ಮಾನವನು ತನ್ನ ದೈನಂದಿನ ಅಗತ್ಯತೆಗಳ ಪೂರೈಕೆಗಾಗಿ ಹಲವಾರು ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲವಾಗಿ ಅಣುಶಕ್ತಿಯ ಸಂಶೋಧನೆಯಾಯಿತು. ಇದನ್ನು ಹಲವಾರು ರೂಪಗಳಿಗೆ ಪರಿವರ್ತಿಸಿ ವಿವಿಧ ರೀತಿಯಲ್ಲಿ ಬಳಸಲು ಯೋಜಿಸಲಾಯಿತು. ಮಾನವನ ಕೆಲವು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಣುಶಕ್ತಿಯು ಕಳೆದ ಹಲವು ದಶಕಗಳಿಂದ ಒಂದು ಪರ್ಯಾಯ ಶಕ್ತಿಯಾಗಿ ಉದ್ಭವಿಸಿದೆ. ಇದು ಸೂರ್ಯನಿಂದ ಪಡೆಯದಿರುವ ಏಕಮಾತ್ರ ಶಕ್ತಿಯ ರೂಪವಾಗಿದೆ. ಪರಮಾಣು ಬೀಜಗಳಲ್ಲಿ ಅಡಗಿರುವ ಬೈಜಿಕ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಿರುವುದು ಮಾನವನ ದೊಡ್ಡ ವೈಜ್ಞಾನಿಕ ಸಾಧನೆಗಳಲ್ಲಿ ಒಂದಾಗಿದೆ. ಅಣುಶಕ್ತಿಯು ಪರಮಾಣುವಿನ ಬೀಜವು ಪ್ರೋಟಾನ್ ಮತ್ತು ನ್ಯುಟ್ರಾನ್‍ಗಳನ್ನು ಒಳಗೊಂಡಿರುತ್ತದೆ. ಇವು ಪರಮಾಣು ಬೀಜದಲ್ಲಿ ಬಿಗಿಯಾಗಿ ಬಂಧಿಸಲ್ಪಟ್ಟಿರುತ್ತವೆ. ಇವುಗಳನ್ನು ಒಟ್ಟಿಗೆ ಹಿಡಿದಿರಲು ಕಾರಣವಾಗಿರುವ ಬಲವೇ ಅಣುಬಲವಾಗಿದೆ. ಈ ಪರಮಾಣು ಬೀಜದಲ್ಲಿರುವ ಶಕ್ತಿಯನ್ನು ಅಣುಶಕ್ತಿ ಅಥವಾ ಬೈಜಿಕ ಶಕ್ತಿ ಎಂದು ಕರೆಯುವರು. ಇದು ನಿಸರ್ಗದಲ್ಲಿರುವ ಅತ್ಯಂತ ಪ್ರಭಲ ಶಕ್ತಿಯ ರೂಪವಾಗಿದೆ. ಅಣುಶಕ್ತಿಯನ್ನು ಅದರ ಶಕ್ತಿ ಸಾಮಥ್ರ್ಯಗಳಿಗನುಸಾರವಾಗಿ ಹಾಗೂ ಅದರ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಬಳಸಿಕೊಂಡು ಹೋದರೆ ಮಾನವನ ಕಲ್ಯಾಣವಾಗುವುದು. “ಅಣುಶಕ್ತಿಯನ್ನು ಮಾನವನ ಕಲ್ಯಾಣಕ್ಕಾಗಿ ಬಳಸಬೇಕೆ ಹೊರತು ಮನುಕುಲದ ವಿನಾಶಕ್ಕಾಗಿ ಅಲ್ಲ” ಎಂದು ಖ್ಯಾತ ಅಣುವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾರವರು ಹೇಳಿದ್ದಾರೆ.
ಇತಿಹಾಸವನ್ನು ಒಮ್ಮೆ ಮರಳಿ ನೋಡಿದಾಗ ಪ್ರಥಮ ಬಾರಿಗೆ 1945 ಅಗಷ್ಟ 6 ರಂದು 29 ಎನೋಲಾ ಗೇ ಎಂಬ ಅಮೇರಿಕಾದ ಯುದ್ಧ ವಿಮಾನ ಜಪಾನಿನ ಹಿರೋಷಿಮಾ ನಗರದ ಮೇಲೆ ದಾಳಿಗೆ ಸಜ್ಜಾಗಿ ಸರಿಯಾಗಿ ಬೆಳಿಗ್ಗೆ 8:15 ಕ್ಕೆ ಪ್ರಪ್ರಥಮ ಅಣುಬಾಂಬನ್ನು ಹಾಕಲಾಯಿತು. ಆಗ ವಿಮಾನದ ಸಹ ಪೈಲಟ್ ಆಗಿದ್ದ ರಾಬರ್ಟ ಲೂಯಿಸ್ “My god, what have we done?” ಎಂದು ಉದ್ಘಾರ ಗೈದಿದ್ದನು. ಕ್ಷಣಮಾತ್ರದಲ್ಲಿಯೇ ಹಿರೋಷಿಮಾದ ಸಾವಿರಾರು ಜನರು ಮೃತ್ಯುದೇವತೆಯ ಅತಿಥಿಯಾದರು. ಸಾವಿರಾರು ಜನರು ಅಂಗವಿಕಲರಾದರೆ, ಹಲವರು ಜೀವಂತ ಹೆಣವಾದರು. ಅಲ್ಲದೇ ಇಂದಿಗೂ ಅಲ್ಲಿನ ಭೂಮಿಯಲ್ಲಿ ಬೆಳೆ ಬೆಳೆಯಲಾಗುತ್ತಿಲ್ಲ. ಜನಿಸುವ ಮಕ್ಕಳೂ ಕೂಡ ಅಂಗವಿಕಲರಾಗುತ್ತಿದ್ದಾರೆ. ಇದರಿಂದ ಅಣುಶಕ್ತಿಯನ್ನು ಕೇವಲ ಮಾನವ ಕಲ್ಯಾಣಕ್ಕಾಗಿ ಬಳಸಬೇಕೆಂದು ಪ್ರತಿಯೊಬ್ಬರು ಮನಗಂಡರು.
ಒಮ್ಮೆ ಮೂವರು ಯುವ ಪಂಡಿತರು ಹಾಗೂ ಒಬ್ಬ ಯುವಕ ಕಾಡಿನ ಮೂಲಕ ಹಾದು ಹೋಗುತ್ತಿರುವಾಗ ಹಾದಿಯಲ್ಲಿ ಯಾವುದೋ ಪ್ರಾಣಿಯ ಮೂಳೆಗಳು ಬಿದ್ದಿರುವುದನ್ನು ನೋಡುತ್ತಾರೆ. ಆಗ ಒಬ್ಬ ಪಂಡಿತನು ತನ್ನ ವಿದ್ಯೆಯನ್ನು ಬಳಸಿ ಅವುಗಳನ್ನು ಒಂದಕ್ಕೊಂದು ಸೇರುವಂತೆ ಮಾಡಿದನು. ಇನ್ನೊಬ್ಬ ಪಂಡಿತನು ಅದಕ್ಕೆ ಮಾಂಸ ಹಾಗೂ ಚರ್ಮವನ್ನು ತುಂಬಿಕೊಳ್ಳುವಂತೆ ಮಾಡಿದನು. ಆಗ ಅದು ಒಂದು ಸಿಂಹದ ರೂಪ ಪಡೆಯಿತು. ಮೂರನೆಯ ಪಂಡಿತನು ಅದಕ್ಕೆ ಜೀವ ತುಂಬಲು ಮುಂದಾದನು. ಆಗ ಅವರೊಂದಿಗಿದ್ದ ಯುವಕನು ಅಯ್ಯೊ ಸ್ವಾಮಿ, ಸ್ವಲ್ಪ ನಿಲ್ಲಿ! ಅದಕ್ಕೆ ಜೀವ ತುಂಬಿದರೆ ನಮ್ಮನ್ನೇ ತಿನ್ನುತ್ತದೆ ಎಂದನು. ಆಗ ಪಂಡಿತನು ಯುವಕನನ್ನು ಹೀಯಾಳಿಸಿದನು. ಅಗ ಯುವಕನು ಅಲ್ಲಿಂದ ಮುಂದೆ ನಡೆದನು. ಸ್ವಲ್ಪ ಸಮಯದ ನಂತರ ಪಂಡಿತನು ಸಿಂಹಕ್ಕೆ ಜೀವ ತುಂಬಿದಾಗ ಆ ಮೂರು ಪಂಡಿತರನ್ನು ತಿಂದು ಹಾಕಿತು. ಅದೇ ರೀತಿ ಅಣುಶಕ್ತಿಯೂ ಕೂಡ ಸಿಂಹಕ್ಕಿಂತ ಶಕ್ತಿಶಾಲಿಯಾದ ರಾಕ್ಷಸನಿದ್ದಂತೆ. ಇದರ ಬಗ್ಗೆ ಎಚ್ಚರವಿರದಿದ್ದರೆ ಎಲ್ಲವನ್ನು ನಾಶಮಾಡಬಲ್ಲದು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ರಾಷ್ಟ್ರವೂ ಪರಮಾಣು ಶಸ್ತ್ರಾಸ್ರಗಳನ್ನು ಹೊಂದುತ್ತಿವೆ. ರಾಷ್ಟ್ರ ರಕ್ಷಣೆಯ ನೆಪವೊಡ್ಡಿ ಯುದ್ಧಾಸ್ತ್ರಗಳನ್ನು ತಯಾರಿಸಲು ಎಲ್ಲ ದೇಶಗಳು ಅನಗತ್ಯ ಸ್ಪರ್ಧೆಗಿಳಿದಿವೆ. “ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ” ಎಂಬಂತೆ ಹಲವಾರು ದೇಶಗಳಲ್ಲಿ ತನ್ನ ಪ್ರಜೆಗಳಿಗೆ ಮೂಲಭೂತ ಅವಶ್ಯಕತೆಗಳ ಕೊರತೆಯಿದ್ದರೂ ಸಹ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಅಣುಬಾಂಬುಗಳನ್ನು ತಯಾರಿಸುವ ಪೈಪೋಟಿಗಿಳಿಯುತ್ತಿವೆ. ಇತ್ತೀಚಿಗೆ ಹೈಡ್ರೋಜನ್ ಬಾಂಬುಗಳ ಪ್ರಯೋಗ ನಡೆಯುತ್ತಿದೆ. ಅಲ್ಲದೇ ದಕ್ಷಿಣ ಕೋರಿಯಾ ಮತ್ತು ಉತ್ತರ ಕೋರಿಯಾ, ರಷ್ಯಾ ಮತ್ತು ಅಮೇರಿಕಾ ಹೀಗೆ ಹಲವಾರು ದೇಶಗಳ ಮಧ್ಯೆ ಬಿಕ್ಕಟ್ಟು ಅಧಿಕವಾಗುತ್ತಿದೆ.
ಅಣುಶಕ್ತಿಯ ಉಪಯೋಗಗಳು
• ಪರಮಾಣು ಸ್ಥಾವರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಅಣುಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತನೆ ಮಾಡುವಲ್ಲಿ ಬಳಸುವರು.
• ಗಣಿಗಾರಿಕೆಯ ಭೂಮಿಯಲ್ಲಿ ಅಧಿಕ ಆಳ ಹಾಗೂ ದೊಡ್ಡ ದೊಡ್ಡ ಹೆಬ್ಬಂಡೆಗಳನ್ನು ಒಡೆಯಲು ಉಪಯೋಗಿಸುವರು.
• ಅಂತರಿಕ್ಷದ ಚಾಲನಾ ಶಕ್ತಿಯಾಗಿ (ರಾಕೆಟ್ ಉಡಾವಣೆಗೆ) ಬಳಸುವರು.
• ಸಾರಿಗೆ ಮಾರ್ಗಗಳ ಕೆಲಸ ಕಾರ್ಯಗಳಲ್ಲಿ ಅಡ್ಡಿಯಾಗುವಂತಹ ಪರ್ವತಗಳನ್ನು ಸಮ ಮಾಡಲು ಹಾಗೂ ಸುರಂಗ ಮಾರ್ಗ ಕೊರೆಯಲು (ಮೆಟ್ರೊ ರೈಲು) ಬಳಸುವರು.
• ಅನವಶ್ಯಕ ಹಾಗೂ ಹಳೆಯ ಕಟ್ಟಡಗಳನ್ನು ಶೀಘ್ರವಾಗಿ ಉರುಳಿಸಲು ಇದನ್ನು ಬಳಸುವರು.
• ಫಾಸ್ಟ್ ಪ್ರೀಡರ್ ತಂತ್ರವನ್ನು ಸರಳವಾಗಿ ಉಪಯೋಗಿಸುವಲ್ಲಿ ಇದರ ಬಳಕೆ.
• ಹಲವಾರು ರೀತಿಯ ವಿಜ್ಞಾನ ತಂತ್ರಜ್ಞಾನದಲ್ಲಿ ಬಳಸುವರು.
• ವಿಜ್ಞಾನಿಗಳು ಹಲವಾರು ಸಂಶೋಧನೆಗಳಲ್ಲಿ ಬಳಸುವರು.
ಅತಿಯಾದ ಅಣುಶಕ್ತಿಯ ಬಳಕೆಯಿಂದ ವಿಕಿರಣ ಮಾಲಿನ್ಯವಾಗುವುದು ಇಂಥ ವಿಕಿರಣಗಳನ್ನು ನಾವು ಗಾಳಿಯ ಮೂಲಕ ಸೇವಿಸಿದಾಗ ಜೀವಿಗಳ ಪ್ರಾಣಕ್ಕೆ ಮೃತ್ಯುವಾಗಬಲ್ಲದು. ಅಲ್ಲದೇ ಕ್ಯಾನ್ಸರ್, ಲ್ಯುಕೇಮಿಯಾ, ಪಾಶ್ರ್ವವಾಯು, ಚರ್ಮರೋಗ, ತಲೆ ತಿರುಗುವಿಕೆ, ತೀವ್ರ ಸ್ವರೂಪದ ಜ್ವರ, ಅಲ್ಲದೇ ಹಲವಾರು ರೀತಿಯ ಭಯಂಕರ ರೋಗಗಳು ಹರಡುತ್ತವೆ. “ಅಣುಶಕ್ತಿಯೆಂಬ ದೈತ್ಯ ಶಕ್ತಿಯನ್ನು ನಾವು ಎಲ್ಲಿಯವರೆಗೆ ಯುದ್ದ ಸಾಮಗ್ರಿಗಳ ಉತ್ಪಾದನೆಗೆ ಬಳಸುತ್ತೇವೆಯೋ ಅಲ್ಲಿಯವರೆಗೆ ಮನುಕುಲದ ಕಲ್ಯಾಣವು ಕೇವಲ ಕನಸಿನ ಮಾತಾಗಿದೆ”
“ವಿಜ್ಞಾನವು ಅರಿತು ಮುಟ್ಟಿದರೆ ಹೂವು; ಮರೆತು ಮುಟ್ಟಿದರೆ ಹಾವು”ಎಂಬಂತಾಗಿದೆ. ಅಣುಶಕ್ತಿಯನ್ನು ಮಾನವನು ತನ್ನ ಕಲ್ಯಾಣಕ್ಕಾಗಿಯಾದರೂ ಬಳಸಿಕೊಳ್ಳಬಹುದು ಅಥವಾ ವಿನಾಶಕ್ಕಾದರೂ ಬಳಸಿಕೊಳ್ಳಬಹುದು. ಅಣುಶಕ್ತಿಯಿಂದ ಮಾನವನಿಗೆ ತೊಂದರೆಯಾದರೆ ನಾವು ವಿಜ್ಞಾನವಾಗಲಿ ಅಥವಾ ಅಣು ವಿಜ್ಞಾನಿಗಳನ್ನಾಗಲಿ ದೂಷಿಸುವುದು ಉಚಿತವಲ್ಲ. ಏಕೆಂದರೆ ಒಂದು ವಸ್ತುವಿನಿಂದ ಲಾಭವೂ ಇರುತ್ತದೆ ಹಾಗೂ ಹಾನಿಯೂ ಇರುತ್ತದೆ. ವಸ್ತುವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.
-ಎಸ್.ಎಚ್.ಮೊಕಾಶಿ