ಕಥಾಲೋಕ

ಮುಂಬಯಿ ಮಾವ: ಶೀಲಾ ಭಂಡಾರ್‌ಕರ್, ಮೈಸೂರು

ಮೂಲ ಕೊಂಕಣಿ: ವಲ್ಲಿ ಕ್ವಾಡ್ರಸ್, ಅಜೆಕಾರು.
ಕನ್ನಡಕ್ಕೆ ಅನುವಾದ: ಶೀಲಾ ಭಂಡಾರ್‌ಕರ್, ಮೈಸೂರು
‘ಮುಂಬೈ ಮಾವ ತೀರಿ ಹೋದನಂತೆ.’
ಬೆಳಿಗ್ಗೆ ಎದ್ದು ಅಡುಗೆಮನೆಯೊಳಗೆ ಚಹ ಮಾಡಲು ನೀರು ಕುದಿಯಲಿಡುವ ಸಮಯಕ್ಕೆ ಸರಿಯಾಗಿ ವಾಟ್ಸ್ ಆ್ಯಪ್‍ಗೆ ಬಂದ ಮೆಸೆಜ್ ಓದಿದ ರೀಟಾಳ ಮನಸ್ಸಿನಲ್ಲಿ ಯಾವುದೇ ಭಾವನೆಗಳು ಹುಟ್ಟಲಿಲ್ಲ.
ಅವನಿಷ್ಟು ದಿನ ಎಲ್ಲಿದ್ದ? ಯಾರ ಜತೆಯಲ್ಲಿದ್ದ? ಏನಾಗಿದ್ದ? ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ.
ಆದರೂ ಹೋದ ವಾರ, ಊರಿನ ಕಾಲೇಜಲ್ಲಿ ಓದುತ್ತಿರುವ ಸೋದರತ್ತೆಯ ಮಗನೊಬ್ಬ “ಫ್ಯಾಮಿಲಿ” ಎನ್ನುವ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ, ಅದರಲ್ಲಿ ರೀಟಾಳನ್ನೂ ಸೇರಿಸಿದ್ದರಿಂದ, ಆ ಗ್ರೂಪಿನಲ್ಲಿ ಮುಂಬಯಿ ಮಾವನ ವಿಷಯ ಯಾರೋ, ಏನೋ ಮಾತಾಡಿದ್ದನ್ನು ಓದಿದ ನೆನಪು. ಅದೇನು ಎಂದು ಈಗ ರೀಟಾಳಿಗೆ ನೆನಪಾಗ್ತಿಲ್ಲ.
ರೀಟಾ ತನ್ನ ಒಂಟಿ ಬದುಕಿನ ಐವತ್ತು ವಸಂತಗಳನ್ನು ಈಗಾಗಲೇ ಕಳೆದಿದ್ದಳು. ತನ್ನ ಕುಟುಂಬದವರೆನ್ನಲು ಅವಳಿಗ್ಯಾರೂ ಇರಲಿಲ್ಲ. ತಾರುಣ್ಯದಲ್ಲಿ ನರ್ಸಿಂಗ್ ಕಲಿತ ಮೊದಲಿಗೆ ಮುಂಬಯಿಯ ಆಸ್ಪತ್ರೆಯೊಂದರಲ್ಲಿ ವೃತ್ತಿಯನ್ನು ಶುರು ಮಾಡಿದ ಸ್ವಲ್ಪವೇ ವರ್ಷಗಳ ಬಳಿಕ ಲಂಡನ್‍ಗೆ ಹೋದ ರೀಟಾ ಕಳೆದ ಹನ್ನೊಂದು ವರುಷಗಳಿಂದ ಸ್ವೀಡನ್‍ನಲ್ಲಿ ಕೆಲಸ ಮಾಡುತಿದ್ದಾಳೆ. ಓದು ಮತ್ತು ಸಂಗೀತದ ಹೊರತಾಗಿ ಇನ್ಯಾವ ವಿಷಯಗಳಲ್ಲಿಯೂ ಅವಳಿಗೆ ಆಸಕ್ತಿಯಾಗಲಿ, ಅವಕಾಶವಾಗಲಿ ಇಲ್ಲ.
ಈಗೀಗ ಆ ‘ಫ್ಯಾಮಿಲಿ’ ಗ್ರೂಪಿನಲ್ಲೂ ಕಿರಿಕಿರಿ ಹೆಚ್ಚಿತ್ತು. ಯಾರೋ ದೇವರು, ಜಾತ್ರೆ, ಇಗರ್ಜಿಗಳ ಚಿತ್ರಗಳನ್ನು ಕಳುಹಿಸಿ ತಮ್ಮ ಭಕ್ತಿ ಪ್ರದರ್ಶನ ಮಾಡುತಿದ್ದರು. ಇನ್ಯಾರೋ ಊಟ ತಿಂಡಿಗಳ ಚಿತ್ರಗಳನ್ನು, ಮತ್ಯಾರೋ ತಮ್ಮ ಹೊಸ ಮನೆಯ ಫೋಟೊಗಳನ್ನು ಕಳಿಸೋದು, ಇನ್ನೂ ಕೆಲವರು ತಮಗೇ ಅರ್ಥವಾಗದ ಯಾವುದೋ ಮಾಹಿತಿಗಳನ್ನು, ಜೋಕ್ಸ್ ಗಳನ್ನು ಕಳಿಸುತಿದ್ದರು.
ತಾನು ಊರು ಬಿಟ್ಟು ಹತ್ತಿರ ಹತ್ತಿರ ಮೂವತ್ತು ಮೂವತೈದು ವರ್ಷಗಳಲ್ಲಿ, ಊರಿನ ಚುನಾವಣೆ ಬಗ್ಗೆ, ಧರ್ಮದ ವಿಚಾರವಾಗಿ ಆಗುತ್ತಿದ್ದ ಗಲಾಟೆ ದೊಂಬಿಗಳ ಬಗ್ಗೆ, ಚಿಕ್ಕ ಚಿಕ್ಕ ಮಕ್ಕಳ ಮೇಲೆ ನಡೆಯುತಿದ್ದ ಅತ್ಯಾಚಾರಗಳ ಬಗ್ಗೆ ಓದಿ ಬೇಸತ್ತು ಹೋಗಿ, ಈಗ ಮತ್ತೆ ಅಂಥವೇ ವಿಷಯಗಳು ವಾಟ್ಸ್ ಆ್ಯಪ್ ಲ್ಲೂ ಫೋಟೊ, ವಿಡಿಯೋಗಳ ಮೂಲಕ ಬಂದು ಬೀಳುತ್ತಿರುವುದು ಇಷ್ಟವಾಗುತ್ತಿರಲಿಲ್ಲ.
ಎಷ್ಟೋ ಬಾರಿ ರೀಟಾಳಿಗೆ, ತಾನು ವಾಟ್ಸ್ ಆ್ಯಪ್ ಉಪಯೋಗಿಸುತ್ತಿರುವುದನ್ನೇ ಯಾರಿಗೂ ತಿಳಿಸಲೇಬಾರದಿತ್ತು,
ಹೇಗಾದರೂ ಈ ಗ್ರೂಪಿನಿಂದ ಹೊರ ನಡೆಯುವುದೇ ಒಳ್ಳೆಯದು ಅನಿಸಿತ್ತು.
ಆದರೆ ಕುಟುಂಬವೆನ್ನುವ ಗ್ರೂಪಿನ ಅರ್ಥವಿಲ್ಲದ ಚಿಂತನೆಗಳ ನಡುವೆಯೂ ಎಲ್ಲಾದರೂ ಊರಿನ ಒಂದೆರಡು ವಿಷಯಗಳು ಹೇಗಾದರೂ ನುಸುಳುತಿದ್ದವು. ಕೆಲಸ ಮುಗಿಸಿ ಸಂಜೆ ಮನೆಗೆ ಮರಳುವಾಗ ಮೆಟ್ರೋದಲ್ಲಿ ಕೂತು ಅವುಗಳನ್ನು ಓದುತಿದ್ದಳು.
ಚಿಕ್ಕವಳಿರುವಾಗ ಮುಂಬಯಿ ಮಾವ ಅಂದರೆ ಮೊದಮೊದಲು ಅವಳಿಗೆ ಪ್ರೀತಿ ಇತ್ತು.
ಮುಂಬಯಿಯಿಂದ ತರುತ್ತಿದ್ದ ಖಾರಿ ಬಿಸ್ಕೆಟ್, ಕಡಕ್ ಪಾವ್, ಮಸ್ಕಾ ಪಾವ್‍ಗಳಿಗಾಗಿ ಆಸೆ ಪಡುತಿತ್ತು ಮನಸ್ಸು.
ಅದುವೇ ಆಗ ತಮಗಿದ್ದ ಆಕರ್ಷಣೆಯಾಗಿತ್ತು.
ಒಬ್ಬನೇ ತಮ್ಮನೆಂದು ಅಮ್ಮನಿಗೂ ಬಹಳ ಪ್ರೀತಿಯವನಾಗಿದ್ದ.
ಇಡೀ ದಿನ ಅಮ್ಮನ ಬಳಿ ಅಡುಗೆ, ತಿಂಡಿಯ ಬಗ್ಗೆ ‘ಅದು ಮಾಡು. ಇದು ಮಾಡು’ ಎಂದು ಹೇಳಿ ಮಾಡಿಸಿ ತಿನ್ನುತ್ತಿದ್ದ. ಅಮ್ಮನಿಗೂ ಅವನ ಮೇಲೆ ವಿಶೇಷ ಪ್ರೀತಿ. ಸಣ್ಣ ಮಕ್ಕಳಿದ್ದಾಗಲೇ ಅವರ ತಾಯಿ ತೀರಿಹೋಗಿದ್ದರಿಂದ ಅವಳೇ ಆ ಮಾಮನಿಗೆ ಅಕ್ಕನೂ ಅಮ್ಮನೂ ಆಗಿದ್ದಳು.
ಎಂಟನೇ ತರಗತಿ ನಪಾಸಾಗಿ ಪಕ್ಕದ ಮನೆಯ ಬಂಟರ ಹುಡುಗ ಮಾಧು ಶೆಟ್ಟಿಯ ಜತೆ ಮುಂಬಯಿಗೆ ಹೋದವನು, ಬಂಟರ ಹೋಟೆಲ್ ಒಂದರಲ್ಲೇ ಕೆಲಸಕ್ಕೆ ಸೇರಿಕೊಂಡ ಎಂದು ಚಿಕ್ಕವಳಿದ್ದಾಗಲೇ ಕೇಳಿದ್ದ ನೆನಪು ರೀಟಾಳಿಗೆ.
ರೀಟಾ ಅವನನ್ನು ಮೊದಲ ಬಾರಿ ನೋಡಿದಾಗ ಅವನೊಬ್ಬ ಇಪ್ಪತ್ತೆರಡು, ಇಪ್ಪತ್ಮೂರು ವರ್ಷದ ತರುಣ.
ರೀಟಾ ಐದನೆಯ ತರಗತಿಯಲ್ಲಿ ಓದುತ್ತಿದ್ದ ಮಗು.
ಹೆಚ್ಚಾಗಿ ಮಾಧು ಶೆಟ್ಟಿ ಮತ್ತು ಮುಂಬಯಿ ಮಾವ ಒಟ್ಟೊಟ್ಟಿಗೆ ಊರಿಗೆ ಬಂದು ಹೋಗುತಿದ್ದರು. ಮಾಧು ಶೆಟ್ಟಿಯೂ ಮಾವನ ಹಾಗೆ ಅವನ ಅಕ್ಕನ ಮನೆಯಲ್ಲಿ ಉಳಿಯುತಿದ್ದ.
ಅವನ ಅಕ್ಕನಿಗೆ ಅವಳಿ ಹೆಣ್ಣು ಮಕ್ಕಳು, ಏಳನೆಯ ತರಗತಿಯಲ್ಲಿ ಓದುತಿದ್ದರು.
ಎರಡು ವಾರಗಳ ರಜೆ ಸಿಕ್ಕಿದರೂ ಮಾಧು ಶೆಟ್ಟಿ ಮುಂಬಯಿಯಿಂದ ಫಿಯೆಟ್ ಕಾರೊಂದನ್ನು ಓಡಿಸಿಕೊಂಡು ಬರುತಿದ್ದ. ಈಗ ಕುಕ್ಕೆಹಳ್ಳಿಗೆ ಕಾರು ಬಂತೆಂದರೆ, ಅದು ಮಾಧು ಶೆಟ್ಟಿಯ ಫಿಯೆಟ್ ಕಾರು ಎಂದು ಊರವರಿಗೆಲ್ಲ ತಿಳಿದಿತ್ತು.
ಮಾಧು ಶೆಟ್ಟಿಯ ಅಕ್ಕನ ಹೆಣ್ಣು ಮಕ್ಕಳಿಬ್ಬರ ಮನಸ್ಸಿನಲ್ಲಿಯೂ ಅವರ ಸೋದರ ಮಾವನೇ ಅವರ ಭಾವಿ ಗಂಡನೆಂದು ಇದ್ದಿತ್ತು. ಆದರೆ, ಇಬ್ಬರೂ ಅವನ ಹೆಂಡತಿಯರಾಗುವುದು ಹೇಗೆ ಎಂಬ ಪ್ರಶ್ನೆ ರೀಟಾಳನ್ನು ಕಾಡುತಿತ್ತು.
ರೀಟಾ ಒಬ್ಬಳೇ ಮಗಳು. ಮುಂಬಯಿಯ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅವಳ ಅಪ್ಪ ಅವಳು ಒಂದೂವರೆ ವರ್ಷದ ಮಗುವಿದ್ದಾಗಲೇ ಯಾವುದೋ ಅವಘಡದಲ್ಲಿ ತೀರಿ ಹೋಗಿದ್ದರಿಂದ, ಆ ಮಿಲ್ಲಿನವರು ಕೊಟ್ಟಿದ್ದ ಸ್ವಲ್ಪ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಮಾಧು ಶೆಟ್ಟಿಯ ಬಳಿ ಗೇಣಿಗೆ ಅರ್ಧ ಎಕರೆ ಜಾಗ ಪಡೆದು ಅದರಲ್ಲಿ ಏನೋ ಕೃಷಿ ಮಾಡಿಕೊಂಡು ತರಕಾರಿ, ಕಾಯಿಪಲ್ಲೆಗಳನ್ನು ಬೆಳೆಸಿಕೊಂಡು, ಒಂದೇ ಕೋಣೆಯ ಚಿಕ್ಕ ಮನೆಯೊಂದರಲ್ಲಿ ವಾಸವಾಗಿದ್ದ ಅಮ್ಮ ಮಗಳಿಬ್ಬರಿಗೂ ಮುಂಬಯಿ ಮಾವನೊಬ್ಬನೇ ನೆಂಟನಾಗಿದ್ದ.
ರೀಟಾ ಕಲಿಯಲು ಬಹಳ ಬುದ್ಧಿವಂತೆಯಾಗಿದ್ದಳು. ಇಗರ್ಜಿಯ ಪ್ರಾರ್ಥನೆಗೆ ತಪ್ಪದೇ ಹೋಗುತಿದ್ದಳು.
ರಜೆಯಲ್ಲಿ ಬಂದ ಮಾವನೂ ಅವಳನ್ನು ಇಗರ್ಜಿಗೆ ಕರೆದುಕೊಂಡು ಹೋಗುತಿದ್ದ.
ಯಾಕೋ ರೀಟಾಳಿಗೆ ಅವಳ ಮಾವನೆಂದರೆ ಇರಿಸು ಮುರಿಸಿನ ಭಾವನೆ.
ಮಾವನಿಗೆ ರೀಟಾಳೆಂದರೆ ಬಲು ಪ್ರೀತಿ. ಯಾವತ್ತೂ ಅವಳ ಬಳಿ ಧ್ವನಿ ಏರಿಸಿ ಮಾತಾಡಿದವನೇ ಅಲ್ಲ. ಬೇಕಾದ್ದೆಲ್ಲ ಕೊಡಿಸುತ್ತಿದ್ದ. ಐಸ್ ಕ್ಯಾಂಡಿ, ಚಾಕೊಲೆಟ್, ಹೊಸ ಬಟ್ಟೆ, ಪೆನ್ನು, ಪುಸ್ತಕ ಕೊಡಿಸುತ್ತಿದ್ದ. ಸಿನೆಮಾಗೂ ಕರೆದುಕೊಂಡು ಹೋಗುತ್ತಿದ್ದ. ಆದರೂ ಮಾವ ಯಾಕೆ ತನಗೆ ಇಷ್ಟವಾಗುತ್ತಿಲ್ಲವೆಂಬುದು ಅವಳಿಗೆ ತಿಳಿಯುತ್ತಿರಲಿಲ್ಲ.
*****
ರೀಟಾ ಬೆಳಗಿನ ಧಾವಂತದಲ್ಲಿ ಮೆಟ್ರೋ ಹತ್ತಿ ಕೆಲಸಕ್ಕೆ ಹೋಗುವ ದಾರಿಯಲ್ಲಿದ್ದಳು.
ತನ್ನೂರಿಗೆ ಹೋಗದೆ ಹದಿನೇಳು ವರ್ಷಗಳೇ ಕಳೆದಿದ್ದವು. ತಾಯಿಯ ಅಂತ್ಯಕ್ರಿಯೆಗೆಂದು ಹೋದವಳು ಅದರ ನಂತರ ಮತ್ತೆ ಊರಿಗೆ ಹೋಗಿರಲಿಲ್ಲ. ಆಗ ಹೋಗಿದ್ದಾಗ ದೂರದ ಚಿಕ್ಕಮ್ಮ ಒಬ್ಬರು ರೀಟಾಳ ಬಳಿ ಫೋನ್ ನಂಬರ್ ಕೇಳಿ ಪಡೆದು ಆಗಾಗ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಕಳಿಸೆಂದು ಕೇಳಿ ಫೋನ್ ಮಾಡುತ್ತಿದ್ದರು. ರೀಟಾಳೂ ಹಣ ಕಳುಹಿಸುತಿದ್ದಳು. ಅದು ಬಿಟ್ಟರೆ ಸಂಬಂಧಿಕರೆಂದು ಇನ್ಯಾರೂ ಇರಲಿಲ್ಲ‌.
ತಾನು ಕೆಲಸ ಮಾಡುತ್ತಿರುವ ಆಸ್ಪತ್ರೆ, ಮನೆ ಮತ್ತು ಈ ಮೆಟ್ರೊ ಬಿಟ್ಟರೆ ಅವಳು ಇನ್ನೆಲ್ಲೂ ಹೋಗುತ್ತಿರಲಿಲ್ಲ.
ಇಗರ್ಜಿಗೆ ಹೋಗುವುದೂ ಅಪರೂಪವಾಗಿದ್ದರಿಂದ, ಟಿವಿ ಮತ್ತು ವೃತ್ತ ಪತ್ರಿಕೆಗಳನ್ನು ಮಾತ್ರ ಓದುತಿದ್ದಳು.
ಬೇಡ ಬೇಡವೆಂದರೂ ಮುಂಬೈ ಮಾವನದೇ ವಿಷಯ ಮನಸ್ಸಿನಲ್ಲಿ ಸುಳಿಯುತ್ತಿತ್ತು. ಹೇಗೆ ಸತ್ತ? ಅವನ ಕ್ರಿಯಾದಿಗಳನ್ನು ಮಾಡಲು ಯಾರಿದ್ದಾರೆ? ಏನಾಗಬಹುದು? ಇವೇ ಪ್ರಶ್ನೆಗಳು ಮೇಲಿಂದ ಮೇಲೆ ಉದ್ಭವಿಸುತಿದ್ದವು.
‘ಮಾಧು ಶೆಟ್ಟಿ ಅದೃಷ್ಟವಂತ, ಇಬ್ಬಿಬ್ಬರು ಹೆಂಡತಿಯರು. ನನ್ನ ನಸೀಬೇ ಸರಿ ಇಲ್ಲ’. ಒಂದೆರಡು ಸಲ ರಜೆಯಲ್ಲಿ ಊರಿಗೆ ಬಂದಿದ್ದಾಗ ಹೀಗೆ ಅನ್ನುತ್ತಿದ್ದ ಮುಂಬಯಿ ಮಾವ. ರೀಟಾಳ ಎಳೆಯ ಬುದ್ಧಿಗೇನೂ ಹೊಳೆಯುತ್ತಿರಲಿಲ್ಲ. ಆಗ ತಾಯಿ ಮಗಳ ಬಳಿ ” ಬಂಟರ ಕೆಲವು ಹೆಣ್ಣುಮಕ್ಕಳು ತಮ್ಮ ಚಿಕ್ಕ ತಮ್ಮನಿಗೆ ಮಗಳನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂದು ಕೇಳಿದ್ದೇನೆ” ಎಂದು ಹೇಳುತಿದ್ದರು.
ರೀಟಾಗೆ ಆಗ ಮದುವೆ ಎಂಬ ಮಾತಿನಿಂದಲೇ ನಾಚಿಕೆಯಾಗುತಿತ್ತು.
ದಿನಗಳು ಕಳೆದಂತೆ ಮಾವ ಬಹಳ ಹತಾಶನಾದಂತೆ ತೋರುತಿದ್ದ‌. ಒಂದು ಕೋಣೆಯ ಮನೆಯ ಒಂದು ಬದಿಯಲ್ಲಿ ಚಾಪೆ ಹಾಸಿ ಅಮ್ಮ ಮಗಳಿಬ್ಬರೂ ಮಲಗಿದರೆ, ಮತ್ತೊಂದು ಬದಿಯ ಚಾಪೆಯಲ್ಲಿ ಮಾವ ಮಲಗುತಿದ್ದ. ಅವನಿಗೆ ನಿದ್ದೆ ಹತ್ತಿತೆಂದು ಅವನ ಗೊರಕೆಯಿಂದಲೇ ತಿಳಿಯುತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅವನ ಗೊರಕೆ ಸದ್ದು ಕೇಳುತ್ತಿರಲಿಲ್ಲ.
ಒಂದು ಸಲ ನಿನಗೆ ಸೈಕಲ್ ಕಲಿಸುತ್ತೇನೆಂದು ಹೇಳಿ ಬಾಡಿಗೆ ಸೈಕಲ್ ತಂದು, ಸೈಕಲ್ ಹೊಡೆಯಲು ಕಲಿತರೆ ಹೊಸ ಸೈಕಲ್ ಕೊಡಿಸುತ್ತೇನೆಂದು ಆಸೆ ಹುಟ್ಟಿಸಿದ.
ಸೈಕಲ್ ಕಲಿಸುವ ನೆಪದಲ್ಲಿ ತನ್ನ ತೋಳುಗಳಿಂದ ಅವಳನ್ನು ಬಳಸಿ ಹಿಡಿದು, ಕಲಿಸುತ್ತಿರುವಾಗ ನಿಜವಾಗಲೂ ರೀಟಾಳಿಗೆ ಕಲಿಯುವ ಆಸಕ್ತಿ ತಣ್ಣಗಾಯಿತು.
ಮತ್ತೆ ಸ್ವಲ್ಪ ದಿನ ಕಳೆದ ಮೇಲೆ ಸಿನೆಮಾ ನೋಡಲು ಹೋಗೋಣವೆಂದು ಕರೆದಾಗ, ರೀಟಾ ತನಗೆ ಸಿನೆಮಾ ನೋಡುವ ಇಚ್ಛೆಯಿಲ್ಲವೆಂದು ಖಡಾಖಂಡಿತವಾಗಿ ಹೇಳಿದಾಗ, ತಾಯಿ ಕೋಪದಿಂದ, ಕೆನ್ನೆಗೆರಡು ಹೊಡೆದು ಹೇಳಿದ್ದಳು ‘ಅವನು ನಿನ್ನ ಮಾವ ಕಣೇ. ಅವನೇನು ನಿನ್ನನ್ನು ತಿನ್ನುವುದಿಲ್ಲ. ಹೋಗು’.
ಆವತ್ತು ಉಪಾಯವಿಲ್ಲದೇ ಮಾವನ ಜತೆ ಸಿನೆಮಾ ನೋಡಲು ಹೋದ ರೀಟಾಳಿಗೆ ತಾಯಿಯ ಮೇಲೂ ಮಾವನ ಮೇಲೂ ಮನಸ್ಸು ಮುರಿದು ಹೋಯಿತು.
ಮಾವ ಮರಳಿ ಮುಂಬಯಿಗೆ ಹೋದ ಬಳಿಕ ರೀಟಾ ತನ್ನ ತಾಯಿಯ ಬಳಿ, ” ನಂಗ್ಯಾಕೋ ಮಾವ ಇಷ್ಟ ಆಗ್ತಿಲ್ಲ. ಅವನು ಎಲ್ಲೆಲ್ಲೊ ಮುಟ್ಟುತ್ತಾನೆ. ಮುತ್ತು ಕೊಡ್ತಾನೆ. ಬೇಡ ಬೇಡವೆಂದರೆ, ಶೆಟ್ಟಿ ತನ್ನ ಅಕ್ಕನ ಮಕ್ಕಳಿಗೆ ಹಾಗೆ ಮಾಡುತ್ತಾನೆ, ಹೀಗೆ ಮಾಡುತ್ತಾನೆ ಅಂತಾನೆ. ನನಗೇನೂ ಅರ್ಥ ಆಗೋದಿಲ್ಲಮ್ಮ…”
ಆದರೆ, ರೀಟಾಳ ತಾಯಿ ಯಾವುದೇ ಪ್ರತಿರೋಧವನ್ನು ತೋರಲಿಲ್ಲ.
“ನಿನಗೆಲ್ಲೋ ಹುಚ್ಚು ಹಿಡಿದಿದೆ. ಬೇಡವಾದದ್ದನ್ನೇ ಯೋಚಿಸಿ, ನಿನ್ನ ತಲೆಹಾಳಾಗಿದೆ. ಮುತ್ತು ಕೊಟ್ಟರೇನಾಯ್ತು, ನಿನ್ನ ಮಾವನಲ್ಲವೇನು ಅವನು?”
ರೀಟಾಳಿಗೇನೂ ಅರ್ಥವಾಗುತ್ತಿರಲಿಲ್ಲ. ಎಲ್ಲೊ, ಏನೋ ಸರಿ ಇಲ್ಲ ಅನ್ನುವುದು ಮಾತ್ರ ತಿಳಿಯುತ್ತಿತ್ತು.
ಹೀಗೆ ವರುಷಗಳುರುಳಿ ರೀಟಾ ಹತ್ತನೆ ತರಗತಿ ಮುಗಿಸಿ ನರ್ಸಿಂಗ್ ಕಲಿಯಲು ಹೋದಳು. ತಂದೆಯ ಕಂಪೆನಿಯಿಂದ ಸಿಕ್ಕಿದ ದುಡ್ಡನ್ನು ಅವಳ ಶಿಕ್ಷಣಕ್ಕೆಂದು ಬ್ಯಾಂಕಿನಲ್ಲಿಟ್ಟು ಅವಳಮ್ಮ ಅಲ್ಲಿ ಇಲ್ಲಿ ದುಡಿದು ದಿನಗಳೆಯುತಿದ್ದಳು.
ನರ್ಸಿಂಗ್ ಕೋರ್ಸ್ ಮುಗಿದು ಕೆಲಸ ಹುಡುಕುತಿದ್ದ ವೇಳೆಗೆ ಸರಿಯಾಗಿ ಮುಂಬಯಿಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಹಚ್ಚುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದು ಮಾತ್ರವಲ್ಲ, ಅವಳನ್ನು ಕರೆದೊಯ್ಯಲು ಊರಿಗೆ ಬಂದೇ ಬಿಟ್ಟ ಮುಂಬಯಿ ಮಾವ.
ಬೇರೆ ದಾರಿಯಿಲ್ಲದೆ ರೀಟಾ ಮಾವನ ಜತೆ ಬಸ್ಸಿನಲ್ಲಿ ಮುಂಬಯಿಗೆ ಹೋದಳು.
*****
ಬೆಳಗ್ಗೆ ಸ್ವಲ್ಪ ತಡವಾದುದರಿಂದ ಮೆಟ್ರೊದಲ್ಲಿಂದು ರಷ್ ಇರಲಿಲ್ಲ.
ಆಸ್ಪತ್ರೆ ಸೇರಿ ಕೆಲಸದಲ್ಲಿ ತೊಡಗಿಸಿಕೊಂಡರೂ ರೀಟಾಳ ಮನಸ್ಸು ಮಾತ್ರ ಮುಂಬಯಿ ಮಾವನ ಬಗ್ಗೆ ಚಿಂತಿಸುತಿತ್ತು.
ಅವನ ಅಂತ್ಯಕ್ರಿಯೆಗೆ ಹೋಗಲೋ? ಎಲ್ಲೆಂದು ಹೋಗಲಿ? ಯಾಕೆ ಹೋಗಬೇಕು?
ರೀಟಾಳ ಮನಸ್ಸು ಯೋಚನೆಗಳ ಅಲೆಗಳಿಂದ ಅಲ್ಲೋಲ ಕಲ್ಲೋಲವಾಯಿತು.
ಆಸ್ಪತ್ರೆಯ ಎಲ್ಲಾ ತರದ ರೋಗಿಗಳ ಅನೇಕ ವಿವಿಧ ಕತೆಗಳಿಗೆ ಕಿವಿಯಾಗುವ ರೀಟಾಳಿಗೆ ಈಗ ಮಾವನ ಅಂತ್ಯಕ್ರಿಯೆಗೆ ಹೋಗುವ ಬಗ್ಗೆ ಯಾವ ಯೋಚನೆಯೂ ಇರಲಿಲ್ಲ.
ಆಕಸ್ಮಿಕವೆನ್ನುವಂತೆ, ಅದೇ ದಿನ ಒಬ್ಬ ಚಿಕ್ಕ ಮಗುವನ್ನು ಎಮರ್ಜೆನ್ಸಿ ವಾರ್ಡಲ್ಲಿ ಭರ್ತಿ ಮಾಡಿದ್ದರು. ಆವತ್ತು ರೀಟಾಗೆ ಎಮರ್ಜೆನ್ಸಿ ವಾರ್ಡಲ್ಲೇ ಡ್ಯೂಟಿ ಬಿದ್ದಿತ್ತು.
ಚಿಕ್ಕ ಹೆಣ್ಣು ಮಗು ಹನ್ನೊಂದು – ಹದಿನೆರಡು ವರ್ಷ ವಯಸ್ಸಿನದು.
ಮಾಸಿಕ ಚಕ್ರದಲ್ಲಿ ವಿಪರೀತ ರಕ್ತಸ್ರಾವವೆಂದು ಕರೆದುಕೊಂಡು ಬಂದಿದ್ದಾರೆಂದು ಯಾರೋ ಹೇಳಿದ್ದನ್ನು ಕೇಳಿಸಿಕೊಂಡಳು.
ಆದರೆ, ಆಮೇಲೆ ತಿಳಿಯಿತು ಯಾರೋ ಅವರ ನೆಂಟನೇ ಆ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ.
ರೀಟಾಳಿಗೆ ಹುಚ್ಚು ಹಿಡಿದಂತಾಯಿತು.
ಮಗುವಿಗೆ ಪ್ರಜ್ಞೆ ಇರಲಿಲ್ಲ. ಶಸ್ತ್ರಚಿಕಿತ್ಸೆಯ ತಯಾರಿ ಮಾಡಬೇಕಾದ್ದರಿಂದ ಜತೆಯ ನರ್ಸ್ ಗಳ ಜತೆ ಸೇರಿ ರೀಟಾಳೂ ಕೆಲಸದಲ್ಲಿ ತೊಡಗಿಕೊಂಡಳು.
‘ಸ್ವೀಡನ್‍ನಂತ ಪ್ರಗತಿಶೀಲ ಪಟ್ಟಣಗಳಲ್ಲೂ ಇಂತಹ ಕೀಳು ಕೃತ್ಯಗಳು ಘಟಿಸುತ್ತವೆಯೇ?’
ರೀಟಾಳ ಜತೆ ಕೆಲಸ ಮಾಡುವ ಇಥಿಯೋಪಿಯಾದ ನರ್ಸ್ ಮೆಲುದನಿಯಲ್ಲಿ ಪಿಸುಗುಟ್ಟಿದ್ದು ರೀಟಾಳಿಗೆ ಕೇಳಿಸಿತು.
‘ಯಾವುದೇ ನಗರಗಳು ಯಾರ ಮೇಲೂ ಬಲಾತ್ಕಾರ ಮಾಡುವುದಿಲ್ಲ, ವಿಕೃತ ಮನಸ್ಸುಗಳು ಅತ್ಯಾಚಾರ ನಡೆಸುತ್ತವೆ” ರೀಟಾ ತನ್ನಲ್ಲೇ ಎಂಬಂತೆ ಗೊಣಗಿದಳು.
“ದುರದೃಷ್ಟ ಆ ಮಗುವಿನದು. ಅವಳನ್ನು ಕಾಪಾಡಲು ಮನೆಯಲ್ಲಿ ಯಾರೂ ಗಂಡಸರಿರಲಿಲ್ಲವೇ?”
ಮತ್ತೆ ಅವಳ ಪ್ರಶ್ನೆ.
“ಮನೆಯ ಗಂಡಸೇ ಆ ಕೃತ್ಯ ಎಸಗಿದರೆ ಕಾಪಾಡುವವರು ಯಾರು?”
ಅರ್ಥೈಸಲು ಪ್ರಯತ್ನಿಸಿದಳು ರೀಟಾ.
ಅಷ್ಟರಲ್ಲಿ ವೈದ್ಯರು ಒಪರೇಷನ್ ಥಿಯೇಟರ್ ಒಳಗೆ ಪ್ರವೇಶಿಸಿದರು.
ಚಿಕಿತ್ಸೆ ಮುಗಿಸಿ ಡಾಕ್ಟರು ಹೋದ ಮೇಲೆ ರೀಟಾ ಮತ್ತವಳ ಜತೆಯ ನರ್ಸ್ ಮಗುವನ್ನು ಗಮನಿಸುತ್ತಾ ಕೂತರು.
ಮಗುವನ್ನು ನೋಡುತ್ತಾ ಕೂತ ರೀಟಾಳ ಮನಸ್ಸಿನಲ್ಲಿ ಭಾವನೆಗಳ ಮಹಾಪೂರವೇ ಹರಿದುಬಂತು.
ತನ್ನನ್ನು ಕೆಲಸಕ್ಕೆ ಸೇರಿಸಲೆಂದು ಮುಂಬಯಿಗೆ ಕರೆದುಕೊಂಡು ಬಂದ ಮಾವ, ತನ್ನನ್ನು ಅವನ ಮಿತ್ರನೊಬ್ಬನ ಮನೆಗೆ ಕರೆದುಕೊಂಡು ಹೋಗಿದ್ದ.
ಪ್ರಯಾಣದ ದಣಿವಿನಿಂದಾಗಿ ನಿದ್ದೆ ಮಾಡಿದರೆ ಸಾಕಾಗಿತ್ತು. ಕುಡಿಯಲು ಕೊಟ್ಟ ಪೇಯವನ್ನು ಕುಡಿದು ಮಲಗಿದ್ದಷ್ಟೇ ಗೊತ್ತು.
ಮಾರನೆಯ ಬೆಳಿಗ್ಗೆ ಏಳುವಾಗ ಮೈಕೈ ಎಲ್ಲಾ ನೋವು. ಒಳಗೊಳಗೆ ನೋವನ್ನು ನುಂಗಿಕೊಂಡಳೇ ಹೊರತು ಏನೂ ಮಾಡದಾದಳು. ಅಲ್ಲಿಂದ ಅವಳಿಗೆ ಎಲ್ಲ ಗಂಡಸರೂ ಮುಂಬಯಿ ಮಾವನಂತೆ ತೋರುತ್ತಿದ್ದರಿಂದ ಒಂಟಿಯಾಗಿಯೇ ಉಳಿದಳು.
“ಎಂಥ ಮುಗ್ದ ಮಗುವಿದು, ಈ ಎಳೆಯ ಮಗುವಿನ ಮೇಲೆ ಅತ್ಯಾಚಾರ ಎಸಗಲು ಯಾವ ಗಂಡಸಿಗೆ ಮನಸ್ಸು ಬಂತೊ..?” ಇಥಿಯೋಪಿಯಾದ ನರ್ಸ್ ಮತ್ತೆ ಗೊಣಗುತಿದ್ದಳು.
ಶೀಲಾ ಭಂಡಾರ್‌ಕರ್, ಮೈಸೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *