ಲೇಖನ

ಮಾತಿಗೊಂದು ಗಾದೆ, ಗಾದೆಗೊಂದು ಬೋಧೆ: ವಿಶ್ವನಾಥ ಸುಂಕಸಾಳ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವಂತೆ ಹಿರಿಯರ ಅನುಭವ ವೇದಾಂತವಾದ ಗಾದೆ ಮಾತುಗಳು ಕನ್ನಡದ ಸುಭಾಷಿತಗಳಿದ್ದಂತೆ. ”ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಗಾದೆ ತಲುಪದ ಕ್ಷೇತ್ರವಿಲ್ಲ. ಗಾದೆ ಮಾತುಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ’ಆರಕ್ಕೇರಿಲ್ಲ ಮೂರಕ್ಕೆ ಇಳೀಲಿಲ್ಲ” ಎಂಬಂಥ ಜೀವನದಲ್ಲಿ ಗಾದೆಗಳು ಜೀವನೋತ್ಸಾಹವನ್ನು ತುಂಬಿ ಮಾರ್ಗದರ್ಶನವನ್ನು ಮಾಡಬಲ್ಲವು. ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬಂತೆ ಒಂದೇ ವಾಕ್ಯದಲ್ಲಿ ಚುಟುಕಾಗಿ ಜೀವನ ಸಂದೇಶವನ್ನು ಬಿತ್ತರಿಸಬಲ್ಲವು. ನಮ್ಮ ಹಿರಿಯರು ಬಾಯಿ ತೆರೆದರೆ ಒಂದು ಗಾದೆ ಮಾತು ಹೇಳುತ್ತಿದ್ದರು. ಅಷ್ಟೇ ಅಲ್ಲ. ಗಾದೆ ಮಾತು ಹೇಳುವ ಸಂದೇಶವನ್ನು ಅವರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ’ಗಾದೆ ಹೇಳೋಕೆ ಬದನೆಕಾಯಿ ತಿನ್ನೋಕೆ” ಎಂಬಂತೆ ಇಬ್ಬಂದಿತನವನ್ನು ಅವರು ಪ್ರದರ್ಶಿಸುತ್ತಿರಲಿಲ್ಲ.

ನಮ್ಮ ಹಿರಿಯರೇ ಹಾಗೆ. ‘ಮಾತಿಗಿಂತ ಕೃತಿ ಮುಖ್ಯ‘ ಎಂದು ನಂಬಿದವರು. ಅವರು ಶ್ರಮಜೀವಿಗಳಾಗಿದ್ದರು. ’ಆಳಾಗಿ ದುಡಿದು ಅರಸನಾಗಿ ಉಣ್ಣುವ ’ ಸ್ವಭಾವದವರಾಗಿದ್ದರು. ’ಕೈ ಕೆಸರಾದರೆ ಮಾತ್ರ ಬಾಯಿಗೆ ಮೊಸರು” ಬೀಳುತ್ತದೆಂದು ನಂಬಿದವರೂ ಆಗಿದ್ದರು. ತನ್ನ ದೌರ್ಬಲ್ಯಕ್ಕೆಲ್ಲಾ ’ಕುಣಿಯಲಾಗದವಳು ನೆಲ ಡೊಂಕು” ಎಂದಂತೆ ನೆವ ಹೇಳುವವರಾಗಿರಲಿಲ್ಲ. ಸತ್ಯ ಪ್ರಾಮಾಣಿಕತೆ ಅವರಿಗೆ ಮುಖ್ಯವಾಗಿತ್ತು. ’ಹೇಳುವುದೊಂದು ಒಂದು ಮಾಡುವುದು ಇನ್ನೊಂದು” ಎಂಬಂಥ ಕಪಟತನ ಅವರಿಗೆ ತಿಳಿದಿರಲಿಲ್ಲ. ಬಡತನವೆಂಬುದು ನಮ್ಮ ಹಳ್ಳಿಯಲ್ಲಿ ಮಾಮೂಲು. ಆದರೂ ಮಾತಿಗೆ ಮನಸ್ಸಿಗೆ ಬಡತನವಿರಲಿಲ್ಲ. ’ಹೆಸರಿಗೆ ಕ್ಷೀರಸಾಗರ ಭಟ್ರು, ಮೊಸರಿಗೆ ಮಾತ್ರ ತತ್ವಾರ” ಎಂಬಂಥ ಸ್ಥಿತಿಯಲ್ಲೂ ಧೃತಿಗೆಡದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು. ಹಾಗಂತ ಎಲ್ಲರೂ ಸಂಭಾವಿತರಾಗಿದ್ದರು ಅಂತಲ್ಲ. ಆದರೆ ಇವತ್ತಿನ ದಿನಮಾನಕ್ಕೆ ಹೋಲಿಸಿದರೆ ಪ್ರಾಮಾಣಿಕತೆಯ ಪ್ರಮಾಣ ಹೆಚ್ಚೇ ಇತ್ತು ಎನ್ನಬಹುದು. ಬಡತನ ಅವರ ನೀತಿವಂತ ಜೀವನಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಅವರ ಜೀವನ ನಮಗೆ ಆದರ್ಶ.

ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂಬ ಮಾತನ್ನು ಹಿರಿಯರ ಮಾತಿನಲ್ಲಿ ಪದೇ ಪದೇ ಕೇಳಬಹುದು.ಇದಕ್ಕೆ ಇವತ್ತಿನ ಶಿಕ್ಷಣವೇ ನೇರ ಕಾರಣ. ಇವತ್ತಿನ ಶಿಕ್ಷಣ ನಮಗೆ ಬದುಕುವ ಕಲೆಯನ್ನು ಕಲಿಸುತ್ತಿಲ್ಲ. ’ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡು’ವುದನ್ನು ಹೇಳಿಕೊಡುತ್ತಿವೆ. ಉತ್ತಮ ಸಂಸ್ಕಾರವನ್ನೂ ತುಂಬುತ್ತಿಲ್ಲ.  ’ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ” ಕಂಡಿಹಿಡಿದು ಅದನ್ನು ಪೋಷಿಸುವ ಕೆಲಸವಾಗುತ್ತಿಲ್ಲ. ಎಲ್ಲರೂ ಪದವೀಧರರಾಗುತ್ತಿದ್ದಾರೆ ಆದರೆ ಯಾರೂ ಮನುಷ್ಯರಾಗುತ್ತಿಲ್ಲ. ತಕ್ಷಣಕ್ಕೆ ತೀರ್ಮಾನ ಕೈಗೊಳ್ಳುವಂಥ ಪ್ರೌಢತೆಯನ್ನು ತುಂಬ ಬೇಕಾದ ಶಿಕ್ಷಣ ’ಹಾವೂ ಸಾಯಬಾರದು ಕೋಲೂ ಮುರಿಯಬಾರದು” ಎಂಬ ರೀತಿಯಲ್ಲಿ ನಿಷ್ಪ್ರಯೋಜಕ ಪಾಠಗಳನ್ನು ಹೇಳಿಕೊಡುತ್ತಿವೆ. ಹೆಚ್ಚು ಹೆಚ್ಚು ಶಿಕ್ಷಣ ಪಡೆದಂತೆಲ್ಲಾ ಸಮಾಜದಲ್ಲಿ ಮೌಲ್ಯ ಕುಸಿಯುತ್ತಿದೆ.ಒಮ್ಮೆಲೇ ವಿದೇಶಕ್ಕೆ ಹಾರುವ ಕನಸು ಕಾಣುತ್ತೇವೆ. ’ಮನೆ ಗೆದ್ದು ಮಾರು ಗೆಲ್ಲುವುದನ್ನು” ಕಲಿಸಬೇಕಿದ್ದ ಶಿಕ್ಷಣ ಕೇವಲ ಪದವಿಗಳ ಸಂಗ್ರಹಕ್ಕೆ ಕಾರಣವಾಗಿದೆ. ಯುವಜನಾಂಗದಲ್ಲಿ ಸರಳತೆ ಮಾಯವಾಗಿದೆ. ’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ” ಎನ್ನುವಂತೆ ನಡೆದುಕೊಳ್ಳುವ ಶೋಕಿ ಪ್ರಧಾನ ಜನಾಂಗವನ್ನು ನಾವಿಂದು ಕಾಣುತ್ತಿದ್ದೇವೆ. ’ತನ್ನ ಕಾಲ ಮೇಲೆ ತಾನು ನಿಲ್ಲು’ವಂಥ ಸ್ವಾಲಂಬನೆಯನ್ನು ಶಿಕ್ಷಣ ನೀಡುತ್ತಿಲ್ಲ. 

ಶಿಕ್ಷಣದ ಮಾತು ಬಂದಾಗೆಲ್ಲಾ ’ಹೇಳಿದ್ದೇ ಹೇಳೋ ಕಿಸಬಾಯಿದಾಸ’ ಎಂಬಂತೆ ಈ ಎಲ್ಲಾ ಆಕ್ಷೇಪಗಳೂ ಸರ್ವೇ ಸಾಮಾನ್ಯವಾಗಿ ಪುನಃಪುನಃ ಕೇಳಿಬರುತ್ತವೆಯಾದರೂ ಇದರಲ್ಲಿ ಹುರುಳಿಲ್ಲದಿಲ್ಲ.  ಶಿಕ್ಷಣದಲ್ಲಿ ನೈತಿಕತೆಯ ಪಾಠ ಕಡಿಮೆಯಾಗಿದ್ದರ ನೇರ ಪರಿಣಾಮವೇ ಭ್ರಷ್ಟಾಚಾರ. ಯಾವುದೇ ವ್ಯಕ್ತಿ ಶಿಕ್ಷಣ ಮುಗಿಸಿ ಬಂದ ಮೇಲೆ ಕೇವಲ ಗಳಿಕೆಯ ಮೇಲೆ ಕಣ್ಣಿಟ್ಟು ಸಾಮಾಜಿಕ ಬದ್ಧತೆಗಳನ್ನು ಗಾಳಿಗೆ ತೂರುವ ಸಂದರ್ಭಗಳು ಹೆಚ್ಚುತ್ತಿವೆ. ’ಆಚಾರವೇ ಸ್ವರ್ಗ ಅನಾಚಾರವೇ ನರಕ” ಎಂಬುದೆಲ್ಲ ಕೇವಲ ಗಾದೆಗೆ ಮಾತ್ರ ಸೀಮಿತವಾಗಿದೆ. ಸ್ವಾರ್ಥಭರಿತ ನಡವಳಿಕೆಗಳು ಸಮಾಜವನ್ನು ಕಿತ್ತು ತಿನ್ನುತ್ತಿವೆ. ಜೊತೆಗೆ ವ್ಯವಸ್ಥೆಯಲ್ಲಿರುವ ಹುಳುಕುಗಳೂ ಕೂಡ ಭ್ರಷ್ಟರಿಗೆ ’ಹಾರೋ ಮಂಗನಿಗೆ ಏಣಿ ಹಾಕಿ ಕೊಟ್ಟಂತೆ’ ಆಗಿವೆ. ಸರ್ಕಾರೀ ಕಛೇರಿಗಳಲ್ಲಿ ಅದೆಷ್ಟು ಲಂಚಗುಳಿತನ ಆವರಿಸಿಕೊಂಡಿದೆಯೆಂದರೆ ಲಂಚ ಕೊಡದೇ ಯಾವ ಕೆಲಸವೂ ಆಗುವುದಿಲ್ಲ. ’ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಕಾಣಿಸುವುದಿಲ್ಲವೇ’?’ ಸರ್ಕಾರ ಕೂಡ ಇಂಥ ಭ್ರಷ್ಟರನ್ನು ಮಟ್ಟ ಹಾಕಲು ಯಾವ ಕಠಿಣ ಕ್ರಮಗಳನ್ನೂ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಮಾಧ್ಯಮಗಳಲ್ಲಿ ವರದಿ ಭಿತ್ತರವಾದಾಗ ಚೂರು ಎಚ್ಚರಗೊಂಡಂತೆ ನಟಿಸುವ ಸರ್ಕಾರಗಳು ’ಅಂಗೈ ಹುಣ್ಣಿಗೂ ಕನ್ನಡಿಯನ್ನು ಅಪೇಕ್ಷಿಸುತ್ತವೆ’.  ಭ್ರಷ್ಟ ವ್ಯವಸ್ಥೆಯ ಚಿಕಿತ್ಸೆಗಾಗಿ ಲೋಕಾಯುಕ್ತಗಳಂಥ ಸಂಸ್ಥೆಗಳಿದ್ದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಒಮ್ಮೆ ಅಮಾನತಾದ ಅಧಿಕಾರಿ ಮತ್ತೆ ನಿಯುಕ್ತಿಗೊಂಡಾಗ ’ನಾಯಿ ಬಾಲ ಡೊಂಕೇ” ಎಂಬಂತೆ ಹಳೇ ಚಾಳಿಯನ್ನೇ ಮುಂದುವರಿಸುತ್ತಾನೆ. ’ಬೇಲಿಯೇ ಎದ್ದು ಹೊಲ ಮೇಯ್ದಂತೆ’ ರಾಜಕಾರಣಿಗಳೇ ಇಂಥವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ’ಅಜ್ಜಿಗೆ ಅರಿವೆ ಚಿಂತೆಯಾದರೆ ಕೂಸಿಗೆ ಮದುವೆ ಚಿಂತೆಯೆಂಬಂತೆ” ಜನರು ಭ್ರಷ್ಟ ವ್ಯವಸ್ಥೆಯಿಂದ ತತ್ತರಿಸುತ್ತಿದ್ದರೆ ಅತ್ತ ಆಳುವವರಿಗೆ ಸರ್ಕಾರ ಉದುರುವುದರೊಳಗಾಗಿ ’ಸಿಕ್ಕಿದ್ದೇ ಸೀರುಂಡೆ’ ಎಂಬಂತೆ ಆದಷ್ಟು ಒಳಗೆ ಹಾಕಿಕೊಳ್ಳಬೇಕೆಂಬ ಹಪಾಹಪಿ. ಯಾವ ಹೊಸ ಯೋಜನೆಗಳು ಜಾರಿಗೆ ಬಂದರೂ ಒಂದು ಬಿಲವನ್ನು ಕೊರೆದೇ ಸೃಷ್ಟಿ ಮಾಡಲಾಗುತ್ತದೆ. ಅವರಿಗೆ ’ಅಜ್ಜಿ ಸುಟ್ಟ ಹಾಗೂ ಆಗಬೇಕು, ಚಳಿ ಕಾಸಿದ ಹಾಗೂ ಆಗಬೇಕು”. 

ಅಷ್ಟಕ್ಕೂ ಭ್ರಷ್ಟಾಚಾರಕ್ಕೆ ಬಹುಮುಖ್ಯ ಕಾರಣವೆಂದರೆ ಬೇಗನೇ ಶ್ರೀಮಂತನಾಗುವ ಯೋಚನೆ. ಎಷ್ಟೆಂದರೂ ’ಕಾಸಿದ್ದರೆ ಕೈಲಾಸ’ವಲ್ಲವೇ, ’ಹಣವಿಲ್ಲದವ ಹೆಣಕ್ಕಿಂತ ಕಡೆ’ ಎಂಬಂತೆ ಹಣವಿದ್ದರೆ ಮಾತ್ರ ಎಲ್ಲವೂ. ಹಣ ಯಾರಿಗೆ ಬೇಡ ಹೇಳಿ? ’ಹಣವೆಂದರೆ ಹೆಣವೂ ಕೂಡ ಬಾಯಿ ಬಿಡುತ್ತದೆ”. ಅಲ್ಲದೇ ಮಾನವ ಸ್ವಭಾವತಃ ಲೋಭಿ. ’ಪುಕ್ಕಟೆ ಸಿಕ್ಕರೆ ತನಗೊಂದು, ತನ್ನ ಅಪ್ಪನಿಗೊಂದು’ ಎಂಬ ಜಾತಿಯವ. ಹೀಗಿರುವಾಗ ಆದಷ್ಟು ಬೇಗ ಶ್ರೀಮಂತನಾಗಿಬಿಡಬೇಕೆಂಬ ಲಾಲಸೆಗೆ ಬೀಳುತ್ತಾನೆ. ಶ್ರೀಮಂತಿಕೆಯ ಆಕರ್ಷಣೆ ಇಂದು ನಿನ್ನೆಯದಲ್ಲ. ಅದರಲ್ಲೂ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಗೆ ಒಳಗಾದ ಮೇಲಂತೂ ಭಾರತದಲ್ಲಿ ಕೊಳ್ಳುಬಾಕ ಸಂಸ್ಕೃತಿ ನೆಲೆಯೂರಿತು. ಅದೀಗ ನಮ್ಮನ್ನು ಪರಮ ಲೋಭಿಗಳನ್ನಾಗಿಸುತ್ತಿದೆ. ’ಸಾಲ ಮಾಡಿಯಾದರೂ ತುಪ್ಪ ತಿನ್ನು’ವಂತೆ ಪ್ರೇರೇಪಿಸುತ್ತಿದೆ.  ’ಅತಿಯಾಸೆ ಗತಿಗೇಡು’ ಎಂಬ ಹಿರಿಯರ ವಿವೇಕ ನಮ್ಮ ಕಣ್ಣು ತೆರೆಸುತ್ತಿಲ್ಲ. ಒಟ್ಟಿನಲ್ಲಿ ಬಯಸಿದ್ದೆಲ್ಲಾ ಸಿಗಬೇಕು ಅಷ್ಟೆ ಎಂಬ ಹಟಕ್ಕೆ ಬಿದ್ದಿದ್ದೇವೆ. ಅದು ನಮ್ಮ ಪತನಕ್ಕೆ ಕಾರಣವಾಗುತ್ತದೆ.

ಇತ್ತ ಅಧಿಕಾರಶಾಹಿಗಳು ಕೂಡ ದಿನಕ್ಕೊಂದು ಕಾಯಿದೆಗಳನ್ನು ತರುತ್ತಾರೆ. ಅದನ್ನು ತರುವಾಗಿನ ಉತ್ಸಾಹ ಅನುಷ್ಠಾನದಲ್ಲಿ ತೋರಿಸುವುದಿಲ್ಲ. ಅದಕ್ಕೇ ಅಧಿಕಾರಿಗಳು ಕೂಡ ’ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿದಂತೆ’ ಜವಾಬ್ದಾರಿಗಳನ್ನು ಬೇರೆಯವರ ಮೇಲೆ ಹಾಕಿ ನೆಮ್ಮದಿಯಿಂದಿರುತ್ತಾರೆ.  ’ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ನೀತಿ ಸರಕಾರಗಳಿಗೆ ಹೊಸದೇನಲ್ಲ. ಈ ಮೂಲಕ ತಮ್ಮ ಕಾಲು ನೆಕ್ಕುವವರಿಗೇ ಉದ್ಯೋಗ, ಭಡ್ತಿ ಎಂದೆಲ್ಲಾ ಒಂದಾದ ಮೇಲೊಂದು ಉಡುಗೊರೆ ಕೊಡುತ್ತವೆ. ಇವರೋ ’ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಮಾವನ ಕಡೆ’ ಎಂಬಂತೆ ನಡೆದುಕೊಂಡು ನಮ್ಮನ್ನು ಹೈರಾಣಾಗಿಸುತ್ತಾರೆ. ಈ ಎಲ್ಲದರ ನಡುವೆ ಜನ ಸಾಮಾನ್ಯ ಮಾತ್ರ ’ಅತ್ತ ದರಿ ಇತ್ತ ಪುಲಿ’ ಎಂಬಂತೆ ಅಡಕತ್ತರಿಯಲ್ಲಿನ ಜೀವನವನ್ನು ನಡೆಸಬೇಕಾಗುತ್ತದೆ.

ಆದರೆ ಇಲ್ಲೊಂದು ವಿಷಯವಿದೆ.  ’ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ’ ಎಂಬಂತೆ ಎಲ್ಲದಕ್ಕೂ ಸರಕಾರವನ್ನೇ ದೂಷಿಸುವುದು ನಮಗೂ ರೂಢಿಯಾಗಿಬಿಟ್ಟಿದೆ.  ಸರಕಾರವನ್ನು ದೂಷಿಸುವ ಭರದಲ್ಲಿ ಭ್ರಷ್ಟಾಚಾರದ ಬೆಳವಣಿಗೆಯಲ್ಲಿ ನಮ್ಮದೂ ದೊಡ್ಡ ಪಾಲಿದೆ ಎಂಬುದನ್ನು ನಾವು ಮರೆತೇ ಬಿಡುತ್ತೇವೆ. ’ಎರಡು ಕೈ ಸೇರಿದರೇ ಚಪ್ಪಾಳೆ’ ಎಂಬಂತೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮ ಸಹಕಾರವೂ ಇದ್ದೇ ಇರುತ್ತದೆ. ’ಲಂಚ ಕೊಟ್ಟು ಮಂಚ ಏರು, ವಂಚನೆ ಮಾಡಿ ಕೈಲಾಸ ಏರು’  ಎಂಬ ಮಾತನ್ನು ಬಹುತೇಕ ನಾವಿಂದು ಅಂಗೀಕರಿಸಿದಂತಿದೆ. ಉದಾಹರಣೆಗೆ ನಮಗೆ ಬಸ್ ನಲ್ಲಿ ಹತ್ತಿರದಲ್ಲೆಲ್ಲೋ ಹೋಗಬೇಕಾಗಿರುತ್ತದೆ. ಎರಡು ಸ್ಟಾಪ್ ದಾಟಿದರೆ ನಾವಿಳಿಯುವ ಜಾಗ ಬರುತ್ತದೆ. ಹಾಗಂತ ಟಿಕೆಟ್ ತೆಗೆಸಿದರೆ ೧೫ ರೂಪಾಯಿ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಂಡಕ್ಟರ್ ಗೆ ಐದೋ ಹತ್ತೋ ಕೊಟ್ಟು ಸುಮ್ಮನಾಗುತ್ತೇವೆ. ’ರೋಗಿ ಬಯಸಿದ್ದೂ ಹಾಲು, ಡಾಕ್ಟರ್ ಕೊಟ್ಟಿದ್ದೂ ಹಾಲು’ ಎಂಬಂತೆ ಆತ ಟಿಕೆಟ್ ಕೊಡದೇ ನೇರವಾಗಿ ಕಿಸೆಗಿಳಿಸುತ್ತಾನೆ. ಇಲ್ಲಿಂದಲೇ ಶುರುವಾಯ್ತು ನೋಡಿ ಭ್ರಷ್ಟಾಚಾರ. ಇನ್ನು ಕೆಲವೊಮ್ಮೆ ವ್ಯವಸ್ಥೆಯಲ್ಲಿರುವ ಲೋಪದೋಷಗಳು ಅಧಿಕಾರಿಗಳನ್ನು ಧೈರ್ಯದಿಂದ ಲಂಚ ಕೇಳುವಂತೆ ಮಾಡುತ್ತವೆ. ’ಹಾಳೂರಿಗೆ ಉಳಿದವನೇ ಗೌಡ’ ಎಂಬಂತೆ ದರ್ಪ ತೋರಿಸಿ ಮುಗ್ಧರನ್ನು ಅವರು ಹೆದರಿಸಿ ಕಾಯ್ದೆ ಕಾನೂನಿನ ಹೆಸರಲ್ಲಿ ಸುಲಿಗೆ ನಡೆಸುವುದೂ ಉಂಟು. ’ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ. ದಕ್ಷಿಣೆ ಹಾಕಿದರೇ ಪ್ರಸಾದ ಸಿಗೋದು’ ಎಂಬ ಅರಿವು ಸರ್ಕಾರೀ ಕಛೇರಿಗಳಲ್ಲಿ ಎಲ್ಲರಿಗೂ ಆಗಿರುತ್ತದೆ. ಹಾಗಿದ್ದೂ ” ಬೆಂಕಿಗೆ ಗಂಟೆ ಕಟ್ಟುವವರು ಯಾರು?’ ಎಂಬಂತೆ ಇಂಥವರನ್ನೆಲ್ಲಾ ಮಟ್ಟ ಹಾಕುವವರು ಯಾರು ಎಂಬುದೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ’ಉಗಿದರೆ ತುಪ್ಪ ಕೆಡುತ್ತದೆ.ನುಂಗಿದರೆ ಗಂಟಲು ಕೆಡುತ್ತದೆ’ ಎಂಬಂಥಾ ಸ್ಥಿತಿ ಎಷ್ಟೋ ಅಸಹಾಯಕರದ್ದು. ಹಳ್ಳಿಗಳಲ್ಲಂತೂ ಇಂಥ ಸಮಸ್ಯೆ ಹೇಳತೀರದು. ಪ್ರಶ್ನಿಸುವ ಮನೋಭಾವ ಮತ್ತು ಧೈರ್ಯದ ಕೊರತೆ ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ. ’ಒಗ್ಗಟ್ಟಿನಲ್ಲಿ ಬಲವಿದೆ’ ಎಂಬುದು ಗೊತ್ತಿದ್ದೂ ನಾವು ಒಟ್ಟಾಗಿ ಇಂಥವನ್ನು ಎದುರಿಸುತ್ತಿಲ್ಲ. ನೇತೃತ್ವ ವಹಿಸಿ ಹೋಗುವವರಿಗೂ ನಾವು ಬೆಂಬಲ ನೀಡುವುದಿಲ್ಲ. ಅಷ್ಟಕ್ಕೂ ಯಾರಾದರೂ ಮುಂದಾಗಿ ಹೋದರೂ ’ಬೀದಿಲಿ ಹೋಗೋ ಮಾರಿಯನ್ನ ಮನೆಗೆ ಕರ್ಕೊಂಡ್ ಬಂದ’ ಅಂತಲೋ ಅಥವಾ ’ವಿನಾಶ ಕಾಲೇ ವಿಪರೀತ ಬುದ್ಧಿ” ಅಂತಲೋ ಜನ ಅವರನ್ನೇ ಆಡಿಕೊಳ್ಳುತ್ತಾರೆ.  ಹಾಗಾಗಿಯೇ ಯಾರೂ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳಲು ಧೈರ್ಯ ತೋರುವುದಿಲ್ಲ.

ಇನ್ನು ರಾಜಕಾರಣಿಗಳ ವಿಷಯಕ್ಕೆ ಬಂದರೆ, ’ಜನ ಸೇವೆಯೇ ಜನಾರ್ದನನ ಸೇವೆ’ ಎನ್ನುತ್ತಾ ಜನರನ್ನು ಮರಳು ಮಾಡುವ ಇವರಿಗೆ ಜನರ ನೆನಪಾಗುವುದೇ ಚುನಾವಣೆಯ ಸಂದರ್ಭದಲ್ಲಿ.  ನಾನಾವಿಧ ಸುಳ್ಳುಗಳನ್ನು ಹೇಳಿ ಒಮ್ಮೆ ಆಯ್ಕೆಯಾದರೆ ಮುಗೀತು, ಮತ್ತೆ ತಿರುಗಿ ನೋಡುವುದಿಲ್ಲ. “ಹೊಳೆ ದಾಟಿದ ಮೇಲೆ ಅಂಬಿಗನ ಮಿಂಡ”. ಇದೆಲ್ಲಾ ಗೊತ್ತಿದ್ದೂ ನಾವು ಅವರನ್ನು ಪ್ರಶ್ನಿಸುವುದಿಲ್ಲ. ಜನರಿಂದಲೇ ಆಯ್ಕೆಯಾಗಿ ಅವರ ಹಣದಲ್ಲೇ ಮೆರೆಯುತ್ತಾ ’ಉಂಡ ಮನೆಗೆ ಕನ್ನ ಹಾಕುವ’  ರಾಜಕಾರಣಿಗಳನ್ನು ಚುನಾವಣೆಗಳಲ್ಲಿ ಸೋಲಿಸಬೇಕು. ಚುನಾವಣೆಯೆಂಬುದು ಪ್ರಜಾಪ್ರಭುತ್ವದ ಹಬ್ಬ. ಅಲ್ಲಿ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಗೂ ತನ್ನ ರಾಷ್ಟ್ರದ ನಾಯಕ ಯಾರಾಗಬೇಕೆಂದು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಇಂಥ ಅಮೂಲ್ಯ ಅವಕಾಶವನ್ನು ಬಳಸಿಕೊಳ್ಳದಿದ್ದರೆ ನಂತರ ’ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ ಪಶ್ಚಾತ್ತಾಪ ಪಡುವುದೊಂದೇ ನಮಗುಳಿಯುವ ದಾರಿ. ಆದರೆ ”ಆಗಿ ಹೋಗಿದ್ದಕ್ಕೆ ಚಿಂತಿಸಿ ಫಲವೇನು?’. ಹಾಗಾಗಿ ಪ್ರತಿಯೊಬ್ಬ ಪ್ರಜೆ ಕೂಡ ಚುನಾವಣೆಯೆಂಬ ಮಹಾಯಜ್ಞದಲ್ಲಿ ಭಾಗವಹಿಸಿ ರಾಷ್ಟ್ರದ ಬಗೆಗಿನ ಕರ್ತವ್ಯವನ್ನು ನಿಭಾಯಿಸಬೇಕು. ತವುಡು ತಿಂಬುವವ ಹೋದರೆ ಉಮಿ ತಿಂಬುವವ ಬತ್ತಾನೆ’ ಎಂಬುದು ಹೌದಾದರೂ ನಿರಾಶಾವಾದಿಗಳಾಗಬೇಕಿಲ್ಲ. ’ಯಾರು ಬಂದರೂ ರಾಗಿ ಕುಟ್ಟುವುದು ತಪ್ಪುವುದಿಲ್ಲ’ ಎನ್ನುವ ಸಿನಿಕತನವನ್ನ ಬದಿಗೆ ಸರಿಸಿ, ಯಾವ ಆಮಿಷಗಳಿಗೂ ಒಳಗಾಗದೇ, ಮತದಾನವೆಂಬ ಪವಿತ್ರ ಕಾರ್ಯದಲ್ಲಿ ತೊಡಗಬೇಕು. ’ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ’ ಎಂಬಂತೆ ಮತದಾನ ಮಾಡದೇ ಮನೆಯಲ್ಲೇ ಕೂತು ವ್ಯವಸ್ಥೆಯ ಬಗ್ಗೆ ಟೀಕೆ ಮಾಡುತ್ತಾ ಕುಳಿತುಕೊಳ್ಳುವ ”ರಾಷ್ಟ್ರಭಕ್ತಿ’ ಇದ್ದರೆಷ್ಟು ಬಿಟ್ಟರೆಷ್ಟು. ’ಹಾಲಿದ್ದಾಗ ಹಬ್ಬ ಮಾಡಬೇಕು, ಹಲ್ಲಿದ್ದಾಗಲೇ ಕಡಲೆ ತಿನ್ನ ಬೇಕು’ ಅಲ್ಲವೇ? 

(ಅಂದ ಹಾಗೆ ಈ ಲೇಖನದಲ್ಲಿ ಎಷ್ಟು ಗಾದೆ ಮಾತನ್ನು ಬಳಸಲಾಗಿದೆ?)                                        

(ಮುಂದುವರಿಯುವುದು…..)

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಮಾತಿಗೊಂದು ಗಾದೆ, ಗಾದೆಗೊಂದು ಬೋಧೆ: ವಿಶ್ವನಾಥ ಸುಂಕಸಾಳ

  1. ಚೆನ್ನಾಗಿದೆ ವಿಶ್ವನಾಥ್ ಅವರೇ. 51 ಲೆಕ್ಕ  ಸಿಕ್ತು.. ೩೮ನೆಯದ್ರಲ್ಲಿ ಬೆಕ್ಕಿಗೆ ಘಂಟೆ ಕಟ್ಟೋರು ಆಗ್ಬೇಕಿತ್ತಲ್ವಾ ಅನಿಸಿತು 🙂

    1. ಧನ್ಯವಾದ ಪ್ರಶಸ್ತಿಯವರೆ… ಹೌದು ಅದು ಬೆಂಕಿ ಅಂತಾಗಿ ಅರ್ಥ ’ಹೊಗೆ’ ಹಾಕಿಕೊಂಡಿದೆ. ಅಂದ ಹಾಗೆ ಲೆಕ್ಕ ಹತ್ತಿರ ಹತ್ತಿರ ಸರಿ ಇದೆ 🙂

  2. ಹ ಹ .. ಪಂಜು ಎಷ್ಟು ಸಂಚಿಕೆ ಆಯ್ತೋ ಅಷ್ಟು ಗಾದೆ ಹಾಕೋ ಇರಾದೆಯಲ್ಲಿರಬಹುದೇನೋ ಅಂದುಕೊಂಡಿದೆ ಲೇಖನದ ಮೊದಲಾರ್ಧ ಓದುವಾಗ :-)..ಚೆನ್ನಾಗಿದೆ ಮುಂದುವರೆಸಿ

  3. ನನಗದು ಹೊಳೀಲೇ ಇಲ್ಲ ನೋಡಿ..ಹಾಗೇ ಮಾಡ್ಬಹುದಿತ್ತು

  4. ನಿಮ್ಮ ಲೇಖನ ಸರಣಿ ಹಾಗೂ ವಿಚಾರ ಸರಣಿಗಳು ಚಲನಚಿತ್ರ ನಿದೇ೵ಶಕ ಯೋಗೃಆಜ ಭಟ್ಟರ ಶ್ಯಲಿಯಂತೆ ತುಂಬಾ ಮೊನಚು ಮತ್ತು ವ್ಯಂಗ್ಯಭರಿತವಾಗಿವೆ.  ಮುಂದುವರೆಸಿ  ತಾಕಿ೵ಕ  ಅಂತ್ಯ ನೀಡಿ.

     

    ಸುರೇಂದ್ರ . ಜಿ.ಎಸ್.

Leave a Reply

Your email address will not be published. Required fields are marked *