ಮಾಲಿನ್ಯದ ವಿರುದ್ಧ ಧ್ವನಿ ಏರಿಸಿ…ಪರಿಸರ ಉಳಿಸಿ!!: ನಾರಾಯಣ ಬಾಬಾನಗರ, ವಿಜಾಪುರ

1972ನೇ ವರ್ಷ. ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ಸಂರಕ್ಷಣೆ, ನೈರ್ಮಲ್ಯ, ಪರಿಸರ ಮಹತ್ವವನ್ನು ಸಾರುವ ದಿನವನ್ನು ಆಚರಿಸುವ ಅಗತ್ಯವಿದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಹೀಗಾಗಿ ಪ್ರತಿ ವರ್ಷ ಜೂನ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಪ್ರಥಮ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದು 1973 ರಲ್ಲಿ.  ಪ್ರಸ್ತುತ ದಿನಗಳಲ್ಲಿಯೂ ಅದರ ಪ್ರಸಕ್ತತೆಯಿದೆ. 

ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯನ್ನು ಒಂದು ಕೇಂದ್ರ ವಿಷಯ ಹಾಗೂ ಒಂದು ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತದೆ. 2014 ರ ಕೇಂದ್ರ ವಿಷಯ ‘’ ಸಣ್ಣ ನಡುಗಡ್ಡೆಗಳು ಮತ್ತು ಹವಾಮಾನ’’.  ಘೋಷ ವಾಕ್ಯ-’’ಏರಬೇಕಿರುವುದು ಮಾಲಿನ್ಯದ ವಿರುದ್ಧ ಧ್ವನಿ, ಸಮುದ್ರದ ಮಟ್ಟವಲ್ಲ’’(raise your voice not the sea level). 

ನಿಸರ್ಗವನ್ನು ಸೃಷ್ಟಿ ಎಂದೂ ಹೇಳಲಾಗುತ್ತದೆ. ಸೃಷ್ಟಿಯ ಜೀವಿಗಳ ಪೈಕಿ ಮಾನವನನ್ನು ಹೊರತುಪಡಿಸಿದರೆ ಉಳಿದ ಜೀವಿಗಳು ಪರಿಸರದಲ್ಲಿ ಲಭ್ಯವಿರುವ ದ್ರವ್ಯವನ್ನು ಇದ್ದಹಾಗೆಯೇ ಬಳಕೆ ಮಾಡುತ್ತವೆ. ಆದಿಮಾನವನೂ ಹಾಗೆ ಮಾಡುತ್ತಿದ್ದನಲ್ಲವೇ?

ಪ್ರಾಣಿಯ ತ್ಯಾಜ್ಯ ಸಸ್ಯಕ್ಕೆ ಪೋಷಕ ಸಾಮಗ್ರಿ. ಇಲ್ಲಿನ ವಿಶೇಷ ಗಮನಿಸಿ. ಪ್ರಾಣಿ ಮತ್ತು ಸಸ್ಯದ ಮಧ್ಯವಿರುವ ಪರಸ್ಪರ ಪೂರಕತೆ, ಸಂಪನ್ಮೂಲಗಳ ಪ್ರಶಸ್ತ ಹಾಗೂ ಚಕ್ರೀಯ ಬಳಕೆಯಾಗಿರುವುದು ಗಮನಕ್ಕೆ ಬಂದಿರಲು ಸಾಕು. ಪ್ರಾಣಿಯ ತ್ಯಾಜ್ಯ ಸಸ್ಯಕ್ಕೆ ಬದುಕಲು ಬೇಕಾದ ಸಾಮಗ್ರಿ, ಇದುವೇ ಪೂರಕತೆ. ಪ್ರಾಣಿಯ ಇರುವಿಕೆ ಸಸ್ಯಕ್ಕೆ ಬೆಂಬಲ. ಇವುಗಳ ನಡುವಿನ ಸಂಬಂಧ ಮೇಲ್ನೋಟಕ್ಕೆ ಕಾಣ ಬರುವಷ್ಟು ಸರಳವಲ್ಲ, ಬಲು ಜಟಿಲ. 

ಇದೊಂದು ಉದಾಹರಣೆ ಗಮನಿಸಿ. ಒಂದು ಗ್ರಾಮ್ ದಷ್ಟು ಗ್ಲುಕೋಸ್ ಇಂಧನವನ್ನು ಉರಿಸಿದ್ದೇವೆ ಎನ್ನೋಣ. ಅದೇ ಗ್ಲುಕೋಸ್ ಅನ್ನು ಸೇವಿಸಿದರೆ ನಮ್ಮ ದೇಹದಲ್ಲಿ ಅದು ಇಂಧನ. ಒಲೆಯಲ್ಲಿ ಎಷ್ಟೇ ಚಾಣಾಕ್ಷತನದಿಂದ ಉರಿಸಿದರೂ ನಮ್ಮ ದೇಹ ಬಳಸಿಕೊಂಡಂತೆ ಒಲೆಯಲ್ಲಿ ಉರಿಸಲಾಗುವುದಿಲ್ಲ. ಹೀಗೆ ಶಕ್ತಿಗಳನ್ನು, ಉತ್ಪನ್ನಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವ ಗುಣ ಜೀವಿಗಳಿಗಿದೆ. 

ಮಾಲಿನ್ಯದ ಶೇಖರಣೆಯಾಗದೇ, ಚಕ್ರೀಯವಾಗಿ ಅವು ಬಳಕೆಯಾಗುತ್ತಲಿರಬೇಕು. ಅದನ್ನು ಸಾಧ್ಯಮಾಡುವ ಅಗಾಧ ಶಕ್ತಿ ನಿಸರ್ಗಕ್ಕೆ  ಇದೆ. ಆದರೆ ಮಾನವನ ಚಟುವಟಿಕೆಗಳು ನಿಸರ್ಗದ ನಿಯಮಗಳನ್ನೇ ಬುಡಮೇಲಾಗಿಸುತ್ತಿವೆ. ಇದರ ಪರಿಣಾಮ ಇಡೀ ಜೀವಿಗೋಲದ ಮೇಲೆ ಸದ್ದಿಲ್ಲದೇ ಉಂಟಾಗುತ್ತಿದೆ.  ಇದಕ್ಕೊಂದು ಕಡಿವಾಣ ಬೇಕಲ್ಲವೇ?

ಎಚ್ಚರಿಕೆಯ ಗಂಟೆಯ ಅಗತ್ಯವೂ ಇದೆ. ಅದಕ್ಕೆಂತಲೇ ಎಚ್ಚರಿಸಲು ’’ ಜೂನ 5’’. ಪರಿಸರದ ಮೇಲಾಗುತ್ತಿರುವ ದೌರ್ಜನ್ಯ, ಅದರಿಂದ ಜೀವಿ ಸಂಕುಲನದ ಮೇಲಾಗುತ್ತಿರುವ ಪ್ರತ್ಯಕ್ಷ , ಅಪ್ರತ್ಯಕ್ಷ ಪರಿಣಾಮಗಳನ್ನು ಅಧ್ಯಯನ ಮಾಡಲು ವೇಳೆ, ಸಮಯ ಬೇಕಾದರೂ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಎದ್ದು ಕಾಣುತ್ತದೆ. ಒಂದು ಕ್ರಮವೆಂದರೆ 

ಜೀವಿ ವೈವಿಧ್ಯವನ್ನು ಉಳಿಸುವ ತಾಣಗಳನ್ನು ಗುರುತಿಸಲಾಗಿದ್ದು. ಭಾರತದಲ್ಲೂ ಅಂತಹ ತಾಣಗಳಿವೆ. ಕರ್ನಾಟಕದಲ್ಲಿನ ಪಶ್ಚಿಮ ಘಟ್ಟಗಳು ಅಂತಹ ತಾಣಗಳಲ್ಲೊಂದು. ಇಷ್ಟಕ್ಕೂ ಸಂರಕ್ಷಣೆಯ ಬುದ್ಧಿ ಬರದಿದ್ದರೆ ಏನಾಗುತ್ತಿತ್ತು?

ಜೀವಿಗಳನ್ನು , ಅವುಗಳ ಸ್ಥಿತಿಯನ್ನು ಸಮೀಕ್ಷೆಮಾಡಿ , ಅಧ್ಯಯನ ಮಾಡಿ ಐ. ಯು. ಸಿ. ಎನ್(ಪ್ರಕೃತಿ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಇರುವ ಅಂತಾರಾಷ್ಟ್ರೀಯ ಸಂಘಟನೆ)ಬಿಡುಗಡೆ ಮಾಡುತ್ತಿರುವ ಕೆಂಪು ದಸ್ತಾವೇಜು ಪಟ್ಟಿ(ರೆಡ್ ಡಾಟಾ ಬುಕ್)ಯನ್ನು ಅವಲೋಕಿಸಿದಾಗ, ಇತ್ತೀಚಿನ ಕೆಲವರ್ಷಗಳಲ್ಲಿ ಪದೇ ಪದೇ ಆತಂಕಕ್ಕೀಡಾಗುತ್ತಿರುವ ಪ್ರಾಣಿಗಳೆಂದರೆ ‘’ಉಭಯವಾಸಿಗಳು’’:ಸಸ್ಯಗಳಲ್ಲಿ ‘’ಜಿಮ್ನೊಸ್ಪರ್ಮಗಳು’’. 

ಬೆಚ್ಚಿ ಬೀಳಿಸುವ ಸಂಗತಿಗಳು…

#ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಭಾರತದ 3119 ಶಹರ ಮತ್ತು ನಗರಗಳಲ್ಲಿ, ಕೇವಲ 209 ರಲ್ಲಿ ಮಾತ್ರ ಭಾಗಶಃ ಚರಂಡಿ ನೀರಿನ ಸಂಸ್ಕರಣ ಘಟಕಗಳಿವೆ. 

#ಸರಿ ಸುಮಾರು ಭಾರತದ 100 ನಗರಗಳ ಚರಂಡಿ ನೀರನ್ನು ನೇರವಾಗಿ ಗಂಗಾ ನದಿಯ ನೀರಿಗೆ ಸೇರಿಸಲಾಗುತ್ತದೆ. 

#ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿ ವರ್ಷ ಸುಮಾರು 500 ಮಿಲಿಯನ್ ಟನ್ ಗಳಷ್ಟು ಬೆಳೆಯ ಉಳಿಕೆಗಳನ್ನು ಪರಿಸರದಲ್ಲಿ ಉರಿಸಲಾಗುತ್ತದೆ. ಅದರಿಂದ ಬಿಡುಗಡೆಯಾಗುವ ಹೊಗೆಯ ಪ್ರಮಾಣವನ್ನು ಊಹಿಸಿಕೊಳ್ಳಿ. 

#ಪ್ರತಿ ವರ್ಷ ಸುಮಾರು 100 ಮಿಲಿಯನ್ ಟನ್ ದಷ್ಟು ಗಟ್ಟಿಕಸ ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತದೆ. 

#2009 ರ ಮಾರ್ಚದಲ್ಲಿ ಪಂಜಾಬ ರಾಜ್ಯದಲ್ಲಿ ಸಂಚಲನವುಂಟು ಮಾಡಿದ ಘಟನೆ ಮಾಧ್ಯಮಗಳಲ್ಲಿ ವರದಿಯಾಯಿತು. ಕೆಲವು ಜಿಲ್ಲೆಗಳಲ್ಲಿ ನ್ಯೂನತೆಯಿಂದ ಕೂಡಿದ ಮಕ್ಕಳ ಜನನವಾಗುತ್ತಿರುವ ಕುರಿತು ವರದಿಯಾಯಿತು. ಅದಕ್ಕೆ ಕಾರಣವನ್ನು ಹುಡುಕಿದಾಗ ಸಿಕ್ಕಿದ್ದು ಬೆಚ್ಚಿಬೀಳಿಸುವ ಸಂಗತಿ. ಆ ಭಾಗದ ಅಂತರ್ಜಲದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವಷ್ಟು ಯುರೇನಿಯಮ್ ಲೋಹದ ಉಳಿಕೆ ಕಂಡು ಬಂದಿತು. 

ಇಷ್ಟೆಲ್ಲಾ ನಡೆದರೂ ಪರಿಸರ ಪ್ರೇಮಿಗಳು ಸುಮ್ಮನೆ ಕುಳಿತಿದ್ದಾರೆಂದು ಭಾವಿಸಬೇಡಿ. ಅವಕಾಶವಾದಾಗಲೆಲ್ಲಾ , ಅವಶ್ಯಕತೆ ಇದ್ದಾಗಲೆಲ್ಲಾ ಆಂದೋಲನಗಳನ್ನು ಮಾಡಿದ್ದಾರೆ. 

ಚಳುವಳಿಗಳ ಕ್ಷಣಗಳು…

ಬೆಳೆದು ನಿಂತ ಮರಗಳನ್ನು ಕಡಿಯಲು ಹೊರಟಾಗ, ಅರಣ್ಯ ನಾಶಕ್ಕೆ ಮುಂದಾದಾಗ ‘’ಚಾಂದನಿ ಪ್ರಸಾದ ಭಟ್ಟ ಹಾಗೂ ಸುಂದರಲಾಲ ಬಹುಗುಣ’’ ನೇತೃತ್ವದಲ್ಲಿ ಮರಗಳನ್ನು ಕಡಿಯದಂತೆ ಅವುಗಳನ್ನು ಅಪ್ಪಿಕೊಂಡು ರಕ್ಷಿಸಿದ ಚಿಪ್ಕೊ ಚಳವಳಿ 1973 ರಲ್ಲಿ ನಡೆಯಿತು.  ಕೇರಳದಲ್ಲಿ ಕುಂತಿಪುಜಾ ನದಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆಗೆ ಸರಕಾರ ಮುಂದಾದಾಗ 4 ಮಿಲಿಯನ್ ವರ್ಷಗಳಷ್ಟು ಪ್ರಾಚೀನವಾದ ಕಾಡು ನಾಶವಾಗುವ ಭೀತಿಯನ್ನು ಎದುರಿಸುತ್ತಿತ್ತು. ಆಗ ಉಂಟಾದ ಆಂದೋಲನವೇ  ಸೈಲೆಂಟ್ ವ್ಯಾಲಿ ಪ್ರೊಜೆಕ್ಟ, ನಡೆದದ್ದು 1978. ಬಿಹಾರದ ಆದಿವಾಸಿಗಳು ಕಾಡು ನಾಶದ ವಿರುದ್ಧ ಎತ್ತಿದ ಚಳುವಳಿಯೇ ‘’ಜಂಗಲ್ ಬಚಾವೋ ಆಂದೋಲನ’’. ಈ ಚಳುವಳಿ ನಿಧಾನವಾಗಿ ಜಾರ್ಖಂಡ, ಓರಿಸ್ಸಾ ರಾಜ್ಯಗಳಿಗೂ ಹರಡಿಕೊಂಡಿತು. ನದಿಗಳಿಗೆ ಕಟ್ಟುವ ಅಣೆಕಟ್ಟುಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು 1985 ರಲ್ಲಿ ಪ್ರಾರಂಭವಾದ ನರ್ಮದಾ ಬಚಾವೋ ಆಂದೋಲನ ಯಶಸ್ಸು ಕಂಡಿತು. 

ಬರೀ ಅಲ್ಲೊಂದು ಇಲ್ಲೊಂದು ಚಳುವಳಿಗಳಿಂದ, ಆಂದೋಲನಗಳಿಂದ ಪರಿಸರದ ಮೇಲಿನ ದಬ್ಬಾಳಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. 

ಆಗಬೇಕಿರುವುದೇನು?

#ಪರಿಸರದಲ್ಲಿನ ಅಥವಾ ಪರಿಸರವನ್ನು ಒಗ್ಗೂಡಿಸಿರುವ ಸೂಕ್ಷ್ಮ ಸಂಬಂಧಗಳನ್ನು ಅವುಗಳ ಪ್ರಾಮುಖ್ಯತೆಯನ್ನು ಜಾಹೀರುಗೊಳಿಸುವುದು. 

#ಜೀವಿ ವೈವಿಧ್ಯ ಕುರಿತು, ಅದರ ಅನಿವಾರ್ಯತೆ ಕುರಿತು ಪ್ರತಿ ನಾಗರಿಕನಲ್ಲಿಯೂ ಜಾಗೃತಿ ಮೂಡಿಸುವುದು. 

#ಆರೋಗ್ಯಕರ ಪರಿಸರ ಕಾಪಾಡುವ ಎಚ್ಚರವನ್ನು ಎಲ್ಲ ವರ್ಗದ ಜನರಲ್ಲೂ ರೂಪಿಸಿ ಸಾರ್ವಜನಿಕ ಅಭಿಪ್ರಾಯವಾಗಿಸುವುದು. 

ನಮ್ಮ ಮಕ್ಕಳಿಗೆ ದುಡ್ಡು, ಆಸ್ತಿ, ಸಂಪತ್ತನ್ನು ಕೂಡಿಡುವ ಧಾವಂತದಲ್ಲಿ ಪರಿಸರವೆಂಬ ಮರದ ಬೊಡ್ಡೆಗೆನೇ ಕೊಡಲಿಯೇಟು ನೀಡುತ್ತಿದ್ದೇವೆ. ಪರಿಸರವೆಂಬ ಮರದ ಮೇಲೆ ಕುಳಿತು, ಮರ ಕೊಟ್ಟ ಹಣ್ಣು ತಿನ್ನುತ್ತಾ ಮರದ ಬುಡವನ್ನು ಕೊಡಲಿಯೇಟಿನಿಂದ ಕಡಿಯುತ್ತಾ ಹೋದರೆ, ಮುಂದೆ ಹಣ್ಣು ತಿನ್ನುವ ಸೌಖ್ಯ ಬಿಡಿ;ನಮ್ಮ ಅಸ್ತಿತ್ವಕ್ಕೇ ಸಂಚಕಾರ. ನಮ್ಮ ಮುಂದಿನ ಪೀಳಿಗೆಗೆ ‘ಪರಿಸರ, ಜೀವಿ ವೈವಿಧ್ಯ’’ ಸಂಪತ್ತನ್ನು ಕೂಡಿಡೋಣ. ಅವರೂ ಸಂತಸ ಪಟ್ಟಾರು…ಹಾಗಾಗಲಿ. 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x