ಲೇಖನ

ಮಿಂಚುಳ: ಪ್ರಜ್ವಲ್ ಕುಮಾರ್

 

ನವೀನ್ ಸಾಗರ್ ಅವ್ರು ಬರ್ದಿರೋ 'ಣವಿಣ – ಅಂಗಾಲಲ್ಲಿ ಗುಳುಗುಳು' ಓದ್ತಾ ಇದ್ದೆ. ಅದ್ರಲ್ಲಿರೋ ರೇಷ್ಮೆ ಹುಳದ ಕಥೆ ಅಥವಾ ಘಟನೆ ಓದಿ ನಂ ಮಿಂಚುಳದ ಘಟನೆ ನೆನಪಾಯ್ತು! 'ಸಿಲ್ಲಿ-ಲಲ್ಲಿ' ಸೀರಿಯಲ್ಲಿನ ಡೈಲಾಗ್ ನೆನಪಿಸಿಕೊಂಡು 'ಜೇಡ ಕಟ್ಟಿರೋ ಮೂಲೆ ನೋಡ್ದೆ'.

ನಾನವಾಗ ಎರಡೋ, ಮೂರೋ, ನಾಲ್ಕನೇದೋ ಕ್ಲಾಸು. ಒಟ್ನಲ್ಲಿ ಹಾಕ್ಕೊಳೋ ಚಡ್ಡಿ ಎಲಾಸ್ಟಿಕ್ಕಿಂದೇ ಆಗ್ಲಿ, ಗುಂಡೀದೇ ಆಗ್ಲಿ; ಜೇಬು ಮಾತ್ರ ಇರ್ಲೇ ಬೇಕು ಅಂತ ಹಟ ಮಾಡ್ತಿದ್ದ ವಯಸ್ಸು. ನಮ್ದು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಲ್ಲಿರೋ ಒಂದು ಊರು. ಚಿಕ್ಕಮಗಳೂರನ್ನ ನೀವು ನೋಡದೇ ಇದ್ರೂ ಬೆಟ್ಟ, ಗುಡ್ಡ, ಕಾಡು, ಮಳೆ, ಮಂಜು ಅಂತೆಲ್ಲ ನಿಂ ಕಣ್ಣೆದುರಿಗೆ ಬಂದ್ರೆ, ನಿಮಗೆ ನಮ್ಮೂರಿನ ಬಗ್ಗೆ ಯಾವಾಗ್ಲೂ ಹೊಗಳೋ ಒಬ್ಬ ಫ್ರೆಂಡಿರ್ತಾರೆ ಅಥವಾ ನೀವು ಇತ್ತೀಚಿನ ಕನ್ನಡ ಫಿಲಂಗಳನ್ನ ನೋಡಿರ್ತೀರ! ಈಗೀಗಂತೂ ನಾವು ಥಿಯೇಟರ್-ಗೆ ಒಂದು ಫಿಲಂ ನೋಡೋಕೆ ಹೋದ್ರೆ 'ಹೋ! ಇಲ್ಲೂ ಶೂಟಿಂಗ್ ಮಾಡಿದಾರಲ್ಲ ಮಾರಾಯ' ಅನ್ನೋಷ್ಟು ಫಿಲಂಗಳು ಮಲೆನಾಡಲ್ಲಿ ಶೂಟಿಂಗ್ ಆಗ್ತಿದಾವೆ.
ಹೌದು! ನಾನ್ಯಾಕೆ ಇದ್ನೆಲ್ಲಾ ಹೇಳ್ತಿದೀನಿ? ಇವೆಲ್ಲ ಬಿಟ್ ಹಾಕಿ!

ಅಂಥಾ ನಮ್ಮೂರಲ್ಲಿ ರಾತ್ರಿ ಹೊತ್ತು ಕರೆಂಟು ಇಲ್ದೇ ಇರೋ ಹೊತ್ತಲ್ಲಿ (ಇಲ್ದೇ ಇರೋಕಿಂತ ಇದ್ರೇ ನಮ್ಗೆಲ್ಲ ಆಶ್ಚರ್ಯ ಆಗ್ತಿತ್ತು ಬಿಡಿ!) ಅಡಿಕೆ ಚಪ್ಪರಕ್ಕೋ, ಮನೆ ಮುಂದಿರುವ ಅಂಗಳಕ್ಕೋ ಹೋಗಿ ಆಕಾಶ ನೋಡ್ತಾ ನಿಲ್ಲೋದು ಅಭ್ಯಾಸ ಆಗಿತ್ತು. 'ಆ ನಕ್ಷತ್ರ ಎಷ್ಟು ದೊಡ್ಡಕ್ಕಿದೆ', 'ಅಲ್ಲೊಂದು ನಕ್ಷತ್ರ ಹೆಂಗೆ ಓಡೋಗ್ತಿದೆ ನೋಡು' ಅಂತೆಲ್ಲಾ ಮಾತಾಡ್ತಾ ಇದ್ವಿ. ಆಕಾಶದಲ್ಲಲ್ಲದೆ ಅಲ್ಲೇ ಪಕ್ಕದಲ್ಲೇ ಇರೋ ಕಾಡು, ಅಡಿಕೆ ತೋಟಗಳಲ್ಲೂ ನಕ್ಷತ್ರಗಳು ಕಾಣ್ತಾ ಇದ್ವು! ಆಕಾಶದಲ್ಲಿರೋ ನಕ್ಷತ್ರ ಬೆಳ್ಳಗಿದ್ರೆ, ಇವೆಲ್ಲಾ ಒಂಥರಾ ಹಸಿರು ಬಣ್ಣ, ರೇಡಿಯಂ ಥರದ್ದು. ಅದ್ಕೆ ನೀವು ಮಿಂಚುಳ, ಮಿಂಚು ಹುಳ, ಮಿಣುಕು ಹುಳ ಏನೇ ಅನ್ನಿ, ಇದು ಅದೇಯಾ!! ಹಿಂಗೇ ವಿಕಿಪೀಡಿಯಾದಲ್ಲಿ ಹುಡುಕಿದಾಗ ಗೊತ್ತಾಗಿದ್ದು ಮಿಂಚುಳದ ಇಂಗ್ಲೀಷ್ ಹೆಸರು Firefly ಅಂತ.

ನಮ್ಗೆ ಕಾಡಿಗೆ ಹೋಗಿ ಈ ಮಿಂಚುಳಗಳ್ನ ಹಿಡಿಯೋಕೆ ಕತ್ಲು,ಕಾಡಿನ ಹೆದರಿಕೆ. ಆದ್ರೆ ಒಂದೊಂದು ಸಲ ಒಂದೊಂದು ಮಿಂಚುಳ ಮನೆ ಹತ್ರ, ಕೆಲವು ಮನೆ ಒಳಗೂ ಬಂದು ಬಿಡೋದು. ತಕ್ಷಣ ಓಡಿ ಹೋಗಿ ಅದನ್ನ ಹಿಡಿಯೋದು ನಂ ಕೆಲ್ಸ. ಮೊದಲೆಲ್ಲಾ ಅದನ್ನ ಎರಡೂ ಕೈ ಮಧ್ಯ ಇಟ್ಕೊಂಡು, ಒಂದೇ ಸಣ್ ಕಿಂಡಿ ಬಿಟ್ಕೊಂಡು ಅದ್ರಲ್ಲೇ ಮಿಂಚುಳ ಬೆಳಕು ಬಿಡೋದು ನೋಡಿ ಮಜಾ ತಗೋತಿದ್ವಿ. ಆಮೇಲೆ ಅದ್ಯಾರು ಹೇಳಿ ಕೊಟ್ರೋ ಗೊತ್ತಿಲ್ಲ, ಮನೇಲಿ ಬೆಂಕಿಪಟ್ಣ ಖಾಲಿ ಆಗೋದೇ ಕಾಯ್ತಾ ಇದ್ದೆ. ಒಂದೊಂದು ಸಲ ಖಾಲಿ ಬೆಂಕಿಪಟ್ಣಕ್ಕಾಗಿ ಇರೋ ಕಡ್ಡೀನೆಲ್ಲಾ ಕೆಳಗೆ ಸುರಿದು ಆಮೇಲೆ ಮನೇಲಿ ಬೈಸಿಕೊಂಡಿದ್ದೂ ಇದೆ. ಈ ಮಿಂಚುಳಾನ ಬೆಂಕಿ ಪಟ್ನದೊಳಗೆ ಹಾಕಿ ಮುಚ್ಚಿಟ್ಟು ರಾತ್ರಿ ಮಲಗಿ ಬಿಡ್ತಿದ್ದೆ. 

ಬೆಳಿಗ್ಗೆ ಎದ್ದು ಬೆಂಕಿಪಟ್ಣ ನೋಡಿದ್ರೆ ಮಿಂಚುಳ ಅರೆ ಜೀವ ಆಗಿರ್ತಿತ್ತು. ಅದ್ಯಾಕೋ ಅದಿಕ್ಕೆ ಊಟ ಇಲ್ದೇ ಹಾಗಾಗಿದೆ ಅನ್ಸಿ ಪ್ರತೀ ಸಲ ಅಲ್ಲೇ ಮನೆ ಹತ್ರ ಅದಾಗದೇ ಬೆಳಿತಾ ಇದ್ದ, ಲಂಟಾನ ಹಣ್ಣಿನಂತೇ ಇರೋ 'ಕಾಕಿ' ಹಣ್ಣನ್ನ ತಂದು ಬೆಂಕಿಪಟ್ಣದೊಳಗೆ ಹಾಕಿಡ್ತಿದ್ದೆ. ನಾವೆಲ್ಲಾ ತಿಂದಂಗೆ ಮಿಂಚುಳಾನೂ ಅದನ್ನ ತಿನ್ನುತ್ತೆ ಅಂತ ನನ್ ತಲೇಲಿ. ಆದ್ರೆ ಅದು ಬಹುಷಃ ಒಂದನ್ನೂ ಮೂಸೂ ನೋಡಿರಲ್ಲ.

ಇಷ್ಟೆಲ್ಲಾ ಆದ್ರೂ ಮಿಂಚುಳಕ್ಕೆ ಜೀವ ಇದೆ ಅನ್ನೋದು ಗೊತ್ತಾಗ್ತಾ ಇದ್ದಿದ್ದು ಅದು ಇನ್ನೂ ಬಿಡ್ತಾ ಇದ್ದ ಬೆಳಕಿಂದ. ಬೆಳಗಿನ ಬೆಳಕಿನ ಮಧ್ಯ ಈ ಬೆಳಕು ಅಷ್ಟಾಗಿ ಕಾಣದೇ ಇದ್ರೂ ಮಿಂಚುಳ ಎಲ್ಲಿಂದ ಬೆಳಕು ಬಿಡುತ್ತೇ ಅನ್ನೋದು ಗೊತ್ತಾಗಿತ್ತು. "ಮಿಂಚುಳ ಅದರ 'ಅಂಡಲ್ಲಿ' ಬೆಳಕು ಬಿಡುತ್ತೆ" ಅನ್ನೋದು ಆಗ ನನ್ನ ಪಾಲಿನ ಬಹು ದೊಡ್ಡ ಸಂಶೋಧನೆ ಮತ್ತು ಸ್ಕೂಲಲ್ಲಿ ಬಹಳ ದೊಡ್ಡ ಜೋಕು. ಆಗ ಜೇಬಿರೋ ಚಡ್ಡೀನೇ ಬೇಕು ಅಂತ ಹಟ ಹಿಡಿಯೋಕೆ ಇದೂ ಒಂದು ಕಾರಣ. ಅಂದ್ರೆ ಬೆಳಕು ಬಿಡೋದಲ್ಲ, ಈ ರೀತಿಯ ಬೆಂಕಿಪಟ್ಣ, ಇನ್ಯಾವ್ದೋ ಒಂದಷ್ಟು ಸಣ್ ಸಣ್ಣ ಆಟದ ಸಾಮಾನುಗಳನ್ನ ತುಂಬಿಸ್ಕೊಂಡು ಓಡಾಡೋಕೆ.

ಹಿಂಗೇ ಮೊದ್ಲು ಮೊದ್ಲು ಬೆಂಕಿಪಟ್ಣ ಉಪಯೋಗಿಸ್ತಾ ಇದ್ದಿದ್ದು ಆಮೇಲೆ ಬೇಜಾರಾಯ್ತು! ಬೆಂಕಿಪಟ್ಣದ ಜಾಗಕ್ಕೆ ಹೊಸಾ ಪ್ಲಾಸ್ಟಿಕ್ ನೀರಿನ ಬಾಟ್ಲಿ ಬಂತು. 

'ಬೆಂಕಿಪಟ್ಣ ಹೋಯ್ತು, ಬಾಟ್ಲಿ ಬಂತು ಡುಂ.. ಡುಂ.. ಡುಂ..'
ಕಾರಣ ಬೇರೇನೂ ಅಲ್ಲ, ಬೆಂಕಿಪಟ್ಣದಲ್ಲಿ ಮಿಂಚುಳದ ಬೆಳಕು ನೋಡ್ಬೇಕು ಅಂದ್ರೆ ಬೆಂಕಿಪಟ್ಣ ತೆರೆದು ನೋಡ್ಬೇಕಿತ್ತು, ಆದ್ರೆ ಬಾಟ್ಲೀಲಿ ಯಾವಾಗ್ಲೂ ಬೆಳಕು ಕಾಣ್ತಿತ್ತಲ್ಲ. ಆಗೆಲ್ಲಾ ನಂಗೊಂಥರಾ ಆಸೆ! ಈ ಥರದ ಬಾಟ್ಲಿಯ ಒಳಗೆ ಒಂದು ನೂರೋ, ಇನ್ನೂರೋ ಮಿಂಚುಳಗಳ್ನ ಬಿಟ್ಟು ಆ ಬಾಟ್ಲೀನ ಟಾರ್ಚಿನ ಥರ ಹಿಡ್ಕೊಂಡು ರಾತ್ರಿ ನಡ್ಕೊಂಡು ಹೋಗ್ಬೇಕು ಅಂತ. ಆದ್ರೆ ಅಷ್ಟೆಲ್ಲಾ ಮಿಂಚುಳಗಳು ಒಟ್ಟಿಗೇ ಎಲ್ಲಿ ಸಿಗ್ತವೆ?

ಆಮೇಲ್ಯಾವಾಗ್ಲೋ ಗೊತ್ತಾದ ವಿಷ್ಯ ಅಂದ್ರೆ ಈ ಮಿಂಚುಳಗಳು ಬೆಳಕು ಬಿಡ್ತಾವಲ್ಲ? ಅವೆಲ್ಲವೂ ಗಂಡು! ಮತ್ತು ತನ್ನ ಸಂಗಾತಿಯನ್ನ ಆಕರ್ಷಿಸಲು ಈ ರೀತಿ ಬೆಳಕು ಬಿಡ್ತವೆ ಅನ್ನೋದು!! ಈ ಬಾಡಿಸ್ಪ್ರೇ ಕಂಪನಿಯವ್ರಿಗೆಲ್ಲಾ ಈ ಮಿಂಚುಳಗಳೇ ಪ್ರೇರಣೇನಾ ಅಂತ ನಂಗೊಂದು ಡೌಟಿದೆ. ಗಂಡು ಮಿಂಚುಳಗಳು ಬೆಳಕು ಬಿಟ್ಟು ಹೆಣ್ಣು ಮಿಂಚುಳಗಳ್ನ ಸೆಳೀತಾವೆ, ನೀವೆಲ್ಲಾ ಹುಡ್ಗುರೂ ಬಾಡಿಸ್ಪ್ರೇ ಹಾಕ್ಕೊಂಡು ಹುಡ್ಗೀರ್ನ ಸೆಳೀರಿ ಅಂತ ಐಡಿಯಾ ಬಂದಿದ್ಯಾವನಿಗೋ? ಆದ್ರೂ ಸ್ವಲ್ಪ ಯೋಚ್ನೆ ಮಾಡಿ; ಈ ಗಂಡು ಮಿಂಚುಳಗಳು ಅಷ್ಟೆಲ್ಲಾ ಕಷ್ಟ ಪಟ್ಟು ಬೆಳಕು ಬಿಟ್ಕೊಂಡು ಹೆಣ್ಣು ಮಿಂಚುಳಗಳ್ನ ಇಂಪ್ರೆಸ್ ಮಾಡೋಕೆ ಪ್ರಯತ್ನಿಸ್ತಾವೇ ಅಂದ್ರೆ, ಆ ಹೆಣ್ಣು ಮಿಂಚುಳಗಳು ಅದೆಷ್ಟು ಚನ್ನಾಗಿರ್ಬೋದು ಅಲ್ವಾ?

ಈಗ್ಲೂ ಊರಿಗೆ ಹೋದಾಗ ಈ ಮಿಂಚುಳಗಳು ಕಾಣ್ತವೆ. ಆದ್ರೆ ಮುಂಚಿನ ಹಾಗೆ ಅದ್ನ ಹಿಡಿದು ಬೆಂಕಿಪಟ್ಣಾನೋ, ಬಾಟ್ಲಿಗೋ ಹಾಕಿಡ್ಬೇಕು ಅನ್ಸಲ್ವಪ್ಪ. ಅವುಗಳದ್ದೂ ನಂ ಥರಾನೆ ಒಂದು ಜೀವ ಅಂತ ಬಹುಷಃ ನಂಗೆ ಈಗ ಅರ್ಥ ಆಗಿರ್ಬೋದು!

ನಿಮ್ಮವ
– ಯೋಚಿತ​

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮಿಂಚುಳ: ಪ್ರಜ್ವಲ್ ಕುಮಾರ್

 1. ಗಾಜಿನ ಇಂಕ್ ಬಾಟಲಿ (ಬಹು‍ಷ: ಬ್ರಿಲ್ ಇರಬೇಕು)
  ಗೆ ಮಿಂಚುಳ ತುಂಬಿಸಿ ಟಾರ್ಚ್ ಮಾಡುವ
  ಪ್ರಯತ್ನ ಚಿಕ್ಕವನಿದ್ದಾಗ ಮಾಡಿದ್ದೆ.
  ಅಮ್ಮ ಬೈದರು ಅಂತ ಪ್ರಯತ್ನ ಕೈ ಬಿಟ್ಟೆ.
  ಬಾಲ್ಯದ ನೆನಪಾಯಿತು. ಧನ್ಯವಾದಗಳು
  ಪ್ರಜ್ವಲ್ ಕುಮಾರ್.

Leave a Reply

Your email address will not be published. Required fields are marked *