ಮುಗಿಲಿನ ತುಂಬ ಮುತ್ತಿನ ಬೀಜ: ಸಚೇತನ

ನೀಲ ಪಟದ ಮೇಲೆ ಚಿತ್ರಗಳು ಸಾಕಷ್ಟಿದ್ದರೂ ಕೆಲವೊಮ್ಮೆ ದಟ್ಟ ವಿಷಾದವೊಂದು ತೆಳ್ಳಗೆ ಆವರಿಸಿರುತ್ತದೆ. ಅಂಕಿಯ ಲೆಕ್ಕಕೆ ಸಿಗದ ಚುಕ್ಕಿಗಳನ್ನೆಲ್ಲ  ಕಪ್ಪು ಮೋಡ ಮುಚ್ಚಿಟ್ಟಿರುತ್ತದೆ. ಆಕಾಶ ಕಪ್ಪಲ್ಲ, ಕಡು ನೀಲ, ಚುಕ್ಕಿ  ಖಾಲಿಯಾಗದ ಕಾಲ.  

ಸು ರಂ ಎಕ್ಕುಂಡಿ ಕವನವೊಂದರ ಕೆಲವು ಸಾಲುಗಳು :

ಮುಗಿಲಿನ ತುಂಬ ಮುತ್ತಿನ ಬೀಜ 
ಬಿತ್ತುವವರೇ ಇಲ್ಲ 
ಬಣ್ಣದ ಲೋಕದ ಬೆಳಕಿನ ತೇರ 
ಎಳೆಯುವವರೇ ಇಲ್ಲ 
ನಂದನವನದ ರೆಕ್ಕೆಯ ಕುದುರೆಯ 
ಹತ್ತುವವರೆ ಇಲ್ಲ 
ಕಡಲಿನ ಭಗವದ್ಗೀತೆಗೆ ಭಾಷ್ಯವ 
ಬರೆಯುವವರೇ ಇಲ್ಲ 
ನಮಗೂ ನಿಮಗೂ ಹೃದಯದ ಬಾಗಿಲು 
ತೆರೆಯುವವರೇ ಇಲ್ಲ 

**      **     **     **     **     ** 

 ನಗುವ ಕಣ್ಣಿನ, ಚುರುಕು ಮುಖದ, ಕನಸಿನ ಹುಡುಗ ಗ್ಯುಡೋ ನನ್ನು ನೋಡಬೇಕು ನೀವು. ಈ  ಜ್ಯೂ  ಯುವಕನಲ್ಲಿ ಅಸಾಧ್ಯ ಜೀವನದ ಪ್ರೀತಿಯಿದೆ.  ಜೀವನವನ್ನು ಮಾತ್ರವಲ್ಲ ಅವನ ಪ್ರೀತಿಯ ಹಿತದ ಮೋಡ  ಸುಂದರ ಹುಡುಗಿ, ಅಧ್ಯಾಪಕಿ ಡೋರಾಳನ್ನು ತಲುಪಿದೆ.  ಡೋರಾಳನ್ನು ಒಲಿಸಲು ಗ್ಯುಡೋ  ಮಾಡುವ ಯತ್ನ ಆಚೆ ಬೀದಿಯ ಹುಡುಗಿಯನ್ನು ಒಲಿಸಲು ನಮ್ಮವನೇ ಹುಡುಗ ಮಾಡಿದ ಪ್ರಯತ್ನದಂತೆ ಕಾಣಿಸಿದರೆ  ಅಚ್ಚರಿಯಲ್ಲ. ಇಟಲಿಯಲ್ಲಿ  ಸರ್ಕಾರಿ ಕೆಲಸದಲ್ಲಿರುವ ಗ್ಯುಡೋ ನ ಒಲವಿನ ಪ್ರಯತ್ನ ವ್ಯರ್ಥವಾಗಿಲ್ಲ,  ಡೋರಾ ಎನ್ನುವ ಹುಡುಗಿ ಗ್ಯುಡೋ  ಎನ್ನುವ ಹುಡುಗನ ಜೊತೆಯಾಗಿದ್ದಾಳೆ. ದಿನಗಳು ಸುಂದರವಾಗಿವೆ. ಗ್ಯುಡೊ  ಒಂದು ಪುಸ್ತಕದ ಅಂಗಡಿ ಇಟ್ಟಿದ್ದಾನೆ, ಪುಸ್ತಕಗಳ ಮಧ್ಯೆ, ಪ್ರೀತಿಯ ಮಧ್ಯೆ, ಕನಸಿನ ಮಧ್ಯೆ, ಕವನಗಳ ಮಧ್ಯೆ  ಮಗರಾಯನೊಬ್ಬ ಆಟವಾಡುತ್ತಿದ್ದಾನೆ. 

ಅದು ೧೯೩೯ ರ ಕಾಲ. ಎಲ್ಲೆಡೆ ಹಿಟ್ಲರ್ ನ ಜರ್ಮನಿ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಭೂಮಿಯನ್ನು, ಜನರನ್ನು, ಬದುಕನ್ನು, ತತ್ವಗಳನ್ನು, ಹಿನ್ನೆಲೆಗಳನ್ನು, ಇತಿಹಾಸಗಳನ್ನು, ಸಾಹಿತ್ಯವನ್ನು ಕಬಳಿಸಿ ನುಂಗಿ ಹಾಕುತ್ತಿದೆ.  ಕರಿ ನೆರಳಿನ ಭೂತ ಇಟಲಿಗೂ ಕಾಲಿಟ್ಟು ಗಹಗಹಿಸುತ್ತಿದೆ.  ಹಿಟ್ಲರ್ ನ ಜರ್ಮನ್ ಸೈನಿಕರು ಜ್ಯೂ ಗಳನ್ನು ಹಿಡಿದೆಳೆದು ನಾಜಿ ಕ್ಯಾಂಪ್ ಗೆ ಹಾಕುತ್ತಿದ್ದಾರೆ.  ಗ್ಯುಡೊನನ್ನು ಸಹ ಕ್ಯಾಂಪ್ ನೆಡೆಗೆ ತೆರೆಳುವ ರೈಲಿನಲ್ಲಿ ಹತ್ತಿಸಲಾಗಿದೆ. ಕ್ಯಾಂಪ್ ನಲ್ಲಿ ಡೋರಾ ಒಂದು ಕಡೆ, ಗ್ಯುಡೊ ಮತ್ತು ಅವನ ಮಗ ಒಂದು ಕಡೆ. ಪುಟ್ಟ ಬಾಲಕನನ್ನು ನಾಜಿ ಕಣ್ಣಿನ ಕರಾಳ ನೋಟದಿಂದ ತಪ್ಪಿಸಲು, ತಮ್ಮ ದುಸ್ಥಿತಿಯನ್ನು ಮುಚ್ಚಿಟ್ಟು ಧನಾತ್ಮಕ ಮನೋಭಾವದಿಂದ ಬಾಲಕನ್ನು ಬೆಳೆಸಲು ಗ್ಯುಡೊ  ಪ್ರಯತ್ನಪಡುತ್ತಿದ್ದಾನೆ.

 ಕ್ಯಾಂಪ್  ಜೀವನ ಒಂದು ಸಂಕೀರ್ಣ ಆಟದ ಭಾಗವೆಂದು,  ಈ ಆಟದಲ್ಲಿ ಗೆಲ್ಲಬೇಕಾದರೆ ನಾವು ಚಾಲೆಂಜ್ ಗಳನ್ನು ಗೆಲ್ಲಬೇಕು ಎಂದು ಬಾಲಕನಿಗೆ ಗ್ಯುಡೊ  ತಿಳಿಸುತ್ತಿದ್ದಾನೆ. ಗ್ಯುಡೊ  ಇಡಿ ಕ್ಯಾಂಪ್ ನನ್ನು ಆಟದ ಮೈದಾನವಾಗಿ ಕಟ್ಟಿಕೊಟ್ಟಿದ್ದಾನೆ. ಪ್ರತಿ  ಕಾರ್ಯವನ್ನು  ಮುಗಿಸಿದಾಗಲೂ ಅವರಿಗೆ ಒಂದಷ್ಟು ಅಂಕಗಳು ದೊರೆಯುತ್ತವೆ, ಮತ್ತು ಯಾರು ೧೦೦೦ ಅಂಕಗಳನ್ನು ಪೇರಿಸುತ್ತಾರೋ ಅವರಿಗೆ ಬಹುಮಾನ ಎಂದು ಗ್ಯುಡೊ  ಬಾಲಕ ಜೋಶುವಾಗೆ ಹೇಳುತ್ತಿದ್ದಾನೆ. ಪುಟ್ಟ ಬಾಲಕನ  ಮುಗ್ಧ ಕಣ್ಣುಗಳು ಖುಶಿಯಿಂದ ಹೊಳೆಯುತ್ತಿವೆ, ಬಹುಮಾನ ಗೆಲ್ಲುವ ಆಸೆ ಬಾಲಕನಿಗೆ. ಬದುಕಿಸುವ ಆಸೆ ಅಪ್ಪನಿಗೆ.  ಹಸಿವಾಗಿದೆ ಎಂದು ಅತ್ತರೆ, ಅಮ್ಮ ಬೇಕು ಎಂದು ಹಟ ಮಾಡಿದರೆ, ಗಲಾಟೆ ಮಾಡಿದರೆ ಅಂಕಗಳನ್ನು ಕಡಿಮೆ ಮಾಡುತ್ತಾರೆ.  ಅಲ್ಲದೇ ಕ್ಯಾಂಪ್ ನ ಕಾವಲುಗಾರರಿಂದ ಬಚ್ಚಿಟ್ಟು ಕೊಂಡವರಿಗೆ ಹೆಚ್ಚಿನ ಅಂಕ ಎಂದು ಜೋಶುವಾ ನಂಬಿದ್ದಾನೆ.   ಅಪ್ಪ ಮಗ ಇಬ್ಬರ ಲೋಕದಲ್ಲೂ ಗೆಲ್ಲುವ ಕನಸು. ಅಪ್ಪನಿಗೆ ಸೋಲು ಮಗನನ್ನು ದೂರ ಮಾಡುತ್ತದೆ, ಮಗನಿಗೆ ದೊಡ್ದ ಬಹುಮಾನ ತಪ್ಪುತ್ತದೆ ಎನ್ನ್ನುವ ಭಯ . ಹಸುಳೆಯ ಕಣ್ಣಿನಲ್ಲಿ  ಭಯವನ್ನು ದೂರ ಮಾಡುವ ಪ್ರಯತ್ನ. ಕ್ಯಾಂಪ್ ನ ಬಗ್ಗೆ ಅದರ ನಿಯಮಗಳ ಬಗ್ಗೆ ಹೇಳುವಾಗ ಆಟದ ನಿಯಮಗಳಾಗಿ ಅವನ್ನು ಗ್ಯುಡೊ   ಹೇಳುತ್ತಿದ್ದಾನೆ.

ಕಾವಲುಗಾರರು ಸಹ ಆ ಆಟದಲ್ಲಿ ಭಾಗವಹಿಸಿದ್ದಾರೆ,  ಹೀಗಾಗಿ ಅವರಿಗೂ ಕಾಣಿಸದ್ಂತೆ  ಹುಷಾರಾಗಿ ಇರಬೇಕು ಎನ್ನುವ ನಂಬಿಕೆ ಜೋಶುವಾಗೆ.  ಪ್ರತಿ ಬಾರಿಯೂ ಕ್ಯಾಂಪ್ ನಿಂದ ಮಕ್ಕಳನ್ನು ಹೊತ್ತೊಯ್ದಾಗ  ಜೋಶುವ, ಅವರೆಲ್ಲ ಆಟದಲ್ಲಿ ಗೆಲ್ಲಲು ಅಡಗಿದ್ದಾರೆ ಎಂದೇ ನಂಬಿದ್ದಾನೆ. ಜೋಶುವಾಗೆ ತಾವೇ ಗೆಲ್ಲತ್ತೇವೆ ಎನ್ನುವ ನಂಬಿಕೆ.  ಶಿಬಿರದ ಸಾವು, ನೋವು, ಅನಾರೋಗ್ಯ, ಇದ್ದಕ್ಕಿದ್ದಂತೆ ಕಾಣೆಯಾಗುವ ಸುತ್ತಲಿನವರು, ಹಸಿವು, ಬಾಯಾರಿಕೆ ಇವೆಲ್ಲವುಗಳ ನಡುವೆಯೂ ಜೋಶುವಾ ಆಟದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ.  ಗ್ಯುಡೋನ ಅದ್ಭುತ ಅಭಿನಯದ ಅನುನಯದ ಮಾತು ಮತ್ತು ಬಾಲಕನ ಮುಗ್ಧ ಮನಸ್ಸು. ಅರಿವಿಲ್ಲದ ಕಂದಮ್ಮ, ಜ್ಯೂ ಎನ್ನುವ ಹಣೆಪಟ್ಟಿ, ತತ್ವ ಆದರ್ಶ ನಂಬಿಕೆ ಎನ್ನುವ ಮಾತು ಅಸಹ್ಯವಾಗಿ ಕಾಣುತ್ತಿದೆ ನೋಡುಗರಿಗೆ. ಎಲ್ಲ ವೈರುಧ್ಯಗಳ ಮಧ್ಯೆ ಗ್ಯೂಡೋ ನ ಜೀವನ ಪ್ರೀತಿ, ಅಪ್ಪ ಮಗನ ಮಧ್ಯೆಯ ಮಧುರ ಬಾಂಧವ್ಯ  ಕ್ಯಾಂಪ್  ನ ಎಲ್ಲ ನೋವುಗಳನ್ನು ದಾಟಿ ಕಾಡುತ್ತದೆ. 

It's a Wonderful Life ೧೯೪೬ ರಲ್ಲಿ ಬಿಡುಗಡೆಯಾದ ಸಿನಿಮಾ. ಸಿನಿಮಾದ ನಾಯಕ ಜಾರ್ಜ್ ಬೈಲಿ ತನ್ನ ಎಲ್ಲ ವೈಯಕ್ತಿಕ ಆಸೆಗಳನ್ನು ಬಿಟ್ಟು ಜನರಿಗಾಗಿ ಬದುಕಿದ್ದಾನೆ. ಆದರೆ ಕಹಿ ಘಟನೆಗಳು ಅವನ ಮನಸ್ಸಿಗೆ ಆಘಾತವನ್ನು ತಂದಿವೆ. ಕ್ರಿಸ್ಮಸ್ ಹಿಂದಿನ ಸಂಜೆ ಬೈಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಈ ಸಾವು ಅವನನ್ನು ಅವನ ರಕ್ಷಕ ಏಜೆಂಲ್  ಆದ ಕ್ಲಾರೆನ್ಸ್ ನನ್ನು  ತಲುಪುವಂತೆ ಮಾಡಿದೆ.  ಜೊತೆಯಾಗಿ ಕ್ಲಾರೆನ್ಸ್ , ಬೈಲಿಯ  ಜೀವನ ಹೇಗೆಲ್ಲ ಜನರನ್ನು ತಲುಪಿದೆ ಎನ್ನುವದನ್ನು ತೋರಿಸುತ್ತಿದ್ದನೆ. ಬೈಲಿ ಎನ್ನ್ನುವ ಮನುಷ್ಯ ಯಾವತ್ತಿಗೂ ಹುಟ್ಟದಿದ್ದರೆ ನಡೆದಿರುತ್ತಿದ್ದ  ತೊಂದರೆಗಳನ್ನು ವಿವರಿಸುತ್ತಿದ್ದಾನೆ.  ಎಲ್ಲರ ಬದುಕು ಅಮೂಲ್ಯ. 

ಇವೆರಡು ಸಿನಿಮಾಗಳ ಬಗ್ಗೆ ಬರೆಯುವದು ಅಷ್ಟು ಸಮಂಜಸವಲ್ಲ. ಬರವಣಿಗೆಯಲ್ಲಿ  ಕಟ್ಟಿಕೊಡಲಾಗದ ಅದ್ಭುತ ಜೀವನೋತ್ಸಾಹವನ್ನು ಇವೆರಡು ಸಿನಿಮಾಗಳು ತುಂಬುತ್ತವೆ. ಸು ರಂ ಎಕ್ಕುಂಡಿ  ಅವರ ಕವನವನ್ನು ಒಮ್ಮೆ ಓದಿ ಈ ಎರಡೂ ಸಿನಿಮಾ ನೋಡಿ. ಅರ್ಥವಾಗದ ಸತ್ಯ ಹೊಳೆದು ನಿಂತಿತು. 

ಇಂತಿ, 
ಸಚೇತನ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x