ಮಾವು-ಹಲಸಿನ ಮರ ಉಳಿಸಿದ ಕತೆ: ಅಖಿಲೇಶ್ ಚಿಪ್ಪಳಿ

ಲೋಕಸಭೆಗೆ ಚುನಾವಣೆ ಘೋಷಣೆಯಾಗುವ ಸರಿಯಾಗಿ ೧೨ ದಿನ ಮೊದಲು ಹಾಗೂ ಕೇಂದ್ರ ತೈಲ ಮತ್ತು ಪರಿಸರ ಮಂತ್ರಿ ಅಭಿವೃದ್ಧಿಯ ನೆಪದಲ್ಲಿ ಕಾರುಗಳ ಮೇಲೆ ವಿಧಿಸುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ೫ ದಿನಗಳ ನಂತರ ಅಂದರೆ ದಿನಾಂಕ:೨೨-೦೩-೨೦೧೪ರಂದು ಬೆಳಗ್ಗೆ ೯.೩೦ಕ್ಕೆ ಅಪ್ಪಟ ಪೃಥ್ವಿ ಮಿತ್ರರೊಬ್ಬರು ನಿಸ್ತಂತು ದೂರವಾಣಿಗೆ ಕರೆ ಮಾಡಿ ಸಾಗರದಿಂದ ಸಿಗಂದೂರಿಗೆ ಹೋಗುವ ಮಾರ್ಗದಲ್ಲಿರುವ ೨ ಮರಗಳನ್ನು ಅರಣ್ಯ ಇಲಾಖೆಯ ಪರವಾನಿಗೆ ಪಡೆದು ಕಡಿಯುತ್ತಿದ್ದಾರೆ ಬೇಗ ಬನ್ನಿ ಎಂದು ಹೇಳಿದರು. ಬೆಳಗಿನ ಹೊತ್ತು ನಮ್ಮ ಹೊಟ್ಟೆಪಾಡಿನ ಕೆಲಸದಲ್ಲಿ ವಿಪರೀತ ಒತ್ತಡವಿರುತ್ತದೆ. ಆದರೂ ಅದು ಹೇಗೋ ಪರಿಹರಿಸಿ, ತರಾತುರಿಯಿಂದ ಮರಕಡಿತಲೆ ಮಾಡುವ ಸ್ಥಳಕ್ಕೆ ಹೋದೆ. ಹೋಗುವ ಮುಂಚಿತವಾಗಿ ಅರಣ್ಯ ಮೇಲಾಧಿಕಾರಿಗಳಿಗೆ ವಿಷಯದ ಬಗ್ಗೆ ಕೇಳಿದೆ. ಇಲ್ಲಾ ಆ ಮರಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಗಿದೆ. ಹರಾಜು ಪ್ರಕ್ರಿಯೆಗೂ ೧ ತಿಂಗಳು ಮುಂಚಿತವಾಗಿ ಸಾರ್ವಜನಿಕ ತಕರಾರು ಇದ್ದಲ್ಲಿ ತಿಳಿಸಿ ಎಂದು ಪ್ರಕಟಣೆಯನ್ನು ನೀಡಿದ್ದೇವೆ. ಯಾರ ತಕರಾರು ಇಲ್ಲದ ಕಾರಣ ಮರಗಳನ್ನು ಹರಾಜು ಹಾಕಿ, ಕಡಿತಲೆಗೆ ಅನುಮತಿ ನೀಡಿದ್ದೇವೆ, ಈಗ ಏನೂ ಮಾಡಲು ಬರುವುದಿಲ್ಲ. ಮರದ ಬೆಲೆ ೯೪ ಸಾವಿರ ಹಣವನ್ನು ಇಲಾಖೆಗೆ ಕಂತ್ರಾಟುದಾರ ಜಮಾ ಮಾಡಿದ್ದಾನೆ ಎಂಬ ಅಘಾತಕಾರಿ ವಿಷಯವನ್ನು ಅತ್ಯಂತ ಕೂಲಾಗಿ ತಿಳಿಸಿದರು. ಇವರ ಮೇಲಾಧಿಕಾರಿ ಕೂಡ ಇದೇ ಮಾತನ್ನು ಪುನರುಚ್ಚರಿಸಿದರು. ಸರಿ, ಸ್ಥಳೀಯ ಜನ ಮರಕಡಿತಲೆ ವಿರುದ್ಧವಾಗಿ ಪ್ರತಿಭಟನೆ ನಡೆಸಿದ್ದಾರೆ, ದಯವಿಟ್ಟು ನಿಮ್ಮ ಅಧಿಕಾರಿಗಳನ್ನು ತಕ್ಷಣ ಅಲ್ಲಿಗೆ ಕಳುಹಿಸಿ ಎಂದು ವಿನಂತಿ ಮಾಡಿ, ಮರಕಡಿತಲೆ ಮಾಡುವ ಜಾಗಕ್ಕೆ ಹೋದೆ.

ನನ್ನ ದೂರವಾಣಿಗೆ ಫೋನ್ ಮಾಡಿದ ವ್ಯಕ್ತಿ ಸ್ಥಳದಲ್ಲಿರಲಿಲ್ಲ. ಮರಕಡಿತಲೆ ಕಂತ್ರಾಟುದಾರ ತನ್ನ ಹದಿನೈದಿಪ್ಪತ್ತು ಜನಗಳನ್ನು ಬಿಟ್ಟು, ಹಲಸಿನ ಮರದ ಬುಡದ ತೊಗಟೆಯನ್ನು ನೀಟಾಗಿ ಸುಲಿದಿಟ್ಟಿದ್ದ, ಪಕ್ಕದಲ್ಲಿದ್ದ ಸುಮಾರು ೩೦೦ ವರ್ಷದ ಕಾಯಿಕಚ್ಚಿದ ಅಪ್ಪೆ ಮಿಡಿಯ ಒಂದು ರೆಂಬೆಯನ್ನು ಯಾಂತ್ರಿಕೃತ ಗರಗಸದಿಂದ ತುಂಡರಿಸಿಯಾಗಿತ್ತು. ಅಷ್ಟರಲ್ಲಿ ಪೃಥ್ವಿ ಮಿತ್ರ ಒಬ್ಬ ಜೊತೆಗಾರನ ಜೊತೆ ಬಂದಿಳಿದರು. ಮರ ಕಡಿಯುವ ಪ್ರಕ್ರಿಯೆಯನ್ನು ನಿಲ್ಲಿಸಿ ಎಂದು ಮನವಿ ಮಾಡಿದೆವು. ಇಲ್ಲಾ, ಮರ ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದಲೇ ಪರವಾನಿಗೆ ಪಡೆದಿದ್ದೇವೆ, ಈಗ ನಿಲ್ಲಿಸಲು ಸಾಧ್ಯವಿಲ್ಲ ಎಂಬ ಮಾತು ಕೇಳಿಬಂತು. ತಂತ್ರಜ್ಞಾನ ಮುಂದುವರೆದ ಈ ದಿನಗಳಲ್ಲಿ ಮರ ಕಡಿಯುವ ಕೆಲಸ ಸುಲಭವಾಗಿದೆ. ಯಾಂತ್ರಿಕೃತ ಗರಗಸವನ್ನು ಹಿಡಿದು, ಮರದ ಕೊಂಬೆಯ ಬುಡಕ್ಕೆ ಹಿಡಿದರೆ ಸಾಕು. ೫ ನಿಮಿಷದಲ್ಲಿ ಕೊಂಬೆ ನೆಲಕ್ಕೆ ಬೀಳುತ್ತದೆ. ೩೦೦ ವರ್ಷದ ನೂರಡಿ ಎತ್ತರದ ಅಪರೂಪದ ಅಪ್ಪೆ ಮಿಡಿ ಮರವನ್ನು ಸಂಪೂರ್ಣ ಕತ್ತರಿಸಲು ಅರ್ಧ ಗಂಟೆ ಸಾಕು. ನಮ್ಮ ಮನವಿಗೆ ಬೆಲೆ ಬರಲಿಲ್ಲ. ಪ್ರತಿ ಕ್ಷಣವೂ ಆತಂಕದ ಕ್ಷಣವೇ. ಏನೂ ಮಾಡುವುದೆಂದು ಒಂದೇ ನಿಮಿಷದಲ್ಲಿ ಚರ್ಚಿಸಿದೆವು. ರಸ್ತೆ ಬದಿಯ ಸಾಲು ಮರ, ಮೇಲಾಗಿ ಸಿಗಂದೂರಿಗೆ ಹೋಗುವ ವಾಹನಗಳು, ಬೆಳಗ್ಗೆ ಶಾಲೆಗೆ ಹೋಗುವ ವಾಹನಗಳು, ಬಸ್ಸುಗಳು, ಪೇಟೆಗೆ ಕೆಲಸಕ್ಕೆ ಬರುವ ನೂರಾರು ಜನರ ಕಾರು-ಬೈಕುಗಳು. ರಸ್ತೆಗೆ ಅಡ್ಡವಾಗಿ ಮರದ ಕೆಳಗೆ ಮೂರು ಜನ ಮಲಗಿದೆವು. ಮೇಲೆ ಕತ್ತರಿಸುತ್ತಿದ್ದ ಕೊಂಬೆ ಬಿದ್ದರೆ ನಮ್ಮ ಮೈಮೇಲೆ ಬೀಳಬೇಕು ಹಾಗೆ. ಕೊಂಬೆ ಬಿದ್ದರೆ ಸತ್ತು ಹೋಗುತ್ತೀರಿ ಎಂದು ಮರಕಡಿಯುವವರು ಬೆದರಿಸಿದರು. ಈ ವಿಚಾರ ನಮಗೂ ಗೊತ್ತು. ನೀವು ಮರ ಕತ್ತರಿಸುವುದನ್ನು ನಿಲ್ಲಿಸುವವರೆಗೆ ನಾವು ಇಲ್ಲಿಂದ ಏಳುವುದಿಲ್ಲ ಎಂದು ಹಠ ಹಿಡಿದೆವು. ಇಷ್ಟರಲ್ಲೇ ರಸ್ತೆಯ ಮೇಲೆ ವಾಹನಗಳು ನಿಂತು ಅರ್ಧ ಕಿ.ಮಿ.ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಕತ್ತರಿಸುತ್ತಿದ್ದ ಕೊಂಬೆ ನಮ್ಮ ಮೇಲೆ ಬಿದ್ದರೆ ನಾವು ಪಡ್ಚವಾಗಿ ಹೋಗುತ್ತೇವೆ. ಅಲ್ಲದೆ ಕಂತ್ರಾಟುದಾರರ ಪರವಾದ ಜನಗಳು ನಮ್ಮ ಈ ವರ್ತನೆಯ ಬಗ್ಗೆ ಅಸಹನೆ ಹೊಂದಿದರು. ದೊಡ್ಡ ದ್ವನಿಯಲ್ಲಿ ನಮ್ಮನ್ನು ಬಯ್ಯಲು ತೊಡಗಿದರು. ಇಂತಹ ಖೊಟ್ಟಿ ಪರಿಸರವಾದಿಗಳ ಕೈ-ಕಾಲು ಕತ್ತರಿಸಬೇಕು ಎಂಬ ಮಾತು ಕೇಳಿ ಬಂತು. ಯಥೇಚ್ಛ ಅವಾಚ್ಯ ಶಬ್ಧಗಳ ಬಳಕೆಯಾಯಿತು. ಕೈ-ಕಾಲು ಕಟ್ಟಿ ಇವರನ್ನು ಚರಂಡಿಗೆ ಹಾಕಿ ಎಂಬ ಅಮೋಘ ಸಲಹೆಯೂ ಬಂತು. ಅದೃಷ್ಟವೆಂದರೆ ಅವ್ಯಾವುದು ಕಾರ್ಯಚರಣೆಗೆ ಬರಲಿಲ್ಲ. ಇಷ್ಟರಲ್ಲಿ ನಮ್ಮ ಪರವಾಗಿ ಜನ ಸೇರ ತೊಡಗಿದರು. ಬರೀ ಹತ್ತೇ ನಿಮಿಷದಲ್ಲಿ ಮರಕಡಿತಲೆ ವಿರೋಧಿಸುವವರ ದೊಡ್ಡ ಗುಂಪು ಸೃಷ್ಟಿಯಾಯಿತು. ಕಂತ್ರಾಟುದಾರನ ಜನರ ಪುಂಗಿ ಬಂದ್ ಆಯಿತು. ಮಾವಿನ ಮರದ ಮೇಲೆ ಗರಗಸದ ಶಬ್ಧ ನಿಂತಿತು. ಹಗ್ಗದ ಮೇಲಿನಿಂದ ಕತ್ತರಿಸುವ ಆಳು ಕೆಳಗೆ ಬಂದ ಮೇಲೆ ನಾವು ಮೇಲೆದ್ದು ವಾಹನಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟೆವು. 

ಅಭಿವೃದ್ಧಿಯೆಂಬ ಬುಲ್ಡೋಜರ್ ಎಲ್ಲವನ್ನು ಹೊಸಕಿ ಹಾಕುತ್ತಾ ಸಾಗುತ್ತದೆ. ಸರ್ಕಾರಗಳ ಅಭಿವೃದ್ಧಿ ಯಾವಾಗಲೂ ಜನಪರ-ಜೀವಪರವಾಗಿರುವುದಿಲ್ಲ. ವಾಹನಗಳಿಗಳ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದ್ದರಿಂದ ಆಟೋಮೊಬೈಲ್ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಇದರಿಂದಾಗಿ ವಾಹನಗಳ ದಟ್ಟಣೆ ಹೆಚ್ಚುತ್ತದೆ. ಹೆಚ್ಚಿನ ವಾಯುಮಾಲಿನ್ಯಕ್ಕೆ ಅನುವುಮಾಡಿಕೊಟ್ಟ ಹಾಗೆ ಆಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹಿನ್ನೆಡೆಯಾಗುತ್ತದೆ. ಮತ್ತೊಂದು ವಿಚಿತ್ರವೆಂದರೆ, ಸರ್ಕಾರ ತನಗೆ ಲಾಭ ತರುವ ಕ್ಷೇತ್ರಗಳಿಗೆ ಮಾತ್ರ ಉತ್ತೇಜನ ನೀಡುತ್ತದೆ. ಉದಾಹರಣೆಗೆ ಒಂದು ಅಂಗಡಿಯ ಮಾಲಿಕ ಅಥವಾ ಎಲ್ಲಾ ಅಂಗಡಿಗಳ ಮಾಲಿಕರೂ ಸೇರಿ ಬರೀ ಲಾಭ ತರುವ ಮಧ್ಯ, ಪ್ಲಾಸ್ಟಿಕ್ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಐಷಾರಾಮಿ ವಸ್ತುಗಳನ್ನು ಮಾತ್ರ ವ್ಯಾಪಾರ ಮಾಡುತ್ತಾರೆ ಎಂದರೆ, ಲಾಭ ತರದ ಅಗತ್ಯ ವಸ್ತುಗಳನ್ನು ಯಾರು ಮಾರಬೇಕು. ದೈನಂದಿನ ಜೀವನಕ್ಕೆ ಬೇಕಾದ ಅವಶ್ಯ ವಸ್ತುಗಳನ್ನು ಮಾರುವವರು ಯಾರು? ಅಕ್ಕಿ-ಗೋಧಿ ಮಾರುವುದರಿಂದ ಹೆಚ್ಚಿನ ಲಾಭವಿಲ್ಲ ಎಂದು ಅಕ್ಕಿ ಮಾರುವುದನ್ನೇ ನಿಲ್ಲಿಸಿದರೆ, ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದು?. ಸರ್ಕಾರವೆಂದರೆ, ಬರೀ ಲಾಭಕ್ಕಾಗಿ ಇರುವ ಕಾರ್ಪೊರೇಟ್ ಸಂಸ್ಥೆಯಲ್ಲ. ಇಡೀ ಸಮಾಜದಲ್ಲಿ ಸಮತೋಲನದ ಸ್ಥಿತಿಯನ್ನು ಏರ್ಪಡಿಸಲು ಜನರಿಂದ ರಚಿತವಾದ ಒಂದು ವ್ಯವಸ್ಥೆ. 

ಇಷ್ಟಕ್ಕೂ ಸಾಲುಮರಗಳನ್ನು ಕಡಿಯಲು ಅರಣ್ಯ ಇಲಾಖೆ ಪರವಾನಿಗೆ ನೀಡಿದ್ದು ಏಕೆ ಎಂಬ ಪ್ರಶ್ನೆ ಏಳುವುದು ಸಹಜ. ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಬೆಂಗಳೂರಿನಂತಹ ಮಹಾನಗರಗಳ ಪ್ರವಾಸಿಗರು ಹೆಚ್ಚೆಚ್ಚು ಆಗಮಿಸುತ್ತಾರೆ. ಅವರ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೇಕಾಗುತ್ತದೆಯಾದ್ದರಿಂದ, ಈ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಸ್ಥಾಪನೆ ಮಾಡಲಾಗಿದೆ. ಭಾರತ್ ಪೆಟ್ರೋಲಿಯಂ ಕಂಪನಿಯ ಚಿಲ್ಲರೆ ಮಾರಾಟ ಕೇಂದ್ರವೇ ಈ ಪೆಟ್ರೋಲ್ ಬಂಕ್. ಈ ಪೆಟ್ರೋಲ್ ಬಂಕ್‌ಗೆ ಹೋಗಿ-ಬರುವ ದಾರಿಗೆ ಮಾವು-ಹಲಸಿನ ಮರಗಳಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪೆಟ್ರೋಲ್ ಬಂಕ್ ಮಾಲಿಕ ಮರಗಳ ಕಡಿತಲೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಕೆಲವೊಂದು ಬಾರಿ ಪವಾಡಗಳು ನಡೆಯುತ್ತವೆ. ಅರ್ಜಿ ಹಾಕಿದ ತಕ್ಷಣ ಮರಕಡಿತಲೆ ಮಾಡುವ ಪ್ರಕ್ರಿಯೆ ಚಾಲೂ ಆಗುತ್ತದೆ. ಸಾರ್ವಜನಿಕ ತಕರಾರು ಆಲಿಸುವ ಪ್ರಕ್ರಿಯೆ ಗುಟ್ಟಿನಲ್ಲಿ ನಡೆದುಹೋಗುತ್ತದೆ. ಅದ್ಯಾವುದೋ ಸಣ್ಣ ಪತ್ರಿಕೆಯ ಮೂಲೆಯಲ್ಲಿ ಇಂತಹ ದಿನ, ಇಂತಹ ಮರಗಳನ್ನು ಕಡಿಯಲಾಗುತ್ತದೆ, ಗುತ್ತಿಗೆದಾರರು ಅರ್ಜಿಸಲ್ಲಿಸಬಹುದು ಹಾಗೆಯೇ ತಕರಾರು ಸಲ್ಲಿಸಬಹುದು ಎಂಬುದಾಗಿ ಸಾರ್ವಜನಿಕವಾಗಿ ತಿಳಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಸಾರ್ವಜನಿಕ ತಿಳುವಳಿಕೆಯನ್ನು ಅರಣ್ಯ ಇಲಾಖೆಯ ನೊಟೀಸ್ ಬೋರ್ಡಿನಲ್ಲೂ ಅಂಟಿಸಲಾಗುತ್ತದೆ. ತಕರಾರು ಮಾಡುವ ನಮ್ಮಂತವರಿಗೆ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆಯ ಈ ಕ್ರಮದ ಬಗ್ಗೆ ಅರಿವಿರುವುದಿಲ್ಲ. ಮರ ಕಡಿಯುವ ದಿನವಷ್ಟೇ ಇದು ನಮ್ಮ ಗಮನಕ್ಕೆ ಬರುತ್ತದೆ. ವಾಸ್ತವವಾಗಿ ಇಂತಹ ಮರವನ್ನು ಕಡಿಯಲಾಗುತ್ತದೆ ಎಂಬ ನೊಟೀಸನ್ನು ಆಯಾ ಮರದ ಮೇಲೆ ಅಂಟಿಸುವ ಕೆಲಸ ಮಾಡಿದ್ದರೆ ಸಾರ್ವಜನಿಕರು ಕುತೂಹಲದಿಂದ ಮರದ ಮೇಲೆ ಅಂಟಿಸಿದ ನೋಟೀಸನ್ನು ಗಮನಿಸಿ ತಕರಾರು ಸಲ್ಲಿಸುವ ಸಾಧ್ಯತೆಯಿರುತ್ತದೆ. ಬ್ಯಾಂಕಿನಲ್ಲಿ ಸಾಲ ಮಾಡಿ ತೀರಿಸಲಾಗದವರ ಮನೆಯ ಗೋಡೆಯ ಮೇಲೆ ಈ ಕಟ್ಟಡವನ್ನು ಹರಾಜು ಹಾಕಲಾಗುವುದು ಎಂದು ತಿಳುವಳಿಕೆ ಪತ್ರವನ್ನು ಅಂಟಿಸುವ ಕ್ರಮವಿದೆ. ಇದೇ ರೀತಿ ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿದ್ದರೆ, ಸಾರ್ವಜನಿಕರ ಗಮನಕ್ಕೆ ಬರುತ್ತಿತ್ತು. ಆದರೆ ಇಲ್ಲಿ ಎಲ್ಲವೂ ಗುಟ್ಟಾಗಿ ನಡೆದಿದ್ದರಿಂದ ಅವಾಂತರ ಸೃಷ್ಟಿಯಾಗಿತ್ತು.

ಇಷ್ಟರಲ್ಲೇ ಮರಕಡಿತಲೆ ಮಾಡಲು ಬಂದ ಗುತ್ತಿಗೆದಾರ, ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಹೋಗಿಯಾಗಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ಅರಣ್ಯಾಧಿಕಾರಿಗಳು ಬಂದರು. ತೊಗಟೆ ತೆಗೆದ ಹಲಸಿನ ಮರ, ಕೊಂಬೆ ಕಡಿದ ಮಾವಿನ ಮರದ ಕೆಳಗೆ ನಿಂತ ಜನರು ತೀವ್ರವಾಗಿ ಅರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆ ಇರುವುದು ಮರಗಳನ್ನು ಉಳಿಸಿ-ಬೆಳೆಸಲು ಮಾತ್ರ, ಅದು ಹೇಗೆ ಮರ ಕಡಿಯಲು ಅನುಮತಿ ನೀಡಿದಿರಿ? ಕಡಿಯುವ ಪೂರ್ವದಲ್ಲಿ ಈ ಮಾವಿನ ಮರದಲ್ಲಿ ಕಾಯಿ ಕಚ್ಚಿದೆ ಎಂಬುದನ್ನು ಯಾಕೆ ತಪಾಸಣೆ ಮಾಡಲಿಲ್ಲ. ಈ ಅಪರೂಪದ ಜಾತಿಯ ಮಾವಿನ ಮರದ ಸಂತತಿಯನ್ನು ಬೆಳೆಸಲು ಯಾವ ಕ್ರಮ ಕೈಗೊಂಡಿದ್ದೀರಿ? ಇಂತಹ ಇನ್ನೊಂದು ಮರ ಇದೆಯೇ? ಕಡಿಯಲು ಯಾವ ಮಾನದಂಡವನ್ನು ಉಪಯೋಗಿಸಿದ್ದೀರಿ? ಇಂತಹ ನೂರಾರು  ಪ್ರಶ್ನೆಗಳಿಗೆ ಉತ್ತರ ಹೇಳಲು ಅವರಿಗೆ ಕಷ್ಟವಾಯಿತು. ಸರಿ, ಮೇಲಾಧಿಕಾರಿಗಳು ಊರಿನಲ್ಲಿ ಇಲ್ಲ, ಅವರು ಬರುವವರೆಗೆ ಮರವನ್ನು ಕಡಿಯುವುದಿಲ್ಲ ಎಂಬ ಭರವಸೆ ಆ ಅಧಿಕಾರಿಯಿಂದ ಸಿಕ್ಕಿತು. ರಾತ್ರಿ ಹೊತ್ತು ಕಡಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಇಲ್ಲ ನನ್ನ ಜವಾಬ್ದಾರಿ ಇದೆ ಎಂಬ ಗಟ್ಟಿಯಾದ ಭರವಸೆ ನೀಡಿದರು.

ವಾಸ್ತವವಾಗಿ, ಆರೋಗ್ಯವಂತವಾಗಿ ಇರುವ ಮಾವಿನ ಮರವನ್ನಾಗಲಿ ಅಥವಾ ಹಲಸಿನ ಮರವನ್ನಾಗಲೀ ಕಡಿಯುವ ಅಗತ್ಯವೇ ಇರಲಿಲ್ಲ. ಆ ಮರಗಳು ಪೆಟ್ರೋಲ್ ಬಂಕ್‌ಗೆ ಯಾವ ತೊಂದರೆಯನ್ನು ನೀಡುತ್ತಿರಲಿಲ್ಲ. ಬದಲಿಗೆ ಪೆಟ್ರೋಲ್ ಬಂಕ್‌ನಿಂದ ಹೊರಬರುವ ಅಪಾರಪ್ರಮಾಣದ ಇಂಗಾಲಾಮ್ಲವನ್ನು ಹೀರಿಕೊಂಡು, ಆಮ್ಲಜನಕವನ್ನು ನೀಡುವ ಮಿನಿ ಕಾರ್ಖಾನೆಯಂತೆ ಕೆಲಸ ಮಾಡಬಲ್ಲವಾಗಿದ್ದವು. ಉಳಿಸುವ ಕೆಲಸ ಯಾವಾಗಲೂ ಕಷ್ಟ. ಅದೇ ದಿನ ಮಧ್ಯಾಹ್ನ ಪೆಟ್ರೋಲ್ ಬಂಕ್ ಮಾಲಿಕನಿಂದ ಕರೆ ಬಂತು. ಸಾಕ್ಷಾತ್ ಪ್ರಧಾನಮಂತ್ರಿಯೇ ಬಂದರು ಆ ಎರಡು ಮರವನ್ನು ಕಡಿಯುತ್ತೇನೆ. ಅದು ಹೇಗೆ ಕಡಿತಲೆಯನ್ನು ನಿಲ್ಲಿಸಿತ್ತೀಯೋ ನೋಡುತ್ತೇನೆ ಎಂದ. ಎಲ್ಲಾ ಧರ್ಮಗಳಲ್ಲೂ ಪ್ರಕೃತಿಯನ್ನು ದೇವರೆಂದು ನೋಡಲಾಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತಿಯಾಗಿ ಬಳಸಬೇಕು ಎಂಬ ಮಾತನ್ನು ಬೈಬಲ್‌ನಲ್ಲಿ ಒತ್ತಿ ಹೇಳಲಾಗಿದೆ. ಈ ಘಟನೆಯನ್ನು ಸದರಿ ಪೆಟ್ರೋಲ್ ಬಂಕ್ ಮಾಲಿಕ ತನ್ನ ಪ್ರತಿಷ್ಟೆಯ ಪ್ರಶ್ನೆಯಾಗಿ ತೆಗೆದುಕೊಂಡ. ಆ ಎರಡು ಮರಗಳನ್ನು ಕಡಿಯದಿದ್ದಲ್ಲಿ ತನ್ನ ಘನತೆಗೆ ಕುಂದುಂಟಾಗುತ್ತದೆ ಎಂದು ಭಾವಿಸಿದ. ಮರಗಳ ಕಡಿತಲೆಗೆ ನೀಡಿದ ಆದೇಶವನ್ನು ಅರಣ್ಯಾಧಿಕಾರಿಗಳು ವಾಪಾಸು ಪಡೆದು, ಮರಗಳ ರಕ್ಷಣೆಗೆ ನಿಂತು ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದರು. ಪೆಟ್ರೋಲ್ ಬಂಕ್ ವಿರುದ್ಧ ಯಾರೂ ಪ್ರತಿಭಟನೆ ನಡೆಸಿರಲಿಲ್ಲ. ಆದರೂ ಕೆಲವರ ಮೇಲೆ ಮಾಲಿಕನ ಅಸಮಧಾನವಿದೆ. ನಮ್ಮ ಹೋರಾಟ ಯಾವುದೇ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರಲಿಲ್ಲ. ದುರದೃಷ್ಟವೆಂದರೆ ಬಂಕ್ ಮಾಲಿಕ ಎಲ್ಲವನ್ನೂ ವೈಯಕ್ತಿಕವಾಗಿ ಪರಿಗಣಿಸಿ, ಖುದ್ಧು ಕ್ಷೆಬೆಗೊಳಗಾದ.

ಅನ್ಯಾಯವಾದಾಗ ಜನ ಪ್ರತಿಭಟನೆ ನಡೆಸುವುದು ಸಹಜ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ತರಹದ ಶಾಂತಿಯುತ ಪ್ರತಿಭಟನೆಗಳನ್ನು ಎಲ್ಲರೂ ಸ್ವಾಗತಿಸುತ್ತಾರೆ. ಹಾಗೆಯೇ ಜನರ ಪ್ರೀತಿಯೂ ದೊಡ್ಡದು. ಪೆಟ್ರೋಲ್ ಬಂಕ್ ಮಾಲಿಕ ಇಡೀ ಘಟನೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ, ತನ್ನ ವೈಯಕ್ತಿಕತನದಿಂದ ಹೊರ ನಿಂತು ಗಮನಿಸಿದರೆ, ಜನರ ಸಾತ್ವಿಕ ಆಕ್ರೋಷ ಅರ್ಥವಾಗುತ್ತದೆ. ಜೊತೆಗೆ ಮರ ಕಡಿಯುವ ತನ್ನ ನಿರ್ಧಾರ ತಪ್ಪು ಎಂದು ಮನವರಿಕೆಯಾಗುತ್ತದೆ. ಇವತ್ತು ತನ್ನ ತಪ್ಪನ್ನು ಪ್ರತಿಭಟಿಸಿದ ಜನರೇ ಮುಂದೆ ತನ್ನ ಜೊತೆ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ ಎಂಬ ಸತ್ಯ ಅರಿವಾಗುತ್ತದೆ. ಹಾಗೆಯೇ ಆಗಲಿ ಎಂಬ ಆಶಯದೊಂದಿಗೆ. . .

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
M Ganapathi, Kangod
10 years ago

ನಿನ್ನ ಸಂಘಟನಾತ್ಮಕ ಹೋರಾಟಕ್ಕೆ ತುಂಬಾ ಅಭಿನಂದನೆಗಳು ಅಖಿಲೇಶ್. ನಿನ್ನಂತವರ ಬಗ್ಗ್ಯೆ ನನಗೆ ಕಳಕಳಿ ಬಹಳ ಇದೆ ಎಂಬುದು ಸುಳ್ಳಲ್ಲ. 
     ಆದರೆ ನನ್ನ ಅನುಭವದಲ್ಲಿ ಒಂದು ಮಾತು. ನಾವು ಮಾಡಿದ ಸಾಮಾಜಿಕ ಕೆಲಸ, ಉಪಕಾರ,ನೀನು ಮಾಡುತ್ತಿರುವಂತಹ ಪ್ರಕ್ರತಿಯನ್ನು ಉಳಿಸುವ ಹೋರಾಟ ಪ್ರಾಯೋಗಿಕವಾಗಿ ಸಮಾಜದಿಂದ ನೈಜ ಸಹಕಾರ ಸಿಗುವುದಿಲ್ಲ. ನೀನು ಬೆಂಕಿಗೆ ಕೈ ಹಾಕುವುದಾದರೆ ನಿನಗೆ " ಭೇಶ್" ಎನ್ನುತ್ತೇನೆ ಅಷ್ಟೇ. ಆದರೆ ನಾನು ನಿನ್ನ ಜೊತೆಗೆ ಕೈ ಸೇರಿಸುವುದಿಲ್ಲ. ಎಲ್ಲರಿಗೂ ಒಂದೇ ಸಮನಾದ ವೈಯುಕ್ತಿಕ ಅನುಕೂಲತೆ ಇದಕ್ಕೆ ಇರುತ್ತದೆ ಎಂದಲ್ಲ. ಆದರೆ ಕಳಕಳಿಯನ್ನೂ ತೋರಿಸುವುದಿಲ್ಲ.ಬದಲಿಗೆ ಹಿಂದಿನಿಂದ ಹೀಗೆಳೆಯುತ್ತಾರೆ. 
     " ಊರು ಉಪಕಾರ ಅರಿಯದು ಹೆಣ ಶ್ರಂಗಾರ ಅರಿಯದು " ಎಂಬುದು ನಿನಗೆ ಗೊತ್ತಿರುವ ಗಾದೆ. ಒಟ್ಟಾರೆ ನಮ್ಮ ಸಮಾಧಾನಕ್ಕೆ ನಾವು ಕೆಲವು ಪರಾರ್ಥದ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಏಕೆಂದರೆ ನಾವು ಹುಟ್ಟಿದ್ದು ಮತ್ತು ಸತ್ತಿದ್ದು ಸಮಾಜಕ್ಕೆ ಗೊತ್ತಾಗಬೇಕು.ಅಲ್ಲದೆ ನಮಗೂ ಒಂದು ದಿನ ಪಾರ್ಶ್ವವಾತ ಹೊಡೆದು ದೀರ್ಘಕಾಲ ಮೂಲೆಯಲ್ಲಿ ಕೂರುವ ಸಂದರ್ಭ ಬರಬಹುದು. ನನ್ನ ಬದುಕಿನ ಇಷ್ಟು ಕಾಲ ನಾನೇನಾದರೂ ಒಳ್ಳೆಯ ಕೆಲಸ ಮಾಡಿದ್ದೇನೆಯೇ ಎಂದು ಮೆಲುಕು ಹಾಕಲು ಒಂದಷ್ಟು ವಿಚಾರಗಳು ಆ ಸಮಯಕ್ಕೆ ಬೇಕು.ಅದಕ್ಕಾಗಿಯಾದರೂ ನೀನು ಹಮ್ಮಿಕೊಳ್ಳುವಂತಹ ಪರಾರ್ಥದ ಕೆಲವು ಕೆಲಸಗಳನ್ನು ಮಾಡಿಟ್ಟುಕೊಂಡಿರಬೇಕಾದುದು ಅಗತ್ಯ. 
   ಆದರೆ ನಮ್ಮ ಒಳಮನಸ್ಸು ನಾವು ಮಾಡಿದ ಒಳ್ಳೆಯ ಕೆಲಸವನ್ನೇಕೆ ಜನ ಗುರುತಿಸುವುದಿಲ್ಲ ಎಂದು ಕೊರಗುತ್ತದೆ.ದೊಡ್ಡ ಮನುಷ್ಯರಾಗಿ ಇರುವುದಕ್ಕಿಂತ ಸಣ್ಣ ಮನುಷ್ಯರಾಗಿ ಉಳಿಯುವುದೇ ಪರಮ ಸುಖ ಎನ್ನಿಸಿಬಿಟ್ಟಿದೆ. ಹಾಗಂತ ನೀನು ಮಾಡುತ್ತಿರುವ ಕೆಲಸಗಳು ಈ ಸ್ವಾರ್ಥದಿಂದ ಎಂದು ನನ್ನ ಮಾತಿನ ಅರ್ಥವಲ್ಲ 
       ವಂದನೆಗಳು 
             ಎಂ. ಗಣಪತಿ. ಕಾನುಗೋದು  ಅಂಚೆ: ಬಿ. ಮಂಚಾಲೆ. ಸಾಗರ. ಶಿವಮೊಗ್ಗ,. ಕರ್ನಾಟಕ 

 

CK SAGAR
CK SAGAR
10 years ago

Nice article Bro.

Akhilesh Chipli
Akhilesh Chipli
10 years ago

ಗಣಪತಣ್ಣ, ನೀವು ಕಟುಸತ್ಯವನ್ನು ಹೇಳಿದ್ದೀರಿ.
ಈ ವಾಸ್ತವತೆಯ ಅರಿವಿದೆಯಾದರೂ, ಕಣ್ಣೇದುರೆ
ನಡೆಯುವ ಘಟನೆಗಳನ್ನು ನೋಡಿಯೂ ಹಾಗೆ
ಹೋಗುವುದು ನಮ್ಮ ಜಾಯಾಮಾನಕ್ಕೆ ಒಗ್ಗುವುದಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದಗಳು.

amardeep.ps
amardeep.ps
10 years ago

good effeorts…sir….congrats..

Akhilesh Chipli
Akhilesh Chipli
10 years ago

Thanks for your comment Amardeepji.

 

prashasti
10 years ago

Sooper.. Kushi aatu 🙂

6
0
Would love your thoughts, please comment.x
()
x