ಮುಂದುವರೆದ ರೈತರ ಆತ್ಮಹತ್ಯೆಗಳು ಸಾವಿನ ಮನೆಯ ತಲ್ಲಣಗಳು: ಎನ್. ಕವಿತಾ

(ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಮಂಡ್ಯ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಅನ್ನದಾತನ ಸಾವಿಗೆ ಕಾರಣಗಳೇನು? ಸಾವಿನ ನಂತರ ರೈತನ ಕುಟುಂಬ ಸದಸ್ಯರು ಬದುಕಲು ಯಾವ ರೀತಿ ಪಾಡು ಪಡುತ್ತಿದ್ದಾರೆ? ಆ ಕುಟುಂಬಗಳಿಗೆ ಸರ್ಕಾರಗಳು ಮತ್ತು ಸಮಾಜ ಯಾವ ರೀತಿ ಸ್ಪಂದಿಸಿವೆ? ಮಾಧ್ಯಮಗಳ ಸ್ಪಂದನೆ ಯಾವ ರೀತಿಯಿದೆ? ಇತ್ಯಾದಿ ಕುರಿತಂತೆ ಉತ್ತರ ಕಂಡುಕೊಳ್ಳಲು ಯತ್ನಿಸಲಾಗಿದೆ). 

ಒಕ್ಕಲಾ ಕೇರ್ಯಾಗ ಮಳೀರಾಯ
ಮಕ್ಕಳ ಮಾರ್ಯಾರ ಮಳೀರಾಯ!
ಒಕ್ಕಲಾ ಕೇರ್ಯಾಗ ಮಕ್ಕಳ ಮಾರಿ 
ಭತ್ತಂತ ತಿರುಗ್ಯಾರ ಮಳೀರಾಯ        – ಜನಪದ


ಹಿನ್ನೆಲೆ:
ಸಕ್ಕರೆಯ ನಾಡು ಅಕ್ಕರೆಯ ಬೀಡು ಎಂಬ ಶೀರ್ಷಿಕೆಯೊಂದಿಗೆ ಕಂಗೊಳಿಸುವ ಮಂಡ್ಯ ಜಿಲ್ಲೆಗೆ ಕಹಿ ಸಂಗತಿಯಾಗಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳ ಕಣ್ಣೋಟವನ್ನೊಮ್ಮೆ ಇಣುಕಿ ನೋಡಲು ಯತ್ನಿಸುವವರಿಗೆ ಆಘಾತಕಾರಿ ವಿಷಯಗಳು ರೋಚಕವೆನಿಸಿ ಮಾನವೀಯ ಮೌಲ್ಯವುಳ್ಳ ಮನುಷ್ಯರಿಗೆ ಮರುಕ ಉಂಟು ಮಾಡುವುದಂತೂ ಸತ್ಯ.

ಕುವೆಂಪು ಅವರ ನಾಡಗೀತೆಯಾದ ‘ಉಳುವ ಯೋಗಿಯ ನೋಡಲ್ಲಿ’ ಎಂಬ ನಾಣ್ಣುಡಿಯ ಬದಲಾಗಿ ‘ಅಳುವ ಯೋಗಿಯ ನೋಡಲ್ಲಿ’ ಎಂಬಲ್ಲಿಗೆ ಇದ್ದ ಪರಿಸ್ಥಿತಿ ಈಗ ‘ರೈತ ಯೋಗಿಯ ಆತ್ಮಹತ್ಯೆ ನೋಡಲ್ಲಿ’ ಎಂಬಲ್ಲಿಗೆ ಬಂದು ನಿಂತಿರುವುದು ವಿಪರ್ಯಾಸ. ಇಡೀ ದೇಶದ, ರಾಜ್ಯದ ಬೆನ್ನೆಲುಬು ರೈತ, ಆತನೇ ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡರೂ ಕಾಣದವರಂತೆ, ಕೇಳಿದರೂ ಕೇಳಿಸಿದಂತೆ ನಮ್ಮನ್ನಾಳುತ್ತಿರುವ ಕೇಂದ್ರ, ರಾಜ್ಯ ಸರ್ಕಾರಗಳ ಮನಸ್ಥಿತಿ ಮತ್ತು ಹೇಡಿತನಕ್ಕೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.

ರಾಜ್ಯದ ರೈತಾಪಿ ವರ್ಗ ತೀವ್ರತರವಾದ ಕೃಷಿ ಬಿಕ್ಕಟ್ಟು, ನೈಸರ್ಗಿಕ ವಿಕೋಪ, ಸಬ್ಸಿಡಿ ರಹಿತ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳ ದುಬಾರಿ ಬೆಲೆ, ಫಸಲಿಗೆ ಖರ್ಚು ಮಾಡಿದ ವೆಚ್ಚವನ್ನು ಭರಿಸಲಾಗದೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಕೊರತೆ, ದಲ್ಲಾಳಿಗಳ ಒಡೆತ, ಕನಿಷ್ಟ ಬೆಳೆ ವಿಮೆಯನ್ನು ನೀಡದ ಸರ್ಕಾರದ ಕ್ರಮಗಳಿಂದ ತತ್ತರಿಸಿ ಬದುಕೇ ನಡೆಸಲು ಕಷ್ಟವಾಗಿ, ಸಾಲ ಮಾಡಿದವರಿಗೆ ಬಾಯಿ ಕೊಡಲಾಗದೆ ಹೆದರಿ ಆತ್ಮಹತ್ಯೆಯ ಮಾರ್ಗವನ್ನು ಅನುಸರಿಸುತ್ತಿರುವುದು ದುರದೃಷ್ಟಕರವಾದದ್ದು. 

ಕಳೆದ ಮೂರು ನಾಲ್ಕು ತಿಂಗಳಿಂದ ರೈತರ ಆತ್ಮಹತ್ಯೆಯ ವರದಿಗಳು ನಮ್ಮ ಕನ್ನಡ ದಿನಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಏಪ್ರಿಲ್‍ನಿಂದೀಚೆಗೆ ರಾಜ್ಯದಲ್ಲಿ 700 ಕ್ಕೂ ಹೆಚ್ಚು ರೈತರು ಇದುವರೆಗೂ ಆತ್ಮಹತ್ಯೆಯಾಗಿದ್ದಾರೆ ಎಂದು ಮುಖ್ಯಮಂತ್ರಿಗಳೇ ಹೇಳಿರುವುದು ಗಮನಾರ್ಹ ವಿಷಯ. ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಸಂಭವಿಸಿದ ಜಿಲ್ಲೆ ಮಂಡ್ಯ ಮತ್ತು ಹಾವೇರಿ ಎರಡನೇ ಸ್ಥಾನದಲ್ಲಿದೆ.

ಫಸಲನ್ನೇ ಚಿತೆಯಾಗಿಸಿ ಹಾರಿದ ರೈತ:

ಇಡೀ ರಾಜ್ಯದ ಜನರ ಗಮನ ಸೆಳೆದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಗಾಣದ ಹೊಸೂರಿನ ಅಂಗವಿಕಲ ರೈತರ ನಿಂಗೇಗೌಡ (65) ತಾನು ಬೆಳೆದ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ತಾನು ಆ ಬೆಂಕಿಗೆ ಹಾರಿ ಸಜೀವವಾಗಿ ದಹನವಾದ ಪ್ರಕರಣ ರಾಜ್ಯದ ಜನರನ್ನು ಬೆಚ್ಚಿಬೀಳಿಸಿತು. ಎಲ್ಲಾ ದಿನಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಿದೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತು. ಬಹುತೇಕ ರೈತರು ನೇಣಿಗೆ ಕ್ರಿಮಿನಾಶ ಸೇವನೆಯಿಂದ ಸಾವಿನ ಮಾರ್ಗ ಹುಡುಕಿದರೆ ರೈತರ ನಿಂಗೇಗೌಡ ಆಳೆತ್ತರ ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗದೆ, ಸಾಲಗಾರರ ಹಿಂಸೆಗೆ ಹೆದರಿ ತನ್ನ ಮಣ್ಣಿನಲ್ಲೇ ಅರೆಬೆಂದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. 

ಮೃತ ರೈತ ನಿಂಗೇಗೌಡರ ಮನೆಗೆ ಭೇಟಿ ನೀಡಿದಾಗ ಒಂದು ಚಿಕ್ಕದಾದ ಹಳೆ ಹೆಂಚಿನಮನೆ, ಮಳೆ ಬಂದರೆ ಸೋರುವ ಸ್ಥಿತಿ, ಅಂಗವಿಕಲ ಮಗ, ಮಗನ ಹೆಂಡತಿ ಲಕ್ಷ್ಮಿ, ಮೃತರ ಪತ್ನಿ ಬೋರಮ್ಮ (60. ಅವರನ್ನು ಮಾತನಾಡಿಸಿದಾಗ ಕಂಡುಬಂದ ಹಲವು ವಿಷಯಗಳು ಅವರ ಸಂಕಷ್ಟದ ತೀವ್ರತೆಯನ್ನು ಒಂದೊಂದಾಗಿ ಹೇಳುತ್ತಾ ಹೋದವು. ಮೃತ ನಿಂಗೇಗೌಡರ ಅಪ್ಪನಿಗೆ ಇಬ್ಬರು ಹೆಂಡಿರು, ನಿಂಗೇಗೌಡ ತನ್ನ ತಾಯಿಯ ಒಬ್ಬನೇ ಮಗ. ಇನ್ನುಳಿದ ಮೂವರು ಅಣ್ಣ ತಮ್ಮಂದಿರು ಮಲ ತಾಯಿಯ ಮಕ್ಕಳು. 15 ಗುಂಟೆ ಜಮೀನಿನಲ್ಲಿ ಮಾತ್ರ ನಿಂಗೇಗೌಡರು ವ್ಯವಸಾಯ ಮಾಡುತ್ತಿದ್ದಾರೆ. ಅದನ್ನು ಕೂಡ ಅವರ ಹೆಸರಿಗೆ ಖಾತೆ ಮಾಡಿಕೊಟ್ಟಿಲ್ಲವೆಂದರು. ಇದೂ ಕೂಡ ಅವರಿಗೆ ಜಿಗುಪ್ಸೆ ನೀಡುತ್ತಿತ್ತು. 

 

ಎಂಭತ್ತು ವರ್ಷದ ಅಜ್ಜಿ &  ಮೊಮ್ಮಗ

ನಿಂಗೇಗೌಡನ  ಕುಟುಂಬದವರೊಂದಿಗೆ

ಒಬ್ಬನೇ ಮಗ ಈರೇಗೌಡ ಬೆಂಗಳೂರಿಗೆ ವಲಸೆ ಹೋಗಿ ವಿಜಯನಗರದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ. ಕೆಲಸ ಮುಗಿಸಿ ಮನೆಗೆ ಬರುವಾಗ ರಸ್ತೆ ಅಪಘಾತ ಸಂಭವಿಸಿ ಅವನ ಬಲಗಾಲಿಗೆ ತೀವ್ರ ಪೆಟ್ಟಾಗಿ ಮೂಳೆ ಮುರಿದಿದೆ. ಕಾಲು ಮುರಿದ ಮಗ ಕೆಲಸ ಮಾಡಲಾಗದೇ ಊರು ಸೇರಿದ್ದಾನೆ. ಕಾಲು ಆಪರೇಷನ್ ಖರ್ಚುವೆಚ್ಚಕ್ಕಾಗಿ 1 ಲಕ್ಷದವರೆಗೆ ಸಾಲ ಮಾಡಲಾಗಿದೆ, ಮನೆ ರಿಪೇರಿಗಾಗಿ 40 ಸಾವಿರ ಸಾಲ, ವ್ಯವಸಾಯಕ್ಕಾಗಿ ಸಾಲ ಮಾಡಿದ್ದಾರೆ. ಒಟ್ಟು ಅವರ ಕುಟುಂಬಕ್ಕೆ 3 ಲಕ್ಷ ಸಾಲದ ಹೊರೆ ಬಿದ್ದಿದೆ. ಮನೆಯಲ್ಲಿ ದುಡಿಯುವ ಒಬ್ಬನೇ ಮಗನಿಗೆ ಬಂದೊದಗಿದ ದು:ಸ್ಥಿತಿ ಒಂದೆಡೆ, ಇನ್ನೂ ಮೃತರ ಹೆಂಡತಿ ಬೋರಮ್ಮ ಕೂಲಿ ಕೆಲಸ ಮಾಡುತ್ತಾರೆ. 15 ಗುಂಟೆ ಜಮೀನಿನಲ್ಲಿ ಸಾಲ ಮಾಡಿ ಕಬ್ಬು ಬೆಳೆದಿದ್ದರು. ಬೆಳೆದು ನಿಂತ ಕಬ್ಬಿಗೆ ಒಳ್ಳೆಯ ಬೆಲೆ ಇರಲಿಲ್ಲ. ಮತ್ತೊಂದೆಡೆ ತನಗೆ ಬರಬೇಕಾದ ಜಮೀನಿನ ಖಾತೆ ವರ್ಗಾಯಿಸದೇ ಜರ್ಜರಿತರಾದ ರೈತರ ನಿಂಗೇಗೌಡರಿಗೆ ಕೈಸಾಲ ಮಾಡಿದ ಮಂದಿಯಿಂದ ಒತ್ತಡ ಹೆಚ್ಚಿತ್ತು ಎಂದು ಕುಟುಂಬದ ಸದಸ್ಯರು ತಿಳಿಸಿದರು. 

ಈ ಕುಟುಂಬಕ್ಕೆ ಜಿಲ್ಲಾಧಿಕಾರಿ, ಜಿಲ್ಲೆಯ ಉಸ್ತುವಾರಿ ಸಚಿವರು, ಮಾಜಿ ಪ್ರಧಾನಿ ದೇವೇಗೌಡರು, ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ 2 ಲಕ್ಷ ಪರಿಹಾರ ನಮಗೆ ದೊರೆತಿದೆ ಎಂದರು. ಒಂದು ಲಕ್ಷ ಜಿಲ್ಲಾಧಿಕಾರಿ ಇನ್ನುಳಿದ 1 ಲಕ್ಷ ಅವರಿವರು ಕೊಟ್ಟಿದ್ದಾರೆ ಎಂದರು. ಮೃತರ ಅಂಗವಿಕಲ ಮಗನಿಗೆ ಸ್ವಉದ್ಯೋಗ ಮಾಡಲು ಅಂಗಡಿ ಹಾಕಿಕೊಡುತ್ತೇವೆಂದು ಭರವಸೆ ನೀಡಿದ್ದು, ಇನ್ನೂ ಏನೂ ದಾರಿತೋಚುತ್ತಿಲ್ಲ ಎಂದು ಹೇಳಿದರು. 

ಸತ್ತ ರೈತ ಕುಟುಂಬ ನೋಡಲು ಬಂದ ರಾಹುಲ್ ಗಾಂಧಿಗೆ ಮತ್ತೊಬ್ಬ ರೈತನ ಅಂತಿಮದರ್ಶನ!
    ಪಾಂಡವಪುರ ತಾಲ್ಲೂಕಿನ ಸಣಬದ ಕೊಪ್ಪಲಿಗೆ ಭೇಟಿ ಕೊಟ್ಟೆವು. ರೈತರ ಲೋಕೇಶ್ (45) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಹೆಂಡತಿ ಶೋಭ (35) ಮಕ್ಕಳಾದ ಸ್ಮಿತಾ, ಸಾಗರ್  – ಮಗಳು 6ನೇ ತರಗತಿ, ಮಗ 4ನೇ ತರಗತಿ ಓದುತ್ತಿದ್ದಾರೆ. ಇವರಿಗೆ 30 ಗುಂಟೆ  ಜಮೀನಿದೆ. ಆ ಜಮೀನಿನಲ್ಲಿ ಕಬ್ಬು ಬೆಳೆದಿದ್ದಾರೆ. ವ್ಯವಸಾಯಕ್ಕಾಗಿ ಸಾಲ ಮಾಡಿದ್ದಾರೆ. ಜೊತೆಗೆ ಗಂಡ ಹೆಂಡತಿ ಕೂಲಿಕೆಲಸ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗೆ ಮೃತ ರೈತ ಲೋಕೇಶ್ ತೀವ್ರಸಾಲದ ಬಾಧೆಗೆ ಒಳಗಾಗಿದ್ದರು ಎಂದು ತಾಯಿ ನಂಜಮ್ಮ (70) ಮತ್ತು ಹೆಂಡತಿ ಶೋಭ ಹೇಳಿದರು. ನನಗೆ ಒಬ್ಬನೇ ಮಗ ಕಷ್ಟಕಾಲದಲ್ಲಿ ಸಾಕಿ-ಸಲಹಬೇಕಿದ್ದ ಮಗನೇ ಇವತ್ತು ಇಲ್ಲ ಎಂದು ಕಣ್ಣೀರಿಟ್ಟರು. 

ಇನ್ನೂ ಈ ಕುಟುಂಬದ ಸಂಕಷ್ಟಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಯುವನಾಯಕ ರಾಹುಲ್ ಗಾಂಧಿ ರೈತರ ಆತ್ಮಹತ್ಯೆಯಾದ ರೈತರ ಮನೆಗೆ ಭೇಟಿ ನೀಡಲು ಬಂದಿದ್ದ ಸಂದರ್ಭದಲ್ಲಿ ಇವರ ಆತ್ಮಹತ್ಯೆ ಸಂಭವಿಸಿದ್ದರಿಂದ ಮಂಡ್ಯ ಜಿಲ್ಲೆಯ ಪೂಕನಹಳ್ಳಿ ಹಾಗೂ ಸಣಬದ ಕೊಪ್ಪಲಿನ ಮೃತ ಲೋಕೇಶ್ ನ ಅಂತಿಮದರ್ಶನ ಪಡೆದು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಭರವಸೆ ನೀಡಿ ತಲಾ 1 ಲಕ್ಷ ರೂಪಾಯಿ ಚೆಕ್ ನ್ನು ನೀಡಿದ್ದಾರೆ. ಜಾತ್ಯಾತೀತ ಜನತಾದಳದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ 1 ಲಕ್ಷ ರೂ ನೀಡಿದ್ದಾರೆ. ಸರ್ಕಾರದ ವತಿಯಿಂದ ಯಾವುದೇ ಪರಿಹಾರ ಇದುವರೆಗೂ ಸಿಕ್ಕಿಲ್ಲ ಎಂದರು. ಪಾಂಡವಪುರ ಪೊಲೀಸ್ ಸ್ಟೇಷನ್ ನಲ್ಲಿ ಎಫ್.ಐ.ಆರ್ ದಾಖಲಾಗಿದೆ. 

ಕುಟುಂಬ ನಡೆಸುವವನೇ ಸಾವಿಗೆ ಶರಣಾದ:
ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ಮಂಡ್ಯದಿಂದ ಕೇವಲ 6-7 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಯುವರೈತ ಮಹೇಶ್ (35) ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರಿಗೆ ತಂದೆ ಇರಲಿಲ್ಲ. ಇಡೀ ಕುಟುಂಬದ ಜವಾಬ್ದಾರಿಯನ್ನು ತಾನೇ ನಿಭಾಯಿಸುತ್ತಿದ್ದ. ಇವರ ಪಾಲಿಗೆ ಎರಡೂವರೆ ಎಕರೆ ಜಮೀನು ಇತ್ತು. ಇಬ್ಬರು ತಂಗಿಯರ ಮದುವೆಯ ಜವಾಬ್ದಾರಿಯನ್ನೂ ತಾನೇ ನಿರ್ವಹಿಸಿದ್ದಾರೆ. ಮದುವೆಗಾಗಿ 1 ಎಕರೆ ಜಮೀನನ್ನು ಮಾರಿದ್ದಾನೆ. ಉಳಿದ ಒಂದೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ವ್ಯವಸಾಯದ ಖರ್ಚಿಗಾಗಿ ಸಾಲ, ತಂಗಿಯರ ಬಾಣಂತನ ಎಲ್ಲವನ್ನೂ ನಿರ್ವಹಿಸಲು 5 ಲಕ್ಷ ಸಾಲ ಮಾಡಿದ್ದ. ಧಿಡೀರನೇ ಕಬ್ಬಿನ ಬೆಲೆ ಕುಸಿತಗೊಂಡಿದ್ದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಮನೆಯ ಹೆಸರು ಹೇಳಲು ಇದ್ದ ಒಬ್ಬ ಮಗನೂ ಕಣ್ಮರೆಯಾದ ಆ ಮನೆಯಲ್ಲೀಗ ಸ್ಮಶಾನ ಮೌನ. ತಾಯಿ ನಾಗಮ್ಮ ಒಬ್ಬರೇ. ಬಾಣಂತನಕ್ಕಾಗಿ ಮನೆಗೆ ಬಂದಿದ್ದ ಮಗಳೊಂದಿಗೆ ಇದ್ದರು. ಈ ಕುಟುಂಬಕ್ಕೆ ಮೂರು ಲಕ್ಷ ಪರಿಹಾರ ನೀಡಲಾಗಿದೆ. ರಾಹುಲ್ ಗಾಂಧಿ 1 ಲಕ್ಷ ಚೆಕ್ ವಿತರಿಸಿದರೆ, ಜಿಲ್ಲಾಧಿಕಾರಿ 1 ಲಕ್ಷ, ಕೃಷಿ ಇಲಾಖೆಯಿಂದ 1 ಲಕ್ಷ ರೂ ನೀಡಲಾಗಿದೆ ಎಂದು ತಿಳಿಸಿದರು.

ಕುಟುಂಬದವರೊಂದಿಗೆ ಚರ್ಚಿಸುತ್ತಿರುವಾಗ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೇನು? ಎಂದು ವಿಚಾರಿಸಿದೆವು. ಆ ಮನೆಗೆ ಆಪ್ತರಾದ ಸಿದ್ದೇಗೌಡ ಕೃಷಿಗೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳನ್ನು ಎಳೆಎಳೆಯಾಗಿ ಮುಂದಿಟ್ಟರು. ಒಂದು ಟನ್ ಕಬ್ಬು ಬೆಳೆಯಲು ರೂ. 1,500 ಖರ್ಚು ಮಾಡಬೇಕು. ನಮ್ಮ ಕಬ್ಬನ್ನು ಮಾರಾಟ ಮಾಡಲು ಹೋದರೆ ಆಲೆಮನೆಯಲ್ಲಿ ಟನ್ ವೊಂದಕ್ಕೆ ರೂ. 800 ನೀಡುತ್ತಾರೆ. ಬಡ್ಡಿ ಸಾಲ ಮಾಡಿ ಬೆಳೆ ಮಾಡಿದವರಿಗೆ ಸಂಕಷ್ಟ ಎದುರಿಸುವುದು ಕಷ್ಟ. ಅದರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದರು. 

ಮುಂದುವರೆದು ‘ಇದೇ ಗ್ರಾಮದ ಪಕ್ಕದ ಬೀದಿಯಲ್ಲಿ ಇನ್ನೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿ ಅಪ್ಪ ಅಮ್ಮ ಇಬ್ಬರೂ ಇಲ್ಲ, 80 ವರ್ಷದ ಅಜ್ಜಿ ಎರಡು ಮಕ್ಕಳು ನೋಡಿಕೊಳ್ಳುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆಂದರು. ಸಹಜ ಕುತೂಹಲದಿಂದ ನಾವು ಆ ಕುಟುಂಬವನ್ನು ನೋಡೋಣವೆಂದಾಗ ಆ ಮನೆಯನ್ನು ನಮಗೆ ತೋರಿಸಿಕೊಟ್ಟರು. 

ಅನಾಥ ಹೆಣ್ಣನ್ನು ಸಾಕಿಸಲಹಿದ ಮಹಿಳೆಯೇ ಕೊನೆಗೆ ಅನಾಥೆ!

ಅಪ್ಪ ಅಮ್ಮ ಇಲ್ಲದ ಆ ಅನಾಥ ಮಕ್ಕಳನ್ನು ನೋಡಲೆಂದು ಬಂದ ನಮಗೆ ಎದುರುಗಡೆ ಗೋಡೆಯಲ್ಲಿ ನಾಲ್ಕು ಜನರ ಮೃತರ ಪೋಟೋಗಳು ಕಣ್ಣಿಗೆ ಬಿದ್ದವು. ಅಷ್ಟರಲ್ಲಿ ಒಳಗಿನಿಂದ ಅಜ್ಜಿ ಬಂದು ಕುಳಿತುಕೊಳ್ಳಲು ಹೇಳಿದರೂ ಮನೆಯ ಹಿರಿಯರಾದ ನಿಂಗೇಗೌಡರಿಗೆ ನಾಲ್ಕು ಜನ ಗಂಡುಮಕ್ಕಳು. ಅವರಲ್ಲಿ ಮೂವರು ಬೆಂಗಳೂರಿನಲ್ಲಿ ವಿವಿಧ ಕೆಲಸ ಮಾಡಿಕೊಂಡು ಅಲ್ಲೇ ಇದ್ದಾರೆ. ಊರಿನಲ್ಲಿ ಇದ್ದ ಕಿರಿಯ ಮಗ ಪುಟ್ಟೇಗೌಡ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಹೆಂಡತಿ ಲಕ್ಷ್ಮಿ ಅನಾರೋಗ್ಯದಿಂದ ಹತ್ತು ವರ್ಷದ ಹಿಂದೆಯೇ ಸಾವನ್ನಪ್ಪಿದ್ದಾಳೆ. ಇವರಿಗೆ ಇಬ್ಬರು ಮಕ್ಕಳು ರಾಕೇಶ್ ಮತ್ತು ಸ್ಮಿತಾ ಎಂದು ಅಜ್ಜಿ ಪರಿಚಯಿಸಿದರು. ಹೆಂಡತಿಯ ಸಾವಿನ ನಂತರ ಪುಟ್ಟೇಗೌಡ ಜಿಗುಪ್ಸೆಗೊಂಡಿದ್ದ. ಅರ್ಧ ಎಕರೆ ಜಮೀನನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದ. 

ನಂತರ ಪಿಯುಸಿ ಓದುವ ಮಗ ರಾಕೇಶ್‍ನನ್ನು ಓದಲು ಹೋಗಬೇಡ, ಎಲ್ಲಾದರೂ ಕೆಲಸ ಮಾಡುವಂತೆ ಹೇಳಿದ್ದ. ಆಗ ಮಗ ಮಲ್ಲಯ್ಯನದೊಡ್ಡಿಯ ಎಂ.ಜಿ.ಎಸ್ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ಆದರೂ ವ್ಯವಸಾಯದಲ್ಲಿನ ಸಂಕಷ್ಟ, ಸಾಲಬಾಧೆಯಿಂದ ಅಪ್ಪನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ದುಡಿದ ಹಣವನ್ನು 15 ಸಾವಿರ ಆಗುವವರೆಗೆ ಹಾಗೆ ಕೂಡಿಟ್ಟು ತನ್ನ ತಂಗಿ ಮಲಮೂತ್ರ ವಿಸರ್ಜನೆ ಹೊರಗೆ ಹೋಗುತ್ತಾಳೆ ಅಂತ ಹೇಳಿ ಶೌಚಾಲಯ ಮತ್ತು ಸ್ನಾನದ ರೂಮೊಂದನ್ನು ತಾನು ದುಡಿದ ಸಂಪಾದನೆಯಲ್ಲಿ ಕಟ್ಟಿಸಿದ್ದಾನೆ. ಗ್ರಾಮ ಪಂಚಾಯಿತಿಯಿಂದ ಇದಕ್ಕೆ 15 ಸಾವಿರ ಹಣ ಸಹಾಯಧನ ನೀಡಬೇಕು. ಅದನ್ನು ಇನ್ನೂ ನೀಡಿಲ್ಲ. 

ಮಂಡ್ಯದ ಜಿಲ್ಲಾಧಿಕಾರಿಯವರು ಮಕ್ಕಳಿಬ್ಬರಿಗೂ ಮಂಡ್ಯದ ಬಾಲಮಂದಿರದಲ್ಲಿ ಉಳಿಸಲು ವ್ಯವಸ್ಥೆ ಬಾಲಕನಿಗೆ ಓದುವ ಆಸೆ ಇದ್ದರೂ ತಂಗಿಯ ಜವಾಬ್ದಾರಿಯ ಬಗೆಗೆ ಯೋಚಿಸಿ ನನಗೊಂದು ಯಾವುದಾದರೂ ಕೆಲಸ ಕೊಡಿಸಿಕೊಟ್ಟರೆ ಸಾಕು ಎಂದು ಬಯಸುತ್ತಿದ್ದಾನೆ. ಅಜ್ಜಿ ಸಾಕಮ್ಮ ಮೊಮ್ಮಗನ ಸ್ಥಿತಿ ನೋಡಿ ಮರುಕ ಪಡುತ್ತಿದ್ದರು. ಅತ್ತು ಗೋಳಾಡಲು ಕಣ್ಣಲ್ಲಿ ನೀರಿಲ್ಲ, ಬತ್ತಿಹೋದ ಕಣ್ಣು, ಸೊರಗಿದ ಮುಖ, ವಿಪರೀತ ಕೆಮ್ಮು, ಅಜ್ಜಿಯನ್ನು ಕಂಗೆಡಿಸುತ್ತಿತ್ತು. ಆ ಇಳಿವಯಸ್ಸಿನಲ್ಲಿ ಮಕ್ಕಳಿಗೆ ಅಡುಗೆ ಮಾಡುತ್ತಿದ್ದರು ಅಜ್ಜಿ. ಕೊನೆಯಲ್ಲಿ ಅಲ್ಲೇ ಮತ್ತೊಬ್ಬ ಮೃತ ಹೆಣ್ಣುಮಗಳ ಪೋಟೋ – ಅವರು ಯಾರು? ಎಂದು ಕೇಳಿದ ನಮಗೆ ಅಜ್ಜಿ ‘ಆಕೆ ಒಬ್ಬ ಅನಾಥ, ಮಾತುಬಾರದ ಮೂಕ ಹೆಣ್ಣು ಮಗಳು. ಮಗುವಿನಲ್ಲೇ ನಮಗೆ ಸಿಕ್ಕ ಮಗುವನ್ನು ನಾವೇ ಸಾಕಿ ಬೆಳೆಸಿದೆವು. ಸುಮಾರು 15 ವರ್ಷಗಳ ನಂತರ ಆಕೆ ಕೂಡ ಅನಾರೋಗ್ಯದಿಂದ ಸಾವನ್ನಪ್ಪಿದಳು’ ಎಂದು ಹೇಳುತ್ತಾ ಗದ್ಗದಿತರಾದರು. 

ಅಜ್ಜಿ ತನ್ನ ಯಜಮಾನರ ಕಾಲದಲ್ಲಿ ಹಸಿದವರಿಗೆ ಅನ್ನ, ಆಶ್ರಯ ಕೊಡುತ್ತಿದ್ದ ನಮ್ಮ ಮನೆ ಈಗ ನನ್ನ ಮೊಮ್ಮಕ್ಕಳಿಗೆ ಆಶ್ರಯ ನೀಡೋರು ಇಲ್ಲವೆಂದು ನೆನೆದು ಕೊರಗಿದರು. ಅಜ್ಜಿಗೆ ದುಡಿಯುವ ಸಾಮಥ್ರ್ಯವಿದ್ದ ಕಾಲದಲ್ಲಿ ಆರ್ಥಿಕತೆಗೆ ಅನಾಥೆಯನ್ನು ಸಾಕಿಸಲಹುವ ಶಕ್ತಿಯಿತ್ತು, ಆದರೀಗ ದುಡಿಯುವ ಸಾಮಥ್ರ್ಯವಿರುವ ಅಜ್ಜಿಯ ಮಗನ ಕಾಲದಲ್ಲಿನ ಆರ್ಥಿಕತೆ ಆ ಶಕ್ತಿಯನ್ನು ಕಳಕೊಂಡಿರುವುದು ಗೋಚರಿಸುತ್ತಿತ್ತು. 

ಆಘಾತಕಾರಿ ಅಂಶವೆಂದರೆ, ಯಾವುದೇ ಪರಿಹಾರದ ಹಣವೂ ಈ ಮನೆಗೆ ದೊರಕಿಲ್ಲದಿರುವುದು. ಅದೇ ಗ್ರಾಮದ ಮಹೇಶ್ ಕುಟುಂಬಕ್ಕೆ ರೂ. 2.50 ಲಕ್ಷ ಪರಿಹಾರ ನೀಡಲಾಗಿದೆ. ಕುಟುಂಬದ ಸೋದರ ಸಂಬಂಧಿ ಸಿದ್ದರಾಜು ಮಾತನಾಡುತ್ತಾ ಪರಿಹಾರಕ್ಕಾಗಿ ಹಲವು ಅಧಿಕಾರಿಗಳನ್ನು ಭೇಟಿ ಮಾಡಿದರೂ ಸಹಾಯವಾಗಿಲ್ಲದಿರುವುದನ್ನು ತಿಳಿಸಿದರು. ರಾಜಕೀಯದ ಹಿತದೃಷ್ಟಿಯಿಂದ ಸ್ಥಳೀಯ ರಾಜಕಾರಣಿಗಳು ಓಟಿನ ಲೆಕ್ಕಾಚಾರದಲ್ಲಿ ಈ ಮಕ್ಕಳಿಬ್ಬರು ಮತದಾರರಲ್ಲದ ಕಾರಣ, ಯಾರ ಸಹಕಾರವಿಲ್ಲದ ಕುಟುಂಬವಾದ್ದರಿಂದ ಪರಿಹಾರ ನೀಡುವಲ್ಲಿಯೂ ತಾರತಮ್ಯ ಎಸಗಿದ್ದಾರೆ ಎಂದು ಹೇಳಿದರು. ಕೆಲಮಟ್ಟಿನ ಪರಿಹಾರ ಸಿಕ್ಕಲ್ಲಿ ಅದು ಮಕ್ಕಳ ಭವಿಷ್ಯಕ್ಕಾದರೂ ಉಪಯೋಗವಾಗಬಹುದು, ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಏನೂ ಪ್ರಯೋಜನವಾಗಿಲ್ಲ ಎಂದು ಆ ಕುಟುಂಬ ಅಳಲನ್ನು ತೋಡಿಕೊಂಡರು. 

ಸರ್ಕಾರಗಳ ವೈಫಲ್ಯ:
ಇವುಗಳಿಗೆ ಸಮಗ್ರ ಪರಿಹಾರ ಕಂಡುಕೊಳ್ಳದೆ, ರಾಜ್ಯ ಸರ್ಕಾರವು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ರೂ. 2.00 ಲಕ್ಷ ಪರಿಹಾರ ನೀಡಿ ಕೈತೊಳೆದುಕೊಳ್ಳಲು ಯತ್ನಿಸಿತು. ಸಾಲ ಕೊಟ್ಟು ಶೂಲಕ್ಕೇರಿಸುತ್ತಿರುವ ಲೇವಾದೇವಿಗಾರರನ್ನು ಪೊಲೀಸರು ಬಂಧಿಸಿದ್ದು ಸುದ್ದಿಯಾಯಿತು. ರೈತರು ಆ ವರ್ಷದಲ್ಲಿ ಪಡೆದ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಹಲವು ತಿಂಗಳ ನಂತರ ಘೋಷಿಸಲಾಯಿತು. ಆದರೆ ಇವೆಲ್ಲಾ ಕೇವಲ ತೇಪೆ ತಾರಿಸುವ ಕೆಲಸಗಳೆಂಬುದು ಎಲ್ಲರಿಗೂ ತಿಳಿದಿದೆ. ಇಡೀ ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರ್ಯಾಯ ಕಂಡುಕೊಳ್ಳುವ ಮಾತಿರಲಿ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಹಕಾರಿ ಸಂಘಗಳು ಅಥವಾ ಸೊಸೈಟಿ ಮೂಲಕ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಕನಿಷ್ಟ ಕ್ರಮವನ್ನು ರಾಜ್ಯ ಸರ್ಕಾರ ಮಾಡಲಿಲ್ಲ ಎಂಬುದನ್ನು ಗಮನಿಸಬೇಕು. ಇನ್ನು ಕೇಂದ್ರ ಸರ್ಕಾರವಂತೂ ಯಾವುದೇ ರೀತಿಯ ಕಿಂಚಿತ್ ಗಮನ ಕೂಡ ಈ ವಿಷಯದತ್ತ ಹರಿಸಲಿಲ್ಲ.  

ಮಾಧ್ಯಮಗಳ ಸ್ಪಂದನೆ:
ಕಬ್ಬಿನ ಫಸಲಿನ ಚಿತೆಗೇರಿದ ರೈತನ ಘಟನೆಯನ್ನು ಎಲ್ಲಾ ಮಾಧ್ಯಮಗಳು ಬಿಂಬಿಸಿದ್ದು ಗಮನಾರ್ಹ. ಆದರೆ ಉಳಿದ ರೈತರ ಆತ್ಮಹತ್ಯೆಗಳಿಗೆ ಅಷ್ಟು ಪ್ರಾಮುಖ್ಯತೆ ನೀಡಿಲ್ಲ. ರೈತರ ಆತ್ಮಹತ್ಯೆಗಳ ಬಗ್ಗೆ ವರದಿ ಮಾಡುವಾಗ ಅಥವಾ ಚರ್ಚೆ ನಡೆಸುವಾಗ ರೈತರ ನೈಜ ಬವಣೆಗಳಿಗೆ ಕಾರಣವಾಗಿರುವ ಮೂಲ ಕಾರಣವಾದ ಕೃಷಿ ಬಿಕ್ಕಟ್ಟಿನ ಎಲ್ಲಾ ಆಯಾಮಗಳನ್ನು ಮಾಧ್ಯಮಗಳು ಹಿಡಿದಿಡುವಲ್ಲಿ ವಿದ್ಯುನ್ಮಾನ ಮಾಧ್ಯಮಗಳಂತೂ ಪೂರ್ಣ ವಿಫಲವಾಗಿವೆ. 

ಕೃಷಿ ಬಿಕ್ಕಟ್ಟಿಗೆ ಪರ್ಯಾಯ:
ಒಟ್ಟಾರೆ, ಈ ಎಲ್ಲಾ ಪ್ರಕರಣಗಳಲ್ಲಿ ಕಂಡುಬಂದ ಅಂಶವೆಂದರೆ ಕೃಷಿ ಬಿಕ್ಕಟ್ಟು, ಜಾಗತಿಕ ಆರ್ಥಿಕ ನೀತಿಗಳು, ಕೃಷಿ ವಲಯದಲ್ಲಿ ಮತ್ತಷ್ಟು ನಕರಾತ್ಮಕ ಪರಿಣಾಮ ಬೀರುತ್ತಿರುವುದರಿಂದ ಸಂಭವಿಸುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತ ಪರವಾದ ನೀತಿಗಳನ್ನು ರೂಪಿಸದಿರುವುದರಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯವಿಲ್ಲದಿರುವುದರಿಂದ ಖಾಸಗಿ ಸಾಲದ ಮೊರೆ ಹೋದ ರೈತ ತಾನೂ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೇ ತಾನು ಖರ್ಚು ಮಾಡಿದ ಹಣವನ್ನು ಪಡೆಯಲು ಸಾಧ್ಯವಾಗದ ಸ್ಥಿತಿಯಿಂದ ತತ್ತರಿಸಿದ್ದಾನೆ. ದಲ್ಲಾಳಿಗಳ ಹಾವಳಿ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು, ಹೆಚ್ಚಿದ ರಸಗೊಬ್ಬರ, ಬಿತ್ತನೆ ಬೀಜಗಳು, ಕ್ರಿಮಿನಾಶಕಗಳನ್ನು ಕೊಳ್ಳಲು ಸಾಕಷ್ಟು ಸಾಲದ ಸುಳಿಗೆ ಸಿಲುಕಲು ಕಾರಣವಾಗಿರುವುದು ಗಮನಾರ್ಹ. ಎಲ್ಲಾ ಸಮಸ್ಯೆಗಳಿಂದ ಆಚೆ ಬರಲು ಸಾಧ್ಯವಾಗದೇ ಆತ್ಮಹತ್ಯೆಂiÀiಂತಹ ಕೃತ್ಯಕ್ಕೆ ಕೈಹಾಕುತ್ತಿರುವುದರಿಂದ ಇಡೀ ಕುಟುಂಬವೇ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದೆ. ಸಾವಿಗೆ ಪರಿಹಾರವೊಂದೇ ಸಾಲದು, ಇಡೀ ಕೃಷಿ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಪ್ರಯತ್ನ ಮಾಡದ ಹೊರತು ರೈತರ ಆತ್ಮಹತ್ಯೆಯನ್ನು ತಡೆಯಲಾಗದು ಎಂಬುದನ್ನು ಈ ಪ್ರಕರಣಗಳು ಎತ್ತಿ ತೋರುತ್ತವೆ. 

-ಎನ್. ಕವಿತಾ,
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
surendra.n
surendra.n
8 years ago

Kavitha.please Mandya district all farmers sucide incident make one documentey along with free software activists

1
0
Would love your thoughts, please comment.x
()
x