ಶಿವರುದ್ರಪ್ಪನವರಿಗೆ ವಂದಿಸುತ್ತಾ…
ಜೆಎಸ್ಸೆಸ್ ಎಂದೇ ಖ್ಯಾತರಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡ ಸಾರಸ್ವತ ಲೋಕದ ಅಗ್ರಪಂಕ್ತಿಯಲ್ಲಿ ನಿಲ್ಲುವ ಕವಿಜೀವ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೧೯೨೬ರ ಫೆಬ್ರವರಿ ೭ನೇ ತಾರೀಖು ಜನಿಸಿದ ಈ ಸಮನ್ವಯ ಕವಿಯ ಸಾಹಿತ್ಯಕೃಷಿ ನವೋದಯದಲ್ಲಿ ಶುರುವಾಗಿ ನವ್ಯದಲ್ಲಿ ಮುಂದುವರೆಯುತ್ತಿದೆ. ವೃತ್ತಿಯಲ್ಲಿ ಅಧ್ಯಾಪಕರಾಗಿ ಸಾವಿರಾರು ಚಿಂತನಾ ಜೀವಿಗಳನ್ನು ಹುಟ್ಟುಹಾಕಿದ ಇವರು ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರ ಪಟ್ಟಶಿಷ್ಯ. ಇದುವರೆಗೂ ಸಾಮಗಾನ, ಒಲವು-ಚೆಲುವು, ತೆರೆದಮನ, ದೀಪದ ಹೆಜ್ಜೆ, ಕಾವ್ಯಾರ್ಥ ಚಿಂತನೆ, ಕಾವ್ಯರ್ಥ ಲೋಕ, ವಿಮರ್ಶೆಯ ಪೂರ್ವಪಶ್ಚಿಮ ಒಳಗೊಂಡಂತೆ ಇನ್ನೂ ಹಲವು ಸಂಪದ್ಭರಿತ ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಭಾವಗೀತೆ ರಚನೆಯಲ್ಲಿ ವಿಶೇಷವಾಗಿ ನಿಲ್ಲುವ ಇವರಿಗೆ ಪಂಪ ಪ್ರಶಸ್ತಿ ಸೇರಿದಂತೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರಗಳು ಬಂದಿವೆ. ಗದ್ಯ, ಪದ್ಯ ಹಾಗೂ ವಿಮರ್ಶೆಯ ಲೇಖನಗಳ ಮೂಲಕ ತಮ್ಮೊಳಗಿನ ಪ್ರತಿಭೆ ಮೆರೆದಿದ್ದಾರೆ.
ಇಂತಹ ಕವಿ ಶ್ರೇಷ್ಠರು ೧೯೬೧ರಲ್ಲಿ ಹೊರತಂದ ’ಕಾರ್ತೀಕ’ ಕವನ ಸಂಕಲನದ ’ಕವಿ-ವೇದಾಂತಿ’ ಕವಿತೆಯ ಚಿತ್ರ ನಿರ್ದೇಶಕ ಎಸ್.ಆರ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ’ಮಾನಸ ಸರೋವರ’ ಚಿತ್ರದಲ್ಲಿ ದೃಶ್ಯರೂಪ ಪಡೆದದ್ದು ಖುಷಿಯ ವಿಚಾರ. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್‌ರವರ ರಾಗಸಂಯೋಜನೆಯೊಂದಿಗೆ ಡಾ|| ಪಿ.ಬಿ. ಶ್ರೀನಿವಾಸ್‌ರವರ ಕಂಠಸಿರಿಯಲ್ಲಿ ಮೂಡಿಬಂದು ಕನ್ನಡಿಗರ ಹೃದಯಗೆದ್ದ ಸತ್ಯ ಸದಾ ಜೀವಂತ.
ಪುಟ್ಟಣ್ಣನೆಂಬ ದೊಡ್ಡಣ್ಣ
ಕಾದಂಬರಿಗಳನ್ನು ಅಂತರ್ಗತ ಮಾಡಿಕೊಂಡು ಪರದೆ ಮೇಲೆ ತರುವುದರಲ್ಲಿ ಪುಟ್ಟಣ್ಣನವರು ಎತ್ತಿದಕೈ. ತಮ್ಮ ಮನೋಜ್ಞ ಸಂವೇದನೆಯ ಮೂಲಕ ಕನ್ನಡ ಚಲನಚಿತ್ರ ಜಗತ್ತನ್ನು ರಾಷ್ಟ್ರಮಟ್ಟಕ್ಕೇರಿಸಿದ ಪುಟ್ಟಣ್ಣನವರು ನವಪೀಳಿಗೆಯ ನಿರ್ದೇಶಕರಿಗೆ ದ್ರೋಣಾಚಾರ್ಯ ಇದ್ದಂತೆ. ಮಹಿಳಾ ಪ್ರಧಾನ ಕತೆಗಳತ್ತ ತೀವ್ರ ಒಲವು ಹೊಂದಿದ್ದ ಇವರು ಬದುಕಿನ ಸುದೀರ್ಘಯಾನದಲ್ಲಿ ಅಚಾನಕ್ಕಾಗಿ ಘಟಿಸಬಹುದಾದ ತಿರುವುಗಳ ಜಾಡು ಹಿಡಿದು ದೃಶ್ಯರೂಪ ಕೊಡಬಲ್ಲ ಕಲಾನಿಪುಣರು. ಇದಕ್ಕೊಂದು ಉದಾಹರಣೆಯೆಂದರೆ ’ಕವಿ-ವೇದಾಂತಿ’ ಕವಿತೆಯನ್ನು ಸಂದಭೋಚಿತವಾಗಿ ಬಳಸಿಕೊಂಡ ರೀತಿ ಹಆಗೂ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಿದ ಬುದ್ಧಿವಂತಿಕೆ.
ಮನಃಶಾಸ್ತ್ರಜ್ಞನಾಗಿದ್ದ ಸೂಕ್ಷ್ಮಮತಿ ಪಾತ್ರವೊಂದು ಬುದ್ಧಿಮಾಂದ್ಯ ಹೆಣ್ಣೊಬ್ಬಳನ್ನು ಸರಿಪಡಿಸುವ ಯತ್ನದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಮಿಡಿತಗಳನ್ನು ಸಹಿಸಿಕೊಳ್ಳುವುದು ಹೃದಯ ತಟ್ಟುತ್ತದೆ. ತನ್ನ ಅಕ್ಕನಿಗಾದ ದೌರ್ಜನ್ಯದಿಂದ ಬೇಸತ್ತು ಹುಚ್ಚಿಯಾದ ಹೆಣ್ಣಿನ ಬದುಕಿಗೊಂದು ಹೊಸ ಭಾಷ್ಯ ಬರೆಯುವಲ್ಲಿ ಮುಂದಾದ ನಾಯಕ ಬಾಳಿನ ಬಿರುಗಾಳಿಗೆ ಸಿಲುಕಿ ಚೇತರಿಸಿಕೊಳ್ಳಲಾಗದೆ ಅಸ್ವಸ್ಥನಾಗುವ ಸ್ಥಿತಿ ಧಾರುಣವಾದದ್ದು. ಇನ್ನೊಬ್ಬರ ಒಳಿತನ್ನು ಬಯಸುವ ನಾಯಕನ ಬದುಕಿನಲ್ಲಿಯೇ ವಿಧಿ ತನ್ನ ಮೇಲುಗೈ ಸಾಧಿಸಿ ಕಣ್ಣೀರ ತರುವುದು ಚಿಂತಾಜನಕ. ತಾನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುವ ಹೆಂಡತಿ ಅನಾಮಿಕನೊಬ್ಬನ ಮಗ್ಗುಲಲ್ಲಿ ಮಂಚ ಹಂಚಿಕೊಳ್ಳುವ ದೃಶ್ಯ ಕಂಡೊಡನೆ ಸೂಕ್ಷ್ಮ ಮನಶಾಸ್ತ್ರಜ್ಞನೊಬ್ಬನ ಗತಿ ಏನಾಗಬಹುದು? ಸಾವಿರ ಜಿಜ್ಞಾಸೆಗಳ ಮೂಲ ಹುಡುಕಿ ಉತ್ತರ ಕಂಡುಕೊಳ್ಳಲೆತ್ನಿಸುವ ಭಾವಜೀವಿಯೊಬ್ಬನ ಸ್ಥಿತಿ ಏನಾಗಬಹುದು? ಮಾನಸ ಸರೋವರದ ಸುಳಿಯಲ್ಲಿ ಸಿಲುಕಿ ಈಜಲರಿಯದೆ ಪರಿತಪಿಸುವ ಸನ್ನಿವೇಶಕ್ಕೆ ಸಮಾಧಾನ ನೀಡಬಲ್ಲದು ’ಕವಿ-ವೇದಾಂತಿ’ ಕವಿತಯೆ ಆತ್ಮ!
ಅಂತರ್ಮುಖಿ ಶಿವರುದ್ರಪ್ಪ
ಲೌಕಿಕ-ಅಲೌಕಿಕ ಲೋಕಗಳ ನಡು ಸೇತುವೆಯಲ್ಲಿ ನಿಂತು ಅವಲೋಕಿಸುವಂತಹ ಪರಿಕಲ್ಪನೆ ’ಕವಿ-ವೇದಾಂತಿ’ಯ ಮೂಲಧ್ಯೇಯ. ಸಮಸ್ತ ಸುಖಗಳನ್ನು ವರ್ಜಿಸಿ ಜೀವನ್ಮುಕ್ತಿಗಾಗಿ ಅಗೋಚರ ಜಗತ್ತಿನ ಮಜಲು ಏರುತ್ತ ತನ್ನ ತಾನು ಕಾಣಬಯಸುವ ವೇದಾಂತಿಯೊಬ್ಬನ ದೃಷ್ಟಿಕೋನದಲ್ಲಿ ಹೊನ್ನೆಲ್ಲ ಕೇವಲ ಹಿಡಿಮಣ್ಣು. ಆದರೆ, ಜೀವನ ಪ್ರೀತಿಯುಳ್ಳ ಕವಿಯೊಬ್ಬನ ದೃಷ್ಟಿಕೋನದಲ್ಲಿ ಮಣ್ಣೆಲ್ಲ ಹೊನ್ನು. ಇಲ್ಲಿ ಸತ್ಯಾಸತ್ಯತೆಗಳ ಒಳಹೊರಗು ಹುಡುಕುವ ಗೋಜಿಗಿಂತ ದೃಷ್ಟಿಕೋನಗಳ ಮೇಲೆ ಕಾವ್ಯದ ವಸ್ತು ಕೇಂದ್ರೀಕೃತವಾಗಿರುತ್ತದೆ.
ತನ್ನ ಮಡದಿಯ ಬಿಸಿಯುಸಿರು ಬೇರೊಬ್ಬನ ದೇಹದಲ್ಲಿ ಶಾಖ ಉತ್ಪಾದಿಸುವ ಸ್ಥಿತಿ, ತನ್ನವಳ ಕೋಮಲ ತೋಳು ಬೇರೊಬ್ಬನ ತಲೆದಿಂಬಾಗುವ ಸ್ಥಿತಿ, ತನ್ನ ಹೆಂಡತಿಯ ಕಾಮನೆಯ ವಾಂಛೆ ಬೇರೊಬ್ಬನಿಂದ ತಂಪಾಗುವ ಸ್ಥಿತಿ ಉಂಟಾದಾಗ ಮನಸಲ್ಲಿ ಕೆರಳುವ ತುಮುಲಗಳಿಗೆ ಉತ್ತರ ನೀಡಬಲ್ಲದು ಈ ಕವಿತೆಯ ಸಾಲುಗಳಲ್ಲಿರುವ ಭಾವ. ಎದೆಯ ಅಳಲನ್ನು ಪದಗಳಲ್ಲಿ ಬಂಧಿಸಲು ಕಷ್ಟ. ಆ ನೋವಿನ ತೀವ್ರತೆ ಕವಿಯೊಬ್ಬನಿಗೆ ಮಾತ್ರ ಅರ್ಥವಾಗಬಲ್ಲದು. ಆ ನಿಟ್ಟಿನಲ್ಲಿ ಶಿವರುದ್ರಪ್ಪ ಇಲ್ಲಿ ಗೆದ್ದಿದ್ದಾರೆ. ಕತೆಯ ತಿರುವಿನೊಂದಿಗೆ ಸನ್ನಿವೇಶದೊಂದಿಗೆ ಬೆಸೆದುಕೊಂಡಿರುವ ’ಕವಿ-ವೇದಾಂತಿ’ ಕವಿತೆಯನ್ನು ಬಳಸಿಕೊಂಡಿರುವ ರೀತಿಯ ಮೂಲಕ ಪುಟ್ಟಣ್ಣನವರು ಗೆದ್ದಿದ್ದಾರೆ. ಅಂತೆಯೇ ಹೆಣ್ಣಿನ ಚಂಚಲತೆಯು ವಿಭಿನ್ನ ದೃಷ್ಟಿಕೋನಗಳಲ್ಲಿ ಕಾಣುತ್ತದೆ. ’ಕವಿಯು ಕನವರಿಸಿದನು ಓ ಇವಳೆ ಚೆಲುವೆ, ಇವಳ ಜೊತೆಯಲಿ ನಾನು ಸ್ವರ್ಗವನೆ ಗೆಲ್ಲುವೆ’ ಎಂಬ ಸಾಲುಗಳು ನಾಯಕನ ಹೃದಯದ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಅಡಗಿರುವ ಆಶಾವಾದವನ್ನು ಹಾಗೂ ’ಈ ಹೆಣ್ಣು ಮಾಯೆ’ ಎಂಬ ವಾದವನ್ನು ಅಣಕ ಮಾಡುತ್ತದೆ, ದ್ವಂದ್ವದಿಂದ ಪ್ರತಿಧ್ವನಿಸುತ್ತದೆ.
ಅವಳು ಎಸಗಿದ್ದು ಅಪರಾಧ, ತಪ್ಪು ಎಂದು ಗೊತ್ತಿದ್ದರೂ ಮನ್ನಿಸುವ ಮನೋಭಾವ ಪ್ರಬುದ್ಧ ಗಂಡನಿಗೊಬ್ಬನಿಗಿರಬೇಕು ಎನ್ನುವ ಗುಟ್ಟೂ ಸಹ ಇಲ್ಲಿ ಬಯಲುಗೊಂಡಿದೆ. ಅಷ್ಟು ಮಾತ್ರವಲ್ಲದೆ ತನ್ನವಳ ಒಡನಾಟವೊಂದಿದ್ದರೆ ಸಾಕು ಸ್ವರ್ಗವನ್ನೇ ಬೇಕಾದರೂ ಗೆಲ್ಲುವೆನೆಂಬ ವಿಶ್ವಾಸದ ಜೊತೆಗೆ ಅವಳ ಮೇಲಿನ ನಿಸ್ವಾರ್ಥ ಪ್ರೀತಿ ಎಳ್ಳಷ್ಟೂ ಕಡಿಮೆಯಾಗದಿರುವುದು ಪರೋಕ್ಷವಾಗಿ ವ್ಯಕ್ತವಾಗಿದೆ ಎಂದು ಉಚ್ಚರಿಸಬಹುದು. ಹಾಗೆಯೆ ಕವಿ ಹಾಗೂ ವೇದಾಂತಿಯ ಸಿದ್ದಾಂತ ಸಮರ ಒಗಟಾಗಿಯೆ ಉಳಿದು ನಾಯಕ ಚಡಪಡಿಸುತ್ತಾನೆ. ಒಟ್ಟಾರೆಯಾಗಿ ಹೇಳುವುದಾದರೆ ಕವಿಯೊಬ್ಬನಿಗಿರುವ ಜೀವನ ಪ್ರೀತಿಗೆ ಹಾಗೂ ಕಾವ್ಯದ ಮೇಲೆ ನಿರ್ದೇಶಕನಿಗಿರುವ ಪ್ರೀತಿಗೆ ನಾವು ತಲೆಬಾಗಲೇಬೇಕು. ಒಂದು ಉತ್ತಮ ಕವಿತೆ ಒಬ್ಬ ಉತ್ತಮ ನಿರ್ದೇಶಕನಿಗೆ ಸಿಕ್ಕಿದರೆ ಕವಿತೆ ತನ್ನ ತೂಕವನ್ನು ಹೆಚ್ಚಿಸಿಕೊಳ್ಳುವುದು ಎಂಬುದಕ್ಕೆ ಇದು ಸಾಕ್ಷಿಯಾಗಬಲ್ಲದು. ಈ ಹಾಡನ್ನು ಆಸ್ವಾದಿಸುತ್ತ ತನ್ಮಯರಾಗೋಣ.
ಕವಿ-ವೇದಾಂತಿ
ವೇದಾಂತಿ ಹೇಳಿದನು:
ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
ಮಣ್ಣೆಲ್ಲ ಹೊನ್ನು!
ವೇದಾಂತಿ ಹೇಳಿದನು:
ಈ ಹೆಣ್ಣು ಮಾಯೆ;
ಕವಿಯೊಬ್ಬ ಕನವರಿಸಿದನು:
ಓ ಇವಳೆ ಚೆಲುವೆ
ಇವಳ ಜೊತೆಯಲಿ
ನಾನು ಸ್ವರ್ಗವನೆ ಗೆಲ್ಲುವೆ!
ವೇದಾಂತಿ ಹೇಳಿದನು:
ಈ ಬದುಕು ಶೂನ್ಯ;
ಕವಿನಿಂತು ಸಾರಿದನು
ಅದು ಅಲ್ಲ ಅನ್ಯ;
ಜನ್ಮಜನ್ಮದಿ ಸವಿವೆ
ನಾನೆಷ್ಟು ಧನ್ಯ!
ಕವಿಗಳೇ,ಅಪರೂಪದ ಕವಿಗಳ ಪದ್ಯವನ್ನು ಅತ್ಯದ್ಭುತ ನಿರ್ದೇಶಕ ಪುಟ್ಟಣ್ಣನವರು ತೆರೆ ಮೇಲೆ ತಂದದ್ದು ನೋಡಿದ್ದು, ಕೇಳಿದ್ದು ಮತ್ತೊಮ್ಮೆ ಕಣ್ಣ ಮುಂದೆ ತಂದು ನಿಲ್ಲಿಸಿದಿರಿ. ನಿಮ್ಮ ಲೇಖನ ತುಂಬಾ ಇಷ್ಟ ಆಯಿತು. ಅಭಿನಂದನೆಗಳು.