗಳಲ್ಲಿ ಮುಟ್ಟಿನ ಮೂರ್ದಿನದ ಬದುಕು ನಾವು ಕೇಳಿದ ಯಾವ ನರಕದ ವರ್ಣನೆಗಿಂತ ಕಮ್ಮಿಯಿಲ್ಲ.
ತೆರಿಗೆಯನ್ನು ವಿರೋಧಿಸುವವರ ಪರವೇ ನಿಂತು ಒಂದಷ್ಟು ಸಾಲುಗಳನ್ನು ಬರೆದು ಹೋರಾಟದ ದನಿಗೆ ದನಿಗೂಡಿಸಬೇಕೆಂದುಕೊಳ್ಳುತ್ತಿರುವಾಗಲೇ ಸ್ನೇಹಿತೆ ಡಾ. ಎಚ್ ಎಸ್ ಅನುಪಮಾ ಎರಡು ಕಂತುಗಲ್ಲಿ ಬರೆದ ಲೇಖನ ಓದಿಗೊದಗಿತು. ಅನುಭವ ವಿಚಾರವಂತಿಕೆ ಅಧ್ಯಯನ ವೈಜ್ಞಾನಿಕ ದೃಷ್ಟಿಕೋನಗಳು ಮೇಳೈಸಿದ ಹೆಣ್ಮಕ್ಕಳು ಓದಲೇಬೇಕಾದ ಪ್ರಬುದ್ಧ ಲೇಖನವನ್ನು ಮೆಚ್ಚಿಕೊಂಡಿದ್ದರಿಂದ ಮತ್ತೆ ಆ ಕುರಿತು ಬರೆಯಬೇಕೆನ್ನಿಸಲಿಲ್ಲ. ಮುಟ್ಟು ಮುಟ್ಟಬೇಡಿರೆನ್ನುತ್ತ ಸೋರಕಲಾಚೆಗೆ ಹಿಡಿಯಾಗಿ ನಿಂತು, ಮೇಲಿಂದ ಎತ್ತಿ ಹಾಕುವ ನೀರು ತಿನಿಸು ಬಟ್ಟೆಗಳನ್ನು ಬೆಲೆನ್ಸ ಮಾಡಿ, ಬಚ್ಚಲ ಮನೆಯಲ್ಲಿ ಅಥವಾ ಸೋರುವ ಜಗುಲಿಯ ಕೊನೆಯಲ್ಲಿ ಮುದುಡಿ ಕೂತು ಮೂರು ರಾತ್ರಿಗಳು ಯಾವುದೇ ರಕ್ಷಣಾ ಗೋಡೆಗಳಿಲ್ಲದ ಹೊರಜಗುಲಿಯ ಮೇಲೆ ಮುರುಟಿ ಮಲಗಿ ದೇವರೇ ಬೇಗ ಬೆಳಗಾಗಲಿ ಎಂದು ಹಲುಬುತ್ತ ಕಳೆವ ಕ್ಷಣಗಳು ಅಬ್ಬಬ್ಬಾ! ಮೆನೊಪಾಸಿನ ಮರೆವು ಮುತ್ತಿಕೊಳ್ಳುವ ಹೊತ್ತಿನಲ್ಲೂ ನೆನಪಾಗಿ ಮೈ ಮುಳ್ಳಾಗುತ್ತದೆ. ಗದ್ದೆ ನೆಟ್ಟಿಗೆ ಬಂದ ಮುಟ್ಟಾದ ಹೆಂಗಸರು ಉಂಡ ಎಂಜಲೆಲೆ ಮೆಟ್ಟಿದ್ದಕ್ಕೆ ಮೊದಲಬಾರಿಗೆ ಬಾಸುಂಡೆ ಬರುವಂತೆ ಹೊಡೆದ ಅಜ್ಜಿ ನೆನಪಾದಳು. ಮಗಳು ಹೊರಗೆ ಕೂಡ್ರುವ ಹೊತ್ತಿಗೆ ಕಟ್ಟಳೆಗಳನೆಲ್ಲ ಕೊಡವಿಕೊಂಡು ಪೂರ್ತಿ ಮೆತ್ತಗಾದ ಅಪ್ಪ, ಮುಟ್ಟಾದ ಮಗಳನ್ನು ಹೊರಗಿಡದೇ ಕೇರಿಗೆ ಕೇರಿಯನ್ನೇ ಎದುರು ಹಾಕಿಕೊಂಡು ಕ್ರಾಂತಿಯ ಕಿಡಿ ಕೆದರಿದ ಅಮ್ಮ ಎದೆಯಲ್ಲಿ ಬೀಗಿ ಕೂತರು.
ನಿಂತ ಕುಂತ ಮಲಗಿದ ಜಾಗಗಳಿಗೆಲ್ಲ ಸೆಗಣಿ ಬಳಿದು ಸಾರಿಸುವ ಅಮ್ಮ ಅಮ್ಮನಂಥವರು ನೆನಪಿಗೆ ನುಗ್ಗಿ ನಿಂತರು. ಮಳೆಗಾಲದಲ್ಲಿ ಈ ಮುಟ್ಟಿಗುಡುವ ಚಂಪೆಯನ್ನು ಒಣಗಿಸಿಕೊಳ್ಳುವದಕ್ಕೆ ಅವರು ಪಡುವ ಪಾಡು ಕಣ್ಣಾರೆ ಕಂಡವರಿಗೇ ಗೊತ್ತು. ಅದೇನು ಹನ್ನೆರಡು ಮೊಳದ ಸೀರೆಯೇ ಮರದಿಂದ ಮರಕ್ಕೆ ಸುತ್ತಿ ಹಾಯ್ವ ಗಾಳಿಗೆ ಒಣಗಿಸಲು? ಇರುಳು ಮನೆಮಂದಿಯೆಲ್ಲ ಹೊದ್ದು ಮಲಗಿದಮೇಲೆ ಗೇಣಗಲ ಮಾರುದ್ದದ ಮುಟ್ಟಿಗುಟ್ಟ ಬಟ್ಟೆಯ ಚೂರುಗಳನ್ನು ಅಡಕಲೊಲೆ (ಬಚ್ಚಲೊಲೆ)ಯ ಬೆಂಕಿಗೆ ಒಡ್ಡಿ ಒಣಗಿಸುತ್ತ ಕೂರುತ್ತ ಕೂಡ್ರುವ ಹೆಣ್ಣುಗಳು. ಆಚೆಕಡೆಯಿಂದ ರಿಸೀವರ್ ಹಿಡಿದ ಗೆಳತಿ ಇಷ್ಟುದ್ದ ನಿಟ್ಟುಸಿರೆಳೆದಳು. "ನಿನಗೆ ಮರೆವು ಮುತ್ತಿಕೊಂಡಿದೆ ಹುಡುಗಿ. ಬಿಡು ಮುದುಕಿ ಆದೆ ನೀನು. ನಮ್ಮ ನಾಗವೇಣಿಯನ್ನು ಮರೆತು ಬಿಟ್ಟ್ಯೇಲ್ಲೇ ಕತ್ತೆ" ಎಂದು ಫೋನಿಟ್ಟಳು. ಅತ್ತು ಅತ್ತು ಕಣ್ಣು ಮುಖ ಕೆಂಪಾಗಿಸಿಕೊಂಡು ಶಾಲೆಗೆ ಬೆನ್ನುಮಾಡಿ ಬಸ್ಸಲ್ಲಿ ಕೂತ ನಾಗವೇಣಿ ಈಗ ಕಣ್ಣೊಳಗೆ ಬಂದು ಕೂತಳು. ದೂರದ ಸಂಡಳ್ಳಿಯ ಹುಡುಗಿ ಪ್ರಾಥಮಿಕ ಶಿಕ್ಷಣ ಮುಗಿಸಿ ತನ್ನೂರಲ್ಲಿ ಇಲ್ಲದ ಹೈಸ್ಕೂಲು ಹುಡುಕಿಕೊಂಡು ನಮ್ಮೂರಿಗೆ ಬಂದಿದ್ದಳು . ಎಲ್ಲರಿಗಿಂತ ಪೀಚಲು ಶರೀರದ ನಾನು ನಮ್ಮ ಸುಮಾ ಹಿಂದಿನ ಸೀಟಲ್ಲಿ ಕೂತರೆ ಮಾಸ್ತರರ ಕಣ್ಣಿಗೆ ಕಾಣೋದೇ ಇಲ್ಲ ಎಂಬ ಕಾರಣಕ್ಕೆ ಸದಾ ಮುಂದಿನ ಬೆಂಚಿಗೆ ತಳ್ಳಲ್ಪಡುತ್ತೇವೆ ಎಂದು ನಮಗೆ ನಾವೇ ಕೊಟ್ಟುಕೊಳ್ಳುತ್ತಿದ್ದ ಸಬೂಬಾದರೆ, ಅಸಲಿ ಕಾರಣ ನಾವು ಹಿಂದೆ ಕೂತು ಆಡುತ್ತಿದ್ದ ಕಂಡಾಬಟ್ಟೆ ಮಾತೆಂಬುದು ನಮ್ಮಾಂತರ್ಯಕ್ಕೆ ಗೊತ್ತಿತ್ತು. ಜೂನ್ ತಿಂಗಳು ಅರ್ಧ ಕಳೆದಮೇಲೆ ನಮ್ಮ ನಡುವೆ ಬಂದು ಕೂತವಳು ಈ ನಾಗವೇಣಿ ಎಂಬ ಕುಳ್ಳಗೆ ಬೆಳ್ಳಗೆಇರುವ ಬಟ್ಟಲು ಕಣ್ಣಿನ ಮುದ್ದುಮುದ್ದಾದ ಹುಡುಗಿ. ಅದೆಷ್ಟು ಬೇಗ ಹತ್ತಿರವಾಗಿಬಿಟ್ಟಿದ್ದಳು. ಏಟ್ತ ಎಂದು ಇಂಗ್ಲೀಷ್ ನಲ್ಲಿ ಕರೆಸಿಕೊಳ್ಳುವ ಮಾಧ್ಯಮಿಕದ ಮೊದಲ ವರ್ಷ ಓಡೋಡುತ್ತ ಕಳೆದು ಹೋಗಿತ್ತು. ಆದ್ರೆ ನೈಂತ್ ನಾಗವೇಣಿಯ ಪಾಲಿಗೆ ಕಷ್ಟವನ್ನು ಹೊತ್ತು ತಂದಿತ್ತು . ಮೊದಲ ತಿಂಗಳಲ್ಲಿಯೇ ನಾಗವೇಣಿ ಮುಟ್ಟಾಗಿದ್ದಳು. ವಸತಿಗಿದ್ದ ಮನೆಯಲ್ಲಿ ಅತ್ತ ದೇವರ ಕೋಣೆ' ಇತ್ತ ಅಡಿಗೆ ಕೋಣೆ , ಆಕಡೆ ಚೌಡಿ ನೆಡೆ, ಈ ಕಡೆ ನಾಗ ಬನ, ಮಡಿ ಮೈಲಿಗೆ ಮುಸುರೆಗಳ ಸಂಕೀರ್ಣ ಸುತ್ತಿಕೊಂಡ ಮನಸ್ಸುಗಳು. ಹೊರಜಗುಲಿ ಮೂಲೆಯ ವಾಸ, ಉಂಡ ಬಾಳೆ ಎಸೆಯಲು ಅರ್ಧ ಕಿಲೋಮೀಟರು ನಡೆಯುವ ಖರ್ಮ ಈ ಎಲ್ಲದಕ್ಕೆ ಹೆದರಿದ ಹುಡುಗಿ ಮುಟ್ಟು ಮುಚ್ಚಿಟ್ಟುಕೊಂಡು ವಿಷಯ ಬಚ್ಚಿಟ್ಟುಕೊಂಡಳು.
ತಿಂಗಳಿಗೆ ಮೂರುದಿನ ನಿಮಿಷ ನಿಮಿಷ ಹಿಂತಿರುಗಿ ನೋಡುತ್ತ ಕಳೆವ ಯಾತನೆ, ಮುಟ್ಟು ಮುಚ್ವಿಟ್ಟುಕೊಂಡು ಪಾಪ ಮಾಡುತ್ತಿದ್ದೇನೆಂಬ ವೇದನೆಯಲ್ಲಿ ಹುಡುಗಿ ಒಳಗೊಳಗೆ ಹುದುಗ ತೊಡಗಿದ್ದಳು. ನಮ್ಮ ಮನೆಗಳಿಂದ ಬಟ್ಟೆಯ ಮಡಿಕೆಗಳು ಅವಳ ಬಗಲ ಚೀಲ ಸೇರುತ್ತಿದ್ದವು. ವರ್ಷ ಕಳೆವ ಮೊದಲೇ ಒಂದು ಕೆಟ್ಟ ಗಳಿಗೆಯಲ್ಲಿ ಇವಳು ಮುಚ್ಚಿಟ್ಟ ಮುಟ್ಟು ಮನೆಯ ಹೆಂಗಸರೆದುರು ಜಾಹೀರಾಗಿತ್ತು. ಶಾಸ್ತ್ರ ಸಂಪ್ರದಾಯ ಮಡಿಮೈಲಿಗೆಗಳ ಚಕ್ರವ್ಯೂಹದೊಳಗೆ ಸಿಕ್ಕಿಬಿದ್ದ ಹೆಣ್ಣುಗಳ ಕೆಂಪು ಕಣ್ಣಿಗೆ ಸಿಕ್ಕಿಕೊಂಡ ಹುಡುಗಿ ಇಷ್ಟುದ್ದಕ್ಕೆ ಹಾಸಿಕೊಂಡ ಓದಿನ ಕನಸಿನ ಹಸೆಯನ್ನ ಸುತ್ತಿ ಕಂಕುಳಲ್ಲಿಟ್ಟುಕೊಂಡು ಬಂದ ದಾರಿಗೆ ಸುಂಕವಿಲ್ಲವೆಂದು ಊರದಾರಿ ಹಿಡಿದಿದ್ದಳು. ಹಾಗೆ ಹೋಗುವಾಗ ಅವಳ ಕಣ್ಣಲ್ಲಿ ಮಡುಗಟ್ಟಿದ ನೋವು ನಿಮಗೆ ಮನದಟ್ಟು ಮಾಡಲು ನನ್ನೆದೆಯ ಭಾವ ಭಾಷೆ ಎರಡೂ ಸೋಲುತ್ತಿದೆ. ಮೊನ್ನೆಯಷ್ಟೇ ಮೇ ತಿಂಗಳಲ್ಲಿ ಕೋಟಿ ಕನಸು ಕಟ್ಟಿಕೊಂಡು ಹಸೆಮಣೆಯೇರಿದ ನನ್ನದೇ ಬಳಗದೊಳಗಿನ ಹುಡುಗಿ(ಡಬ್ಬಲ್ ಡಿಗ್ರಿ ಪಡೆದು ಪದವಿ ಕಾಲೇಜಿನಲ್ಲಿ ಪಾಠಮಾಡುವ ಹೆಣ್ಣು) ಮೊದಲದಿನವೇ ಹೊರಜಗುಲಿಯಲ್ಲಿ ಮಲಗುವಂತಾಗಿ ಬೆಳಗಾಗುವದರೊಳಗೆ ಮಾನಸಿಕ ರೋಗಿಯಾಗಿ ತವರು ಸೇರಿದಳೆಂದರೆ ಹರಿಯದೇ ನಿಂತ ನೀರು ಪಾಚಿಗಟ್ಟಿದ ಬಗೆಯ ಅರಿವಾದೀತು. ನಾವಿರುವದು ಇಪ್ಪತ್ತೊಂದನೆ ಶತಮಾನ ಹೆಣ್ಣಿನ ಎಲ್ಲ ತಳಮಳಗಳಿಗೆ ಮುಕ್ತಿ ಸಿಕ್ಕಿದೆ ಎಂದು ಕೊಚ್ಚಿಕೊಳ್ಳುವ ನಾವು ನೀವುಗಳು ಒಮ್ಮೆ ಎದೆ ಮುಟ್ಟಿಕೊಳ್ಳಬೇಕು ಅಲ್ಲಾ ? ಹಾಳಾಗ್ಲಿ, ಅದ್ನೆಲ್ಲ ಕಟ್ಕೊಂಡು ನಮ್ಗೆ ಆಗ್ಬೇಕಾದದ್ದು ಏನು ಎಂದು ಯೋಚಿಸುವ ನಾವಿರುವತನಕ ಇದು ಹೀಗೆ ಬಿಡಿ . ಯಾವ ಮುಟ್ಟು ಹೆಣ್ಣಿಗೆ ಸಮ್ಮಾನವಾಗಬೇಕಿತ್ತೋ, ಯಾವ ಮುಟ್ಟಿಗಾಗಿ ಅವಳಿಗೊಂದಷ್ಟು ಆರೈಕೆ ಸಾಂತ್ವನದ ಅಗತ್ಯ ಇದೆಯೋ, ಯಾವದು ಹುಟ್ಟಿಗೆ ಮೂಲವೋ ಅದನ್ನು ಮುಟ್ಟೆಂದು ಮೂಲೆಗಿಟ್ಟಿದ್ದಕ್ಕೆ ಕ್ಷಮೆಯಿಲ್ಲ.
ಇನ್ನು ಸೆನಿಟರಿ ಪೆಡ್ ಗಳ ಮೇಲಿನ ತೆರಿಗೆ ಹೆಣ್ಣಿನ ಆರೋಗ್ಯ ಪರಿಸರ ರಕ್ಷಣೆಯನ್ನು ದ್ರಷ್ಟಿಯಲ್ಲಿಟ್ಟಕೊಂಡು ಮಾಡಿದ್ದು ಎನ್ನುವದಾದರೆ ಆದಷ್ಟು ಬೇಗ ಪರಿಸರ ಹಾಗೂ ಆರೋಗ್ಯ ಸ್ನೇಹಿ ಉತ್ಪಾದನೆಗೆ ಒತ್ತುಕೊಟ್ಟು ಸಾಮಾನ್ಯ ಅತಿ ಸಾಮಾನ್ಯ ಹೆಣ್ಣುಗಳ ಮನೆಬಾಗಿಲಿಗೆ ಪುಕ್ಕಟೆಯಾಗಿ ಹಂಚಿಕೆಯಾದರೆ ಒಂದಷ್ಟು ಪ್ರಾಯಶ್ಚಿತ್ತ ಸಂದಾಯವಾಯಿತು ಎಂದುಕೊಳ್ಳುತ್ತೇವೆ. ಹಾಂ, ಈಗಾಗಲೇ ಶಾಲಾ ಕಾಲೇಜುಗಳಿಗೆ ಸರಬರಾಗುತ್ತಿರುವ ಪ್ಯಾಡುಗಳ ಗುಣಮಟ್ಟ ತೀರಾ ಕಳಪೆ ಎನ್ನುವ ಗುಲ್ಲು, ಜೊತೆಗೆ ಅದಕ್ಕೆ ಬಳಕೆಯಾಗುವ ಝಣಝಣ ಎಲ್ಲೆಲ್ಲೋ ಸೋರಿ ಹೋಗುತ್ತದೆ ಎಂಬ ಗುಮಾನಿ ಎರಡಕ್ಕೂ ಉತ್ತರ ರೆಡಿ ಇರಲಿ.
-ಪ್ರೇಮಾ ಟಿ ಎಮ್ ಆರ್