ಮಾನಸಿಕ ಆರೋಗ್ಯಕ್ಕೆ ಬೇಕು ಮಕ್ಕಳ ಹಕ್ಕುಗಳು: ಡಾ. ವಿನಯ ಎ.ಎಸ್.


ಮಕ್ಕಳ ಶೋಷಣೆ ಹಿಂಸೆ ಮತ್ತು ದಬ್ಬಾಳಿಕೆಗೆ ಮುಖ್ಯ ಕಾರಣವೆಂದರೆ ಅವರುಗಳನ್ನು  ವ್ಯಕ್ತಿಗಳೆಂದು ಗುರುತಿಸಿ  ಅವರಿಗೂ ತಮ್ಮದೇ ಅದ ಭಾವನೆಗಳಿರುತ್ತವೆಂದು ಅರಿಯದೆ ಇರುವುದು. ತಾಯಿ ತಂದೆಯರೂ ಸೇರಿದಂತೆ ಬಹಳ ಕಡೆ ಏಟು ಸಿಟ್ಟು ಹಿಂಸೆ ಮಾನಸಿಕ ಒತ್ತಡಕ್ಕೆ ಒಳಗಾಗುವ ಅದರಿಂದ ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡ ಮಕ್ಕಳು ಒರಟಾಗಿ ಬಿಟ್ಟೂ ಅಗೌರವದಿ೦ದ, ಬದುಕಿನೆಡೆಗೆ ನಿರ್ಭಿಡೆಯಿಂದ ವರ್ತಿಸತೊಡಗುತ್ತಾರೆ. ಈ ಪರಿಸ್ಥಿಗೆ ಸಮಾಜದ ನಾವೆಲ್ಲಾ ಹೊಣೆಗಾರರು. ಮಕ್ಕಳನ್ನು ಪ್ರೀತಿ ಅನುಕಂಪ ಗೌರವದಿ೦ದ ಕಾಣುವುದು ನಮ್ಮ ಕರ್ತವ್ಯ. ಹಾಗೆಯೇ ಅವರಿಗೆ ಹಕ್ಕುಗಳ ಬಗ್ಗೆ ತಿಳಿಸಿ ಕೊಡುವುದು ನಮ್ಮ ಹೊಣೆ .

ಮಕ್ಕಳು ರಕ್ಷಿಸಲ್ಪಡುವ  ವಯಸ್ಸಿಗೆ ಸೇರುತ್ತಾರೆಂದು ತಂದೆತಾಯಿ ಮತ್ತು ಮನೆಯವರು ಸುತ್ತಲಿನ ಸಮಾಜ ತಿಳಿದುಕೊಂಡರೆ ಆಗಬಹುದಾದ ಎಷ್ಟೋ ಶೋಷಣೆ ದೌರ್ಜನ್ಯಗಳು ತಪ್ಪಿ ಹೋಗುತ್ತವೆ . ಹೆಣ್ಣು ಮಕ್ಕಳ ವಿಷಯದಲ್ಲಂತೂ ಅರಿವು ಬರುವ ಮೊದಲೇ ಗುರುತು ಇರುವ ಅಕ್ಕ ಪಕ್ಕದ ಜನರಿ೦ದ ಮನೆ ಮಂದಿಯಿಂದಲೇ ಲೈಂಗಿಕ ದೌರ್ಜನ್ಯವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ ಹಲವಾರು ರೀತಿಯ ಮಾನಸಿಕ ಮತ್ತು ದೈಹಿಕ ನೋವು ಹಿಂಸೆಗಳಿಗೆ ತುತ್ತಾಗುವ ಮಕ್ಕಳನ್ನ ಕ೦ಡಿದ್ದೇವೆ. ಇದನ್ನು ತಡೆಯಲು ಬೇಕಾದದ್ದು ಹೆತ್ತವರಿಗೆ ಅರಿವು ಮತ್ತು ಮಕ್ಕಳಿಗೆ ತಿಳುವಳಿಕೆ ಹೇಳುವ ಸಾಮರ್ಥ್ಯ. ಗಂಡು ಮಕ್ಕಳಿಗೂ ಇಂತಹಾ ಸಂಧರ್ಭಗಳು ಎದುರಾಗುವುದುಂಟು ಎದುರಿಸುವ ಮಾನಸಿಕ ದೈಹಿಕ ಶಕ್ತಿಯಿರದ ಈ ಜೀವಗಳು ಮಾನಸಿಕ ರೋಗಗಳಿಗೆ ತುತ್ತಾಗಿ ಮುಂದೆ ಸಮಾಜದಲ್ಲಿ ಹಿಂಸಾಚಾರ, ಅತ್ಯಾಚಾರ ಮಾಡುವಂಥ ಮನೋಸ್ಥಿತಿಗೆ ತಲುಪುತ್ತಾರೆ. ಈ ದ್ವೇಷ ಸ್ವಭಾವ ಹುಟ್ಟು ಹಾಕಲು ನಾವೇ ಕಾರಣರಾಗಿರುತ್ತೇವೆ. ಮನೆಯ ವರ್ತುಲದಲ್ಲಿ ಶೋಷಣೆ ನಡೆದಾಗ ಯಾರಿಗೆ ಹೇಳಬೇಕು ಎನ್ನುವ ಪ್ರಶ್ನೆ ಮಗುವಿನ ಮನಸಿನಲ್ಲಿ ಉದಯಿಸಿ ತನ್ನನ್ನು ಪ್ರೀತಿಯಿ೦ದ ಮಾತಾಡಿಸುವ ಮತ್ತು ಅರ್ಥ ಮಾಡಿಕೊಂಡು ವಿಷಯವನ್ನು ಎಲ್ಲರಿಗೂ ಹೇಳದೇ ತನ್ನ ಮರ್ಯಾದೆಯನ್ನ ಕಾಪಾಡ ಬಲ್ಲರು ಎನ್ನುವ ವಿಶ್ವಾಸ ಗಳಿಸಿಕೊಂಡ ವ್ಯಕ್ತಿಗಳಲ್ಲಿ ಮಾತ್ರ ಹೇಳಿಕೊಳ್ಳಬಲ್ಲರು. ವಿಷಯವನ್ನು ಮಾನವೆಯ ನೆಲೆಯಲ್ಲಿ  ಪೂರ್ಣವಾಗಿ ಅರ್ಥ ಮಾಡಿಕೊಂಡು ಜಾಗ ಬದಲಾವಣೆಯ ಮೂಲಕ ಅಥವಾ ಕಾನೊನಿನ ಸಹಾಯದ ಮೂಲಕ ಸಂಪೂರ್ಣ ರಕ್ಷಣೆ ಕೊಡುವ ಜವಾಬ್ಧಾರಿ ಮನೆಯವರದು . ಒಟ್ಟಿನಲ್ಲಿ ಮಕ್ಕಳಲ್ಲ್ ಸುರಕ್ಷತಾ ಭಾವ ಬೆಳೆಯುವಂತೆ ಮತ್ತು ಉಳಿಯುವಂತೆ ಮಾಡಿದರೆ ಅವರು ಸಧೃಡ ಮತ್ತು ಸ್ವಸ್ಥ ಯುವಕರಾಗುತ್ತಾರೆ.  
 
ಹೆತ್ತವರು ಮಕ್ಕಳನ್ನು ತಿದ್ದೆ ತೀಡಿ, ಅವರುಗಳ ವರ್ತನೆಯ ಬಗ್ಗೆ ಪ್ರೀತಿಯಿಂದ, ವಿಶ್ವಾಸ ಮತ್ತು ನಂಬುಗೆಯಿಂದ ಹೇಳುವುದನ್ನ ಕಡೆಗಣಿಸಿ ಮನೆಯ ಪರಿಸ್ಥಿತಿಯ ನೆಪ ಹೇಳುತ್ತಾ ದೈಹಿಕ ಶಿಕ್ಷೆಗೆ ಗುರಿ ಪಡಿಸಿದರೆ ಮತ್ತು ವಯಸ್ಸಿಗೆ ಮೀರಿದ ದುಡಿತಕ್ಕೆ ಹಚ್ಚಿದರೆ ಮಕ್ಕಳ ಮಾನಸಿಕ ಆರೋಗ್ಯ  ಶೋಚನೀಯ ಸ್ಥಿತಿಯನ್ನು ತಲುಪುತ್ತದೆ. ನಮ್ಮ ಮನೆಯೆದುರು ಒಂದು ಬಡ ಕುಟುಂಬ ವಾಸವಾಗಿತ್ತು ಸುಮಾರು ೧೦ ವರ್ಷದ ಮಗನ ಹತ್ತಿರ ಹೂವ್ವಿನ ಬುಟ್ಟಿ ಕೊಟ್ಟು ಕಳಿಸಿ ಶಾಲೆಗೆ ಹೋಗುವುದರ ಒಳಗೆ ಅಷ್ಟನ್ನೂ ಮಾರಾಟ ಮಾಡಿಕೊಂಡು ಬರದಿದ್ದರೆ, ಮನೆಯ ಹೊರಗೇ ನಿಲ್ಲಿಸಿ ತಾಯಿ ಸಿಕ್ಕಾಪಟ್ಟೆ ಹೊಡೆದು ಬಡಿದು ಮಾಡಿದ್ದನ್ನ ಕಂಡಿದ್ದೇನೆ. ಆ ಹುಡುಗನಿಗೆ ಕಾಫಿಯೂ ಸಿಗುತ್ತಿರಲಿಲ್ಲ ಶಾಲೆಯ ಮಧ್ಯಾನ್ಹದ ಊಟವೇ  ಗತಿಯಾಗಿತ್ತು. ಸಿಟಿ ಮಧ್ಯೆ ಇರುವ ಬಾಲಕನಿಗೆ ಈ ಹಿಂಸೆಯಾದರೆ ಹಳ್ಳಿಗಳ ಪಾಡೇನು ? ಕಾರು  ತೊಳೆಯಲು ಬರುವ ಟ್ರಾಫಿಕ್ ಸಿಗ್ನಲ್ ಗಳಲ್ಲಿ ವಸ್ತುಗಳ ಮಾರಾಟಕ್ಕೆ ನಿಲ್ಲುವ ಎಳೆ ಕರುಳುಗಳ ಕಣ್ಣುಗಳು ದೈನ್ಯದಿ೦ದ ಪ್ರಶ್ನಿಸುತ್ತವೆ ನಮಗೆ ಇದೇ ಬದುಕೇ ? ಎಲ್ಲರಂತೆ ಬದುಕುವ ಹಕ್ಕಿಲ್ಲವೇ ಎಂದು . ಗ್ಯಾರೇಜುಗಳಲ್ಲಿ ,ಹೋಟೆಲು ಅಂಗಡಿಗಳಲ್ಲಿ ದುಡಿವ ಕ೦ದಮ್ಮಗಳ ತುತ್ತಿನ ಊಟ ಮೀರಿದ ಅವಶ್ಯಕತೆಗಳು ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುತ್ತಾ ಇರುವ ಎಲ್ಲರನ್ನೂ ಬಿಡುಗಡೆಯಿದೆಯೇ ಎಂದು ಪ್ರಶ್ನಿಸುತ್ತದೆ . 

ಮಕ್ಕಳ ಹಕ್ಕುಗಳ ಅರಿವು ಮಕ್ಕಳಲ್ಲಿ ಮೂಡಿಸುವುದರಲ್ಲಿ ಶಾಲೆ ಮತ್ತು ಮನೆಯವರ ಕರ್ತವ್ಯ ಬಹಳವಿದೆ. ಮಕ್ಕಳಿಗೆ ಅವರವರ ಆರೋಗ್ಯದ ರಕ್ಷಣೆ ಮತ್ತು ನಿರ್ಮಲ್ಯದ ಬಗ್ಗೆ ತಿಳಿಸುವ ಸಮಯ ಮತ್ತು ತನ್ನ ಎಲ್ಲಾ ಕೆಲಸಗಳನ್ನೂ ತಾನೇ ಮಾಡಿಕೊಳ್ಳುವುದು ಮನೆಯವರಿಗೆ ನೆರವಾಗುವುದು, ಒಳ್ಳೆಯ ಮಕ್ಕಳೊಡನೆ ಬೆರೆಯುವುದು, ಶಿಸ್ತು ಪಾಲಿಸುವುದು, ಧೂಮಪಾನ, ಕುಡಿತ, ತಂಬಾಕು, ಮಾದಕ ದ್ರವ್ಯದಿ೦ದ ದೂರವಿರುವುದು . ಒಳ್ಳೆಯ ನೀತಿಪಾಠಗಳ ಮೂಲಕ ಸತ್ಪ್ರಜೆಗಳಾಗುವಂತೆ ಮಾಡುವುದು. ಇಂದಿನ ಮಕ್ಕಳು ನಾಳಿನ ಸಮಾಜ ಒಳ್ಳೆಯ ದೇಶವನ್ನ ಕಟ್ಟ ಹೊರಟ ನಮಗೆ ಮಣ್ಣಿನ ಹದವೇ ತಪ್ಪಿ ಹೋದರೆ ಮೂರ್ತಿ ಮೂಡುವುದೇನು ? ಮನೆಗಳಲ್ಲಿ ಮಾತ್ರವಲ್ಲ ಎಲ್ಲಿಯೇ ಆದರೂ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಅದನ್ನು ಪ್ರತಿಭಟಿಸಿ ಮಕ್ಕಳಿಗೆ ನ್ಯಾಯ  ಸಿಗುವಂತೆ ಮಾಡ ಬೇಕಾದ್ದು ನಮ್ಮ ಧರ್ಮ. ಉರಿವ ಬೆಂಕಿಯಿ೦ದ  ಬಾಂಡ್ಲಿಗೆ  ತಳ್ಳಿದಂತೆ ಅವರನ್ನು ಮತ್ತಷ್ಟು ಶೋಷಿತರಾಗಿಸಬಲ್ಲ ಸಂಧರ್ಬಕ್ಕೆ ಅಥವಾ ವ್ಯಕ್ತಿಗಳ ವಶಕ್ಕೆ ಕೊಡಬಾರದಷ್ಟೇ.
 
ತಾಯ್ತಂದೆಯರು ತಮ್ಮ ಮಕ್ಕಳನ್ನು ತಮ್ಮ ಹಕ್ಕು ಎಂದು ತಿಳಿದುಕೊಂಡು ತಮ್ಮ ಮನಸೋಯಿಚ್ಛೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು. ಬೆಳೆಯುವ ವಯಸ್ಸಿನಲ್ಲಿ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಅಸ್ಥಿರತಾ ಭಾವದಲ್ಲಿ ಬೆಳೆದ ಮಕ್ಕಳು ತಮ್ಮ ವಯಸ್ಕ ಜೀವನದಲ್ಲಿ ಖಿನ್ನತೆಗೆ ಒಳಗಾಗುವುದಲ್ಲದೆ ಹಲವಾರು ಬೈ ಪೋಲಾರ್ ಖಾಯಿಲೆಗಳಿಗೂ ಒಳಪಡುತ್ತಾರೆ ಎನ್ನುತ್ತದೆ ವೈದ್ಯಕೀಯ ಸಂಶೋಧನೆ. ಹಾಗೆಯೇ ಅಂಥ ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವವೂ ಇರುತ್ತದೆ. ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುವ ಅಂತಹ ಮಕ್ಕಳು ಸರಿಪಡಿಸಲಾರದಂಥ ದುಷ್ಚಟಗಳಿಗೆ ಒಳಗಾಗುತ್ತಾರೆ. ತಿಳುವಳಿಕೆ ಬೇಕಾಗಿರುವುದು  ದೊಡ್ಡವರಿಗೆ, ಅವರು ಮಾದರಿ ಮಾನವರಾದರೆ ಮಕ್ಕಳಿಗೂ ಒಳ್ಳೆಯ ವ್ಯಕ್ತಿತ್ವ ಕೊಟ್ಟು ಸಮಾಜಕ್ಕೆ ನ್ಯಾಯ ಸಲ್ಲಿಸಿಯಾರು. ಮಕ್ಕಳ ಹಕ್ಕು ದೌರ್ಜನ್ಯ ನಿಲ್ಲಿಸುವಲ್ಲಿ ಮೊದಲ ಹೆಜ್ಜೆ ನಮ್ಮ ನಮ್ಮ ಮನದಿಂದ ಹೊರಡಲಿ, ಕಣ್ತೆರೆದು ಸಮಾಜವನ್ನ ನೋಡಿದಾಗ ಕಾಣುವ ಹಲವು ಕರ್ಮಕಾಂಡಗಳನ್ನು ತಡೆಯುವಲ್ಲಿ ಸಫಲತೆ ದೊರಕೀತು. ಬರುವ ದಿನಗಳಲ್ಲಿ ಇದಕ್ಕೆ ಕೊನೆ ಬಂದೀತೆ ಎನ್ನುವುದು ಹಲವು ಮನಗಳ ಮನಗಳ ಆಶಯವಾಗಿದೆ.   

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x