ಭವಿಷ್ಯದ ಪುಟಾಣಿಗಳೆ,
ಈ ಭೂಮಿ ಹುಟ್ಟಿ ೪೬೦ ಕೋಟಿ ಅಗಾಧ ವರ್ಷಗಳಾದವು. ನವಮಾಸಗಳು ಹೊತ್ತು-ಹೆತ್ತು ಇವತ್ತು ಜಗತ್ತಿಗೆ ಬಂದು ಕಣ್ಬಿಡುವ ಹೆಚ್ಚಿನ ನೀವುಗಳು ಖಾಸಗಿ-ಸರ್ಕಾರಿ ಆಸ್ಪತ್ರೆಗಳ ಫಿನೈಲ್-ಡೆಟಾಲ್‌ಗಳ ವಾಸನೆಗಳನ್ನೇ ಸೇವಿಸಿ ವಿಸ್ಮಿತರಾಗಿ ಹೊರಜಗತ್ತನ್ನು ಗಮನಿಸುತ್ತೀರಿ. ಕಲುಷಿತ ವಾತಾವರಣ ನಿಮಗೆ ಥಂಡಿ-ಜ್ವರ-ಕಫಗಳನ್ನು ಧಾರಾಳವಾಗಿ ಧಾರೆಯೆರೆಯುತ್ತದೆ. ಗಾಬರಿಗೊಂಡ ತಂದೆ-ತಾಯಿ, ಅಜ್ಜ-ಅಜ್ಜಿಯರನ್ನು ಸಮಾಧಾನ ಮಾಡಲು ಜೊತೆಗೆ ನಿಮಗಾದ ಜಡ್ಡನ್ನು ಹೋಗಲಾಡಿಸಲು ಹಲವಾರು ಮದ್ದುಗಳಿವೆ, ಚುಚ್ಚುಮದ್ದುಗಳಿವೆ, ಸಿರಫ್‌ಗಳಿವೆ ಇತ್ಯಾದಿ ಸಾವಿರಗಳಿವೆ. ಇವುಗಳನ್ನು ಪೂರೈಸಿ ತಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳಲು ಅಂತಾರಾಷ್ಟ್ರೀಯ ಕಂಪನಿಗಳು ತುದಿಗಾಲಲ್ಲಿ ನಿಂತಿವೆ, ಸ್ಕ್ಯಾನಿಂಗ್ ಯಂತ್ರಗಳಿವೆ, ರಕ್ತ ಪರೀಕ್ಷೆಗಳಿವೆ. ಇವೆಲ್ಲಕ್ಕೂ ನಿಮ್ಮ ಹುಟ್ಟಿಸಿದವರು ಕರನ್ಸಿಯೆಂದು ಹೇಳಲಾಗುವ ದೇಶದ ಪಿತಾಮಹನ ಚಿತ್ರವಿರುವ ಆಯತಾಕಾರದ ಕಾಗದವನ್ನು ನೀಡಿದರೆ ಸಾಕು. ನಿಮ್ಮ ಪೋಷಕರಲ್ಲಿ ಹೆಚ್ಚು-ಹೆಚ್ಚು ಕಾಗದಗಳಿದ್ದಲ್ಲಿ, ನಿಮಗೆ ಸಿಗುವ ಸೌಲಭ್ಯಗಳೂ ಹೆಚ್ಚು.
ಮೂರ್‍ನಾಲ್ಕು ತಿಂಗಳು ನೀವು ಸಂಪೂರ್ಣ ಪರಾವಲಂಭಿಗಳು, ನಿಮ್ಮನ್ನು ಹಗಲು-ರಾತ್ರಿ ಕಾಯಬೇಕು. ತಾಯಿಯಾದವಳಿಗೆ ಇದೊಂದು ತಪಸ್ಸಿದ್ದಂತೆ. ಆಮೇಲೆ ನೀವು ನಿಧಾನವಾಗಿ ಹೊರಳುವುದು, ನಿಧಾನವಾಗಿ ತೆವಳಿ ಮುಂದೆ ಹೋಗುವುದು ಇತ್ಯಾದಿಗಳನ್ನು ಮಾಡುತ್ತೀರಿ. ಕೈಗೆ ಸಿಕ್ಕಿದ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವ ನಿಮ್ಮ ಈ ವರ್ತನೆ ತಂದೆ-ತಾಯಿಗಳಿಗೆ ನುಂಗಲಾರದ ತುತ್ತು. ನೆಲವನ್ನು ಸ್ವಚ್ಛವಿಡಬೇಕು, ಹುಳು-ಹಪ್ಪಟೆ ತಿಂದು ವಿಷವಾದರೆ ಎಂಬ ಭಯ. ನೀವು ಶ್ರೀಮಂತರ ಅಂದರೆ ಕಾಗದಗಳನ್ನು ಹೆಚ್ಚು-ಹೆಚ್ಚು ಹೊಂದಿರುವವರಾರದೆ, ನಿಮ್ಮನ್ನು ೨೪ ಗಂಟೆಯೂ ನೋಡಿಕೊಳ್ಳಲ್ಲು ಆಯಾಗಳು ಇರುತ್ತಾರೆ. ಅವರು ನಿಮ್ಮ ಇಶ್ಯೀಗಳನ್ನು ತೊಳೆದು-ಬಳಿದು, ನಿಮಗೆ ಬೀಸಿನೀರ ಅಭ್ಯಂಜನ ಮಾಡಿಸಿ ಕೂದಲು ಕೊಂಕದಂತೆ ನೋಡಿಕೊಳ್ಳುತ್ತಾರೆ. ನಿಮಗಾಗಿ ಬೆಳ್ಳಿ-ಕಡಗಗಳು, ಚಿನ್ನದ ಸರಗಳು ಕಾಣಿಕೆಯಾಗಿ ಬರುತ್ತವೆ. ಬಡವರಾದರೆ, ಅಪ್ಪ-ಅವ್ವ ಕೂಲಿ ಮಾಡುವವರಾದರೆ, ನಿಮ್ಮನ್ನು ರಸ್ತೆ-ಬದಿಯಲ್ಲೇ ಮರಕ್ಕೊಂದು ಸೀರೆ ಕಟ್ಟಿ ತೊಟ್ಟಿಲು ಮಾಡಿ ನೇತು ಹಾಕುತ್ತಾರೆ, ನೀವು ಜೋರಾಗಿ ಅತ್ತಾಗ, ಹಾಲಿಲ್ಲದ ಎದೆಯನ್ನು ನಿಮ್ಮ ಬಾಯಿಗೆ ಹಿಡಿದು ಸಮಾಧಾನ ಮಾಡುತ್ತಾರೆ.
ಪೋಲಿಯೋಮುಕ್ತ, ಸಿಡುಬುಮುಕ್ತ, ಹೀಗೆ ಎಲ್ಲಾ ಕಾಯಿಲೆಗಳ ಮುಕ್ತ ಪ್ರಪಂಚವನ್ನು ನಿರ್ಮಿಸಲು ಶ್ರೀಮಂತ ರಾಷ್ಟ್ರಗಳು ವಿವಿಧ ವೇಷ ತೊಟ್ಟು ಪ್ರಪಂಚಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳುತ್ತವೆ. ಅಪೌಷ್ಟಿಕತೆಯಿಂದ ಸಾಯುವ ಮಕ್ಕಳನ್ನುಳಿಸಲು ಶ್ರೀಮಂತರಲ್ಲೂ ಅಥವಾ ಬಡಸರ್ಕಾರಗಳಲ್ಲೂ ಯಾವುದೇ ಕಾರ್ಯಕ್ರಮ ಇಲ್ಲ. ಶ್ರೀಮಂತರ ಮಕ್ಕಳಾದರೆ ನೀವು ಬಹಳ ಅದೃಷ್ಟವಂತರೇ ಸೈ ಎಂದು ಹೆಮ್ಮೆ ಪಡುವುದರಲ್ಲೂ ಅರ್ಥವಿಲ್ಲ. ನಿಮಗೆ ತೊಡಿಸುವ ಬಣ್ಣ-ಬಣ್ಣದ ಬಟ್ಟೆಯಲ್ಲಿ, ಚೆಂದದ ಆಟಿಕೆಗಳಲ್ಲಿ ವಿಷ ತುಂಬಿರುತ್ತದೆ. ನಿಮಗೆ ಹಚ್ಚುವ ಸ್ನೋ-ಪೌಡರ್‌ಗಳು ವಿಷಯುಕ್ತವಾಗಿರುತ್ತವೆ. ಕೀಟಾಣುಗಳನ್ನು ತೊಳೆದು ಶುಭ್ರಗೊಳಿಸುವ ಶಾಂಪೂ-ಸೋಪಿನಲ್ಲೂ ವಿಷದ ಛಾಯೆಯಿರುತ್ತದೆ. ಬಡವರ ಮಕ್ಕಳಿಗೆ ಸರ್ಕಾರ ಕೊಡುವ ಅಕ್ಕಿ-ಬೇಳೆ, ತರಕಾರಿಗಳಲ್ಲಿರುವ ರಾಸಾಯನಿಕ-ಕೀಟನಾಶಕಗಳ ಅಂಶದಿಂದ ದೀರ್ಘಾವಧಿ ಕಾಯಿಲೆಗಳು ಬಂದರೆ, ಶ್ರೀಮಂತರ ಮಕ್ಕಳಿಗೆ ಲೇಸ್, ಖುರ್-ಖುರೆ, ಕೋಲಾಗಳು ಕಾಯಿಲೆಗಳನ್ನು ದಯಪಾಲಿಸುತ್ತವೆ.
ಪಾಪ ಮಕ್ಕಳ ಮನಸ್ಸು ದೇಹ ಆಟವಾಡುವುದಕ್ಕೆ ಹಾತೊರೆಯುತ್ತಿರುತ್ತದೆ. ಜಗತ್ತಿನ ಎಲ್ಲಾ ಸಂಗತಿಗಳು ನಿಮಗೆ ವಿಸ್ಮಯವೇ. ಆದರೆ ಅದನ್ನು ನೋಡುವ, ತಿಳಿಯುವ, ಕುತೂಹಲ ತಣಿಸುವುದಕ್ಕೆ ಸಮಯವೆಲ್ಲಿ. ಫ್ರಿ.ಕೆ.ಜಿ. ಎಲ್.ಕೆ.ಜಿ. ಯು.ಕೆ.ಜಿಗಳು ನಿಮ್ಮ ಸ್ವಾತಂತ್ರ್ಯವನ್ನು ಕಸಿದು ಹಾಕುತ್ತವೆ. ಎ ಫಾರ್ ಆಪಲ್, ಬಿ ಫಾರ್ ಬಿಗ್-ಬ್ಯಾಗ್ ಕಲಿಯದಿದ್ದಲ್ಲಿ ನಿಮಗೆ ಭವಿಷ್ಯವಿಲ್ಲ ಎಂದೇ ನಿಮ್ಮ ಪೋಷಕರು ತೀರ್ಮಾನಿಸಿಯಾಗಿದೆ. ಒಂದು ಕ್ಲಾಸಿನಲ್ಲಿರುವ ೫೦ ಮಕ್ಕಳ ಎಲ್ಲಾ ತಂದೆ-ತಾಯಿಗಳಿಗೂ ತನ್ನ ಮಗುವೇ ಕ್ಲಾಸಿನಲ್ಲಿ ಮೊದಲು ಬರಬೇಕು. ಇದಕ್ಕಾಗಿ ನಿಮ್ಮ ಸ್ವಾತಂತ್ರ್ಯವನ್ನು ಕಸಿಯುವುದರ ಜೊತೆಗೆ ನಿಮ್ಮ ನೆಮ್ಮದಿಯನ್ನು ಕೊಂದು ಹಾಕುತ್ತಾರೆ. ಕೂಲಿ-ಕಾರ್ಮಿಕರ ಮಕ್ಕಳಿಗೆ ಸ್ಕೂಲಿನಲ್ಲಿ ತಿಂದದ್ದೆ ಪಂಚಾಮೃತ, ಮನೆಯಲ್ಲಿ ನಿಮ್ಮ ಬೆಳವಣಿಗೆ ಬೇಕಾದ ಪೌಷ್ಟಿಕಾಂಶದ ಕೊರತೆಯಿದೆ. ಇಲ್ಲೆರೆಡು ಉದಾಹರಣೆಯನ್ನು ನೀಡುವುದು ಸೂಕ್ತ. ಜೋರು ಮಳೆಗಾಲ, ಸರ್ಕಾರಿ ಸ್ವಾಮ್ಯದ ಕಾಗದದ ಕಾರ್ಖಾನೆಗೆ ಮರಗಳು ಬೇಕು.
ಸರಿ ಬೆಳೆಸಿದ ನೀಲಗಿರಿ ಮರಗಳ ಕಟಾವು ಮಾಡಿ ದೈತ್ಯ ಗಾತ್ರದ ಲಾರಿಯ ಮೇಲೆ ಹೇರಿ ಕಾರ್ಖಾನೆಗಳಿಗೆ ಸಾಗಿಸಬೇಕು. ಇದಕ್ಕಾಗಿ ಕೂಲಿಯಾಳುಗಳು ಬೇಕು. ಅತ್ಯಂತ ಬಡಸ್ಥಿತಿಯಲ್ಲಿರುವ ಲಂಬಾಣಿ ತಾಂಡಗಳಿಂದ ಕೂಲಿಗಳನ್ನು ತಂದು ಮರ ಕಟಾವು ಮಾಡಿಸಬೇಕು. ಇಲ್ಲಿ ಅದೇ ತಾನೆ ಹೆರಿಗೆಯಾದ ಹಸಿ ಬಾಣಂತಿಯೂ ಕೂಲಿಯೇ. ಅದರ ನವಜಾತ ಶಿಶುವು ಅದೇ ನೀಲಗೀರಿ ತುಂಡಿನ ಮೇಲೆ ಮಲಗಿರಬೇಕು, ಮೇಲಿನಿಂದ ಮಳೆ ಸುರಿಯುತ್ತದೆ. ಮಲಗಿದ ಮರದ ತುಂಡಿನ ಕೆಳಗೆ ತಣ್ಣನೆಯ ನೀರು ಹರಿಯುತ್ತದೆ. ಅದ್ಯಾವ ಮಾಯೆಯೋ ಅಂತೂ ಮಗುವಿಗೇನು ಆಗುವುದಿಲ್ಲ. ಶೀತ-ಥಂಡಿ, ಜ್ವರದಿಂದ ಬಚಾವಾಗಿ ಬದುಕುಳಿಯುತ್ತದೆ. ದೂರಸಂಪರ್ಕ ಇಲಾಖೆಯ ಓ.ಎಫ್.ಸಿ. ಕೇಬಲ್ ಹಾಕುವಾಗ ಒಂದಡಿ ಅಗಲ ಮೂರಡಿ ಆಳದ ಗುಂಡಿ ತೋಡುವ ಕೂಲಿಗಳ ಕತೆಯೂ ಹೌದು. ಇಲ್ಲಿ ಮಕ್ಕಳಿಗೆ ರಸ್ತೆಯ ಪಕ್ಕದಲ್ಲೇ ಒಂದಿಷ್ಟು ಮಂಡಕ್ಕಿ ಬೀರಿ, ಅದರ ಎದುರಿನಲ್ಲಿ ಚಿಕ್ಕ-ಮಕ್ಕಳನ್ನು ಬಿಟ್ಟಿದ್ದಾರೆ. ಅವು ಒಂದೊಂದೇ ಮಂಡಕ್ಕಿಯನ್ನು ಹೆಕ್ಕುತ್ತಾ ತಿನ್ನುವ ದೃಶ್ಯವನ್ನೂ ಕಾಣಬಹುದು.
ಇಷ್ಟೆಲ್ಲಾ ತಾರತಮ್ಯದ ಕತೆಯನ್ನಷ್ಟೇ ಹೇಳಿದರೆ, ಅಷ್ಟೂ ಕತೆ ಹೇಳಿದಂತಾಯಿತೆ. ಇಲ್ಲ. ನಿಮ್ಮಲ್ಲಿ ಕೆಲವರು ಖಾಸಗಿ ಶಾಲೆಗಳಿಗೆ ಸೇರುತ್ತಾರೆ. ಗರಿ-ಗರಿ ಅಂಗಿ-ಚೆಡ್ಡಿ, ಬೂಟುಗಳಿರುತ್ತವೆ. ಹಲವರು ಸರ್ಕಾರಿ ಶಾಲೆಗೆ ಸೇರುತ್ತಾರೆ, ಅಲ್ಲೂ ಸರ್ಕಾರ ಕೊಡಮಾಡುವ ಅಂಗಿ-ಚೆಡ್ಡಿಗಳಿದ್ದರೂ, ಬೂಟು ಕೊಡುವಷ್ಟು ಶ್ರೀಮಂತಿಕೆ ಸರ್ಕಾರಕ್ಕಿಲ್ಲ. ಹುಳು-ಹಪ್ಪಟೆಯಿರುವ ಅಕ್ಕಿಯಿಂದ ಮಾಡಿದ ಅನ್ನ ಜೊತೆಗೊಂದಿಷ್ಟು ಸಾಂಬಾರು ನಡೆಯುತ್ತದೆ. ಇನ್ನೂ ಹಲವರ ಬಡ ಮಕ್ಕಳಿಗೆ ಶಾಲೆಯಲ್ಲಿ ಕಲಿಯುವ ಭಾಗ್ಯವೂ ಇರುವುದಿಲ್ಲ. ಓಡುವ-ಹಾರುವ-ಕುಣಿಯುವ ವಯಸ್ಸಿನಲ್ಲಿ ಕೂಲಿ ಮಾಡುವ ಜವಾಬ್ದಾರಿ ಹೇರಲಾಗುತ್ತದೆ.
ಇನ್ನೂ ಸ್ಕೂಲಿನಲ್ಲಿ ಕಲಿಸುವ ಪಠ್ಯಗಳಲ್ಲಿ ನಿಮ್ಮ ಜೀವನಕ್ಕೆ ಬೇಕಾದ ಪಾಠ ಹೇಳುವ ಪಠ್ಯವೇ ಇರುವುದಿಲ್ಲ. ಅಳಿದು ಹೋದ ಮಹಾತ್ಮರ ಚರಿತ್ರೆಗಳನ್ನು ಆದಷ್ಟು ತಿದ್ದಿ ತುಂಬುತ್ತಾರೆ. ಇಂತವನು ಇಂತದನ್ನು ಕಂಡು ಹಿಡಿದ, ಇಂತವನಿಗೆ ಇಂತಿಂತ ಪ್ರಶಸ್ತಿ ಸಿಕ್ಕಿತು ಮುಂತಾಗಿ ಹಲುಬುವ ನೀರಸ ಪಠ್ಯಗಳೇ ತುಂಬಿರುತ್ತವೆ. ಕಲಿಯುವುದೊಂದು ಆಟವಂತಿರದೇ ಘೋರ ತಪ್ಪು ಮಾಡಿದವರಿಗೆ ನೀಡುವ ಶಿಕ್ಷೆಯಂತಿರುತ್ತದೆ. ಇದೆಲ್ಲವೂ ನಿಮಗೆ ಅನಿವಾರ್ಯ. ನಿಮ್ಮ ಪೂರ್ವಿಕರು ಮಾಡಿದ ಮಹಾಕಾರ್ಯಗಳನ್ನು ನೆನೆ-ನೆನೆದು ಹೇಳಿಕೊಡುವ ಪರಿಪಾಠವಿರುತ್ತದೆ. ಮನುಷ್ಯರೆ ಮನುಷ್ಯರನ್ನು ಅನಾಗರಿಕವಾಗಿ ಚಿತ್ರಹಿಂಸೆ ನೀಡಿ ಜೀತ ಮಾಡಿಸಿಕೊಂಡ ಉದಾಹರಣೆಗಳನ್ನು ನಿಮ್ಮ ಮುಂದಿಡುವುದಿಲ್ಲ. ಕೋಟ್ಯಾಂತರ ಸಂಖ್ಯೆಯಲ್ಲಿದ್ದ ಪಾರಿವಾಳಗಳನ್ನು ತಿಂದು ತೇಗಿ ಮುಗಿಸಿದ ಕತೆ ಪಾಠದಲ್ಲಿರುವುದಿಲ್ಲ. ಡೊಡೊ ಎಂಬ ಪಕ್ಷಿ ಬರೀ ಚಿತ್ರದಲ್ಲಷ್ಟೆ ನೋಡಬಹುದಾದ ನತದೃಷ್ಟರು ನೀವು ಎಂದು ನಿಮಗೆ ತಿಳಿಯುವುದಿಲ್ಲ. ನಿಮ್ಮ ಪೂರ್ವಿಕರು ನಡೆಸಿದ ದೌರ್ಜನ್ಯದಿಂದ ಅದೆಷ್ಟೋ ಪ್ರಾಣಿ-ಪಕ್ಷಿ ಪ್ರಪಂಚದಲ್ಲಿ ಲೆಕ್ಕವಿಲ್ಲದಷ್ಟು ಪ್ರಬೇಧಗಳು ಅಳಿದಿವೆ ಎಂಬ ಅಂಕಿ-ಅಂಶ ಮಾತ್ರ ನಿಮಗೆ ಸಿಕ್ಕೀತು.
ವಿಜ್ಞಾನ-ತಂತ್ರಜ್ಞಾನದಿಂದಾಗಿ ಆದ ಅಭಿವೃದ್ದಿಯ, ಚಂದ್ರಲೋಕಕ್ಕೆ ತೆರಳಿದ, ಮಂಗಳನಲ್ಲಿ ಸೈಟು ಮಾರಾಟಕ್ಕಿಟ್ಟು ಲಾಭ ಮಾಡುವ ಕಂಪನಿಗಳ ಬಗ್ಗೆ ಅತಿರಂಜಿತ ವರದಿಗಳು ಸಿಗಬಹುದು. ಮುಂದುವರೆದ ನಾಗರೀಕರ ದೌರ್ಜ್ಯನ್ಯಕ್ಕೆದುರಾಗಿ ಹೋರಾಟ ನಡೆಸಿದ ಚೆಗೆವಾರ, ಕಿಂಗ್ ಮಾರ್ಟೀನ್ ಲೂಥರ್, ನೆಲ್ಸನ್ ಮಂಡೇಲ ಗಾಂಧಿ ಇಂತವರ ನೈಜ ಕತೆಗಳು ನಿಮಗಾಗಿ ಸಿಗದಿದ್ದರೂ, ಪುಟ್ಟ ಕ್ಯೂಬಾವೆಂಬ ದೇಶ ಅಮೇರಿಕಾದ ದೌರ್ಜನ್ಯವನ್ನೂ ಸಹಿಸಿ ಫಿನಿಕ್ಸ್‌ನಂತೆ ಎದ್ದು ಬಂದು ತೊಡೆ ತಟ್ಟಿ ಸ್ವಾಭಿಮಾನಿಯಾದ ಉದಾಹರಣೆ ನಿಮಗೆ ಸಿಗದಿದ್ದರೂ, ಧರ್ಮ-ಧರ್ಮಗಳ ನಡುವೆ, ದೇಶ-ದೇಶಗಳ ನಡುವೆ ಯುದ್ಧ ಹಚ್ಚಿ, ಈರ್ವರಿಗೂ ಶಸ್ತ್ರಾಸ್ತ ಪೂರೈಸಿ ಜಗತ್ತಿನ ನೆಮ್ಮದಿ ಕೆಡಿಸಿದ ಅಮೇರಿಕಾದ ಬಗ್ಗೆ ಅಮೇರಿಕಾವೆಂದರೆ ಭೂಲೋಕದ ಸ್ವರ್ಗ ಎಂದು ಸತ್ಯಾಂಶ ತಿರುಚಿದ ಮಾಹಿತಿಗಳು ಹೇರಳವಾಗಿ ಲಭ್ಯವಾಗುತ್ತವೆ.
ಈ ಭೂಮಿಯನ್ನು ಆಳಿದ ನಿಮ್ಮ ಪೂರ್ವಿಕರು ಪ್ರಾಣಿ-ಪ್ರಪಂಚದ ಬುದ್ಧಿವಂತರು ಎಂದು ತಮಗೆ ತಾವೆ ಕೊಟ್ಟುಕೊಂಡ ಬಿರುದು. ಹೆಗ್ಗಳಿಕೆಯ ಈ ಬಿರುದಿನ ಹೊಟ್ಟೆಯಲ್ಲಿರುವ ರಾಕ್ಷಸ ಏನೆಲ್ಲಾ ಅವಾಂತರ ಮಾಡಿ ಭೂಮಿಯನ್ನು ಬದುಕಲು ಯೋಗ್ಯವಿಲ್ಲದ ಸ್ಥಿತಿಗೆ ತಂದರೆಂದರೆ, ಈ ಬುದ್ಧಿವಂತರಿಗೆ ಸಮಜಾಯಿಷಿ ನೀಡಲು ಯಾವುದೇ ಉತ್ತರವಿಲ್ಲ. ಭೂಮಿಯ ಸಂಪತ್ತನ್ನು ಅಕ್ಷರಷ: ಲೂಟಿ ಮಾಡಿ, ಭಸ್ಮ ಮಾಡಿದರು. ನಾಗರೀಕ ಸಮಾಜ ಸೃಷ್ಟಿಸಿದ ಅವಾಂತರಗಳಿಗೆ, ದೌರ್ಜನ್ಯಗಳಿಗೆ ಎಲ್ಲೆಯೆಂಬುದೇ ಇಲ್ಲ. ತಾನು ಮಾಡಿದ್ದೇ ಸರಿ ಎಂಬ ಅಹಂಕಾರದ ಮನೋಭಾವ ಮುಂದೆ ಹುಟ್ಟಲಿರುವ ತನ್ನದೇ ಸಂತತಿಗೊಂದು ಶಾಪವಾಗಬಹುದುದೆಂಬ ಸಣ್ಣ ದೂರಾಲೋಚನೆಯನ್ನೂ ಮಾಡಲೇ ಇಲ್ಲ. ನೆಲ-ಜಲ-ವಾಯು-ಆಕಾಶ ಹೀಗೆ ಎಲ್ಲೆಂದರಲ್ಲಿ ಸ್ವಚ್ಛಮಾಡಲಾಗದಂತೆ ತನ್ನ ಅಭಿವೃದ್ಧಿಯ ಉಚ್ಚಿಷ್ಠಗಳನ್ನು ಚೆಲ್ಲಿದ. ಪರಮಾಣು ಬಾಂಬು ಎಂಬ ಶಸ್ತ್ರವನ್ನು ತನ್ನವರ ಮೇಲೇ ಉಪಯೋಗಿಸಿದ್ದರಿಂದ ಇವತ್ತಿಗೂ ನಿಮ್ಮ ಪೀಳಿಗೆಯಲ್ಲಿ (ಜಪಾನಿನ ಹಿರೋಷಿಮ-ನಾಗಸಾಕಿ) ಅಂಗವಿಕಲ ಮಕ್ಕಳು ಜನಿಸುತ್ತಿದ್ದಾರೆ.
ಭೋಪಾಲ್ ದುರಂತ ಸಂತ್ರಸ್ತರು ಇವತ್ತಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ದೃಶ್ಯವನ್ನು ನೀವು ಕಾಣಬಹುದು, ಹೀಗೆ ಚೆರ್ನೊಬಿಲ್, ಫುಕೊಶಿಮಾ ದುರಂತಗಳ ಅವಶೇಷಗಳು ನಿಮ್ಮನ್ನು ಕಾಡುತ್ತವೆ. ಪರಮಾಣು ಬಾಂಬ್ ಎಂಬ ರಾಕ್ಷಸನನ್ನು ಇವತ್ತು ಹೆಚ್ಚು-ಕಡಿಮೆ ಎಲ್ಲಾ ದೇಶಗಳು ಹೊಂದಿವೆ. ಆದರೂ ಪರಮಾಣು ಶಕ್ತಿಯನ್ನು ಶಾಂತಿಗಾಗಿ ಬಳಸಬೇಕು ಎಂಬ ಪರಸ್ಪರ ಒಪ್ಪಂದಗಳನ್ನು ಮಾಡಿಕೊಂಡು ಭಯದಲ್ಲೇ ಬದುಕುತ್ತಾರೆ. ಯಾವ ದೇಶ ಯಾರ ಮೇಲೆ ಯಾವಾಗ ಈ ಅಸ್ತ್ರವನ್ನು ಬಳಸುತ್ತದೋ ಗೊತ್ತಿಲ್ಲ. ಇಂತಹ ನೂರು ಭೂಮಿಗಳನ್ನು ಏಕಕಾಲಕ್ಕೆ ಸಂಪೂರ್ಣ ನಾಶ ಮಾಡುವ ಶಕ್ತಿ ಹೊಂದಿರುವ ಪರಮಾಣು ಎಂಬ ರಾಕ್ಷಸ ನಾಗರೀಕ ಸಮಾಜದೆ ಹೆಮ್ಮೆಯೋ? ದುರಂತವೋ. ಜೊತೆಗೆ ಅಭಿವೃದ್ಧಿಯನ್ನು ನೆಪವಾಗಿಟ್ಟುಕೊಂಡು, ಭೂಗರ್ಭದಲ್ಲಿರುವ ಎಲ್ಲಾ ಖನಿಜಗಳನ್ನು ಎತ್ತಿದ್ದೇವೆ. ಹೀಗೆ ಮಾಡುವ ಮೂಲಕ ಲಕ್ಷಾಂತರ ಸಸ್ಯ ಮತ್ತು ಪ್ರಾಣಿಗಳ ನಾಶಕ್ಕೆ ನೇರ ಕಾರಣವಾಗಿದ್ದೇವೆ. ಹಿಮಖಂಡಗಳನ್ನು ಬಿಸಿ ಮಾಡಿದ್ದೇವೆ. ಸಮುದ್ರದ ಆಳದಲ್ಲೂ ಪ್ಲಾಸ್ಟಿಕ್ ಹಾಸಿಗೆಯನ್ನು ಹಾಸಿದ್ದೇವೆ. ಹಿಮಾಲಯದ ಎತ್ತರದಲ್ಲೂ ಕೀಟನಾಶಕಗಳಿರುವ ಅಂಶ ನಿಮ್ಮ ಗಮನಕ್ಕೆ ಬರುತ್ತದೆ.
ನಾವು ಅಂದರೆ ನಿಮ್ಮ ಪೂರ್ವಿಕರು, ಈ ಭೂಮಿಯನ್ನು ಭವಿಷ್ಯದ ಪೀಳಿಗೆಯಿಂದ ಎರವಲಾಗಿ ಪಡೆದಿದ್ದೇವೆ ಎಂಬ ಭಾವನೆಯಿಂದ ನಡೆಸಿಕೊಳ್ಳಬೇಕಿತ್ತು. ಆದರೆ, ಬುದ್ಧಿವಂತರಾದ ನಾವು ಅಂದರೆ ನಿಮ್ಮ ಪೂರ್ವಿಕರು ಈ ಭೂಮಿ ನಮ್ಮ ತಾತ-ಮುತ್ತಾತರಿಂದ ಬಳುವಳಿಯಾಗಿ ಬಂದ ಸ್ವತ್ತು ಎಂಬಂತೆ ಬಳಸಿ ಬಿಸಾಡಿದ್ದೇವೆ. ನಮ್ಮದೇ ಮುಂದಿನ ಪೀಳಿಗೆಯವರಾದ ನಿಮಗೆ ಎಂದೆಂದೂ ಸರಿಪಡಿಸಲಾರದ ಕಲುಷಿದ ಪರಿಸರವನ್ನು, ವಾತಾವರಣವನ್ನು ಬಿಟ್ಟು ಹೋಗುತ್ತಿದ್ದೇವೆ. ನಾವು ಮಾಡಿದ ಅಹಂಕಾರದ ತಪ್ಪುಗಳಿಂದ ನೀವು ಪಾಠ ಕಲಿಯಿರಿ, ಇಂತಹ ತಪ್ಪನ್ನು ನೀವು ಮಾಡದಿರಿ ಎಂಬ ಕಳಕಳಿಯ ಮನವಿಯೊಂದಿಗೆ, ಸಾಧ್ಯವಾದರೆ ನಾವು ಮಾಡಿದ ತಪ್ಪನ್ನು ಮನ್ನಿಸಿ, ದಯವಿಟ್ಟು ಕ್ಷಮಿಸಿ. ಕ್ಷಮಿಸುತ್ತೀರಾ??? ಮಕ್ಕಳಿರಾ. . .
ಚೆನ್ನಾಗಿದೆ
ಇಂದಿನ ಹಾಗೂ ಮುಂದಿನ ಪೀಳಿಗೆಯವರಿಗೆ ಅತ್ಯವಶ್ಯ ಲೇಖನ
Dhanyavaadagalu venkateshji