ಲೇಖನ

ಮಾತು ಮುಕ್ಕಿದ ಮೌನ: ನಳಿನಾ ಡಿ.


 
ಗೆಳತಿಯರು ಕಳೆದುಹೋಗುತ್ತಾರಾ?  ಆದರೆ ಗೆಳತಿಯರನ್ನು ಜತನದಿಂದ ಸಂಪಾದಿಸುವುದು ಹೇಗೆ?  ಇದು ನಾನು, ನಿನ್ನ ಏಕೈಕ ಗೆಳೆಯ ಎಂದು ಎದೆಯುಬ್ಬಿಸಿ ಹೇಳಿದಾಗಲೆಲ್ಲಾ ನನ್ನ ಸ್ನೇಹದ ಸವಿಯರಿತ ಅವಳ ಮನಸ್ಸು ಉಬ್ಬುವುದು, ಮತ್ತೆ ಜಗತ್ತಿನ ಅತ್ಯಂತ ಸುಖವಾದ ಗೆಳತಿ ನಾನೇ ಕಣೋ, ಅದು ನಿನ್ನಿಂದಾನೇ ಅಂತ ಅವಳ ಸಂಭ್ರಮಿಸಿ ಭತ್ತದ ಹೊಲಗಳ ಹಸಿರು ಬಯಲಿನಲ್ಲಿ ಕೂಗಿದಾಗ, ನನ್ನ ಮನಸ್ಸಿನೊಂದಿಗೆ ದೇಹವೂ ಊರಾಚೆಯಲ್ಲಿ ಗೋಚರಿಸುವ ಗುಡ್ಡದ ಮೇಲೇನೇ ಕೂತುಬಿಟ್ಟಿರತ್ತೆ.  ನನ್ನಷ್ಟು ಎತ್ತರ ಯಾರೂ ಇಲ್ಲ ಎಂಬ ಕೋಡು. 
 
ಐದಾರನೇ ಕ್ಲಾಸಿನಿಂದಲೂ ನಾವು ಹೀಗೇ ಒಟ್ಟಿಗೆ, ಅವಳಪ್ಪ ಊರಿಗೆ ಬಂದಾಗ ಈ ಸಲದ ಮಳೆಗೆ ಒಂದು ಹೊಸ ಛತ್ರಿ ಕೊಡಿಸಿಹೋಗಿದ್ದರು, ಇಲ್ಲಿಯವರೆಗೂ ನಮ್ಮಿಬ್ಬರ ತಲೆಕಾಯುತ್ತಿತ್ತು.   ನಾನು ಏಳು ಅವಳೂವೇ, ಪಬ್ಲಿಕ್ ಪರೀಕ್ಷೆ ಮುಗಿದ ಮ್ಯಾಲೆ ಅವಳ ಮಧುವೆ ಆಗಬಹುದೆಂದು ಹೇಳಿದಾಗ, ಆಗ್ಲಿ ಬಿಡು, ನಾನೂ ಬೀಗರೂಟಕ್ಕೆ ಈಡಿ ಸ್ಕೂಲನ್ನೇ ಕರ್ಕೋಂಡು ಬರ್ತೀನಿ ಅಂತ ಹೆಮ್ಮೆಯಿಂದ ಬೀಗಿ ಹೇಳಿಕೊಂಡಿದ್ದೆ.  ಆದರೆ ಇಚೆಗೆ ಅವಳು ಪರೀಕ್ಷೆಯ ರಿಸಲ್ಟ್ ನೋಡಲು ಬಂದಾಗ ಸಿಕ್ಕಿದ್ದಳು, ಅವಳ ಕೈಯನ್ನು ಬಲವಂತವಾಗಿ ಮುಚ್ಚಿಹಿಡಿದಿದ್ದಳು, ಅದರಲ್ಲಿ ಏನಿದೆ, ನನಗೆ ಗೊತ್ತಾಗದಂತದ್ದು, ನಾನು ತಾಕೀತು ಮಾಡಿ ಕೇಳಿದ್ದೆ.  ನನಗೇಳದೆ ಇದ್ದದ್ದು ಇಲ್ಲಿಯತನಕ ಯಾವುದೂ ಇರಲಿಲ್ಲ ನಮ್ಮಿಬ್ಬರೊಳಗೆ.  ನಾವಿಬ್ಬರೂ ಎರಡು ಮೈಲಿ ದೂರವಿರುವ ಮಾಯನಹಳ್ಳಿಗೆ ನಡೆದುಕೊಂಡು ಹೋಗುವಾಗ ನಮ್ಮ ಹಟ್ಟಿ ಮೊದಲಿಗೂ ಅವರದು ಊರ ನಡುವಿನ ದೇವಾಲಯದ ಬಳಿಯೂ ಇತ್ತು.  ಆಕೆ ಮೇಲುಜಾತಿಯವಳ ಹಾಗೆ ಎಂದಿಗೂ ನಡೆದುಕೊಂಡಿರಲಿಲ್ಲ, ಇಬ್ಬರಿಗೂ ರಸ್ತೆಯ ಬಳಿ ತಲೆತಗ್ಗಿಸಿ ನಡೆಯೋದು ರೂಡಿ, ರಸ್ತೆಯ ಯಾವ ಬದಿಯಲ್ಲಿ ಹಳ್ಳವಿದೆ, ಎಲ್ಲಿ ರಾಡಿ ನಿಂತಿರುತ್ತದೆ, ಎಂದು ನನ್ನ ಸೈಕಲ್ ಬಂದ ಮೇಲೆ ಹಿಂದೆ ಕೂತು ಬೆನ್ನಿಗೆ ಬಾರಿಸಿ ಹೇಳುತ್ತಿದ್ದಳು, ನಾನು ಮಧ್ಯಮ ವೇಗದಲ್ಲಿ ತುಳಿದುಕೊಂಡು ಹೋಗುತ್ತಿದ್ದರೆ, ಅವಳು ಯಾವುದಾದರೊಂದು ಪುಸ್ತಕದ ವಿಷಯವನ್ನು ಗಟ್ಟಿಯಾಗಿ ಬೋದಿಸುತ್ತಿದ್ದಳು,   

ಪಾಠದ ಬಗ್ಗೆ ಓದಿಕೊಂಡ ವಿಷಯಗಳೆಲ್ಲವನ್ನು ನನಗೆ ತಿಳಿಸಿ, ಹೋಗುವಾಗ ನಾಳೆಗೆ ಓದಿ ಹೇಳುವ ಪಾಠದ ಹೆಸರನ್ನು ತಿದ್ದಿ ಬರೆದು ನನ್ನ ತಲೆಗೆ ಅದೇ ಪುಸ್ತಕದಲ್ಲಿ ಕುಕ್ಕಿ, ವಾಪಾಸ್ಸುಕೊಟ್ಟು ಹೊರಟುಬಿಡುತ್ತಿದ್ದಳು.    ಇರುವೆಗಳನ್ನೂ ತುಳಿಯಲು ಇಚ್ಛಿಸದೆ ದೂರದಲ್ಲಿ ಸಾಗುವ ಅಮಾಯಕ ಹುಡುಕಿ ಕುಕ್ಕಿವುದು ರೆಕ್ಕೆ ಹಾರಿದ ಗಾಳಿ ಮೈಗೆ ತಾಗುವ ಹಾಗೆ.  ನನ್ನ ಗೆಳತಿಯೆಂದರೆ ನನಗೊಂದು ದೊಡ್ಡ ಸಂಪತ್ತು, ಯಾವ ಆಪತ್ತಿನಲ್ಲಿಯೂ ಕೈಬಿಡದವಳು, ಹೋಮ್ ವರ್ಕ್ ಮಾಡಿಲ್ಲ ಎಂದು ಪ್ರೇಯರ್ ಗೆ ಮುಂಚೆ ಹೇಳಿಕೊಂಡರೆ ಸಾಕು, ಪ್ರೇಯರ್ ಗೆ ಚಕ್ಕರ್ ಹಾಕಿ ಕ್ಲಾಸ್ ರೂಮ್ ಒಳಗೆ ಕುಂತು ದುಂಡಗೆ ಕೊರೆದು ಕೊಡುತ್ತಿದ್ದಳು.  ಅವಳಿಂದಾಗಿ ನಾನು ಒಳ್ಳೆಯ ವಿದ್ಯಾರ್ಥಿಯೂ ಆಗಿ, ಉತ್ತಮ ಹೆಸರು ಸಂಪಾದನೆ ಮಾಡಿದೆ, ಈ ಸಂಗತಿ ಹೇಳಿದಾಗ ಬಿಗುಮಾನದಿಂದ ಕೇಳಿ, ತನ್ನದೇನಿಲ್ಲ ಎಂದು ಸುಮ್ಮನಾಗುತ್ತಿದ್ದವಳು.  ಇದೆಲ್ಲಾ ಸರಿ, ಈಗ ಮಧುವೆಯ ಹೊಸ್ತಿಲಲ್ಲಿ ನಿಂತಾಗ ನಾನು ಬೇಡವಾದೆನೇ?  ಅದೇನಂತದ್ದು ದಾವಣಿಯಿಂದ ಕೈ ಮುಚ್ಚಿಡೋದು ಯಾಕೆ, ನಾನೇನು ದೂರದವನೋ?  ಅವಳು ಬಿದ್ದಾಗ ಎತ್ತಿದ್ದು, ಅವಳಿಗೆ ಸ್ಕೂಲಿನಲ್ಲಿ ಹೊಟ್ಟೆ ನೋವೆಂದಾಗ ನನ್ನ ಸ್ಕೂಲ್ ಪುಸ್ತಕಗಳನ್ನೂ ಮರೆತು ಅವಳನ್ನು ಸೈಕಲ್ ಮೇಲೇರಿಸಿ ಮನೆಗೆ ಬಿಟ್ಟದ್ದು, ಅವಳಿಗೆ ಗಂಡು ಹುಡುಕಲು ಹೋದಾಗ, ನಮ್ಮಟ್ಟಿಯ ಬೂತಕ್ಕೆ ಬೇಡಿಕೊಂಡಿದ್ದು, ಎಲ್ಲದ್ದೂ ಆಗಿರಲಿ, ಪರೀಕ್ಷೆಗೆ ಮೊದಲು ಅವಳೇ ನನಗಿಂತ ಹೆಚ್ಚು ಮಾರ್ಕ್ಸ್ ಪಡೆದು ಎಲ್ಲರಿಗಿಂತ ಮೊದಲು ಬರಬೇಕು ಎಂದು ಬೆಟ್ಟದ ಮೇಲಿನ ರಂಗನಾಥನ ಗುಡಿಗೆ ಬರಿಗಾಲಲ್ಲಿ ಹತ್ತಿ ಬೇಡಿ ಬಂದದ್ದು ನೆನಪಿಲ್ಲವೇ?  ಇವತ್ತು ಅವಳೇ ತಾನೇ ಮೊದಲಿಗಳು.  ನಾನೇ ಮೊದಲಿಗನಾದ ಖುಷಿ ನನಗೆ.
 
ಅವಳು ಶಾಲೆಯ ಮುಂದೆ ಗೆಳತಿಯರಿಗೆಲ್ಲಾ ವಿದಾಯ ಹೇಳುತ್ತಾ ಬರುತ್ತಿದ್ದಳು, ಅವಳ ಚಿಕ್ಕಪ್ಪ ಇಂದು ಬೈಕಿನಲ್ಲಿ ಕರೆದೊಯ್ಯಲು ಬಂದಿರುವುದು ಗೊತ್ತಿತ್ತು, ಈಗಲೇ ನಾನೇನಾದರೂ ಮಾತನಾಡಬೇಕೆಂದು, ಹತ್ತಿರ ಹೋದೆ, ಎಲ್ಲರೂ ಹೋದದ್ದು ಖಾತ್ರಿಯಾದ ಮೇಲೆ, ಅವಳು ಸೆರಗಿನಲ್ಲಿ ಮುಚ್ಚಿಕೊಂಡಿದ್ದ ಕೈ ತೆರೆದಿಟ್ಟಳು.  ಅಲ್ಲೊಂದು ದೊಡ್ಡ ಬೊಬ್ಬೆ, ಇಡೀ ಕೈಯೆಲ್ಲಾ ಬೆಂದ ಹಾಗಿದೆ, ನೀವು ನಂಬಲಿಕ್ಕಿಲ್ಲ, ಎಷ್ಟು ದೊಡ್ಡ ಬೊಬ್ಬೆ, ಹಲಸಿನ ಬೀಜಕ್ಕಿಂತ ದೊಡ್ಡದು, ಬೊಬ್ಬೆಯೊಳಗೆ ನೀರು ತುಂಬಿತ್ತು.  ನಾನೊಮ್ಮೆ ಕೂಗಿ, ಒಂದು ಹೆಜ್ಜೆ ಹಿಂದಕ್ಕೆ ನೆಗೆದೆ, ಅವಳು ಕಣ್ಣಲ್ಲಿ ನೀರು ತುಂಬಿಕೊಂಡು, ‘ಅನ್ನ ಬಸಿಯಲು ಹೋದೆ,   ಕೈ ಹಿಡಿತ ಸಡಿಲಿಸಿ ಒಂದೇ ಕಡೆ ಗಂಜಿ ಕೈ ಮೇಲೆ ಬಿತ್ತು, ಈಗೆಷ್ಟೋ ವಾಸಿ, ಮೊದಲು ಇನ್ನು ದೊಡ್ಡದಾಗಿ ಬೊಬ್ಬೆ ಊದಿಕೊಂಡಿತ್ತು.  ಇದೆಲ್ಲಾ ಯಾಕೆ ಅಂತಿಯಾ, ಇನ್ನೇನು ಮಾಡುವುದು, ಹೋಗ್ಲಿ ಬಿಡು.  ನಾನು ಅಡುಗೆ ಕಲಿಯಬೇಕಂತೆ, ಅತ್ತೆ ಮನೆಯವರಿಂದ ಒತ್ತಡ ಹೆಚ್ಚಾಗಿದೆ, ‘ಏನು ಬರುತ್ತೆ, ಬರೋದಿಲ್ಲ?’ ಅಂತ ಅವರೆಲ್ಲಾ ಅಮ್ಮನೆದುರು ಕೇಳಿದಾಗ ಅಮ್ಮನಿಗೆ ಭಯವಾಯಿತಂತೆ, ಮಧುವೆಯಾದ ಮಾರನೇ ದಿನ ದೊಡ್ಡ ಮನೆಯ ಸೊಸೆಯಾಗಿ, ಅಡುಗೆಮನೆಗೆ ಸಂಪೂರ್ಣ ವಾರಸುಧಾರಳಾಗಿ ಎಲ್ಲಾ ನೋಡಿಕೊಳ್ಳಬೇಕಾಗಿದೆ ಎಂಬುದಾಗಿ ಹೇಳಿದ್ದಾರೆ, ನಿಶ್ಚಿತಾರ್ಥದ ಶಾಸ್ತ್ರಕ್ಕೆ ಎಲ್ಲರೂ ಕೂತಾಗ, ಗುಟ್ಟಿನಲ್ಲಿ ಅಮ್ಮನನ್ನು ಕೋಣೆಗೆ ಕರೆದು ಇವೆಲ್ಲಾ ಹೇಳಿ, ಷರತ್ತು ವಿಧಿಸಿದ್ದಾರೆ, ‘ನೀವು ಒಪ್ಪಿದರೆ ಮಾತ್ರ ವೀಳ್ಯ ಬದಲಾಯಿಸೋಣ’ ಅಂದರೆ ಅಮ್ಮ ಏನ್ತಾನೆ ಮಾಡ್ತಾಳೆ?  ಈಗ ರೊಟ್ಟಿ ಕಲಿದಿದ್ದೇನೆ, ಮಧುವೆಗೆ ಒಂದೇ ತಿಂಗಳು ಕಣೋ.. ನಾನು ಹೆಚ್ಚು ಹೊತ್ತು ನಿಲ್ಲುವುದೂ ಕಷ್ಟ.. ನಾನೀಗ ದೊಡ್ಡ ಮನೆಗೆ ತೆರಳಲಿರುವ ಹೆಣ್ಣು, ಅಡುಗೆ ಮನೆಯೇ ನನ್ನದು, ಯಾರಿಗೆ ಏನು ಬೇಕು, ಅದನ್ನು ಅಚ್ಚುಕಟ್ಟಾಗಿ ಹೇಗೆ ಮಾಡುವುದು? ಯಾವಾಗ ಕಾಫಿ ತಿಂಡಿ ಬೇಕಾಗುವುದು?  ಇವೇ ಪ್ರಶ್ನೆಗಳು ರಾತ್ರಿ ಪೂರಾ ಕನಸಾಗಿ ಬರುತ್ತವೆ.  ಅಪ್ಪನಿಗಿದೆಲ್ಲಾ ಹೇಳಿದರೆ ಮಧುವೆ ನಿಲ್ಲಬಹುದೆಂಬ ಭಯ ಅಮ್ಮನಿಗೆ. ನನಗೂ ಅಪ್ಪನ ಮನಸ್ಸಿಗೆ ಘಾಸಿ ಉಂಟು ಮಾಡಲು ಇಷ್ಟವಿಲ್ಲ.  
 
'ಮದುವೆಯಾದ ಮೇಲೆ ಬಿಡುವು ಮಾಡಿಕೊಂಡು ಶಾಲೆ ಕಡೆಗೆ ಬರುವುದಕ್ಕೆ ಆಗುತ್ತೋ ಇಲ್ಲವೋ.. ನೀನು ಇಂದೇ ಸಿಕ್ಕಿದ್ದು ಒಳ್ಳೆಯದಾಯಿತು,  ನಾನು ಚಿಕ್ಕಪ್ಪನೊಂದಿಗೆ ಹೊರಡುತ್ತೇನೆ.  ನಾಳೆ ನಿನ್ನ ಹೆಂಡತಿ ಬಂದರೆ ಅವಳಿಗೆ ಇಂತವೆಲ್ಲಾ ಅಂಟಿಸಬೇಡ, ಜೊತೆಯಲ್ಲಿ ಶಾಲೆಗೆ ಕರೆದುಕೊಂಡು ಬರ್ತೀನಿ ಅಂತ ಪ್ರಾಮೀಸ್ ಮಾಡು, ಮಾಡ್ತಿಯಾ ತಾನೇ?’

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮಾತು ಮುಕ್ಕಿದ ಮೌನ: ನಳಿನಾ ಡಿ.

Leave a Reply

Your email address will not be published. Required fields are marked *