ತೇನವಿನಾ ತೃಣಮಪಿ ನ ಚಲತಿ ಎನ್ನುವ ಮಾತು ಭಗವಂತನಿಗಿಂತ ಚೆನ್ನಾಗಿ ವಿದ್ಯುಚ್ಛಕ್ತಿಗೇ ಅನ್ವಯವಾಗುತ್ತದೆ. ಯಾಕೆಂದರೆ ವಿದ್ಯುತ್ತಿಲ್ಲದಿದ್ದರೆ ಇಂದು ಜೀವನವೇ ಇಲ್ಲ. ಮನುಷ್ಯ ಇದ್ದೂ ಸತ್ತಂತೆ. ಮನೆಯೊಳಗಿನ ತೃಣವೂ ಕಸದ ಬುಟ್ಟಿಗೆ ರವಾನೆಯಾಗಲು ವಿದ್ಯುತ್ ಬೇಕು. ಇಂದು ವಿದ್ಯುತ್ ಎಂಬ ಮಹಾಮಾಂತ್ರಿಕನಿಲ್ಲದೆ ಜೀವಪ್ರವಾಹವೇ ನಿಶ್ಚಲ.
ಶಿಶುವಾಗಿ ಹುಟ್ಟುವಾಗಿನಿಂದ ಹಿಡಿದು ಹೆಣವಾಗಿ ಉರಿದು ಬೂದಿಯಾಗುವವರೆಗೂ ವಿದ್ಯುತ್ ಬೇಕೇಬೇಕು. ಶಿಶು ಹುಟ್ಟುವಾಗ, ಅದು ಆಪರೇಷನ್ ಥಿಯೇಟರ್ ಆಗಿರಲಿ, ಬಾಣಂತಿ ಕೋಣೆಯಗಿರಲಿ ವಿದ್ಯುತ್ ಬೇಕು. ಹುಟ್ಟಿದ ಮಗುವೂ ಕೂಡ ಅಮ್ಮ, ನೀನಲ್ಲದಿದ್ದರೆ ನಾನಿದ್ದೇನು, ಫ್ಯಾನಿಲ್ಲದಿದ್ದರೆ ಹೇಗಿರಲಿ ಎಂದು ಅಳುವಿನ ಮೂಲಕ ಹೇಳುತ್ತದೆ. ಶುರು ಅಲ್ಲಿಂದ ಮುಂದೆ – ಹಸುಗೂಸಿನ ಬಿಸಿನೀರಿಗೆ ವಿದ್ಯುತ್, ಹಸಿಬಾಣಂತಿ ಬೆಚ್ಚಗಿರಲು ವಿದ್ಯುತ್, ಉಸಿರಾಡುವ ಗಾಳಿಗೆ ವಿದ್ಯುತ್, ಬೆಳಕಿಗೆ ವಿದ್ಯುತ್, ಆಡಲು ವಿದ್ಯುತ್, ನೋಡಲು ವಿದ್ಯುತ್, ಅಡುಗಗೆ ವಿದ್ಯುತ್, ಬೆಡಗಿಗೆ ವಿದ್ಯುತ್, ಕೊನೆಗೆ ರಾತ್ರಿ ಮಲಗಿದ ಮೇಲೆ ಸೊಳ್ಳೆ ಓಡಿಸಲೂ ವಿದ್ಯುತ್.
ನೀರು ಕಾಯಿಸಲು ವಿದ್ಯುತ್, ಅಡುಗೆ ಬೇಯಿಸಲು ವಿದ್ಯುತ್, ಮಗು ಆಡಿಸಲು ವಿದ್ಯುತ್, ಬಟ್ಟೆ ಝಾಡಿಸಲು ವಿದ್ಯುತ್, ಗಿರಾಕಿ ಸೆಳೆಯಲು ವಿದ್ಯುತ್, ಪಿನ್ ತಯಾರಿಕೆಯಿಂದ ಪ್ಲೇನ್ ತಯಾರಿಕೆಯವರೆಗೆ, ಕಾಳು ಬೆಳೆಯುವಾಗಿನಿಂದ ಹಿಡಿದು ಮೊಟ್ಟೆ ಕೋಳಿಯಾಗುವವರೆಗೆ, ಬೆಡ್‌ರೂಮಿನಿಂದ ಹಿಡಿದು ಕಕ್ಕಸು ರೂಂನವರೆಗೆ, ಅಡುಗೆ ಮನೆಯಿಂದ ಕಛೇರಿ ಕೋಣೆಯವರೆಗೆ ಸಾರಾಸಗಟಾಗಿ ಬೇಕೇಬೇಕು ವಿದ್ಯುತ್. ಹೀಗೆ ವಿದ್ಯುತ್ತಿನ ವಿರಾಟ್ ರೂಪ, ಸರ್ವಾಂತರಯಾಮಿ ಗುಣಗಳನ್ನು ಬಣ್ಣಿಸುತ್ತಾ ಹೋಗುತ್ತಾರೆ ಗಜಾನನ ಶರ್ಮ ಬೆಳಕಾಯಿತು ಕರ್ನಾಟಕ ಎಂಬ ಪುಸ್ತಕದಲ್ಲಿ. ವಿದ್ಯುತ್ ಉತ್ಪಾದನೆ ಶುರುವಾಗಿದ್ದು ಯಾವಾಗ, ಎಲ್ಲಿ, ಹೇಗೆ ಎಲ್ಲಾ ರೀತಿಯ ವಿವರಗಳು ಈ ಪುಸ್ತಕದಲ್ಲಿ ಲಭ್ಯ. ವಿದ್ಯುತ್ ಬಗ್ಗೆ ಎಲ್ಲಾ ಮಾಹಿತಿಗಳು ಇರುವ ಈ ಪುಸ್ತಕ ಸಂಗ್ರಹಯೋಗ್ಯವಾಗಿದೆ.
ಇದೇ ವಿದ್ಯುತ್ ವಿಚಾರವಾಗಿ ಒಬ್ಬರೊಂದಿಗೆ ನಿಷ್ಠುರವಾಗಬೇಕಾಯಿತು. ಕಾರಣವೆಂದರೆ, ಸಾಗರದಲ್ಲಿ ವಾಸ ಮಾಡುವ ಇವರು ಸ್ನೇಹಿತರೂ ಹೌದು, ಮನೆಯ ಮುಂದೆ ವಿದ್ಯುತ್ ಕಂಬವಿದೆ. ಆ ಕಂಬಕ್ಕೆ ಅತ್ತೂ-ಕರೆದು ಒಂದು ಬೀದಿ ದೀಪವನ್ನು ನಗರಸಭೆಯಿಂದ ಹಾಕಿಸಿಕೊಂಡಿದ್ದಾರೆ. ಇದೇನು ಹೊಸ ವಿಷಯವಲ್ಲ. ಆದರೆ ಬೆಳಗಾದರೂ ದೀಪವನ್ನು ಆರಿಸುವುದಿಲ್ಲ. ಈ ಹಿಂದೆ ಟ್ಯೂಬ್‌ಲೈಟಿಗೆ ಸ್ವಿಚ್ ಇರಲಿಲ್ಲ. ಇವರ ಕಾಟ ತಡೆಯಲಾರದ ನಗರಸಭೆ ಲೈಟು ಸಿಬ್ಬಂದಿ ಬಂದು ದಿನದ ೨೪ ಗಂಟೆಯೂ ದೀಪ ಉರಿಯುತ್ತಿರುವ ಹಾಗೆ ಡೈರೆಕ್ಟ್ ಕನೆಕ್ಷನ್ ಕೊಟ್ಟು ಹೋಗಿದ್ದರು. ನಾನು ತಕರಾರು ತೆಗೆದೆ. ಆಮೇಲೆ ಸ್ನೇಹಿತರು ಸ್ವಂತ ಖರ್ಚಿನಲ್ಲಿ ಒಂದು ಸ್ವಿಚ್ ಬೋರ್ಡ್ ತಂದು ಹಾಕಿಕೊಂಡರು. ಈಗ ಮಳೆಗಾಲವಾದ್ದರಿಂದ, ಇವರು ಏಳುವುದು ಲೇಟು, ಬೆಳಗಾದ ಮೇಲೆ ದೀಪ ಆರಿಸುವ ನೆನಪು ಮತ್ತು ಜವಾಬುದಾರಿ ಎರಡೂ ಇವರಿಗೆ ಇಲ್ಲ. ಹತ್ತು ಗಂಟೆಯಾದರೂ ದೀಪ ಆರಿಸುವುದಿಲ್ಲ. ನಾನು ಪೇಟೆಗೆ ಬಂದ ಮೇಲೆ ದೀಪವಾರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇದೇ ವಿಚಾರವಾಗಿ ಸಿಟ್ಟು ಮಾಡಿಕೊಂಡು ಬೀದಿ ದೀಪವನ್ನು ಡಿಸ್‌ಕನೆಕ್ಟ್ ಮಾಡಿಸುವ ಮಾತನಾಡಿದೆ. ಅವರ ವಾದ ನೋಡಿ ಹೇಗಿದೆ. ಒಂದು ದೀಪ ಉರಿದರೆ ಏನಾಗುತ್ತೆ, ದೇಶದಲ್ಲಿ ಇಷ್ಟೆಲ್ಲಾ ಆಗುತ್ತಿದೆ ಅದನ್ನು ನಿಲ್ಲಿಸಲು ನಿಮ್ಮ ಕೈಲಿ ಆಗುತ್ತಾ? ಎಂಬ ವಿತಂಡವಾದಗಳನ್ನು ಶುರು ಹಚ್ಚಿಕೊಂಡರು. ಈ ಒಂದು ದೀಪದಿಂದ ನನ್ನ ದಿನಚರಿಯನ್ನು ಬದಲಾಯಿಸಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಹತ್ತು ಗಂಟೆಗೆ ಹೋಗಿ ದೀಪವಾರಿಸುವ ಬದಲು ಒಂಬತ್ತು ಗಂಟೆಗೆ ಬಂದು ಆರಿಸುವ ಹುಕಿ ಹತ್ತಿಕೊಂಡಿದೆ. ಬೀದಿ ದೀಪಗಳನ್ನು ಹಾಕಲಿಕ್ಕೆ ಮತ್ತು ಆರಿಸಲಿಕ್ಕೆ ನಗರಸಭೆಯಿಂದ ನೌಕರರು ಇರುತ್ತಾರೆ. ಆದರೆ, ಇಂತಹ ಒಂಟಿ ಮನೆಯಿರುವ ಕಡೆ ಅವರು ಬಂದು ದೀಪವನ್ನು ಆರಿಸುವುದಿಲ್ಲ. ಇದನ್ನು ಮಾಡಲು ಕನಿಷ್ಟ ಸಾಮಾಜಿಕ ಜವಾಬ್ದಾರಿಯಿಂದ ಕೂಡಿದ ಮನ:ಸ್ಥಿತಿಯಿದ್ದರೆ ಸಾಕು.
ಇದಕ್ಕೆ ವ್ಯತಿರಿಕ್ತವಾದ ಮನೋಸ್ಥಿತಿಯೂ ಇರುತ್ತದೆ. ಬೆಂಗಳೂರಿನ ಸರ್ಜಾಪುರಕ್ಕೆ ಹೋಗುವ ರಸ್ತೆಯಲ್ಲಿ ಶುಭ್ ಎನ್‌ಕ್ಲೇವ್ ಎಂಬ ಹೆಸರಿನ ಸುಮಾರು ೭೦-೮೦ ಮನೆಗಳಿರುವ ಬಡಾವಣೆಯಿದೆ. ಇಲ್ಲಿ ವಾಸ ಮಾಡುವ ಎಲ್ಲರೂ ಶ್ರೀಮಂತರೇ ಆಗಿದ್ದಾರೆ. ಈ ಎಕ್ಸ್‌ಟನ್ಷ್‌ನಲ್ಲಿ ಸುಮಾರು ೨೦೦ ಬೀದಿ ದೀಪಗಳಿವೆ. ಇದರ ನಿವಾಸಿಗಳು ಬೆಳಗ್ಗೆ ವಾಕಿಂಗ್ ಮಾಡುತ್ತಾರೆ. ಜೊತೆಗೆ ಒಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದಾರೆ. ಬೆಳಗಾಗುತ್ತಿದ್ದಂತೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಿ ಎಲ್ಲಾ ಬೀದಿ ದೀಪಗಳನ್ನು ಆರಿಸುತ್ತಾರೆ. ಮಹಾನಗರಪಾಲಿಕೆಯಿಂದ ನಿಯೋಜಿತನಾದ ದೀಪ ಆರಿಸುವ ನೌಕರ ಇದೇ ಸಮಯದಲ್ಲಿ ಇನ್ನೊಂದು ಸ್ಥಳದಲ್ಲಿ ದೀಪ ಆರಿಸುವ ಕೆಲಸ ಮಾಡುತ್ತಾನೆ. ಇಡೀ ಬಡಾವಣೆಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಗಿಡಗಳನ್ನು ನೆಟ್ಟುಕೊಂಡು ಹಸರೀಕರಣ ಮಾಡಿಕೊಂಡಿದ್ದಾರೆ. ಭಾನುವಾರ ಅಥವಾ ರಜಾದಿನಗಳಲ್ಲಿ ಎಲ್ಲಾ ಗಿಡಗಳನ್ನೂ ಟ್ರಿಮ್ ಮಾಡುತ್ತಾರೆ. ಈ ಮೂಲಕ ಆದಷ್ಟು ಶುದ್ಧ ಹವೆಯನ್ನು ಪಡೆಯುತ್ತಿದ್ದಾರೆ.
ಇವೆಲ್ಲಾ ಸ್ಥಳೀಯ ಸುದ್ಧಿಗಳಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇನು ವಿಶೇಷಗಳಿವೆ ಅಥವಾ ಅವಘಡಗಳಾಗಿವೆ ಎಂಬುದನ್ನು ಕೊಂಚ ತಿಳಿಯೋಣ. ಸೈಬೀರಿಯಾದಲ್ಲಿ ಇದ್ದಕ್ಕಿದ್ದ ಹಾಗೆ ೬೦ ಮೀಟರ್ ಅಗಲದ ಬೃಹತ್ ಹೊಂಡವೊಂದು ಸೃಷ್ಟಿಯಾಗಿದೆ. ಫರ್‍ಮಾಪ್ಲಾಸ್ಟಾ (ಮಣ್ಣಿನಡಿಯಲ್ಲಿ ಮಂಜುಗಡ್ಡೆಯಿರುವ ಪ್ರದೇಶ ಅಥವಾ ಮಂಜುಗಡ್ಡೆಯ ಮೇಲೆ ಹಲವು ಅಡಿಗಳಷ್ಟು ದಪ್ಪವಾದ ಮಣ್ಣಿನ ಪದರವಿರುವ ಪ್ರದೇಶ)ದ ಅಡಿಯಲ್ಲಿ ಮೀಥೇನ್ ನಿಕ್ಷೇಪವಿದೆ. ಮೀಥೇನ್ ಮಂಜುಗಡ್ಡೆಯಡಿಯಲ್ಲಿ ಇರುವಷ್ಟು ದಿನ ಈ ಜಗತ್ತು ಕ್ಷೇಮವಾಗಿರುತ್ತದೆ. ಅಪಾರ ಪ್ರಮಾಣದ ಮೀಥೇನ್ ವಾತಾವರಣಕ್ಕೆ ಸೇರಿದರೆ ಅದು ಅತ್ಯಂತ ಅಪಾಯ. ಉತ್ತರ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆ ನೀರಾಗಿ ಕರಗುತ್ತಿದ್ದಂತೆ ಅಲ್ಲಿ ಸಸ್ಯಗಳ ಬೆಳವಣಿಗೆ ಕೂಡಾ ನಡೆಯುತ್ತಿದೆ. ಈ ಹೊಂಡಕ್ಕೆ ಡ್ರಾಗನ್ ಬಾಯಿ (“Dragon’s Mouth) ಎಂದೂ ಮತ್ತು ಇದರಿಂದ ಹೊರಬರುತ್ತಿರುವ ಮೀಥೇನ್ ಅನಿಲಕ್ಕೆ ಡ್ರಾಗನ್ ಉಸಿರು( (“Dragon’s Breath") ಎಂದು ಹೆಸರಿಸಿದ್ದು, ನಾವೀಗ ಸಜೀವ ಟೈಂಬಾಂಬ್‌ನ ಮೇಲೆ ಕುಳಿತಿದ್ದೇವೆ ಹಾಗೂ ಬಾಂಬಿನ ಟೈಮರ್ ಸೊನ್ನೆಯತ್ತ ಓಡುತ್ತಿದೆ ಎಂದು ಖ್ಯಾತ ಜೀವಿಶಾಸ್ತ್ರಜ್ಞರಾದ ಡಾ:ರೀಸ್ ಹಾಲ್ಟರ್ ಹೇಳಿದ್ದಾರೆ. ಪ್ರಪಂಚದಾದ್ಯಂತ ಪ್ರತಿದಿನ ೮೫ ಮಿಲಿಯನ್ ಟನ್ ಪಳಯುಳಿಕೆ ಇಂಧನದ ಹೊಗೆಯನ್ನು ವಾತಾವರಣಕ್ಕೆ ಸೇರಿಸುತ್ತಿದ್ದೇವೆ. ಈ ಪ್ರಮಾಣವನ್ನು ಕಡಿಮೆ ಮಾಡದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಹೆಚ್ಚು ಮಂದಿ ಟೀ ಕುಡಿಯುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಅಂದರೆ ಕಾಫಿ ಆಯ್ತಾ? ಎಂದು ಕೇಳುವವರ ಸಂಖ್ಯೆಗಿಂತ ಟೀ ಆಯ್ತಾ? ಎಂದು ಕೇಳುವವರ ಸಂಖ್ಯೆ ತುಂಬಾ ಹೆಚ್ಚು. ಈ ಹೆಚ್ಚಿನ ಮಂದಿಗೆ ಈಗ ಶಾಕ್ ನೀಡಿದ ಹಾಗಿದೆ. ೩೪ ತರಹದ ರಾಸಾಯನಿಕಗಳು ಭಾರತದಲ್ಲಿ ತಯಾರಾಗುವ ಚಹಾ ಪೊಟ್ಟಣಗಳಲ್ಲಿ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಗ್ರೀನ್‌ಪೀಸ್ ಸಂಸ್ಥೆ ಹೀಗೆ ವಿವಿಧ ಕಂಪನಿಗಳ ಟೀ ಪುಡಿಯನ್ನು ಕಲೆ ಹಾಕಿ, ಇದನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿ ಮೊನ್ನೆ ತನ್ನ ವರದಿಯನ್ನು ನೀಡಿದೆ. ೨೦೧೨ರಲ್ಲಿ ಚೀನಾದ ಟೀ ಪುಡಿ ಹಾಗೂ ೨೦೧೩ರಲ್ಲಿ ಚೀನಾದ ಸಾಂಪ್ರಾದಾಯಿಕ ಔಷಧಗಳಲ್ಲೂ ರಾಸಾಯನಿಕಗಳನ್ನು ಪತ್ತೆಹಚ್ಚಲಾಗಿತ್ತು. ಗ್ರೀನ್ ಟೀ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಬಿಂಬಿಸಲಾಗುತ್ತಿದೆ. ಸಾಮಾನ್ಯ ಜನರ ಕೈಗೆಟುಕದ ಈ ಹಸಿರು ಚಹಾವನ್ನು ಹೆಚ್ಚಾಗಿ ಶ್ರೀಮಂತರೇ ಉಪಯೋಗಿಸುತ್ತಾರೆ. ಅತಿ ದುಬಾರಿಯಾದ ಗ್ರೀನ್ ಟೀ ಸೊಪ್ಪಿನಲ್ಲೂ ರಾಸಾಯನಿಕಗಳ ಅಂಶ ಪತ್ತೆಯಾಗಿದೆ. ಭಾರತದ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ ಟೀ ಪುಡಿಯ ತಯಾರಕರೆಂದರೆ ಲಿಪ್ಟನ್, ಟೇಟ್ಲೆ, ಟ್ವಿನ್ನಿಂಗ್ಸ್, ಹಿಂದೂಸ್ಥಾನ್ ಯೂನಿಲಿವರ್‌ಗಳು. ಪ್ರಪಂಚದ ಒಟ್ಟು ಟೀ ಪುಡಿಯ ಬೇಡಿಕೆಯ ೧೧% ಪ್ರಮಾಣ ಭಾರತದಿಂದ ರಪ್ತಾಗುತ್ತದೆ. ಭಾರತದ ಟೀ ಪುಡಿಗೆ ಮುಖ್ಯ ಗ್ರಾಹಕ ದೇಶಗಳೇಂದರೆ ರಷ್ಯಾ, ಅಮೆರಿಕಾ, ಇಂಗ್ಲಂಡ್ ಮತ್ತು ಜರ್ಮನಿ.
ಈ ಹಿಂದೆ ಬಿಹಾರದ ಒಂದು ಸ್ಕೂಲಿನಲ್ಲಿ ೨೩ ಮಕ್ಕಳು ಬಿಸಿಯೂಟ ಸೇವಿಸಿ ಮೃತಪಟ್ಟಿದ್ದರು. ಇದಕ್ಕೆ ಕಾರಣ ಮರಣಸದೃಷ ಮಾನೋಕ್ರಟಪಸ್ ಎಂಬ ರಾಸಾಯನಿಕ ಎಂದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾಗಿದೆ. ಇದೆ ಮಾನೊಕ್ರಟಪಸ್ ಎಂಬ ರಾಸಾಯನಿಕ ಭಾರತದ ಪ್ರಮುಖ ಬ್ರಾಂಡ್ ಟೀ ಪೊಟ್ಟಣಗಳಲ್ಲಿ ಪತ್ತೆಯಾಗಿದೆ. ಭಾರತಕ್ಕೆ ಅಮರಿಕೊಂಡ ಮಲೇರಿಯಾ ರೋಗವನ್ನು ತೊಲಗಿಸಲು ೧೯೬೦ ದಶಕದಲ್ಲಿ ಅಮೆರಿಕಾದಲ್ಲಿ ನಿಷೇಧಿಸಿದ ಡಿ.ಡಿ.ಟಿ.ಯನ್ನು ವ್ಯಾಪಕವಾಗಿ ಬಳಸಲಾಗಿತ್ತು. ನಮ್ಮಲ್ಲಿ ನೈಸರ್ಗಿಕ ಜಾಡಮಾಲಿಗಳಾದ ಹದ್ದುಗಳು ಅಳಿದುಹೋಗಲು ಈ ಡಿ.ಡಿ.ಟಿಯೂ ಒಂದು ಕಾರಣ. ಬಹಳ ಒತ್ತಡದ ನಂತರ ಭಾರತ ಸರ್ಕಾರ ೧೯೮೯ರಲ್ಲಿ ಡಿ.ಡಿ.ಟಿ.ಯನ್ನು ನಿಷೇದಿಸಿತು. ಆಶ್ಚರ್ಯವೆಂದರೆ, ನಿಷೇದಗೊಂಡ ೨೫ ವರ್ಷಗಳ ನಂತರೂ ಇದೀಗ ಟೀ ಸೊಪ್ಪಿನಲ್ಲಿ ಡಿ.ಡಿ.ಟಿ. ಪತ್ತೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬ್ರಾಂಡ್‌ಗಳಲ್ಲೂ ಒಂದಲ್ಲಾ ಒಂದು ರೀತಿಯ ರಾಸಾಯನಿಕಗಳ ಅಂಶ ಪತ್ತೆಯಾಗಿದೆ. ಕೆಲವು ಟೀ ಪುಡಿಗಳಲ್ಲಿ ೨೦ ವಿವಿಧ ರೀತಿಯ ರಾಸಾಯನಿಕಗಳ ಅಂಶವಿದೆ. ನಾವೀಗ ಟೀ ಕುಡಿಯುತ್ತಿಲ್ಲ, ವಿವಿಧ ರೀತಿಯ ರಾಸಾಯನಿಕಗಳ ಮಿಶ್ರಣವಿರುವ ಕಾಕ್‌ಟೈಲ್ ಕುಡಿಯುತ್ತಿದ್ದೇವೆ ಎಂದರೆ ಸರಿಯಾದೀತು. ಅಲ್ಲದೆ ಜೇನುಹುಟ್ಟುಗಳನ್ನು ನಾಶ ಮಾಡುವ ಹೊಸ ರಾಸಾಯನಿಕ ನಿಯೋನಿಕೋಟಿನಾಯ್ಡ್ ಅಂಶ ಕೂಡ ಪತ್ತೆಯಾಗಿದೆಯೆಂದರೆ ನಮ್ಮ ದೇಶದ ಭವಿಷ್ಯದ ಬಗ್ಗೆ ಚಿಂತೆ ಮಾಡಲೇಬೇಕಾದ ಅನಿವಾರ್ಯ ಸ್ಥಿತಿಯಿದೆ. ಗ್ರೀನ್‌ಪೀಸ್‌ನ ಈ ಹೊಸ ಹೋರಾಟಕ್ಕೆ ಅಂದರೆ ಶುದ್ಧ ಚಾಯ್ ಹೋರಾಟಕ್ಕೆ, ಒತ್ತಾಯಕ್ಕೆ ಮಣಿದ ಹಿಂದೂಸ್ಥಾನ್ ಯೂನಿಲಿವರ್ ಕಂಪನಿ ಗ್ರೀನ್‌ಪೀಸ್‌ನ ಹಲವು ಷರತ್ತುಗಳಿಗೆ ಒಪ್ಪಿಗೆ ನೀಡಿದೆ. ತನ್ನ ಚಹಾ ರೈತರನ್ನು ಸಾವಯವ ಅಥವಾ ನೈಸರ್ಗಿಕ ಚಹ ಬೆಳೆಯಲು ಪ್ರೋತ್ಸಾಹಿಸುವುದಾಗಿ ಹೇಳಿದೆ. ಇನ್ನಿತರ ಕಂಪನಿಗಳು ಏನು ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟ-ಕ್ರಿಮಿನಾಶಕಗಳೂ ಭೂಬಿಸಿಯೇರಿಕೆಗೆ ಕಾರಣವಾಗುತ್ತವೆ ಎಂಬುದಕ್ಕೆ ಇದನ್ನು ಇಲ್ಲಿ ಪ್ರಸ್ತಾಪಿಸಲಾಯಿತು.
ಕಡೆಯದಾಗಿ, ಪ್ರಪಂಚದ ಎಲ್ಲಾ ಮಹಾನಗರಗಳಲ್ಲೂ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಕರೆಯಲ್ಪಡುವ ದೊಡ್ಡ-ದೊಡ್ಡ ಕಂಪನಿಗಳು ಇರುತ್ತವೆ. ಕೋಟ್ಯಾಂತರ ಲಾಭಗಳಿಸುವ ಈ ಕಾರ್ಪೊರೇಟ್ ಕಂಪನಿಗಳು ತಮ್ಮ ವಿ.ಐ.ಪಿ. ನೌಕರರಿಗೆ ಹಲವು ಹೆಚ್ಚುವರಿ ಆಮಿಷಗಳನ್ನು ನೀಡುತ್ತವೆ. ಇದರಲ್ಲಿ ಆಪೀಸಿಗೆ ಬಂದು ಹೋಗಲು ಬಳಸುವ ಕಾರಿಗೆ ಪೆಟ್ರೋಲ್ ನೀಡುವುದು ಮತ್ತು ಬೆಳಗ್ಗೆಯಿಂದ ಸಂಜೆಯವರೆಗೆ ನಿಲ್ಲಿಸಲು ವಿಧಿಸುವ ಪಾರ್ಕಿಂಗ್ ಚಾರ್ಜ್ ನೀಡುವುದು ಇತ್ಯಾದಿ. ಮಹಾನಗರಗಳ ವಾತಾವರಣದ ಗುಣಮಟ್ಟ ಕುಸಿಯುತ್ತಿದ್ದು, ಹಲವು ಶ್ವಾಸಕೋಶ ತೊಂದರೆಗಳಿಗೆ ಕಾರಣವಾಗುತ್ತಿದೆ. ಕಾರಣ ಅತಿಯಾದ ವಾಹನ ದಟ್ಟಣೆ ಮತ್ತು ಇವುಗಳು ಕಕ್ಕುವ ಇಂಗಾಲಾಮ್ಲ. ಕಾರ್ಪೊರೇಟ್ ಕಂಪನಿಗಳು ನೀಡುವ ಈ ಹೆಚ್ಚುವರಿ ಸೌಲಭ್ಯದಿಂದಾಗಿ ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಒಂದೊಮ್ಮೆ ಈ ಹೆಚ್ಚುವರಿ ಸೌಲಭ್ಯವನ್ನು ಕಡಿತ ಮಾಡಿದಲ್ಲಿ ಇದೇ ವಿ.ಐ.ಪಿ ನೌಕರರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವತ್ತ ಒಲವು ತೋರುತ್ತಾರೆ ಎಂದು ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ಹಾಗೂ ಇನ್ನೂ ಒಂದು ಉಪಾಯವಿದೆ. ಚೀನಾದಲ್ಲೂ ಗಾಳಿಯ ಗುಣಮಟ್ಟ ಕುಸಿದಿದೆ. ಅಲ್ಲಿ ಉಪಯೋಗಿಸುವ ವಾಹನ ಚಾಲಕರಿಗೆ ಒಂದು ಕಟ್ಟುನಿಟ್ಟಾದ ನಿಭಂದನೆ ವಿಧಿಸಲಾಗಿದೆ. ಅದೇನೆಂದರೆ, ಸೋಮವಾರ ಸರಿ ಸಂಖ್ಯೆಯ ನಂಬರ್ ಹೊಂದಿದ ವಾಹನಗಳಿಗೆ ಮಾತ್ರ ರಸ್ತೆಯಿಳಿಯಲು ಅವಕಾಶ. ಹಾಗೆಯೇ ಮಂಗಳವಾರ ಬರೀ ಬೆಸ ಸಂಖ್ಯೆಯ ವಾಹನಗಳು ರಸ್ತೆಗೆ ಇಳಿಯುತ್ತವೆ. ವಾರಪೂರ್ತಿ ಇದೇ ನಿಯಮ ಪಾಲನೆಯಾಗುತ್ತದೆ. ಸ್ವಾಭಾವಿಕವಾಗಿ ಇಂಗಾಲಾಮ್ಲ ಪ್ರಮಾಣ ಕಡಿಮೆಯಾಗುತ್ತದೆ. ಈ ತರಹದ ಮಾಲಿನ್ಯ ಕಡಿಮೆ ಮಾಡುವ ಯೋಜನೆಯನ್ನೂ ನಮ್ಮ ಸರ್ಕಾರಗಳು ಜಾರಿಗೆ ತರಬಹುದು. ಆದರೆ ಬದ್ಧತೆ ತೋರಬೇಕು.
ಮೇಲೆ ಹೇಳಿದ ಹಾಗೆ ಹುಟ್ಟಿನಿಂದ ಚಟ್ಟದವರೆಗೂ ವಿದ್ಯುತ್ ಅನಿವಾರ್ಯ. ಜಲವಿದ್ಯುತ್, ಕಲ್ಲಿದ್ದಲ ವಿದ್ಯುತ್ ಅಥವಾ ಅಣುಸ್ಥಾವರದ ವಿದ್ಯುತ್ತೇ ಬೇಕು ಎಂಬುದೇನಿಲ್ಲ. ಪರಿಸರಕ್ಕೆ ಹಾನಿಯಾಗದ ಸೌರವಿದ್ಯುತ್, ಪವನ ವಿದ್ಯುತ್, ಸಮುದ್ರದಲೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಇತ್ಯಾದಿಗಳು ಹುಟ್ಟಿನಿಂದ ಚಟ್ಟದವರೆಗೆ ತಲುಪಿಸಬಲ್ಲವು.
ಸೈಬಿರಿಯಾದಲ್ಲಿ ಪತ್ತೆಯಾದ ೬೦ ಮೀಟರ್ ಅಗಲದ ಬೃಹತ್ ಹೊಂಡ. ಇದರಿಂದ ಹೊರಟ ಮಿಥೇನ್ ವಾತಾವರಣಕ್ಕೆ ಸೇರಿದೆ ಎಂಬ ಅಂಶವೇ ವಿಜ್ಞಾನಿಗಳ ಕಳವಳಕ್ಕೆ ಕಾರಣವಾಗಿದೆ.
******
ಅಖಿಲೇಶ್, ಎಂದಿನಂತೆ ಅದ್ಬುತವಾದ, ಮಾಹಿತಿಪೂರ್ಣ ಲೇಖನ! ನಿಮ್ಮ ಲೇಖನ ಓದಲು ಪ್ರತಿ ವಾರ ಕಾಯುತ್ತೇನೆ. ಹಂಗಂದ್ರೆ ಮುಂಜಾನೆ ಕುಡಿಯೋದು ಚಹ ಅಲ್ಲ ವಿಷ ಅಂದಂಗಾಯ್ತು 🙁
ಬಹುಷ: ನಾವು ತಿನ್ನುವ ಪ್ರತಿ ವಸ್ತುವೂ
ವಿಷಮಯವೇನೋ ಎಂದು ಭಾಸವಾಗುತ್ತದೆ.
ಅದಕ್ಕೆ ಹೆಚ್ಚಿನವುಗಳನ್ನು ನಾವೇ
ಬೆಳೆದು ತಿನ್ನುವ ಪ್ರಯತ್ನ ಮಾಡುತ್ತಿದ್ದೇವೆ.
ಪೇಟೆಗಳಲ್ಲೂ ತಾರಸಿ ತೋಟದಲ್ಲಿ
ಬೆಳೆದುಕೊಳ್ಳಬಹುದು. ಓದಿ ಮೆಚ್ಚಿದ್ದಕ್ಕೆ
ಧನ್ಯವಾದಗಳು. ಅಂದ ಹಾಗೆ ನಿಮ್ಮ
ಅಂಕಣ ಈ ಬಾರಿ ನಾಪತ್ತೆಯಾಗಿದೆಯಲ್ಲ??
ನನ್ನ ಅಂಕಣ ಪ್ರತಿ ಎರಡು ವಾರಕ್ಕೊಮ್ಮೆ ಬರುತ್ತೆ. ಮುಂದಿನ ವಾರ ತಪ್ಪದೆ ಓದಿ 🙂