‘ಮಾತೆಂಬುದು ಜ್ಯೋತಿರ್ಲಿಂಗ’: ವಸುಂಧರಾ ಕದಲೂರು.

ನನ್ನ ಸ್ನೇಹಿತೆಯ ಸ್ನೇಹಿತೆ ಆಕೆ. ನನಗೂ ಒಂದೆರಡು ಬಾರಿಯ ಒಡನಾಟದಿಂದ ಪರಿಚಿತಳಾಗಿದ್ದಳು. ಕೆಲವು ದಿನಗಳ ಹಿಂದೆ ಒಂದು ಸಂಜೆ ನಾನು ಆಫೀಸು ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ‘ಕಾಫಿ ಕುಡಿಯೋಣ ಎಲ್ಲಾದರೂ ಸಿಗಲು ಸಾಧ್ಯವಾ?’ ಎಂಬ ಮೆಸೇಜು ಮಾಡಿದ್ದಳು. ನಾನು ವರ್ಷಾರಂಭದಿಂದಲೇ ಚಹಾ- ಕಾಫಿ ಸೇವನೆ ಬಿಟ್ಟಿರುವುದಾಗಿ ಆಕೆಗೆ ಗೊತ್ತಿತ್ತು. ಆದರೂ ಬೇರೆ ಏನನ್ನೋ ಫೋನಿನಲ್ಲಿ ಹೇಳಿಕೊಳ್ಳಲಾರದ್ದಕ್ಕೆ ಕಾಫಿಯ ನೆವ ತೆಗೆದು ಮಾತನಾಡಲು ಕರೆದದ್ದಿರಬಹುದೆ? ಎಂಬುದು ನನಗೆ ಅರ್ಥವಾಗಿ, ’ಸರಿ, ಬರುವೆ. ಆದರೆ ‘ಕಾಫಿ ಡೇ‘ಗೆ ಹೋಗೋಣ. ಅಲ್ಲಾದರೆ ಆರಾಮಾಗಿ ಕುಳಿತು ಸ್ವಲ್ಪ ಹೊತ್ತು ಮಾತನಾಡಬಹುದು’’ ಎಂದು ರೀಪ್ಲೇ ಮಾಡಿದೆ.

ಅತ್ತ ಕಡೆಗೆ ನನ್ನ ಮೆಸೇಜು ತಲುಪುತ್ತಲೇ ‘ಥ್ಯಾಂಕ್ಸ್’ ಎಂದು ಮರು ಮೆಸೇಜು ಕಳಿಸಿದ್ದಲ್ಲದೇ, ನನ್ನ ಹಾಗೂ ಆಕೆಯ ಆಫೀಸಿನ ಮಾರ್ಗ ಮಧ್ಯದಲ್ಲಿ ಸಿಗುವ ‘ಕಾಫೀ ಡೇ’ಯ ವಿಳಾಸ ಕಳಿಸಿ ‘ಪ್ಲೀಸ್ ಡೋಂಟ್ ಮೈಂಡ್. ಐ ವಿಲ್ ವೇಯ್ಟ್ ಫಾರ್ ಯೂ’ ಎಂದು ಭೇಟಿಯ ಜರೂರತ್ತನ್ನು ಅನೇರವಾಗಿ ತಿಳಿಸಿದಳು. ಹೌದು, ಮನ ಬಿಚ್ಚಿ ಮಾತಾಡಲು ನಗರದಲ್ಲಿ ಹಲವು ಅವಕಾಶಗಳು ಇರುವುದೇನೋ ನಿಜ. ನೇರವಾಗಿ ತಮ್ಮ ಮನೆಗೇ ಕರೆದು ಅಥವಾ ಬೇರೆಯವರ ಮನೆಗೇ ಹೋಗಿ ಮಾತನಾಡಲಾಗದ ಅನಿವಾರ್ಯವೋ ಏನೋ ಪಾರ್ಕು, ಮಾಲು, ಹೊಟೇಲು- ಕಾಫಿ ಡೇ ಮುಂತಾದವು ಬೆಂಗಳೂರಿನಂತಹ ನಿಬಿಡ ನಗರದಲ್ಲಿ ದಂಡಿ ಸಿಗುತ್ತವೆ. ಕರೋನಾ ಪೂರ್ವಕಾಲದಲ್ಲಿ ಸದಾ ಗಿಜಿಗಿಜಿಗುಡುತ್ತಿದ್ದ ಇಂತಹ ಹತ್ತಾರು ಸ್ಥಳಗಳನ್ನು ನಾನು ಕಂಡಿದ್ದೇನೆ.

ಆದರೆ ಈಗ ಸಾಂತ್ವಾನಕ್ಕೂ ಸನ್ಯಾಸದ ಕಾಲ. ಹೊರಗೆಲ್ಲೂ ಹೋಗಲಾಗದೆ ಮನೆಯೊಳಗೂ ಏಕಾಂತ ಸಿಗದೆ ಚಡಪಡಿಸುವುದು ಹಾಗೂ ಅದರಿಂದಲೇ ಖಿನ್ನತೆಗೆ ಒಳಗಾಗುತ್ತಿರುವ ಜನ ಹೆಚ್ಚಾಗುತ್ತಿದ್ದಾರೆಂದು ಹಲವು ಅಧ್ಯಯನಗಳು ಹೇಳುತ್ತಿವೆ. ಸರ್ಕಾರಿ ಹಾಗೂ ಖಾಸಗಿ ಆಪ್ತಸಹಾಯವಾಣಿಗೆ ಬರುತ್ತಿರುವ ಕರೆಗಳು ಏಕಾಂತ ಸಿಗದ ಕಾರಣಕ್ಕೇ ಹತಾಶ ಮನಸ್ಥಿತಿ ತಲುಪಿ ಖಿನ್ನತೆಗೆ ಒಳಗಾಗುತ್ತಿರುವ ಕತೆಗಳನ್ನು ಹೇಳುತ್ತಿವೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತರೆ ಹಲವಾರು ಜನರ ಆತ್ಮಹತ್ಯೆಯನ್ನು ತಡೆಯಬಹುದು ಎಂಬುದನ್ನು ತಜ್ಞರು ಒಪ್ಪುತ್ತಾರೆ. ಬಹಳ ಹಿಂದೆ ಸುಮಾರು ಎರಡು ವರ್ಷಗಳ ಹಿಂದೆ ಅವಳನ್ನು ಭೇಟಿಯಾಗಿದ್ದೊವು. ಆಗ ಅವಳು ಒಂದು ವೈಯಕ್ತಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ನಾವಿಬ್ಬರೂ ಹೇಮಾ(ಹೆಸರು ಬದಲಿಸಿದೆ)ಳನ್ನು ತುಂಬಾ ವಿಶ್ವಾಸದಿಂದ ಮಾತನಾಡಿಸಿ ಕೆಲವು ಸೂಚನೆಯೊಡನೆ ಭರವಸೆ ತುಂಬಿದ್ದೆವು.

ಈ ದಿನದ ‘ಕಾಫಿ ಡೇ‘ಯ ಭೇಟಿಯಲ್ಲಿ ನಾವು ಕಂಡ ಹೇಮಾ ಬೇರೆಯೇ ಆಗಿದ್ದಳು. ನಮ್ಮ ಅಂದಿನ ಭರವಸೆ ತುಂಬುವ ಮಾತುಗಳು ಅವಳನ್ನಿಂದು ಆತ್ಮವಿಶ್ವಾಸ ತುಂಬಿರುವ ಯಶಸ್ವೀ ಮಹಿಳೆಯನ್ನಾಗಿ ಮಾಡಿದೆ ಎಂದು ಆಕೆ ಪದೇಪದೇ ನಮಗೆ ಹೇಳಿದಳು. ಆದರೆ ಅವಳ ಯಶಸ್ಸಿನಲ್ಲಿ ಅವಳ ಅಪಾರ ಶ್ರದ್ಧೆ, ಗುರಿಯೆಡೆಗಿನ ಖಚಿತತೆ, ಜಾಣ್ಮೆ, ಪರಿಶ್ರಮದ ಪಾಲೇ ಹೆಚ್ಚೆಂದು ನಮಗೆ ಚೆನ್ನಾಗಿ ಗೊತ್ತು. ಆದರೂ ನಮ್ಮಿಬ್ಬರ ಸ್ಫೂರ್ತಿ ತುಂಬುವ ಮಾತುಗಳಿಗೇ ಆಕೆ ಅಷ್ಟು ಮಹತ್ವ ನೀಡಬೇಕಾದರೆ, ನಮ್ಮ ಮಾತಿಗಿರುವ ಶಕ್ತಿ ಅದೆಷ್ಟಿರಬಹುದು ಎಂದು ಯೋಚಿಸಿ ನಾವಿಬ್ಬರೂ ಬೆರಗಾಗುತ್ತೇವೆ. ಅಂದು ನಾವೇನಾದರೂ ಅವಳ ಯೋಜನೆ ಕೇಳಿ, ನಿರುತ್ಸಾಹದ ಮಾತುಗಳನ್ನಾಡಿದ್ದರೆ ಆಕೆಗೆ ಎಂತಹಾ ಅನ್ಯಾಯವಾಗಿರುತ್ತಿತ್ತೆಂದು ಆಗಾಗ್ಗೆ ಯೋಚಿಸಿಕೊಳ್ಳುತ್ತೇವೆ.

ಹೌದು, ಮಾತೆಂಬುದು ಭರವಸೆಯ ಬೆಳಕಾಗಬೇಕೇ ಹೊರತು ಕಿಡಿಗೇಡಿಗಳಂತೆ ಸಮಯಕ್ಕೊಂದು ಹೇಳಿಕೆ ನೀಡುತ್ತಾ ಮುಂದಿರುವವರಲ್ಲಿ ಇಲ್ಲಸಲ್ಲದ ಅಪವಾದ, ಅವಮಾನ, ಅನಾಸಕ್ತಿ, ಅನಾದರಗಳನ್ನು ಹುಟ್ಟು ಹಾಕುವುದಕ್ಕೆ ಮೂಲವಾಗಬಾರದು. ಸುಖಾಸುಮ್ಮನೆ ಹೊಗಳುವುದಕ್ಕಾಗಲೀ ಹಾಗೆಯೇ ಲಾಭಕೋರತನದ ಆಯುಧವಂತಾಗಲೀ ’ಮಾತ’ನ್ನು ಅನಾವಶ್ಯಕವಾಗಿ ದುಡಿಸಿಕೊಳ್ಳಬಾರದು. ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂಬ ಬೆಳಕಿನ ಸಾಲಿನಂತೆ, ಮಾತನಾಡಿದರೆ ನಮ್ಮ ಆಂತರ್ಯವೂ ನಮ್ಮನ್ನು ಒಪ್ಪುತ್ತದೆ. ಒಳಗೊಂದು ಹೊರಗೊಂದು ಎಂಬಂತೆ ಆಡುವ ಹುಸಿ ಮಾತು ಆ ಕ್ಷಣಕ್ಕೆ ಎದುರಿನವರನ್ನು ಮೂರ್ಖರನ್ನಾಗಿಸಬಹುದು. ಅದೇ ಸಮಯದಲ್ಲಿ ಅಂತಹ ಪೊಳ್ಳು ಮಾತುಗಳು ನಮ್ಮನ್ನೂ ಸಹ ಮೋಸಗೊಳಿಸುತ್ತಿರುತ್ತವೆ ಎಂಬುದನ್ನು ಮರೆಯಬಾರದು. ನಮ್ಮ ವ್ಯಕ್ತಿತ್ವದ ಅನಾವರಣ ನಮ್ಮ ಮಾತಿನ ವೇದಿಕೆಯಲ್ಲೇ ಆಗಿಬಿಡುತ್ತದೆ!

‘ಮಾತು ಆಡಿದರೆ ಹೋಯ್ತು,
ಮುತ್ತು ಒಡೆದರೆ ಹೋಯ್ತು’
ಗಾದೆಯು ಮಾತಿನ ಮೌಲ್ಯವನ್ನೇ ಹೇಳುತ್ತದೆ.

ಹಾಗೆಯೇ
‘ಮಾತು ಮನೆ ಕೆಡಿಸಿತು
ತೂತು ಒಲೆ ಕೆಡಿಸಿತು’
ಎಂಬುದೂ ಸಹ ಮಾತಿನ ಮಹತ್ತನ್ನು ಸಾರುತ್ತದೆ.

ಬಸವಣ್ಣನವರ ವಚನ,

“ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಪಟಿಕದ ಶಲಾಕೆಯಂತಿಕಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದರೆ
ನಮ್ಮ ಕೂಡಲ ಸಂಗಮದೇವ ಎಂತೊಲಿವನಯ್ಯಾ?”

ಮಾತಿನ (ನುಡಿಯ) ಸಾರ್ವಕಾಲಿಕ ಮಹತ್ತನ್ನು ತಿಳಿಸಿಕೊಡುವಂತಿರುವ ಈ ವಚನ ನಮ್ಮ ನಾಡಿನ ಜನರೆಲ್ಲರ ನಾಲಗೆಗಳ ಮೇಲೆ ನಲಿಯಬೇಕು. ಹಾಗೆಯೇ ಆಚರಣೆಗೆ ಬರಬೇಕು.

ಇದೇ ವಚನಕ್ಕೆ ಪೂರಕವಾಗಿ ಮತ್ತೊಂದು ವಚನವಿದೆ.

“ ….ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ…..”
ಇದರ ಅಂತರಾರ್ಥ ಅರಿತು ನಡೆದರೆ ಬಹುಶಃ ಯಾವ ಆಪ್ತಸಮಾಲೋಚನೆಯೂ ಬೇಕಾಗಲಾರದೇನೋ…!

ಹಾಗಾಗಿ, ಮಾತಿನ ಮಹತ್ವ ಅರಿಯೋಣ. ಅರಿತು ಆಡೋಣ. ಆಡಿದಂತೆ ನಡೆಯೋಣ.

ವಸುಂಧರಾ ಕದಲೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x