ಮನುಷ್ಯ…
ದ್ವಂದ್ವ…
ಅತೀ ಪುರಾತನ ಕಾಲದಿಂದಲೂ ಮನುಷ್ಯನನ್ನು ಕಾಡುತ್ತಿರುವ ದ್ವಂದ್ವ ' ಮನುಷ್ಯನೆಂದರೆ ಯಾರು ?" ಸ್ಥಿತಿ ಗತಿ ಮಿತಿ ಪರಿಮಿತಿ. ಎಲ್ಲವನ್ನು ಎಲ್ಲ ಕಾಲದಲ್ಲಿಯೂ ಕಾಡಿದ ಪ್ರಶ್ನೆ. ' ಮನುಷ್ಯ'
ಮನುಷ್ಯನ ಉಗಮವಾಗಿ, ಅಭ್ಯುದಯವಾಗಿ ಪ್ರಾಣಿಗಳ೦ತಿದ್ದ ಮನುಷ್ಯ ಕಾಲ ಕ್ರಮೇಣ ಕ್ರೋ ಮ್ಯಾಗ್ನನ್ ಆಗಿ ತನ್ನನ್ನು ತಾನು ನಾಗರೀಕತೆಯ ಅಚ್ಚಿನಲ್ಲಿ ಎರಕಗೊಳಿಸುತ್ತ ಬಂದಂತೆ, ಮನುಷ್ಯನ ರೂಪವೂ ಬದಲಾಯಿತು: ದೈಹಿಕವಾಗಿ ಮಾನಸಿಕವಾಗಿ. ದೇಹದ ಸ್ನಾಯುಗಳ ಮಾಂಸಖಂಡಗಳ ಜೊತೆಗೆ ಮನಸ್ಸಿನ ಬೆಳವಣಿಗೆಯಾದಂತೆ ಸಂಕುಲಗಳೊಂದು, ವರ್ಣಗಳೊಂದು ಕಡೆ ಸೇರಿ ಜಾತಿ ಮತ ಧರ್ಮ ರಾಜ್ಯ ಭಾಷೆ ದೇಶ ಬೆಳೆದು ಬಂದವು. ಇವೆಲ್ಲವುಗಳು ಪ್ರಪಂಚದ ನಾನಾ ಭಾಗಗಳಲ್ಲಿ ನಾನಾ ಕಾಲಘಟ್ಟಗಳಲ್ಲಿ ನಾನಾ ತೆರನಾಗಿ ಘಟಿಸಿ ಹರಿದು ಹಂಚಿ ಹೋಗಿ ಹಲವೆಡೆ ನೆಲೆಗೊಂಡವು. ರೂಪ ಬದಲಾಯಿತು, ನೆಲೆ ಬದಲಾಯಿತು ಗುಣ ಬದಲಾಯಿತು ಗತಿ ಬದಲಾಯಿತು, ಜಾತಿ ಮತ ಧರ್ಮ ಭಾಷೆ ನಂಬಿಕೆ ಹೀಗೆ ಮನುಷ್ಯನಾಗಿದ್ದ ಮನುಷ್ಯ ಬದಲಾದ: ಸ್ಥಳ ಕಾಲ ಸ್ಥಿತಿ ಧರ್ಮ ಭಾಷೆ ಮತ್ತು ಸುತ್ತಲಿನ ಇತರ ತನ್ನವರಾದ – ತನ್ನವರಲ್ಲದ ಮನುಷ್ಯರ ಮಧ್ಯೆ. ರಭಸ ಗತಿ ಚಲನೆ ವೇಗ ಬದಲಾದರೂ ಉಗಮವೊಂದೆ ಆಗಿರುವ,ಹಲವಾರು ಉಪನದಿಗಳನ್ನು ತನ್ನಲ್ಲಿ ಲೀನಗೊಳಿಸಿ ಗುರಿಯೊಂದೆ ಆಗಿಸಿ ಸಮುದ್ರದೆಡೆಗೆ ಹರಿಯುವ ನದಿಯಂತೆ, ನದಿಯೆಡೆಗೆ ಹರಿಯುವ ಹೊಳೆಯಂತೆ, ಹೊಳೆಯೆಡೆಗೆ ಹರಿಯುವ ಕಾಲುವೆಯಂತೆ, ಕಾಲುವೆಯಡಿಗೆ ಹರಿಯುವ ಒರತೆಯಂತೆ ಎಲ್ಲ ಮತ್ತು ಎಲ್ಲರ ಧರ್ಮ,ಆತ್ಮ, ಅಂತರಾತ್ಮ,ನಂಬಿಕೆ ಎಲ್ಲವು ಪ್ರಶ್ನಿಸುವದು, ಉತ್ತರ ಹುಡುಕವದು ' ಮನುಷ್ಯನೆಂದರೆ ಯಾರು ಎನ್ನುವ ಕಡೆಗೆ '. ಬೇರೆ ಬೇರೆ ಎಡೆಗಳಲ್ಲಿ ಹತ್ತು ಹಲವು ಕಡೆಗಳಲ್ಲಿ ಆಯ ಜಾಗಗಳಿಗೆ ತಕ್ಕಂತೆ ರೂಪಗಗೊಂಡು ಸ್ಥಳೀಯರಾದ ಧರ್ಮಗಳಿಗೆ ಮನುಷ್ಯ ಎನ್ನುವ ಪ್ರಶ್ನೆ ಬೇರೆ ಬೇರೆ ರೂಪಗಳಲ್ಲಿ ವಿಧಗಳಲ್ಲಿ ಕಾಡಿವೆ.
ಹಸಿದ ಮನುಷ್ಯ, ತುಂಬಿದ ತುಂಬಿಸಿಕೊಳ್ಳುವ ತುಂಬಿಸದ ತುಂಬಲಾರದ ಮನುಷ್ಯ, ಕ್ರೌರ್ಯದ ಕರುಣೆಯ ಕಾಮದ ಕನಸಿನ ಮನುಷ್ಯ, ಆಕ್ರಮಣದ ಆಕ್ರಮಿಸುವ ಆಕ್ರಮಿಸಿಕೊಳ್ಳುವ ಮನುಷ್ಯ,
ಪ್ರೀತಿಸುವ ದ್ವೇಷಿಸುವ ಹೊಡೆಯುವ ಹಡೆಯುವ ಧರ್ಮದ ಅಧರ್ಮದ ಮನುಷ್ಯ, ಭಾವಗಳ ಅಭಾವಗಳ ವೇದಗಳ ವೇದನೆಗಳ ಮನುಷ್ಯ.
ತನ್ನದೇ ಗುಹೆಯೊಳಗೆ ತನ್ನದೇ ಭಾವನೆಗಳೊಗೆ ತಾನೇ ಅವಿತು ಕುಳಿತು ತನ್ನದೇ ಘರ್ಜನೆಗೆ ತಾನೇ ನಡುಗುವ ಹೆದರಿಸುವ ಹೆದರುವ ಗದರಿಸುವ ಗದರಿಸಿಕೊಳ್ಳುವ ಬಯಸುವ ಬಾಡುವ ಬಗ್ಗಿಸುವ ಬಾಗಿಸುವ ಕುಣಿಯುವ ಕರಗಿಸುವ ಮನುಷ್ಯ.
೨೦೦೭ ರಲ್ಲಿ ಬಿಡುಗಡೆಯಾದ' ಮಾನ್ ಫ್ರಂ ದಿ ಅರ್ಥ್' ರಿಚರ್ಡ್ ಶೆಕ್ಮಾನ್ ನಿರ್ದೇಶನದ, ಜೆರೋಮ್ ಬಿಕ್ಸ್ಬಿ ಬರವಣಿಗೆಯ ಸಿನಿಮಾ
ಸಿನಿಮಾ ಶುರುವಾತಾಗುವದು ಪ್ರೊಫೆಸರ್ ಜಾನ್ ಓಲ್ಡ್ ಮ್ಯಾನ್ ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಲು ಸಿದ್ಧತೆ ನಡೆಸುತ್ತಿರುವ ದೃಶ್ಯದಿಂದ.ಅವನ ಸಹವರ್ತಿಗಳಾದ ಜೀವಶಾಸ್ತ್ರಜ್ಞ ಹ್ಯಾರಿ, ಇತಿಹಾಸದ ಪ್ರೊಫೆಸರ್ ಹಾಗೂ ಕ್ರೈಸ್ಟ್ ಧರ್ಮನಿಷ್ಠ ಎಡಿತ್, ಮಾನವಶಾಸ್ತ್ರಜ್ಞ ಡ್ಯಾನ್, ಇತಿಹಾಸಕಾರ್ತಿ ಸ್ಯಾಂಡಿ, ಮನೋವೈದ್ಯ ಡಾ।। ವಿಲ್ ಗ್ರುಬೇರ್, ಪುರಾತತ್ವಶಾಸ್ತ್ರಜ್ಞ ಆರ್ಟ್ ಹಾಗೂ ವಿಧ್ಯಾರ್ಥಿ ಲಿಂಡಾ ಬಿಳ್ಕೊಡುಗೆ ಸಮಾರಂಭಕ್ಕಾಗಿ ಜಾನ್ ಓಲ್ಡ್ ಮ್ಯಾನ್ ಅವರ ಮನೆಯಲ್ಲಿ ಸೇರಿರುತ್ತಾರೆ. ಇವರೆಲ್ಲರೂ ಜಾನ್ ಮನೆ ಬಿಟ್ಟು ಹೋಗಕೂಡದೆಂದು ಒತ್ತಾಯಿಸುತ್ತಾರೆ.
ಆದರೆ ಮನೆಬಿಟ್ಟು ಹೋಗಲು ಜಾನ್ ಕೊಡುವ ಕಾರಣ ಅವರನ್ನು ಚಕಿತಗೊಳಿಸುತ್ತದೆ. ಜಾನ್ ಹೇಳುವಂತೆ ಅವನೊಬ್ಬ ಸುಮಾರು ಹದಿನಾಲ್ಕು ಮಿಲಿಯ ವರ್ಷಗಳಿಂದ ಬದುಕಿರುವ ಇತಿಹಾಸಪೂರ್ವ ಗವಿಮಾನವ ಹಾಗೂ ತನ್ನ ಚಿರಂಜೀವತ್ವ ಸುತ್ತಲಿನವರಿಗೆ ಗೊತ್ತಾಗದಿರಲು ಪ್ರತಿ ಹತ್ತು ವರ್ಷಗಳಿಗೊಮ್ಮೆ ವಾಸ ಸ್ಥಳ ಬದಲಿಸುತ್ತಾನೆ. ಈ ಮಾತಿನಲ್ಲಿ ವಿಶ್ವಾಸವಿಲ್ಲದ ಅವನ ಸಹೋದ್ಯೋಗಿಗಳಿಗೆ ಹೇಳುತ್ತಾನೆ: ಜಾನ್ ಎರಡು ಸಾವಿರ ವರ್ಷಗಳ ಕಾಲ ಸುಮೇರಿಯನ್ ಆಗಿದ್ದ, ಆಮೇಲೆ ಬಾಬಿಲೋನಿಯನ್ ಆಗಿ ಹಮ್ಮುರಾಬಿ ಜೊತೆಗೂ ತದನಂತರ ಗೌತಮ ಬುದ್ಧನ ಅನುಯಾಯಿಯಾಗಿಯೂ ಇದ್ದ. ಜಗತ್ತಿನ ಎಲ್ಲ ಐತಿಹಾಸಿಕ ವ್ಯಕ್ತಿಗಳನ್ನು ಬಲ್ಲ ಜಾನ್ ಗೆ ಕ್ರಿಸ್ಟೊಫ಼ರ್ ಕೊಲಂಬಸ್, ವ್ಯಾನ್ ಗೋ ಆದಿಯಾಗಿ ಎಲ್ಲರೂ ಪರಿಚಿತರು.
ಎಲ್ಲರೂ ಅಪನಂಬಿಕೆಯಿಂದಲೇ ಜಾನ್ ಜೊತೆಗೆ ಮಾತು ಮುಂದುವರಿಸುತ್ತಾರೆ. ಅಲ್ಲಿದ್ದವರು ಕೇಳುವ ಪ್ರತಿ ಪ್ರಶ್ನೆಗೂ ಜಾನ್ ಕರಾರುವಕ್ಕಾಗಿ ಉತ್ತರಿಸುತ್ತಾನೆ. ನೆರೆದಿದ್ದವರ ಪ್ರಕಾರ ಜಾನ್ ಇವೆಲ್ಲವನ್ನೂ ತಿಳಿದುಕೊಂಡಿರುವದು ಬಹುಶ: ಅಧ್ಯಯನದಿಂದ. ಆದರೆ ಇದನ್ನು ಅಲ್ಲಗೆಳೆಯುವ ಜಾನ್ ವಿಜ್ಞಾನ ಹಲವಾರು ಕಸರಿತ್ತನ ಪ್ರಯೋಗದ ಮೂಲಕ ತಿಳಿದುಕೊಂಡಿರುವದನ್ನು ತಾನು ಮನುಷ್ಯರ ಜೊತೆಗೆ ಬದುಕಿ ಸ್ವಾಭಾವಿಕವಾಗಿ ತಿಳಿದುಕೊಂಡೆ ಎನ್ನುತ್ತಾನೆ. ಸಂಭಾಷಣೆ ಮುಂದುವರಿದಂತೆ ನೆರೆದಿದ್ದ ಪ್ರತಿಯೊಬ್ಬರೂ ತಮ್ಮ ತಮ್ಮ ಪರಿಣಿತಿಗನುಸಾರವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ಪಡೆಯುತ್ತಾರೆ. ಮಾತುಕತೆ ಹೀಗೆಯೇ ಸಾಗಿ ಧರ್ಮದ ವಿಚಾರಕ್ಕೆ ಬಂದಾಗ ಜಾನ್ ಹೇಳುವಂತೆ ಅವನು ಯಾವುದೇ ಧರ್ಮಕ್ಕೆ ಸೇರಿದವನಲ್ಲ ಹಾಗೂ ಸರ್ವಶಕ್ತನಾದ ಭಗವಂತ ಇದ್ದಾನೆ ಎನ್ನುವದನ್ನು ಅವನು ನಂಬದೆ ಹೋದರು ಅಂತಹದೊಂದು ಶಕ್ತಿಯಿದೆ ಎನ್ನುವದನ್ನು ಅಲ್ಲಗಳೆಯಲಾರ. ಸಿನಿಮಾ ಮುಂದುವರಿದಂತೆ ಜಾನ್ ತನ್ನ ಅಥವಾ ಮನುಷ್ಯ ಸಾಗಿ ಬಂದ ಹಾದಿಯನ್ನು ಪದರ ಪದರವಾಗಿ ಬಿಚ್ಚಿಡುತ್ತಾ ಹೋಗುತ್ತಾನೆ.
ಇಡಿ ಸಿನಿಮಾದ ಆತ್ಮ ಇರುವದು ಸಂಭಾಷಣೆಯಲ್ಲಿ ಹಾಗೂ ಅದರ ತಿರುಳಿನಲ್ಲಿ. ಮನುಷ್ಯನ ಉಗಮ, ವಿಕಾಸದ ಕುರಿತು ಅಧ್ಯಯನ ಮಾಡುವ ಎಲ್ಲ ವಿಭಾಗಗಳ ಪರಿಣಿತರನ್ನು ಸುತ್ತ ನಿಲ್ಲಿಸಿ ಜಾನ್ ಎನ್ನುವ ಗವಿಮಾನವನ ಕಾಲದಿಂದ ಬದುಕುತ್ತಿರುವ ಆಧುನಿಕ ರೂಪದ ಮನುಷ್ಯ ಉತ್ತರಿಸುವ ರೀತಿ ಅದ್ಭುತ. ಸಿನಿಮಾ ಎನ್ನುವದಕ್ಕಿಂತ 'ಮಾನ್ ಫ್ರಂ ದಿ ಅರ್ಥ್' ಒಂದು ಮಹತ್ತರವಾದ ಮಾನವತಾವಾದವಾಗಿ ಹಾಗೂ ಅತ್ಯಂತ ಅಗತ್ಯ ಸತ್ಯ ಕಾನ್ಸೆಪ್ಟ್ ಆಗಿ ಕಾಡುತ್ತದೆ.
'ವಿಶ್ವವೆಲ್ಲ ಒಂದು' ಎನ್ನುವ ಆದರ್ಶ ತತ್ವದಂತೆ ಎಲ್ಲ ಗಡಿಗಳನ್ನು ದಾಟಿ ಇಡೀ ವಿಶ್ವವನ್ನೇ ಕುರಿತು ಯೋಚಿಸುವ ಯೋಗಿ ಪ್ರಜ್ಞೆಗೆ, ಜಗತ್ತಿನ ಸಮಸ್ತರು ಕೇವಲ ಮನುಷ್ಯರಾಗಿ, ಎಲ್ಲ ಧರ್ಮವು ಮನುಷ್ಯರೆಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಸಾಧನವಾಗಿ ತೋರುತ್ತದೆ. ಸಿನಿಮಾವೊಂದು ತಾಂತ್ರಿಕವಾಗಿ, ಆಂಗಿಕವಾಗಿ ಅಲ್ಲದೆ ಕಾಡಬಲ್ಲದು. ಮನುಷ್ಯರಾಗಿ…
ಸಿನಿಮಾ: ದಿ ಮಾನ್ ಫ್ರಂ ಅರ್ಥ್ (The Man from Earth)
ಭಾಷೆ: ಇಂಗ್ಲೀಶ್
ದೇಶ: ಅಮೇರಿಕ
ನಿರ್ದೇಶನ: ರಿಚರ್ಡ್ ಶೆಕ್ಮಾನ್
ಕಥೆ: ಜೆರೋಮ್ ಬಿಕ್ಸ್ಬಿ
Final Cut:
ಸಿನಿಮಾದ ಸ್ಕ್ರೀನ್ ಪ್ಲೇ ಯನ್ನು ಜೆರೋಮ್ ಬಿಕ್ಷ್ಬಿ ಮೊದಲು ರೂಪಿಸಿದ್ದು ೧೯೬೦ ರಲ್ಲಿ ಹಾಗೂ ಅದನ್ನು ಸಂಪೂರ್ಣಗೊಳಿಸಿದ್ದು ೧೯೯೮ ರ ಏಪ್ರಿಲ್ ನಲ್ಲಿ ಮರಣಶಯ್ಯೆಯಲ್ಲಿದ್ದಾಗ.
ಇಂತಿ,
ಸಚೇತನ
*****