ಮುಂದಿನ ಪೀಳಿಗೆಯ ಭವಿಷ್ಯವನ್ನು ಕಿತ್ತುಕೊಳ್ಳದಿರೋಣ !: ನಿಂಗಪ್ಪ ಹುತಗಣ್ಣವರ

ನಿಸರ್ಗವು ನಮ್ಮ ಆಸೆಗಳನ್ನು ಪೂರೈಸುತ್ತದೆ, ನಮ್ಮ ದುರಾಸೆಗಳನ್ನಲ್ಲ ! ಗಾಂಧೀಜಿಯವರ ಈ ಮಾತನ್ನು ನಾವು ಅರ್ಥೈಸಿಕೊಳ್ಳದೆ ಹೋದರೆ ಇಡೀ ಭೂಮಿಯನ್ನು ನಾವು ಅಂತ್ಯದೆಡೆಗೆ ಕೊಂಡುಯ್ಯುತ್ತೇವೆ. ಇದು ನನ್ನ ಗೆಳತಿ ಭೂಮಿಯ ಮಾತು. ಹೌದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿಯಿದು. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಏರುತ್ತಿದೆ ಆದರೂ ಕಾರ್ಖಾನೆಗಳು ಹೊಗೆಯುಗುಳುತ್ತಿವೆ, ವಾಹನಗಳು ಇಂಧನವನ್ನು ಸುಡುತ್ತಲಿವೆ. ಬದುಕಲು ಆಮ್ಲಜನಕ ಅವಶ್ಯಕವೆಂದು ತಿಳಿದಿದ್ದರೂ ಒಂದು ಸಸಿಗೆ ನೀರುಣಿಸಲಾಗದಷ್ಟು ಅವಿಶ್ರಾಂತರಾಗಿ ದುಡಿಯುವವರ ಹಾಗೆ ನಡೆದುಕೊಳ್ಳಿತ್ತಿದ್ದೇವೆ. ಮತ್ತೊಂದು ಪರಿಸರ ದಿನವನ್ನು ನಾವು ಆಚರಿಸಿ ಮುಗಿಸಿದ್ದೇವೆ ಆದರೆ ಅದರಿಂದ ಕಲಿಯಬೇಕಾದ ಸಂಗತಿಯನ್ನು ನಾವು ಕಲಿಯಲೇಯಿಲ್ಲ. ೧೯೮೮ ರ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭಾರತದ ಪರಿಸರ ಸಮತೋಲನಕ್ಕೆ ಶೇ ೩೩ ರಷ್ಟು ಅರಣ್ಯದ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಶೇ ೨೧.೬೭ ರಷ್ಟಿದೆ. ನಾವು ಗಂಡಾಂತರದಲ್ಲಿದ್ದೇವೆಂಬ ಅರಿವಿದ್ದರೂ ಸಹ ನಮ್ಮ ದುರಾಸೆಯ ಪಟ್ಟಿ ಬೆಳೆಯುತ್ತಲೇ ಇದೆ.

ಪರಿಸರದ ಮೇಲೆ ಮನುಷ್ಯನ ಆಕ್ರಮಣ ನಿಲ್ಲದೆ ಹೋದರೆ ಮುಂದೊಂದು ದಿನ ಮಾರುಕಟ್ಟೆಯಲ್ಲಿ ಶುದ್ಧ ಆಮ್ಲಜನಕವನ್ನು ಮಾರುವ ದುಸ್ಥಿತಿ ಬಂದರೂ ಅಚ್ಚರಿಯಿಲ್ಲ. ಅಂದರೆ ನಾವು ಉಸಿರಾಡಲು ಗಾಳಿಯನ್ನೂ ಖರೀದಿಸಬೇಕಾದ ಕಾಲ ದೂರವೇನಿಲ್ಲ ಜೊತೆಗೆ ಒಂದು ಮಾತನ್ನು ನಾವು ತಿಳಿದುಕೊಳ್ಳಲೇಬೇಕು. ಅದೇನೆಂದರೆ ಮನುಷ್ಯನಿಲ್ಲದೆ ಪರಿಸರವಿರುತ್ತದೆ. ಆದರೆ ಪರಿಸರವಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ.

ನಮ್ಮ ಪೂರ್ವಜರು ನಮಗೆ ಭೂಮಿಯನ್ನು ಉಳಿಸಿಕೊಟ್ಟಿದ್ದಾರೆ ಅದನ್ನು ನಮ್ಮ ಮುಂದಿನ ಪೀಳಿಗೇಗೆ ವರ್ಗಾವಣೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಕಾಂಕ್ರೀಟ್ ಕಟ್ಟಡಗಳು ಗಗನಚುಂಬಿಯಾಗಿ ಬೆಳೆಯುತ್ತಿವೆ ಆದರೆ ಮರಗಳ ಕೊಂಬೆಗಳು ಗೋಡೆಗೆ ಅಡ್ಡವೆಂದು ಕತ್ತರಿಸಲಾಗುತ್ತಿದೆ. ಹೀಗೆ ಮುಂದುವರೆದರೆ ಬಹುಶಃ ಗೂಡು ಕಟ್ಟಿಕೊಂಡು ಬದುಕುವ ಪಕ್ಷಿಗಳು ಮರಗಳಿಲ್ಲದೆ ಸುಡುವ ಕಾಂಕ್ರೀಟ್ ಕಟ್ಟಡದ ಮೇಲಿರಬೇಕೆ ? ಸ್ವಚ್ಚಂದವಾಗಿ ಹಾರಾಡುವುದನ್ನು ಬಿಟ್ಟು ಪಂಜರವ ಸೇರಬೇಕೆ ? ಕ್ರೌರ್ಯಕ್ಕೂ ಒಂದು ಮಿತಿಯಿದೆ, ನಾವು ಅದರ ಎಲ್ಲೆಯನ್ನೂ ಮೀರಿದ್ದೇವೆ !

ಪರಿಸರಕ್ಕಾಗಿ ಪುಟ್ಟ ಹುಡುಗಿ ಗ್ರೇಟಾ ಥನ್ಬರ್ಗ್ ವಿಶ್ವಸಂಸ್ಥೆಯಲ್ಲಿ ವಿಶ್ವದ ಗಣ್ಯರನ್ನೇ ತರಾಟೆಗೆ ತೆಗೆದುಕೊಂಡು ನಮ್ಮ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಸಿದ್ದಳು, ಭಾರತದಲ್ಲಿ ಸುಂದರಲಾಲ್ ಬಹುಗುಣ, ಮೇಧಾ ಪಾಟ್ಕರ್, ಅಷ್ಟೇ ಏಕೆ ನಮ್ಮ ನಡುವಿನ ಅಮ್ಮ  ಸಾಲು ಮರದ ತಿಮ್ಮಕ್ಕ ಅವರೆಲ್ಲರನ್ನೂ ನೆನಪಿಸಿಕೊಳ್ಳುವುದು ಬಹುಶ ಜೂನ್ ೫ ರಂದು ಮಾತ್ರವೆನಿಸುತ್ತೆ. ಅಂದು ವಾಟ್ಸಾಪ್ ಸ್ಟೇಟಸ್ ಹಾಕಿ ಶುಭಾಶಯಗಳನ್ನ ತಿಳಿಸಿಬಿಟ್ಟರೆ ಅಲ್ಲಿಗೆ ಪರಿಸರ ದಿನಾಚರಣೆ ಮುಗಿದಂತೆ ಎಂದು ನಮ್ಮ ನೈಜ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೇವೆ. ನಾವು ನಮ್ಮ ಪೀಳಿಗೆಗಾಗಿ ಏನನ್ನೂ ಕೂಡಿಡುವುದು ಬೇಡ, ಅವರ ಬಯಕೆಯನ್ನು ಈ ವಿಶಾಲ ಪರಿಸರ ಈಡೇರಿಸುತ್ತದೆ, ಅಷ್ಟಾಗಿಯೂ ಮಕ್ಕಳಿಗಾಗಿ ಏನಾದರೂ ಮಾಡಲೇಬೇಕು ಎನ್ನುವುದಾದರೆ ಅವರಿಗಾಗಿ ಶುದ್ಧ ಗಾಳಿಯನ್ನು ಉಳಿಸಿಕೊಡೋಣ.

-ನಿಂಗಪ್ಪ ಹುತಗಣ್ಣವರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x