ಕೆಲವೊಮ್ಮೆ ಹೀಗಾಗುವುದುಂಟು. ಯಾರದೋ ತಪ್ಪಿಗೆ ಮತ್ತಾರಿಗೋ ಶಿಕ್ಷೆ, ಬಹುಮಾನ ನಿರೀಕ್ಷಿಸಿದ ಸಮಯದಲ್ಲಿ ಅವಮಾನ, ಕಾಣದ ಕೈಗಳ ಮೇಲಾಟ, ಸ್ಥಬ್ದ ತಿಳಿಗೊಳದಂತಿದ್ದ ದಿನಗಳಿಗೆ ಪ್ರಕ್ಷುಬ್ದ ಅಲೆಗಳ ಹೊಡೆತ. ಘಟನೆಯ ನೈಜತೆ ತಿಳಿಯುವವರೆಗೆ ತಳಮಳ. ಆಮೇಲೆ ಸಮಾಧಾನದ ಒಂದು ನಿಟ್ಟುಸಿರು.
ಕಳೆದ ತಿಂಗಳು ಮಂಡ್ಯ ಜಿಲ್ಲೆಯ ಶ್ರೇಷ್ಠ ಕವಿಯೊಬ್ಬರ ಸ್ಮರಣಾರ್ಥ ನಡೆದ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದೆನು. ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿತ್ತು. ಬಿಡುವಿನಲ್ಲಿ ಹೊರಬಂದಾಗ ದಾಖಲೆ’ಯ ಪ್ರಕಾಶಕರೊಬ್ಬರು ಸಿಕ್ಕಿದರು. ಅವರನ್ನು ಮಾತನಾಡಿಸಿ ಫೋಟೋ ತೆಗೆಸಿಕೊಂಡೆವು. ಕೆಲವೇ ನಿಮಿಷಗಳಲ್ಲಿ ಉದ್ಘಾಟಿಸಿದ ಗಣ್ಯ ಸಾಹಿತಿಯೂ ಹೊರಬಂದರು. ಎಲ್ಲರೂ ಅವರೊಂದಿಗೆ ಫೋಟೋ-ಸೆಲ್ಫಿಗಳಲ್ಲಿ ಬ್ಯುಸಿಯಾದರು. ನಾವೂ ಕೂಡಾ. . . . ನಂತರ ಪ್ರಕಾಶಕರು ನನಗೆ ಅವರ ಮೊಬೈಲ್ ಕೊಟ್ಟು ಗಣ್ಯರ ಜೊತೆಗಿನ ಫೋಟೋ ತೆಗೆಯಲು ಹೇಳಿದರು. ನಾನು ಆ ಕೆಲಸ ಮಾಡಿ ಮೊಬೈಲ್ ಹಿಂತಿರುಗಿಸಿದೆ. ಅವರು ಜೇಬಿಗಿರಿಸಿಕೊಂಡದ್ದನ್ನೂ ಗಮನಿಸಿದೆ.
ಊಟದ ನಂತರ ಶಾಸಕರು ೨ ನೇ ಗೋಷ್ಠಿಗೆ ಬರುತ್ತಾರೆ, ನಂತರವಷ್ಟೆ ಮೊದಲ ಕವಿಗೋಷ್ಠಿಯವರಿಗೂ ಸ್ಮರಣಫಲಕ ವಿತರಣೆ ಎಲ್ಲರೂ ಇರಲೇಬೇಕು’ ಎಂದು ಮೈಕಿನಲ್ಲಿ ಘೋಷಣೆ ಮೊಳಗುತಿತ್ತು. ಆದರೆ ನಾವು ಅವರಿಗೆ ತಿಳಿಸದೇ ಊರಿಗೆ ಹೊರಟುಬಂದೆವು. ಮರುದಿನ ಮಧ್ಯಾಹ್ನದ ವೇಳೆಗೆ ಸಂಘಟನೆಯ ಅಧ್ಯಕ್ಷರಿಂದ ನನಗೆ ಕರೆ ಬಂದಿತು. ಬಹಳಷ್ಟು ಕವಿಗಳು ಸೇರಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಯ್ತೆಂದು ಸಂತೋಷ ವ್ಯಕ್ತಪಡಿಸಿದರು. ಅದೂ-ಇದೂ ಮಾತನಾಡಿದ ನಂತರ ” ಗೌಡ್ರೆ,
ನೆನ್ನೆ ನೀವು ಯಾವ ಕಲರ್ ಷರ್ಟ್ ಹಾಕಿದ್ರಿ ?” ಪ್ರಶ್ನೆ ಬಂತು, ನನಗೆ ವಿಚಿತ್ರ ಎನಿಸಿದರೂ , “ನೇರಳೆ ಬಣ್ಣದು , ಸರ್, ಯಾಕೆ ಸರ್” ಎಂದೆ. ಆ ಕಡೆಯಿಂದ
ನಿರ್ಧಾರಿತ ಧ್ವನಿಯಲ್ಲಿ ” ಸರಿ, ಹಾಗಾದ್ರೆ ಒಂದು ಮುಖ್ಯ ವಿಚಾರ , ನೆನ್ನೆ ನೀವು ಯಾರದಾದ್ರೂ ಮೊಬೈಲ್ ಈಸ್ಕೊಂಡು ಫೋಟೋ ತೆಗುದ್ರಾ ?, ” ಹೌದೆಂದು ನಾನು ನಡೆದ ವಿಚಾರವನ್ನೂ ಹೇಳಿದೆ. ಈಗ ಅವರ ಮಾತು ಬಿರುಸಾಯಿತು.
” ನೀವು ಅವರ ಮೊಬೈಲ್ ಹಿಂದಿರುಗಿಸಿಲ್ವಂತೆ, ನಿಮಗೇ ಕೊಟ್ಟಿರುವುದೆಂದು ಚೆನ್ನಾಗಿ ನೆನಪಿದೆ. ಅಕಸ್ಮಾತ್ ನಿಮ್ಮ ಗೆಳೆಯರ ಹತ್ತಿರವೋ, ನಿಮ್ಮ ಬ್ಯಾಗಿನಲ್ಲೋ ಅಪ್ರಯತ್ನವಾಗಿ ಇದ್ದರೆ ನಾಳೆ ಹಿಂತಿರುಗಿಸಿ , ವಿಚಾರ ನಮ್ಮಲ್ಲೇ ಗುಟ್ಟಾಗಿರಲಿ ” ಎಂದರು. ಸತ್ಯಾ ನಾಶ್ !!. ವಿಚಾರ ಏನೆಂದು ಈಗ ಅರ್ಥವಾಯ್ತು. ಅಪ್ರತಿಭನಾಗಿ ಬಿಟ್ಟೆ!!. ಮಾತು ನಿಂತೇ ಹೋದವು. ನನ್ನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಅವರಿಲ್ಲ. ” ಹೂಸಿದವಳಾರು ಎಂದ್ರೆ, ಮಾಸಿದ ಸೀರೆಯವಳು’ ಎನ್ನುವಂತೆ ಆರೋಪ ವನ್ನು ಸುಲಭವಾಗಿ ಹೊರಿಸಿಬಿಟ್ರಲ್ಲ’; ಮಾತು ಮುಂದುವರೆಯಿತು “ನೋಡಿ , ಪರಿಷತ್ ಭವನದ ಒಳಗೆ – ಹೊರಗೆ ಸಿ. ಸಿ. ಕ್ಯಾಮರಾ ವ್ಯವಸ್ಥೆಯಿದೆ, ಎಲ್ಲವೂ ರೆಕಾರ್ಡ್ ಆಗಿರುತ್ತೆ, ನಾವಿನ್ನೂ ‘ಫೂಟೇಜ್’ ಪರಿಶೀಲಿಸಿಲ್ಲ. ವಿಚಾರ ನಾಳೆ ಪೋಲೀಸ್ ಠಾಣೆ ಮೆಟ್ಟಿಲೇರೋದು ಬೇಡ, ಯಾರಿಗೂ ಅನ್ಯಾಯ ಆಗಬಾರದಲ್ಲ, , ಅಲ್ಲಿ ಬಂದಿದ್ದವರೆಲ್ಲಾ ಕನ್ನಡಾಭಿಮಾನಿಗಳೇ”. ಪೋಲೀಸ್ ಧಾಟಿಯ ಈ ಮಾತುಗಳಿಂದ ನನಗೆ ಕೆಡುಕಿನ ವಾಸನೆ ಬಡಿಯಿತು. ಹಾಗಾದರೆ ಎಲ್ಲರಿಗೂ ಕರೆ ಮಾಡಿ ವಿಚಾರಸಿದ್ದಾರಾ ??. ಅಥವಾ ನನ್ನನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರಾ ?ಹೇಗೂ ಫೂಟೇಜ್ ಇದೆಯಲ್ಲ, ಅಂಥ ನೀಚ ವೃತ್ತಿ ನಮ್ಮದಲ್ಲ , ಕಳವು ಇಲ್ಲದವನಿಗೆ ಭಯವಿಲ್ಲ. ” ನೀವು ಬೇಕಾದ್ದು ಮಾಡ್ಕೊಳ್ರಿ, ಆದರೆ ಬೇರೆ ರೀತಿ ಪ್ರಯತ್ನ ಪಡಿ, ” ಎಂದು ಧೈರ್ಯವಾಗಿ ಹೇಳಿದೆ. ಫೋನ್ ಕಟ್ಟಾಯ್ತು.
ನಿಜವಾಗಿ ಪೀಕಲಾಟ ನನಗೆ ಈಗ ಶುರುವಾಯ್ತು. ಸಿ. ಸಿ. ಕ್ಯಾಮರಾ ಕೆಲಸ ಮಾಡುತ್ತಿದ್ದರೆ ಸರಿ, ನಾನು ಬಚಾವ್. ಅಕಸ್ಮಾತ್ ಕೆಟ್ಟು ಹೋಗಿದ್ದರೆ !, ಅವರ ದೃಷ್ಠಿಯಲ್ಲಿ ನಾನು. . . . . . . . . ಅಂತ. , ಯಾವುದೇ ಮುಲಾಜಿಲ್ಲದೆ ನಿರ್ಧರಿಸಿಬಿಡುತ್ತಾರೆ. ಒಬ್ಬ ಮೇಷ್ಟ್ರಾಗಿ ಮರ್ಯಾದೆಯಿಂದ ಕಾಲ ಹಾಕ್ತಿದ್ದೆ. “ಕವಿ”ತ್ವ ದ ಹುಚ್ಚು ನನ್ನನ್ನು ಅಧಃಪತನಕ್ಕೆ ತಳ್ಳಿ ಬಿಡುತ್ತಲ್ಲ. ದೇವರೇ!! , ರಜೆದಿನ ರಾಗಿ ಪೈರಿನ ಕಟಾವನ್ನು ಬದಿಗೊತ್ತಿ ಬಂದಿದ್ದೆ. ನನ್ನಮ್ಮ ಮತ್ತು ಹೆಂಡತಿಗೆ ಈ ವಿಚಾರ ಗೊತ್ತಾದ್ರೆ , ನನ್ನ ಕವಿತೆಗಳನ್ನು ಸುಟ್ಟು ಹಾಕಿಬಿಡ್ತಾರೆ. ಈ ಘನಂದಾರಿ ಬಹುಮಾನ ತರೋಕೆ ಅಲ್ಲಿವರೆಗೂ ಹೋಗ್ಬೇಕಾಗಿತ್ತಾ ಅಂತ ಮಾತಿನಲ್ಲೇ ಕೊಲ್ಲುತ್ತಾರೆ. ಹತ್ತು ಜನರೆದುರು ತಲೆ ಎತ್ತಿ ನಡೆಯೋದೇಗೆ ?ನನ್ನ ವಿದ್ಯಾರ್ಥಿಗಳಿಗೆ ಮುಖ ತೋರ್ಸೋಕಾಗುತ್ತಾ ? ಸಾಲ ಮಾಡಿ ಮೊಬೈಲ್ ಹಣ ಹೊಂದಿಸಬಹುದು. ಈ ಕೆಟ್ಟ ಅಪಮಾನ ಭರಿಸೋದು ಹೇಗೆ?. ನನ್ನ ಆ ಕಿರಿಯ ಕವಿಮಿತ್ರ ಬರುವುದಿಲ್ಲವೆಂದಿದ್ದ , ಒತ್ತಾಯದಿಂದ ನಾನೇ ಕರೆದುಕೊಂಡು ಹೋದೆ, ಆತನ ಭವಿಷ್ಯವೇನು ?. ಒಟ್ಟಿನಲ್ಲಿ ನನ್ನ ಗ್ರಹಚಾರ ನೆಟ್ಟಗಿಲ್ಲ. ಅಷ್ಠಮ ಶನಿ ಹೆಗಲೇರಿದ ” ನಾನಾರೀತಿಯಾಗಿ ಚಿಂತಿಸಿ ನೆಮ್ಮದಿ ಕಳೆದುಕೊಂಡೆ. ಹೇಳಿಕೊಳ್ಳಲಾಗದ ಮುಜುಗರಕ್ಕೊಳಗಾದೆ.
ರಾತ್ರಿಯಲ್ಲಾ ಅದೇ ಚಿತ್ರಗಳು, ನನ್ನನ್ನು ಮತ್ತೆಮತ್ತೆ ಅಣಕಿಸುತ್ತಾ ಗಿರಕಿ ಹೊಡೆಯತೊಡಗಿದವು. ಇದಾವುದೂ ಎಳ್ಳಷ್ಟೂ ಯಾರಿಗೂ ತಿಳಿಯದಂತೆ ತುಂಬಾ ಎಚ್ಚರವಹಿಸಿದೆ. ಇಂಥ ವಿಚಾರಗಳು ಅಪಪ್ರಚಾರವಾಗುವುದೇ ಹೆಚ್ಚು. ಪೂಟೇಜ್ ಮೇಲೆ ಭಾರ ಹಾಕಿದ್ರೂ ಬೆಳಗಿನ ಜಾವ ೪ ರ ನಂತರವೆ ನನಗೆ ನಿದ್ರೆ ಬಂದಿರಬೇಕು.
ಮರುದಿನ ನಾನಾಗಿ ಪೋನ್ ಮಾಡಬಾರದೆಂದು ನಿರ್ಧರಿಸಿದೆ. ಕುಂಬಳ. . . . . ಗಾದೆ ನೆನಪಾಯ್ತು. ಆದರೂ ಕುತೂಹಲ, ಅನುಮಾನಗಳಿಂದಲೇ ವಿಚಾರ ಬೇರಾವುದೋ ತಿರುವು ಪಡೆದುಕೊಳ್ಳಬಾರದೆಂದು ಸಂಜೆ ೪. ೩೦ ಕ್ಕೆ ನಾನೇ ಪೋನ್ ಹಚ್ಚಿದೆ. ವಿಚಾರ ಇಥ್ಯರ್ಥ ಮಾಡಲೇಬೇಕು. ಸೆರಗಿನ ಕೆಂಡದ ಸಹವಾಸ ಸಾಕುಸಾಕಾಗಿತ್ತು. ಆ ಕಡೆಯಿಂದ “ಸಾರಿ ಗೌಡ್ರೆ, ದಯವಿಟ್ಟು ಕ್ಷಮಿಸಿ, ನಿಮ್ಮ
ಒಂದು ದಿನದ ನೆಮ್ಮದಿ ಹಾಳು ಮಾಡಿದ್ವಿ. ಬೆಳಿಗ್ಗೆ ಫೂಟೇಜ್ ಪರಿಶೀಲನೆ ಮಾಡ್ಸಿದ್ವಿ. ನೀವು ಹೇಳಿದಂತೆಯೇ ಚಿತ್ರಿತವಾಗಿದೆ. ನೀವು ವಾಪಸ್ಸು ಮಾಡಿದ ಮೊಬೈಲ್ ಅನ್ನು ಅವರು ಜೇಬಿನಲ್ಲಿ ಹಾಕಿಕೊಂಡಿರೋದು ಕ್ಲಿಯರ್ ಆಗಿ ರೆಕಾರ್ಡ್ ಆಗಿದೆ. ಬಹುಶಃ ಅವರು ಟೆರೇಸಿನಲ್ಲಿ ಊಟಮಾಡುವಾಗ , ಯಾರಿಗೋ ಕೊಟ್ಟಿರಬಹುದು, ಅಥವಾ ಬೀಳಿಸಿರಬಹುದು. ತಪ್ಪೆಲ್ಲಾ ಅವರದ್ದೇ!. ನಿಮ್ಮನ್ನು ವಿನಾಕಾರಣ ಅನುಮಾನಿಸಿದೆವು.
ನಮಗೆಲ್ಲರೂ ಒಂದೇ “ಎಂದು ಪೋನಿಟ್ಟುಬಿಟ್ಟರು. ಅಬ್ಬಾ ನನಗೀಗ ತುಂಬಾ ನಿರಾಳವಾಯ್ತು!!. ಗ್ರಹಣಬಿಟ್ಟ “ಚಂದ್ರ”ನಂತಾದೆ. ಹೊತ್ತಿದ್ದ ಒಂದು ದೊಡ್ಡಭಾರ ತಾನೇ ಕೆಳಗೆ ಬಿದ್ದಂತಾಯಿತು. ನಾನೀಗ ನನ್ನ ಅಂಗಿಯ ಬಣ್ಣಕ್ಕೆ ಧಿಕ್ಕಾರ ಎನ್ನಲೋ ?, ಪ್ರಕಾಶಕರ ಮೇಲೆ ನನಗೆ ಮೂಡಿದ ಅಭಿಮಾನವನ್ನು ದೂರಲೋ ?, ಹೇಳದೇ ಬಂದುದಕ್ಕೆ ನನ್ನನ್ನು ಅನುಮಾನಿಸಿದ ವ್ಯವಸ್ಥೆಯನ್ನು ಖಂಡಿಸಲೋ ?, ಪ್ರಕಾಶಕರ ಮರೆಗುಳಿತನವನ್ನು ಬಯ್ಯಲೋ ?, ಅನುಮಾಸಿಸಿದವರೇ ಮುಂದೊಂದು ದಿನ ಸಮ್ಮಾನಿಸುವರೆಂಬ ನಿರೀಕ್ಷೆಯಲ್ಲಿ ಸಮಾಧಾನ ಮಾಡಿಕೊಳ್ಳಲೋ ? ಒಂದೂಅರ್ಥವಾಗುತ್ತಿಲ್ಲ.
ಆದರೆ ಯಾವುದೇ ವ್ಯಕ್ತಿಯಿಂದ ಪಡೆದ ವಸ್ತು ಹಿಂತಿರುಗಿಸುವಾಗ , ಮೂರನೇಯವ ಸಾಕ್ಷಿಯಾಗಿರಬೇಕು ಎಂಬ ಪಾಠ ಕಲಿತೆ. ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ ಮತ್ತೊಬ್ಬರನ್ನು ಸುಲಭವಾಗಿ ಅನುಮಾನದಿಂದ ಕಾಣಬಾರದಲ್ಲವೇ ?. ನನ್ನ ಮಾನ ಕಾಪಾಡಿದ ಆ ಫೂಟೇಜ್ ನನ್ನ ಪಾಲಿಗೆ ಯಾವ ದೇವರಿಗಿಂತಲೂ ಕಡಿಮೆಯಲ್ಲ !!. ಆಧುನಿಕ ತಂತ್ರಜ್ಞಾನಕ್ಕೆ ನೂರು ನಮನಗಳು.
-ಚಂದ್ರೇಗೌಡ ನಾರಮ್ನಳ್ಳಿ