ಕಥಾಲೋಕ

ಮುಚ್ಚಿಟ್ಟ ಪುಟಗಳು: ಉಮೇಶ ದೇಸಾಯಿ

 

“ದಿವ್ಯಾ ಮಗನ ಪ್ರಶ್ನಿ ಕೇಳಿ ತಲಿ ತಿನಬ್ಯಾಡ. ಇದರ ಮಜಾ ತಗೊಳಲಿಕ್ಕೆ ಬಿಡು. ” ಶ್ರೀ ಹೇಳಿದ ಮಾತು ದಿವಾಕರನಿಗೂ ನಾಟಿತು. ಅವನು ಗ್ಲಾಸು ಎತ್ತಿ ಬೀರು ಗುಟಕರಿಸಿದ. ಹಂಗ ನೋಡಿದರ ದಿವಾಕರನ ಉತ್ಸಾಹಕ್ಕ ಅರ್ಥನೂ ಇತ್ತು. ಬರೋಬ್ಬರಿ ಮುವ್ವತ್ತು ವರ್ಷ ಆದಮ್ಯಾಲೆ ಜೀವದ ಗೇಳೆಯನ ಭೇಟಿ ಆಗಿದ್ದ ಅವ. ಗೆಳೆಯ ಅಂದರ ಅಂತಿತಂಹ ಗೆಳೆಯ ಅಲ್ಲ ರಂಗೀಲಾ ವ್ಯಕ್ತಿತ್ವದವ. ದಿವಾಕರನಿಗೆ ಯಾವಾಗಲೂ ಒಂದು ನಿಗೂಢ ವ್ಯಕ್ತಿಹಂಗ ಕಾಣಸತಿದ್ದ ಇವ ಹಿಂಗ ಇವನ ನಡಾವಳಿ ಹಿಂಗ ಅಂತ ಎಂದೂ ಖಾತ್ರಿಯಾಗಿ ಹೇಳಲಿಕ್ಕೆ ಬರದವ ಈ ಶ್ರೀ. ಹಂಗ ನೋಡಿದರ ದಿವಾಕರನಿಗೆ ತಾನೇಕೆ ಅವನ ಹಾಗಿಲ್ಲ ಎಂಬ ದಿಗಿಲು ಹಾಗೂ ಜೊತೆಗೆನೇ ಅಸೂಯೆ ಅನಿಸುತ್ತಿತ್ತು. ಸದಾ ಗೆಳೆಯನ ಜೀವನಶೈಲಿಯ ಜೊತೆ ಹೋಲಿಸಿಕೊಂಡು ಕೀಳರಿಮೆಯಿಂದ ಕುಗ್ಗುತ್ತಿದ್ದುದು ನೆನಪಾತು.

“ನಿನ್ನ ಎಲ್ಲಾ ಪ್ರಶ್ನಿಗೆ ಉತ್ತರ ಕೊಡತೇನಿ. ಆದ್ರ ಇದು ಮುಗದ ಮ್ಯಾಲ ಇನ್ನೊಂದು ಬೀಯರ ಹೇಳು ಹಂಗ ಎರಡರದೂ ಬಿಲ್ಲು ನೀನ ಕೊಡಬೇಕು ನೋಡು. . ” ಛೆ ಇವ ಬದಲಾಗಿಯೇ ಇಲ್ಲ ಅದೇ ಚಾಷ್ಟಿ ಮಾತುಗಳು ಮಾತಾಡುವಾಗ ಮಿನುಗುವ ಕಣ್ಣುಗಳು. ಅವಾಗಿನಂಗ ಈಗೂ ಅದ ಪ್ರಭಾವವಲಯ ಅದ ಇವನದು. ಅವನ ಮಾತಿಗೆ ಎದರಾಡದೇ ಸುಮ್ಮನೆ ಕೂತ. ಎದರುರಿಗೆ ಕೂತ ಗೆಳೆಯನ ರೂಪ ಕಣ್ಣುತುಂಬಿಕೊಳ್ಳತೊಡಗಿದ. ಹೊಟ್ಟಿ ಬೇಳೆದಿತ್ತು. ಜಿಮ್ ಗ ಹೋಗತಾನೋ ಇಲ್ಲೋ ಕೇಳಬೇಕನ್ನಿಸಿ ಸುಮ್ಮನ ಕೂತ. ಹಂಗ ನೊಡಿದರ ಅವಗೂ ಈಗ ಮಧ್ಯ ವಯಸ್ಸು ಶುಗರ , ಬಿಪಿ ಸುರುಆಗೇದೋ ಹೆಂಗ. ತಾನು ತಗೋಳ್ಳುವ ಆಯುರ್ವೇದ ಔಷಧ ರೆಕಮೆಂಡ ಮಾಡಬೇಕು ಇವಗ ಅನಕೊಂಡ.

ನಾ ಇವನ ಬಗ್ಗೆ ಬಹಳ ತಲಿಕೆಡಸಿಕೊಳ್ಳತೇನೇನೋ ಅನ್ನುವ ದಿಗಿಲೂ ಬಂತು. ಮುವ್ವತ್ತು ವರ್ಷ ಬಹಳ ದೊಡ್ಡ ಅವಧಿ. ಇವನ ಗುಣಸ್ವಭಾವ ಬದಲಾಯಿಸಿರತದ. ಮೊದಲಿನಂಗ ಉಪದೇಶ ಮಾಡುವುದು ಸರೀನ ಅನ್ನುವ ಪ್ರಶ್ನಿನೂ ಕಾಡಿತು. ಅವ ಕೇಳದಿದ್ದರೂ ತಾನ ಮ್ಯಾಲಬಿದ್ದು ಹಿಂಗ ಮಾಡಬ್ಯಾಡ ಇದು ತಪ್ಪು ಅಂತ ಹೇಳತಿದ್ದದ್ದು ನೆನಪಾತು. ಅಸಲು ಈ ಮನಿಶಾ ಮತ್ತ ಹಿಂಗ ಭೇಟಿಯಾಗಿದ್ದು ವಿಚಿತ್ರ. ಕನಸನ್ಯಾಗೂ ದಿವಾಕರ ಎಣಿಸಿರಲಿಲ್ಲ. ಒಂದು ಮನಿಶಾನ ಚೆಹರೆ ಮನಸ್ಸಿನ ಕ್ಯಾನವಾಸಿನಿಂದ ಹಾರಿಹೋಗಿರತದ. ಆದ್ರ ಆ ವ್ಯಕ್ತಿ ಬೇಕಾದಾವ ಇದ್ದರ ಅವಾಗಿವಾಗ ಹಣಿಕಿ ಹಾಕತಿರತದ. ಹಂಗ ನೋಡಿದರ ದಿವಾಕರ ಶ್ರೀನ್ನ ಮರತಿರಲಿಲ್ಲ. ಮರಿಯುವ ವ್ಯಕ್ತಿನೂ ಅಲ್ಲ ಅವ. ಆದ್ರ ಇವ ಮತ್ತ ಭೇಟಿ ಆಗತಾನ ಅಂತ ಅಂದುಕೊಂಡಿರಲಿಲ್ಲ.

ಇವಾ ಕೆಲಸ ಮಾಡುವ ಪಿಂಪ್ರಿ ಕಾರಖಾನಿಗೆ ಅವಾಗಿವಾಗ ಬರತಿದ್ದ ಲೆಮಿಂಗಟನ ಸಾಲಿಯ ಕ್ಲಾಸಮೇಟ ಠಾಕುರ ಒಂದು ಸುದ್ದಿ ತಂದಿದ್ದ. ಲೆಮಿಂಗಟನ್ ಸಾಲಿಯ ಇವರ ಕ್ಲಾಸಿನ ಹುಡುಗರು ಎಲ್ಲಾ ಒಂದ ಕಡೆ ಸೇರಬೇಕಂತ ಅಂದುಕೊಂಡಾರ. ಕಲಿಸಿದ ಮಾಸ್ತರಗೋಳಿಗೆ ಗುರುವಂದನಾ ಇಟಕೋಬೇಕು ಅಂತ ಅಂದುಕೊಂಡಾರ. ಅದಕ ಪೂರಕವಾಗಿ ಒಂದು ವಾಟ್ಸಪ್ ಗ್ರುಪ್ ಸುರುಮಾಡಾವರಿದ್ದಾರ ಅಂತ ದಿವಾಕರನ ನಂಬರು ಇಸಕೊಂಡು ಹೋಗಿದ್ದ. ಮುಂದ ಎರಡುದಿನದಾಗ ಇವ ಗುಂಪಿಗೆ ಸೇರಿರುವ ಬಗ್ಗೆ ಖಾತ್ರಿಯಾತು. ಅವಾಗಿವಾಗ ಮೆಸೇಜು ಬಂದವು. ಸುಮಾರು 50 ಹುಡುಗರು ಇದ್ದರು ಆ ಕ್ಲಾಸಿನ್ಯಾಗ. ಅಲ್ಲಿ ಇಲ್ಲಿ ಹರದು ಹಂಚಿ ಹೋಗಿದ್ದರು. ಹಳೇ ಗೆಳ್ಯಾರು ನೆನಪು ತೆಗೆದು ದಿವಾಕರಗ ಫೋನುಮಾಡಿ ನೆನಪು ತಾಜಾ ಮಾಡಕೊಂಡರು. ಹಂಗ ದಿನಾ ಕಳದವು. ಗುಂಪಿನೊಳಗ ದಿವಾಕರ ಶ್ರೀ ಯನ್ನು ಹುಡುಕುತ್ತಿದ್ದ. ಅಂತೂಇಂತೂ ಶ್ರೀನೂ ಸದಸ್ಯ ಆಗಿ ಸೇರಿಕೊಂಡಾಗ ದಿವಾಕರ ಫೋನುಮಾಡಿದ್ದ. ಮುವ್ವತ್ತು ವರ್ಷದ ಮ್ಯಾಲೆ ಜೀವದ ಗೆಳೆಯನ ಜೋಡಿ ಮಾತಾಡಿದಾಗ ಎದಿ ಭಾರವಾಗಿತ್ತು. ಗುಂಪಿನ ಸದಸ್ಯರು ಸಧ್ಯದಲ್ಲೇ ಆಯೋಜಿಸಲಿರುವ ಮೇಲ್ ಮಿಲಾಪ ಕಾರ್ಯಕ್ರಮಕ್ಕ ಹುಬ್ಬಳ್ಳಿಗೆ ಹೋಗಬೇಕು ಅಂತ ದಿವಾಕರ ಠರಾಯಿಸಿದ. ಆದರ ಒಂದು ಮಾತ್ರ ಅವಗ ನಿರಾಶಾ ತಂತು. ಯಾಕೋ ಶ್ರೀ ಮುಗಮ್ಮಾಗಿ ಮಾತಾಡಿದ್ದ ಫೋನಿನ್ಯಾಗ…ಎರಡು ಮೂರು ಸಲ ಹಿಂಗ ಆಗಿತ್ತು. ದಿವಾಕರ ಜೋರು ಮಾಡಿ ಕೇಳಿದಾಗ “ಹೆಂಗಿದ್ದರೂ ಬರತೀ ಅಲ್ಲ ಹುಬ್ಬಳ್ಳಿಗೆ ಅವಾಗ ಮಾತಾಡೋಣ “ ಅನ್ನುವ ಉತ್ತರ ಸಿಕ್ಕಿತ್ತು. ಇವನ ಭೇಟಿಗಾಗಿಯೇ ತಾನು ಇಲ್ಲಿ ಓಡಿ ಬಂದಿದ್ದು ಇಲ್ಲವಾದರೆ ಹುಬ್ಬಳ್ಳಿಯಲ್ಲಿ ಮೊದಲಿನ ಸೆಳೆತ ಇಲ್ಲ ಆದ್ರ ಇವಾ ಹಿಂಗ ನಿರ್ಲಿಪ್ತನಂಗ ಕೂತಾನ. ಅವನೊಳಗ ಅನೇಕ ಕತಿ ಅವ ಯಾಕ ಮಾತಾಡುವುದಿಲ್ಲ ಇವ.

“ದಿವ್ಯಾ ನಾಳೆ ಮನಿಗೆ ಊಟಕ್ಕ ಬಾ. ಮನಿ ಪತ್ತೆ ಮೆಸೇಜು ಮಾಡತೇನಿ. ”
“ಅಲ್ಲಲೇ ನಾ ನಿನಗ ಭೇಟಿಯಾಗಬೇಕು ಮಾತಾಡಬೇಕು ಅಂತ ಓಡಿ ಬಂದ್ರ ನೀ ಹಿಂಗ ಗುಮ್ಮನಗುಸುಗ ಆಗಿ. ಏನಾದರೂ ಮಾತಾಡು. ಹಳೇ ಕಥಿ ಮರತ್ಯೋ ಹೆಂಗ. ” ದಿವಾಕರ ಒತ್ತಾಯಿಸಿದ.
“ಏನೂ ಮರತಿಲ್ಲ ನಿನಗ ಗೊತ್ತಿದ್ದ ಕತಿ ನೀ ಹೇಳು. ನನಗ ಗೊತ್ತಿದ್ದನ್ನ ನಾ ಹೇಳತೇನಿ…. ”

*****

ಮುವ್ವತ್ತು ವರ್ಷದ ಮ್ಯಾಲೆ ದಿವಾಕರ ಹುಬ್ಬಳ್ಳಿಗೆ ಬಂದಿದ್ದ. ಬಂದಾವ ಇಳದ ಹೊಟೆಲಿನ್ಯಾಗ ಸ್ನಾನ ತಿಂಡಿ ಮುಗಸಿ ನೇರವಾಗಿ ಹೋಗಿದ್ದು ಕಿಲ್ಲೆಕ. ಅವ ಆಡಿ ಬೆಳೆದ ಕಿಲ್ಲೆ ಬಹಳ ಬದಲಾಗಿತ್ತು . ಹೊಸಾ ಹೊಸಾ ಕಟ್ಟಡಗಳು ತಲೆ ಎತ್ತಿದ್ದವು. ಹಂಗ ಅವಾಗ ಇದ್ದ ಮನೆಗಳು, ಚಾಳುಗಳ ಕುರುಹೂ ಈಗ ಉಳದಿರಲಿಲ್ಲ. ಬರೇ ಮಾರವಾಡಿ, ಗುಜರಾತಿ ಮಂದಿ ಕಾಣತಿದ್ದರು. ಹಳೇ ಕಿಲ್ಲೆಯ ಕುರುಹಾಗಿ ಉಳಕೊಂಡಿದ್ದು ಹನುಮಂತದೇವರ ಗುಡಿ ಮತ್ತು ದತ್ತಾತ್ರೇಯ ಗುಡಿ ಮಾತ್ರ. ಈ ಕಿಲ್ಲೆ ನನ್ನದಲ್ಲ ನನ್ನ ನೆನಪಿನ ಕೋಶದಾಗ ಬಂದಿಯಾಗಿರೋ ಕಿಲ್ಲೆ ಇದಲ್ಲ ಅನ್ನುವ ಭಾವ ಬಲವಾಗಿ ನಿರಾಶೆಯಿಂದ ಹೊರನಡೆದಿದ್ದ.
ಹುಬ್ಬಳ್ಳಿ ಬಿಟ್ಟು ಅವ ಹೋಗಿದ್ದ.

ಹಂಗ ನೋಡಿದರ ಇದು ಅವನ ನಿರ್ಧಾರವಾಗಿರಲಿಲ್ಲ. ಅವನ ಬಾಬಾ, ಆಯೀ ತಂಗಿ ಸುಲೂ ಎಲ್ಲಾರೂ ದೂರದ ಪಿಂಪ್ರಿಗೆ ಹೊಸಾ ಬದುಕು ಅರಸಿ ಹೊರಟುಹೋಗಿದ್ದರು. ಅವನ ಬಾಬಾ ಕೆಲಸ ಮಾಡುವ ಗೋಕುಲರೋಡಿನ ಕಾರ್ಖಾನಿ ಮುಚ್ಚಿತ್ತು. ಕೆಲಸ ಇಲ್ಲದ ಖಾಲಿ ಕೂತಿದ್ದ ಮನಿಯೊಳಗ. ಮಹಾಜನ ಅಂಗಡಿ ಕಿರಾಣಿ ಉದ್ರಿ ಬೆಳೆದಿತ್ತು. ದಿವಾಕರ ಹೋಗಿ ಆ ತಿಂಗಳ ಕಿರಾಣಿ ಪಟ್ಟಿಕೊಟ್ಟಾಗ ಹೆಂಗಬೇಕಂಗ ಮಾತಾಡಿದ್ದ ಆ ಅಂಗಡಿ ಮಾಲಕ. ಅಪಮಾನದಿಂದ ಕುದ್ದು ಇವ ಬರಿಗೈಲೆ ಮನಿಗೆ ಬಂದಾಗ ದಿನೂಮಾಮಾ ಬಂದಿದ್ದ ಪುಣೆಯಿಂದ. ಮತ್ತು ಮುಂದ ಆದ ಚರ್ಚಾದಾಗ ಹುಬ್ಬಳ್ಳಿ ಬಿಡುವುದು ಪುಣೆಯೊಳಗ ದಿನುಮಾಮಾನ ಪರಿಚಯದ ಕಾರಖಾನಿಯೊಳಗ ಬಾಬಾ ಕೆಲಸಮಾಡುವುದು ಠರಾವಾತು. ದಿವಾಕರ ಮೆಟ್ಟಿಕ ಪರೀಕ್ಷಾ ಕೊಟ್ಟಿದ್ದ. ಅದರ ರಿಸಲ್ಟು ಬಂದಿರಲಿಲ್ಲ. ಮುಳುಗುವ ನಾವೆಗೆ ಆಸರೆಯಾಗಿ ದಿನೂಮಾಮಾ ಬಂದಿದ್ದ. ಅವನ ಮುಂದ ನಿಂತು ಸಾಮಾನು ಪ್ಯಾಕು ಮಾಡಿಸಿ ಟೆಂಪೋದಾಗ ಹಾಕಿಸಿದ. ಮಹಾಜನ ಅಂಗಡಿ ಕಿರಾಣಿ ಬಿಲ್ಲು ಉಳಸಿಕೊಮಡ ಮನಿ ಭಾಡಿಗಿ ಎಲ್ಲಾನೂ ಚುಕ್ತಾಮಾಡಿದ. ಟೆಂಪೋದಾಗ ಸಾಮಾನು ಸೇರಿಸಿ ಇವರು ಹೊರಟುನಿಂತಾಗ ಚಾಳಿನ ಮಂದಿ ಮರುಗಿದರು. ಇವನ ಆಯಿಗೆ ಹಚಗೊಂಡಾವರು ಕಣ್ಣಾಗ ನೀರ ತಂದರು. ದಿವಾಕರನ ಕಣ್ಣು ಶ್ರೀಗೆ ಹುಡಕತಿದ್ದವು. ಆದರ ಅವಾ ಅಲ್ಲಿ ಇರಲಿಲ್ಲ ಹಂಗ ನೋಡಿದರ ದಿವಾಕರನಿಗೂ ಶ್ರೀ ಅಲ್ಲಿ ಇಲ್ಲ ಅನ್ನುವುದು ಗೊತ್ತಿತ್ತು ಆದರೂ ಮನಸ್ಸು ತಡಿತಿತಲಿಲ್ಲ. ಗೆಳೆಯನ ನೆನಪು ಹೊತ್ತಿಕೊಂಡೇ ಬಸ್ಸು ಏರಿದ್ದ.

*****

ದಿವಾಕರ ಮತ್ತು ಶ್ರೀ ಇಬ್ಬರ ನಡುವೆ ಹಾಗೆ ನೋಡಿದರೆ ಮನೆತನದ ಅಂತಸ್ತಿನ ಅಂತರ ಇತ್ತು. ದಿವಾಕರನ ತಂದೆ ಗೋಕುಲರೋಡಿನ ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದರು. ಕುಲಕರ್ಣಿ ಅವರ ಚಾಳಿನ ಒಂದು ಸಾಧಾರಣ ಮನೆಯಲ್ಲಿ ಭಾಡಿಗೆಗೆ ಇದ್ದರು. ಬರುತ್ತಿರುವ ಸಣ್ಣ ಪಗಾರದಲ್ಲಿ ತಿಂಗಳ ದೂಡುವುದು ಕಠಿಣವಾಗುತ್ತಿತ್ತು. ಹೋಲಿಸಿದರೆ ಶ್ರೀಯ ತಂದೆ ಹುಬ್ಬಳ್ಳಿಯ ಎಸ್ ಟಿ ಡಿಪೋದಲ್ಲಿ ಸುಪರವೈಸರ ಅಂತ ಇದ್ದರು. ನಗರ ಸಾರಿಗೆಯ ಕಂಡಕ್ಟರ ಮತ್ತು ಚಾಲಕರ ಡ್ಯೂಟಿ ಹೊಂದಿಸುವ ವಿಭಾಗದ ಮೇಲಧಿಕಾರಿ ಅವರು. ಹೆಸರು ಮನೋಹರ ನೋಡಲೂ ಹೆಸರಿಗೆ ತಕ್ಕಂಗಿದ್ದರು. ವ್ಯಾಯಾಮ ಮಾಡಿ ಬೆಳೆಸಿದ ದೇಹ ಅದರ ಮೇಲಾಗಿ ದರ್ಪ ತೋರಿಸಲು ಅವಕಾಶ ಕೊಟ್ಟ ಕೆಲಸ. ತಮಗೆ ಬೇಕಾದ ರೂಟಿನಲ್ಲಿ ಡ್ಯೂಟಿ ಹಾಕಿಸಿಕೊಳ್ಳಲು ಚಾಲಕರು ಮತ್ತು ನಿರ್ವಾಹಕರು ಅನೇಕ ರೀತಿಯಲ್ಲಿ ಲಂಚ ಕೊಡುತ್ತಿದ್ದರು. ತಮ್ಮ ಊರಿನ ಹೊಲದಲ್ಲೆ ಬೆಳೆದ ಕಾಯಿಪಲ್ಯೆ, ಕಾಳುಕಡ್ಡಿಗಳಿಂದ ಹಿಡಿದು ಸಾಹೇಬರಿಗೆ ಸೇರತದ ಅಂತ ಅವಾಗಿವಾಗ ತರುವ ಮೀನ, ಮಾಂಸ ಅಂತೆಯೇ ಮದ್ಯದ ಬಾಟಲಿ ಹೀಗೆ ಹತ್ತು ಹಲವು ತರಹದ ಕಾಣಿಕೆ ಮನೋಹರ ಅವರಿಗೆ ಸಂದಾಯವಾಗುತ್ತಿತ್ತು.

ಎಲ್ಲ ಅನುಕೂಲ ಇದ್ದರೂ ಮನೋಹರ ಖುಶಿಯಾಗಿರಲಿಲ್ಲ. ತೊಂದರೆ ಇದ್ದದ್ದು ಅವರ ದಾಂಪತ್ಯ ಜೀವನದಲ್ಲಿ. ಅವರ ಹೆಂಡತಿ ಗಂಗಾಬಾಯಿ ಶ್ರೀಯ ಮುಂಜಿವೆ ಮುಗಿಸಿದ ನಂತರ ಬಿದ್ದಿದ್ದೇ ನೆವವಾಗಿ ಸಂಧಿವಾತಕ್ಕೆ ಈಡಾಗಿದ್ದರು. ಕಾಲು ಊರಲಾರದೇ ತೆವಳುತ್ತಲೇ ನಡೆಯುವ ಸ್ಥಿತಿ ಅವರದು. ಕೈ ಬೆರಳುಗಳು ಸಹ ತಿರುಚಿಕೊಂಡು ಮನೆಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತವಾಗಬೇಕಾಗಿತ್ತು. ಸ್ವಭಾವತಃ ಮನೋಹರ ಸಿಡುಕು ಸ್ವಭಾವದವರು. ಹೆಂಡತಿಯ ಈ ಪರಿಸ್ಥಿತಿ ಅವರಿಗೆ ಬೇಸರ ತರಿಸಿತ್ತು. ತಾವೇ ಎದ್ದು ಚಹಾ ಬೆಳಗಿನ ತಿಂಡಿ ಮಾಡಿಕೊಳ್ಳುತ್ತಿದ್ದರು. ಅಡಿಗೆ ಕೆಲಸಕ್ಕೆ ಭಾಗೀgತಿ ಅನ್ನುವ ಮಡಿ ಹೆಂಗಸು ಬರುತ್ತಿದ್ದಳು. ಆದರೆ ಅವರು ಮಾಡಿದ ಅಡಿಗೆಗೆ ಖಾರ ಉಪ್ಪು ಇರುತ್ತಲೇ ಇರಲಿಲ್ಲ. ಶ್ರೀ ಹಾಗೂ ಮನೋಜರ ಇಬ್ಬರ ಸ್ತಿತಿ ನಾಜೂಕಾಗಿತ್ತು. ಅಸಹಾಯಕಳಾದ ಗಂಗಾಬಾಯಿ ಕಣ್ಣೀರು ಮಾತ್ರ ಹಾಕಬಹುದಾಗಿತ್ತು. ಸಂಜಿಮುಂದ ಎಲ್ಲಾರ ಮನಿಯೊಳಗ ದೀಪಾಹಚ್ಚಿ ಕೈ ಮುಗೀತಿದ್ದರ ಶ್ರೀ ಮನಿಯೊಳಗ ಬ್ಯಾರೆ ದೃಶ್ಯ ನೋಡಲಿಕ್ಕೆ ಸಿಗತಿತ್ತು. ಮನೋಹರ ಆಫಿಸಿನಿಂದ ಬರುವಾಗ ತಂದ ಬಾಟಲಿ ಬಿಚ್ಚಿ ಕೂಡತಿದ್ದರು ಕುಡಕೋತ. ಅದು ಏರಿದಂಗ ಅವರ ಬಾಯಿಯೊಳಗಿಂದ ಪುಂಖಾನುಪುಂಖವಾಗಿ ಬೈಗುಳ ಹೊರಬರತಿದ್ದವು.

ಅವು ಎಲ್ಲಾ ಗಂಗಾಬಾಯಿಯವರ ತವರ ಮನಿ ಮಂದಿಗೆ ಉದ್ದೇಶಿಸಿರುತ್ತಿದ್ದವು. ಮನೋಹರನ ತಲೆಯಲ್ಲಿ ಸಂಧಿವಾತ ವಂಶವಾಹಿ ಕಾಹಿಲೆ. ಗಂಗಾಬಾಯಿಯ ತವರು ಮನೆಯಲ್ಲಿ ಅದು ಇತ್ತು ಮೋಸಮಾಡಿ ಮದುವೆ ಮಾಡಿಕೊಟ್ಟಿದ್ದಾರೆ ಇದು ಮನೋಹರ ಹೊರಿಸುತ್ತಿದ್ದ ಅಪವಾದ. ದಿನಾನು ಈ ಮಾತು ಕೇಳಿಕೇಳಿ ಗಂಗಾಬಾಯಿ ಬ್ಯಾಸರ ಮಾಡಿಕೊಂಡಿದ್ದರು. ಸಾವು ಬಂದುಬಿಡಲಿ ಇದು ಅವರ ನಿತ್ಯದ ಪ್ರಾರ್ಥನೆಯಾಗಿತ್ತು ದೇವರಲ್ಲಿ.

ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿಯೇ ಸರೂಮಾವುಶಿ ಬಂದಿದ್ದಳು. ಗಂಗಾಬಾಯಿಯನೋಡಲು ಬಂದ ಗಂಗಾಬಾಯಿಯ ಕಾಕಾನ ಮಗನಿಗೆ ಮನ ತುಂಬಿ ಬಂದಿತ್ತು ಅವನ ಶೀಫಾರಿಸು ತಗೊಂಡು ಸರೂಮಾವುಶಿ ಬಂದಿದ್ದಳು. ಅವಳ ಗಂಡ ಸನ್ಯಾಸದ ಮೋಹಕ್ಕೆ ಬಿದ್ದು ಇವಳಿಗೆ ದೂರ ಮಾಡಿದ್ದ. ಸರೂಮಾವುಶಿ ಮನೋಹರನ ಜೀವನದಲ್ಲೂ ಹೊಸ ಹುರುಪು ತಂದಳು. ಹೆಂಗಸಿನ ಬೆವರಿನ ವಾಸನೆ, ಹಾಗೆಯೇ ಹೆರಳು ಹಾಕಿಕೊಂಡಾಗ ಸೂಸುವ ನವಿರು ಗಂಧ, ಪೌಡರು ಹಾಕಿಕೊಂಡಾಗ ಅಮರುವ ಸುವಾಸನೆ ಇಂತಹ ಸಾಮಾನ್ಯ ಸಂಗತಿಗಳಿಂದ ಮನೋಹರ ವಂಚಿತನಾಗಿದ್ದ. ಸರೂ ಅವನಿಗೆ ಪ್ರೇಮದೇವತೆಯಾಗಿ ಕಂಡಳು. ಅವಳೂ ಹಸಿದಿದ್ದಳು. ಉಂಡಳು. ಉಣಿಸಿದಳು.

ಮನೋಹರನ ಜೀವನದಲ್ಲಿ ಈಗ ಹೊಸ ಉಮೇದಿ ಬಂದಿತ್ತು. ಅದೇ ಮನೆಯಲ್ಲಿ ಮಲಗುತ್ತಿದ್ದ ಶ್ರೀ ಗೆ ಏನು ನಡೆಯುತ್ತಿದೆ ಅಂತ ಗೊತ್ತಿತ್ತು. ಆದರೆ ಅಪ್ಪನ ದರ್ಪದ ಮುಂದೆ ಅವ ಮೂಕನಾಗಿದ್ದ. ದಿನಾ ರಾತ್ರಿ ಸರೂಮಾವುಶಿಯ ಜೊತೆ ಅಪ್ಪ ಮಲಗುತ್ತಿದ್ದ ಇದನ್ನ ನೋಡಿಕೊಂಡು ಏನೂ ಮಾತಾಡದೇ ಸುಮ್ಮನಿರುವುದು ಅವನಿಗೂ ಸೇರಿರಲಿಲ್ಲ. ಅವಾಗಿನ್ನೂ ಒಂಬತ್ತನೇಯತ್ತೆಯಲ್ಲಿ ಓದುತ್ತಿದ್ದ. ಗರಡಿ ಮನೆಗೆ ಹೋಗಿ ದೇಹ ಪಳಗಿಸಿದ್ದ. ಅದೂ ಅಲ್ಲದೇ ಹರೆಯ ಅದೇ ತಾನೇ ಹೊಸಿಲು ತುಳಿದು ಬಂದಿತ್ತು ಅವನ ಬಾಳಿನಲ್ಲಿ. ಅಭ್ಯಾಸದ ನೆವ ಮಾಡಿ ಗೆಳೆಯ ದಿವಾಕರನಿಗೂ ಪುಸಲಾಯಿಸಿ ಕುಲಕರ್ಣಿ ಅವರ ಮನೆಯ ಖಾಲಿ ಅಟ್ಟದ ಜಾಗೆ ಆಕ್ರಮಿಸಿಕೊಂಡ. “ಹುಡುಗರು ಅಭ್ಯಾಸ ಮಾಡಲಿ ಮುಂದ ಬರಲಿ”ಅನ್ನುವ ಔದಾರ್ಯತೆ ಕುಲಕರ್ಣಿ ವೈನಿಗೆ ಇತ್ತು. ಅವರದು ಚಿಕ್ಕ ಸಂಸಾರ. ಗಂಡ ತೀರಿಕೊಂಡು ಅನೇಕ ವರ್ಷ ಕಳೆದಿದ್ದವು. ಒಬ್ಬನೇ ಮಗ ಸರಕಾರಿ ಕೆಲಸದಲ್ಲಿದ್ದ. ಅವನಿಗೆ ವೈನಿಯೇ ನೋಡಿ ಮೆಚ್ಚಿದ ಅಂಬುಜಾಳನ್ನು ಸೊಸೆಯಾಗಿ ಕರೆತಂದಿದ್ದರು. ಚಾಳಿನ ಭಾಡಿಗೆ ಗಂಡನ ಪೆನಶನ್ ಅಂತೆಯೇ ಮಗನ ಪಗಾರ ಹೀಗೆ ಆರ್ಥಿಕವಾಗಿ ತೊಂದರೆ ಇರಲಿಲ್ಲ.

ಆ ಅಟ್ಟಕ್ಕೆ ಹೊರಗಿನಿಂದ ಮೆಟ್ಟಿಲುಗಳಿದ್ದವು. ಆ ರೂಮಿನ ಚಾವಿ ಶ್ರೀ ಕಡೆ ಕೊಟ್ಟಿದ್ದರು ಕುಲಕರ್ಣಿ ವೈನಿ. ದಿವಾಕರ ಪಾಪಭೀರು. ಪುಕ್ಕಲು ಸ್ವಭಾವದವ ಆದರೆ ಶ್ರೀ ಇದರ ತದ್ವಿರುದ್ದ. ಇಢೀ ಕಿಲ್ಲೆ ಅವನನ್ನು ಆರಾಧಿಸುತ್ತಿತ್ತು. ಸದಾ ಅವರಿವರ ಮನೆಯ ಕಿರಕೋಳ ಕೆಲಸ ಮಾಡಿಕೊಡುತ್ತ ಅವರು ಕೊಟ್ಟಿದ್ದನ್ನು ಚಪ್ಪರಿಸಿ ತಿನ್ನುತ್ತ ಮಜಾಶೀರ ಇದ್ದ ಅವನ ಬಗ್ಗೆ ದಿವಾಕರನಿಗೆ ಒಳಗೊಳಗೇ ಹೊಟ್ಟೆಕಿಚ್ಚಿತ್ತು. ಕಿಲ್ಲೆದಾಗ ನಡೆಯುವ ಗಣಪತಿ ಹಬ್ಬ ಇರಲಿ, ದಸರಾ ಹಬ್ಬ ಇರಲಿ ಶ್ರೀ ಯ ಛಾಪು ಇರತಿತ್ತು. ಅನೇಕ ಮಂದಿ ಗಣಪತಿಯ ಮುಂದಿನ ಡೆಕೋರೇಷನ ಶ್ರೀನ ಮಾಡತಿದ್ದ. ಎಷ್ಟೋಜನರ ಮನಿ ಗಣಪತಿಯ ಮಂಗಳಾರತಿನೂ ಅವನ ಮಾಡತಿದ್ದ. ಒಟ್ಟಿನಲ್ಲಿ ಶ್ರೀ ಅಂದರ ಕಿಲ್ಲೆದ ಅಚ್ಛಾದ ಹುಡುಗ. ಸಾಲಿಯೊಳಗೂ ಹಂಗ. ಯಾರರ ಮಾಸ್ತರರ ಪೀರಿಯಡ ಗ್ಯಾಪ ಇತ್ತು ಅಂದರ ಶ್ರೀ ಮುಂದುವರೆದು ಹಾಡುಹಾಡಿ ರಂಜಸತಿದ್ದ ಹಂಗ ಅಮೀನಸಯಾನಿಯ ದನಿ ಅನುಕರಣೆ ಮಾಡುತ್ತ ಬಿನಾಕಾ ಗೀತಮಾಲಾದ ಹಾಡು ಹಾಡತಿದ್ದ. ಇಂತಹ ಗುಣ ಇದ್ದ ಗೆಳೆಯ ದೊರಕಿದ್ದು ದಿವಾಕರನಿಗೆ ಖುಶಿ ಇತ್ತು ಅದರ ಅದನ್ನ ತೋರಿಸುವುದರಿಂದ ಎಲ್ಲಿ ತನ್ನ ಒಣ ಅಭಿಮಾನ ಕಮಿ ಆಗತದ ಅನ್ನುವ ಹಿಂಜರಿತ ಅವನಿಗೆ ಇತ್ತು. ಆದರೂ ಶ್ರೀನ ಕಿಸೆದಾಗ ರೊಕ್ಕ ಆಡತಿದ್ದವು. ಲೆಮಿಂಗಟನ ಸಾಲಿ ಎದುರಿನ ಬ್ರಾಹ್ಮಣರ ಹೊಟೆಲಿನ ಕಾಯಂ ಮಧ್ಯಾಹ್ನದ ಗಿರಾಕಿಯಾಗಿದ್ದ ಶ್ರೀ. ಜೋಡಿ ದಿವಾಕರನೂ ಹೋಗತಿದ್ದ. ತನ್ನ ಮಾತಿನ ಮೊಡಿಯಿಂದ ಹೊಟೆಲಿನವರನ್ನು ಪಟಾಯಿಸಿಕೊಮಡಿದ್ದ ಶ್ರೀ. ಅವನ ಈ ಗಲಿಬಿಲಿ ಮಾತಿಗೆ ಮರುಳಗದವರ ಇಲ್ಲ. ಆದರ ಮರುಳಾದ ಪಟ್ಟಿಯೊಳಗ ಅಂಬುಜಾನೂ ಸೇರಿಕೊಂಡಾಳ ಅನ್ನುವ ಸತ್ಯ ದಿವಕರನಿಗೆ ಗೊತ್ತಾಗಿದ್ದು ಆಕಸ್ಮಿಕ.

ಗೆಳೆಯರಿಬ್ಬರೂ ಮಿಡಟರ್ಮ ಪರೀಕ್ಷಾ ಮುಗಸಿ ಮೆಟ್ಟಿಕ ಪರೀಕ್ಷಾದ ತಯಾರಿಯೊಳಗ ಇದ್ದರು. ಎಂದಿನಂತೆ ಕುಲಕರ್ಣಿಅವರ ಮನಿ ಅಟ್ಟನ ಅವರ ವಸತಿತಾಣ. ದಿನಾ ರಾತ್ರಿ ಅಭ್ಯಾಸ ರಂಗೇರಿದಾಗ ಕಿರಬೆರಳು ತೋರಿಸಿ ಶ್ರೀ ಇಳದು ಹೋಗತಿದ್ದ. ದಿನಾ ಅಗದಿ ಠರಾವಿಕ ವ್ಯಾಳ್ಯಾಕ ಅವ ಹೋಗತಿದ್ದುದು ದಿವಾಕರನಿಗೂ ದಿಗಿಲು ತರತಿತ್ತು. ಸ್ವಲ್ಪ ಹೊತ್ತು ಆದಮ್ಯಾಲೆ ಬರತಿದ್ದ ಗೆಳೆಯನ ಮುಖ ಕಣ್ಣು ಮಿಂಚತಿದ್ದವು ಇದು ದಿವಾಕರ ಕಂಡ ಸತ್ಯ. ದಿನಾನೂ ಇವ ಎಲ್ಲಿ ಹೋಗತಾನ ಅಂತ ನೋಡೋಣು ಅಂತ ಒಂದು ರಾತ್ರಿ ಅವನ ಬೆನ್ನು ಹತ್ತಿದವಗ ಕಂಡಿದ್ದು ಅಂಬುಜಾಳ ಅಪ್ಪುಗೆಯಲ್ಲಿರುವ ಗೆಳೆಯ. ಈಶ್ವರ ಗುಡಿಯ ಕಟ್ಟಿ ಮ್ಯಾಲ ಇಬ್ಬರೂ ಕೂತಿದ್ದರು. ದಿವಾಕರನಿಗೆ ಇದು ಸರಿ ಅನಿಸಲಿಲ್ಲ. ಎಷ್ಟಿದ್ದರೂ ಕುಲಕರ್ಣಿ ಅವರು ಮನೆಮಾಲೀಕರು. ಅಂಬುಜಾಳಿಗೆ ಮದುವೆಯಾಗಿದೆ. ಗೆಳೆಯನಿಗೂ ಅವಳಿಗೂ ವಯಸ್ಸಿನ ಅಂತರ ಬೇರೆ ಇದೆ. ಇಲ್ಲ ಗೆಳೆಯನಿಗೆ ಬುದ್ದಿ ಹೇಳಬೇಕು. ಓದಿನ ಬಗ್ಗೆ ಗಮನಕೊಡಲು ಹೇಳಬೇಕು. ಅಡ್ಡಹಾದಿ ಹಿಡಿಯುವುದು ತಪ್ಪು ಅಂತ ತಿಳಸಿಹೇಳಬೇಕು ಅಂತೆಲ್ಲ ಠರಾಯಿಸಿ ಒಂದುದಿನ ಸಾಲೆ ಬಿಟ್ಟಮೇಲೆ ಅವನನ್ನು ಕರೆದುಕೊಂಡು ಹೋಗಿ ಗುಡಿಯ ಕಟ್ಟೆಯ ಮೇಲೆ ಕುಳಿತು ತನಗನಿಸಿದ್ದನ್ನು ನೇರವಾಗಿ ಹೇಳಿದ. ಮದುವೆಯಾದ ಹೆಂಗಸಿನ ಮೋಹ ಕೆಟ್ಟದು ಮೇಲಾಗಿ ಓದಲು ರೂಮು ಕೊಟ್ಟು ಉಪಕಾರ ಮಾಡಿದ ಕುಲಕರ್ಣಿ ವೈನಿಗೆ ಇದು ದ್ರೋಹ ಬಗೆದಂತೆ ಅಂತೆಲ್ಲ ವಾದಿಸಿದ ತನ್ನ ಮಾತಿಗೆ ಗೆಳೆಯ ಏನೂ ಉತ್ತರ ಕೊಡದಿದ್ದಾಗ ತನ್ನ ಮಾತು ನಾಟಿದೆ ಅಂತ ಬೀಗಿದ ದಿವಾಕರ.

ಅವನ ನಂಬುಗೆ ಒಂದೆರಡು ದಿನದಲ್ಲಿ ಸುಳ್ಳಾಗಿತ್ತು. ಪರೀಕ್ಷೆಯ ಹಾಲಟಿಕೇಟು ತಗೊಂಡು ಬಂದ ರಾತ್ರಿ ಶ್ರೀ ಎಂದಿನಂತೆ ರಾತ್ರಿ ಮಲಗಲು ಬರಲಿಲ್ಲ. ಓದಿ ಮಲಗಿದ ದಿವಾಕರನಿಗೆ ಕುಲಕರ್ಣಿಅವರ ಮನೆಯಲ್ಲಿ ನಡೆಯುತ್ತಿರುವ ಗದ್ದಲದಿಂದ ಎಚ್ಚರವಾಯಿತು. ಕೆಳಗಡೆ ಹೋಗಿ ನೋಡಿದಾಗ ಕುಲಕರ್ಣಿ ವೈನಿ ಸೊಸೆಗೆ ಶಾಪಹಾಕುತ್ತಿದ್ದರು. ಜೋರಾಗಿ ಅಳುತ್ತಿದ್ದರು ಹಾಗೆಯೇ ಅಂಬುಜಳ ಗಂಡ ಅನಂತ ಮಂಕಾಗಿ ಮೂಲೆಯಲ್ಲಿ ಕುಳಿತಿದ್ದ. ದಿವಾಕರನ ಆಯಿ ಹಾಗೂ ಚಾಳಿನ ಇತರೇ ಹೆಂಗಸರು ಕುಲಕರ್ಣಿ ವೈನಿಯನ್ನು ಸಮಾಧಾನ ಮಾಡುತ್ತಿದ್ದರು. ಪದೇ ಪದೇ ಅಂಬುಜಾ ಬರೆದಿಟ್ಟು ಹೋದ ಚೀಟಿ ತೋರಿಸಿ ವೈನಿ ರೋದಿಸುತ್ತಿದ್ದರು. ಹಾಗೆಯೇ ಅಲ್ಲಿ ನೆರೆದ ಗಂಡಸರು ಅಂಬುಜಾಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಅದೇ ಚಾಳಿನಲ್ಲಿ ವಾಸ ಮಾಡುತ್ತಿದ್ದ ಪಾಳಂದೆ ತಾನು ಅಂದು ಸಂಜೆ ಅಂಬುಜಾ ಮತ್ತು ಶ್ರೀ ಇಬ್ಬರೂ ಆಟೋ ಹತ್ತುತ್ತಿದ್ದುದನ್ನು ನೋಡಿದುದಾಗಿಯೂ ಅಂಬುಜಾಳ ಬಳಿ ಸೂಟಕೇಸು ಸಹ ಇತ್ತು ಅಂತ ಹೇಳಿದ ಮೇಲೆ ಅಂಬುಜಾ ಮತ್ತು ಶ್ರೀ ಇಬ್ಬರೂ ಕೂಡಿಯೇ ಓಡಿ ಹೋಗಿದ್ದಾರೆ ಅಂತ ಖಾತ್ರಿ ಆತು. ಸುದ್ದಿ ತಿಳಿದ ಅನಂತ ರೋಷದಿಂದ ಎದ್ದು ಒಂದು ಕೈ ನೋಡೇ ಬಿಡತೇನಿ ಅಂತ ಹೊರಗೆ ಹೊರಟ. ಅವನ ಹಿಂದೆ ದಿವಾಕರ ಹಾಗೂ ಉಳಿದ ನಾಕು ಗಂಡಸರು ಹೊರಟರು. ಅನಂತ ನೇರವಾಗಿ ಹೋಗಿದ್ದು ಶ್ರೀಯ ಮನೆಗೆ. ಬಾಗಿಲು ರಪರಪ ಬಡಿದು ಅವನ ಹೆಸರಿಢಿದು ಒದರಿದ ಅನಂತ. ಸರೂಮಾವುಶಿಯ ಜೊತೆಗಿನ ದೇಹಸುಖದ ಉತ್ತುಂಗದಲ್ಲಿರುವಾಗ ಬಾಗಿಲು ಬಡಿದ ಶಬ್ದ ಕೇಳಿ ಮನೋಹರನಿಗೆ ತೊಂದರೆಯಾಯಿತು. ಅದೇ ಬೇಸರದಲ್ಲಿ ಬಂದರೆ ಹೊರಗೆ ಗುಂಪಾಗಿ ನಿಂತ ಜನ ಹೇಳಿದ ಸುದ್ದಿ ಕೇಳಿ ತಲೆತಿರುಗಿತು.

ಅದ ಸಿಟ್ಟಿನ ಭರದಾಗ “ಹಾಳಾಗಿ ಹೋಗಲಿ. ಪೋಲಿಸರಿಗೆ ಸುದ್ದಿ ಕೊಡರಿ ಇಲ್ಲಿಯಾಕ ಬಂದ್ರಿ. ”ಅಂತೆಲ್ಲ ಒದರಿ ಬಾಗಿಲು ಹಾಕಿಕೊಂಡ. ದಿವಾಕರ ಗೆಳೆಯನ ಈ ಹುಂಬತನಕ್ಕೆ ಮರುಗಬೇಕೋ ಅಥವಾ ಇದರ ಸುಳುವು ದೊರೆತಾಗ ಏನೂ ಹೇಳದೇ ಉಳದದ್ದು ನೆನಪಾಗಿ ಈಗ ಮಾತಾಡಲೋ ಬೇಡವೋ ಎಂಬ ದ್ವಂದ್ವಕ್ಕೆ ಸಿಕ್ಕಿ ಸುಮ್ಮನಾಗುವುದೇ ಸರಿ ಅಂತ ನಿರ್ಧರಿಸಿದ. ಮನೆಯ ಆರ್ಥಿಕ ಪರಿಸ್ಥಿತಿ ಬೆಳಗಾದರೆ ಬಂದಿರುವ ಪರೀಕ್ಷೆ ಹೀಗೆ ಈ ಗೊಂದಲದ ನಡುವೆ ಗೆಳೆಯನ ಕರಾಮತ್ತು ದೂರಾಯಿತು. ಈ ನಡುವೆ ಒಂದು ದಿನ ದಿವಾಕರ ಪರೀಕ್ಷಾ ಮುಗಸಿ ಮನೆಗೆ ಬರುತತಿರುವಾಗ ದಾರಿಯಲ್ಲಿ ಸಿಕ್ಕ ಅನಂತ ಜುಲುಮಿಯಿಂದಲೇ ಕಾಮತ್ ಹೊಟೇಲಿಗೆ ಕರಕೊಂಡು ಹೋಗಿ ದೋಸೆ ತಿನಿಸಿದ. ಹಾಗೆಯೇ ಶ್ರೀ ಎಲ್ಲಿ ಹೋಗಿರಬಹುದು ನಿನಗೆ ಸಂಶಯ ಬಂದಿತ್ತೇ ಒಂದು ವೇಳೆ ಬಂದಿದ್ದರೆ ಯಾಕೆ ಹೇಳಲಿಲ್ಲ ಇತ್ಯಾದಿ ಪ್ರಶ್ನೆಹಾಕಿದ. ದಿವಾಕರನಿಗೆ ತಿನ್ನುವ ದೋಸೆ ಗಂಟಲಿನಿಂದ ಇಳಿಯುವುದೇ ದುಸ್ತರವಾಗಿ ಅಲ್ಲಿಂದ ಪಾರಾದರೆ ಸಾಕು ಅಂತನ್ನಿಸಿ ಗೆಳೆಯನ ನಡುವಳಿಕೆ ತನಗೂ ಸರಿ ಬಂದಿಲ್ಲ. ಒಂದು ವೇಳೆ ಸಿಕ್ಕರೆ ಬುದ್ದಿ ಹೇಳುವುದಾಗಿ ಹೇಳಿದ. ಅನಂತ ಮತ್ತೆ ಮತ್ತೆ ಶ್ರೀ ಹೋಗಿರಬಹುದಾದ ಸ್ಥಳಗಳ ಬಗ್ಗೆ ಕೇಳಿದ. ತಾನು ಅಂದು ರಾತ್ರಿ ನೋಡಿದ್ದು ಹೇಳಿಬಿಡಲೇ ಇವನಿಗೆ ಅಂದುಕೊಂಡ ದಿವಾಕರ ಮಾತಾಡದೇ ಸುಮ್ಮನಾದ.

ಮುಂದಿನ ವಾರದಲ್ಲಿಯೇ ದಿನೂಮಾಮಾ ಬಂದಿದ್ದು ಪಿಂಪ್ರಿಗೆ ಹೋಗಲು ಬಸ್ಸು ಹತ್ತಿದ್ದು ಎಲ್ಲ ನಡೆದುಹೋಗಿ ಶ್ರೀ ಅನ್ನುವ ಜೀವದ ಗೆಳೆಯ ನೆನಪಿನಿಂದ ಮರೆಯಾಗಿ ಹೋದ.

*****

“ನಿನ್ನೊಳಗ ಪ್ರಶ್ನಿ ಅವ ಅಂತ ನಂಗ ಗೊತ್ತದ. ಮುಖ್ಯವಾಗಿ ಮೆಟ್ರಿಕ ಪರೀಕ್ಷಾ ಬರೀದ ಅಂಬುಜಾನ ಹಿಂದ ಓಡಿಹೋದದ್ದರ ಬಗ್ಗೆ ನಿಂಗ ಬ್ಯಾಸರ ಅದ ಹೌದಲ್ಲೋ…?” ಅವ ನೇರವಾಗಿ ವಿಷಯಕ್ಕ ಬಂದದ್ದು ದಿವಾಕರನಿಗೂ ಖುಶಿ ಆತು. ಅವನ ಆಮಂತ್ರಣದ ಮೇರೆಗೆ ಮನಿಗೆ ಹೋಗಿದ್ದ. ಗೆಳೆಯನ ಹೆಂಡತಿ ಮತ್ತು ಮಗಳ ಭೆಟ್ಟಿ ಆತು. ಮಗಳು ಮೆಟ್ರಿಕ ಪರೀಕ್ಷಾ ಬರಿಯುವವಳಿದ್ದಳು ಮುಂದಿನ ವರ್ಷ. ಶ್ರೀಯ ಹೆಂಡತಿಯೂ ಪ್ರೀತಿಯಿಂದ ಮಾತಾಡಿದಳು. ಕುಸುಗಲ ರಸ್ತೆಯಲ್ಲಿ ತಲೆಎತ್ತಿ ನಿಂತ ಗೃಹ ಸಂಕೀರ್ಣ ಅದು. ನಾಕು ಬ್ಲಾಕಿನದು. ಮನೆಯಲ್ಲಿ ಮಾತಾಡುವುದು ಇರಿಸುಮುರಿಸಾಗುತ್ತದೆ ಅಂತ ಹೇಳಿ ಬೇಸಮೆಂಟಿನ ಹಾಲ್ ಗೆ ಕರೆತಂದಿದ್ದ ಗೆಳೆಯ. ಹಾಲ್ ಖಾಲಿಇತ್ತು. ಗೆಳೆಯರಿಬ್ಬರು ಮೂಲೆಯಲ್ಲಿನ ಕುರ್ಚಿಗಳ ಮೇಲೆ ಎದಿರುಬದಿರಾಗಿ ಕುಳಿತರು.

“ನೋಡು ದಿವ್ಯಾ ಯಾವಾಗಲೂ ಎರಡು ಬಾಜು ಇರತಾವು ಒಂದು ಸಂಗತಿಗೆ. ಈಗ ನೀನು ಮತ್ತು ಇತರೇ ಗೊತ್ತಿದ್ದ ಮಂದಿಗೆ ಗೊತ್ತಿದ್ದು ನಾನು ಅಕಿ ಜೋಡಿ ಓಡಿ ಹೋದೆ. ಅದರಾಗ ಅಕಿ ಮದಿವಿ ಆದಾಕಿ. ಅಕಿ ಅತ್ತಿ ನನಗ ಇರಲಿಕ್ಕೆ ಆಶ್ರಯ ಕೊಟ್ಟಿದ್ದಳು. ಅವಾಗಿವಾಗ ಊಟಾನೂ ಹಾಕಿದ್ದಳು. ನಾ ಹಿಂಗ ಮಾಡಿ ದ್ರೋಹಾ ಮಾಡಿದೆ ಅಂತ . ” ಅವನ ಮಾತು ಭಾವನಾರಹಿತವಾಗಿದ್ದವು. ಮಗನಿಗೆ ಪಶ್ಚಾತ್ತಾಪ ಅನ್ನುವ ಪದದ ಅರ್ಥ ಗೊತ್ತದನೋ ಇಲ್ಲೋ ದಿವಾಕರ ಅಂದುಕೊಂಡ.

“ಅನಂತ ಅಂಬುಜಾಳ ಗಂಡ. ಅಂದ್ರ ಅಕಿಗೆ ತಾಳಿ ಕಟ್ಟಿದವ. ದುಡದು ತಂದು ಹಾಕತಿದ್ದ. ಅದೇನೋ ಮಂತ್ರ ಹೇಳ್ತಾರಲ್ಲ ಧರ್ಮೇಚ. ಅರ್ಥೇಚ. ಅದರಾಗ ಕಾಮೇಚ ಅನ್ನುವ ಶಬ್ದ ಬರತದ ಅದನ್ನ ಅವ ಪೂರೈಸತಿದ್ದಿಲ್ಲ. ಅವರ ದಾಂಪತ್ಯದ ಹಾಸಿಗಿಯೊಳಗ ಅಂಬುಜಾಗ ಸುಖ ಇರಲಿಲ್ಲ. ಅನಂತ ಕೈಲಾಗದವ ಇದ್ದ. ಆದರ ಕುಲಕರ್ಣಿ ವೈನಿ ಕಡೆ ಅನಿಸಿಕೊಳ್ಳುವಾಕಿ ಮಾತ್ರ ಅಂಬುಜಾ ಆಗಿದ್ದಳು. ಕುಲದೀಪಕ ಬೇಕಾಗಿದ್ದ. ಆದ್ರ ಬೀಜದೊಳಗ ಕಸುವು ಇರಲಿಲ್ಲ. ಡಾಕ್ಟರ ಕಡೆ ಬರಲಿಕ್ಕೆ ಅನಂತ ತಯಾರಿರಲಿಲ್ಲ. ಇತ್ಲಾಗ ಅವ್ವಗ ಖರೇ ಹೇಳುವ ಧೈರ್ಯನೂ ಇಲ್ಲ. ಅಂಬುಜಾ ಬೇಯತಿದ್ದಳು. ಬರಬರತ ಅಕಿ ಸಿಟ್ಟು ಕಿಚ್ಚಾತು. ಅವಾಗ ಅಕಿಗೆ ನಾ ಕಣ್ಣಿಗೆ ಬಿದ್ದೆ. ನಾನೂ ವಯಸ್ಸಿಗೆ ಬಂದವ ಆದ್ರ ಅಕಿ ಮದುವಿಯಾದಾಕಿ ವಯಸ್ಸಿನ್ಯಾಗೂ ದೊಡ್ಡಾಕಿ. ಆದ್ರ ಅಕಿಯೊಳಗ ಬೆಂಕಿ ಇತ್ತಲ್ಲ ಅದರ ಮುಂದ ಇವೆಲ್ಲ ಅಡಿತಡಿ ಮಂಕಾದವು. ನೀ ಅವತ್ತ ಬೆನ್ನ ಹತ್ತಿ ಬಂದಿ ನೋಡು ಅವಾಗ ನಂಗೂ ಹೆದರಿಕಿ ಆಗಿತ್ತು. ಅಕಿಗೆ ಹೇಳಿದೆ. ಅಕೀನ ಓಡಿ ಹೋಗುವ ವಿಚಾರ ಮಾಡಿದ್ದು. ಅಕಿ ಬಳಗದ ಸೋದರಮಾವನ ಮನಿ ಒಂದು ಬೆಳಗಾವಿಯೊಳಗ ಖಾಲಿ ಬಿದ್ದಿತ್ತು. ನಾವಿಬ್ಬರೂ ಅಲ್ಲಿ ಹೋಗಿ ಇದ್ದವಿ. ಎರಡು ತಿಂಗಳದ ಹೊತ್ತು ಅಲ್ಲಿ ಇದ್ದೆ. ಅಕಿ ಅವಾಗಿವಾಗ ತವರುಮನಿಗೆ ಹೋಗಿ ಬರತಿದ್ದಳು ಬರುವಾಗ ದುಡ್ಡು ತರತಿದ್ದಳು. ನನ್ನ ಜೀವದ ಸೆಲಿ ಅಕಿಯೊಳಗ ಮೂಡಿತು…. ” ಶ್ರೀ ಭಾವುಕನಾಗಿದ್ದ. ಹಳೆಯ ನೆನಪುಗಳ ಹಂಗ. ತೇಲಿಬಂದರ ಹೊಸಾ ಅನುಭೂತಿ ಕೊಡತಾವೇನೋ. . ದಿವಾಕರ ಅಂದುಕೊಂಡ.

“ದಿವ್ಯಾ ಅಕಿ ಖುಲ್ಲಮಖುಲ್ಲಾ ಅನಂತಗ ಹೇಳಿದಳು. ತನ್ನ ತವರುಮನಿಗೆ ಅವಗ ಕರಸಿಕೊಂಡು. ಅಕಿ ಜೀವನದಾಗ ನನ್ನ ಪಾತ್ರದ ಅವಧಿ ಮುಗದಿತ್ತು. ನಾ ಹುಬ್ಬಳ್ಳಿಗೆ ವಾಪಸಾದೆ. ಒಂದಾನೊಂದು ಕಾಲದಾಗ ಇಡೀ ಕಿಲ್ಲೆಯ ಢಾರ್ಲಿಂಗ ಆದಾವ ನಾನು . ಎಲ್ಲಾರೂ ಒಂದು ನಮೂನಿ ನೋಡತಿದ್ದರು. ವಿಲನ್ ಆಗಿದ್ದೆ. ಸ್ವತಃ ಹಡದ ತಾಯಿ ತಂದಿ ನನಗ ತುಚ್ಛಮಾಡಿದರು. ನಾ ಮುಂದಿನ ವರ್ಷ ಮೆಟ್ರಿಕ ಪರೀಕ್ಷಾಕ ಕೂತೆ ಪಾಸಾದೆ. ಪಿಯುಸಿ ಮುಗಸಿದೆ. ನಮ್ಮಪ್ಪ ಕೆಲಸದಲ್ಲಿರುವಾಗಲೇ ತೀರಿಕೊಂಡ. ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕತು. ಜೀವಮಾನವಿಡೀ ಅನುಭವಿಸಿದ ಅವ್ವನೂ ಹೋದಳು. ನಾ ಮದುವಿಯಾದೆ. ಮಗಳು ಹುಟ್ಟಿದಳು. ಅಂಬುಜಾ ಅವಾಗಿವಾಗ ಫೋನು ಮಾಡತಾಳ ಮಗನ ಸುದ್ದಿ ಹೇಳತಿರತಾಳ. ಮೊಮ್ಮಗ ಬಂದಾನ ಅಕಿಗೆ ಈಗ. ” ಅವನ ಮಾತಿನ ಸರಣಿ ತುಂಡಾಯಿತು. ಮಗಳು ಅಡಿಗೆ ತಯಾರಿ ಆದ ಬಗ್ಗೆ ಫೋನು ಮಾಡಿದಳು.

*****

ಅಡಿಗೆ ರುಚಿಯಾಗಿತ್ತು ಬಹಳ ದಿನಗಳ ನಂತರ ಧಾರವಾಡಿ ಅಡಿಗೆಯ ರುಚಿ ನೋಡಿದ ದಿವಾಕರ ತೇಗಿದ. ಊಟ ಮುಗದು ಶ್ರೀ ಎಲಿಅಡಿಕಿ ಮಡಿಚಿಕೊಟ್ಟ. ಇದ್ದಕ್ಕಿದ್ದಂತೆ ತಲೆಯಲ್ಲಿ ವಿಚಾರ ಬಂತು. ಶ್ರೀ ತನ್ನ ಹೆಂಡತಿಗೆ ಎಲ್ಲ ಹೇಳಿರಬಹುದೇ ತನ್ನ ಇತಿಹಾಸವನ್ನು. ಕೇಳಿಯೂ ಬಿಟ್ಟ. ಒಂದರೆಕ್ಷಣ ಸುಮ್ಮನಿದ್ದ ಶ್ರೀ “ಬಾ ನಿನಗೇನೋ ತೋರಸಬೇಕಾಗೇದ. ” ಅಂತ ಇವನ ಕೈ ಹಿಡದು ಮುಚ್ಚಿದ ರೂಮಿನ ಬಾಗಿಲು ತೆರೆದ. ಆ ರೂಮಿನ ತುಂಬ ಕಮಟು ವಾಸನೆ ಇತ್ತು. ಕಿಟಕಿಗೆ ಪರದೆ ಹಾಕಲಾಗಿತ್ತು. ಮಂಚದ ಮೇಲೆ ಅದಾರೋ ಮಲಗಿದ್ದರು. ಅದರ ಕೆಳಗಡೆ ಇದ್ದ ಬೆಡಪ್ಯಾನು ಸುತ್ತಲೂ ಹರಡಿದ ಔಷಧದ ವಾಸನೆ ಕತೆ ಹೇಳಿತ್ತು. ಮಲಗಿದರು ಶ್ರೀ ಬಂದ ದಿಕ್ಕಿಗೆ ಕಣ್ಣು ಹೊರಳಿಸಿದರು.

“ಯಾರು ಗುರುತಾಗತದೇನು. ಇವಾ. ” ಶ್ರೀ ಅವರನ್ನುದ್ದೇಶಿಸಿ ಕೇಳಿದ. ದಿವಾಕರನಿಗೆ ಅಲ್ಲಿ ಆ ರೀತಿಯಲ್ಲಿ ಮಲಗಿದವಳು ಹೆಂಗಸು ಅಂತ ಅವಾಗ ಗೊತ್ತಾತು. ಶ್ರೀ ಯ ಪ್ರಶ್ನೆಗೆ ಉತ್ತರವಾಗಿ ಆ ಹೆಂಗಸಿನ ಮುಖ ಒಂದರೆಕ್ಷಣ ಮಿನುಗಿದಂಗಾತು.
“ ನೀ ಗುರುತು ಹಿಡದೇನಲೇ ಇಕಿ ಯಾರು ಅಂತ . ” ಶ್ರೀಯ ಪ್ರಶ್ನೆಗೆ ನಕಾರಾತ್ಮಕವಾಗಿ ತಲೆ ಆಡಿಸಿದ ದಿವಾಕರ.
“ಸರು ಮಾವುಶಿ. ಅವತ್ತು ಹೇಳಿದೆನಲ್ಲ ಇಡೀ ಕಿಲ್ಲೆ ಹಂಗ ನನ್ನ ಅಪ್ಪ ಅವ್ವ ಸಹ ತಿರಸ್ಕಾರಮಾಡಿದರು. ನಮ್ಮಪ್ಪ ನನಗ ಮನಿಯಿಂದ ಹೊರಗ ಹಾಕಾವಿದ್ದ. ಆದ್ರ ಇಕಿ ಠಾಮಪಣೆ ನನಗ ಬೆಂಬಲ ಸೂಚಿಸಿದಳು. ಹುಡುಗ ಜಾರಿಬಿದ್ದಾನ ಖರೆ ಆದ್ರ ಸುಧಾರಿಸಿಕೊಳ್ಳಿಕ್ಕೆ ಒಂದು ಅವಕಾಶ ಕೊಡಲೇ ಬೇಕು ಅಂತ ಅಪ್ಪಗ ಜೋರು ಮಾಡಿದಳು. ಅಪ್ಪ ಕರಗಿದ ಇಕಿ ಮಾತಿಗೆ. ವಿಚಿತ್ರ ನೋಡು ಇಕಿ ಸೇವಾ ಮಾಡಬೇಕು ಅಂತ ಬಂದಳು. ನಮ್ಮಪ್ಪನ ಕಾಮಕ್ಕ ಬಲಿಯಾದಳು. ಅಕಿದು ತಪ್ಪಿತ್ತೋ ಇಲ್ಲೋ ನನಗೂ ಗೊತ್ತಿಲ್ಲ. ಸಣ್ಣಾವಿದ್ದಾಗ ಇಕಿನ ಕಂಡರ ದ್ವೇಶಿಸತಿದ್ದೆ. ನಮ್ಮ ಸಂಸಾರದಾಗ ಹುಳಿ ಹಿಂಡಿದಾಕಿ ಇಕಿ ಇಕಿನ್ನ ಕೊಂದುಹಾಕಬೇಕು ಅಂತ ಬಹಳ ಸಲ ಅಂದುಕೊಮಡಿದ್ದೆ. ಆದರ ಈಗ ನೋಡು ಇಕೀದು ಎಲ್ಲಾ ರೀತಿಯಿಂದ ಸೇವಾ ನಾನ ಮಾಡತೇನಿ. ಒಂಥರಾ ಋಣಸಂದಾಯ ಮಾಡತೇನಿ… ಯಾಕ ಹಿಂಗ ಅಂತ ನೀ ಕೇಳಿದರ ನಂಗೂ ಗೊತ್ತಿಲ್ಲ. ಅಕಿಗೂ ದಿನಾ ಮುಗೀಲಿಕ್ಕೆ ಬಂದಾವ…ಸಾಯುವ ಮೊದಲು ನೆಮ್ಮದಿ ಕೊಡುವ ಪ್ರಯತ್ನ ಇದು”

*****

ರಾತ್ರಿ ಸ್ಲೀಪರ ಕೋಚಿನ ಆರಾಮದಾಗೂ ದಿವಾಕರ ನಿದ್ದಿಯಿಲ್ಲದ ಹೊರಳಾಡತಿದ್ದ. ಶ್ರೀ ಮತ್ತು ಅವನ ಈ ಬದಲಾವಣೆ ತನ್ನಿಂದ ಅರಗಿಸಿಕೊಳ್ಳಲಾಗಿಲ್ಲ ಈ ಭಾವ ಕಾಡುತ್ತಿತ್ತು. ಮಧ್ಯಾಹ್ನ ಶ್ರೀಯ ಹೆಂಡತಿ ಹೇಳಿದ ಮಾತು ನೆನಪಾತು.
“ಭಾವುಜಿ ಎಲ್ಲಾರ ಜೀವನಾನೂ ತೆರೆದಿಟ್ಟ ಪುಸ್ತಕಾ ಇರೂದಿಲ್ಲ. ಕೆಲವು ಪುಟ ಮುಚ್ಚಿಟ್ಟಿರತಾರ. ಆದರ ನಿಮ್ಮ ಗೆಳ್ಯಾ ಹಂಗಿಲ್ಲ. ಮದುವಿ ಮೊದಲು ಅಂಬುಜಾಳ ಬಗ್ಗೆ ಹೇಳಿಕೊಂಡರು. ಮುನುಶ್ಯ ಪ್ರಾಮಾಣಿಕ ಅನಿಸಿದ. ಒಪ್ಪಿಕೊಂಡೆ. ನನ್ನ ನಿರ್ಣಯದ ಬಗ್ಗೆ ಪಶ್ಚಾತ್ತಾಪ ಇಲ್ಲ…”
ನಾ ಬಿಟ್ಟು ಹೋದ ಅಂದಿನ ಶ್ರೀಗೂ ಇಂದಿನ ಈ ಶ್ರೀಗೂ ಬಹಳ ಫರಕಿದೆ. ಬಹುಷಃ ನಾನು ಊಹಿಸದ ಉತ್ತುಂಗದಲ್ಲಿದ್ದಾನೆ ಅವ. ಇವನ ಬಗ್ಗೆ ಇಷ್ಟು ದಿನ ಮೂಡಿಸಿಕೊಂಡ ಚಿತ್ರದ ರೂಪುರೇಖೆ ಬೇರೆಯೇ ಇತ್ತು. ಈಗಿನ ಈ ಶ್ರೀ ಬೇರೆಯೇ, ಇಷ್ಟಾಗಿಯೂ ಶ್ರೀ ಯ ವ್ಯಕ್ತಿತ್ವ ಹಿಡಿತಕ್ಕೆ ಸಿಲುಕಿತೇ…ಪ್ರಶ್ನೆ ಮೂಡಿತು. ಜೊತೆಗೆ ನಕಾರವೂ ಎದುರಾತು.

-ಉಮೇಶ ದೇಸಾಯಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *