“ಮಾನಸ ಗುರುವಿಗೆ ನನ್ನ ನಮನ”: ಶ್ರೀ ಕೊಯಾ

” ಮನೋರಮಾ ಮನೋರಮಾ
ಮಲಗೋಬದ ಘಮ ಘಮ ”

ನಾನು ಅದುವರೆವಿಗೂ ಹೈಸ್ಕೂಲು ದಿನಗಳಲ್ಲಿ ಕೇಳಿ, ಕಲಿತ ಪದ್ಯಗಳಿಗಿಂತಲೂ ಭಿನ್ನವಾಗಿದ್ದ ಪದ್ಯ ಇದಾಗಿತ್ತು.

ಕಾಲೇಜಿನ ಮೆಟ್ಟಿಲು ಏರಿದ್ದ ದಿನಗಳವು : ಇಸವಿ ೧೯೭೬ , ದ್ವಿತೀಯ ಪಿಯುಸಿ. ನನಗೆ ನಿಸಾರ್ ಅಹಮದ್ ರವರಂತಹ ಕವಿಯ ಪರಿಚಯ ಮಾಡಿಸಿದ್ದು ಅಂದಿನ ಕನ್ನಡ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಬಸವರಾದ್ಯರು. ಅಂದಿನ ದಿನಗಳಲ್ಲಿ ತಾಲೂಕ್ ಆಗಿದ್ದ ಚಾಮರಾಜನಗರದ ಕಾಲೇಜಿನಲ್ಲಿ ಕೇವಲ ಮೂವತ್ತು ವಿದ್ಯಾರ್ಥಿಗಳ ವೃಂದಕ್ಕೆ ; ಪಂಪ , ರನ್ನ , ಕುವೆಂಪು ರವರಂತವರನ್ನು ಮನ ಮುಟ್ಟುವಂತೆ ಪಠ್ಯಯಿಸುತ್ತಿದ್ದ ಅಧ್ಯಾಪಕರು , ನಿಸಾರ್ ಅವರ ಕವನಗಳನ್ನೂ ಅಷ್ಟೇ ಗಾಢವಾಗಿ ಮನಸ್ಸಿಗೆ ನಾಟುವಂತೆ ಮಾಡಿದ್ದರು. ತರಗತಿಯ ಪ್ರತಿ ವಿದ್ಯಾರ್ಥಿಯೂ ಕವನದ ಸಾಲುಗಳನ್ನು ಗಟ್ಟಿಯಾಗಿ ಓದಿ ಅದಕ್ಕೆ ಅರ್ಥ ಹೇಳುವಂತೆ ಪ್ರೇರಿಪಿಸುತ್ತಿದರು. ಅಂದು ಮನದಲ್ಲಿ ನಿಂತ ನಿಸಾರ್ ರವರು ನನ್ನ ಮಾನಸ ಗುರುಗಳಾಗಿ ಬಿಟ್ಟರು !

ಕವಿವರ್ಯರನ್ನು ಎಂದೂ ಕಾಣದಿದ್ದ ನನಗೆ, ಅಂದು ಅಧ್ಯಾಪಕರು ಕಲಿಸಿದ್ದ ಕವನಗಳು, ಕವಿಯೇ ಹೇಳಿದಂತೆ ಇಂದಿಗೂ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ ಎಂದರೆ ಅತಿಶಯೋಕ್ತಿ ಏನಲ್ಲ ಎಂದರೆ ತಪ್ಪಾಗಲಾರದು. ನಿಸಾರ್ ರವರು ನಮ್ಮ ಮನಗಳಲ್ಲಿ ಬೇರೂರಲು ಹಲವು ಕಾರಣಗಳು ಇರಬಹುದು ; ದಿನ ನಿತ್ಯದ ಜೀವನದ ಬವಣೆಗಳನ್ನು , ರಾಜಕೀಯದ ಪುಡಾರಿತನಗಳನ್ನು , ಸಾಮಾಜಿಕ ಪಿಡುಗುಗಳನ್ನು ತಮ್ಮದೇ ಆದ ಸರಳ ರೀತಿಯಲ್ಲಿ , ಹೊಸ ಪದಗಳನ್ನು ಆವಿಷ್ಕರಿಸುತ್ತಾ , ತೀಕ್ಷ್ಣತೆಯನ್ನು ಪದಗಳಲ್ಲಿ ಸಮಾನಿಸಿಸಿ ವಿಡಂಬನಾತ್ಮಕವಾಗಿ ಕವನ ಕಟ್ಟುವ ಕಲೆ ಅವರಿಗೆ ಒಲಿದಿತ್ತು.

ಹಳ್ಳಿಗನಾದ ನನಗೆ , ಕುಳಿತಲ್ಲಿಯೇ ಬೆಂಗಳೂರಿನ ಗಾಂಧಿ ಬಜಾರನ್ನು ಪರಿಚಯಿಸಿ , ಮಲೆನಾಡಿನ ಶಿವಮೊಗ್ಗೆಯನ್ನು ಸನಿಹಿಸಿಸಿ , ದೂರದ ಅಮೇರಿಕಾವನ್ನು ಸನಿಹ ಗೊಳಿಸುವ ಅವರ ಕವನ ಶೈಲಿ ಅಚ್ಚರಿಯ ಸಂಗತಿಯಾಗಿತ್ತು. ” ಲೇಖನಿ, ಚೂರಿಗಿಂತ ಹರಿತ ” ವಷ್ಟೇ ಅಲ್ಲ , ಅದು ಚಾಟಿಯೂ ಆಗಿ ಮಾರ್ಪಡುತ್ತದೆ ಎಂದು ತಮ್ಮ ಕವನಗಳಲ್ಲಿ ಸಾಬೀತು ಪಡಿಸಿದ ಕವಿವರ್ಯರು ನಿಸಾರ್ ರು.

” ನಿಮ್ಮೊಡನಿದ್ದೂ ನಿಮ್ಮಂತಾಗದೆ ” ಎಂದು ನುಡಿಯುತ್ತಲೇ ನಮ್ಮವರಾಗಿ, ನಿತ್ಯೋತ್ಸವ ದ ಕವಿಯಾಗಿ, ಬೆಣ್ಣೆ ಕದ್ದ ಕೃಷ್ಣನನ್ನು ಕವನಿಸಿ, ಮನ ಸೂರೆ ಗೊಂಡ ಕವಿಯಲ್ಲವೆ ಅವರು.

ಅವರ , ” ವ್ಯಕ್ತಿ ಚಿತ್ರಣ ” ಗಳನ್ನು ಕಾವ್ಯ ವಾಗಿಸುವ ರೀತಿ ಓದುಗನಲ್ಲಿ ಬೆರುಗು ತರಿಸುತ್ತದೆ ; ಮಾಸ್ತಿಯವರ ಬಗೆಗೆ ಬರೆಯುತ್ತಾ ಅವರ ಸರಳ ಸಜ್ಜನಿಕೆಯನು ಕವನದಲ್ಲಿ ಬಿಂಬಿಸುತ್ತಾ, ಹನೀಫ್ ಸಾಹೇಬರು ತಾವು ಸಾಕಿದ ಎಮ್ಮೆಯಿಂದಲೆ ಅವಸಾನ ಹೊಂದಿದ್ದನ್ನು ಬಣ್ಣಿಸುವ ಪರಿ ; ಆ ವ್ಯಕ್ತಿಗಳೇ ನಮ್ಮ ಕಣ್ ಮುಂದೆ ಬಂದು ನಿಲ್ಲುವಂತೆ ಮಾಡುತ್ತದೆ. ಇನ್ನು ಅವರ ಕವನ , “ಸಹ್ಯಾದ್ರಿ ಕಾಲೇಜಿನ ಸಂಜೆ ಐದರ ಮಳೆ ” ಅಂದಿನ ನಮ್ಮಂಥ ವಿದ್ಯಾರ್ಥಿಗಳನ್ನು ಬಹಳವಾಗಿ ಸೆಳೆದ ಕವನವೇ ಸರಿ. ಅಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ನಮ್ಮವೇ ಎಂಬಂತೆ ಮನವರಿಕೆಯಾಗಿ ಕವನ ನಮಗೆ ತೀರಾ ಹತ್ತಿರವಾಗುತ್ತದೆ. ತಮ್ಮ ಹುಟ್ಟಿನೊಡನೆ ಬಂದ ಆಚಾರ ವಿಚಾರಗಳ ಜೊತೆಗೆ ಬೇರೆ ಆಚಾರ ವಿಚಾರಗಳನು ಸಹ ಮೈಗೂಡಿಸಿಕೊಂಡು ಬೆಳೆದು , ಸಮಾಜಕ್ಕೆ , ನಾಡಿಗೆ ಹಲವು ರೀತಿಯ ಮಾರ್ಪಾಡುಗಳನ್ನು ಸೂಚ್ಯವಾಗಿ ತಮ್ಮ ಕವನಗಳಲ್ಲಿ ಸೂಚಿಸುತ್ತಾ ; ‘ ಜೀವನದಲ್ಲಿ ಬರುವುದು ಮಳೆಯಂತೆ ಸಾರುವುದಿಲ್ಲ ‘ ಎಂದು ಹೇಳುತ್ತಲೇ ಕಾಲ ಗರ್ಭದಲ್ಲಿ ಲಿನವಾದ ಕವಿ ಚೇತನಕ್ಕೆ ವಂದಿಸುತ್ತಾ, ನನ್ನ ಮಾನಸ ಗುರುವಿಗೆ ಶರಣೆಂದು ಈ ಲೇಖನವನ್ನು ಮುಗಿಸುತ್ತೇನೆ.

-ಶ್ರೀ ಕೊಯಾ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x