ಮಾನವ ಮತ್ತು ಪ್ರಕೃತಿಯ ಅವಿನಾಭಾವ ಆಚರಣೆ ಹೋಳಿ ಹುಣ್ಣಿಮೆ: ಬೆಳ್ಳಾಲ ಗೋಪಿನಾಥ ರಾವ್

ಭಾರತ ಹಳ್ಳಿಗಳ ದೇಶ. ನಮ್ಮ ಹಳ್ಳಿಗಳಲ್ಲಿ ಹಬ್ಬ ಹರಿದಿನಗಳು ಮಾನವತೆ ಸ್ನೇಹ ಸೌಹಾರ್ದತೆಯ ಪ್ರತೀಕ.
ಅಂತಹ ಸೌಹಾರ್ದತೆಯ ಹಬ್ಬ ಈ ಹೋಳಿ ಹುಣ್ಣಿಮೆ.

ಶಿಶಿರದ ಚಳಿಗಾಲ ಮುಗಿದು ಚಿಗುರ ಚೈತ್ರದ ವಸಂತ ಋತು ಆರಂಭವಾಗುವ ಕಾಲ. ಸಕಲ ಜೀವ ರಾಶಿಗಳಲ್ಲಿ ಚೈತನ್ಯ ಚಿಲುಮೆ ಉಕ್ಕಿಸೋ ಮಾಸವಿದು. ಮಾಮರ ಚಿಗುರೊಡೆದು ಕೋಗಿಲೆಯ ದನಿ ಮೂಡುವ ಪವಿತ್ರ ಕಾಲದಲ್ಲೇ ಈ ಹೋಳಿ ಅಥವ ಹೋಲಿ ಹಬ್ಬ ಆಚರಿಸಲ್ಪಡುತ್ತದೆ.
ದಕ್ಷಿಣಕ್ಕಿಂತ ಉತ್ತರ ಭಾರತದಲ್ಲಿ ವಿಭಿನ್ನ ಚಿತ್ರ ವಿಚಿತ್ರವಾಗಿ ಆಚರಿಸೋ ಹಬ್ಬವಿದು.

ನಮ್ಮಲ್ಲಿನ ಎಲ್ಲಾ ಆಚರಣೆಗಳಿಗೂ ಸಾರ್ವತ್ರಿಕವಾಗಿ ಸಾಮಾಜಿಕ ಹಾಗೂ ಪೌರಾಣಿಕ ಐತಿಹ್ಯವಿರುವಂತೆ ಈ ಹಬ್ಬಕ್ಕೂ ಹಲವಾರಿವೆ.

ಕ್ರೂರ ತಾರಕಾಸುರನನ್ನು ಕೊಲ್ಲಲು ಯೋಗ ಸಮಾಧಿಯಲ್ಲಿದ್ದ ಶಿವನನ್ನು ಪಾರ್ವತಿಯೊಡನೆ ಸಮಾಗಮ ಹೊಂದಲು ಅಣಿ ಮಾಡುವುದಕ್ಕಾಗಿ ಕಾಮದೇವನನ್ನು ದೇವತೆಗಳು ಬೇಡಿಕೊಳ್ಳುತ್ತಾರೆ. ಕಾಮನ ಪುಷ್ಪಬಾಣದಿಂದ ಶಿವನು ಎಚ್ಚ್ರಗೊಂಡರೂ ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಬೂದಿ ಮಾಡುತ್ತಾನೆ. ಆತನ ಪತ್ನಿ ರತಿ ಶಿವನನ್ನು ಬೇಡಿಕೊಂಡಾಗ ರತಿಗೆ ಮಾತ್ರ ಶರೀರಿಯಾಗುವಂತೆ ವರವನ್ನು ಕೊಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಅಶರೀರಿಯಾಗುವ ಕಾಮನ ದಹನವಾದದ್ದು ಹುಣ್ಣಿಮೆಯಂದು ಅದಕ್ಕೇ ಈ ದಿನ ಕಾಮನ ಹುಣ್ಣಿಮೆ ಎಂದು ಪ್ರಸಿದ್ಧಿಯಾಗುತ್ತದೆ.

ಹಿರಣ್ಯ ಕಷಿಪು ತನ್ನ ಮಗ ಪ್ರಹ್ಲಾದನನ್ನು ಸುಡಲು ತಂಗಿ ಹೋಲಿಕಾಳನ್ನೇ ತಯಾರು ಮಾಡುತ್ತಾನೆ. ಹೋಲಿಕಾಳಿಗೆ ಬೆಂಕಿಯಲ್ಲಿ ಸುಡದೇ ಇರುವಂತಹ ವರವಿರುತ್ತದೆ. ಆದರೆ ಈ ಬೆಂಕಿ ಪ್ರಹ್ಲಾದನನು ಸುಡದೇ ಹೋಲಿಕಾಳನ್ನೇ ಸುಟ್ಟು ದಗ್ದ ಮಾಡಿ ಬಿಡುತ್ತದೆ. ಹೋಳಿ-ಕಾ ದಹನದ ಹುಣ್ಣಿಮೆಯಾಗುವುದು ಹೀಗೆ.

ಹೀಗೆ ಅವರವರ ಸಾಮಾಜಿಕ ಪೌರಾಣಿಕ ಐತಿಹ್ಯಕ್ಕನುಗುಣವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ನಾನು ನೋಡಿದ ಹಾಗೆ ಬಿಹಾರ ಉತ್ತರ ಪ್ರದೇಶ ಕಡೆ ಇನ್ನೊಂದು ರೀತಿಯ ಆಚರಣೆ ಜನಜನಿತವಾಗಿದೆ . ಅಲ್ಲಿ ಹೋಳಿ ಹಬ್ಬದ ದಿನ ಗಂಡಸರನ್ನು ಅಟ್ಟಾಡಿಸಿ ಹೊಡೆಯುತ್ತಾರೆ ಹೆಂಗಳೆಯರು. ಸಾಮಾನ್ಯವಾಗಿ ಒದ್ದೆ ಬಟ್ಟೆಯಲ್ಲಿ ಹೊಡೆಯುತ್ತಾರಾದರೂ ಕಟ್ಟಿಗೆ ಬಿದಿರಿಂದ ಹೊಡೆದಾಡುವ ಆಟವೂ ಇದೆ. ವಿಚಿತ ಎಂದರೆ ಬಾಕಿ ದಿನಗಳಲ್ಲಿ ಹುಲಿಯಂತಾಗೋ ಎಲ್ಲಾ ಗಂಡಸರೂ ಈ ದಿನ ಇಲಿಯಂತಾಗುವದನ್ನು ನೋಡಿದ್ದೇನೆ. ಸಾಮಾನ್ಯವಾಗಿ ಹೆಂಗಸರಿಗೆ ಸ್ವಾತಂತ್ರವಿಲ್ಲದಿರೋ ಪ್ರಾದೇಶಿಕ ಸಾಮಾಜಿಕ ಕಟ್ಟಳೆಗಳಲ್ಲೂ ಈ ಹಬ್ಬದ ಅಚರಣೆ ಅವರೆಲ್ಲರಲ್ಲಿ ಒಂದು ಹೊಸ ಆಶಾ ವಿಧಾನವನ್ನೂ ನವ ಜೀವನೋತ್ಸಾಹವನ್ನೂ ಉಕ್ಕಿಸಿದ್ದು ನೋಡಿದ್ದೇನೆ.

ಬಣ್ಣಗಳನ್ನು ಎರಚಾಡುತ್ತಾ ಜಾತಿ ಮತ ಧರ್ಮದ ಭೇಧವಿಲ್ಲದೇ ಮಕ್ಕಳು ಹಿರಿಯರು ಲಿಂಗ ಬೇಧವಿಲ್ಲದೇ ಆಚರಿಸೋ ಹಬ್ಬವಿದು. ಈ ಹಬ್ಬದ ಆಚರಣೆಯಿಂದ ಮಳೆ ಬೆಳೆ ಸಮೃದ್ಧವೆಂಬ ನಂಬಿಕೆಯೂ ಹಬ್ಬದಾಚರಣೆಗೆ ಇಂಬು ಕೊಡುತ್ತದೆ. ಮುಂದಿನ ಕೃಷಿ ಕಲಾಪಗಳಿಗೆ ಸುಡುವ ಬೂದಿಯ ಗೊಬ್ಬರವೂ ಮುಖ್ಯವೇ. ಇನ್ನು ಹಲವೆಡೆ ಈ ಬೆಂಕಿಯ ಪವಿತ್ರತೆಯೂ ಆಚರಣಾಮೂಲವಾಗಿದೆ.

ನಮ್ಮ ಮನಸ್ಸಲ್ಲಿನ ಬೇಡವಾದ ಆಶಯಗಳನ್ನು ಸುಟ್ಟು ಹಾಕಬೇಕು ಎನ್ನುವ ಸಂಕೇತವೂ ಇದರಲ್ಲಿದ್ದು ಪ್ರಕೃತಿ ಮತ್ತು ಮನುಷ್ಯನ ಸಹ ಬಾಳ್ವೆಯ ಪ್ರತೀಕವೂ ಹೌದು. ಎಲ್ಲಾ ಬಣ್ಣಗಳಿಂದ ಶೋಭಿತರಾಗಿ ಮನುಜಕುಲವೊಂದೇ ಎಂಬ ನೀತಿ ಸಾರೋ ಈ ಹೋಳೀ ಹಬ್ಬ ನಿಜವಾಗಿಯೂ ಪವಿತ್ರವೇ. ಆದರೆ ನೈಜತೆಯನ್ನು ಕೃತಿಮತೆ ಆವರಿಸೋ ಈ ಕಾಲದಲ್ಲಿ ಮನುಜನ ಸ್ವಾರ್ಥೀ ಮನೋಭಾವ ಈ ಹಬ್ಬವನ್ನೂ ಸ್ವಾರ್ಥ ಮತ್ತು ದುರಾಸೆಗೆ ಸೀಮಿತಗೊಳಿಸುತ್ತಾ ಬಂದಿರೋದೂ ಒಂದು ದುರದೃಷ್ಟ.

ಎಲ್ಲಾ ಧರ್ಮಗಳನ್ನೂ ಸಮನಾಗಿ ಕಾಣುವ ಮಿಲಿಟರಿಯಲ್ಲಿಯೂ ಈ ಹಬ್ಬವನ್ನು ತುಂಬಾನೇ ವಿಜ್ರಂಭಣೆಯಿಂದ ಆಚರಿಸುತ್ತಾರೆ.

ಹಳೆಯ ಕಟ್ಟಿಗೆ ಬೇಡವಾದ ಹಳೇ ವಸ್ತುಗಳನ್ನೆಲ್ಲ ಒಂದು ಕಡೆ ಸೇರಿಸಿ ಅದಕ್ಕೆ ಬೆಂಕಿ ಹಚ್ಚಿ ಕೆಲವೆಡೆ ಆಚರಿಸಿದರೆ ಬಣ್ಣದ ಕಾಮನನನ್ನು ಮಾಡಿ ಅದನ್ನು ಸುಡುವ ಆಚರಣೆ ಇನ್ನು ಹಲವೆಡೆ ಇದೆ.

ಬಣ್ಣದ ಹಬ್ಬ ಬಲ್ಗೇರಿಯಾ ಮಾರಿಷಸ್ ಜಪಾನ್ ಮುಂತಾದ ಕಡೆಗಳಲ್ಲೂ ಆಚರಿಸುತ್ತಾರೆ.

ನಮ್ಮ ಮನಸ್ಸಲ್ಲಿನ ಬೇಡವಾದ ಆಶಯಗಳನ್ನು ಸುಟ್ಟು ಹಾಕಬೇಕು ಎನ್ನುವ ಸಂಕೇತವೂ ಇದರಲ್ಲಿದ್ದು ಪ್ರಕೃತಿ ಮತ್ತು ಮನುಷ್ಯನ ಸಹ ಬಾಳ್ವೆಯ ಪ್ರತೀಕವೂ ಹೌದು. ಎಲ್ಲಾ ಬಣ್ಣಗಳಿಂದ ಶೋಭಿತರಾಗಿ ಮನುಜಕುಲವೊಂದೇ ಎಂಬ ನೀತಿ ಸಾರೋ ಈ ಹೋಳೀ ಹಬ್ಬ ನಿಜವಾಗಿಯೂ ಪವಿತ್ರವೇ. ಆದರೆ ನೈಜತೆಯನ್ನು ಕೃತಿಮತೆ ಆವರಿಸೋ ಈ ಕಾಲದಲ್ಲಿ ಮನುಜನ ಸ್ವಾರ್ಥೀ ಮನೋಭಾವ ಈ ಹಬ್ಬವನ್ನೂ ಸ್ವಾರ್ಥ ಮತ್ತು ದುರಾಸೆಗೆ ಸೀಮಿತಗೊಳಿಸುತ್ತಾ ಬಂದಿರೋದೂ ಒಂದು ದುರದೃಷ್ಟ.

ಬೆಳ್ಳಾಲ ಗೋಪಿನಾಥ ರಾವ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x