ಮುಗಿಯಿತೇ ಜವಾಬ್ದಾರಿ??: ಸಹನಾ ಪ್ರಸಾದ್

ಅಯ್ಯೋ, ನಿಮಗೇನ್ರೀ, ಮಗಳ ಮದುವೆ ಆಯ್ತು, ಮಗ ಕೈಗೆ ಬಂದ. ಇನ್ನು ನಿಮ್ಗೆ ಯೋಚನೆ ಇಲ್ಲ. ಆರಾಮವಾಗಿ ಓಡಾಡಿಕೊಂಡಿರಬಹುದು. ಅಸೂಯೆ, ಮೆಚ್ಚುಗೆ ತುಂಬಿದ ಈ ತರಹದ ಮಾತುಗಳು ನನಗೆ, ಮಗಳ ಮದುವೆ ಮಾಡಿ ನಾ ಅತ್ತೆಯಾದ ಮೇಲೆ ಮಾಮೂಲಾಗಿಬಿಟ್ಟಿದೆ. ಹೌದಲ್ವಾ, ಜನ ಸಾಮಾನ್ಯರ ಕನಸಿನ ಪ್ರಕಾರ ಬದುಕು ಸಾಗಿದಾಗ ಜನ ಯೋಚಿಸೋದು ಸರೀನೆ. ಆದರೆ ಇಷ್ಟಕ್ಕೆ ಹೆಣ್ಣುಮಕ್ಕಳ ಜವಾಬ್ದಾರಿ ಮುಗಿಯುತ್ತವೆಯೇ?

ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿಗೂ ಜವಾಬ್ದಾರಿ ಅನ್ನುವುದು ಮುಗೀತು, ಇನ್ನು ಮುಂದೆ ನಿರಾಳ ಅನ್ನುವುದು ಬಹಳ ಕಡಿಮೆ ಜನರಿಗೆ ಸಿಗುವಂತಹುದ್ದು. ಯಾವುದರಲ್ಲಿ ಜವಾಬ್ದಾರಿ ಮುಗಿಯಿತು? ನಿವೃತ್ತಿಯಾದ ಮೇಲೆ ವೃತ್ತಿಯಲ್ಲಿ ಮುಗಿಯಿತು ಅನ್ನಬಹುದು. ಇನ್ನು ಮಕ್ಕಳು ದೊಡ್ಡವರಾದ ಮೇಲೆ ಕಡಿಮೆಯಾಯಿತು ಅನ್ನಬಹುದು. ಹೆಂಗಸರಿಗೆ ಕಡಿಮೆ ಆಯ್ತು, ಮುಗೀತು ಅನ್ನುವುದು ಸ್ವಲ್ಪ ಕಷ್ಟವೇ.

ಮಕ್ಕಳ ಮದುವೆ ಮಾಡಿ ಕೈ ತೊಳೆದುಕೊಳ್ಳಲು ಆಗುತ್ತದೆಯೇ? ನಾವು ಇರುವವರೆಗೂ ನಮ್ಮ ಜೀವನದ ಅಭಿವಾಜ್ಯ ಅಂಗ ಮಕ್ಕಳು. ನಮ್ಮ ಜತೆ ಇಲ್ಲದೆ ಹತ್ತಿರದಲ್ಲಿ ಇದ್ದರೆ, ಅವರ ಜೀವನದಲ್ಲಿ ನಾವು ನಮಗರಿವಿಲ್ಲದಂತೆ ತಲೆ ತೂರಿಸಿರುತ್ತೇವೆ. ದೂರದಲ್ಲಿದ್ದರೆ, ಅವರ ಪಾಡಿಗೆ ಅವರನ್ನು ಬಿಡಲು ಸಾಧ್ಯವಾಗದೆ ಪದೇ ಪದೇ ಕರೆ ಮಾಡಿ ವಿಚಾರಿಸುತ್ತಿರುತ್ತೇವೆ. ಮೊಮ್ಮಕ್ಕಳು ಬಂದ ಮೇಲೆ ಅವರ ಸುತ್ತ ಹೊಸ ಪ್ರಪಂಚ ಕಟ್ಟಿಕೊಂಡುಬಿಡುತ್ತೇವೆ. ನಮಗಾಗಿ ಎಂದು ನಿವೃತ್ತ ಜೀವನವನ್ನು ಮೀಸಲಾಗಿ ಇಡುವುದು ಬಹಳ ಕಡಿಮೆ ಜನ.

ಚಿಕ್ಕವಳಾಗಿದ್ದಾಗ, ನಮ್ಮ ಜಮನಾದಲ್ಲಿ, ಮದುವೆ ಆಗೋದೇ ಜೀವನದ ಪರಮ ಗುರಿಯಾಗಿತ್ತು. ಯಾರ ಬಾಯಿಗೂ ಬೀಳದೆ, ಜೋಪಾನವಾಗಿ ಗಂಡನ ಮನೆ ಸೇರಿಸುವುದೇ ಹೆಣ್ಣು ಹೆತ್ತವರ ಆಸೆ. ಬಹುಶಃ ಯಾವ ರೀತಿಯ ಕಷ್ಟಗಳೂ ಬರದೆ ಇದ್ದಲ್ಲಿ, ಎಲ್ಲ ಸುಂದರವಾಗಿ ಇದ್ದಿದ್ದರೆ, ಬರೀ ಗಂಡ, ಮಕ್ಕಳು, ಅಡುಗೆ, ಮನೆವಾರ್ತೆ ಇಷ್ಟೇ ಬದುಕಾಗಿಬಿಡ್ತಿತ್ತೋ ಏನೋ. ಇನ್ನು ಚಿಕ್ಕವಳು,ಸ್ವಲ್ಪ ದಿನ ಕೆಲಸಕ್ಕೆ ಹೋಗಲಿ, ಮುಂದೆ ಓದಲಿ ಎಂದು ಮನೆಯವರು ಯೋಚಿಸದಿದ್ದರೆ, ಇವತ್ತು ಖಾಲಿ ಮನೆ, ಖಾಲಿ ಮನ ಹೊತ್ತು ಇರಬೇಕಿತ್ತು. ಮೂರು ಹೊತ್ತು ಯಜಮಾನರು ಮುದ್ದುಗರೀತ ಮುಂದೆ ಕೂತಿದ್ದರೆ ಯಾವ ಹವ್ಯಾಸವನ್ನೂ ಬೆಳೆಸಿಕೊಳ್ಳದೆ ಇದ್ದುಬಿಡುತ್ತಿದ್ದೆನೇನೋ. ಒಬ್ಬರ ಸಹಾಯ ನಿರೀಕ್ಷಿಸುವುದು ತಪ್ಪು, ನಮ್ಮ ಕೆಲಸ ನಾವು ಮಾಡುತ್ತಾ ಹೋಗಬೇಕು ಎಂದು ಅರಿವು ಮೂಡದಿದ್ದರೆ ಮನೆಕೆಲಸ, ಹೊರಗಿನ ಕೆಲಸ, ಮಕ್ಕಳ ಸಂಭಾಳಿಸೋದು…ಎಲ್ಲ ಕಲಿಯುತ್ತಲೇ ಇರಲಿಲ್ಲ.

ಈಗ ಮಕ್ಕಳು ಅವರ ಕಾಲ ಮೇಲೆ ನಿಲ್ಲುವಷ್ಟು ಪ್ರಭುದ್ಧರಾಗಿದ್ದಾರೆ. ಒಳ್ಳೆ ಪ್ರಜೆಗಳನ್ನು ಸಮಾಜಕ್ಕೆ ಕೊಟ್ಟಿದೀವಿ ಅನ್ನುವ ತೃಪ್ತಿ ಇದೆ. ಇನ್ನು ಬರೀ ಟೀವಿ, ಕಾಡು ಹರಟೆ, ಸ್ವಲ್ಪ ಕೆಲಸ ಇಷ್ಟು ಸಾಕೆ, ಎನ್ನುವ ಯೋಚನೆ ಬರುವುದಕ್ಕೆ ಶುರುವಾಗಿದೆ. ಗಂಡ ಅವರ ಪ್ರಪಂಚದಲ್ಲಿ ವ್ಯಸ್ಥರು. ಮುಂಚಿನ ಹಾಗೆ ಮಾತಾಡಲು ವಿಷಯಗಳೂ ಇಲ್ಲ. ಹೊರಹೋಗುವುದಕ್ಕೆ ಈ ನಗರದ ಟ್ರಾಫಿಕ್ ಬಗ್ಗೆ ಯೋಚಿಸದರೆ ಸಾಕು, ಆಸೆಯ ಬಲೂನ್ ಪಟ್ಟನೆ ಒಡೆದು ಚೂರಾಗುತ್ತದೆ. ಕಲಿತ ವಿದ್ಯೆ, ಮಾಡುತ್ತಿರುವ ಉದ್ಯೋಗ ಬೆಳಗಿನ ಹೊತ್ತು ಜತೆಗಿದ್ದರೆ, ಸಂಜೆ ಸುಸ್ತು, ಏಕಾಂಗಿತನ ಕಾಡತೊಡಗುತ್ತದೆ. ಒಂದು ಕಾಲದಲ್ಲಿ ಒಂದು ನಿಮಿಷ ಸಿಕ್ಕರೆ ಸಾಕು ಅನ್ನುತ್ತಾ ಇದ್ದವಳಿಗೆ ಈಗ ಇಡೀ ದಿನ ಫ್ರೀ ಸಿಕ್ಕು ಕಂಗಾಲಾಗುವಂತಾಗಿದೆ.

ಮಾಡಲು ಕೆಲಸವಿಲ್ಲ ಅಂತಲ್ಲ. ಬೇಕಾದಷ್ಟು ಇವೆ. ಮನೆ ನೀಟಾಗಿಡುವ, ಧೂಳು ತೆಗೆಯುವ, ಬೀರು ಜೋಡಿಸುವ, ಏನೂ ಇಲ್ಲದಿದ್ದರೆ, ನನ್ನ ಗೆಳತಿ ಹೇಳಿದಂತೆ “ಚಟ್ನಿ ಪುಡಿಗೆ” ಹುರಿಯುವ ಕೆಲಸವಂತೂ ಇದ್ದೇ ಇರುತ್ತೆ. ಆದರೆ ಅದನ್ನೆಲ್ಲ ಮಾಡಲು ಮನಸ್ಸು ಬಹಳಷ್ಟು ಸಾರಿ ಒಪ್ಪುವುದೇ ಇಲ್ಲ. ಮುಂಚಿನ ಹಾಗೆ ಮನೆಯನ್ನು ಫಳ ಫಳ ಇಡುವ ಹುಮ್ಮಸ್ಸು ಕಡಿಮೆಯಾಗಿದೆ. ಸೋಫಾ ಕವರ್ ಮೇಲೆ ಗೆರೆ ಇರಬಾರದು, ಎಲ್ಲಾ ಸಾಮಾನುಗಳೂ ಅದರದರ ಜಾಗಕ್ಕೆ ಹೋಗಿರಬೇಕು ಅನ್ನುವ ಕಟ್ಟುಪಾಡುಗಳೆಲ್ಲ ಮನಸ್ಸಿನಿಂದ ಕಳಚಿವೆ. ಸ್ವಲ್ಪ ನೀಟಾಗಿದ್ರೆ ಸಾಕು ಎನ್ನುವಷ್ಟರ ಮಟ್ಟಿಗೆ ತಲುಪಿದೆ.

ಈಗ ಸಮಯ ಕಳೆಯುವುದು ಹೇಗೆ ಅಂತ ಯೋಚಿಸಲು ಸಮಯ ವ್ಯಯ ಮಾಡಬೇಕಾಗಿ ಬಂದಿರುವಾಗ, ಸರಿಯಾಗಿ ಯೋಚಿಸುವುದು ಬಹಳ ಮುಖ್ಯ. ನಮ್ಮ ಅಜ್ಜಿ, ತಾಯಂದರಿಗೆ ಇದ್ದಷ್ಟು ಜನ ನಮಗಿಲ್ಲ. ಆಗೆಲ್ಲ ದೊಡ್ಡ ದೊಡ್ಡ ಪರಿವಾರಗಳು, ಮನೆ ತುಂಬಾ ಜನ, ಕೈ ತುಂಬಾ ಕೆಲಸ. ‘ಬೋರ್’ ಅನ್ನುವುದಕ್ಕೆ ಆಸ್ಪದವೇ ಇಲ್ಲ. ಈಗ ಅಷ್ಟು ಜನವೂ ಇಲ್ಲ, ಕೆಲಸವೂ ಜಾಸ್ತಿ ಇಲ್ಲ. ಆದರೆ ಅವರಿಗಿಲ್ಲದ ದೊಡ್ಡ ಸೌಲಭ್ಯ ನಮ್ಮ ಪೀಳಿಗೆಗೆ ಇದೆ. ಅದು ಸಾಮಾಜಿಕ ಜಾಲತಾಣಗಳು. ಆದರೆ ಅದು ಸ್ವಲ್ಪ ಅಪಾಯಕಾರಿ. ಅದರ ಬಗ್ಗೆ ಇನ್ನೊಂದು ಪ್ರಬಂಧವೇ ಬರೆಯಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಮೀಸಲಿಟ್ಟು, ಮಿಕ್ಕಿದ್ದರಲ್ಲಿ ನಮ್ಮ ಸುಧಾರಣೆಗೆ , ಬೇರೆಯವರ ಒಳಿತಿಗೆ ಉಪಯೋಗಿಸುವುದು ಉತ್ತಮ.ಖಾಲಿ ಮನ ಸೈತಾನನ ಕಾರಾಗಾರ. ಅದಾಗದಂತೆ ನೋಡಿಕೊಳ್ಳಬೇಕು. ಇದು ಈಗಿನ ನನ್ನ ದೊಡ್ಡ ಚಾಲೆಂಜ್!
-ಸಹನಾ ಪ್ರಸಾದ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x