ಪಂಜು-ವಿಶೇಷ

ಮಾತೃ ಭಾಷೆಗೆ ಸಿಕ್ಕ ಮನ್ನಣೆ

 

ಹಚ್ಚೇವು ಕನ್ನಡದ ದೀಪ  ಕರು ನಾಡ  ದೀಪ 

ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ l 

          ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದ ನನ್ನ ಹಳ್ಳಿ ಬಿಟ್ಟು ಈ ಮರುಭೂಮಿಗೆ ಬಂದು ಇಳಿದಾಗ ಅಸಾಧ್ಯ ಭಯ ಇತ್ತು. ದೇವರೇ! ಹೇಗೆ ನಾನು ಬದುಕಿ ಉಳಿದೇನಾ ಅಂತ. ಆದರೆ ನಾನು ಇದ್ದ ಜಾಗ ತುಂಬಾ ಸುರಕ್ಷಿತವಾಗಿತ್ತು. ನನ್ನ ಬಹು ಮಹಡಿ ಕಟ್ಟಡದಲ್ಲಿ ಹಾಗೂ ಸುತ್ತಲೂ ಎಲ್ಲವೂ ಇತ್ತು. ಕ್ಲಿನಿಕ್, ಔಷಧಾಲಯ (೨೪x ೭) ಸೂಪರ್ ಮಾರ್ಕೆಟ್, ಅದೂ ಒಂದಲ್ಲ ೪ ದಿಕ್ಕುಗಳಲ್ಲಿ ೪ ಅಂದಂತೆ ಇತ್ತು. ಅದರಲ್ಲೂ  ಒಂದು (೨೪x ೭) ಹೈಪರ್ ಮಾರ್ಕೆಟ್, ಒಂದು ಪುಟ್ಟ ಪಾರ್ಕು ಜೀವನ ನಾನೆಣಿಸಿದಷ್ಟು ದುಸ್ತರವಾಗಿರಲಿಲ್ಲ.

            ಈ ನಡುವೆ ೩ ವರ್ಷ ಕಳೆದುದೂ ಅರಿವಿಗೆ ಬರಲಿಲ್ಲ. ಮನೆ ಬದಲಾಯಿಸಿದರೂ ಅದೇ ಏರಿಯಾದ ಪಕ್ಕದ ಕಟ್ಟಡಕ್ಕೆ ಹಾರಿದ್ದೆ. ನಂಗೆ ಈ ಸೂಪರ್ ಮಾರ್ಕೆಟ್ ಬೆಲೆ ಗೊತ್ತಾಗಿದ್ದೇ ಇತ್ತೀಚಿಗೆ! ಅಬ್ಬಾ!! ಅನಿವಾರ್ಯ ಕಾರಣದಿಂದ ಮನೆ ಬದಲಾಯಿಸ ಬೇಕಾದಾಗ ಮತ್ತೇನೂ ಬಿಟ್ಟು ಬರೋದು ಕಷ್ಟ ಆಗ್ಲಿಲ್ಲ, Almaya (೨೪x ೭) ತುಂಬಾ ಕಾಡಿತ್ತು. ಒಂದು ತಿಂಗಳೂ ಮಿಕ್ಕಿ ಮನೆ ಶೋಧ ಮಾಡಿದ್ದೆ ಮಾಡಿದ್ದು. ಎಲ್ಲಾ ಸರಿ ಇದ್ದರೂ ನಂದು  ಒಂದೇ ತಕರಾರು 'ಸೂಪರ್ ಮಾರ್ಕೆಟ್ ಇಲ್ಲಾ ಏನು ಮಾಡಲಿ' ಆದರೆ ಮನೆಯ ಸುತ್ತಲ ಪರಿಸರ ತುಂಬಾ ಹಿಡಿಸಿತ್ತು. ದೂರ ಬೆಟ್ಟದ ಮೇಲೆ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವರಾಶಿ ಹಾಸಿರ ಬೇಕು – ಮನೆ ಸುತ್ತ ಹೂವಿನ ರಾಶಿಯೇನೋ ಹಾಸಿದೆ ಆದರೆ ನನ್ನ almaya? ಅಂತೂ ಕೊನೆಗೆ ಇಲ್ಲದ ಮನಸ್ಸಿಂದ ಡಿಸ್ಕವರಿ ಗಾರ್ಡನ್ ಗೆ ಬಂದೆ.

          ಒಂದು ಸೂಪರ್ ಮಾರ್ಕೆಟ್  ಬೇಕಾದರೆ ೪-೮ ಕಿ.ಮೀ .ಹೋಗಬೇಕು. ಇದುತಿಳಿದು ಒಂದಷ್ಟು ಬೇಳೆ, ಕಾಳು, ಅಕ್ಕಿ, ಎಲ್ಲಾ ಸಾಮಾನು ಜಾಸ್ತಿಯೇ ತಂದು ಸಂಗ್ರಹಿಸಿ ತಂದೆ. ಅಂತೂ ಸಾಮಾನು ಮೂಟೆ ಕಟ್ಟಿ ಇಟ್ಟಿದ್ದೂ  ಆಯಿತು. ಮಾರನೇ ದಿನ ಬೆಳಗ್ಗಿಂದ ಸಾಮಾನು ಸಾಗಿಸುವ ಗಲಾಟೆ, ಸಾಮಾನು ಏನೋ  ಸರಿಯಾಗಿ ಜೋಡಿಸಿ ಇಟ್ಟೆ. ಮುಖ್ಯವಾದ ನೀರಿನ ಬಾಟಲ್ ಮೊದಲ ಸಲ ಸಾಮಾನು ಲೋಡ್ ಮಾಡೋವಾಗ ಹಾಕಲು ಮರೆತೆ. ಹೊಸ ಮನೆ ಮುಟ್ಟಿದಾಗ ನೆನಪಾಯಿತು ಬಿರು ಬಿಸಿಲಿನ ಝಳಕ್ಕೆ, ನೀರಡಿಕೆ ಕುಡಿಯಲು ನೀರಿನ ಬಾಟಲ್ ಇಲ್ಲ, ತೆಗೆದು ಕೊಳ್ಳಲು ಒಂದು ಸೂಪರ್ ಮಾರ್ಕೆಟ್, ಗ್ರೋಸೆರಿ (ಕಿರಾಣಿ ಅಂಗಡಿ) ಕೂಡಾ ಇಲ್ಲ. ನನ್ನ ಪತಿರಾಯನಿಗೆ ಹೇಳೋಣ ಅಂದ್ರೆ ವಾಪಾಸ್ ಮತ್ತೆ ಸಾಮಾನು ಲೋಡ್ ಮಾಡೋಕೆ ಹೋಗಿಯಾಗಿತ್ತು. ನಂಗೆ ಏನೂ ತೋಚಲಿಲ್ಲ, ಕೊನೆಗೆ ನನ್ನ ಆತ್ಮೀಯ ಗೆಳೆಯನಿಗೆ ಫೋನ್ ಮಾಡಿ ಒಂದು ೩-೪ ಬಾಟಲ್ ನೀರು ತೊಗೊಂಡು ಕೂಡಲೇ ನನ್ನ ಮನೆಗೆ ಬಾ ಅಂದೆ ಆ ದಿನ ರಜ ದಿನ ಹೀಗಾಗಿ ಬದುಕಿ ಉಳಿದೆ. ಒಳ್ಳೆ ಹುಡುಗ ೧೦ ನಿಮಿಷದಲ್ಲಿ ನೀರಿನೊಂದಿಗೆ ಬಂದ. ಅಂತೂ ಒಮ್ಮೆಗೆ ಪಾರಾದೆ. 

            ನಂತರದ ದಿನಗಳಲ್ಲಿ ಅತೀ ಮುತುವರ್ಜಿ ವಹಿಸಿ ಸಾಮಾನು ಪಟ್ಟಿ ಮಾಡಿ ಕೊಳ್ಳಬೇಕು. ನನ್ನ ಹುಟ್ಟಾ ಸೋಮಾರಿತನವನ್ನು ಬೇರು ಸಮೇತ ಕೀಳಬೇಕು ಎಂದು ನಿರ್ಧರಿಸಿದ್ದೂ ಆಯಿತು. ಇಷ್ಟೆಲ್ಲಾ ಆದಾಗ ನಾನು ಇನ್ನೊಂದು ಆವಾಂತರ ಮಾಡಿಕೊಂಡಿದ್ದೆ. ಹೊಸ ಮನೆ ಅಂತ ಸಂಭ್ರಮದಲ್ಲಿ ಹೊಸ ಪಾತ್ರೆ ಖರೀದಿ ಮಾಡಿದ್ದೆ. ಹಾಲು ಕೊನೆಗೆ ಕೊಂಡರೆ ಆಯಿತು ಅಂತ ಬಿಟ್ಟಿದ್ದೆ. ಅದು ಕೊನೆಗೆ ಮರೆತೇ ಹೋಗಿತ್ತು. ಈ ಡಿಸ್ಕವರಿ ಗಾರ್ಡನ್ ನಲ್ಲಿ ಸೂಪರ್ ಮಾರ್ಕೆಟ್ ಗೆ ಫೋನ್ ಮಾಡಿದ್ರೆ ಫ್ರೀ ಡೆಲಿವರಿ ಪದ್ಧತಿ ಇತ್ತು ಅಂತ ಹಲವು ಜನ ಸ್ನೇಹಿತರು ಹೇಳಿದ್ರು. ಆದರೆ ನಮಗೆ ಯಾವ ದೂರ ವಾಣಿ ಸಂಖ್ಯೆ ತಿಳಿದಿರಲಿಲ್ಲ. ಸ್ನೇಹಿತರಿಗೆ ಫೋನ್ ಮಾಡಿದ್ರೆ ಫೋನ್ ಗೂ ಪ್ರತ್ತ್ಯುತ್ತರ ಇಲ್ಲ. ಒಂದು ೫ ದಿರಹಂ ಹಾಲಿಗೆ ಮತ್ತೆ ೨ ದಿರಹಂ, ಒಂದಷ್ಟು ಹೊತ್ತು ಹಾಳು  ಮಾಡುವಷ್ಟು ವ್ಯವಧಾನ ಇರ್ಲಿಲ್ಲ. 

ಒಟ್ಟಾರೆ ನಾವಿಬ್ಬರೂ ಅನ್ಯ ಗ್ರಹ ಪ್ರವೇಶಿಸಿದ ಜೀವಿಗಳಂತೆ ಆಗಿದ್ದೆವು! ಏನು ಬೇಕಿದ್ದರೂ ಕೇಳಿ ತಿಳಿದುಕೊಳ್ಳಬೇಕಿತ್ತು. ನೋಡೋಣ ಬಿಲ್ಡಿಂಗ್ ಸೆಕ್ಯೂರಿಟಿಯವನಿಗೆ ಏನಾದರೂ ಗೊತ್ತಾ? ಅಂತ ಕೇಳೋಣವೆಂದು ಅವನ ಬಳಿ  ಹೋದೆವು. ಅವನು "ನೀವು ಇಲ್ಲೇ ಇರಿ, ನಿಮಗೆ ಏನು ಬೇಕು? ನಾನು ತಂದು ಕೊಡುವೆ" ಎಂದು ಹೇಳಿದ. ಸರಿ  ಎಂದು ತಲೆ ಆಡಿಸಿ 1 ltr ಹಾಲು ಬೇಕು ಎಂದು ಹೇಳಿದರು ನನ್ ಪತಿರಾಯ! ಪಕ್ಕದ ಬಿಲ್ಡಿಂಗ್ ನಿಂದ ಹಾಲು ತಂದು ಕೊಟ್ಟ. ಆ  ಹಾಲಿನ ಜೊತೆಗೆ ಒಂದು ನಂಬರ್ ಕೂಡ ಕೊಟ್ಟು ಹೇಳಿದ "ಇನ್ನು ಏನಾದರೂ ಬೇಕಿದ್ದರೆ ಈ ನಂಬರ್ ಗೆ ಫೋನ್ ಮಾಡಿ ಹೇಳಿ ಮನೆಗೆ ಮುಟ್ಟಿಸುತ್ತಾನೆ"ಅಂದ. ಅಷ್ಟು ಹೊತ್ತು ತೆಪ್ಪಗೆ ಇದ್ದ ನಾನು 'ಯಾಕೆ ನಾವು ಅಲ್ಲಿಗೆ ಹೋಗ ಬಾರದ?' ಅಂದೆ. "ಇಲ್ಲ ನೀವು ಅಲ್ಲಿಗೆ ಹೋಗುವಂತೆ ಇಲ್ಲ, ಅದು ಕೇವಲ ಮೈದಾನ್ ಗುಂಪಿನ ಉದ್ಯೋಗಸ್ತರಿಗೆ ಮಾತ್ರ ಅಲ್ಲಿ ಬೇರೆ ಯಾರಿಗೂ ಪವೇಶವಿಲ್ಲ ಅಂದ ಸರಿ ಎಂದು ಸುಮ್ಮನಾದೆ.

           ಈ ಘಟನೆಯ ಬಳಿಕ ಪ್ರತೀದಿನ ನಾಳೆಗೆ ಏನು ಬೇಕು, ಅದರ ಆಚೆಗೆ ಏನು ಬೇಕು ಎಂದು ನೋಡಿ ಕೊಂಡು ಆಫೀಸ್ ನಿಂದ ಮನೆಗೆ ಬರುವಾಗಲೇ ತರುವುದನ್ನು ಅಭ್ಯಾಸ ಮಾಡಿ ಕೊಂಡೆ. ಎಲ್ಲಾ ಸರಿಯಾಗೇ ನಿಭಾಯಿಸ್ತಾ  ಇದ್ದೆ. ಆದರೆ ಈ ಮೊಸರು ಮಜ್ಜಿಗೆ ವಿಷಯ ಮಾತ್ರ ಅದೇಕೋ ನನ್ನ ಪ್ರತಿ ಬಾರಿ ಲೆಕ್ಕಾಚಾರ ತಪ್ಪಿಸುತ್ತಿತ್ತು. ಕಾರಣ ಇಷ್ಟೇ ನಾನು ಮೊಸರು ಮಜ್ಜಿಗೆ ಪ್ರಿಯೆ! ಬಿಸಿಲ ಝಳಕ್ಕೆ ನಾನು ಮೊರೆ ಹೋಗುತ್ತಿದ್ದುದೇ ನೀನು ಮಜ್ಜಿಗೆ, ಮಸಾಲ ಮಜ್ಜಿಗೆಗೆ ..

          ಹಲವು ಬಾರಿ ಕರೆ ಮಾಡಿ ಮಜ್ಜಿಗೆ ಮಾತ್ರ ತರಿಸಿಕೊಂಡಿದ್ದೆ ಆದರೆ ನನ್ನ ಕೆಟ್ಟ ಕುತೂಹಲ ಒಮ್ಮೆ ಆ ಮಿನಿ ಮಾರ್ಟ್ ನುಗ್ಗಬೇಕು, ಅಲ್ಲೇನೆಲ್ಲಾ ದೊರಕುತ್ತದೆ ಎಂದು ನೋಡಿ ತಿಳಿದು ಕೊಳ್ಳ ಬೇಕು ಎಂಬ ಕೌತುಕ ಇದ್ದೆ ಇತ್ತು. ಒಂದು ದಿನ ನನ್ನ ಪತಿರಾಯನನ್ನು ಕಾಡಿಸಿ ಪೀಡಿಸಿ "ನಂಗೆ ಅಲ್ಲಿ ಏನೆಲ್ಲಾ ಇದೆ ಎಂದು ತಿಳಿದುಕೊಳ್ಳಬೇಕು ಎಂದೆ. ಅಬ್ಬಾ !! ಆತನೋ ಏನು ಬೇಕು ಕರೆ ಮಾಡಿ ನನ್ನ ಕೇಳು ತಂದು ಕೊಡುವೆ ಅನ್ನೋದೇ? ನಂಗೆ ಇದು ತೀರಾ ಕೋಪ ಬರಿಸಿತ್ತು. ಹಿಂದೊಮ್ಮೆ ಕ್ಯಾರೆಟ್ ಖೀರು ಮಾಡಬೇಕು ೧ ಲೀಟರ್ ಹಾಲು ಬೇಕು ಅಂದಿದ್ದೆ, ಈ ಪುಣ್ಯಾತ್ಮ ತಂದಿದ್ದು ಮಜ್ಜಿಗೆ! ಮತ್ತೊಮ್ಮೆ ತಂಬುಳಿ (ಮಜ್ಜಿಗೆ ಹುಳಿ) ಮಾಡೋಕೆ ಮಜ್ಜಿಗೆ/ಮೊಸರು ಬೇಕು ಅಂದಿದ್ದೆ ಎಲ್ಲಾ ತಯಾರಿಸಿ ಮಜ್ಜಿಗೆ ಹಾಕೋಣ ಏನು ನೋಡುತ್ತೇನೆ ಅಲ್ಲಿ ನಂಗೆ ಸಿಕ್ಕಿದ್ದು ಹಾಲು!. ಅಬ್ಬಾ!!!! ಪುಣ್ಯಾತ್ಮ ನಿನ್ನ ನಂಬಿದರೆ ಕಥೆ ಕೈಲಾಸ ಅದೆಲ್ಲಾ ಆಗಲ್ಲ, ಸುಮ್ಮನೆ ಈಗ ನನ್ನ ಅಲ್ಲಿ ಒಳಗೆ ಕರೆದು ಕೊಂದು ಹೋಗು ಅಂದೆ. ಅಂತೂ ನನ್ನ ಕಾಟ ತಾಳಲಾರದೆ ಕರೆದು ಕೊಂಡು ಹೋದ. ಆ ಸಮಯದಲ್ಲಿ ಬಿಲ್ಡಿಂಗ್ ಸೆಕ್ಯೂರಿಟಿ ಯಾವನು ಇರಲಿಲ್ಲ ಹೀಗಾಗಿ ಲೀಲಾ ಜಾಲವಾಗಿ ಮಿನಿ ಮಾರ್ಟ್ ಒಳ ಹೊಕ್ಕೆ!

           ಒಳಹೊಕ್ಕ ಕೂಡಲೇ ಬೇಗಬೇಗ ಏನೆಲ್ಲಾ ಇದೆ ಎಂದು ನೋಡಿ ಮನಃ ಪಟಲ ದಲ್ಲಿ ನಮೂದಿಸುತ್ತಿದ್ದೆ. ಅಂದೇಕೋ ಪ್ರಾಥಮಿಕ ಶಾಲಾದಿನಗಳಲ್ಲಿ 'ಸ್ಮರಣ ಶಕ್ತಿ' ಸ್ಪರ್ಧೆಗೆ ಬಿಟ್ಟ ಅನುಭವ. ಇದ್ದ ಅಲ್ಪ ಕಾಲದಲ್ಲಿ ಏನೆಲ್ಲಾ ಇದೆ ಎಂದು ನಾನು ಶಾಶ್ವತವಾಗಿ ದಾಖಲೆ ಮಾಡಿ ಕೊಳ್ಳಬೇಕಿತ್ತು. ಇಷ್ಟಾದಾಗ ಸಾಕು, ಸಾಕು ಎಲ್ಲಾ ಸಾಮಾನು ಜಾಲಾಡಿದ್ದು, ಅಧ್ವಾನ ತದ್ವಾನ ಮಾಡಿದ್ದು ಏನು ಬೇಕೋ ಅದನ್ನ ಎತ್ತಿಕೊಂಡು ನಡೆ ಎಂದು ಸಂದೇಶ ಬಂತು. ನಾನು ಅಗತ್ಯಕ್ಕೆ ಬೇಕಾದರೆ ಏನಾದರೂ ಔಷಧಿ  ಇದೆಯೇ? ಮನೆ ಮದ್ದಿಗೆ ಬೇಕಾದ ವಸ್ತುಗಳು ಇವೆಯೇ ಎಂದು ಹುಡುಕಾಡುತ್ತಿದ್ದೆ. ಈತನ ಅವಸರ ನಂಗೆ ಸಿಕ್ಕಾಪಟ್ಟೆ ಕೋಪ ತರಿಸಿತ್ತು. ಏನೀಗ ಅವಸರ ಏನು ? ನಿಮಗೆ ಮನೆಗೆ ಹೋಗಿ ೫೦ ನೆಂಟರಿಗೆ ಅಡುಗೆ ಮಾಡಲು ಇದೆಯೇ ? ಎಂದು ನನ್ನ ಮಾತೃ ಭಾಷೆ ತುಳುವಿನಲ್ಲಿ ಸ್ವಲ್ಪ ಜೋರಾಗಿಯೇ ಅಬ್ಬರಿಸಿದೆ. 

         ಆ ಮಿನಿ ಮಾರ್ಟ್ ನಲ್ಲಿ ಬೇರೆ ಯಾರೂ ಗಿರಾಕಿಗಳಿಲ್ಲದ ಕಾರಣ ಅಂಗಡಿಯಾತನ ಗಮನ ನನ್ನಲ್ಲಿಗೆ  ಹರಿಯಿತು. ಆತ ಮಲಯಾಳಂ  ಶೈಲಿಯ  ಕನ್ನಡದಲ್ಲಿ ತೊದಲಿ ತೊದಲಿ ನೀವು ಮಂಗಳೂರಿನವರಾ ? ಎಂದ. ನಾನು ಸ್ವಲ್ಪ ಕಸಿವಿಸಿ ಗೊಂಡೆ. ನನ್ನ ಪತಿ 'ನಾವು ಉಡುಪಿಯವರು ತಾವು ಎಲ್ಲಿಯವರು' ಎಂದು ಕನ್ನಡದಲ್ಲಿ ಕೇಳಿದಾಗ "ನಾನು  ಕಾಸರಗೋಡಿನವನು ನಂಗೆ ಸರಿ ತುಳು ಬರೋಲ್ಲ, ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ" ಅಂದ ಅಷ್ಟಾದಾಗ ನನ್ನ ಮಿನಿ ಮಾರ್ಟ್ ನ ಕಿರು ಸಮೀಕ್ಷೆ ಮುಗಿದಿತ್ತು. ಬೇಕಿದ್ದ ಮೊಸರು ಇನ್ನಿತರ ಸಾಮಾನುಗಳನ್ನು ತೆಗೆದು ಕೊಂದು ಕೌಂಟರ್ ಗೆ ಧಾವಿಸಿದ್ದೆ, ನಿಗದಿತ ಬಿಲ್ ಕೊಟ್ಟು ಅಲ್ಲಿಂದ ಧನ್ಯತಾಭಾವದಿಂದ ಹೊರ ಬಿದ್ದೆ.

            ದಿನ ಕಳೆದಂತೆ ನನ್ನ ನೆನಪಿನ ಸಾಮರ್ಥ್ಯವನ್ನು ವೃದ್ದಿಸಿಕೊಂಡು ಆದಷ್ಟು ಆ ಮಿನಿ ಮಾರ್ಟ್ ಗೆ ಫೋನ್ ಮಾಡೋದೇ ಬಿಟ್ಟು ಬಿಟ್ಟಿದ್ದೆ. ಹೀಗಿರುವಾಗ ನಾನು ಭಾರತಕ್ಕೆ ಬಂದು ೯ ದಿನ ಕಳೆದು ನನ್ನ ಗೂಡಿಗೆ ಹಿಂತಿರುಗಿದ್ದೆ. ಭಾರತದಿಂದ ವಾಪಸು ಬರೋವಾಗ ಸುಮಾರೆಲ್ಲ ಸಾಮಾನುಗಳನ್ನೂ ನೆನಪಿಸಿ ಕೊಂಡು ಹಲವು ಕಾಯಿ ಪಲ್ಲೆ, ಅಪರೂಪದ ಸೊಪ್ಪುಗಳನ್ನೆಲ್ಲಾ ಹೊತ್ತು ತಂದೆ. ಆ ವಿಮಾನ ಯಾನವೇ ನಂಗೆ ಹಿಂಸೆ ಮೊದಲೆಲ್ಲ ಸರಿ ಇರುತ್ತಾ ಇದ್ದೆ ೨೦೧೦ ರ ಮಂಗಳೂರು ವಿಮಾನ ದುರಂತದ ಬಳಿಕ ನನ್ನ ಮನದಲ್ಲಿ Flight Phobia ಭದ್ರವಾಗಿ ಕೂತಿತ್ತು. ಸಾಲದ್ದಕ್ಕೆ ರಾತ್ರಿ ಪ್ರಯಾಣ ಅಂದ ಮೇಲೆ ಕೇಳಬೇಕಾ ! ಸಂಗೀತ, ಪುಸ್ತಕ ಎಲ್ಲ ಜೊತೆಗೆ ಇದ್ದರೂ ನಾನು ಮಾತ್ರ ಸದಾ ಚಡಪಡಿಸುತ್ತಾ ಪಕ್ಕದದಲ್ಲಿ ಕೂತಿದ್ದ ನನ್ನ ಪತಿಗೆ ಅಸಾಧ್ಯ ಕಾಡಿದ್ದೆ. ಅಂತೂ ಬೆಳಗ್ಗಿನ ಜಾವ ೩ ಗಂಟೆಗೆ ಮನೆ ತಲುಪಿ ಮಲಗಿ ಬಿಟ್ಟೆ. ೧೧ ಗಂಟೆ ಮೆಲ್ಲ ಎದ್ದೆ, ಒಂದು ಉಪ್ಪಿಟ್ಟು ಮಾಡಿ ತಿನ್ನೋಣ ವೆಂದರೆ ಒಂದು ಟೊಮೇಟೊ ಕಾಯಿಮೆಣಸು ಶುಂಠಿ  ಕೊತ್ತಂಬರಿ ಸೊಪ್ಪು ಒಂದೂ ಇಲ್ಲ ಎಂದು ಅರಿವಾಗಿದ್ದು ಆಗಲೇ.. ಸರಿ ಮಿನಿ ಮಾರ್ಟ್ ಗೆ ಫೋನ್ ಮಾಡೋಣ ಎಂದರೆ ಫೋನ್ ನಂಬರ್ ಕೂಡ ಕಳೆದು ಹೋಗಿತ್ತು. ಸರಿ ಅಲ್ಲಿಗೇ ಹೋಗಿ ತರೋಣವೆಂದು ಇಬ್ಬರೂ ಹೊರಟೆವು. ಆಗ ಅಲ್ಲಿಯೇ ಬಿಲ್ಡಿಂಗ್ ಹೊರ ಬದಿಯಿಂದ ನಿಂತ ಒಬ್ಬ ಹುಡುಗ ೧ ಲೀ . ಹಾಲು ೧ ಕೆ.ಜಿ . ಸಕ್ಕರೆ, ಇನ್ನೂ ಏನೇನೋ ಹೇಳುತ್ತಿದ್ದ. ಎಲಾ ಇವನಾ! ಏಕೆ ಇಲ್ಲಿಂದ ಒಳಗೆ ಅಂಗಡಿಗೆ ಫೋನ್ ಮಾಡ್ತಾ ಇದ್ದಾನೆ ಅಂತ ಅನ್ನಿಸ್ತು.

          ಬಿಲ್ಡಿಂಗ್ ಪ್ರವೇಶಿಸುವಾಗಲೇ ಅಲ್ಲೇ ಇದ್ದ ಸೆಕ್ಯೂರಿಟಿ ಯವನು ಇಲ್ಲ ನೀವು ಒಳಗೆ ಪ್ರವೇಶಿಸುವಂತಿಲ್ಲ ಇದು ನಿಯಮ ಅಂದ. ಫೋನ್ ಮಾಡಿ, ಫ್ರೀ ಡೆಲಿವರಿ ತಂದು ಕೊಡುತ್ತಾರೆ ಅಂದ. ನಮ್ಮ ಬಳಿ  ಫೋನ್ ನಂಬರ್ ಇಲ್ಲವೆಂದು ಹೇಳಿದೆವು. ಫೋನ್ ನ೦. ಏನೋ ತಂದು ಕೊಟ್ಟ ಫೋನ್ ಮಾಡಿ  ಹೇಳಿದ್ದೂ ಆಯಿತು, ೧೦ ನಿಮಿಷ ಆಯಿತು. ನಾವು ಅಲ್ಲೇ ದ್ವಾರ ಪಾಲಕರು! ಇಲ್ಲಿ ಹೊಟ್ಟೆ ಅಸಾಧ್ಯ ತಾಳ ಹಾಕುತ್ತಿದೆ. ನನ್ನ ಕಾಯಿ ಮೆಣಸು, ಟೊಮೇಟೊ ಬರುವ ಲಕ್ಷಣವೇ ಇಲ್ಲ. ಈಗ ಆ ಹುಡುಗ ಯಾಕೆ ದ್ವಾರದಲ್ಲೇ  ನಿಂತು ಸಾಮಾನಿನ ಪಟ್ಟಿ ಕೊಡುತ್ತಿದ್ದ ಎಂದು  ಅರಿವಾಗಿತ್ತು.

            ಪಾಪ! ಆತನಿಗೂ ಹಸಿವಾಗಿತ್ತೋ ಏನೋ ಮತ್ತೊಮ್ಮೆ ಕರೆ ಮಾಡಿದ. ಊಹೂ…. ಸಾಮಾನು ಮಾತ್ರ ಹೊರ ಬರುವ ಲಕ್ಷಣವೇ ಇಲ್ಲ !! ಇಷ್ಟಾದಾಗ ನನಗೂ ತಾಳ್ಮೆ ಮೇರೆ ಮೀರಿತ್ತು. ನನ್ನ ಪತಿರಾಯನ ಬಳಿ  ಇರಲಿ ! ಮನೆಯಲ್ಲಿ ಅವಲಕ್ಕಿ ಇದೆ – ಅವಲಕ್ಕಿ ಮೊಸರು ಮಾಡಿ ತಿನ್ನೋಣವೇ ? ಅಂದೆ. ಮತ್ತೆ ಪಟ್ಟನೆ ನೆನಪಾಯಿತು, ಮನೆಯಲ್ಲಿ ಮೊಸರು/ಮಜ್ಜಿಗೆ ಇಲ್ಲ, ನಾನು ನನ್ನ ಸಾಮಾನಿನ ಪಟ್ಟಿಯಲ್ಲಿ ಮೊಸರೂ ಕೂಡಾ ಸೇರಿಸಿದ್ದೆ ಅಲ್ವಾ ಎಂದು !!

             ಇದೆಲ್ಲ ಆದಾಗ ಅಂಗಡಿಯಾತ ಬಿಲ್ಡಿಂಗ್ ನ ಹೊರ ಬಂದ ಅಷ್ಟು ಹೊತ್ತಿಗೆ ನಮ್ಮಂತೆ ೧೦ -೧೫ ಜನ ಬಂದು ಜಮಾಯಿಸಿದ್ದರು. ಅಂಗಡಿಯಾತ ನಮ್ಮ ಗುರುತು ಹಿಡಿದು ಹೇಗಿದ್ದೀರಾ? ಏನು ಬೇಕಿತ್ತು ಅಂತ  ಅವನಿಗೆ ಗೊತ್ತಿದ್ದ ಕನ್ನಡದಲ್ಲೇ ಕೇಳಿದ. ನಾನು ಸಿಕ್ಕಿದ್ದೇ  ಅವಕಾಶ ಎಂದು 'ಈವತ್ತು ಬರಿ ಮೊಸರು ಅಲ್ಲಾ, ತುಂಬ ಸಾಮಾನು ಬೇಕು. ಅರ್ಧ ಗಂಟೆಯಿಂದ ದ್ವಾರ ಪಾಲಕರು ಇಲ್ಲಿ ನಾವು ಅಂದೆ'. ಅವನು ಕೂಡಲೇ "ಬನ್ನಿ ಬನ್ನಿ … ನೀವಿಬ್ಬರೂ ಬನ್ನಿ ಅನ್ನೋದೇ ?"

              ಅಲ್ಲೇ ಇದ್ದ ಸೆಕ್ಯೂರಿಟಿ ಯವನು "ಇದು ನಿಯಮಕ್ಕೆ ವಿರುದ್ದ ಇದು ಸರಿಯಲ್ಲ" ಅಂದಾಗ ಈ ಅಂಗಡಿಯಾತ 'ಅಯ್ಯಾ ಸುಮ್ಮನಿರಯ್ಯ ಇವರು ನಮ್ಮೂರಿನವರು ನಂಗೆ ಗೊತ್ತು. ಇವರು ನಮ್ಮ ಅಂಗಡಿಗೆ ಬಂದರೆ ಭೂಕಂಪ ಏನೂ ಆಗಲ್ಲ ಈಗ ಅವರು ಅಂಗಡಿಗೆ ಬಂದು ಬೇಕಿದ್ದು ಕೊಂಡು ಹೋಗ್ತಾರೆ ಅಷ್ಟೇ' ಅಂದು ಬಾಗಿಲು ತೆರೆದು ಕೊಂಡು ಒಳ ಹೋದ ಅವನ ಹಿಂದೆ ನಾನು ನನ್ನ ಪತಿ ಹಿಂಬಾಲಕರು ….

              ಅಷ್ಟು ಹೊತ್ತು ಪಾಲಿಸಿದ ನಿಯಮ ಗಾಳಿಗೆ ತೋರಿ ಹೋಯಿತಲ್ಲಾ ಅನ್ನೋ ಖೇದ ಆ ಸೆಕ್ಯೂರಿಟಿ ಯವನಿಗಾದರೆ, ಕನ್ನಡ ಭಾಷೆ, ಮಾತೃ ಭಾಷೆ ಮಾತನಾಡಿ ಅಂಗಡಿಯಾತನ ನೆನಪಿನಲ್ಲಿ ಉಳಿದ ಹೆಮ್ಮೆ ನನ್ನದಾಗಿತ್ತು.

                                                 "ಕನ್ನಡವೇ ಸತ್ಯ ಕನ್ನಡವೇ ನಿತ್ಯ " 

-ಶ್ರೀನಿಧಿ ಹರಿಪ್ರಸನ್ನ

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಮಾತೃ ಭಾಷೆಗೆ ಸಿಕ್ಕ ಮನ್ನಣೆ

  1. ಚೆನ್ನಾಗಿದೆ. ಖುಶಿಯಿಂದ ಓದಿಸಿಕೊಂಡು ಹೋಯಿತು. ದೂರದ ಊರಿಗೆ ಹೋದಾಗಲೇ ನಮ್ಮ ಭಾಷೆಯ ಪ್ರಿತಿ ಹೆಚ್ಚಾಗುವುದು.

  2. ತಮ್ಮಲ್ಲಿ ಇರುವ  "ಕತೆ ಬರೆಯುವ" ತಾಳ್ಮೆ  ಇಷ್ಟವಾಯ್ತು.
    ಇನ್ನೂ ಸ್ವಾರಸ್ಯಕರವಾಗಿಸುವ ಕಿಂಚಿತ್ ಯತ್ನವಷ್ಟೇ ಬೇಕಿತ್ತು.

Leave a Reply

Your email address will not be published. Required fields are marked *