ಕಥಾಲೋಕ

ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ

ಸರಸ್ವತಿ ಮನೆಗೆ ಬಂದಾಗ ಏಳೂವರೆ. ಮುಂದಿನ ಹಾಲ್ ನಲ್ಲಿಯೇ ಲಕ್ಷ್ಮಿ ತನ್ನ ತಮ್ಮನನ್ನು ಓದಿಸುತ್ತಿದ್ದಳು. ಅಮ್ಮ ಬಂದಿದ್ದು ಕಂಡೊಡನೇ ಕಾಫಿ ಮಾಡಲು ಎದ್ದಳು. ಸರಸ್ವತಿ ಹತ್ತಿರದಲ್ಲೇ ಇರುವ ಹೆಸರಾಂತ ನರ್ಸಿಂಗ್ ಹೋಂ ಒಂದರಲ್ಲಿ ಹೆಡ್ ನರ್ಸ. ಮೈ ತುಂಬಾ ಕೆಲಸ. ಮನೆಗೆ ಬಂದರೆ ಸಾಕೋ ಸಾಕು ಎನಿಸುತ್ತಿರುತ್ತದೆ. ಈಗ ಮಗಳು ಲಕ್ಷ್ಮಿ ಮನೆಯಲ್ಲೇ ಇರುವುದರಿಂದ ಅವಳಿಗೆ ಮನೆ ಕೆಲಸದಲ್ಲಿ ಸಂಪೂರ್ಣ ವಿನಾಯಿತಿ. ಮಧ್ಯಮ ವರ್ಗದ ಮನೆಯಲ್ಲಿ ಬೇಡಿ ಬಯಸುವಂತಹ ಮಗಳು. ಪಿ ಯು ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರಿಂದ ಹತ್ತಿರದ ಪ್ರಸಿದ್ಧ ಇಂಜನೀಯರಿಂಗ್ ಕಾಲೇಜಿನಲ್ಲಿ ಬಯಸಿದ ವಿಷಯದಲ್ಲೇ ಸರ್ಕಾರಿ ಕೋಟಾದಲ್ಲೇ ಸೀಟು ಸಿಕ್ಕಿದೆ. ಸರಸ್ವತಿಗೇನೋ ಪ್ರತಿ ದಿನ ನರ್ಸಿಂಗ್ ಹೋಂ ನಲ್ಲಿ ಡಾಕ್ಟರುಗಳನ್ನು ನೋಡಿ ತನ್ನ ಮಗಳೂ ಡಾಕ್ಟರಾಗಲಿ ಎಂದು ಒಂದು ಆಸೆಯಿತ್ತು.

ಲಕ್ಷ್ಮಿ ಖಡಾಖಂಡಿತವಾಗಿ ಹೇಳಿದಳು, “ಅಮ್ಮ ನಾವು ಮಧ್ಯಮ ವರ್ಗದವರು. ಈಗ ಮೆಡಿಕಲ್ ಐದು ವರ್ಷ ಓದಬೇಕು, ಆದರೆ ಬರೀ ಡಿಗ್ರಿಗೆ ಏನೂ ಬೆಲೆಯಿಲ್ಲ. ಮಾಸ್ಟರ್ಸ ಮಾಡಲು ಮತ್ತೆ ಮೂರು ವರ್ಷ. ನಂತರ ಕೂಡಾ ಝೀರೋ ಬೇಸ್ ನಿಂದ ಕೆಲಸ ಪ್ರಾರಂಭಿಸಬೇಕು. ಆ ಹೊತ್ತಿಗೆ ನನಗೆ ಇಪ್ಪತ್ತೇಳು-ಇಪ್ಪತ್ತೆಂಟು ವರ್ಷವಾಗಿರುತ್ತದೆ. ನೀವು ಮದುವೆ ಎಂದು ವಿಚಾರ ಮಾಡಿದರೆ, ನಾನಿನ್ನೂ ನನ್ನ ಕಾಲ ಮೇಲೆ ನಿಂತಿರುವುದಿಲ್ಲ. ಅದಕ್ಕೆ ಕಾಯುತ್ತಾ ಕೂತರೆ, ಮದುವೆಯ ವಯಸ್ಸು ಮಿಕ್ಕಿತು ಎಂದು ಚಿಂತೆ ಮಾಡಬೇಕಾಗುತ್ತದೆ. ಮತ್ತು ಈ ಓದಿಗೆ ಖರ್ಚು ಜಾಸ್ತಿ. ಸುಮ್ಮನೇ ಮನೆಯಲ್ಲಿ ಎಲ್ಲರಿಗೂ ಒದ್ದಾಟ. ಆದರೆ, ನಾಲ್ಕು ವರ್ಷ ಇಂಜಿನೀಯರಿಂಗ್ ಮಾಡಿದರೆ, ಚನ್ನಾಗಿ ಓದಿದರೆ, ಅದೃಷ್ಟವಿದ್ದರೆ, ಕ್ಯಾಂಪಸ್ ನಲ್ಲಿಯೇ ಒಳ್ಳೆ ಕೆಲಸ ಸಿಗಬಹುದು. ಇಂಜಿನೀಯರಿಂಗ್ ಓದಿಗೆ ಸ್ವಲ್ಪ ಖರ್ಚು ಕೂಡಾ ಕಡಿಮೆಯೇ. ಆದ್ದರಿಂದ ನನಗೆ ಇಂಜಿನೀಯರಿಂಗ್ ಓದೇ ಇಷ್ಟ.”

ಇದೆಲ್ಲಾ ಸತ್ಯವೂ ಆಗಿರುವುದರಿಂದ, ಸರಸ್ವತಿ ಮತ್ತೆ ಅವಳ ಗಂಡ ಸುಮ್ಮನೇ ಒಪ್ಪಿಕೊಂಡಿದ್ದರು. ಲಕ್ಷ್ಮಿ ಓದು ಮತ್ತು ಇತರೆ ಕಲೆಗಳಲ್ಲಿ ಆಸಕ್ತಿ ಹೊಂದಿದ್ದರೂ ತಂದೆ ತಾಯಿಯರಿಗೆ ಯಾವುದೇ ಭಾರ ಹೊರೆಸಲು ಬಯಸಿರಲಿಲ್ಲ. ತನ್ನ ಓದಿನ ಜೊತೆಗೆ ತಮ್ಮನ ಓದಿನ ಜವಾಬ್ದಾರಿಯನ್ನು ಹೊತ್ತು ತಂದೆ ತಾಯಿಯ ಚಿಂತೆ ಕಡಿಮೆ ಮಾಡಿದ್ದಳು.

ಕಾಲೇಜು ಪ್ರಾರಂಭವಾದಾಗ ಮಾಮೂಲಿನಂತೆ, ಸುನೀತಾ, ಲಕ್ಷ್ಮಿ, ಭಾವನಾ ಒಂದೇ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದು, ಒಟ್ಟಿಗೇ ಇರುತ್ತಿದ್ದರು. ಒಂದನೇ ತರಗತಿಯಿಂದ ಈ ಮೂರೂ ಜನ ಒಟ್ಟಿಗೆ ಓದಿದ್ದಾರೆ. ಈಗ ಕೂಡಾ ಒಟ್ಟಿಗೆ ಓದುತ್ತಿದ್ದಾರೆ. ಇವರ ಗುಂಪಿಗೆ ಮೊದಲಿನಿಂದ ಮೂವರ ಹೆಸರುಗಳ ಮೊದಲಿನ ಅಕ್ಷರಗಳನ್ನು ಸೇರಿಸಿ ‘ಸುಲಭಾ’ ಎಂದು ಹೆಸರಿಟ್ಟಿದ್ದರು. ಯಾವುದೇ ಪ್ರಶ್ವೆಗೆ ಉತ್ತರಿಸುವುದು ಈ ಗುಂಪಿಗೆ ಸುಲಭ ಎಂದು.

ಈ ಗುಂಪಿನಲ್ಲಿ ಸುನೀತಾ, ಅವಳನ್ನು ಎಲ್ಲರೂ ಸುನಿ ಎನ್ನುತ್ತಾರೆ. ತುಂಬ ದಿಟ್ಟೆ. ಅವಳಿಗೆ ಚಾಲೆಂಜ್ ಎದುರಿಸುವುದೆಂದರೆ ತುಂಬ ಇಷ್ಟ. ಸುಪ್ರಸಿದ್ಧ ಚಾರ್ಟರ್ಡ ಅಕೌಂಟೆಂಟ್ ರ ಮಗಳು. ದುಡ್ಡಿನ ವಿಷಯದಲ್ಲಿ ಹಾಗೂ ತಂದೆ ತಾಯಿಯರ ಮುದ್ದಿನ ವಿಷಯದಲ್ಲಿ ಯಾವುದೇ ಕೊರತೆಯಿಲ್ಲ. ಅವಳು ಬಯಸಿದ್ದರೆ ಮೆಡಿಕಲ್ ಓದುವುದು ಕಷ್ಟವೇನೂ ಇರಲಿಲ್ಲ. ಅದರೊಂದಿಗೆ ತಂದೆ ತಾಯಿಯರ ಬೆಂಬಲವೂ ಇತ್ತು. ಆದರೆ, ಇವಳಿಗೇ ಮೆಡಿಕಲ್ ಓದು ಇಷ್ಟವಿಲ್ಲ, ಯಾವಾಗಲೂ ರೋಗಿಗಳನ್ನೇ ನೋಡಿ ನೋಡಿ ನಾನೂ ಒಂದು ದಿನ ಬುದ್ಧನಂತಾಗುತ್ತೀನಿ, ಅದರ ಬದಲಿಗೆ ಇಂಜಿನೀಯರಿಂಗ್ ಕಾಲೇಜಾದರೆ ಹಳೆ ಗೆಳತಿಯರ ಜೊತೆ ಕೂಡಾ ಸಿಗುತ್ತದೆ. ಎಂಬುದು ಅವಳ ಅಭಿಮತ. ಆದರೆ, ಪ್ರತಿಯೊಂದಕ್ಕೂ ಚಾಲೆಂಜ್, ಚಾಲೆಂಜ್. ಚಾಲೆಂಜ್ ಇಲ್ಲದ ಜೀವನ ನಿಂತ ನೀರು. ಜೀವನ ಸಮುದ್ರದಂತೆ ಭೋರ್ಗರೆಯ ಬೇಕೆ ಹೊರತು ರಸ್ತೆಯ ಗುಂಡಿಯಲ್ಲಿ ನಿಂತ ನೀರಾಗಿರಬಾರದು ಎಂಬುವುದು ಅವಳ ಅಭಿಪ್ರಾಯ.

ತಂದೆಯಿಲ್ಲದೇ, ಅಜ್ಜಿಯ ಜೊತೆಗೆ ವಾಸವಿದ್ದ ಭಾವನಾಗೆ, ಜೀವನದ ಪ್ರತಿಯೊಂದು ಘಟನೆಯೂ ದೇವರ ಕರುಣೆ. ಅವನ ನಿರ್ಧಾರ. ನಾವೇನಿದ್ದರೂ ಅವನ ನಿರ್ಧಾರವನ್ನು ಇಲ್ಲಿ ಆಚರಣೆಗೆ ತರುವವರು ಮಾತ್ರ. ‘ತೇನ ವಿನಾ ತೃಣ ಮಪಿ ನ ಚಲತಿ’ ಎಂಬುದು ಅವಳ ವಾದ. ಅದೇ ಕಾರಣದಿಂದಲೇ ಸುನಿ ಮತ್ತು ಭಾವನಾರ ಮಧ್ಯೆ ಯಾವಾಗಲೂ ವಾಗ್ವಾದ. ಕೆಲವೊಮ್ಮೆ ಈ ಕಾರಣಗಳಿಂಲೇ ಪಂಥ. ಯಾರೇ ಗೆದ್ದರೂ, ಯಾರೇ ಸೋತರೂ ಇಬ್ಬರನ್ನೂ ಸಮಸ್ಥಿತಿಗೆ ತರುವವಳು ಲಕ್ಷ್ಮಿ. ಇದು ತುಂಬಾ ಹೊತ್ತು ಬಿಗುಮಾನಕ್ಕೆ ಕಾರಣವಾಗುತ್ತಲೂ ಇರುತ್ತಿರಲಿಲ್ಲ. ಆದ್ದರಿಂದ ಮೂವರ ಮಧ್ಯದ ಗೆಳೆತನಕ್ಕೆ ಅಷ್ಟು ವರ್ಷಗಳಿಂದಲೂ ಭಂಗ ಬಂದಿರಲಿಲ್ಲ.

ಆದರೆ, ಇವರಿಬ್ಬರ ಮಧ್ಯ ಕುಳಿತುಕೊಳ್ಳುವ ಲಕ್ಷ್ಮಿ ಮಾತ್ರ, ಪ್ರ್ಯಾಕ್ಟಿಕಲ್ ಗರ್ಲ, ವಾಸ್ತವವಾದಿ. ತುಂಬಾ ದೊಡ್ಡ ಚಾಲೆಂಜ್ ಗಳು ಬೇಡ. ಎಲ್ಲಾ ದೇವರಿಟ್ಟಂತೆ ಎಂಬ ನಿರಾಸಕ್ತಿಯೂ ಬೇಡ. ನಮ್ಮ ಜೀವನ, ನಮ್ಮ ಪ್ರಯತ್ನ. ಫಲಿತಾಂಶ ತಿಳಿದಾಗ ಕೆಲವೊಮ್ಮೆ ಸೋಲಬಹುದು ಕೆಲವೊಮ್ಮೆ ಗೆಲ್ಲ ಬಹುದು. ಇದು ಅವಳ ವಾದ.

ಹೀಗೆ, ಪ್ರಥಮ ವರ್ಷದ ಕೆಮೆಸ್ಟ್ರಿ ಮತ್ತು ಫಿಸಿಕ್ಸ ಸೈಕಲ್ ಮುಗಿದು, ಎರಡನೇ ವರ್ಷದ ಪಾಠ ಪ್ರಾರಂಭವಾದಾಗ, ಇವರ ಕ್ಲಾಸಿಗೆ ಹೊಸದಾಗಿ ಮೂವರು ಹುಡುಗರು ಸೇರಿದ್ದರು. ಮೂವರೂ ಪಿಯುಸಿ ಮುಗಿಸಿ ಡಿಪ್ಲೊಮಾ ಮಾಡಿ ಈಗ ಇಂಜನೀಯರಿಂಗ್ ಸೇರಿದವರು. ಆದ್ದರಿಂದಲೇ ಈ ಸುಲಭಾ ಗುಂಪಿಗಿಂತ ತುಸು ದೊಡ್ಡವರಾಗಿ ಕಾಣುತ್ತಿದ್ದರು.

ಒಂದು ದಿನ ಹೀಗೇ ಲ್ಯಾಬ್ ನಲ್ಲಿ ಏನೋ ವೆಲ್ಡ ಮಾಡಲು ಹೋಗಿ, ಕೈ ಸುಟ್ಟುಕೊಂಡ ಸುನಿಗೆ ಬ್ಯಾಂಡೇಜ್ ಹಾಕಿದ್ದಲ್ಲದೇ ಎರಡು ದಿನ ಅವಳ ಯೋಗಕ್ಷೇಮ ವಿಚಾರಿಸಿದ ವಿಶ್ವಾಸ. ಅದೇ ಕಾರಣಕ್ಕೇ ಭಾವನಾ ಸುನಿಯನ್ನು ಕಿಚಾಯಿಸಿದಳು. “ಏನು ಮ್ಯಾಡಂ, ಏನೇನೂ ಆಗ್ತಿದೆ. ಹದಿ ಹರೆಯ, ಆಗಬೇಕಾಗಿದ್ದೇ,” ಎಂದಳು. ಇದರಿಂದ ಸ್ವಲ್ಪ ಬೇಜಾರು ಮಾಡಿಕೊಂಡ ಲಕ್ಷ್ಮಿ, “ಎಲ್ಲರೂ ಆಡಿದಂತೆ ಆಡಬೇಡ. ಸುಮ್ಮನಿರು. ಏನೋ ಕೈ ಸುಟ್ಟಿತ್ತಲ್ಲ ಅಂತ ಕೇಳಿದ್ದಾನೆ. ಸುನಿ ನಮ್ಮ ಗೆಳತಿ. ಅವಳ ಸ್ವಭಾವ ನಮಗೆ ಗೊತ್ತಿಲ್ಲವಾ?” ಅಂದಳು.

ಆಗ ಸುಮ್ಮನಿದ್ದಳು ಸುನಿ. ಎರಡು ದಿನಗಳ ನಂತರ, ಮತ್ತೇನೋ ಕಾರಣಕ್ಕೆ ವಿಶ್ವಾಸ್ ಮಾತನಾಡಿಸಿದಾಗ, ಮತ್ತೆ ಕಿಚಾಯಿಸಿದ ಭಾವನಾಗೆ, “ಓಕೆ, ಡನ್, ಚಾಲೆಂಜ್, ಇನ್ನೂ ಎರಡೂವರೆ ವರ್ಷ ಇದೆ, ಇಂಜನೀಯರಿಂಗ್ ಆ ಅವಧಿಯೊಳಗೆ, ವಿಶ್ವಾಸ್ ನನ್ನನ್ನು ಪ್ರೀತಿ ಮಾಡುವಂತೆ ಮಾಡುತ್ತೇನೆ?” ಎಂದಳು ಅದಕ್ಕೆ ಭಾವನಾ “ಈ ಕಾರಣಕ್ಕಾಗಿ ನೀನೇನೂ ಕಷ್ಟ ಪಡಬೇಕಾಗಿಲ್ಲ. ಈ ಕಾಲೇಜಿನಲ್ಲಿ ಒಂದು ಹುಡುಗನಿಗೆ ಒಂದು ಹುಡುಗಿ ಜೊತೆಯಿಲ್ಲದಿರುವವರು ನಾವು ಮಾತ್ರ” ಎಂದಳು. “ಹಾಗಾದರೆ ನಾನೇನು ಮಾಡಲಿ, ಅವನೊಂದಿಗೆ ಮಾತನಾಡುವುದು ಬಿಡಲೇ?” ಎಂದಳು ಸುನಿ. “ಅಲ್ಲ, ನಿಜವಾದ ಚಾಲೆಂಜ್ ಎಂದರೆ, ಇನ್ನು ಎರಡೂವರೆ ವರ್ಷದೊಳಗಾಗಿ, ವಿಶ್ವಾಸ್ ನಿನ್ನನ್ನು ಪ್ರೀತಿ ಮಾಡುವಂತೆ ಮಾಡುವುದರ ಜೊತೆಗೆ ನಮ್ಮ ಪದವಿ ಪ್ರದಾನದ ದಿನ, ನಿಮ್ಮಿಬ್ಬರ ಪಾಲಕರೂ ನಿಮ್ಮ ಮದುವೆಗೆ ಒಪ್ಪಿಕೊಳ್ಳುವಂತೆ ಮಾಡು.” ಎಂದಿದ್ದಳು ಭಾವನಾ.

ಆ ಚಾಲೆಂಜ್ ಸ್ವೀಕರಿಸಿದ ಮೂರೇ ದಿನಗಳಲ್ಲಿ, ಸುಲಭಾ ಗುಂಪಿನ ಸುನಿ, ‘ವಿ 3’ ಗುಂಪು ಎಂದು ಹೆಸರಿಸಿ ಕೊಂಡಿದ್ದ, ವಿಶಾಲ್ ಬದರಿ, ವಿಶ್ವಾಸ್, ವಿವೇಕರ ಗುಂಪಿನ ವಿಶ್ವಾಸ್, ಬೇರೆಯಾಗಿ, ಸುವಿ ಗುಂಪಾಗಿದ್ದು ಎರಡೂ ಗುಂಪಿಗೂ ವಿಶೇಷವೆನಿಸಿರಲಿಲ್ಲ. ಅಷ್ಟೇ ಅಲ್ಲ, ಸೀನಿಯರ್ಸ ಎಲ್ಲಾ ಗುಂಪಿನಲ್ಲೂ ಒಂದು ಹುಡುಗ ಹಾಗೂ ಒಂದು ಹುಡುಗಿ ಇಬ್ಬರ ಗುಂಪೇ ಇರುತ್ತಿದ್ದುದರಿಂದ ಇಡೀ ಕಾಲೇಜಿಗೆ ಇವರಿಬ್ಬರೂ ಹೈಲೈಟಾಗಿರಲಿಲ್ಲ.

ಆದರೆ, ಈ ಚಾಲೆಂಜಿನ ಪ್ರೀತಿ, ಚಾಲೆಂಜಿಗಾಗಿ ಮಾತ್ರವಿರದೇ, ವಿಶ್ವಾಸನ ಪಾಲಿಗಂತೂ ನಿಜವಾದ ಪ್ರೀತಿಯಾಗಿತ್ತು. ಯಾಕೆಂದರೆ, ಮೊದಲ ದಿನ ಸುನಿಯನ್ನು ಲ್ಯಾಬ್ ನಲ್ಲಿ ಕೈ ಸುಟ್ಟುಕೊಂಡಾಗ ಬ್ಯಾಂಡೇಜ್ ಹಾಕುವ ಸಮಯದಲ್ಲಿ ದೃಷ್ಟಿಸಿದ್ದು ಕೇವಲ ದುಂಬಿಯಂತಿರುವ ಅವಳ ನೋವಿನಿಂದ ಕಣ್ಣೀರು ಇನ್ನೇನು ಹೊರ ಬೀಳುತ್ತವೆಯೋ ಎಂಬಂತಹ ಕಪ್ಪು ಕಣ್ಣು, ನೀಳ ರೆಪ್ಪೆ, ಅಂದವಾಗಿ ಕತ್ತರಿಸಿದ ಹುಬ್ಬು, ಟ್ರಿಮ್ ಮಾಡಿದ, ಶ್ಯಾಂಪೂ ಪರಿಮಳ ಸೂಸುವ ಹಾರಾಡುವ ಬಿಚ್ಚುಗೂದಲು. ಅವಳಿಗಿಂತ ಹೆಚ್ಚೇ ಎತ್ತರವಿರುವ ವಿಶ್ವಾಸ ಬಾಗಿ ಬ್ಯಾಂಡೇಜ್ ಹಾಕುವಾಗ, ಅವಳ ಮುಂಗುರುಳು ಅವನ ಕೆನ್ನೆಗೆ ಮುತ್ತಿಕ್ಕಿ, ಸ್ಪರ್ಶ ಚಿತ್ರದಲ್ಲಿ ರೇಖಾಳ ಮುಂಗುರುಳಿಗೆ ಸುದೀಪ್ ಹೇಳುವ, ಇಟಗಿ ಈರಣ್ಣನವರ ಶಾಯಿರಿ,

ನಿನ್ನ ಮುಂಗುರುಳು ನೋಡು
ಹ್ಯಾಂಗ ಬಾಗಿ ಬಾಗಿ ನಿನ್ನ
ಕೆನ್ನಿ ಮ್ಯಾಲ ಮುತ್ತು ಕೊಡಾಕತ್ತಾವು…
ನೀ ಅವಕ್ಕ ಭಾಳ ಸಲಗೀ ಕೊಟ್ಟೀ
ಅಂತ ಕಾಣಸ್ತೈತಿ..
ಅದಕ್ಕ ಅವು ನಿನ್ನ ತಲಿ ಮ್ಯಾಲ ಏರಿ ಕುಂತಾವು…

ಬಾಯಿಗೆ ಬಂದಿತ್ತು, ಬಲವಂತದಿಂದ ತಡೆದಿದ್ದ. ಅಂದದ ಹುಡುಗಿ ಅಂದು ಮನಸ್ಸಿನಲ್ಲೇ ಅಂದುಕೊಂಡಿದ್ದ. ವಯೋಸಹಜವಾಗಿ ಮುಂದಿನ ದಿನಗಳಲ್ಲಿ ಕಣ್ಣು ಅವಳೆಡೆಗೆ ಎಳೆದಿತ್ತು. ಅಲ್ಲಿಂದ ಕೂಡಾ ಉತ್ತರ ಬಂದಿತ್ತು. ಆದರೆ, ಅದು ಕೇವಲ ಚಾಲೆಂಜ್ ಎಂಬುದು ಅವನಿಗೆ ಮಾತ್ರ ತಿಳಿದಿರಲಿಲ್ಲ.

ಪ್ರೀತಿ ಎಂಬುದು ಅವನಿಗೆ ಬೇಕಾಗಿತ್ತೊ ಇಲ್ಲವೋ, ಅಂತೂ ಪ್ರೀತಿಯ ಕಣ್ಣಲ್ಲಿ ಮುಳುಗಿ ಏದ್ದಿದ್ದ. ‘ಜಗತ್ತಿನಲ್ಲಿ ನಾನು ನನ್ನ ಹುಡುಗಿ ಇಬ್ಬರೇ ಇರುವುದು’ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದ. ತನ್ನ ಹಿನ್ನೆಲೆಯನ್ನು ತಿಳಿಸಿದ. “ತಾನು ಒಬ್ಬ ಧಾರವಾಡೀ. ಲಾಯರ್ ಕುಟುಂಬದವ. ಅಪ್ಪ ಅಮ್ಮ ಇಬ್ಬರೂ ಲಾಯರೇ. ಅಣ್ಣ ನ್ಯೂಜಿಲ್ಯಾಂಡ್ ನಲ್ಲಿ ಇಂಜಿನೀಯರ್. ಎಸ್ ಎಸ್ ಎಲ್ ಸಿ ವರೆಗೆ ಉತ್ತಮ ವಿದ್ಯಾರ್ಥಿ. ಪಿಯುಸಿಯಲ್ಲಿ ಓದದೇ ಫೇಲಾದಾಗಲೇ ಮನೆಯಲ್ಲಿ ನನ್ನ ಬಗ್ಗೆ ಕಾಳಜಿ ಶುರುವಾಯ್ತು. ಅಷ್ಟರಲ್ಲೇ ಅಣ್ಣ ನ್ಯೂಜಿಲ್ಯಾಂಡ್ ಸೇರಿದ್ದ. ನನ್ನ ಗೆಳೆಯರ ಬಳಗ ಮಾಳಮಡ್ಡಿಯೊಳಗ ಬರೇ ಉಢಾಳತನ ಮಾಡತಾರಂತ ಹೇಳಿ, ಊರು ಬಿಡಿಸಿರಿ, ಬೆಂಗಳೂರಾದ್ರ ಇಂಜಿನೀಯರಿಂಗ್ ಓದಲಿಕ್ಕೂ ಈಸಿ. ಅದಕ್ಕ, ಡಿಪ್ಲೋಮಾ ಸೇರಸರಿ. ಅಂತ ಅಣ್ಣ ಹಠಾ ಹಿಡದ ಅಂದ. ಅಪ್ಪ ಅಮ್ಮಗ ನಾನು ಲಾಯರಾಗಲಿ ಅಂತ ಆಶಾ ಇತ್ತು. ತಮಗ ಉತ್ತರಾಧಿಕಾರಿಯಾಗಲಿ ಅಂತ. ನನಗೂ ಅಲ್ಲೇ ಇರಲಿಕ್ಕೆ ಆಶಾ ಅದ. ಆದರೇನು ಮಾಡೋದು, ಅಲ್ಲಿದ್ದರ ಉದ್ಧಾರ ಆಗೂದುಲ್ಲ ಅಂತ ಅಣ್ಣ ಡಿಸೈಡ್ ಮಾಡಿ ಬಿಟ್ಟಿದ್ದ. ಈಗನೂ ಇಂಜಿನೀಯರಿಂಗ್ ಮುಗಿಸಿ, ಏನರ್ ಮುಂದ ಸ್ಪೆಷಲೈಜ್ ಮಾಡಿ ಧಾರವಾಡದಾಗ ಇರಬೇಕನ್ನೋ ಆಶಾ.”

ಸುನೀಗೂ ವಿಶು ಅಂದರ ಪ್ರಾಣ. ಚಾಲೆಂಜ್ ಆಗಿದ್ದ ಪ್ರೀತಿ ಇಬ್ಬರ ಮೇಲೇನೂ ತನ್ನ ಪರಿಮಳ ಬೀರಿ ಬಿಟ್ಟಿತ್ತು. ‘ದಿಸ್ ಇಸ್ ದ ಟ್ರೂ ಲವ್’ ಅಂತ ಎಲ್ಲರೂ ಅಭಿಮಾನಿಸೋ ಮಟ್ಟಕ್ಕ ಇವರ ಪ್ರೀತಿ ಮುಟ್ಟಿತ್ತು. ಸುನಿ ಕೂಡಾ ವಿಶ್ವಾಸನ ಹತ್ತಿರ ಯಾವುದೂ ಮುಚ್ಚಿಟ್ಟಿರಲಿಲ್ಲ. “ಅಪ್ಪ ಪ್ರಸಿದ್ಧ ಚಾರ್ಟರ್ಡ ಅಕೌಂಟೆಂಟ್. ಅಮ್ಮ ಪಕ್ಕಾ ಮಾಧ್ವ. ಪೂಜೆ ಪುನಸ್ಕಾರ ಜಾಸ್ತಿ. ಒಬ್ಬ ಅಕ್ಕ. ಅಪ್ಪನ ಆಫೀಸಲ್ಲೇ ಮೊದಲು ಜೂನಿಯರಾಗಿದ್ದರು ಭಾವ. ತುಂಬಾ ರಿಚ್ ಫ್ಯಾಮಿಲಿ. ಅವರ ಮನೆಯಲ್ಲಿ ಎಲ್ಲಾ ಖುಷಿಯಾಗಿದ್ದಾರೆ. ಆದರೆ ಅವರದು ಜಾಯಿಂಟ್ ಫ್ಯಾಮಿಲಿ. ಈಗ ಹೆಚ್ಚು ಕಡಿಮೆ ಭಾವನೇ ಅಪ್ಪನ ಆಫೀಸಿನ ಎಲ್ಲಾ ಕಾರ್ಯಗಳ ಜವಾಬ್ದಾರರು. ಇದು ಅಮ್ಮ ಅಪ್ಪನಿಗೂ ಒಪ್ಪಿಗೆ. ನನ್ನನ್ನು ಮಾತ್ರ ಡಾಕ್ಟರ್ ಆಗು ಅಂದರು. ನಾನೇ ಒಪ್ಲಿಲ್ಲ. ಈಗ ಇಬ್ಬರೂ ಸೇರಿ ಸುಧಾ ಮೂರ್ತಿಯವರ ತರಹ ನಾವೇ ಒಂದು ಕಂಪನಿ ಪ್ರಾರಂಭ ಮಾಡೋಣ. ಅದಕ್ಕೆ ಈಗಿನಿಂದಲೇ ಪ್ಲ್ಯಾನ್ ಮಾಡೋಣ” ಎಂದಿದ್ದಳು.

ಈಗ ಇಬ್ಬರ ಕಣ್ಣಿಗೂ ತಮ್ಮ ‘ಕನಸಿನ ಕೂಸು’ ಕಾಣಿಸುತ್ತದೆ. ಧಾರವಾಡದ ಹೊರವಲಯದಲ್ಲಿನ ಬೇಲೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ತಮ್ಮದೊಂದು ಸಾಫ್ಟವೇರ್ ಕಂಪನಿ. ‘ತಾವಿಬ್ಬರೂ ಎಲ್ಲ ದಂಪತಿಗಳಲ್ಲ. ಜಗತ್ತಿನ ಆದಿ ದಂಪತಿಗಳಂತೆ. ತಾವಿಬ್ಬರೂ ಯಾವತ್ತೂ ಒಬ್ಬರ ಮೇಲೆ ಒಬ್ಬರು ನಂಬಿಕೆ ಕಳೆದುಕೊಳ್ಳೋದಿಲ್ಲ. ತಾವಿಬ್ಬರೂ ಯಾವತ್ತೂ ಜಗಳವಾಡೋದಿಲ್ಲ. ಪಾರ್ವತಿ ಪರಮೇಶ್ವರರಂತೆ.’ ಮುಂತಾದ ಕನಸುಗಳು ಅವರ ವಿದ್ಯಾಭ್ಯಾಸಕ್ಕೇನೂ ತೊಂದರೆ ಮಾಡಿರಲಿಲ್ಲ. ಯಾಕೆಂದರೆ ತಮ್ಮ ಕನಸುಗಳೆಲ್ಲಾ ನನಸಾಗಲು ಈ ವಿದ್ಯಾಭ್ಯಾಸ ತುಂಬಾ ಮುಖ್ಯ ಎಂದು ಇಬ್ಬರೂ ಅರಿತಿದ್ದರು. ಇಬ್ಬರಿಗೂ ಖುಷಿಯಿದೆ. ತಮಗೆ ಅನುರೂಪವಾದ ಸಂಗಾತಿ ಸಿಕ್ಕಿರುವ ಬಗ್ಗೆ. ಈ ಬಗ್ಗೆ ಹೆಮ್ಮೆಯೂ ಇದೆ.

ಅವರಿಗೆ ಗೊತ್ತಿಲ್ಲದೇ, ಅವರಿಬ್ಬರೂ ಕಾಲೇಜಿನ ಎಲ್ಲರ ಕಣ್ಮಣಿಯಾಗಿದ್ದರು. ಪ್ರತಿ ವರ್ಷವೂ ಕಾಲೇಜಿನಲ್ಲಿ ಹೊಸ ಹೊಸ ಜೋಡಿಗಳು ಪ್ರೇಮಿಗಳಾಗುತ್ತಾರೆ. ಆದರೆ, ಕೆಲವೇ ದಿನಗಳಲ್ಲಿ ಅವರ ಪ್ರೇಮ ಮುರಿದು ಬೀಳುತ್ತದೆ. ಅಥವಾ ತಮ್ಮ ಡಿಗ್ರಿ ಮುಗಿಯುವ ಹೊತ್ತಿಗೆ ಇಬ್ಬರಿಗೂ ಪ್ರೇಮವನ್ನು ಅನುಭವಿಸಿ ಸಾಕಾಗಿರುತ್ತದೆ. ಒಮ್ಮೆ ಈ ಸಂಬಂಧ ಮುಗಿದರೆ ಸಾಕು ಎನ್ನುವಂತಾಗಿರುತ್ತದೆ. ಇಬ್ಬರೂ ಖುಷಿಯಿಂದಲೇ ಬೇರೆಯಾಗುತ್ತಾರೆ. ಹೊಸ ಜೀವನ ಪ್ರಾರಂಭಿಸುತ್ತಾರೆ. ‘ಸುವಿ’ ಮಾತ್ರ ಪ್ರೇಮವೆಂದರೆ, “ನಾಲ್ಕು ಕಣ್ಣುಗಳಿಂದ ನೋಡಿದ ಒಂದು ದೃಷ್ಟಿ. ನಾಲ್ಕು ಕಿವಿಗಳಿಂದ ಕೇಳಿದ ಒಂದು ಪಾಠ. ನಾಲ್ಕು ಕೈಗಳಿಂದ ಮಾಡಿದ ಒಂದು ಪ್ರಯೋಗ. ಎರಡು ಬುದ್ಧಿ ಶಕ್ತಿಗಳ ಸಮಾಗಮ.” ಎಂದುಕೊಂಡಿದ್ದಾರೆ. ಕೆಲವೊಮ್ಮೆ ಚಾಲೆಂಜ್ ನೀಡಿದ್ದ ಭಾವನಾ ಕೂಡಾ ‘ದೇವರು ನಿಧಾನವಾಗಿ ಬರೆದಿದ್ದ ದೈವೀಕ ಪ್ರೇಮ ಇವರದು’ ಎಂದು ಕೊಂಡಿದ್ದಾಳೆ. ತುಂಬು ಹೃದಯದಿಂದ ಸಂತೋಷಿಸಿದ್ದಾಳೆ.

ಚಾಲೇಂಜ್ ಮಾಡಿ ಪ್ರೇಮಿಸಿದ್ದರೂ ಅದಕ್ಕಾಗಿ ಖುಷಿಯಾಗಿದ್ದಾಳೆ ಸುನಿ. ಇದಕ್ಕೆ ಕಾರಣಳಾದ ಭಾವನಾಗೆ ಉತ್ತಮ ಹುಡುಗನನ್ನು ಸೂಚಿಸಿದ್ದೀಯಾ ಎಂದು ಧನ್ಯವಾದಗಳನ್ನೂ ಹೇಳಿದ್ದಾಳೆ. ಎರಡನೆಯ ವರ್ಷ ಮುಗಿಯುವುದರೊಳಗಾಗಿ ನಿರ್ಧಾರವಾಗಿದ್ದ ಪ್ರೇಮ ಎಲ್ಲರ ಕಣ್ಣಿಗೆ ಬೀಳಲು ಮೂರನೆಯ ವರ್ಷ ಪ್ರಾರಂಭವಾಗಿತ್ತು. ಮೂರನೆಯ ವರ್ಷ ಮುಗಿಯುವುರೊಳಗಾಗಿ, ಕಾಲೇಜಿನ ಗೋಡೆ ಗೋಡೆಗಳಿಗೂ ಅರ್ಥವಾಗಿತ್ತು. ‘ಕೆಲವೇ ಕೆಲವು ಪ್ರೇಮಿಗಳು ವಿದ್ಯೆಯಿಂದ, ಗುಣದಿಂದ, ಸ್ವಭಾವದಿಂದ, ದುಡ್ಡಿನಿಂದ ಹಾಗೂ ರೂಪದಿಂದ ಸಮಾನವಾಗಿರುತ್ತಾರೆ. ಅದರಲ್ಲಿ ಮೊದಲಸ್ಥಾನ ಸಿಗುವುದು ಸುನಿ – ವಿಶ್ವಾಸ (ಸುವಿ) ಇವರಿಗೆ.’ ಕಾಲೇಜಿನ ಇತಿಹಾಸದಲ್ಲೇ ಅಪರೂಪದ ಜೋಡಿಯಿದು. ನೋಡಿದ ಎಲ್ಲಾ ಲೆಕ್ಚರರ್ಸ ಇವರಿಗೆ ಶುಭ ಹಾರೈಸಿದರು, ತುಂಬು ಹೃದಯದಿಂದ.

ನಾಲ್ಕನೆಯ ವರ್ಷದ ಪ್ರಾರಂಭದಲ್ಲೇ ಸುನಿ ತಂದೆ ತಾಯಿಗೆ ತಮ್ಮ ಪ್ರೇಮದ ವಿಷಯ ತಿಳಿಸಿ, ವಿಶ್ವಾಸನ ಬಗ್ಗೆ ತಿಳಿಸಿದಳು. ಅಲ್ಲದೇ ಅವರ ಕುಟುಂಬದ ಬಗ್ಗೆ ಹೇಳಿದಳು. ಒಂದು ದಿನ ವಿಶ್ವಾಸನನ್ನು ಮನೆಗೂ ಕರೆದೊಯ್ದಳು. ಇಂತಹ ರಾಜ ಠೀವಿಯ ಹುಡುಗ ಅಳಿಯನಾಗುವವ ಎಂದು ಸುನಿಯ ತಂದೆ ತಾಯಿ ಹೆಮ್ಮೆ ಪಟ್ಟರು. ತಮ್ಮದೇ ಜಾತಿಯ, ತಮ್ಮದೇ ಅಂತಸ್ಥಿನ, ಸುರದ್ರೂಪಿ ಹುಡುಗ ಎಂದಾಗ ಯಾವುದೇ ಇನ್ನೊಂದು ಮಾತಿಲ್ಲದೇ ಸುನಿಯ ತಂದೆ ತಾಯಿ ತಮ್ಮ ಕಡೆಯಿಂದ ಹಸಿರು ಬಾವಟ ಹಾರಿಸಿದರು. ವಿಶ್ವಾಸನ ಮುಂದಿನ ಗುರಿ ಕೇಳಿ ತಿಳಿದರು. ತಾವು ಧಾರವಾಡದಲ್ಲೇ ನೆಲೆಸುವವರು ಎಂದು ಸ್ಪಷ್ಟವಾಗಿ ವಿಶ್ವಾಸ ತಿಳಿಸಿದ. ಅದಕ್ಕೆ ಸಂತೋಷದಿಂದಲೇ ಒಪ್ಪಿಗೆ ನೀಡಿದ ಸುನಿಯ ಪಾಲಕರು ಒಬ್ಬ ಮಗಳು ಅಳಿಯ ಜೊತೆಗಿದ್ದಾರೆ. ಆದ್ದರಿಂದ, ನಿಮ್ಮ ಈ ನಿರ್ಧಾರಕ್ಕೂ ನಮ್ಮ ಒಪ್ಪಿಗೆಯಿದೆ ಎಂದರು. ಸುನಿಯ ಭಾವ ತುಂಬಾ ವ್ಯವಹಾರಸ್ಥ. ಮಾವನ ವ್ಯಾಪಾರ ವಹಿವಾಟಿಗೆ ಸುನಿ ಮತ್ತು ವಿಶ್ವಾಸ್ ಪಾಲುದಾರರಲ್ಲವೆಂದು ತಿಳಿದು ಸಂತೋಷಪಟ್ಟ. ಅಕ್ಕನಂತೂ ತಂಗಿಯ ಅದೃಷ್ಟವನ್ನು ಕೊಂಡಾಡಿದಳು. ತಂದೆ ಅಳಿಯ ಕಂಪನಿಗೆ ತಮ್ಮಿಂದ ವ್ಯವಹಾರಕ್ಕೂ ಕಂಪನಿ ಪ್ರಾರಂಭದ ಧನ ಸಹಾಯಕ್ಕೂ ತಮ್ಮನ್ನು ಮರೆಯಬೇಡಿರೆಂದು ಆಶ್ವಾಸನೆ ನೀಡಿದಾಗ, ಸನಿ ಧನ್ಯಳಾದೆ ಎಂದು ಕೊಂಡಳು. ಆದರೆ, ವಿಶ್ವಾಸ ಖಡಾಖಂಡಿತವಾಗಿ, “ತಾವಿನ್ನೂ ಎರಡು ಮೂರು ವರ್ಷದ ಓದಿನ ನಂತರ ಮದುವೆ ಹಾಗೂ ಕಂಪನಿ ಪ್ರಾರಂಭಿಸುವುದು” ಎಂದು ಹೇಳಿದ. ಅದಕ್ಕೆ ಸಂತೋಷವಾಗಿ ಸಮ್ಮತಿಸಿದ ತಂದೆ, ತಮ್ಮಿಂದ ಆಗುವಷ್ಟು ಸಲಹೆಗಳನ್ನು ನೀಡಿ, ‘ಗಾಡ್ ಫಾದರ್’ ಆಗುವ ಸೂಚನೆಯನ್ನು ನೀಡಿದರೆ, ತಾಯಿ, ಇನ್ನೂ ಚಿಕ್ಕ ವಯಸ್ಸಿದೆ. ಓದುತ್ತೇವೆಂದರೆ ಸಂತೋಷವೇ ಎಂದರು, ಒಟ್ಟಿನಲ್ಲಿ ಈ ಭೇಟಿ, ಸುನಿ ವಿಶ್ವಾಸರ ಪ್ರೇಮದ ಯಶಸ್ಸಿನ ಮೊದಲ ಮೆಟ್ಟಿಲಾಯಿತು.

ಇನ್ನು ವಿಶ್ವಾಸನ ಮನೆಯಲ್ಲಿ ಒಪ್ಪಿಗೆ ಕೋರಿದಾಗ, ಅಷ್ಟೊಂದು ಸಡಗರದ ಸ್ವಾಗತ ದೊರೆಯಲಿಲ್ಲ. ಆದರೆ, ಒಂದೇ ಮಾತಿನಲ್ಲಿ ಈ ವಿಷಯವನ್ನು ತೆಗೆದೂ ಹಾಕಲಿಲ್ಲ. ಆದರೆ, ಈ ಮಧ್ಯದಲ್ಲಿ ಒಮ್ಮೆ ಧಾರವಾಡಕ್ಕೆ ಹೋದಾಗ, ವಿಶ್ವಾಸ ಅಮ್ಮನ್ನು ಕರೆದುಕೊಂಡು ನುಗ್ಗೀಕೆರಿಗೆ ಹೋದ. ಅಲ್ಲಿ ಹನುಮಂತ ದೇವರ ಪೂಜಾ ಎಲ್ಲಾ ಮುಗಿದ ಮ್ಯಾಲೆ, ಕೆರಿ ದಂಡಿಯ ದಿಬ್ಬದ ಮ್ಯಾಲ ಕೂತು ವಿವರವಾಗಿ ವಿಷಯವನ್ನು ತಿಳಿಸಿದ. ‘ಅವರು ಯಾವ ರೀತಿಯಿಂದನೂ ತಮಗಿಂತ ಕಡಿಮಿಯಿಲ್ಲ. ಒಂದು ರೀತಿಯಿಂದ ನೋಡಿದರೆ ಅವರೇ ಏನಾದ್ರೂ ಕುಂದು ಹುಡುಕಿ ನಮ್ಮ ಪ್ರಪೋಸಲ್ ತೆಗೆದು ಹಾಕಬಹುದಿತ್ತು. ಆದರೆ ಅವರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ನೀವು ಕೂಡಾ ಒಪ್ಪಿಗೆ ಕೊಟ್ರೆ ನನಗ ಸಂತೋಷ. ನಿಮ್ಮ ಒಪ್ಪಿಗೆ ಇಲ್ಲದೆ ನಾವು ಮದುವಿ ವಿಚಾರ ಮಾಡೋದಿಲ್ಲ. ಆದರೆ ನಮ್ಮದು ಅತೀ ಅಪರೂಪದ ಜೋಡಿ ಆಗಿರೋದರಿಂದ, ನಮ್ಮ ಸ್ಟಾಫ್ ಕೂಡಾ ಕಾಯತಿರತಾರ. ನೀವು ಒಪ್ಪಿಕೊಂಡರೆ, ನಮ್ಮ ಕಾನ್ವೋಕೇಷನ್ ದಿನ ಈ ನಮ್ಮ ಜೋಡೀನ ನಿಮ್ಮ ಜೊತೆಗೇ ಸನ್ಮಾನ ಮಾಡೋಣ ಅಂತ ಹೇಳ್ಯಾರ.’ ಎಂದು ತಿಳಿಸಿದ್ದಲ್ಲದೇ. ‘ತಾವಿಬ್ಬರೂ ಧಾರವಾಡದಾಗ ಒಂದು ಕಂಪನಿ ತಗದು ನಿಮ್ಮ ಜೋಡೀನ ಇರತೇವಿ. ಆ ಕಂಪನೀಗೆ ಅವರ ಅಪ್ಪನೂ ಸಪೋರ್ಟ ಮಾಡತಾರಂತ.’ ಈ ಎಲ್ಲಾ ವಿಷಯ ಕೇಳಿ ವಿಶ್ವಾಸನ ಅಮ್ಮ ಒಮ್ಮೆ ಅಕೀ ಜೋಡಿ ನಾ ಮಾತಾಡ ಬೇಕಲ ಅಂದ್ರು. ಕೂಡಲೇ ವಿಶ್ವಾಸ ಸುನಿಗೆ ಫೋನು ಮಾಡಿದ. ವಿಶ್ವಾಸನ ಅಮ್ಮ ಅಕೀ ಜೊತೀಗೆ ಹತ್ತು ನಿಮಿಷ ವಿಶ್ವಾಸನಿಂದ ದೂರ ಹೋಗಿ ನಿಂತು ಮಾತಾಡಿದರು. ಅಮ್ಯಾಲ ಒಂದೇ ಮಾತಿಗೆ ತಮ್ಮ ಒಪ್ಪಿಗಿ ಹೇಳಿದರು. ಅಮ್ಮ ಒಪ್ಪಿದ ಮ್ಯಾಲ ಅಪ್ಪನಿಂದ ಇಂತಹಾ ವಿಷಯದಾಗ ಅಡ್ಡ ಮಾತು ಬರೋ ಸಂಭವ ಇಲ್ಲಾಂತ ವಿಶ್ವಾಸಗ ಗೊತ್ತಿತ್ತು. ರಾತ್ರಿ ಇಬ್ಬರೂ ಕೂತಾಗ ಮತ್ತೊಮ್ಮೆ ಸುನಿ ಜೆತೆಗೆ ವಿಡಿಯೋ ಕಾಲ್ ಮಾಡಿ ಮಾತಾಡಿದ. ಅಕೀಗೂ ಅತ್ತೀ ಮಾವನ ಮ್ಯಾಲ ಪ್ರೀತಿ ಬಂತು. ಅವರೂ ಸುನೀನ ಮೆಚ್ಚಿಕೊಂಡರು.

ಹಂಗಾಗಿ ಹಿಂಗಾಗಿ ಒಟ್ಟಿನ ಮ್ಯಾಲೆ ಮದುವ್ಯಾತು, ಅನ್ನದೆ, ಎಲ್ಲಾ ರೀತಿಯಿಂದ ಸರಿ ಹೋಗಿ, ಸುನಿ ವಿಶ್ವಾಸರ ಮದುವೆಯ ಗಾಡಿ ಹಳಿ ಮೇಲೆ ಓಡಿತ್ತು. ಈಗೀಗ ಅವರವರ ಅತ್ತೀ ಮಾವನವರನ ಮೆಚ್ಚಿಸಲಿಕ್ಕೆ ಇಬ್ಬರೂ ಬಹಳ ಅಂದ್ರ ಬಹಳ ಕಷ್ಟಪಟ್ಟು ಓದುತ್ತಿದ್ದಾರೆ. ಇವರಿಬ್ಬರ ಸ್ಪರ್ಧಾದಾಗ ಬ್ಯಾರೆಯವರಿಗೆ ಮೂರನೇ ಸ್ಥಾನಾನೇ ಗತಿ. ಅದನ್ನ ಕೂಡಾ ಸುನಿಯ ಗೆಳತಿಯರು, ವಿಶ್ವಾಸನ ಗೆಳೆಯರು ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಗುರುಗಳೆಲ್ಲಾ ಇವರಿಬ್ಬರೂ ತಮಗೆ ಕೀರ್ತಿ ತರುವ ವಿದ್ಯಾರ್ಥಿಗಳೆಂದು ಹೆಮ್ಮೆ ಪಡುತ್ತಿದ್ದಾರೆ. ‘ಪ್ರೇಮಿಸಿ ಹಾಳಾದ ವಿದ್ಯಾರ್ಥಿಗಳನ್ನು ನೋಡಿದ್ದೆವು. ಪ್ರೇಮಿ ಗೆದ್ದವರಿವರು. ಮುಂದಿನ ವಿದ್ಯಾರ್ಥಿಗಳಿಗೆ ಮಾದರಿ‘ ಎಂದರು.

ಕಾಲವಂತೂ ಓಡುತ್ತಿದೆ. ಸುನಿ ವಿಶ್ವಾಸರ ಡಿಗ್ರಿ ವಿದ್ಯಾಭ್ಯಾಸ ಮುಗಿಯಿತು. ಇಬ್ಬರೂ ಮೊದಲಿನೆರಡು ಸ್ಥಾನ ಪಡೆದಿದ್ದಾರೆ. ‘ತಮ್ಮ ಪದವಿ ಪ್ರದಾನದ ದಿನ, ಅದರ ಸವಿ ನೆನಪಿನೊಂದಿಗೆ, ತಮ್ಮ ಮುಂದಿನ ಬಾಳಿನ ಬುನಾದಿ ಹಾಡುವ ದಿನ. ತಾವಿಬ್ಬರೂ ಪ್ರಶಸ್ತಿ ಪಡೆದಾಗ ತಮ್ಮ ಎರಡೂ ಕುಟುಂಬದ ಸದಸ್ಯರನ್ನು ವೇದಿಕೆ ಮೇಲೆ ಕರೆದು, ಎರಡೂ ಕುಟುಂಬದ ಸದಸ್ಯರ ಒಪ್ಪಿಗೆಯನ್ನು ಪಡೆದು ನಂತರ ತಮ್ಮ ಮದುವೆಯಯ ಬಗ್ಗೆ ಅನೌನ್ಸ ಮಾಡುವುದು ಅವರ ವಿಚಾರವಾಗಿತ್ತು.’ ಅದಕ್ಕಾಗೇ ನ್ಯೂಜಿಲೆಂಡ್ ನಿಂದ ವಿಶ್ವಾಸನ ಅಣ್ಣ ಸಹ ಬಂದಿದ್ದ. ಧಾರವಾಡದಿಂದ ವಿಶ್ವಾಸನ ತಂದೆ ತಾಯಿಯರು ಹಿಂದಿನ ದಿನವೇ ಬೆಂಗಳೂರಿಗೆ ಬಂದಿದ್ದರು. ಸುನಿಯ ತಂದೆ ತಾಯಿ ಜೊತೆಗೆ ಅಕ್ಕ ಭಾವ ಸಹಾ ಈ ಸಮಾರಂಭಕ್ಕೆ ಬರುವವರಿದ್ದರು.

ಸಮಾರಂಭ ಮಧ್ಯಾನ್ಹ ಎರಡು ಗಂಟೆಗೆ ಪ್ರಾರಂಭವಾಗುವುದಿತ್ತು. ಅದಕ್ಕೂ ಮೊದಲು, ಬಂದ ಅತಿಥಿಗಳಿಗೆಲ್ಲ ಮತ್ತು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆಲ್ಲ ಹಾಗೂ ಅವರ ಕುಟುಂಬದವರಿಗೆಲ್ಲರಿಗೂ ಊಟದ ಕಾರ್ಯಕ್ರಮವಿತ್ತು ಆ ಹೊತ್ತಿನಲ್ಲೇ ಸುನಿ ಮತ್ತು ವಿಶ್ವಾಸನ ಎರಡೂ ಕುಟುಂಬದವರೂ ಪರಸ್ಪರ ಭೇಟಿಯಾಗಿ ಮಾತನಾಡುವುದು ಎಂದು ನಿರ್ಧಾರವಾಗಿತ್ತು. ನಂತರ ಸೀದಾ ಸುನಿಯ ಮನೆಗೆ ತೆರಳಿ, ಅಲ್ಲಿ ನಾಲ್ಕು ಗಂಟೆಯಿದ್ದು ಅಲ್ಲಿಂದ ನೇರವಾಗಿ ರಾತ್ರಿ ಟ್ರೈನ್ ಮುಖಾಂತರ ಧಾರವಾಡಕ್ಕೆ ಹಿಂತಿರುಗುವುದೆಂದು ನಿರ್ಧಾರವಾಗಿತ್ತು.

ಅಂದುಕೊಂಡಂತೆಯೇ ವಿಶ್ವಾಸನ ಜೊತೆಗೆ ಅವನ ತಂದೆ ತಾಯಿ ಮತ್ತು ಅಣ್ಣ, ಕಾಲೇಜ್ ಕ್ಯಾಂಪಸ್ ನಲ್ಲಿಯೇ ಇರುವ ಗಣೇಶನ ದೇವಸ್ಥಾನದ ಮುಂದೆ ಬಂದರು. ಆದರೆ ಈಗಾಗಲೇ ಬಂದಿರಬೇಕಾಗಿದ್ದ ಸುನಿಯ ತಂದೆ ತಾಯಿ ಅಕ್ಕ ಭಾವ ಇನ್ನೂ ಬಂದಿರಲಿಲ್ಲ. ವಿಶ್ವಾಸನ ಅಣ್ಣ “ಒಕೆ, ಹೆಣ್ಣಿನವರೆ ಲೇಟು” ಎಂದ. ವಿಶ್ವಾಸನ ಫೋನಿಗೆ ಸುನಿ, ‘ತಾವು ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಂಡಿರುವುದಾಗಿಯೂ ಬರಲು ತುಸು ತಡವಾಗುವುದಾಗಿಯೂ’ ತಿಳಿಸಿದಳು. ಅಲ್ಲೇ ಫೋನು ಪಡೆದು, ವಿಶ್ವಾಸನ ತಂದೆಯೊಡನೆ ಮಾತನಾಡಿದ ಸುನಿಯ ತಂದೆ, ‘ತಮ್ಮನ್ನು ಕ್ಷಮಿಸಲು ಕೋರಿ, ಟ್ರಾಫಿಕ್ ತುಂಬಾ ಇರುವುದಾಗಿಯೂ, ಬರಲು ವಿಳಂಬವಾಗುವುದಾಗಿಯೂ ತಿಳಿಸಿ, ವಿಶ್ವಾಸನ ಮನೆಯವರೆಲ್ಲರೂ ತಮ್ಮನ್ನು ಕ್ಷಮಿಸಲು ಮತ್ತೊಮ್ಮೆ ಕೋರಿ, ತಮಗಾಗಿ ಕಾಯದೇ ಊಟ ಮಾಡಿ, ಸಭಾಂಗಣದಲ್ಲಿ ಕೂರಲು ಹಾಗೂ ತಮಗೂ ನಾಲ್ಕು ಜನರಿಗೆ ಪಕ್ಕದಲ್ಲಿ ಜಾಗ ಹಿಡಿದಿರಲು ಸಹ ತಮಾಷೆಯಾಗಿಯೇ ವಿನಂತಿಸಿಕೊಂಡರು.’ ಬೆಂಗಳೂರಿನ ಟ್ರಾಫಿಕ್ ವಿಶ್ವ ಪ್ರಸಿದ್ಧಿಯಾಗಿರುವುದು ತಿಳಿದೇ ಇದ್ದ ವಿಶ್ವಾಸನ ಅಪ್ಪ ಅಮ್ಮ ತಾವು ಊಟ ಮಾಡಿದ್ದಲ್ಲದೇ ಸಭಾಂಗಣದ ಗಲಾಟೆ ನೋಡಿ, ದೊಡ್ಡ ಗುಣದಿಂದ ತಮ್ಮ ಬೀಗರಾಗುವವರಿಗೂ ಜಾಗ ಹಿಡಿದಿಟ್ಟುಕೊಂಡರು.

ಸುನಿ ಬಂದವಳೇ ವಿಶ್ವಾಸನ ತಂದೆ ತಾಯಿಗೆ ನಮಸ್ಕರಿಸಿ, ಆಗಲೇ ವೇಳೆಯಾದ್ದರಿಂದ ನೇರವಾಗಿ, ವಿಶ್ವಾಸನೊಂದಿಗೆ ತಮಗೆ ನಿಗದಿ ಪಡಿಸಿದ್ದ ಸ್ಥಾನದಲ್ಲಿ ಕುಳಿತುಕೊಂಡಳು. ಆಕೆಯ ಚಲುವು ವಿಶ್ವಾಸನ ಅಮ್ಮನಿಗೆ ಮೆಚ್ಚುಗೆಯಾಗಿತ್ತು. ಬೀಗರಿಬ್ಬರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡರು.

ಆ ಗಲಾಟೆಯಲ್ಲಿ ಹೆಂಗಸರಿಗೆ ಹೆಚ್ಚು ಮಾತನಾಡಲು ಅವಕಾಶವೀಯದೇ ಸಭೆ ಪ್ರಾರಂಭವಾಗಿ ಬಿಟ್ಟಿತು. ಹೇಗೂ ಕಾರ್ಯಕ್ರಮ ಮುಗಿದ ಕೂಡಲೇ ಸುನಿಯ ಮನೆಗೆ ಹೋಗುವುದಲ್ಲವೇ ಎಂದು ಸುಮ್ಮನಾದರು. ಆದರೆ, ಗಂಡಸರು ಇನ್ನೂ ಮಾತಿನಲ್ಲಿದ್ದರು. ಸುನಿಯ ತಂದೆಗೆ ವಿಶ್ವಾಸನ ತಂದೆಯನ್ನು ನೋಡಿದಾಗ ಎಲ್ಲಿಯೋ ನೋಡಿದಂತಿತ್ತು. ಅದನ್ನೇ ಹೇಳಿದರು. “ತುಂಬಾ ಫ್ಯಾಮಿಲಿಯರ್ ಫೇಸ್. ಎಲ್ಲಿ ನೋಡಿದ್ದೂಂತ ನೆನಪಾಗುತ್ತಿಲ್ಲ” ಎಂದರು. ಅದಕ್ಕೆ ವಿಶ್ವಾಸನ ತಂದೆ, “ನನಗೆ ನೆನಪಿದೆ. ಆಮೇಲೆ ಹೇಳುತ್ತೇನೆ.” ಎಂದರು ಬಿಗುವಾಗಿ. ಅಷ್ಟರಲ್ಲೇ ಸುತ್ತ ಕುಳಿತವರೆಲ್ಲಾ ‘ಹುಶ್, ಹುಶ್’ ಎಂದುದರಿಂದ ನಿರುಪಾಯರಾಗಿ ಇಬ್ಬರೂ ಸುಮ್ಮನಾಗ ಬೇಕಾಯಿತು.

ಕಾರ್ಯಕ್ರಮ ತುಂಬಾ ಚನ್ನಾಗಿ ಆಯಿತು. ಸಮಾರಂಭದ ಅತಿಥಿಗಳು ರಾಷ್ಟ್ರಪತಿಗಳು, ಲಂಚಕೋರರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಸಂತೋಷ ಹೆಗಡೆ. ‘ಮಗಳು, ಅಳಿಯನಾಗುವವ, ಇಬ್ಬರೂ ರ್ಯಾಂಕ್ ಪಡೆದವರು’ ಎಂಬ ಹೆಮ್ಮೆ ಸುನಿಯ ತಂದೆ ತಾಯಿಗಾದರೆ, ‘ಭಾವಿ ಸೊಸೆ ಕೂಡಾ ಮಗನೊಡನೆ ರ್ಯಾಂಕ್ ಪಡೆದಿದ್ದಾಳೆ.’ ಎಂಬ ಪ್ರೀತಿ ವಿಶ್ವಾಸನ ತಂದೆ ತಾಯಿಗಳಿಗೆ.

ಕಾರ್ಯಕ್ರಮದ ಕೊನೆಗೆ ಕಾಲೇಜಿನ ಪ್ರಿನ್ಸಿಪಾಲ್ ರವರು, ಸುನಿ ಹಾಗೂ ವಿಶ್ವಾಸನ ಪ್ರೇಮದ ಬಗ್ಗೆಯೂ ಗುರಿಯ ಬಗ್ಗೆಯೂ ತಿಳಿಸಿ, ಈ ಬಗ್ಗೆ ವಿಶ್ವಾಸನ ಪಾಲಕರು ಹಾಗೂ ಸುನಿಯ ಪಾಲಕರೂ ವೇದಿಕೆ ಮೇಲೆ ಬಂದು ಈ ಪವಿತ್ರ ಪ್ರೇಮಕ್ಕೆ ತಮ್ಮ ಒಪ್ಪಿಗೆಯ ಸಹಿ ಈ ಹಿರಿಯರ ಮುಂದೆ ಹಾಕುವಂತೆ ಕೋರಿದಾಗ, ವೇದಿಕೆಯ ಹಿಂಭಾಗದಲ್ಲಿದ್ದ ಇವರ ಇಬ್ಬರೂ ಪಾಲಕರು ಬರುವವರೆಗೆ ಸ್ವಯಂ ಪ್ರೇರಿತರಾಗಿ ಬಂದು ಶ್ರೀ ಸಂತೋಷ ಹೆಗಡೆಯವರು, ತಾವೂ ಕೂಡಾ ಗೆಳೆಯನ ತಂಗಿಯನ್ನು ಪ್ರೀತಿಸಿಯೇ ಮದುವೆಯಾಗಿದ್ದು ಎಂಬುದಾಗಿ ವಿವರಿಸಿ, ವಿಶ್ವಾಸ ಸುನಿಯರ ಪ್ರೇಮಕ್ಕೆ ಹಿರಿಯರಾಗಿ ತಾವು ಶುಭ ಹಾರೈಸುವುದಾಗಿ ಹೇಳಿದರು.

ಸುನಿಯ ತಂದೆ ಬಂದು, ‘ತಾವು ಹೆಣ್ಣಿನ ತಂದೆಯಾದ್ದರಿಂದ ತಾವೇ ಮೊದಲು ಒಪ್ಪಿಗೆ ಸೂಚಿಸುವುದಾಗಿ ತಿಳಿಸಿದರು. ವಿಶ್ವಾಸನ ಬಗ್ಗೆ ಹೇಳಿ ಅಂತಹ ಹುಡುಗ ತಮಗೆ ಅಳಿಯನಾಗುವುದು ಹೆಮ್ಮೆ. ಅವರ ತಂದೆಯನ್ನು ಎಲ್ಲಿಯೋ ನೋಡಿದಂತಿದೆ. ಅವರನ್ನೂ ಈ ದಿನ ತಮ್ಮ ಮನೆಗೆ ಸ್ವಾಗತಿಸುವುದಾಗಿ ತಿಳಿಸಿದರು.’

ವಿಶ್ವಾಸನ ತಂದೆ ವೇದಿಕೆಯ ಮೇಲೆ ಬಂದವರೇ ಗಂಭೀರವಾಗಿ, ‘ಸುನಿಯ ತಂದೆಗೆ ಹೇಳಿದರು.’ ‘ಅವರಿಗೆ ನನ್ನ ಮುಖದ ನೆನಪೇ ಮರೆತು ಹೋಗಿದೆ. ನಾವಿಬ್ಬರೂ ಬಿ ಕಾಂ ಓದುವಾಗ, ಮೂರನೇ ವರ್ಷದ ಪರೀಕ್ಷೆಯ ಸಮಯದಲ್ಲಿ, ಬೇರೆ ಬೇರೆ ಕಾಲೇಜಿನವರಾಗಿದ್ದರೂ ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದೆವು. ಪರೀಕ್ಷೆಯಲ್ಲಿ ನಕಲು ಹೊಡೆಯುತ್ತಿದ್ದ ಸುನಿಯ ತಂದೆ, ಒಂದೇ ಬಾರಿಗೆ ಇನ್ಸಪೆಕ್ಷನ್ ಗೆಂದು ಬಂದಾಗ, ತಮ್ಮಲ್ಲಿದ್ದ ನಕಲು ಚೀಟಿಯನ್ನು ಆತುರ ಆತುರವಾಗಿ ಹಿಂದಕ್ಕೆ ಎಸೆದರು. ಅದು ನೇರವಾಗಿ ನನ್ನ ಪಕ್ಕಕ್ಕೆ ಬಂದು ಬಿತ್ತು. ಇನ್ಷಪೆಕ್ಷನ್ ಗೆ ಬಂದವರು ನನ್ನನ್ನು ಹಿಡಿದೊಯ್ದರು. ನಾನು ನಕಲು ಮಾಡಿಲ್ಲ. ಆ ಚೀಟಿ ಇವರದು ಎಂದು ಹೇಳಿದರೂ ನಂಬಲಿಲ್ಲ. ಹಾಗೂ ಸುನಿಯ ತಂದೆ ಕೂಡಾ ಈ ಚೀಟಿ ನನ್ನದಲ್ಲವೆಂದು ಹೇಳಿ ಕೈ ಝಾಡಿಸಿ ಬಿಟ್ಟರು. ಆದರೆ, ಪ್ರಿನ್ಸಿಪಾಲರ ರೂಮಿನಲ್ಲೆ ಈ ಬಗ್ಗೆ ನನ್ನನ್ನು ವಿಚಾರಣೆ ಮಾಡಿ, ಕೈ ಬರಹವನ್ನು ಪರೀಕ್ಷಿಸಿದರೂ, ನನ್ನನ್ನು ತಪ್ಪಿತಸ್ಥನೆಂದೇ ತಿಳಿದು, ಆ ವರ್ಷದ ಪರೀಕ್ಷೆಯಿಂದ ಡಿಬಾರ್ ಮಾಡಿದರು. ಇದರಿಂದ ನೊಂದ ನನ್ನ ತಾಯಿ ಮುಂದೆ ನಾಲ್ಕು ತಿಂಗಳಿನಲ್ಲಿಯೇ ಈ ಚಿಂತೆಯಲ್ಲಿಯೇ ನವೆದು ಸವೆದು ತೀರಿಹೋದರು. ನನ್ನದಲ್ಲದ ತಪ್ಪಿಗೆ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ತಂದೆಯ ಮುಂದೆ ಅವಮಾನಕ್ಕೆ ಗುರಿಯಾದೆ. ಛಲದಿಂದ ಚಾರ್ಟರ್ಡ ಅಕೌಂಟೆಂಟ್ ಓದಿದರೂ ಮನದಾಳದಲ್ಲಿ ಒಂದು ರೀತಿಯಲ್ಲಿ ನನಗೆ ನನ್ನ ಮೇಲೆ ಅಪನಂಬಿಕೆಯೇ ಇತ್ತು ಮದುವೆಯಾದ ಮೇಲೆ, ನನ್ನ ಹೆಂಡತಿಯ ಬೆಂಬಲದಿಂದ ಒತ್ತಾಸೆಯಿಂದ ನಿಧಾನವಾಗಿ ಅದರಿಂದ ಹೊರಬಂದೆ. ಆದರೆ, ಎಲ್ಲರಿಗೂ ಇಷ್ಟೆಲ್ಲಾ ಅವಕಾಶಗಳು ಒಳ್ಳೆಯ ಹೆಂಡತಿ ಸಿಗುವುದಿಲ್ಲ. ನಾನು ತಾಯಿಯನ್ನು ಕಳೆದುಕೊಂಡಂತೆ, ಜೀವನವನ್ನೂ ಕಳೆದುಕೊಳ್ಳ ಬೇಕಾಗುತ್ತಿತ್ತು. ಆದ್ದರಿಂದ ಈ ರೀತಿಯ ವಿಶ್ವಾಸ ಘಾತುಕನ ಮಗಳನ್ನು ನನ್ನ ಮಗ ಅದೂ ವಿಶ್ವಾಸನಿಗೆ ತಂದುಕೊಳ್ಳಲು ನನ್ನ ಮನಸ್ಸು ಒಪ್ಪುವುದಿಲ್ಲ. ಎಂದು ಹೇಳಿ ಕೆಳಗಿಳಿದರು.

ಕೂಡಲೇ, ವೇದಿಕೆಯೇರಿ ಮೈಕಿನ ಮುಂದೆ ಬಂದ ವಿಶ್ವಾಸ, ತನಗೆ ಈ ಹಿಂದಿನ ಕಥೆ ಗೊತ್ತಿಲ್ಲದೆ ತಾನು ಸುನಿಯನ್ನು ಪ್ರೀತಿಸಿದೆನೆಂದು ತಿಳಿಸಿ, ಆ ಮನೆತನದವರಿಂದ ನನ್ನ ತಂದೆ ತಮ್ಮ ತಾಯಿಯನ್ನು ಕಳೆದುಕೊಂಡರು, ನಾನೀಗ ಅದೇ ಮನೆತನದ ಹುಡುಗಿಯನ್ನು ಮದುವೆಯಾದರೆ, ತಂದೆ ತಾಯಿ ಇಬ್ಬರನ್ನೂ ಕಳೆದುಕೊಳ್ಳ ಬೇಕಾಗುತ್ತಿದೆ. ಆದ್ದರಿಂದ ದಯವಿಟ್ಟು ನನ್ನನ್ನು ಕ್ಷಮಿಸು ಸುನಿ.” ಎಂದ.

ಲಕ್ಷ್ಮಿ ಭಾವನಾಗೆ ಹೇಳಿದಳು. ನಿಜ, “ದೇವರು ನಮಗೆ ಏನೆಲ್ಲಾ ನೀಡಿದರೂ ಕೆಲವೊಂದು ನಿರ್ಧಾರಗಳನ್ನು ಅವನೇ ಮಾಡುತ್ತಾನೆ. ತೇನ ವಿನಾ ತೃಣ ಮಪಿ ನ ಚಲತಿ. ಆದರೂ ಮುಪ್ಪಿನ ಷಡಕ್ಷರಿಯವರ ‘ತಿರುಕನ ಕನಸು’ ಕವನದಲ್ಲಿ ಹೇಳಿದಂತೆ, ‘ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ’ ಎಂಬುದನ್ನು ಬಿಟ್ಟು ನಾವೇ ಏನಾದರೂ ಸಾಧನೆ ಮಾಡಿದೆವೆಂದು ಹೇಳಲು ಬಯಸುತ್ತೇವೆ.”

-ಡಾ. ವೃಂದಾ ಸಂಗಮ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ

 1. ಎಲ್ಲವೂ ಸುಲಲಿತವಾಗಿ ಸಾಗುವುದು ನೋಡಿದಾಗ ಏನೋ ಇದೆ ಅನ್ನಿಸಿತ್ತು. ಕ್ಲೈಮಾಕ್ಸ್ ಚೆನ್ನಾಗಿದೆ.

  ಆದರೆ ಅಷ್ಟು ವರ್ಷದ ಪ್ರೀತಿಗೆ ಬೆಲೆಯೇ ಇಲ್ಲದಂತಾಯಿತಲ್ಲ. ಬೇಜಾರಾಯಿತು.

  ಬದುಕಿನಲ್ಲಿ ಅಚಾನಕ ತಿರುವುಗಳು ಸಹಜ. ಹಾಗೆಯೇ ಇಲ್ಲಿಯೂ ಸಹ.

  ಚೆನ್ನಾಗಿದೆ 👌👌💐💐

 2. ಕಥಾ ಹಂದರವು ಓದಲು ಚೆನ್ನಾಗಿದೆ. ಇಂದಿನ ಜನಾಂಗದ ವಿದ್ಯಾಥಿ೯ಗಳು ಎಲ್ಲಾ ದ್ರಷ್ಠಿಕೋನದಿಂದ ವಿವೇಚಿಸಿ ಆಯ್ಕೆ ಮಾಡಿಕೊಂಡು ಓದುವುದು ವಾಸ್ತವಾಂಶ. ಆದರೆ,
  ಬಾಳಿನಲ್ಲಿ ಬಯಸುವುದು ಒಂದು ಆಗುವುದು ಇನ್ನೊಂದು ಎಂಬ ಗಾದೆ ಮಾತು ಇದ್ದರೂ, ಇಂದಿನ ಜನಾಂಗದಲ್ಲಿ
  ಸಮಾನ ಮನಸ್ಥಿತಿಯ ಬಾಳ ಸಂಗಾತಿಯನ್ನು ಆರಿಸಿಕೊಂಡು ಹಿರಿಯರು ಹಿಂದೆ ಮಾಡಿದ ತಪ್ಪಿಗಾಗಿ
  ಗಾಗಿ ತ್ಯಾಗ ಮಾಡುವ ಕಿರಿಯರು ಇರುತ್ತಾರಾ ಎಂಬುವುದು ಸಂದೇಹ.

 3. ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ-ಇವರ ಕಥಾ ಹಂದರದ ಪಾತ್ರಗಳು ಇಂದಿನ ಜನಾಂಗದ ವಿಚಾರಧಾರೆಯ ಪ್ರತಿರೂಪ-ಆದರೆ ಅಂತ್ಯದಲ್ಲಿ ಹೆತ್ತವರು ಮಾಡಿದ ವಿಶ್ವಾಸ ಘಾತುಕನದಡಿ ಮಕ್ಕಳ ಭವಿಷ್ಯವನ್ನು ಬಲಿ ನೀಡುವುದು ಮತ್ತು ಮಕ್ಕಳು ತ್ಯಾಗಮಯಿಯಾಗುವುದು ಅಪರೂಪ.

 4. ತುಂಬಾ ಚನ್ನಾಗಿದೆ . ಓದಿಸಿ ಕೊಂಡು ಹೋಗುತ್ತದೆ . ಇಂಥ ಘಟನೆಗಳು ಅನೇಕರ ಜೀವನದಲಿ ಘಟಿಸುತ್ತವೆ . ತಾನೊಂದು ಬಗೆದರೆ ದೈವ ಮತ್ತೊಂದು ಬಗೆದಂತೆ . ಬರವಣಿಗೆಯಲ್ಲಿ ಪ್ರಭುತ್ತತೆ ಎದ್ದು ಕಾಣುತ್ತದೆ . ಇನ್ನೂ ಹೆಚ್ಚಿನ ಬರವಣಿಗೆಗಳ ನೀರಿಕ್ಷೆಯಲ್ಲಿ ನಾವಿರುವೆವು . ಒಳ್ಳೆಯದಾಗಲಿ .

Leave a Reply

Your email address will not be published. Required fields are marked *