ಆಶಾಢ ಕಳೆದರೆ ಬರುವುದೇ ಶ್ರಾವಣ ಮಾಸ.
ಆಗಾಗ್ಗೆ ಹನಿ ಹನಿದು ಒಮ್ಮೊಮ್ಮೆ ಬೀಡು ಭಿರುಸಾಗಿ ಬೀಳೋ ಮಳೆ ಕೂಡಾ ವಾತಾವರಣವನ್ನು ಆಮೋದ ಕಣವನ್ನಾಗಿ ಮಾಡಿ ಇಡೀ ಭೂರಮೆಯೇ ಹಸಿರುಟ್ಟು ಕಂಗೊಳಿಸೊ ಕಾಲವನ್ನಾಗಿ ಪರಿವರ್ತಿಸಿ ಬಿಡುತ್ತೆ, ಅದರ ಜತೆ ಸಂಘ ಜೀವಿ ಮಾನವನಿಗೂ ತನ್ನ ಸಹೃದಯತೆಯ ಸಂಚಲನೆಯ ಪಾಠ ಹೇಳೊಕೊಡೊದರಲ್ಲಿರುವ ವಸುಂಧರೆ…ಪ್ರಕೃತಿಯ ಮರ ಗಿಡ ಬಳ್ಳಿಗಳು ನಲಿ ನಲಿದು ಪ್ರತಿ ಕ್ಷಣವನ್ನು ಸವಿಯುತ್ತಾ ನಮ್ಮೆಲ್ಲರನ್ನೂ ಇವರೆಲ್ಲರ ಋಣಿಯನ್ನಾಗಿಸಿ ಬಿಡುತ್ತವೆ. ನೋಡಿದಷ್ಟೂ ಉದ್ದಕ್ಕೆ ಕಣ್ಮನ ತಣಿಸುವ ಹಸಿರು ಉಲ್ಲಾಸ ನೀಡುತ್ತದೆ. ಪಟ್ಟ ಶ್ರಮದ ಪ್ರತಿಫಲನವದು. ಅದಕ್ಕೇ ವಸುಂಧರೆಗೆ ಪ್ರಕೃತಿ ಮಾತೆಗೆ ಶರಣು ಹೇಳುವ ಪರಿಪಾಠವಿದು. ಈ ಸಮಯದಲ್ಲಿ ಹಳ್ಳಿ ಹಳ್ಳಿಯ ಭಜನಾ ಮಂದಿರ ದೇವಾಲಯಗಳಲ್ಲಿ ಭಜನೆ ಸಾಮಾನ್ಯ.
ಭಜನೆ ಅಂದರೆ ಅಂತಿಂತದ್ದಲ್ಲ. ಈಡೀ ಊರವರೇ ನೆರೆದಿರುತ್ತಾರೆ ಇಲ್ಲಿ, ಹೆಂಗಸರು ಮಕ್ಕಳು ದೊಡ್ಡವರು ಎಲ್ಲರೂ. ಪ್ರಾಯಶಃ ತಮ್ಮ ಭಕ್ತಿ ಭಾವವನ್ನು ತೋರಿಸಲೆಂದೇ ಬರುವವರಾದರೆ ಬಂದವರೆಲ್ಲರದ್ದು ಅವವರರ ಭಾವ ಗಳಿಗನುಗುಣವಾಗಿ ಭಕ್ತಿ. ಕೆಲವೆಡೆ ಭಜನಾ ಸ್ಪರ್ದೆಯೂ ಇರುತ್ತಿತ್ತು. ಅದೂ ಪ್ರತಿಷ್ಠೆಯ ವಿಷಯವೇ. ಈ ಬಜನೆಗಳಲ್ಲಿ ಕುಂತು, ನಿಂತು ಕುಣಿದು ಹಾಡೋ ಪ್ರಭೇಧಗಳು ಇವೆ. ರಾತ್ರೆ ಆರಂಭವಾದ ಭಜನೆಗಳು ಸಪ್ತಾಹವನ್ನೂ ಮಾಸವನ್ನೂ ಪೂರೈಸಿದ ಉದಾಹರಣೆಗಳೂ ಇವೆ.ಇದಕ್ಕೆಂದೇ ನನ್ನಂತೆ ಆಗ ಮಕ್ಕಳಿಗೆಲ್ಲಾ ಈ ಶ್ರಾವಣ ಮಾಸವೆಂದರೆ ಎಲ್ಲಿಲ್ಲದ ಹಿಗ್ಗು.
ಕಷ್ಟ ಸಹಿಷ್ಣುಗಳಾದ ಕೃಷಿಕರು ಕೃಷಿ ಕಾರ್ಯವೆಲ್ಲಾ ಮುಗಿಯುತ್ತಾ ಬಂದಂತೆ ಸ್ವಲ್ಪ ಬಿಡುವು ಮಾಡಿಕೊಂಳ್ಳುವ ಕಾಲ. ಪರಸ್ಪರ ಹೊಂದಾಣಿಕೆಯ ಜೀವನ ಮುಖ್ಯ ವಿಶೇಷವಾಗಿರುವ ಪೂಜೆ ಪುನಸ್ಕಾರ, ಜಾತ್ರೆ, ಸಂತೋಷ ಕೂಟಗಳು, ಹಬ್ಬ ಹರಿದಿನಗಳು, ಮನೆ ಮನೆಯ ಕಾರ್ಯಕ್ರಮಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಕೃಷಿಯಲ್ಲಿ ನೆಟ್ಟಿ ( ಭತ್ತದ ಗಿಡಗಳ ಮರು ನೆಡುವಿಕೆ) ಹಳ್ಳಿ ಹಳ್ಳಿಗಳಲ್ಲಿ ಕ್ರತಕ್ರತ್ಯತೆ ಪರಸ್ಪರ ಸಹಾಯ ಮನೋಭಾವ ಒಬ್ಬರನ್ನೊಬ್ಬರು ಹೊಂದಿಕೊಂಡು ಬಾಳುವ ಕಲೆ ಅಸೀಮ. ಈಗಿನಂತೆ ಪೋಲೀಸು ಕಾನೂನು ಗಳ ಭರಾಟೆ ಕಮ್ಮಿಯೇ. ಹೀಗಾಗಿ ನಲಿಯಲು ಕಾರಣ ಹುಡುಕುತ್ತಿರೋ ಮನೋಭಾವನೆಗೆ ಈ ಶ್ರಾವಣ ಮಾಸ ಹೇಳಿ ಮಾಡಿಸಿದಂತಿದೆ. ಹಳ್ಳಿಯ ವಾತಾವರಣ ಮತ್ತು ಕೃಷಿಕರ ಮನಸ್ಥಿತಿಯಲ್ಲಿ ಭಗವಂತ ಮತ್ತು ಆತನ ಪ್ರೇರಣೆಗೆ ಮಹತ್ವದ ಸ್ಥಾನ.ಆಷಾಢ ಶ್ರಾವಣಗಳು ಮತ್ತು ನಂತರದ ಮಾಸಗಳು ಇದಕ್ಕೆ ಜಾಸ್ತಿ ಪುಷ್ಟಿಯನ್ನೀಯುತ್ತವೆ. ಏಕೆಂದರೆ ಆಷಾಢ ಶ್ರಾವಣ ಗಳು ಗುರು ಹಿರಿಯರನ್ನು ದೇವರನ್ನು ನೆನೆಯುವ ಕಾಲವೂ ಹೌದು. ಇದರಲ್ಲಿ ಮುಖ್ಯವಾದುದು ನಮಗೆಲ್ಲಾ ಮನರಂಜನೆ ಕೊಡುತ್ತಿದ್ದ ಕಾಲ ಎಂದರೆ ಈ ಶ್ರಾವಣ ಮಾಸದ ಬಗೆ ಬಗೆಯ ದೇವರುಗಳಿಗೆ ಅರ್ಪಿಸಲಾಗುವ ಪೂಜೆ ಮತ್ತು ಆರತಿ. ಶ್ರಾವಣದ ಸಂಜೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವ ಈ ಪೂಜೆ ಮತ್ತು ಆರತಿ ನನ್ನ ಮನಸ್ಸಿನಲ್ಲಿ ಭದ್ರವಾದ ಸ್ಥಾನ ಕಲ್ಪಿಸಿಕೊಂಡಿವೆ.
ನಾವಾಗ ಸಿದ್ದಾಪುರದಲ್ಲಿದ್ದೆವು ಈ ಸಿದ್ದಾಪುರದಲ್ಲಿನ ನನ್ನ ಜೀವನದ ಅವಧಿ ನನ್ನ ಜೀವನದ ಅತ್ಯಂತ ಮುಖ್ಯ ಮೈಲಿಗಲ್ಲು. ಸರಿ ಸುಮಾರು ೧೩ ವರ್ಷ ನಾನಲ್ಲಿದ್ದೆ. ತಂದೆಯವರು ಕುಗ್ರಾಮವಾದ ಬೆಳ್ಳಾಲವನ್ನು ಬಿಟ್ಟು ನಮೆಲ್ಲರ ಮುಂದಿನ ವಿಧ್ಯಾಭ್ಯಾಸಕ್ಕೆಂತಲೇ ಈ ಸಿದ್ದಾಪುರಕ್ಕೆ ಬಂದು ನೆಲೆಸಿದ್ದರು. ನಾನೂ ನನ್ನಣ್ಣ, ಅಕ್ಕಂದಿರು ಮತ್ತು ಒಬ್ಬ ತಮ್ಮ, ನಾನು ಸಿದ್ದಾಪುರಕ್ಕೆ ಬರುವಾಗ ಹತ್ತು ವರ್ಷ. ನನ್ನನ್ನು ಸಮಾಜದ ಮುಖ್ಯ ಪ್ರವಾಹದಲ್ಲಿ ಸೇರ್ಪಡಿಸಿದ್ದೇ ಈ ಸಿದ್ದಾಪುರ, ಯಾಕೆಂದರೆ ನನ್ನ ಜೀವನದಲ್ಲಿ ಸುಮಾರು ಆಗುಹೋಗುಗಳನ್ನು ಮುಖ್ಯ ತಿರುವುಗಳನ್ನು ಕೊಡ ಮಾಡಿದ್ದೇ ಈ ಸಿದ್ದಾಪುರ. ಅದನ್ನೆಲ್ಲಾ ಇನ್ಯಾವಾಗಲಾದರೂ ಹೇಳುವೆ.
ಪುನಃ ಭಜನೆಗೆ ಬರುತ್ತಿದ್ದೇನೆ.
ನಮ್ಮ ಊರಿನಲ್ಲೊಂದು ಹೊನ್ನಮ್ಮ ದೇವರ ದೇವಾಲಯವಿತ್ತು. ಊರ ಗೌಡ ಸಾರಸ್ವತ ಭ್ರಾಹ್ಮಣರ ದೇವಾಲಯವಿದು. ನನಗೆ ಭಜನೆಯಂತಹ ಸಾಮೂಹಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೆಲ್ಲಾ ಆಸಕ್ತಿ ಹುಟ್ಟಿದ್ದು ಈ ಸಿದ್ದಾಪುರಲ್ಲಿಯೇ. ಶ್ರಾವಣ ಮಾಸ ಮತ್ತು ನವರಾತ್ರೆಗಳಲಿ ಇಲ್ಲಿ ಭಜನೆ ವಿಶೇಶ.ಊರಿನ ಎಲ್ಲಾ ಮಂದಿ ಅಬಾಲವೃದ್ದರಾದಿಯಾಗಿ ಸೇರುವುದು ಇನ್ನೊಂದು ವಿಷೇಷ. ಆಗೆಲ್ಲಾ ನಮ್ಮದೇ ಒಂದು ಗುಂಪಿತ್ತು. ಬೇರೆಯವರಿಗೆ, ಹೊಸಬರಿಗೆ ಕಿಂಚಿತ್ತೂ ಭಜನೆ ಹಾಡಲು ಅವಕಾಶವೇ ಬಿಡದ ಗುಂಪು ಅದು. ರಾಗ ಬೋಗ ವಿಲ್ಲದ ಭಜನೆ, ಒಬ್ಬರ ಬಜನೆ ಮುಗಿಯೋದ್ರೊಳಗೇ ಇನ್ನೊಬ್ಬರು ಆರಂಭ ಮಾಡಿ ಬಿಡುತ್ತಿದ್ದರು. ಇದೆಲ್ಲದರ ಮಧ್ಯೆ ಮುಖ್ಯ ಅಕರ್ಷಣೆ ಎಂದರೆ ಮಂಗಳಾರತಿ ಮುಗಿದ ನಂತರದ ಪಾನಕ ಮತ್ತು ಪ್ರಸಾದ. ಗೌಡ ಸಾರಸ್ವತ ಕುಟುಂಬದವರು ಆದರಾತಿಥ್ಯದಲ್ಲಿ ಹೇಳಿಮಾಡಿಸಿದಂತವರು. ಸಾಮಾಜಿಕ ಕಾರ್ಯ ಕಟ್ಟಳೆಗಳಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಹಳ್ಳಿಯ ಪ್ರತೀ ಕಾರ್ಯ ಕುಶಲತೆಯಲ್ಲಿ ಅವರ ಕೊಡುಗೆ ಅಪಾರ. ನನ್ನ ತಂದೆಯವರು ಮಾಸ್ತ್ರ ಆದುದರಿಂದಲೂ ಅವರ ಮೇಲಿನ ಭಕ್ತಿ ಆದರಗಳು ನಮ್ಮ ಮನೆಯವರನ್ನು ಅದರಲ್ಲೂ ಹೆಚ್ಚಾಗಿ ನನ್ನನ್ನು ಅವರ ಗುಂಪಿನಲ್ಲಿ ಅಥವಾ ಇಂತಹ ಕಾರ್ಯಕೃಮಗಳಲ್ಲಿ ತೊಡಗಿಸಿ ಕೊಳ್ಳುವುದರಲ್ಲಿ ಈ ಜನಾಂಗದ ಕೊಡುಗೆ ನನ್ನೆಡೆಗೂ ಜಾಸ್ತಿಯೇ.
ಸೋಣೆಯ ದಿನಗಳಲ್ಲಿ ಸಂಜೆಯ ಸಮಯ ನಮ್ಮ ಮನ ಮಂದಿರಗಳಲ್ಲಿ ಮಂದಿರವಾದರೇ ಸಂಜೆಯ ಆರತಿಯ ಸೊಬಗೂ ವರ್ಣನಾತೀತ. ನನ್ನ ಶ್ರಾವಣದ ನೆನಪು ಸಂಜೆಗೇ ಸೀಮಿತ. ಸಂಜೆಯ ಆಹ್ಲಾದ ಸಂಜೆ ಮಲ್ಲಿಗೆ ಸೋಣೆ ಹೂವು ಮತ್ತು ದೇವಳದ ಕರ್ಪೂರ ಮತ್ತು ಕುಂಕುಮ ಊದು ಬತ್ತಿಯ ಘಮ ಘಮದ ಜತೆಗೇ, ಪೂಜಾ ನಂತರದ ಪ್ರಸಾದದ ಆಹ್ಲಾದ, ಆಹಾ ಅದರ ಸವಿಯುಂಡವರೇ ಧನ್ಯರು. ಆಗೆಲ್ಲಾ ಪೈಪೋಟಿಗೆ ಬಿದ್ದವರಂತೆ ಪೂಜಾ ನಂತರದ ಪ್ರಸಾದ ಪ್ರಾಯೋಜಕರದ್ದು.
ಪೈಪೋಟಿ ಯಾಕೆಂದರೆ ದಿನಂಪ್ರತಿ ಪೂಜೆಯ ಪ್ರಸಾದ ಗಳ ಪ್ರಾಯೋಜಕರ ಪ್ರಸಾದಗಳ ಭರಪೂರ್ ಮೆರವಣಿಗೆ. ಒಮ್ಮೆಗೆ ಬೇಯಿಸಿದ ದೊಡ್ಡ ಕಡಲೆಯ ಉಸಲಿಯ ಜತೆಗೆ ಖಾರದ ( ಕಪ್ಪು ಮೆಣಸಿನ) ಪಾನಕವಾದರೆ ಇನ್ನೊಂದು ದಿನ ಬಾಳೆಹಣ್ಣು ಮತ್ತು ಅವಲಕ್ಕಿಯ ಪಂಚ ಕಜ್ಜಾಯವಾದರೆ ಇನ್ನೊಮ್ಮೆ ಹುರಿದ ಕಡ್ಲೆ ಬೇಳೆಯ ಪುಡಿಯ ಪಂಚ ಕಜ್ಜಾಯ. ಹಲವೊಮ್ಮೆ ಶಿರಾ ಮತ್ತು ಹೆಸರು ಬೇಳೆಯ ಉಸಲಿ, ಇನ್ನೂ ಬಗೆ ಬಗೆಯ ಲಾಡು ಉಂಡಿಗಳ, ಪಂಚ ಕಜ್ಜಾಯಗಳದ್ದೇ ಮೆರವಣಿಗೆ. ಹೀಗೆ ಪಂಥ ಕಟ್ಟಿದ ತರಹದ ಪ್ರಸಾದಗಳ ಮಹಾ ಪೂರ.
ಮಳೆಗಾಲದ ವೈಭವದ ಜತೆ ನಮಗೆ ಸಿಗುವ ಮತ್ತೊಂದು ವಸ್ತುವೂ ಇದೆ ಅದೇ ಸೋಣೆ ಗಿಡ. ಒಂದು ಜಾತಿಯ ಹೂವಿನ ಗಿಡ. ಹೂವು ಗಿಡ ಎರಡೂ ಮೆತ್ತಗೆ ಬಲು ಮೆತ್ತಗಿನ ನಾಜೂಕಿನವುಗಳು. ಶ್ರಾವಣ ಮಾಸದಲ್ಲಿ ಮಾತ್ರ ಸಿಗೋ ಹೂವಾದುದರಿಂದ ಇದಕ್ಕೆ ಸೋಣೆ ಹೂವು ಅಂತಾನೂ ಹೇಳುತ್ತಿದ್ದರು. ಸುಂದರ ಬಲು ಸುಂದರ್ ಈ ಹೂವು ನಸು ಕೆಂಪು ಅಥವಾ ತೆಳು ಹಸಿರು ಬಣ್ಣದ ದಂಟಿನಈ ಗಿಡ ಕೆಂಪು, ಹಳದಿ ಬಿಳಿ ಗುಲಾಬಿ ಬಣ್ಣಗಳ ಹೂವನ್ನು ಕೊಡುತ್ತದೆ. ಈ ಹೂವುಗಳಿಗೆ ಶ್ರಾವಣ ಮಾಸದ ಸಂಜೆ ಪೂಜೆಗಳಲ್ಲಿ ಮಹತ್ವದ ಸ್ಥಾನವಿದೆ, ಇದರ ಕಾಂಡವನ್ನು ಕೂಡಾ ಒಂದು ರೀತಿಯಲ್ಲಿ ತುಂಡರಿಸಿ ಹಾರವನ್ನಾಗಿ ಮಾಡುತ್ತಾರೆ ದೇವರಿಗೆ ಅರ್ಪಿಸಲು. ಮಾಸದುದ್ದಕ್ಕೂ ಮಂದ ಸುಗಂಧ ಬೀರುತ್ತಾ ಎಲ್ಲಾ ಕಡೆ ಅರಳಿ ನಳ ನಳಿಸುತ್ತಿರೋ ಈ ಹೂವು ಎಲ್ಲರಿಗೂ ಪ್ರಿಯ, ಅಂತೆಯೇ ದೇವರಿಗೂ.
*****