ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರಿವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಹರೆಯದ ವಸಂತ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ. ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು. ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸ್ತಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ. ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ. ಬಣ್ಣ ಬಣ್ಣದ ಓಕುಳಿಯ ಸಿಂಪಡಿಕೆ. ಹರೆಯದ ಕನಸುಗಳು ನೂರೆಂಟು. ಅದು ಮಾತಿನಲ್ಲಿ ಅಥವಾ ಅಕ್ಷರಗಳಲ್ಲಿ ಯಾರಾದರು ವಣಿ೯ಸಲು ಸಾಧ್ಯವೇ. ಇಲ್ಲವೆಂದೆ ಹೇಳಬೇಕು. ಹರೆಯದ ಪಾತ್ರೆಯಲ್ಲಿ ಪ್ರೀತಿಯೆಂಬ ಹುಟ್ಟು, ಹುಟ್ಟುವ ಕಾಲ ವಸಂತ ಋತು, ಚೈತ್ರ ಮಾಸ.
ಮಾಮರ ಚಿಗುರಿ ಕೋಗಿಲೆಯ ಇಂಪಾದ ಗಾನ ಮುಂಜಾನೆಯ ಹಕ್ಕಿಗಳ ಕಲರವದಲ್ಲಿ ಅದ್ದಿ ತೆಗೆಯುತ್ತದೆ ಈ ಮಾಸ, ಋತು. ಅದೆ ಪೃಕೃತಿಯ ಹರೆಯವೆಂದರು ತಪ್ಪಾಗಲಾರದು. ಶೃಂಗಾರಕ್ಕೆ ಇನ್ನೊಂದು ಹೆಸರೆ ಪೃಕೃತಿಯ ಸೌಂದರ್ಯ.
ಯಾರಿರಲಿ ಇಲ್ಲದಿರಲಿ ಕಾಲ ತನ್ನ ಕಾಯಕ ಮುಂದುವರೆಸಿಕೊಂಡು ಹೋಗುವಂತೆ ಈ ಹರೆಯ ಕೂಡ. ಆಯಾ ಕಾಲಕ್ಕೆ ದೇಹವೆಂಬ ದೇಗುಲದಲ್ಲಿ ಮಂದಾರತಿ ಬೆಳಗುವ ಕಾಯಕ ನಡೆಯುತ್ತದೆ ತನ್ನಷ್ಟಕ್ಕೆ. ಮೇಲು ಕೀಳೆಂಬ ತಾರತಮ್ಯ ಇಲ್ಲ ಇಲ್ಲಿ. ಆ ಜಾತಿ ಈ ಜಾತಿ ಎಂಬ ಭೇದ ಭಾವವೂ ಇಲ್ಲ. ಮನಸ್ಸು ತಿಳಿಯಾದ ಕೊಳ. ನಭೋ ಮಂಡಲದಲ್ಲಿ ಉದಯಿಸುವ ಬಾಲಸೂರ್ಯನ ಹೊಂಗಿರಣದ ಬೆಳಕು ಹಾದು ಪಳ ಪಳ ಹೊಳೆಯುವ ಮುತ್ತಂತಿರುವ ಹರೆಯ ಆ ಸೃಷ್ಟಿಕತ೯ ಬ್ರಹ್ಮ ಅದೆಷ್ಟು ಯೋಚಿಸಿ ತಲೆ ಕೆಡಿಸಿಕೊಂಡು ಒದ್ದಾಡಿ ಅದರ ಉದ್ಭವಕ್ಕೆ ಕಾರಣನಾಗಿರಲಿಕ್ಕಿಲ್ಲ. ಕೋಟಿ ಮನುಜರ ವಯಸ್ಸಿನ ಅಂತರ ಒಂದು ಕ್ಷಣ, ಒಂದು ಗಳಿಗೆ, ಒಂದು ಆಯಾಮ ಹೀಗೆ ಒಬ್ಬೊಬ್ಬರಿಗೂ ಒಂದೊಂದು ವೇಳೆಗೆ ತಕ್ಕಂತೆ ಚಾಚೂ ತಪ್ಪದೆ ಬದಲಾವಣೆ ಮಾಡಬೇಕಲ್ಲ; ಇದೇನು ಸುಲಭದ ಮಾತೆ? ಅಬ್ಬಾ ಈ ಹರಯವೆ!
ಶುರುವಾಯಿತು ಇದರ ಬಗ್ಗೆ ಕಾಳಜಿ, ಆಸ್ಥೆ. ಮೊದಲು ತನ್ನ ಬಗ್ಗೆ ತನಗೆ ಹೆಮ್ಮೆ. ಬದಲಾಗುತ್ತಿರುವ ದೇಹ ಸೌಂದರ್ಯ. ಕಲ್ಪನೆ ಕೂಡಾ ಮಾಡಲಸಾಧ್ಯವಾದ ಅರಿವು ಮನ ಹೊಕ್ಕಂತೆಲ್ಲ ಚಿತ್ರ ವಿಚಿತ್ರ, ಭಯ, ಏನೊ ಆತಂಕ, ಮನಸ್ಸೆಲ್ಲ ಗೊಂದಲ. ಯಾರಲ್ಲಿಯೂ ಹೇಳಿಕೊಳ್ಳಲಾಗದ ನಾಚಿಕೆ, ಸಂಕೋಚ. ತನ್ನನ್ನೆ ತಾನು ತದೇಕ ಚಿತ್ತದಿಂದ ಕನ್ನಡಿಯ ಮುಂದೆ ನಿಂತು ಅದೆಷ್ಟು ನೋಡಿಕೊಂಡರೂ ಸಾಲದು. ಶೃಂಗಾರಕ್ಕೆ ಹೊತ್ತಿನ ಅರಿವಿಲ್ಲ. ಎಲ್ಲ ಕಣ್ಣುಗಳೂ ತನ್ನ ಕಡೆ ನೋಡಬೇಕು, ಮೆಚ್ಚುಗೆ ಹೇಳಬೇಕು, ಅದನ್ನು ಕೇಳಿ ಒಳಗೊಳಗೆ ಖುಷಿ ಪಡುವ ಸಂಭ್ರಮ.
ಹರೆಯ ಹೆಣ್ಣಿಗೊಂದು ರೀತಿ ಅರಿವಾದರೆ ಗಂಡಿಗೆ ಇನ್ನೊಂದು ರೀತಿ ಅರಿವು. ಆದರೆ ಸ್ವಭಾವದಲ್ಲಿ ಅರಿವಿನ ಹಂತ ತಲುಪಿದಾಗ ಇಬ್ಬರ ನಡೆ ನೋಡುಗರು ಗಮನಿಸುವಷ್ಟು ಎದ್ದು ಕಾಣುತ್ತದೆ. ನಡೆ ನುಡಿ ಹಾವ ಭಾವ ಮಾತು ಮೌನ ನಗು ಹಾಸ್ಯ ಹುಸಿ ಕೋಪ ಒಂದಾ ಎರಡಾ ಎಲ್ಲದರ ಒಪ್ಪಾದ ಸಮ್ಮಿಲನದ ಪ್ರೌಢಾವಸ್ಥೆಯಲ್ಲಿ ಮಿನುಗುವ ತೇರು ಈ ಹರೆಯವೆಂಬ ಚೈತ್ರ ಮಾಸ. ಮನಸ್ಸು ದೇಹ ಪುಳಕಗೊಳ್ಳುವ ಋತುಗಾನ.
ವೈಶಾಖ, ಜ್ಯೇಷ್ಠ ಮಾಸಗಳ ಸಮ್ಮೇಳನದ ಮುಂದುವರಿದ ದಿನಗಳಲ್ಲಿ ಬರುವ ತುಂತುರು ಮಳೆಯ ಬಿಟ್ಟು ಬಿಟ್ಟು ಸುರಿವ ಸಿಂಚನ ರೈತರಿಗಂತೂ ಖುಷಿಯೋ ಖುಷಿ. ಕೆಲಸದಲ್ಲಿ ತಲ್ಲೀನತೆ ಮೇಳೈಸುತ್ತದೆ. ಅವರ ಮಳೆಯ ಸಂಬ್ರಮ. ಪೃಕೃತಿ ಹೊಸ ಹಚ್ಚ ಹಸುರಿನ ಸೀರೆಯಲ್ಲಿ ಕಂಗೊಳಿಸುತ್ತಾಳೆ. ನವಿಲುಗಳು ಮಳೆಯ ಆಗಮನಕ್ಕೆ ಗರಿ ಬಿಚ್ಚಿ ನತಿ೯ಸುತ್ತವೆ. ಹಕ್ಕಿಗಳು ಗೂಡು ಕಟ್ಟಿ ಸಂತಾನೋತ್ಪತ್ತಿಯಲ್ಲಿ ತೊಡಗಲು ಅಣಿಯಾಗುತ್ತವೆ. ಕೋಗಿಲೆಯ ಗಾನ ಮರಗಳ ಒಡಲಿಂದ ಇಂಪಾಗಿ ಕೇಳಿಬರುತ್ತದೆ.
ಇದರ ಮುಂದೆ ಮುಖ ಸಪ್ಪೆ ಮಾಡಿ ಮೂಲೆ ತೋರಿಸುವ ಮಾಸ ಆಷಾಢ. ತಂಗಾಳಿ ಮರೆಯಾಗಿ ಬಿರುಗಾಳಿ ಬೀಸಿ ಹೂವು ಕಾಯಾಗಿ ಮಿಡಿ ಜೋತಾಡುವ ಮರ ತೂಗಾಡಿಸಿ ಅಲ್ಲಲ್ಲಿ ಉದುರಿಸಿ “ಅಯ್ಯೋ ಎಷ್ಟು ಚೋಲೊ ಕಾಯಿ ನೇತಾಡ್ತಿತ್ತೆ, ಗಾಳಿಗೆ ಮಿಡಿ ಎಲ್ಲ ಉದುರೋತೆ” ಪಶ್ಚಾತಾಪ ಪಟ್ಟು ಮುಖ ಬಡವಾಗುವ ಸಣ್ಣ ಸಂಕಟದ ಮಾಸವೆಂದು ಹೇಳಬಹುದು. ಇನ್ನೊಂದು ಕಾರಣ ಗಂಡ ಹೆಂಡಿರ ದೂರ ಇಡುವ ಮಾಸ ಆಷಾಢ. ಹಮಂಗಲ ಕಾಯ೯ ಮಾಡಲು ನಿಷೇಧ. ಹೆಣ್ಣು ಗಂಡಿನ ಕನಸನ್ನು ಅಲ್ಪ ಕಾಲ ತಡೆಹಿಡಿದು ಮುಂಬರುವ ಜೀವನದ ಕುರಿತು ಯೋಚಿಸಿ ಅಡಿ ಇಡಲು, ನವ ದಂಪತಿಗಳನ್ನು ದೂರ ಮಾಡಿ ಅಗಲಿಕೆಯ ವಿರಹದ ನೋವು ಅನುಭವಿಸುವಂತೆ ಮಾಡಿ, ಪ್ರೀತಿಯ ಒರೆಗೆ ಹಚ್ಚಿ, ಕೆಲವು ದಿನಗಳು ಹಳೆಯ ಗೆಳೆಯ ಗೆಳತಿಯರೊಡಗೂಡಿ ಕಾಲ ಕಳೆಯಲು ಅವಕಾಶ ಮಾಡಿ ಕೊಡುವ ಕಾಲ. ಆಶಾಡ ಒಂದು ರೀತಿ ಬಿಡುಗಡೆ ಮಾಸವೆಂದರೂ ತಪ್ಪಾಗಲಾರದು. ಈ ಮಾಸದಲ್ಲಿ ಬರುವ ಪ್ರಥಮ ಏಕಾದಶಿ ಒಂದು ದಿನ ಉಪವಾಸವಿದ್ದು ಮನಸ್ಸು ದೇಹ ಶುದ್ಧ ಮಾಡಿಕೊ, ನಿನ್ನ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡು ಅನ್ನುವಂತಿದ್ದರೆ ಆಷಾಢ ಮಾಸದ ಹುಣ್ಣಿಮೆ ಗುರು ಪೂಣಿ೯ಮೆ ಆಧ್ಯಾತ್ಮದ ಬಾಗಿಲು ತಟ್ಟಿ ವಿದ್ಯೆ ಬುದ್ಧಿ ಕಲಿಸಿ ಇದುವರೆಗೆ ನಿನ್ನ ಈ ಮಟ್ಟಕ್ಕೆ ಬೆಳೆಸಿದ ಗುರುವಿನ ನೆನಪಿಸಿಕೊಂಡು ಕೃತಜ್ಞನಾಗು ಎಂದು ನೆನಪಿಸುವ ಮಾಸ. ದೂರದೂರಿನಲ್ಲಿ ನೆಲೆಸಿರುವ ಮಕ್ಕಳಿಗಂತೂ ಅದರಲ್ಲೂ ವಿದೇಶದಲ್ಲಿ ನೆಲೆಸಿರುವ ಭಾರತದ ಮಕ್ಕಳಿಗೆ ಊರು, ಹೆತ್ತವರು, ಶಾಲೆ ಕಾಲೇಜು, ಗುರುವಿನ ನೆನಪಿನ ಬುತ್ತಿ ಬಿಚ್ಚಿಕೊಂಡು ಕಾಲ ಕಳೆಯುವ ದಿನ.
ಹೀಗೆ ಯೋಚಿಸುತ್ತ ಹೋದಂತೆ ಕ್ಷಣಭಂಗುರವಾದ ಈ ಬದುಕೆಂಬ ತಟದಲ್ಲಿ ಸೃಷ್ಟಿಕರ್ತ ಒಂದೊಂದು ಮಾಸಕ್ಕೂ ಅದರದೆ ಆದ ಮಹತ್ವ ಇಟ್ಟು ಬದುಕು ನಡೆಸಲು ಅವಕಾಶ ನಿಮಿ೯ಸಿದ್ದಾನೆ. ಇದನ್ನು ಅನುಸರಿಸಿ ಜೀವನ ನಡೆಸುವುದು ಮಾನವರಾದ ನಮ್ಮ ಕತ೯ವ್ಯ. ಅರಿತು ನಡೆದರೆ ಬಾಳು ಬಂಗಾರ, ಅದಿಲ್ಲವಾದರೆ ಅವ್ಯವಸ್ಥೆಯ ಆಗರ.
ಪ್ರತಿ ವಷ೯ವೂ ಆವರ್ತವಾಗಿ ಬರುವ ಹನ್ನೆರಡು ಮಾಸಗಳ ವೈಶಿಷ್ಟ್ಯ ಮಾನವ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಾಲ್ಯ, ಯೌವನ,ವೃದ್ಧಾಪ್ಯಗಳಲ್ಲಿ ನಮ್ಮ ದೇಹ ಮನಸ್ಸುಗಳಲ್ಲಾಗುವ ಬದಲಾವಣೆ ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಆಚಾರ, ವಿಚಾರ, ನೀತಿ, ನಿಯಮ ಅರಿತು ಸರಿಯಾದ ರೀತಿಯಲ್ಲಿ ನಡೆಯಲು ಸಹಕಾರಿಯಾಗಿದೆ. ಸೃಷ್ಟಿಯ ನಿಯಮದಂತೆ ನಮ್ಮ ಜೀವನವನ್ನು ನಿಯಮಿತಗೊಳಿಸಿಕೊಳ್ಳಬೇಕು ಬೇಕಾದುದೇ. ಇದೆ ಎಂದು ಮನಸ್ಸಿಗೆ ಬಂದಂತೆ ಕುಣಿಯದೆ ಮನಸ್ಸು ದೇಹ ಹದ್ದುಬಸ್ತಿನಲ್ಲಿಟ್ಟು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿತ್ವ, ಆಚರಣೆ ರೂಢಿಸಿಕೊಂಡು ಜೀವನ ಹಸನಾಗಿಸಿಕೊಳ್ಳುವುದು ನಮ್ಮ ಕೈಯಲ್ಲೆ ಇದೆ. ಆ ದಾರಿಯಲ್ಲಿ ಮುನ್ನಡೆಯೋಣ. ಬಾಳು ಸಾರ್ಥಕವಾಗುವುದು.
-ಗೀತಾ ಜಿ ಹೆಗಡೆ ಕಲ್ಮನೆ.