“ಪ್ರತಿ ಸುಖದ ಹಿಂದೆ ಅನಿವಾರ್ಯವಾಗಿ ದುಃಖ ಬೆಂಬತ್ತುವುದೇ ಆದಲ್ಲಿ, ಆಗ ದುಃಖದಿಂದಲ್ಲ – ಸುಖದಿಂದಲೇ ಮುಕ್ತನಾಗುವ ಸ್ಪಷ್ಟತೆ ನಿನ್ನ ಜೀವನದಲ್ಲಿ ಫಲಿತವಾಗಬೇಕು.” (ಓಶೋ)
—
ನಾನಾಗ ಬೆಳಗಾವಿಯವನಾಗಿದ್ದೆ. ನಾನು ನನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದ ಬಾಡಿಗೆ ಮನೆ ಬೆಳಗಾವಿ ದಂಡು ಪ್ರದೇಶದಲ್ಲಿತ್ತು. 1999 ರ ಡಿಸೆಂಬರ ತಿಂಗಳ ಮೊದಲ ರವಿವಾರದ ದಿನ ಮುಂಜಾನೆಯ ಸಮಯ. ಮನೆಯ ಬಾಗಿಲ ಚಿಲಕ ಕಟಕಟ ಬಡಿದ ಶಬ್ಧ. ಬಾಗಿಲು ತೆಗೆದೆ, ಅವನು ನಿಂತಿದ್ದ. ಬಾರೋ ಒಳಗೆ ಅಂದೆ. ಬಂದ, ಕೈಲಿದ್ದ ಆವತ್ತಿನ ಸಂಯುಕ್ತ ಕನಾಟಕ ಪತ್ರಿಕೆಯನ್ನು ಸೋಫಾದ ಮೇಲೆ ಒಗೆದ – ಕೂತ. ಅವ ಅಂದ,
ಸೊಲ್ಪ ಹೊರಗ ತಿರಗ್ಯಾಡಕೊಂಡು ಬರೋಣು, ಭ್ಹಾಳ ಮಾತಾಡೋದು ಅದ, ಇಲ್ಲಿ ಬ್ಯಾಡಾ.
ಮೊದಲ ನಾಷ್ಟಾ ಆಗಲಿ, ಆಮ್ಯಾಲ ಹೊರಗ ಹೋಗೂಣಂತೆ, ಅಂದೆ.
ವೈನಿ ನಾಷ್ಟಕ್ಕ ಏನ್ ಮಾಡೀರಿ?
ನನ್ನ ಮನಿಯಾಕಿ ಅಂದ್ಳು, ನೀರ್ ದೋಸೆ, ಚಟ್ನಿ, ತಿಳಿಸಾರು.
ನಾ ಬರ್ತೇನು ಅಂತ ಗೊತ್ತಿತ್ತೇನು. ಅದಕ್ಕ ನೀರ್ ದೋಸಾ ಮಾಡೀರಿ!
ನನ್ನಾಕಿ ಅಂದ್ಳು, ಯೋಗಾಯೋಗ ನೋಡ್ರಿ. ಇವತ್ತ ನೀವು ಬಂದೀರಿ.
ನಾಷ್ಟಾ ಆತು. ಫಿಲ್ಟರ್ ಕಾಫಿ ಹೀರಿದ್ದಾಯ್ತು. ಇಬ್ಬರೂ ಹೊಂಟ್ವಿ ಹಚ್ಚ ಹಸುರಿನ ಪರಿಸರದ ದಂಡು ಪ್ರದೇಶದ ರಸ್ತೆಯಲ್ಲಿ. ಏನ್ ಹೇಳಪಾ ಅಂದೆ.
ನಾ ಸಂಯುಕ್ತ ಕರ್ನಾಟಕ ಬಿಡಬೇಕು ಅಂತ ಮಾಡ್ಯೇನಿ. ರಾಜಿನಾಮ ಕೊಡೋ ಮೊದಲ ನಿನಗ ಹೇಳಿ ಹೋಗಬೇಕು ಅಂತ ಬಂದೇನಿ. ಸಾಕಾಗೇದ ಅಲ್ಲಿ – ಉಸಿರು ಕಟ್ಟಿಸೋ ವಾತಾವರಣ. ಪ್ರತಿದಿವ್ಸ ಆಫೀಸಿಗ ಹೋಗೂದಂದ್ರ ಗ್ಯಾಸ್ ಚೇಂಬರನೋಳಗ ಹೋದಾಂಗ ಅನ್ನಸ್ತದ. ಶಾಮರಾಯ ಮತ್ತ ಅವ ಸಾಕಿದ ಹದ್ದುಗಳು ನಮ್ಮ ಸುತ್ತ ಹಾರ್ಯಾಡ್ತಿರ್ತಾವ. ಇವೆಲ್ಲ ನಿನಗ ಗೊತ್ತದ.
ಹೌದು ಅವ್ನು ಅನುಭವಿಸ್ತಿದ್ದ ಎಲ್ಲ ನೋವುಗಳು ನನಗ ತಿಳೀತಿತ್ತು. ಅವ್ನ ಆಫೀಸಿನ ವಾತಾವರಣ, ಲೇಖಕರು ಅಂತ ಸಾರಿಕೊಂಡವರು ಅವನ ಬರೆವಣಿಗೆಯನ್ನು ಹಂಗಿಸುತ್ತಿದ್ದ ಪರಿ, ರಂಗಭೂಮಿಯಲ್ಲಿನ ಅವನ ಚಟುವಟಿಕೆಗಳಿಗೆ ಅಡ್ಡ ಕೋಲು ಹಾಕುತ್ತಿದ್ದವರನ್ನ, ಹೀಗೆ ಅನೇಕ ನೋವುಗಳನ್ನು ಸಹಿಸುತ್ತಿದ್ದ. ಅಷ್ಟೇ ಅಲ್ಲ ನಗನಗತಾ ಸಹಿಸತ್ತಿದ್ದ. ಅವನ ಮುಖ ಯಾವತ್ತೂ ಗಂಟಿಕ್ಕುತ್ತಿರಲಿಲ್ಲ. ಮುಗುಳ್ನಗೆ ಸದಾ ಅವನ ಮುಖದಲ್ಲಿ. ನಾವಿಬ್ಬರೂ ಸೇರಿದಾಗ ಅವನ ನೋವುಗಳ ಪ್ರವರ ಹೇಳ್ತಿದ್ದ. ಆಮೇಲೆ ಏನೋ ಸಮಾಧಾನದಿಂದ ಹೋಗುತ್ತಿದ್ದ. ಹಣಕಾಸಿನ ವಿಷಯದಲ್ಲೂ ಅಷ್ಟೆ! ಯಾರೊಡನೆಯೂ ಹೇಳಿಕೊಂಡವನಲ್ಲ.
ಅವ ಹಾಂಗ$ ಇದ್ದ. ಯಾವತ್ತೂ ಮುಖದ ಚಹರೆ ಮಾಸಿಕೊಳ್ಳ ಹಾಂಗ.
ಅವನ ಚಾದರ ಹೀಂಗಿತ್ತಲ್ಲ! ಅದು ಕಾಲು ಮುಚ್ಚಿದ್ರ ಮುಖ ತೆರಿತಿತ್ತು. ಮುಖ ಮುಚ್ಚಿಕೊಂಡ್ರ ಕಾಲು ಕಾಣತಿತ್ತು. ಅಲ್ಲ ಹೀಂಗನ್ನೋಣ_ _
ಕಾಲು ಮುಚ್ಚಿದ್ರ ಮಗುಳ್ನಗೆಯ ಮುಖ ಕಾಣತಿತ್ತು – ಮುಖ ಮುಚ್ಚಿದ್ರ ನಗುವ ಕಾಲುಗಳು ಕಾಣತಿತ್ತು.
ಲೇ ಏನಾರ ಉತ್ರ ಹೇಳೋಲೇ……
ಅಂದ
ವಿಜಯ ಕರ್ನಾಟಕ ಅಷ್ಟ ಅಂದದ್ದೆ
ವಿಜಯ ಕರ್ನಾಟಕ ಪತ್ರಿಕೆ ಸುರು ಆಗ್ಯೆದಲ್ಲ, ಅಲ್ಲಿ ಹೋಗಿ ನಾ ಕೇಳಿದ್ರ, ಅವ್ರು ನಾಳಿಂದನ ನೌಕರಿಗ ಬಾ ಅಂತಾರ. ನನಗ ಗ್ಯಾರಂಟಿ ಅದ. ಆದ್ರ ಯಾಕೋ, ನನಗ ಅಲ್ಲಿ ಸೇರಾಕ ಮನಸ್ಸಿಲ್ಲ. ಈ-ಟೀವಿಗ ಸೇರೋದು ಸರಿ ಅನ್ನಸ್ತದ ನನ್ನ ಮನಸ್ಸು. ಅಂದ.
ಈ ರಾಜ್ಯದ ಲಿಂಕ್ ತಪ್ಪಿದಾಂಗ ಆಗುದಿಲ್ಲೇನು?
ಅಲ್ಲೋ ಅದು ಟೀವಿ ಪ್ರಪಂಚ, ಬದುಕಿಗೆ ಬರ ಬರ್ಲಿಕ್ಕಿಲ್ಲ ಅಂತ ಖಾತ್ರಿ ಅನ್ಸೆದ. ನಿನ್ನ ಅಭಿಪ್ರಾಯ ಕೊಡಲೇ — ಅಂದ
ಜೀವನ ಸಾಗಿಸುತ್ತಿರುವ ಈ ವಯಸ್ಸಿಗಾದ್ರೂ ಬರವಿರದ ಸುಖ ಜೀವನ ಸಿಗಲಿ ಇವನಿಗೆ ಅನ್ನಿಸ್ತು. ಅಲ್ದ ಆಗಿದ್ದ ಕನ್ನಡದ ಪತ್ರಿಕೆಗಳಾದ್ರೂ ಎಷ್ಟು! ವೆಂಕ್ಯಾ — ನೊಣ್ಯಾ — ಶೀನ್ಯಾ. ಅದಕ್ಕಿಂತ ಇದು ಚಲೋ ಅಲ್ಲಾ! ಅನ್ನಿಸ್ತು.
ಸರಿ ನಡಿ ಹೈದರಾಬಾದಿಗೆ. ಅಂದೆ —
ಥ್ಯಾಂಕ್ಸ್ ಲೇ ದೋಸ್ತ, ನೀ ಏನಾರ ಈ-ಟೀವಿ ಬ್ಯಾಡ, ವಿಜಯ ಕರ್ನಾಟಕಕ್ಕೆ ಪ್ರಯತ್ನ ಮಾಡು ಅಂದಿದ್ರ ನಾ ಅದ ಮಾಡಬೇಕಾಗ್ತಿತ್ತು. ನಿನ್ನ ಬಾಯಿಂದ ನಾ ಬಯಸಿದ್ದ ಬಂತೂ—ಅಂದ.
ನಡಿ ಊಟ ಮಾಡೊಣ ಅಂತ ಅಂದ್ನಿ. ಹಾಂಗ ಆ ಹಸಿರು ಹಸಿರು ವನ ಸಿರಿಗಳ ನಡುವಿಂದ ನಡೆದು ಮನೆಗೆ ಬಂದ್ವಿ. ಪುಷ್ಕಳ ಊಟ ಆತು. ಹೊಂಡೋ ಮುಂದ ಅವ ತಂದಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆ ಕೊಡಹೋದೆ.
ಓದಿದ ಮ್ಯಾಲ ಅದು ಮುಗೀತು, ಅದು ರದ್ದಿ — ಬರ್ತೀನಲೇ – ವೈನಿ ಮತ್ತೊಮ್ಮಿ ನೀರ ದೋಸಿ ತಿನ್ನಾಕ ಬರ್ತೇನ್ರಿ ಅಂದ – ಅವ ಹೋದ
ಆಮ್ಯಾಲ ಅವನ ಭೇಟಿ ಇಲ್ಲನ$ ಆತು. ಎರಡೋ ಮೂರೋ ಭಾರಿ ನಾನು ಇಲ್ಲಾ ಎರಡೋ ಮೂರು ಭಾರಿ ಅವ ಫೋನಿನಲ್ಲಿ ಮಾತಡಿದ ನೆನಪು. ಅವ ಅರಾಮ ಅದಾನ, ಮಸ್ತ ಮಜಾದಾಗ ಇದ್ದಾನು ಅಂತ ನಾ ತಿಳಿದಿದ್ದೆ. ಆಮ್ಯಾಲ ತಿಳಿದದ್ದು ಅಂದ್ರ- ಹೈದರಾಬಾದಿಗ ಹೋದ ಮ್ಯಾಲ, ಅವನ ತಬಿಯತ್ತು ಖರಾಭಾತು. ಅವ ಕೃತ್ರಿಮ ಆಮ್ಲಜನಕದ ಆಶ್ರಯ ಪಡೀಬೇಕಾತು ಅಂತ. 2010ಕ್ಕ ಅವ ಹೈದರಾಬಾದ ಈ-ಟೀವಿ ಕೆಲಸಕ್ಕ ರಾಜಿನಾಮಾ ಕೊಟ್ಟು ಬೆಂಗಳೂರಿಗ ಬಂದಾ. ನಾನೂ ಬೆಂಗಳೂರಿಗನಾಗಿದ್ದೆ. ಮತ್ತೆ ಇಬ್ಬರೂ ಸೇರಿದ್ವಿ. ಅವನ್ನ ಮತ್ತ ಸಾರಸ್ವತ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡಿದರು ಖ್ಯಾತ ಪತ್ರಕರ್ತ ಶ್ರೀ ಜಿ ಎನ್ ಮೋಹನ್ ಅವರು, ತಮ್ಮ “ಅವಧಿ” ಇ ಪತ್ರಿಕೆ ಮುಖಾಂತರ. ಇನ್ನೇನೂ ಎಲ್ಲಾ ಸುಸೂತ್ರ ನಡೀತದ ಅನ್ನೋಮುಂದ, ಅವನ ಆರೋಗ್ಯ ದಿನದಿ0ದ ದಿನಕ್ಕ ಬಿಗಡಾಯಿಸ್ಲಿಕ್ಕ ಸುರು ಆತು. ಅದನ್ನೂ ಅವ ನಗ ನಗತಾನ ಸಹಿಸಿಕೊಂಡ. ಅಂತಾ ನೋವಿನಲ್ಲೂ ಅವ ಮೂರು ಸಿನೇಮಾ ಕಥೆಗಳಿಗೆ ಸಂಬಾಷಣೆ ಬರೆದ. ಆರು ಸಿನೇಮಾಗಳಿಗೆ ಗೀತಸಾಹಿತ್ಯ ಬರೆದ. ಅವನ ಅಪ್ರಕಟಿತ ನಾಲ್ಕು ನಾಟಕಗಳನ್ನು ಪ್ರಕಟಗೊಳಿಸಿದ. ನನ್ನ ಕುರಿತು ಲೇಖನವನ್ನು ಕಾ0ತಾವರ ಕನ್ನಡ ಸಂಘದವರ ಕೋರಿಕೆಯಂತೆ ಬರೆದ. ಅದು ಅವರಿಂದ ಪ್ರಕಟವಾಯಿತು. ತನ್ನ ನೆನಪುಗಳ “ರಂಗದ ಒಳಹೊರಗೆ” ಪುಸ್ತಕವನ್ನು ಬರೆದ. ಅದನ್ನು ಅಂಬಾ ಪ್ರಕಾಶನದವರು ಪ್ರಕಟಿಸಿದರು. ಹೀಗೆ ಜೀವಂತ ಇರುವಾಗಲೇ ಅವ ಸೆಪ್ಟಂಬರ 20 ರಂದು ಇಲ್ಲವಾದ.
ಸತ್ತಾಗ ಅನಿಸಿತ್ತು ಆವತ್ತು ನಾನು ಅವನಿಗೆ ವಿಜಯ ಕರ್ನಾಟಕ ಸೇರು, ಈ-ಟೀವಿ ಬೇಡ ಅಂದಿದ್ರ ಅವ ಇನ್ನೂ ಇರ್ತಿದ್ದ ! ಹೌದಲ್ಲ? ಗೊತ್ತಿಲ್ಲ.
ಅವ ಬೆಂಗಳೂರಿಗೆ ಬಂದು ಮನಿ ಮಾಡಿದ ಮ್ಯಾಲ, ನಮ್ಮ ಮನಿಗ ಬಂದು ನೀರು ದೋಸೆ ತಿನಬೇಕು ಅಂತಾ ನನ್ನಾಕಿಗ ಹೇಳತಿದ್ದ. ನೀರು ದೋಸೆ ಮಾಡಿದಾಗಮ್ಮೊ, ಅವನ ಆರೋಗ್ಯದ ಕಾರಣವೋ ಇನ್ನಾವುದೋ ಕಾರಣದಿಂದ ಸಾಧ್ಯವಾಗಲೇ ಇಲ್ಲ. ಇನ್ನು ಅದು ಸಾಧ್ಯವಾಗುವುದೇ ಇಲ್ಲ.
ಯಾಕಂದ್ರ ಅವ ಇನ್ನ ನನ್ನ ಮನಿಗ ಬರೂದಿಲ್ಲ. ಅವನ ನೆನಪಷ್ಟ ಮನದಾಗ ಹರೀತಿರ್ತದ, ನೀರ ದೋಸೆ ಹಿಟ್ಟು, ಕಾದ ಹೆಂಚಿನ ಮ್ಯಾಲ ಹರಡಿದಾಂಗ.
ಅವ ಯಾರು ಗೊತ್ತಾತಲ್ಲಾ?
ಅವನರೀ ನನ್ನ ಜೀವದ ಗೆಳ್ಯಾ ಗೋಪ್ಯಾ !
ನಾನರೀ ಅವನ ಜೀವದ ಗೆಳ್ಯಾ ಶಿಪ್ರ್ಯಾ !
ತಿಳಿಲಿಲ್ಲೇನು? ಅವನರೀ, ಅಂವ– ನಾಟಕಕಾರ, ನಟ, ಪತ್ರಿಕೋದ್ಯಮಿ, ಕವಿ, ಸಾಹಿತಿ, ಚಿತ್ರ ಕಥೆ ಸಂಭಾಷಣಕಾರ, ಆಕಾಶವಾಣಿ ಕಲಾವಿದ, ಹ್ಞಾ ಹ್ಞಾ ಅವನ$ — ಸದಾ ಬೆಂಬತ್ತಿದ ದುಃಖವನ್ನು ಸುಖದಲ್ಲಿ ಅನುಭವಿಸಿ ಮುಕ್ತನಾದವನು:
ಗೋಪಾಲ ವಾಜಪೇಯಿ.
ನಾನ್ರ್ಯಾ! ಅಂಥವನ ಗೆಳ್ಯಾ ಅನ್ನಿಸಿಕೊಂಡ ಪುಣೇವಂತ ಶ್ರೀಪತಿ ಮಂಜನಬೈಲು.
ನಮಸ್ಕಾರ.
ಬೆಳಗಾವಿಯಿಂದ ಬೆಂಗಳೂರಿಗೆ ಜೀವನದಿ ಹರದಂಗ..
ಖರೆ ಅದ ಇದ್ರ ನಿಮ್ಮಂತಹ ಗೆಳೆತನ ಇರಬೇಕು…!
ಭಾಳ ಛಲೊ ಬರದಿರಿ ಗೋಪಾಲ ಸರ್ ಬಗ್ಗೆ… ನನಗ ಗೂರುಪ್ರಸಾದ ನಂದ ಗೊವಾ ಸರ್ ಪರಿಚಯ ಆತು…
ಮನಸಿಗೆ ನೊವ ಆಗತದ ಅವರು ನಮ್ಮ ಜೊತಿಗ ಇಲ್ಲ ಅಂತ ಅನಿಸಿದಾಗ….
ನಿಮ್ಮ ಅಂಕಣ ಓದಿ ಕಣ್ಣಲಿ ನೀರಾಡಿತು.
ಇಂತಹಆತ್ಮೀಯ ನಮ್ಮಯ ಸ್ನೇಹಿತ ಎನ್ನುವುದು ಸೌಭಾಗ್ಯ ಒಂದು ಕಡೆಯಾದರೆ,ಇಷ್ಟು ಬೇಗ ಬಿಟ್ಟು ಹೋಗಿದ್ದು ದುರದೃಷ್ಟಕರ.
ಓದುತ್ತಾ ಹೋದ ಹಾಗೆ ಕಣ್ಣು ತೇವವಾಯಿತು.
ವೈಯಕ್ತಿಕವಾಗಿ ಅವರ ಪರಿಚಯವಿರಲಿಲ್ಲ. ಒಮ್ಮೆ ನೋಡಿದ್ದರೂ, ಮಾತನಾಡಿಸಿರಲಿಲ್ಲ. ನನ್ನ ಲೇಖನಕ್ಕೆ ಒಮ್ಮೆ ಪ್ರತಿಕ್ರಿಯೆ ಸಹ ಬರೆದಿದ್ದರು.
ನನಗಿನ್ನೂ ಅರ್ಥವಾಗಿಲ್ಲ, ಒಂದು ಸಾಯಂಕಾಲ ಅವರನ್ನು ಭೇಟಿಯಾಗಿ ಮಾತನಾಡಿಸಬೇಕು ಅನಿಸಿತು. ಅದರ ಮರುದಿನವೇ ಬೆಳಿಗ್ಗೆ ಅವರ ಸಾವಿನ ಬಗ್ಗೆ ಓದಿದೆ. ನನ್ನ ಆಸೆ ಅನಿಸಿಕೆಯಾಗಿಯೇ ಉಳಿಯಿತು