ಮಾರ್ಚ್ ತಿಂಗಳು, ವಿಶ್ವ ಅರಣ್ಯ ಮತ್ತು ಜಲ ದಿನ: ಅಖಿಲೇಶ್ ಚಿಪ್ಪಳಿ

ಮಾರ್ಚ್ ತಿಂಗಳೆಂದರೆ ಹಣಕಾಸಿನ ವರ್ಷ ಮುಗಿಯುವ ತಿಂಗಳು. ಭೂಮಿಯ ಮೇಲೆ ಬದುಕುವ ಎಲ್ಲಾ ಜನರು ಹಣದ ಮೇಲೆ ಅವಲಂಬಿತರಾಗಿದ್ದಾರೆ. ಯಾವ ಬ್ಯಾಂಕಿಗೆ ಹೋದರು ಎಲ್ಲರೂ ಬ್ಯುಸಿ ಮತ್ತು ಬಿಸಿ. ಲೆಕ್ಕಪರಿಶೋಧಕರಿಗೆ ಕೈತುಂಬಾ ಕೆಲಸ. ಸರ್ಕಾರದ ಛಪ್ಪನ್ನಾರು ಇಲಾಖೆಗಳು ಮಾರ್ಚ್ ಕೊನೆಯ ಹಂತದಲ್ಲಿ ಬ್ಯುಸಿ ತನ್ಮಧ್ಯೆ ಚುನಾವಣೆಯ ಕಾವು ವಾತಾವರಣದ ಕಾವು ಸೇರಿ ಜನಜೀವನ ಅಸ್ತ್ಯವಸ್ತವಾಗಿದೆ. ಮಾರ್ಚ್ ತಿಂಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ದುತ್ತೆಂದು ಉದ್ಬವಿಸಿದೆ. ಮಾರ್ಚ್ ತಿಂಗಳ 21ನೇ ತಾರೀಖು ವಿಶ್ವ ಅರಣ್ಯ ದಿನ. ಈ ತಿಂಗಳಲ್ಲಿ ಗಿಡ ನೆಟ್ಟು ಪೋಷಿಸುವುದು ಕಷ್ಟ. ಕುಡಿಯಲೇ ನೀರಿಲ್ಲದಾಗ ಗಿಡಕ್ಕೆಲ್ಲಿಂದ ನೀರು ಹಾಕುವುದು ಎಂಬ ಪ್ರಶ್ನೆಯಿದೆ. ಆದರೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನವನ್ನು ಇಲಾಖೆವತಿಯಿಂದ ಹಮ್ಮಿಕೊಳ್ಳಬಹುದು. ಮಾರ್ಚ್ 22 ವಿಶ್ವ ಜಲದಿನ. ವಿಶ್ವ ಜಲದಿನವನ್ನು ಹಲವು ಕಡೆ ಆಚರಿಸಿದ ಸುದ್ಧಿಯಿದೆ. ಆದರೆ ವಿಶ್ವ ಅರಣ್ಯ ದಿನವನ್ನು ಆಚರಿಸಿದ ಬಗ್ಗೆ ವರದಿಗಳಿಲ್ಲ. ಅರಣ್ಯ ಖಾತೆ ಉಸ್ತುವಾರಿ ನೋಡಿಕೊಳ್ಳುವ ಸಚಿವರು ಮತ್ತು ಅಧಿಕಾರಿಗಳಲ್ಲಿ ಮಾಹಿತಿ ಕೊರತೆಯಿರಬಹುದು ಅಥವಾ ಮುಂದಿನ ಹಣಕಾಸು ವರ್ಷಕ್ಕೆ ಯೋಜನೆಗಳನ್ನು ರೂಪಿಸುವ ಕಾರ್ಯದಲ್ಲಿ ತನ್ಮಯತೆಯಿಂದ ಮಗ್ನವಾಗಿರಬಹುದು. ವಿಶ್ವ ಅರಣ್ಯ ದಿನದಂದೇ ಸಾಗರದ ಅರಣ್ಯ ಇಲಾಖೆಗೆ ಎರಡು ಬೇಡಿಕೆಗಳು ಬಂದಿವೆ. ಗಣಪತಿ ಕೆರೆ ಮತ್ತು ರಾಘವೇಂದ್ರ ಸ್ವಾಮಿ ಮಠದ ಹತ್ತಿರ ರಸ್ತೆ ಬದಿಯಲ್ಲಿ ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾದ ನಿರ್ಕಾಯ್ ಮರವನ್ನು ಕಡಿಸಿಕೊಡಿ ಎಂಬ ಅರ್ಜಿ. ಈ ಮರದಿಂದ ಉಪಯೋಗವಿದೆ. ಮಳೆಗಾಲದಲ್ಲಿ ತನ್ನ ಬೇರಿನ ಮೂಲಕ ಭೂಮಿಯ ಒಳಕ್ಕೆ ನೀರು ಇಂಗಿಸುವ ಕೆಲಸವನ್ನು ಇದು ಮಾಡುತ್ತದೆ ಜೊತೆಗೆ ವಿಪರೀತ ವಾಹನಗಳಿಂದ ಹೊರಬರುವ ಹೊಗೆಯನ್ನು ಆಮ್ಲಜನಕವಾಗಿ ಪರಿವರ್ತಿಸಿ ನಮಗೆ ನೀಡುತ್ತದೆ. ಜೊತೆಗೆ ಈ ಮರದ ಹೂವಿಗೆ ಹತ್ತಾರು ಜಾತಿಯ ಪಕ್ಷಿಗಳು ಬೇಟಿ ನೀಡಿ ಮಕರಂದ ಹೀರುತ್ತವೆ. ಇದು ಕಾಯಿಯಾಗಿ ಮಾಗಿದ ಮೇಲೆ ಬೀಜ ಪ್ರಸರಣೆ ಮಾಡಿಕೊಂಡು ತನ್ನ ಸಂತತಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತದೆ. ರುಚಿಯಾದ ಇದರ ಬೀಜವನ್ನೂ ಗಿಳಿ ಹಿಂಡು ತಿನ್ನುತ್ತವೆ. ಪಕ್ಷಿಪ್ರಪಂಚದ ಹಸಿವನ್ನೂ ತಣಿಸುತ್ತದೆ. ಸಮಾಜದ ಗಣ್ಯ ವ್ಯಕ್ತಿಯೊಬ್ಬರ ಮನೆಯಿದೆ. ಮನೆಯ ಕಾಂಪೌಂಡಿನ ಹೊರಗಿರುವ ಮರದ ಬೇರುಗಳು ಕಾಂಪೌಡನ್ನು ಒಡೆದು ಹಾಕಬಹುದು, ಹೀಗೆ ಆದಲ್ಲಿ ಆ ವ್ಯಕ್ತಿಗೆ ಲುಕ್ಸಾನು ಆಗುತ್ತದೆ. ಅದಕ್ಕಾಗಿ ಇದನ್ನು ಕಡಿಯಿರಿ ಎಂಬ ಅರ್ಜಿ ಬಂದಿದೆ. ಜೊತೆಗೆ ಅರಣ್ಯ ಮಂತ್ರಿಗಳ ಆಪ್ತಸಹಾಯಕರು ದೂರವಾಣಿ ಮುಖಾಂತರ ಇಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಡ ತಂದು ಕಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮರದ ಹೆಸರಿನಲ್ಲಿ ನನ್ನನ್ನು ಕಡಿಯಬೇಡಿ ಎಂಬ ಮನವಿಯನ್ನು ಸ್ನೇಹಿತರೊಬ್ಬರು ನೀಡಿದ್ದಾರೆ. ಇದೇ ತರಹದ ಇನ್ನೊಂದು ಘಟನೆಯೂ ಇದೆ. ರಾಷ್ಟ್ರೀಯ ಹೆದ್ದಾರಿ 206 ಬದಿಯಲ್ಲಿ  ವರದಾಪುರಕ್ಕೆ ತಿರುಗುವ ಜಾಗದಲ್ಲೊಂದು ನೂರಾರು ವರ್ಷದ ಸಾಲುಧೂಪದ ಮರವಿದೆ. ಆ ಮರದಿಂದ ಅಲ್ಲಿ ಯಾರಿಗೂ ತೊಂದರೆಯಾದ ನಿದರ್ಶನವಿಲ್ಲ. ಅಲ್ಲಿಂದ ಆರಿಸಿಹೋದ ಸದಸ್ಯರು ತಮ್ಮ ನೂತನ ಅಧ್ಯಕ್ಷರ ನೆರವಿನಿಂದ ಆ ಮರವನ್ನು ಕಡಿಸಲು ಹೊರಟಿದ್ದಾರೆ ಎಂಬ ಸುದ್ಧಿ ಮಾಹಿತಿ ಹಕ್ಕಿನಡಿಯಲ್ಲಿ ಸ್ನೇಹಿತರೊಬ್ಬರು ಪಡೆದು ಕೊಂಡಿದ್ದಾರೆ. ಅರ್ಜಿ ಗುಜರಾಯಿಸಿದ ಕಾರಣ ಮಾತ್ರ ನಗೆಪಾಟಲಿಗೀಡಾಗುವಂತೆ ಇದೆ. ಆ ಮರದಿಂದ ಅಲ್ಲಿ ಅಪಘಾತಗಳು ಹೆಚ್ಚುತ್ತಿವೆ ಎಂಬ ವಾದ ಮರಕಡಿಯುವವರಿಂದ ಬಂದಿದೆ. ಯಥಾ ಪ್ರಕಾರ ನನ್ನನ್ನು ಕಡಿಯಬೇಡಿ ಎಂಬ ಅರ್ಜಿ ಮರದ ಪರವಾಗಿ ಅರಣ್ಯ ಇಲಾಖೆಗೆ ಹೋಗಿದೆ.

25 ವರ್ಷಗಳ ಹಿಂದಿನ ಮಾರ್ಚ್ ತಿಂಗಳಲ್ಲಿ ಅಮೇರಿಕಾ ಅಧಿಪತ್ಯವಿರುವ ಅಲಾಸ್ಕದ 1300 ಮೈಲು ಪರಿಶುದ್ಧ ತೀರದಲ್ಲಿ ದಿ ಎಕ್ಸಾನ್ ವ್ಯಾಲ್ಡೇಜ್ ತೈಲ ಕಂಪನಿಯ ಟ್ಯಾಂಕರ್‍ನಿಂದ 11 ಮಿಲಿಯನ್ ಗ್ಯಾಲನ್ ಕಚ್ಚಾ ತೈಲ ಸೋರಿದ್ದರಿಂದ ಅಲ್ಲಿನ ಲಕ್ಷಗಟ್ಟಲೆ ಸಮುದ್ರ ಜೀವಿಗಳ ಆಹುತಿಯಾಯಿತು. ಆ ದಿನವನ್ನು “ನೀರನ್ನು ಕೊಂದ ದಿನ”ವೆಂದು ಶೋಕಾಚರಣೆ ಮಾಡಲಾಗುತ್ತದೆ. ಕಳೆದ 25 ವರ್ಷಗಳಿಂದಲೂ ಆಗ ಸೋರಿದ ಕಚ್ಚಾ ತೈಲದಿಂದಾದ ಅನಾಹುತದ ಸರಣಿ ಮುಂದುವರೆಯುತ್ತಲೇ ಇದೆ. ಸ್ವತ: ಪ್ರಕೃತಿಗೂ ತೈಲದ ಜಿಡ್ಡನ್ನು ತೊಳೆಯಲು ಸಾಧ್ಯವಾಗಿಲ್ಲ. ಅಲ್ಲಿನ ಸಮುದ್ರ ಸಂಕುಲ ತೈಲ ಕೊಳೆಯಿಂದ ನರಳುತ್ತಲೇ ಇದೆ. ಇತಿಹಾಸದಿಂದ ಮಾನವ ಪಾಠ ಕಲಿಯಬೇಕು, ಮತ್ತು ದುರಂತಮಯವಾದ ಇತಿಹಾಸ ಮರುಕಳಿಸದಂತೆ ನೋಡಿಕೊಳ್ಳಬೇಕು. ಹಣದಾಸೆ ಎಲ್ಲವನ್ನೂ ಮರೆಮಾಚುತ್ತದೆ. ಹಣದ ಮುಂದೆ ಎಲ್ಲವೂ ನಗಣ್ಯ. ಇದೀಗ ಅಂತಾರಾಷ್ಟ್ರೀಯ ತೈಲ ಕಂಪನಿ ಶೆಲ್ ಅಮೆರಿಕಾ ಅಧಿಪತ್ಯದ ಆರ್ಕ್‍ಟಿಕ್‍ನ ಚುಕ್ಚಿ ಸಾಗರ ತೀರದಲ್ಲಿ ತೈಲ ಬಗೆಯಲು ಅನುಮತಿ ಕೇಳಿದೆ. ಎಂದಿನಂತೆ ತೈಲ ಕಂಪನಿಗಳ ಲಾಬಿಗೆ ಮಣಿದ ಒಬಾಮ ಸರ್ಕಾರ ಅಲ್ಲಿ ತೈಲ ಬಗೆಯಲು ಅನುಮತಿ ನೀಡಲು ಒಪ್ಪಿದೆ. ಇಲ್ಲೇನಾದರು ತೈಲ ಸೋರಿಕೆಯಾದರೆ 25 ವರ್ಷದ ಹಿಂದೆ ಆದ ದುರಂತಕ್ಕಿಂತ ದುಪ್ಪಟ್ಟು ಹಾನಿಯಾಗಲಿದೆ. ಇದೀಗ ತಂತ್ರಜ್ಞಾನ ಮುಂದುವರೆದಿದೆ ಈ ಹಿಂದಿನ ಹಾಗೆ ತೈಲ ಸೋರಿಕೆಯಾಗುವುದಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ಹಾಗೂ ಇಲ್ಲ. ಅರ್ಕ್‍ಟಿಕ್ ಪ್ರದೇಶದಲ್ಲಿ ಶೆಲ್ ಕಂಪನಿಯ ರಿಗ್ ಹೂತುಕೊಂಡಿದೆ. ಮತ್ತೊಂದು ಬೃಹತ್ ಯಂತ್ರ ಕೆಟ್ಟು ಕುಳಿತಿದೆ. ಹೂತು ಹೋದ ರಿಗ್‍ನ್ನು ಹೊರತೆಗೆಯಲು ಮತ್ತು ಕೆಟ್ಟು ಹೋದ ಬೃಹತ್ ಯಂತ್ರದ ರಿಪೇರಿ ಮಾಡಲು ಇಂದಿನ ತಂತ್ರಜ್ಞಾನದ ಯುಗದಲ್ಲೂ ಶೆಲ್ ಕಂಪನಿಗೆ ಸಾಧ್ಯವಾಗಿಲ್ಲ. ನಿಯೋಜಿತ ಆರ್ಕ್‍ಟಿಕ್ ಪ್ರದೇಶದಲ್ಲೊಮ್ಮೆ ತೈಲ ಸೋರಿಕೆಯಾದರೆ, ಅಲ್ಲಿನ ಪ್ರತಿಕೂಲ ಬಿರುಗಾಳಿ ತೈಲವನ್ನು ಸಮುದ್ರಗುಂಟ ಸಾವಿರಾರು ಮೈಲಿನ ತನಕ ಪಸರಿಸುವ ಅಪಾಯವಿದೆ. ಮತ್ತು ಯಾವ ತಂತ್ರಜ್ಞಾನದ ನೆರವಿನಿಂದಲೂ ಆಗಲಿರುವ ಹಾನಿಯನ್ನು ರಿಪೇರಿ ಮಾಡಲು ಸಾಧ್ಯವಿಲ್ಲ.

ಕೆನಡಾ ಮೂಲದ ಅಂತಾರಾಷ್ಟ್ರೀಯ ಗಣಿ ಕಂಪನಿಯೊಂದು ಸ್ವೀಡನ್ ದೇಶದ ನೋರಾ ಕರ್ ಆಸ್ಟೋಗಾಟ್‍ಲ್ಯಾಂಡ್ ಪ್ರದೇಶದಲ್ಲಿರುವ ಅತ್ಯಂತ ಸುಂದರ ಸರೋವರವಾದ ವಾಟೆರೆನ್ ಹತ್ತಿರ ಅಪರೂಪದ ಕಚ್ಚಾ ವಸ್ತುಗಳನ್ನು ಬಗೆಯಲು ಅನುಮತಿ ಕೇಳಿದೆ. ಸ್ವೀಡನ್ ಪ್ರಧಾನಿ ಫೆಡ್ರಿಕ್ ರೀನ್‍ಫಡ್ ಮುಂದಿನ 25 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ಹೊರಟಿದ್ದಾರೆ. ವಿಶ್ವ ಜಲದಿನದ ತಿಂಗಳಲ್ಲೇ ಈ ತೀರ್ಮಾನ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸದ ಪರಮಾವಧಿ. ರಾಸಾಯನಿಕಗಳಾದ ಲೆಂತಾನೈಡ್ಸ್, ಝಿರ್‍ಕೋನಿಯಮ್ ಮತ್ತು ಯುರೇನಿಯಂಗಳ ಸಂಯೋಜನೆ ಹೊಂದಿರುವ ಕಚ್ಚಾ ವಸ್ತುಗಳನ್ನು ಬಗೆಯಲು ಕಂಪನಿ ಉತ್ಸುಕವಾಗಿದೆ. ಗಣಿಗಾರಿಕೆಯಿಂದಾಗುವ ಮಾಲಿನ್ಯ, ಅಲ್ಲಿನ ಅಂತರ್ಜಲವನ್ನು ಹಾಳು ಮಾಡುವುದಲ್ಲದೇ, ಕುಡಿಯುವ ನೀರನ್ನು ಕಲುಷಿತಗೊಳಿಸುತ್ತದೆ. ಜೊತೆಗೆ ಅಲ್ಲಿನ ಪರಿಸರ ಹಾಳಾಗುವುದರ ಜೊತೆಗೆ ಅಲ್ಲಿ ವಾಸಿಸುವ ಜನರ ಬದುಕು ಮೂರಾಬಟ್ಟೆಯಾಗಲಿದೆ. ಇಪ್ಪತೈದು ವರ್ಷಗಳಿಗೆ ಅನುಮತಿ ಕೇಳುವ ಕಂಪನಿ, ಯೋಜನೆ ಪೂರ್ತಿಯಾಗದಿದ್ದಲ್ಲಿ ಇನ್ನೂ ಹತ್ತು ವರ್ಷ ಮುಂದುವರೆಸುವ ಕರಾರನ್ನು ಕಂಪನಿ ಸ್ವೀಡನ್ ದೇಶಕ್ಕೆ ವಿಧಿಸಿದೆ. 

ನಮ್ಮ ನೆರೆದೇಶವಾದ ನೇಪಾಳದಲ್ಲಿ ವಿಶ್ವಪಾರಂಪಾರಿಕ ಪಟ್ಟಿಯಲ್ಲಿ ಸೇರಿರುವ ರಾಷ್ಟ್ರೀಯ ಉದ್ಯಾನವನವಿದೆ. ನೇಪಾಳದ ಮುಕುಟಮಣಿ ಎಂದು ಚಿತೀವಾನ್ ಎಂಬ ಹೆಸರಿನ ಈ ಉದ್ಯಾನವನಕ್ಕೆ ಹೇಳಲಾಗುತ್ತದೆ. ಅಪರೂಪದ ಹುಲಿ ಮತ್ತು ಘೇಂಡಾಮೃಗಗಳ ತವರು ಈ ವನ. ಹತ್ತಾರು ಕಿಲೋಮೀಟರ್‍ನಷ್ಟು ದೂರ ಕಡಿಮೆಯಾಗುತ್ತದೆ ಎಂಬ ಕಾರಣದಿಂದ ನೇಪಾಳದ ಸರ್ಕಾರ ಈ ಚಿತೀವಾನ್ ಉದ್ಯಾನದ ನಡುವೆ ರೈಲು ಮಾರ್ಗ ಮತ್ತು ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದೆ. ಕಳೆದ 40 ವರ್ಷಗಳಿಂದ ನಿರಾಂತಕವಾಗಿದ್ದ ಈ ಉದ್ಯಾನವನಕ್ಕೆ ಅಲ್ಲಿನ ಸರ್ಕಾರದಿಂದಲೇ ಕುತ್ತು ಬಂದಿದೆ. ಇದಕ್ಕಾಗಿ ಸಾವಿರಾರು ಮರಗಳ ಮಾರಣ ಹೋಮವಾಗಲಿದೆ. ಅಸಂಖ್ಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಸಂಕಷ್ಟಕ್ಕೆ ಸಿಲುಕಲಿವೆ. 2013ರಲ್ಲಿ ಪ್ರಪಂಚದ ವಿವಿಧ ದೇಶದ 15 ಲಕ್ಷ ಪ್ರವಾಸಿಗರು ಈ ಅಪರೂಪದ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸರ್ಕಾರದ ಈ ಹೊಸ ಯೋಜನೆಯಿಂದಾಗಿ ಇಡೀ ಪ್ರವಾಸೋಧ್ಯಮವು ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಅಲ್ಲಿನ ತಜ್ಞನು ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಆನೆಗಳ ದಾರಿಯಲ್ಲಿ ರೈಲು ಹಾದುಹೋಗುತ್ತವೆ. ಗಣನೀಯ ಸಂಖ್ಯೆಯ ಆನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ನೇಪಾಳದ ಚಿತೀವಾನ್ ರಾಷ್ಟ್ರೀಯ ಉದ್ಯಾನವನದ ಮಧ್ಯೆ ಹಾದು ಹೋಗಲಿರುವ ಯೋಜಿತ ರೈಲು ಹಳಿಗೆ ಸಿಲುಕಿ ಅಪಾಯದಂಚಿನಲ್ಲಿರುವ ಆನೆ ಮತ್ತು ಘೆಂಡಾಮೃಗದ ಸಂತತಿ ಅಳಿದುಹೋಗಲಿವೆ ಎಂದು ಅಲ್ಲಿನ ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮಾರ್ಚ್ 31ಕ್ಕೆ ಹಣಕಾಸಿನ ವರ್ಷ ಮುಗಿದ ದಿನವೇ ಹೊಸವರ್ಷದ ಹಬ್ಬ ಯುಗಾದಿ ಮತ್ತು ಮರುದಿನವೇ ಮೂರ್ಖರ ದಿನ ಕೂಡಾ. ಪರಿಸರ ಖೂಳರು ಸೇರಿ ಜನಸಾಮಾನ್ಯರನ್ನು ಮೂರ್ಖರನ್ನಾಗಿ ಮಾಡಿ ಯುಗಾದಿಯ ಸಂಭ್ರಮವನ್ನು ಕಸಿದುಕೊಳ್ಳಲಿದ್ದಾರೆ. ಯುಗಾದಿಯ ದಿನ ಬೇವು-ಬೆಲ್ಲ ತಿನ್ನುತ್ತಾರೆ. ಬೇವಿನ ಚಿಗುರನ್ನು ಚಿವುಟಿ ಹಾಕುವ ಹುನ್ನಾರಗಳನ್ನು ಕಾರ್ಪೋರೇಟ್ ಪರ ಸರ್ಕಾರಗಳು ಮಾಡುತ್ತವೆ. ಆದಾಗ್ಯೂ ಯುಗಾದಿಯ ಶುಭಾಷಯಗಳು ಹಾಗೆಯೇ ಮೂರ್ಖರ ದಿನದಂದು ಎಚ್ಚರದಿಂದಿರಿ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x