ಮಾಲಿಂಗ. . .: ಸಿದ್ದರಾಮ ತಳವಾರ

ರಾಮೇನಹಳ್ಳಿಯ ಇಡೀ ಊರಿಗೆ ಊರೇ ಪತರಗುಟ್ಟಿ ಹೋಗಿದೆ. ಊರ ರಾಮೇಗೌಡರ ಮನೆಯೆಂಬುದೊಂದು ಸಂತೆಯಾಗಿ ಹೋಗಿತ್ತು. ಇಡೀ ಊರಿಗೆ ಊರೇ ಅವರ ಮನೆ ಮುಂದೆ ನೆರೆದು ನೆರೆದವರೆಲ್ಲ ಕೌತುಕದಿಂದ ಪರಿಶೀಲನೆಗೆ ಬಂದ ಪೋಲೀಸರ ಮುಖಗಳನ್ನ ದಿಟ್ಟಿಸುತ್ತಿದ್ದಾರೆ. ಊರಿನ ಯಾವೊಬ್ಬ ಹೆಂಗಸು ಮುಖ ತೊಳೆದಿಲ್ಲ ಅಂಗಲದ ಕಸ ಗುಡಿಸಿಲ್ಲ ರಂಗೋಲಿ ಹಾಕಿಲ್ಲ ಬಾಯಲ್ಲಿ ಸೆರಗಿಟ್ಟುಕೊಂಡು “ಯವ್ವಾ ಹೆಂಗಾಗ್ಯದೋ ಏನೋ, ಪಾಪ ದೇವ್ರಂಥ ಗೌಡ್ರಿಗೆ ಹಿಂತಾ ಸ್ಥಿತಿ ಯಾಕ ಬಂತುಅಂತೇನಿ, ಮನೀ ಮಗನಂಗಿದ್ದ ಮಾಲಿಂಗ ಅದ್ಹೆಂಗ್ ಸತ್ನೋ ಏನೋ ಪಾಪ ಗೌಡರ ತಲಿ ಮ್ಯಾಲ ಬಂದೈತಿ” ಅಂತ ಎಲ್ಲ ಹೆಂಗಸರ ಬಾಯಲ್ಲೂ ಮಾಲಿಂಗನ ಸಾವಿನ ಸುದ್ದಿಯೇ ಹರಿದಾಡುತ್ತಿತ್ತು. “ಅವನಿಗೇನ ಬ್ಯಾನಿ ಬಂದೀತ್‍ ಅಂತೀನಿ ಹೋಗಿಹೋಗಿ ಗೌಡ್ರ ಹಕ್ಯಾಗ ಸಾಯ್ಬೇಕೇನ್ ಬಾಡ್ಯಾ ಬಂಗಾರದಂಗ ಜ್ವಾಪಾನ ಮಾಡಿದ ಗೌಡರಿಗೆ ಹೆಂತಾ ಕೆಟ್ಟ ಹೆಸರತಂದ ನೋಡ ಆ ಮಾಲಿಂಗಾ “ಅಂತ ಕೆಲವೊಬ್ಬರು ಗುಸು ಗುಸು ಪಿಸು ಪಿಸು ಮಾತಾಡಿಕೊಳ್ಳುತ್ತಿದ್ದರು.

ಊರ ಮಡ್ಡಿ ಮ್ಯಾಲಿನ ಈಶ್ವರಲಿಂಗದ ಪೂಜಾರಿ ಮಾಲಿಂಗ ಸಾವಿನ ಸುದ್ದಿ ಕೇಳಿ ದಂಗಾಗಿ ಬೆಳೆಗ್ಗೆ ಸುಪ್ರಭಾತದ ಹಾಡಿನ ಕ್ಯಾಸೆಟ್ಟು ಹಾಕುವುದನ್ನೇ ಮರೆತಿದ್ದ. ಇಡೀ ಊರಲ್ಲೆಲ್ಲ ಬೆಳ್ಳಂಬೆಳೆಗ್ಗೆ ಮಾಲಿಂಗ ಸತ್ತ ಸುದ್ದಿ ಹಬ್ಬಿದ್ದರೆ ದೂರದ ಕೇರಿಗೆ ಈ ಸುದ್ದಿ ತುಸುತಡವಾಗಿ ಮುಟ್ಟಿತ್ತು. ಈ ಸುದ್ದಿ ಕಿವಿಗೆ ತಾಕಿದ್ದೇ ತಡ ಆಗಷ್ಟೇ ಹೊಸದಾಗಿ ಮದುವೆಯಾದ ಮಾಲಿಂಗನ ಹೆಂಡತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಗೌಡ್ರ ಮನೀ ಕೆಲಸಕ ಹೋಗೂದು ಬ್ಯಾಡಾ ಅಂತಿದ್ದ ನಾನ ಜೋರಾವರಿ ಮಾಡಿ ಕಳಿಸಿ ನನ್‍ಗಂಡನ ಮಣ್ಣಾಗ್ ಹಾಕುವಂಗ ಆತಲ್ಲೋಯಪ್ಪಾ ದೇವ್ರ. . . ಅಂತ ಗೋಳಾಡಿ ಅಳುವ ಮಾಲಿಂಗನ ಹೆಂಡತಿಯನ್ನು ಕೇರಿಯ ಹೆಂಗಸರು ಸಮಾಧಾನಪಡಿಸುವಲ್ಲಿ ಸುಸ್ತಾಗುತ್ತಿದ್ದರು.

ಮದುವೆಯಾಗಿ ಇನ್ನೂ ವರ್ಷತುಂಬದ ಮಾಲಿಂಗನ ಹೆಂಡತಿಗೆ ತನ್ನ ಗಂಡ ಇನ್ನು ಮೇಲೆ ಜೊತೆಗಿರುವುದಿಲ್ಲ ಎಂಬ ಸುದ್ದಿ ನಿಜಕ್ಕೂ ಅವಳಿಗೆ ದಂಗು ಬಡಿಸಿತ್ತು. “ಮಡ್ಡಿಗುಡ್ಯಾಗಿನ ಹಾಡು ಹಾಕಿಲ್ಲಂದ್ರ ಮುಗೀತು ಊರಾಗ ಏನೋ ಆಗೇತಿ ಅಂತನ ಅರ್ಥಾ, ನಂಗ ಮೊದ್ಲ ಅನ್ಸಿತ್‍ ಏನೋ ಆಗೇತಿ ಅಂತ ಆದ್ರ ಪಾಪ ಮಾಲಿಂಗ ಅದ್ಹೆಂಗ್ ಸತ್ನೋ ಏನೋ ಛೇ ! “ ಕೇರಿಯ ಹೆಂಗಸರ ಬಾಯಲ್ಲೆಲ್ಲ ಮಾಲಿಂಗನ ಸಾವಿನ ಸುದ್ದಿ ಹರಿದಾಡುತ್ತಿತ್ತು. ಮುಂಜಾನೆ ಎಳಿ ಬಿಸಿಲು ಕೇರಿಯ ಎಲ್ಲ ಹೆಂಗಸರ ಮುಖದ ಮೇಲೂ ತೆಳ್ಳನೆ ಬೆವರಿಳಿಸಿತ್ತು.

***

ಮಬ್ಬುಗತ್ತಲಿನಲ್ಲಿಯೇ ಕಣ್ಣೊರೆಸಿಕೊಳ್ಳುತ್ತಲೇ ಸಿಟ್ಟಿನಿಂದ ಏಳೆಂಟು ಜನ ಪೋಲಿಸಿನವರು ಊರ ಹೊಕ್ಕು ಗೌಡರ ದನ ಕಟ್ಟುವ ಹಕ್ಕಿಯಲ್ಲಿ ಹೆಣವಾಗಿ ಬಿದ್ದ ಮಾಲಿಂಗನ ಶವಪರೀಕ್ಷೆ ಹಾಗೂ ಸ್ಥಳ ಪರಿಶೀಲನೆನಡೆಸಿದ್ದರು. ರಾಮೇಗೌಡರು ಭಯದಿಂದ ಬೆವರುತ್ತಿದ್ದರಾದರೂ ತೂಗು ಮಂಚದ ಮೇಲೆ ತಣ್ಣನೆಕುಂತು

ನಿಮಿಷಕ್ಕೊಮ್ಮೆ ಗ್ಲಾಸು ನೀರುಕುಡಿಯುತ್ತಿದ್ದರು. ಪೋಲಿಸಿನವರಿಗೆ ಗೌಡರ ಮೇಲೆ ಯಾವ ಸಂಶಯವೂ ಮೂಡಿಬರಲಿಲ್ಲ. ಕಳೆದ 16 ವರ್ಷಗಳಿಂದ ಗೌಡರ ಮನೆಯಲ್ಲಿಯೇ ಜೀತದಾಳಾಗಿ ವಿಶೇಷವಾಗಿ ಅವರ ಮನೆ ಮಗನಂತೆ ಬದುಕಿದ್ದ ಮಾಲಿಂಗನ ಬಗ್ಗೆ ಅದಾಗಲೇ ಪೋಲಿಸಿನವರು ಊರಜನರ ಬಾಯಿಂದ ಕೇಳಿ ತಿಳಿದುಕೊಂಡಾಗಿತ್ತು. ರಾಮೇಗೌಡರು ಹೂಡಿದ ಬಾಣ ಅವರಿಗೆ ತಿರುಗುಬಾಣವಾಗಿ ಚುಚ್ಚಿತ್ತು. ಮಾದೇಗೌಡರು ನಿಸ್ಸಂಕೋಚವಾಗಿ ಪೋಲಿಸಿನವರಿಗೆ ಮಾಲಿಂಗನ ಪೂರ್ವಾಪರಗಳನ್ನು ವಿವರಿಸುತ್ತಿದ್ದದ್ದನ್ನು ಗಮನಿಸಿದ ರಾಮೇಗೌಡರು ಹಿಂದಿನ ರಾತ್ರಿ ನಡೆದ ಎಲ್ಲ ಘಟನೆಯನ್ನು ತಣ್ಣಗೆ ಮೆಲುಕು ಹಾಕಲೆತ್ನಿಸಿದರು. ಮಾಲಿಂಗನನ್ನು ಕೊಂದು ಮಾದೇಗೌಡರ ಜಗುಲಿಗೆ ಬಿಸಾಕಿ ಬಂದಾಗ ಬರೋಬ್ಬರಿ ರಾತ್ರಿ2 ಗಂಟೆಯಾಗಿತ್ತು ಆದರೂ ಮತ್ತದೇ ರಾಮೇಗೌಡರದನದ ಹಕ್ಕಿಯಲ್ಲಿ ಮಾಲಿಂಗನ ಹೆಣ ಹೇಗೆ ಬಂತು ಎಂಬುದು ರಾಮೇಗೌಡರಿಗೆ ತೋಚುತ್ತಿರಲಿಲ್ಲ.

***

ನಿಜಕ್ಕೂ ರಾಮೇಗೌಡರ ಮನೆತನ ತುಂಬ ಗೌರವದ ಕುಟುಂಬವಾಗಿತ್ತು ಊರಿನ ಎಲ್ಲ ಹಿರಿಯರು ಕಿರಿಯರು ತುಂಬ ಪ್ರೀತಿಯಿಂದ ಗೌರವದಿಂದ ಕಾಣುವ ಮನೆತನ. ಊರಿನ ಕೆಲ ಕಿತಾಪತಿಗಳಿಂದ ಒಂದಾಗಿದ್ದ ಊರು ಹೊಲಸು ಮಂಡಲ ಪಂಚಾಯತಿ ರಾಜಕಾರಣದ ನೆಪಕ್ಕೆ ಮುರಿದು ಮೂರು ಹೋಳಾಗಿತ್ತು. ಯಾವತ್ತೂ ಚುನಾವಣೆ ನಡೆಯದ ರಾಮೇನಹಳ್ಳಿಯಲ್ಲಿ ಗುಂಪುಗಾರಿಕೆಯಿಂದಾಗಿ ಆ ವರ್ಷ ಮಂಡಲ ಪಂಚಾಯತಿಗೆ ಚುನಾವಣೆ ನಡೆಸಬೇಕಾಯಿತು. ಊರು ಗುಂಪುಗಳು ಉಮೇದುವಾರಿಕೆಯನ್ನು ಸಲ್ಲಿಸಿದರೂ ಊರಿನ ಜನ ರಾಮೇಗೌಡರ ಜನಪ್ರಿಯತೆಗೆ ಅವರ ದಯಾಪರತೆಗೆ ಮಾರು ಹೋಗಿ ಅವರ ಉಮೇದುವಾರಿಕೆಯ ಎಲ್ಲಾ ಅಭ್ಯರ್ಥಿಗಳನ್ನು ಆರಿಸಿ ತಂದಿದ್ದರು. ಇದರಿಂದ ಮುಖಭಂಗ ಅನುಭವಿಸಿದ ಮಾದೇಗೌಡ ಮತ್ತು ಗುಂಪಿನವರಿಗೆ ರಾಮೇಗೌಡರ ಮೇಲೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲೇಬೇಕು ಎಂಬ ಕಿಚ್ಚು ಕುದಿಯುತ್ತಿತ್ತು. ಮುಖಕ್ಕೆ ಮುಖ ಕೊಟ್ಟು ಮಾತಾಡದ ರೀತಿಯಲ್ಲಿ ಈ ಹೊಲಸು ರಾಜಕಾರಣ ಊರನ್ನು ಮನೆಯೊಂದು ಮೂರು ಬಾಗಿಲು ಎನ್ನುವಂತೆ ಮಾಡಿತ್ತು. ಬರೀದ್ವೇಷ, ಹೊಟ್ಟೆಕಿಚ್ಚು ಮಾತ್ಸರ್ಯಗಳೇ ಊರಲ್ಲಿ ತುಂಬಿ ತುಳುಕಾಡುತ್ತಿತ್ತು.

ಹೆಂಡತಿಯನ್ನು ಬೇರೊಬ್ಬ ಗಂಡಸಿನೊಂದಿಗೆ ಮಲಗಿದ್ದನ್ನು ನೋಡಿದ ಅದಾವ ಗಂಡಸಿಗಾದರೂ ರೋಷ ಉಕ್ಕಿ ಹರಿಯುತ್ತದೆ ಅಂತೆಯೇ ಹೆಂಡತಿಯ ಅಸಹ್ಯ ಕಂಡ ರಾಮೇಗೌಡರು ಸಾಕು ಮಗನಂತೆ ಪ್ರೀತಿಸುತ್ತಿದ್ದ ಮಾಲಿಂಗನನ್ನು ಕಿಂಚಿತ್ತೂ ಯೋಚಿಸದೇ ಮುಗಿಸಿಬಿಟ್ಟಿದ್ದರು. ಇದನ್ನು ಮಾದೇಗೌಡನ ಮೇಲೆ ಹಾಕಿ ಅವನನ್ನೇ ಜೈಲಿಗೆ ಕಳಿಸಿದರಾಯಿತು ಎಂದುಕೊಂಡು ಮಾದೇಗೌಡನ ಜಗುಲಿಯಲ್ಲಿ ಮಾಲಿಂಗನ ಹೆಣ ಹಾಕಿ ಬರುವಂತೆ ತನ್ನ ಆಳುಗಳಿಗೆ ಕಟ್ಟಪ್ಪಣೆ ಮಾಡಿದ್ದ ಪ್ರಕಾರ ಎಲ್ಲವೂ ಸುಸೂತ್ರವಾಗಿ ಮುಗಿದು ಹೋಗಿತ್ತು ಆದರೆ ಮಾದೇಗೌಡನಿಗೆ ಮೊದಲೇ ಮಾಲಿಂಗನ ಮೇಲೆ ಕೋಪ ಇದ್ದುದರಿಂದ “ಏನಲೇ ಬೋಸುಡಿಕೆ ನನ್ನ ಮನೀ ಜಗಲಿ ಮ್ಯಾಲ ಬಂದು ಮಲಗೂವಷ್ಟ ಸೊಕ್ಕು ಬಂತೇನ್ಲೇ” ಎಂದವನೇ ಮೊದಲೇ ಸತ್ತ ಮಾಲಿಂಗನನ್ನು ಪುನ: ತನ್ನ ಕೊಡಲಿಯಿಂದ ಕೊಚ್ಚಿ ನಂತರ ಈ ಕೊಲೆ ರಾಮೇಗೌಡರ ತಲೆಗೆ ಕಟ್ಟಬೇಕೆಂದುಕೊಂಡು ಪುನ: ರಾಮೇಗೌಡರ ದನಕಟ್ಟುವ ಹಕ್ಕಿಯಲ್ಲಿ ನಿಲ್ಲಿಸಿ ಹೋಗಿದ್ದ.

***

ಮಾಲಿಂಗ ದಷ್ಟಪುಷ್ಟ, ಬಲಶಾಲಿ ನೆಲ ಗುದ್ದಿ ನೀರು ತೆಗೆಯುವಂತ ಗಂಡಸು ಮೇಲಾಗಿ ಸುರಸುಂದರ ಆತನ್ನು ಕುರಿತು ಊರಜನ ಬಹಳ ಸಲ “ಮಾಲಿಂಗ, ತಪ್ಪಿಅಲ್ಲಿ ಹುಟ್ಟಿ ನೋಡಲೇ ನೀ, ನಿನ್ ನಸೀಬದಾಗ ಮುಂದೊಂದ ದಿನ ದೊಡ್ಡ ಮನಸ್ಯಾ ಆಗ್ತೀಯಾಂ ಮತ್ ನೋಡ“ ಅಂತ ಅನ್ನುತ್ತಿದ್ದರು. ಹೌದು ನಿಜಕ್ಕೂ ಮಾಲಿಂದ ಸುಂದರನೇ ಸರಿ ಆ ದುಂಡನೆಯ ಮುಖ, ತೊಲೆಯಂತ ತೋಳುಗಳು, ಅಗಲವಾದ ಎದೆ, ಆ ಚಿಗುರು ಮೀಸೆ ಆ ಗಾಂಭಿರ್ಯದ ನಡಿಗೆ ಮಾತು ಎಲ್ಲವೂ ಕೂಡ ಮಾಲಿಂಗನ ಮೆಚ್ಚುವಿಕೆಗೆ ಪೂರಕವಾಗಿದ್ದವು. ಹೀಗಾಗಿ ಊರಿನ ಯಾರೊಬ್ಬರಿಗೂ ಮಾಲಿಂಗನೆಂದರೆ ಅಚ್ಚುಮೆಚ್ಚು ಅವನ ನಿಯತ್ತಿಗೆ ಪ್ರಾಮಾಣಿಕತೆಗೆ ಮನಸೋಲದವರೇ ಇಲ್ಲ. ಆತ ಹೆಚ್ಚ ಕೇರಿಯಲ್ಲಿರುತ್ತಿರಲಿಲ್ಲವಾದ್ದರಿಂದ ಹದಿ ಹರೆಯದ ಹುಡುಗಿಯರಿಗೆ ಅದೇನೋ ಬೇಸರ. ರಾಮೇಗೌಡರ ಮನೆಯಲ್ಲಿ ನಿಯತ್ತಿನಿಂದ ಕಮತ ಮಾಡಿಕೊಂಡಿದ್ದ ಮಾಲಿಂಗನಿಗೆ ರಾಮೇಗೌಡರೇ ಖುದ್ದಾಗಿ ಮುಂದೆ ನಿಂತು ಒಂದೊಳ್ಳೆ ಸಂಬಂಧದ ಹುಡುಗಿಯನ್ನು ಹುಡಿಕಿ ಮದುವೆ ಮಾಡಿಸಿದ್ದರು.

ಸುಂದರ ಸಂಸಾರದ ಸುಖ ಅನುಭವಿಸಬೇಕಾದ ಮಾಲಿಂಗನ ಮೇಲೆ ಅದಾವ ಕೆಟ್ಟದೃಷ್ಟಿ ಬಿತ್ತೋ ಏನೊ ಪಾಪ ಹೆಣವಾಗಿ ಬಿದ್ದ ಅಂತ ಊರಲ್ಲೆಲ್ಲ ಮಾತಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡ ರಾಮೇಗೌಡರ ಹೆಂಡತಿಯ ಮುಖದ ಮೇಲೆ ಪಾಪ ಗೈದ ಪಶ್ಚಾತ್ತಾಪದ ಬೆವರಿನ ಹನಿಗಳು ಮೂಡಿದ್ದವು. ಮಾಲಿಂಗ ಇನ್ನಿಲ್ಲ ಎಂಬ ಸುದ್ದಿ ಅವಳನ್ನೂ ದಿಗಿಲು ಬಡಿಯುವಂತೆ ಮಾಡಿತ್ತು. ಅವಳಿಂದಾಗಿ ಹೆಣವಾದ ಮಾಲಿಂಗನ ಬಗ್ಗೆ ಅವಳಿಗೆ ಮರುಕವಿತ್ತು.

ಹಣ್ಣು ಜಾರಿದರೆ ಮಣ್ಣುಪಾಲು ಹೆಣ್ಣು ಜಾರಿದರೆ ವನವಾಸ ಎಂಬ ಹಿರಿಯರ ನಾಣ್ಣುಡಿಯಂತೆ ರಾಮೇಗೌಡರ ಹೆಂಡತಿ ಒಂದು ಕ್ಷಣದ ಸುಖಕ್ಕಾಗಿ ಜಾರಿದ್ದರಿಂದ ಮಾಲಿಂಗ ಹೆಣವಾಗಿ ಹೋಗಿದ್ದ. “ಈಗ ಮೂಲ್ಯಾಗ ಅತ ಕೋಂತಕೂತ್ರ ಏನಾತ ಬಿಡವಾ ಪಾಪ ತಟಕ್ ಸುಖಕ್ಕಾಗಿ ಮಾಲಿಂಗನ ಜೀವತಗದ ಇಟ್ಟಿ, ಇದ ಯಾರಿಗೂ ಇನ್ನೂ ಗೊತ್ತಾಗಿಲ್ಲ ದೊಡ್ಡ ಮನೀ ಹೆಣ್ ಮಗಳದೀ ಸುಮ್ಕಿದ್ ಬಿಡು ಈಗ ಸಂಕಟಾ ಮಾಡ್ಕೊಂಡ್ರ ಏನ್ ಸತ್ತ ಮಾಲಿಂಗತಿರುಗಿ ಬರ್ತಾನೇನ ? “ ಅಂತ ಹಿರಿಯ ಮನೆಯಾಳು ಚಂದ್ರವ್ವ ಗೌರಿಯನ್ನ ಸಮಾಧಾನಿಸಿದಳು.

***

ಖಾಕಿಯವರ ಬೂಟಿನ ಸದ್ದಿಗೆ, ಊರಲ್ಲೆಲ್ಲ ನೀರವ ಮೌನ ಆವರಿಸಿತ್ತು. ನೆತ್ತಿ ಸುಡುವ ಬಿಸಿಲಲ್ಲೇ ಮಾಲಿಂಗನ ಶವ ಹೊತ್ತು ತರುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಮೂರು ಗುಂಪುಗಳ ರೋಷದ್ವೇಷ, ಗೌರಿಯ ಕಾಮದಾಹ ರಾಮೇಗೌಡರ ಕೋಪ ಎಲ್ಲವನ್ನೂ ತನ್ನೊಂದಿಗೆಯೇ ಹೊತ್ತೊಯ್ದ ಮಾಲಿಂಗ ಒಡೆದ ಊರನ್ನು ಮತ್ತೇ ಒಂದು ಮಾಡಿದ ರಾಮೇಗೌಡರೇ ಸ್ವತ: ಊರವರ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಡಿದ್ದರಿಂದ ಸುದ್ದಿ ಊರಗಸಿ ದಾಟಲಿಲ್ಲ. ಮಾಲಿಂಗನ ಸಾವಿಗೆ ಸೂಕ್ತ ಸಾಕ್ಷ್ಯಗಳು ಸಿಗಲಿಲ್ಲ. ಮಾಲಿಂಗನ ಸಾವಿನ ನಂತರ ಊರೆಲ್ಲಗರ ಬಡಿದಂತಾಗಿತ್ತು. ಮಾಲಿಂಗನ ಹೆಂಡತಿಗೆ ಊರಿನಲ್ಲಿ ಎಲ್ಲ ಸವಲತ್ತುಗಳನ್ನು ನೀಡಿ ಇಡೀ ಊರಿಗೆ ಊರೇ ಅವಳನ್ನು ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನೋಡಿಕೊಂಡರು. ಮಾಲಿಂಗನ ನೆನಪಿಗೋಸ್ಕರ ಮಂಡಲ ಪಂಚಾಯತಿಯಿಂದ ಠರಾವು ಪಾಸು ಮಾಡಿ ರಾಮೇನಹಳ್ಳಿಗೆ ಮಾಲಿಂಗನಹಳ್ಳಿ ಎಂದು ಪುನ: ನಾಮಕರಣ ಮಾಡಿದರು. ಪ್ರತಿ ವರ್ಷ ಮಾಲಿಂಗನಹಳ್ಳಿಯಲ್ಲಿ ಜಾತ್ರೆ ಮಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಜಾತಿ, ಬೇಧ, ಕುಲ ಗೋತ್ರ ಮೀರಿದ ಬಾಂಧವ್ಯ ಆ ಗ್ರಾಮಗಳ ಜನರ ಮಧ್ಯದಲ್ಲಿ ಉಳಿಯಿತು. ಎಂದೋ ಅನಾಥನಾಗಿದರ ಖಾರಿಲ್ಲದೇ ದಿನದೂಡುವ ಮಾಲಿಂಗ ಅಂದು ಊರಿಗೆ ದೇವರಾಗಿಬಿಟ್ಟಿದ್ದ.

-ಸಿದ್ದರಾಮ ತಳವಾರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x