ಸರಣಿ ಬರಹ

ಮುಜಂಟಿ ಜೇನು ಸಾಕಿ : ನಿಮ್ಮ ತೋಟದಲ್ಲಿಯೇ ಮಾತ್ರ ಪರಾಗಸ್ಪರ್ಷ ಮಾಡಿಸಿ: ಚರಣಕುಮಾರ್

ಅದು ಅರಣ್ಯಶಾಸ್ತ್ರ ಪದವಿ ಮುಗಿಸಿ ಜೇನುನೊಣಗಳ ಹೆಚ್ಚಿನ ಸಂಶೋಧನೆಗಾಗಿ ಕಾಡುಮೇಡು ಅಲೆಯುವ ಸಮಯ. ಒಮ್ಮೆ ಸ್ಥಳಾಂತರ ಜೇನುಕೃಷಿಕರನ್ನು ಭೇಟಿಮಾಡಿ ಸಂದರ್ಶನ ಮಾಡಬೇಕೆನಿಸಿತು. ಒಮ್ಮೆ ಸ್ಥಳಾಂತರ ಜೇನುಕೃಷಿ ಮಾಡುವ ರೈತನನ್ನು ಭೇಟಿ ಮಾಡಿದೆ. ಇನ್ನೂ ವಿದ್ಯಾರ್ಥಿ ಕಲಿಕೆಯ ಗುಂಗಿನಲ್ಲಿದ್ದ ನನಗೆ ಅಲ್ಲಿ ಒಂದು ಅಚ್ಚರಿಯ ಸಂಗತಿ. ಅದೇನೆಂದರೆ, ಸ್ಥಳಾಂತರ ಜೇನುಕೃಷಿ ಮಾಡುವವರಿಗೆ ಎರಡೆರಡು ಲಾಭ. ಹೇಗೆಂದರೆ, ಜೇನುತುಪ್ಪ, ಜೇನುಕುಟುಂಬಗಳ ಮಾರಾಟ ಮತ್ತು ಇತರೆ ಜೇನು ಉತ್ಪನ್ನಗಳು ಆದಾಯದ ಒಂದು ಮೂಲವಾದರೆ, ಸ್ಥಳಾಂತರ ಜೇನುಕೃಷಿ ಮಾಡುವಾಗ ತೋಟದ ಅಥವಾ ಹೊಲ ಅಥವಾ ಎಸ್ಟೇಟಿನ ಮಾಲೀಕರು ಪರಾಗಸ್ಪರ್ಷ ಕ್ರಿಯೆಗೆ ಒಂದು ಜೇನುಪೆಟ್ಟಿಗೆಗೆ ಇಂತಿಷ್ಟು ಶುಲ್ಕ ಎಂದು ಕೊಡಬೇಕಾಗುತ್ತದೆ ಮತ್ತು ಜೇನುಪೆಟ್ಟಿಗೆ ತೊಂದರೆಗೆ ಒಳಪಡದಂತೆ ಕಾಪಾಡುವ ಜವಾಬ್ದಾರಿ ಮಾಲೀಕರದ್ದಾಗಿರುತ್ತದೆ. ಹಣಕೊಟ್ಟು ಪರಾಗಸ್ಪರ್ಷ ಮಾಡಿಸುತ್ತಾರೆ ಎಂಬುದು ನನಗೆ ತಿಳಿದದ್ದು ಆಗಲೇ.

ಮುಖ್ಯವಾಗಿ ಮಲೆನಾಡು ಭಾಗದ ಕಾಫಿ ತೋಟದ ಮಾಲೀಕರು ಮತ್ತು ಬಯಲುಸೀಮೆಯ ಸೂರ್ಯಕಾಂತಿ ಹೊಲದ ಮಾಲೀಕರು ಹಣಕೊಟ್ಟು ಜೇನುನೊಣಗಳಿಂದ ಪರಾಗಸ್ಪರ್ಷ ಮಾಡಿಸುತ್ತಾರೆ. ಹೀಗೆ ಮಾಡಿದಾಗ ಬೆಳೆಯ ಇಳುವರಿ, ತೂಕ ಮತ್ತು ಆದಾಯಗಳೂ ದುಪ್ಪಟ್ಟಾಗಿರುತ್ತವೆ. ಇದರ ಅನುಭವ ಆದನಂತರವೇ ರೈತರು ಹಣಕೊಟ್ಟು ಜೇನುನೊಣಗಳಿಂದ ಪರಾಗಸ್ಪರ್ಷ ಮಾಡಿಸುವ ದೈರ್ಯ ಮಾಡುತ್ತಿರುವುದು. ಹೀಗಿರುವಾಗ ತೋಟದ ಮಾಲೀಕನಿಗೂ ಸಹ ಜೇನುನೊಣಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಮತ್ತು ಸಾಕಾಣಿಕೆ ಮಾಡುವ ಕುತೂಹಲ ಸಹಜವಾಗಿ ಮೂಡುತ್ತದೆ. ಒಮ್ಮೆ ಕಾಫಿ ತೋಟದ ಮಾಲೀಕರಿಗೆ ಪರಾಗಸ್ಪರ್ಷ ಕ್ರಿಯೆಯಲ್ಲಿ ಜೇನುನೊಣಗಳ ಪಾತ್ರ ಎಂಬ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಅಲ್ಲಿಗೆ ನಾನು ಸಂಪನ್ಮೂಲ ವ್ಯಕ್ತಿಯಾಗಿ ತೆರಳಿದಾಗ, ರೈತರಿಗೆ ಹೊಸ ವಿಚಾರಗಳನ್ನು ತಿಳಿಯುವ ಮತ್ತು ಕೃಷಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ತವಕ ಕಡಿಮೆಯೇನಿರಲಿಲ್ಲ.

ಹೀಗೆ ಜೇನುನೊಣಗಳ ವಿಚಾರಗಳನ್ನು ಹಂಚಿಕೊಳ್ಳುವಾಗ ಪ್ರಶ್ನಾವಳಿಗಳ ಸಮಯ. ಆಗ ಒಬ್ಬ ರೈತರಿಂದ ದೊಡ್ಡ ಧ್ವನಿಯಲ್ಲೊಂದು ಪ್ರಶ್ನೆ. ಒಂದು ಜೇನುಗೂಡಿನಿಂದ ನೊಣಗಳು ಎಷ್ಟುದೂರ ಆಹಾರ (ಪರಾಗ ಮತ್ತು ಮಕರಂದ) ತರಲು ಕ್ರಮಿಸುತ್ತವೆ ಎಂದು. ಆಗ ನಾನು ಈ ಪರಾಗ ಮತ್ತು ಮಕರಂದ ಕಲೆಹಾಕುವ ಕ್ರಿಯೆಯೇ ಪರಾಗಸ್ಪರ್ಷದ ಮೂಲ ಎಂದು ತಿಳಿಸಿ, ಜೇನುನೊಣಗಳು (ತುಡುವೆ ಜೇನು) ಸುಮಾರು ಎರಡರಿಂದ ಮೂರು ಕಿಲೋಮೀಟರ್ ದೂರ ಕ್ರಮಿಸಬಲ್ಲವು ಹಾಗೂ ಇದು ಸುತ್ತ-ಮುತ್ತ ಇರುವ ಮಕರಂದ ಮತ್ತು ಪರಾಗ ಒದಗಿಸುವ ಸಸ್ಯಮೂಲಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದೆ. ಅಷ್ಟರಲ್ಲಿ ಒಬ್ಬ ರೈತರು ಕೈ ಮೇಲೆತ್ತಿಕೊಂಡು ಹೋ ಎಂದು ಬೊಬ್ಬೆಯಿಡುವಾಗ, ಸಭಿಕರೆಲ್ಲರ ಚಿತ್ತ ಆ ರೈತನತ್ತ. ಸ್ವಾಮಿ ಏನು ನಿಮ್ಮ ಪ್ರಶ್ನೆ ಎಂದಾಗ, ಏನ್ರೀ ನಾವು ಒಬ್ಬರು ಮಾತ್ರ ಹಣಕೊಟ್ಟು ನಮ್ಮ ತೋಟದಲ್ಲಿ ಜೇನುಪೆಟ್ಟಿಗೆಗಳನ್ನಿರಿಸಿಕೊಳ್ಳುವುದು. ನಮ್ಮತೋಟದ ಸುತ್ತಮುತ್ತಲಿನ ಮೂರು ಕಿಲೋಮೀಟರ್‍ವರೆಗಿನ ಎಲ್ಲಾ ರೈತರೂ ಉಚಿತವಾಗಿ ಪರಾಗಸ್ಪರ್ಶ ಮಾಡಿಸಿಕೊಳ್ಳುವುದೇ? ಇದ್ಯಾವ ನ್ಯಾಯ ಎಂದು ಬಹಳ ಗಂಭೀರತೆಯಿಂದ ಕೇಳುವಾಗ, ಒಂದು ಕ್ಷಣ ಸಭೆಯಲ್ಲೆಲ್ಲ ನಗೆಪಾಟಲು. ಹಾಗೆಯೇ ಸಭಿಕರೆಲ್ಲರೂ ತಮ್ಮತಮ್ಮಲ್ಲೇ ಗುಸುಗುಸು ಮಾತನಾಡಿಕಳ್ಳತೊಡಗಿದರು.

ರೈತನ ಪ್ರಶ್ನೆಗೆ ಉತ್ತರಿಸಲಾಗದೆ ನಾನು ಮತ್ತು ಇನ್ನುಳಿದ ಹಿರಿಯ ವಿಜ್ಞಾನಿಗಳು ಪೇಚಿಗೆ ಸಿಲುಕಿದ್ದೆವು. ಅಷ್ಟರಲ್ಲೇ ಬಹುತೇಕ ರೈತರು ಅದೇ ಪ್ರಶ್ನೆಯನ್ನು ಪುನರಾವರ್ತಿಸಲು ಆರಂಭಿಸಿದರು. ನಮ್ಮ ತಂಡದಲ್ಲಿದ್ದ ಒಬ್ಬ ಹಿರಿಯ ವಿಜ್ಞಾನಿಯು ಜೇನುನೊಣಗಳು ಪ್ರಕೃತಿಯ ಒಂದು ಭಾಗ. ಆ ಪ್ರಕೃತಿಯನ್ನು ನಮಗಿಷ್ಟಬಂದಂತೆ ಒಲಿಸಿಟ್ಟುಕೊಳ್ಳುವುದು ಸಮಂಜಸವಲ್ಲ ಮತ್ತು ಅದು ಸಾಧ್ಯವೂ ಇಲ್ಲ ಎಂದರೆ, ನೀವು ವಿಜ್ಞಾನಿಗಳಲ್ಲವೇ ಜೇನುನೊಣಗಳಿಗೆ ನಾವುಹೇಳಿದ ಹಾಗೆ ಪರಾಗಸ್ಪರ್ಷ ಮಾಡಲು ತರಬೇಲಿ ಕೊಡಬಹುದಲ್ಲವೇ ಎಂಬ ಅಹವಾಲು. ಇಲ್ಲಿ ಒಬ್ಬರ ಹಣ, ಎಲ್ಲರ ತೋಟದಲ್ಲೂ ಪರಾಗಸ್ಪರ್ಷ ಎಂಬ ಅಂಶವೊಂದೇ ಕೇಂದ್ರೀಕೃತವಾಗಿತ್ತು. ನಂತರದ ದಿನಗಳಲ್ಲಿ ನನ್ನ ಪೂರ್ಣಪ್ರಮಾಣದ ಸಂಶೋಧನೆ ಹೆಚ್ಚು ಮುಜಂಟಿ ಜೇನುಗಳತ್ತ ಸಾಗಿದ್ದ ನನಗೆ, ಆ ಸಭೆಯಲ್ಲಿ ರೈತರಿಂದ ಕೇಳಲ್ಪಟ್ಟ ಪ್ರಶ್ನೆಗೆ ಭಾಗಶಃ ಉತ್ತರ ದೊರೆತಿತ್ತು. ಮುಜಂಟಿ ಜೇನೂ ನೊಣಗಳು ಸಹ ಎಲ್ಲಾ ಜೇನುನೊಣಗಳಂತೆಯೇ ಸಾಮಾಜಿಕ ಕೀಟಗಳು ಆದರೆ ಇವು ತುಡುವೆ ಜೇನಿನ ಜಾತಿಗೆ (ಎಪಿಸ್) ಸೇರಿರುವುದಿಲ್ಲ ಮತ್ತು ಇವುಗಳಿಗೆ ಚುಚ್ಚಲು ಮುಳ್ಳುಗಳಿರುವುದಿಲ್ಲ. ಆದ್ದರಿಂದಲೇ ಈ ಜೇನುಪ್ರಬೇಧವನ್ನು ಚುಚ್ಚದ ಜೇನು ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಮುಜಂಟಿ ಜೇನು, ನಸುರಿ ಜೇನು, ನಸ್ರಿ ಜೇನು, ಮಿಸ್ರಿ ಜೇನು, ಮೇಸ್ರಿ ಕುಳ, ಸೊಳ್ಳೆ ಜೇನು, ಮೂಲಿಜೇನು ಎಂದು ಪ್ರದೇಶಕ್ಕನುಗುಣವಾಗಿ ಕರೆಯಲ್ಪಡುತ್ತದೆ. ಈ ಜೇನು ಆಹಾರಕ್ಕಾಗಿ ಹೆಚ್ಚು ದೂರ ಕ್ರಮಿಸುವುದಿಲ್ಲ. ಇದರ ಆಹಾರ ಕಲೆಹಾಕುವ ದೂರ ಗೂಡಿನ ಸುತ್ತ-ಮುತ್ತಲಿನ ಇನ್ನೂರರಿಂದ ಮುನ್ನೂರು ಮೀಟರ್‍ಗಳಷ್ಟು. ಈ ಅಂಶವು ಅಂದು ಸಭೆಯಲ್ಲಿ ರೈತರು ಕೇಲಿದ್ದ ಪ್ರಶ್ನೆಗೆ ಉತ್ತರವಾದೀತು. ಹೌದು, ಮುಜಂಟಿನೊಣಗಳು ಪರಾಗ ಮತ್ತು ಮಕರಂದವನ್ನು ಕಲೆಹಾಕಲು ತುಂಬಾ ದೂರ ಹೋಗುವುದಿಲ್ಲ.

ಒಮ್ಮೆ ನಾವು ಒಂದು ಪೆಟ್ಟಿಗೆಯಲ್ಲೋ, ಬಿದಿರಿನ ಬೊಂಬಿನಲ್ಲೋ, ಹಳೆಯ ಮಡಿಕೆಯಲ್ಲೋ ತುಂಬಿಸಿಟ್ಟರೆ ಮೂರರಿಂದ ನಾಲ್ಕು ತಲೆಮಾರಿನವರೆಗೂ ಆ ಗೂಡು ಬಿಟ್ಟು ಬೇರೆ ಜಾತಿಯ ಜೇನುನೊಣಗಳಂತೆ ಫಲಾಯನ ಮಾಡುವುದಿಲ್ಲವೆಂಬುದನ್ನು ನಾವಿಲ್ಲಿ ಗಮನಿಸಮೇಕು ಮತ್ತು ಇದಕ್ಕೆ ಹೆಚ್ಚಿನ ನಿರ್ವಹಣೆಯೂ ಇರುವುದಿಲ್ಲ. ಇದರ ಆಹಾರ ಹುಡುಕುವ ದೂರ ಕಡಿಮೆಯಿರುವುದರಿಂದ, ಜೇನು ನೊಣಗಳು ನಮ್ಮ ತೋಟದಲ್ಲಷ್ಟೇ ಪರಾಗಸ್ಪರ್ಷ ಮಾಡಬೇಕೆನ್ನುವರು ತೋಟದಲ್ಲಿ ಮುಜಂಟಿ ಗೂಡುಗಳನ್ನಿರಿಸಬಹುದು. ಒಂದೇ ಜಾಗದಲ್ಲಿ ಹೆಚ್ಚಿನ ಭೂಮಿಯಿದ್ದರೆ ಅಂತಹ ರೈತರು ಮುಜಂಟಿಗೂಡುಗಳನ್ನಿರಿಸಿದಾಗ, ನೊಣಗಳು ಬೇರೆ ತೋಟಗಳಿಗೆ ಹೋಗದೆ, ಮಾಲೀಕನ ತೋಟದಲ್ಲಷ್ಟೇ ಪರಾಗಸ್ಪರ್ಷ ಮಾಡಲು ಸಾಧ್ಯವಾಗಬಹುದು. ನಾವು ಹಣಕೊಟ್ಟು ಜೇನುಪೆಟ್ಟಿಗೆಯನ್ನಿರಿಸಿ, ಬೇರೆಯವರ ತೋಟದಲ್ಲೇಕೆ ಪರಾಗಸ್ಪರ್ಷವಾಗಬೇಕು ಎನ್ನುವ ಮನೋಭಾವವಿದ್ದವರಿಗೆ, ಮುಜಂಟಿ ಜೇನು ಉತ್ತರವಾಗಬಹುದಲ್ಲವೇ? ಇನ್ನಷ್ಟು ಮುಜಂಟಿ ಮಾಹಿತಿಗಳೊಂದಿಗೆ ಮುಂಬರುವ ಸಂಚಿಕೆಗಳಲ್ಲಿ…

ಚರಣಕುಮಾರ್


ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮುಜಂಟಿ ಜೇನು ಸಾಕಿ : ನಿಮ್ಮ ತೋಟದಲ್ಲಿಯೇ ಮಾತ್ರ ಪರಾಗಸ್ಪರ್ಷ ಮಾಡಿಸಿ: ಚರಣಕುಮಾರ್

Leave a Reply

Your email address will not be published. Required fields are marked *