ವಾಸುಕಿ ಕಾಲಂ

ಮುಂಬೈಗೆ ಕಿರಣ್ ಳ ಪ್ರೇಮಪತ್ರ: ವಾಸುಕಿ ರಾಘವನ್

 

ಜಾಗಗಳೂ ಕೂಡ ಪಾತ್ರಗಳಾದಾಗ ಚಿತ್ರಗಳಿಗೆ ಇನ್ನೊಂದು ಆಯಾಮ ಸೇರಿಕೊಳ್ಳುತ್ತದೆ. “ನಾಗರಹಾವು” ಚಿತ್ರದ ಚಿತ್ರದುರ್ಗ, “ಕಹಾನಿ” ಚಿತ್ರದ ಕೋಲ್ಕೊತ, “ಸತ್ಯ”ದ ಮುಂಬೈ, “ಗಾಡ್ ಫಾದರ” ನ ಸಿಸಿಲಿ – ಈ ಎಲ್ಲಾ ಚಿತ್ರಗಳಲ್ಲೂ ಆ ಜಾಗಗಳೇ ಒಂದು ಪಾತ್ರವಾಗಿವೆ. 

ಇದಕ್ಕೆ ಹೋಲಿಸಿದರೆ, ಜಾಗವನ್ನೇ ಪ್ರಮುಖ ಪಾತ್ರವಾಗಿ ಇಟ್ಟುಕೊಂಡು ತೆಗೆದಿರುವ ಚಿತ್ರಗಳು ಕಡಿಮೆ. ಕಿರಣ್ ರಾವ್ ನಿರ್ದೇಶನದ “ಧೋಬಿ ಘಾಟ್” ಅಂತಹ ಒಂದು ಅಪರೂಪದ ಚಿತ್ರ. ಇದು ಮುಂಬೈಗೆ ಆಕೆ ಬರೆದಿರುವ ಪ್ರೇಮಪತ್ರ!

ಚಿತ್ರದಲ್ಲಿ ನಾಲ್ಕು ಎಳೆಗಳಿವೆ. 

ಅರುಣ್ ಖ್ಯಾತ ಪೇಂಟರ್, ಬಹಳ ಮೂಡಿ, ಒಂಟಿಜೀವಿ. ಅವನು ಹೊಸದಾಗಿ ವಾಸಕ್ಕೆ ಬರೋ ಫ್ಲಾಟ್ ಅಲ್ಲಿ ಹಿಂದೆ ವಾಸವಾಗಿದ್ದವರು ಬಿಟ್ಟುಹೋಗಿರೋ ವೀಡಿಯೊ ಕ್ಯಾಸೆಟ್ಟು ಸಿಗುತ್ತೆ. 

ಯಾಸ್ಮಿನ್ ತನ್ನ ಅಣ್ಣನಿಗೋಸ್ಕರ ರೆಕಾರ್ಡ್ ಮಾಡಿರೋ ಮಾತುಗಳು ಮತ್ತು ದೃಶ್ಯಗಳು ಈ ಕ್ಯಾಸೆಟ್ಟಿನಲ್ಲಿ ಇರುತ್ತೆ. ಅವಳ ಬದುಕಿನ ಪರಿಚಯ, ಅರುಣ್ ಗೆ ತನ್ನ ಮುಂದಿನ ಪೇಂಟಿಂಗ್ ಮಾಡಲು ಸ್ಫೂರ್ತಿ ಕೊಡುತ್ತೆ. 

ಶಾಯ್ ಅಮೇರಿಕಾದಲ್ಲಿ ಬ್ಯಾಂಕರ್. ಕೆಲಸದಿಂದ ಬ್ರೇಕ್ ತೆಗೆದುಕೊಂಡು ಸ್ವಲ್ಪ ದಿನದ ಮಟ್ಟಿಗೆ ಮುಂಬೈಗೆ ಬಂದಿದ್ದಾಳೆ. ಫೋಟೋಗ್ರಫಿ ಆಸಕ್ತಿ ಇರುವ ಈಕೆ ಮುಂಬೈ ಜೀವನ, ಗಲ್ಲಿಗಲ್ಲಿಗಳು, ಅಲ್ಲಿನ ಜನ ಇವುಗಳನ್ನು ಸೆರೆ ಹಿಡಿಯುವ ಆಸೆ ಹೊಂದಿದ್ದಾಳೆ. 

ಮುನ್ನಾ ಬಟ್ಟೆ ಒಗೆಯುವ ಧೋಬಿ. ಸದೃಢ ಮೈಕಟ್ಟಿನ ಈತ ಚಲನಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿದ್ದಾನೆ. ಶಾಯ್ ಗೆ ಸ್ನೇಹಿತನಾಗುವ ಈತ ಅವಳಿಗೆ ಮುಂಬೈ ದರ್ಶನ ಮಾಡಿಸುವಲ್ಲಿ ಸಹಾಯ ಮಾಡ್ತಾನೆ. 

ಈ ಚಿತ್ರ ಸಾಕಷ್ಟು ಜನಕ್ಕೆ ಇಷ್ಟ ಆಗದೇ ಇರಬಹುದು. ಇದೊಂದು ಮಾಮೂಲಿ ಚಿತ್ರ ಅಲ್ಲ. ಚಿತ್ರ ಅಂದರೆ ಕಥೆಯೇ ತುಂಬಾ ಮುಖ್ಯ, ಒಬ್ಬ ಹೀರೋ ಮತ್ತು ಹೀರೋಯಿನ್ ಇರಲೇಬೇಕು, ಕಥೆ ತಿರುವುಗಳನ್ನ ಪಡೆದುಕೊಳ್ಳುತ್ತಾ ಒಂದು ಗಮ್ಯದೆಡೆಗೆ ಸಾಗಬೇಕು – ಹೀಗೆಲ್ಲಾ ಪೂರ್ವನಿರ್ಧಾರಿತ ಯೋಚನೆಗಳಿದ್ದರೆ ಈ ಚಿತ್ರ ಇಷ್ಟವಾಗದೇ ಇರಬಹುದು. ಆದರೆ ಅವೆಲ್ಲವನ್ನೂ ಮೀರಿದ ಒಂದು ಅನುಭೂತಿಗೆ ತೆರೆದುಕೊಳ್ಳಲು ಸಿದ್ಧರಿರುವ ಸಿನೆಮಾಸಕ್ತರು ಈ ಚಿತ್ರವನ್ನು ಒಮ್ಮೆ ನೋಡಲೇಬೇಕು. 

ಇದರಲ್ಲಿ ಆಮೀರ್ ಖಾನ್ ಮಾಡಿರುವ ಅರುಣ್ ಪಾತ್ರ ಇದ್ದರೂ, ಅದು ಪ್ರತೀಕ್ ಬಬ್ಬರ್ ಮಾಡಿರೋ ಮುನ್ನಾ ಪಾತ್ರಕ್ಕಿಂತಾಗಲೀ, ಮೋನಿಕಾ ಡೋಗ್ರ ಮಾಡಿರೋ ಶಾಯ್ ಪಾತ್ರಕ್ಕಿಂತಾಗಲೀ ದೊಡ್ದದಾಗಿಲ್ಲ. ಅಂತಹ ದೊಡ್ಡ ಸ್ಟಾರ್ ಇದ್ದರೂ ತನ್ನ ಫಿಲಂ ನ ಇಂಟೆಗ್ರಿಟಿ ಹಾಳಾಗದಂತೆ ನೋಡಿಕೊಂಡಿರುವ ಕಿರಣ್ ಅಭಿನಂದನಾರ್ಹಳು. 

ಚಿತ್ರದಲ್ಲಿ ಕಥೆಯ ಎಳೆಗಳು ತುಂಬಾ ತೆಳುವಾಗಿವೆ, ಹಾಗೆಯೇ ನಿರೂಪಣೆಯ ಗತಿ ಕೂಡ ನಿಧಾನವಾಗಿದೆ. ಆದರೆ ನಿಜವಾದ ಸಾಧನೆ ಇರುವುದು ಕಥೆಯ ಮೇಲೆ ಹೆಚ್ಚಾಗಿ ಅವಲಂಬಿಸದೇ, ಭಾವನೆಗಳ ಒಂದು ಪಯಣ ಮಾಡಿಸಿರೋದರಲ್ಲಿ. ಒಂದು ಊರಿನ ಬಗ್ಗೆ ಪ್ರೇಮಪತ್ರ ಬರೆಯಲು ಹೊರಟಾಗ ಇಷ್ಟ ಇರೋ ಎಲ್ಲಾ ಜಾಗಗಳನ್ನ ತೋರಿಸಿಬಿಡುವ, ಅಲ್ಲಿನ ಸಮಸ್ತ ವೈವಿಧ್ಯತೆಯ ಪರಿಚಯ ಮಾಡಿಸುವ, ಸಾಧ್ಯವಾದಷ್ಟೂ ಹೆಚ್ಚು ವಸ್ತುಗಳನ್ನ ಚಿತ್ರದ ಅವಧಿಯಲ್ಲಿ ತುರುಕಿಬಿಡುವ ತವಕ ಹೆಚ್ಚಿರುತ್ತದೆ. ಹಾಗೆ ಮಾಡಿದಾಗ, ದೃಶ್ಯಗಳು ತಮ್ಮಷ್ಟಕ್ಕೆ ತಾವು ಎಷ್ಟೇ ಚನ್ನಾಗಿದ್ದರೂ, ಚಿತ್ರದ ನಿರೂಪಣೆಗೆ ತೊಡರು ಉಂಟುಮಾಡುತ್ತವೆ. ಆದರೆ ಕಿರಣ್ ಈ ತಪ್ಪನ್ನು ಮಾಡಿಲ್ಲ. ಎಲ್ಲೂ “ಶೋಮ್ಯಾನ್ಶಿಪ್” ಆಮಿಷಕ್ಕೆ ಒಳಗಾಗದೆ, ಇಡೀ ಚಿತ್ರವನ್ನ ಸಹಜವಾಗಿ, ಯಥಾವತ್ತಾಗಿ, ಯಾವುದೇ ಆಡಂಬರವಿಲ್ಲದೆ ನಿರ್ದೇಶಿಸಿದ್ದಾಳೆ. ಸ್ಲಂಗಳು ಹೆಚ್ಚು ಕೊಳಕಾಗಿ ಕಾಣಿಸುವುದಿಲ್ಲ, ಮಳೆ ನೀರು ಹೆಚ್ಚು ನೀಲಿಯಾಗಿಲ್ಲ, ಸೂರ್ಯಾಸ್ತ ಹೆಚ್ಚು ಕೇಸರಿಯಾಗಿಲ್ಲ. ಆ ನೈಜತೆಯಿಂದಲೇ, ಸರಳತೆಯಿಂದಲೇ ಚಿತ್ರ ಇನ್ನಷ್ಟು ಶ್ರೀಮಂತವಾಗಿದೆ. 

ಇಲ್ಲಿ ನಾಲ್ಕೂ ಕಥೆಗಳಲ್ಲಿ ನನಗೆ ಕಂಡ ಸಾಮಾನ್ಯ ಅಂಶ ಅಂದರೆ “ಏಲಿಯನೇಶನ್”. ಮದುವೆಯಾಗಿ ಮುಂಬೈಗೆ ಬಂದಿರೋ ಯಾಸ್ಮಿನ್, ತಾನು ಹುಟ್ಟಿಬೆಳೆದ ಕುಟುಂಬದಿಂದ ದೂರ ಬಂದಿದ್ದಾಳೆ. ಅರುಣ್, ಹೆಂಡತಿ ಮಗನಿಂದ ಬೇರ್ಪಟ್ಟಿರೋ ಒಬ್ಬಂಟಿಗ. ಶಾಯ್ ತನ್ನೆಲ್ಲಾ ಐಶಾರಾಮಗಳನ್ನು ಬಿಟ್ಟು ಇನ್ನೇನನ್ನೋ ಹುಡುಕಿಕೊಂಡು ಮುಂಬೈಗೆ ಬಂದಿದ್ದಾಳೆ. ಚಿಕ್ಕವಯಸ್ಸಿನಲ್ಲೇ ಮನೆ ಬಿಟ್ಟು ಮುಂಬೈಗೆ ಓಡಿಬಂದಿರೋ ಮುನ್ನಾ “ವಾಪಸ್ ಊರಿಗೆ ಹೋಗಲ್ಲ, ನಾನು ಮಿಸ್ ಕೂಡ ಮಾಡಿಕೊಳ್ತಿಲ್ಲಾ” ಅಂತ ಹೇಳ್ತಾನೆ!

ಈ ಅಗಲುವಿಕೆಯಲ್ಲೂ, ಒಬ್ಬಂಟಿತನದಲ್ಲೂ ನಾವೆಲ್ಲರೂ ಒಬ್ಬರಿಗೊಬ್ಬರು ನಮಗೇ ಅರಿಯದ ರೀತಿಯಲ್ಲಿ ‘ಕನೆಕ್ಟೆಡ್’ ಆಗಿರ್ತೀವಿ. ನಮ್ಮ ಯಾವುದೋ ವರ್ತನೆ ಇನ್ಯಾರ ಮೇಲೋ ಪರಿಣಾಮ ಬೀರುತ್ತೆ, ಇನ್ಯಾರೋ ಅಪರಿಚಿತರಿಂದ ನಾವು ಪ್ರೇರಣೆ ಪಡೆದಿರ್ತೀವಿ. ಈ ‘ಕನೆಕ್ಟೆಡ್ನೆಸ್’ ಅನ್ನು ತೋರಿಸೋ ಒಂದು ಸುಂದರವಾದ ದೃಶ್ಯ ಇದೆ. ಯಾಸ್ಮಿನ್ ವೀಡಿಯೊ ರೆಕಾರ್ಡಿಂಗ್ ಅಲ್ಲಿ ತನ್ನ ಅಣ್ಣನಿಗೆ ಮುಂಬೈಯನ್ನು, ತನ್ನ ಮನೆಯನ್ನೂ ತೋರಿಸುತ್ತಿರುತ್ತಾಳೆ. ಈ ಕ್ಯಾಸೆಟ್ಟನ್ನು ಅರುಣ್ ಆಸಕ್ತಿಯಿಂದ ನೋಡುತ್ತಿರುತ್ತಾನೆ. ಅರುಣ್ ಗೆ ತಿಳಿಯದಂತೆ ಎದುರು ಮನೆಯಿಂದ ಶಾಯ್ ತನ್ನ ಕ್ಯಾಮೆರಾ ಮೂಲಕ ಅವನನ್ನು ಸೆರೆ ಹಿಡಿಯೋ ಪ್ರಯತ್ನದಲ್ಲಿರುತ್ತಾಳೆ. ಇದೆಲ್ಲವನ್ನೂ ವೀಕ್ಷಿಸುತ್ತಿರುವ ನಾವುಗಳು. ವಾಹ್!

ಇದರ ಹೆಗ್ಗಳಿಕೆ ಅಂದರೆ ಸಾಮಾನ್ಯ ಚಿತ್ರಗಳಂತೆ ನಮಗೆ ಎಲ್ಲೂ ಸ್ಪೂನ್ ಫೀಡಿಂಗ್ ಮಾಡಿಸುವುದಿಲ್ಲ. ಬದಲಿಗೆ ಇರುವುದನ್ನು ನಾವು ಗ್ರಹಿಸುತ್ತೇವೆ (ಬೇರೆಬೇರೆಯವರು ವಿಭಿನ್ನ ರೀತಿಯಲ್ಲಿ ಗ್ರಹಿಸಿದರೂ ಕೂಡ!) ಅನ್ನುವ ವಿಶ್ವಾಸ ಇರಿಸಲಾಗಿದೆ. ಈ ಚಿತ್ರಕ್ಕೆ “ಧೋಬಿ ಘಾಟ್” ಅಂತ ಯಾಕೆ ಹೆಸರಿಟ್ಟಿದ್ದಾರೆ ಅನ್ನೋ ಉಲ್ಲೇಖ ಕೂಡ ಎಲ್ಲೂ ಬರಲ್ಲ. ಎಲ್ಲರ ಬಟ್ಟೆಗಳೂ ಒಂದೇ ಕಡೆ ಸೇರೋ ಧೋಬಿ ಘಾಟ್ ಈ ‘ಕನೆಕ್ಟೆಡ್ನೆಸ್’ ಅನ್ನು ಪ್ರತಿಬಿಂಬಿಸುತ್ತೆ ಅಂತ ನನ್ನ ಅನಿಸಿಕೆ. ಚಿತ್ರದ ಅತೀ ದೊಡ್ಡ ಗೆಲುವು ಇರುವುದು ಕಿರಣ್ ನಮ್ಮ ಬುದ್ಧಿವಂತಿಕೆಯ ಮೇಲೆ ಇಟ್ಟಿರೋ ನಂಬಿಕೆಯಲ್ಲಿ. ಅದಕ್ಕಿಂತಾ ದೊಡ್ಡ ಕಾರಣ ಬೇಕಾ ನಾವು ಕಿರಣ್ ಗೆ ಆಭಾರಿಯಾಗಿರೋಕೆ?

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮುಂಬೈಗೆ ಕಿರಣ್ ಳ ಪ್ರೇಮಪತ್ರ: ವಾಸುಕಿ ರಾಘವನ್

  1. ಈ ಲೇಖನವನ್ನು ಓದಿದ ನಂತರ ಮತ್ತೊಮ್ಮೆ ಈ ಚಿತ್ರ ನೋಡಬೇಕೆಂತೆನಿದೆ….ಉತ್ತಮ ವಿಮರ್ಶೆ…ಶುಭದಿನ !

  2. ಒಳ್ಳೆಯ ಚಿತ್ರ. ಮೈನ್ ಸ್ತ್ರೀಮ್ ನಲ್ಲಿರೋ ಇ೦ತಹ ನಟರು ಪ್ರಯತ್ನ ಮಾಡಿದರೆ ಸಿನೆಮಾ ಕಲೆಯಾಗುತ್ತದೆ. ಇಲ್ಲದಿದ್ದರೆ ಬರೀ ಬ್ಯುಸಿನೆಸ್ ಮಾತ್ರ. ಜೀವವಿರುವುದಿಲ್ಲ. ಜೀವಕ್ಕೆ ತಾಗುವುದಿಲ್ಲ.

Leave a Reply

Your email address will not be published.