ಮಾನವ ಜನ್ಮ ದೊಡ್ಡದು ಅಂತ ದಾಸರು ಇದಕ್ಕೇ ಹೇಳಿರಬೇಕು. ಯಾಕೆಂದರೆ ನಾವು ಪ್ರಾಣಿ ಪಕ್ಷಿಗಳಿಂದ, ಕ್ರಿಮಿಕೀಟಾದಿಗಳಿಂದ, ಹೆಚ್ಚೇಕೆ ಸಕಲ ಜೀವ ಸಂಕುಲಗಳಿಗಿಂತ ಅದೆಷ್ಟೋ ಭಿನ್ನವಾದರೂ, ಅವರಿಗಿಂತ ರೂಪು ಲಾವಣ್ಯದಲ್ಲಿ ಮಿಗಿಲಾದರೂ, ಅದೆಲ್ಲಕ್ಕಿಂತ ಹೆಚ್ಚಾಗಿ ನಮಗೆ ಆಲೋಚಿಸುವ, ಯೋಚಿಸಿದ್ದನ್ನು ಹಿಂದು ಮುಂದು ನೋಡದೆ ಒದರುವ , ಅಂದರೆ ಮಾತನಾಡುವ ವಿಶೇಷ ಶಕ್ತಿ ಇರುವುದರಿಂದಲೋ ಏನೋ ನಾವುಗಳು ಎಲ್ಲರ ದೃಷ್ಟಿಯಲ್ಲಿ ಕೃತಾರ್ಥರಾಗಿರುವುದು. ಇನ್ನು ಮನುಷ್ಯನಿಗೆ ಬಾಯಿ ತಿನ್ನಲು ಮಾತ್ರ ಅಲ್ಲ, ಅದು ಮಾತನಾಡುವ ಕೆಲಸ ಕೂಡ ಮಾಡುತ್ತದೆ ಅಂದರೆ ಇದಕ್ಕಿಂತ ದೊಡ್ದ ಭಾಗ್ಯ ಬೇರೊಂದಿಲ್ಲ. ಬಹುಷ: ಇದಕ್ಕೇ ಇರಬೇಕೇನೋ ಮನುಷ್ಯ ಸಿಕ್ಕ ಸಿಕ್ಕ ಅವಕಾಶಗಳ ಯಾವುದನ್ನೂ ತಪ್ಪಿಸಿಕೊಳ್ಳದೆ ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಸದುಪಯೋಗ ಪಡಿಸಿಕೊಳ್ಳಲೋಸುಗ ಸದಾ ಮಾತನಾಡುತ್ತಲೋ, ಅಥವಾ ವಟಗುಟ್ಟುತ್ತಲೋ ಇರುವುದು. ಕೇಳುಗರು ಇದ್ದಾರೋ ಇಲ್ಲವೋ ಅದು ಮತ್ತಿನ ಪ್ರಶ್ನೆ. ಇದು ಒಂದು ರೀತಿಯಲ್ಲಿ ಸರಿಯೇ. ಸದಾ ಮೂದೇವಿಯಂತೆ ಮೌನವಾಗಿದ್ದರೆ ಏನು ಚೆಂದ?. ಮತ್ತು ಆ ಮಾತಿಗೇನು ಅರ್ಥ?. ಅದೂ ಅಲ್ಲದೆ ಮಾತು ಬಂದೂ ಬಾಯಿ ಬರದವರ ಹಾಗೆ ವರ್ತಿಸಿದರೆ ಏನು ಪ್ರಯೋಜನ?. ಅದಕ್ಕೇ ಇರಬೇಕು ಮಾತು ಬೆಳ್ಳಿ, ಮೌನ ಬಂಗಾರ ಅಂತ ಮೌನವನ್ನು ಅಟ್ಟಕ್ಕೇರಿಸಿ ಅದಕ್ಕೆ ಚಿನ್ನದ ಮುಕುಟ ತೊಡಿಸಿ ಕುಳ್ಳಿರಿಸಿದರೂ, ಬಂಗಾರಕ್ಕಿಂತ ತೂಕ ಕಡಿಮೆ ತೂಗಿದರೂ ಅಡ್ಡಿ ಇಲ್ಲ. ಬೆಳ್ಳಿ ಬೆಲೆಯಾದರೂ ಸಿಕ್ಕೇ ಸಿಗುತ್ತಲ್ಲಾ ಅಂತ ಸಮರ್ಥಿಸಿಕೊಂಡು ನಮ್ಮವರು ಹಠಕ್ಕೆ ಬಿದ್ದವರಂತೆ ಬಾಯಿ ತೆರೆದೇ ಇಟ್ಟು ಮಾತಿಗೆ ಸಾಣೆ ಕೊಡುತ್ತಲೇ ಇರುತ್ತಾರೆ.
ಮಗು ತೊದಲು ನುಡಿಯಲು ಶುರು ಮಾಡಿದರೆ ಸಾಕು, ನಾವೆಲ್ಲಾ ಅದೆಷ್ಟು ಸಂಭ್ರಮಿಸುತ್ತೇವೆ ಎಂದರೆ ಈ ಆರಂಭಿಕ ಹಂತದಲ್ಲಿ ಮಗುವಿಗೆ ನಮಗೆ ತಿಳಿದ ಜಗತ್ತಿನ ಎಲ್ಲಾ ಭಾಷೆಗಳನ್ನು, ಎಲ್ಲಾ ಮಾತುಗಳನ್ನು ಹೇಳಿಕೊಟ್ಟು ಅದನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಆದರೆ ಈ ಪುಟಾಣಿ ಪುಟ್ಟು ಕಂದಮ್ಮಗಳು ನೀವು ಹೇಳಿ ಕೊಡುವ ಭಾಷೆಗೂ ನನಗೂ ಅದ್ಯಾವುದೇ ಸಂಬಂಧ ಇಲ್ಲವೆನ್ನುವ ರೀತಿಯಲ್ಲಿ ಭಾಷೆಯ ಹಂಗಿಗೆ ಒಳಪಡದ ಬಾಲ ಭಾಷೆಯಲ್ಲಿ ಅದೇನನ್ನೋ ಹೇಳುತ್ತಾ ಸಂಭ್ರಮಿಸುತ್ತಿರುತ್ತವೆ. ಇನ್ನು ಕೆಲವು ಮಕ್ಕಳು ಎಷ್ಟು ಮಾತನಾಡಿಸಿದರೂ ಮಾತನಾಡದೆ ಕಿರುನಗುವೇ ಅವರ ಉತ್ತರವಾದಾಗ ಹೆತ್ತವರ ಸಂಕಟ ಹೇಳತೀರದು. ತನ್ನ ಮಗುವಿಗೆ ಮಾತು ನಿಧಾನ ಅಂತ ಒಳಗೊಳಗೆ ವೇದನೆಯನ್ನು ಅನುಭವಿಸುತ್ತಿರುತ್ತಾರೆ. ಮುಂದೆ ಆ ಮಗು ಸಿಕ್ಕಾಪಟ್ಟೆ ವಾಚಾಳಿಯಾದಾಗ ಮಾತ್ರ ಹೆತ್ತವರೇ ಬಾಯಿಮುಚ್ಚಿಸಲು ಹೆಣಗಾಡಬೇಕಾಗುತ್ತದೆ. ಮಾತು ಆಡಿದರೂ ಕಷ್ಟ , ಆಡದಿದ್ದರೆ ಮತ್ತೂ ಕಷ್ಟ. ಇಂತಹ ಹೊತ್ತಲ್ಲಿ ಮಾತನ್ನು ಎಲ್ಲಿ ಆಡಬೇಕು? ಎಷ್ಟು ಆಡಬೇಕು?ಮಾತಾಡದೇ ಕೋಲು ಬಸವನ ಹಾಗೆ ಯಾವಾಗ ನಿಂತಿರಬೇಕು ಎಂಬ ಗೊಂದಲ ಆವರಿಸಿಕೊಳ್ಳುವಾಗ ಮಾತನ್ನು ಹೇಗೆ ವ್ಯಾಖ್ಯಾನಿಸಬೇಕೆಂಬುದೇ ಗೊತ್ತಾಗುತ್ತಿಲ್ಲ. ಅದೇನೇ ಇರಲಿ, ಇಂತಹ ವಾದ ವಿವಾದ, ಉತ್ತರ ಪ್ರತ್ಯುತ್ತರಗಳು ಮಾತು ಗೊತ್ತಿರುವುದರಿಂದ ತಾನೇ ಮಾತಿನ ಮೂಲಕ ಇವನ್ನೆಲ್ಲಾ ಹೇಳಲು ಸಾಧ್ಯ ಅಂತ ಗುಂಗಿಗೆ ಬಿದ್ದಾಗ ಮಾತ್ರ ಅಚ್ಚರಿಯಾಗುತ್ತದೆ.
ಒಂದಷ್ಟು ವರುಷಗಳ ಹಿಂದೆ ನಮ್ಮ ಮಾತುಗಳು ಸೀಮಿತ ಚೌಕಟ್ಟಿನೊಳಗಷ್ಟೇ ಸಾಗುತ್ತಿತ್ತು. ಮನೆಯವರ ಜೊತೆ ತಪ್ಪಿದರೆ ನೆರೆ ಹೊರೆ. ಮತ್ತೆ ಶಾಲೆಯಲ್ಲಿಯೇ. ನೇರ ಸಂಭಾಷಣೆಗೆ ಮತ್ತೆಲ್ಲಿಯೂ ಅವಕಾಶವಿರಲಿಲ್ಲ. ಉಳಿದಂತೆ ಪತ ್ರವ್ಯವಹಾರ ನಮ್ಮೆಲ್ಲರ ಭಾವಗಳ ರವಾನೆಗೆ, ಮೌಖಿಕ ಸಂಭಾಷಣೆಯ ಲಿಖಿತ ರೂಪಕ್ಕೆ ಮಾಧ್ಯಮವಾಗುತ್ತಿತ್ತು. ಹಾಗಾಗಿ ನಾವು ಆಡಬೇಕಾದ್ದ ಖುಷಿಯ ಸಂಗತಿಗಳನ್ನು, ನೋವಿನ ಎಳೆಯನ್ನು, ಕೌತುಕದ ಸನ್ನಿವೇಷಗಳನ್ನು, ಪ್ರೇಮಲಹರಿಯನ್ನು, ಇನ್ನು ಕೆಲವೊಮ್ಮೆ ಗೋಪ್ಯಾತಿಗೋಪ್ಯ ಗುಟ್ಟುಗಳನ್ನು ಹಾಳೆಯ ಮೇಲೆ ಬರಹಕ್ಕಿಳಿಸಿ, ಅದು ರಟ್ಟಾಗದಂತೆ ಅದನ್ನು ಲಕೋಟೆಯ ಮಧ್ಯಕ್ಕೆ ತೂರಿಸಿ ಅದರ ಮೇಲೊಂದು ಅಂಚೆ ಚೀಟಿ ಅಂಟಿಸಿ , ಗಟ್ಟಿಯಾಗಿ ಗೋಂದು ಗುದ್ದಿ ಯಾರ್ಯಾರದೊ ಕೈಯಲ್ಲಿ ಭರವಸೆಯಲ್ಲಿ ಇಟ್ಟು ಅದನ್ನು ಪೆÇೀಸ್ಟು ಡಬ್ಬಿಯೊಳಗೆ ಇಳಿಸಲು ದುಂಬಾಲು ಬೀಳಬೇಕಿತ್ತು. ಇನ್ನು ಪೆÇೀಸ್ಟು ಹಾಕಲು ಕಳುಹಿಸಿದ ಅಸಾಮಿಗೂ, ಅಂಚೆ ಹೊತ್ತು ತರುವ ಅಂಚೆಯಣ್ಣನಿಗೂ ಧಕ್ಷಿಣೆ ರೂಪದಲ್ಲಿ ಏನಾದರೂ ಕೊಟ್ಟು ಅವರಿಗೆ ವಿಶೇಷವಾದ ಮಣೆ ಹಾಕಿದರೆ ಮಾತ್ರ ಕೆಲಸ ಸಲೀಸು. ಅಷ್ಟೆಲ್ಲಾ ಕುಣಿದರೂ ಲಕೋಟೆ ತೆಗೆದುಕೊಂಡು ಹೋದವರು ಅದನ್ನು ನೇರ ಅಂಚೆ ಡಬ್ಬಿಗೆ ಹಾಕಿಯೇ ಹಾಕುತ್ತಾರೆಂಬ ಯಾವ ಪೂರ್ಣ ಪ್ರಮಾಣದ ಖಾತ್ರಿಯಂತೂ ಇಲ್ಲ. ನಮ್ಮ ಪತ್ರಕ್ಕೆ ಆಚೆಯಿಂದ ಪ್ರತ್ಯುತ್ತರ ಬಂದ ಮೇಲಷ್ಟೇ ನಮ್ಮ ಅನುಮಾನ ಪರಿಹಾರವಾಗುವುದು. ಪಾಪ! ಕೆಲವೊಮ್ಮೆ ನಿಯತ್ತಿನಿಂದ ಡಬ್ಬಿಗೆ ಹಾಕಿದವರೂ ಉತ್ತರ ಬರೆಯಲಾರದವರ ಬೇಜವಾಬ್ದಾರಿತನದಿಂದ ಇವರೂ ಸಂಕಷ್ಟಕ್ಕೆ ಗುರಿಯಾಗಬೇಕಾದ ಪ್ರಸಂಗ. ಒಂದು ಸಂಭಾಷಣೆಗೆ ನಾವು ಇಷ್ಟೆಲ್ಲಾ ಹರಸಾಹಸ ಪಟ್ಟು ವಾರಗಟ್ಟಲೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಇನ್ನು ಅದು ತುರ್ತು ಪತ್ರವೋ, ಪ್ರೇಮ ಪತ್ರವೋ ಆಗಿದ್ದರಂತೂ ಅವರ ಕಾಯುವಿಕೆಯ ಚಡಪಡಿಕೆ ಅವರಿಗಷ್ಟೇ ಅರ್ಥವಾಗಲು ಸಾಧ್ಯ. ಆಗೆಲ್ಲಾ ಇನ್ನು ಭವಿಷ್ಯದಲ್ಲಿ ನಾವು ಮಾತನಾಡಲು ದುಡ್ಡು ತೆರಬೇಕಾದೀತು ಅಂತ ಯಾರೋ ಮಹಾನ್ ಭವಿಷ್ಯಕಾರರು ಭವಿಷ್ಯವಾಣಿ ನುಡಿದಿದ್ದಾರೆ ಅಂತ ನಮ್ಮ ಹಿರಿಯರೆಲ್ಲರೂ ಹೇಳುತ್ತಿದ್ದ ಮಾತುಗಳು ಇನ್ನು ನನ್ನ ಸ್ಮೃತಿಯೊಳಗೆ ಅಚ್ಚಳಿಯದೆ ಹಾಗೇ ಉಳಿದಿದೆ. ಆಗ ಆ ಭವಿಷ್ಯವಾಣಿಯ ಒಳ ಅರ್ಥ ಅವರಿಗೂ ಗೊತ್ತಿರಲಿಲ್ಲ. ನಮಗೂ ಗೊತ್ತಾಗಲಿಲ್ಲ. ದುಡ್ಡು ಕೊಟ್ಟು ಮಾತನಾಡುವುದರ ಅರ್ಥ ನಮ್ಮ ದಡ್ಡ ತಲೆಗೆ ಹೊಕ್ಕಿಯೇ ಇರಲಿಲ್ಲ. ನಾವುಗಳು ಎಷ್ಟು ಪೆದ್ದುಗಳು ಅಂದರೆ ನಿಧಾನಕ್ಕೆ ಟೆಲಿಫೆÇೀನುಗಳು ಉಳ್ಳವರ ಮನೆಯ ಪಡಸಾಲೆಯ ಟೀಪಾಯಿಯ ಮೇಲೆ ಹೊದಿಕೆ ಹೊದ್ದುಕೊಂಡು ಬೆಚ್ಚಗೆ ಮಲಗಿ ಅದರೊಳಗಿಂದ ಟ್ರಿಣ್ ಟ್ರಿಣ್ ಅಂತ ರಾಗ ಕೊಯ್ಯುವಾಗಲೂ ಕೂಡ ಬೆರಗುಗಣ್ಣಿನಿಂದ ದಿಟ್ಟಿಸುತ್ತಿದ್ದೆವೇ ಹೊರತು ಅದು ಕಾಸು ಕೀಳುತ್ತಿದೆ ಅಂತ ಗೊತ್ತಾಗಿರಲಿಲ್ಲ. ಈಗ ಎಲ್ಲರ ಮನೆಯ ಎಲ್ಲಾ ಸದಸ್ಯರ ಕಿವಿ, ಬಾಯಿ, ಕೈ ಬಿಡುವೇ ಇಲ್ಲದೆ ಚಲನವಾಣಿಯ ಚಲನೆಯಲ್ಲಿ ಕಳೆದುಹೋಗುತ್ತಾ ಜೇಬು ಬರಿದಾಗುವುದ ಕಂಡಾಗ ಅಂಗೈಯಗಲದ ನಿರ್ಜೀವ ಮೊಬೈಲ್ ನಮ್ಮ ಮಾತಿಗೂ ಬೆಲೆ ಕಟ್ಟುತ್ತದೆಯಲ್ಲಾ ಅಂತ ಅಚ್ಚರಿಯೂ ಗಾಬರಿಯೂ ಏಕಕಾಲದಲ್ಲಿ ಉಂಟಾಗುತ್ತಿದೆ. ಈ ಮೂಲಕ ಭವಿಷ್ಯವಾಣಿ ದಿಟವಾದ ಮೇಲೆ ಜ್ಯೋತಿಷ್ಯರ ಮಾತನ್ನು ಅಲ್ಲಗಳೆಯಲಾಗುವುದೇ?ಮಾತು ಬಲ್ಲವರಾದ ನೀವೇ ಹೇಳಿ ನೋಡಿ!.
ಆದರೆ ಒಂದು ಮಾತೇ ಇದೆಯಲ್ಲಾ, ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ ಅಂತ. ಇದೇ ಗಾದೆ ಮಾತನ್ನು ಶಾಲೆಯಲ್ಲಿ ಪರೀಕ್ಷೆಗೆ ಟಿಪ್ಪಣಿ ಬರೆಯಲು ಕೊಡುತ್ತಿದ್ದ ಸಮಯದಲ್ಲಿ ಒಂದು ವಾಕ್ಯವೂ ಸರಿಯಾಗಿ ಬರೆಯಲು ಸುತರಾಂ ಸಾಧ್ಯವಾಗುತ್ತಿರಲಿಲ್ಲ. ಈ ಮಾತು ಈಗ ಬೆಳೆದು ದೊಡ್ಡವರಾದಂತೆ ನಮ್ಮನ್ನಾಳುವವರ ಮಾತಿನ ವೈಖರಿ ಕಂಡು ದಂಗಾದ ಮೇಲೆ , ಈಗ ಪುಟಗಟ್ಟಲೆ ಮಾತಿನ ಬಗ್ಗೆ ಬರೆಯಬಹುದಲ್ಲಾ ಅಂತ ಬೆಚ್ಚಿ ಬೀಳುವಂತಾಗುತ್ತದೆ. ಇನ್ನು ಕೆಲವೊಮ್ಮೆ ಮಾತಿಗೆ ಮಾತು ಬೆಳೆದು ನವಿರಾದ ಸಂಬಂಧದ ಎಳೆಯೇ ತುಂಡಾಗಿ ಹೋಗುವ ಎಷ್ಟೋ ಪ್ರಸಂಗಗಳು ಇವೆ. ಎಳವೆಯಲ್ಲಿ ಶಾಲೆಗೆ ಹೋಗುತ್ತಿರುವಾಗ ಮಾತನಾಡಿದವರ ಹೆಸರು ಬರೆಯಲು ಅಧ್ಯಾಪಕರು ಹೇಳುತ್ತಿದ್ದರು. ಕಡ್ಡಿ ಕೊಡದಕ್ಕೆ ಅಥವಾ ಪೆಪ್ಪರ್‍ಮೆಂಟ್ ಒಬ್ಬನೇ ಚೀಪಿ ತಿಂದದ್ದಕ್ಕೆ ಕೋಪಿಸಿಕೊಂಡು ಅವರ ಹೆಸರು ಬರೆಯುವುದರ ಮೂಲಕ ಮಕ್ಕಳು ಅವರ ಮೇಲಿನ ಕೋಪವನ್ನು ತೀರಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಕೆಲವೊಮ್ಮೆ ಮೌನವೇ ಮೂರ್ತಿವೆತ್ತ ಮಕ್ಕಳು ಕೂಡ ಸುಖಾ ಸುಮ್ಮಗೆ ಮಾತನಾಡಿದವರ ಪಟ್ಟಿಗೆ ಸೇರಿಬಿಡಬಹುದಾದ ಸಂಭವನೀಯತೆಗೆ ಅವರ ಜಿಪುಣತನ ಒಂದು ನೆವವಾಗುತ್ತಿತ್ತಷ್ಟೆ. ಪ್ರೈಮರಿ ದಾಟಿದ ತಕ್ಷಣ ಅವೆಲ್ಲಾ ಮರೆತು ಹೋದವರಂತೆ ಮಕ್ಕಳೆಲ್ಲರೂ ಏಕಾಏಕಿ ಪ್ರಬುದ್ಧತೆಯನ್ನೆಲ್ಲಾ ಅವಾಹಿಸಿಕೊಳ್ಳುತ್ತಾರೆ. ತರಗತಿಯಲ್ಲಿ ಸಿಕ್ಕಾಪಟ್ಟೆ ವಾಚಾಳಿಯಂತೆ ವಟಗುಟ್ಟಿದರೂ ಕೂಡ ಅವರ ಹೆಸರು ಬರೆದು ನೋಯಿಸಲಾರದಷ್ಟು ಹೃದಯ ವೈಶಾಲಿಗಳಾಗಿ ಬಿಡುತ್ತಾರೆ. ಹೀಗೆ ಆಡಿದ ಒಂದು ಮಾತು ಎಷ್ಟೊಂದು ಒಳ್ಳೆಯ ಕೆಲಸಗಳಿಗೆ ಕಾರಣವಾಗುತ್ತದೆಯೋ ಅಷ್ಟೇ ಅದರಿಂದ ಅನಾಹುತ ಆಗುತ್ತದೆಯೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಕೊಟ್ಟ ಮಾತಿಗೆ ತಪ್ಪಲಾರೆನು ಅಂತ ವಚನ ಪಾಲಿಸಿದ ಕಾಮಧೇನು ಗೋವಿನ ಕತೆ ಎಲ್ಲರಿಗೂ ಆದರ್ಶವೇ. ತೊಟ್ಟ ಬಾಣವ ಮತ್ತೆ ತೊಡಲಾರೆನು ಅಂತ ಮಾತು ಕೊಟ್ಟ ಕರ್ಣನದೂ ಅಷ್ಟೇ ಉದಾರ ವ್ಯಕ್ತಿತ್ವ. ಇನ್ನು ಪಾಂಚಲಿಗೆ ಕೌರವನ ಸಭೆಯಲ್ಲಿ ಆದ ಅನ್ಯಾಕ್ಕೆ ಸಿಡಿದು ಭೀಮನು ಕೋಪದಿಂದ ಉದ್ಧರಿಸಿದ ಮಾತು ಇಡೀ ಮಹಾಭಾರತದ ಕತೆಗೆ, ಉಪಕತೆಗಳಿಗೆ ಸಾಕಷ್ಟಾಯಿತು. ದಶರಥನ ಕಿರಿಯ ರಾಣಿ ಕೈಕೇಯಿಗೆ ಕೊಟ್ಟ ಮಾತಿನಿಂದ ದೊಡ್ದ ರಾಮಾಯಣವೇ ಆಗಿ ನಾವು ಅಷ್ಟು ಉದ್ದಕ್ಕೂ ಅಡ್ಡಕ್ಕೂ ಓಡಿಸಿಕೊಂಡು ಓದಿದರೂ ಮುಗಿಯದೇ ಇರುವುದ ಕಂಡಾಗ ಮಾತ್ರ ಮಾತಿನ ಧೀಶಕ್ತಿ, ಮಾತಿನ ಪರಂಪರೆ ನಮಗೆ ವ್ಯಕ್ತವಾಗುತ್ತದೆ. ಹಾಗಾಗಿ ಮಾತೇ ಎಲ್ಲದಕ್ಕೂ ಮೂಲ. ಮಾತೇ ಸರ್ವತ್ರ ಸಾಧನಂ. ಇಷ್ಟೆಲ್ಲಾ ಅರಿವಿದ್ದರೂ ನರಮನುಷ್ಯ ಅರೆಗಳಿಗೆ ಮಾತಿಲ್ಲದೆ ಬದುಕಲು ಕ್ಷಣ ಮಾತ್ರವೂ ಸಾಧ್ಯವಿಲ್ಲವೇನೋ.
ಬಾಲ್ಯದಲ್ಲಿ ನಮ್ಮ ಮನೆಯಿಂದ ಒಂದಷ್ಟು ಅನತಿ ದೂರದ ಒಂದು ಮನೆಯಲ್ಲಿದ್ದ ಅಜ್ಜ ಸರಿಯಾಗಿ ಮಧ್ಯಾಹ್ನದ ಹೊತ್ತಿಗೆ ಒಂದಷ್ಟು ದೂರ ನಡೆದುಕೊಂಡು ಹೋಗಿ ಏನನ್ನೋ ಗಂಟಲೊಳಗೆ ಮಾತನಾಡುತ್ತಾ ಬಂದು ಒಂದು ಮರದ ಬಳಿ ನಿಂತು ಕಲ್ಲನ್ನೆಸೆದು ಬರುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅಜ್ಜನ ಹೆಂಡತಿಯೂ ಹೀಗೇ ಬಾಯಲ್ಲಿ ಏನೋ ಮಣಮಣಿಸುತ್ತಾ ಹಾಗೇ ಬಂದು ಮಾಡಿ ಹೋಗುತ್ತಿದ್ದರು. ಎಷ್ಟೋ ಭಾರಿ ಸದ್ದಿಲ್ಲದೆ ಅವರ ಮಾತಿನ ಮರ್ಮವನ್ನು ಕದ್ದಾಲಿಸಬೇಕೆಂದು ಅವರ ಹಿಂದೆ ಕಳ್ಳ ಹೆಜ್ಜೆ ಹಾಕಿಕೊಂಡು ಹೋದರೂ ಅವರ ಮಾತಿನ ಜಾಡನ್ನ ನಮಗ್ಯಾರಿಗೂ ಅರ್ಥೈಸಲು ಸಾಧ್ಯವಾಗಲಿಲ್ಲ. ಬಹುಷ: ಅದು ಅರ್ಥವಾಗುವ ಪ್ರಾಯ ಕೂಡ ನಮ್ಮದಾಗಿರಲಿಲ್ಲವೇನೋ. ಆದರೆ ಯಾರೊಂದಿಗೂ ಮಾತನಾಡಲಿಚ್ಚಿಸದ ಆ ವೃದ್ಧರು ತಮ್ಮ ಅಸಹಾಯಕತೆಯನ್ನು ಈ ಮೂಲಕ ವ್ಯಕ್ತ ಪಡಿಸುತ್ತಿದ್ದರೇನೋ. ಅಥವಾ ನರಮನುಷ್ಯರಿಗಿಂತ ಪ್ರಕೃತಿಯೊಂದಿಗಿನ ಸಂವಾದವೇ ಲೇಸು ಅಂತ ಅವರು ಮನಗಂಡಿರಬೇಕೇನೋ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನ್ನುವಂತಿರಬೇಕು . . ಎಂದು
ನಮ್ಮ ವಚನಕಾರರು ಮಾತಿನ ಔಚಿತ್ಯವನ್ನು ತೆರೆದಿಟ್ಟಿರುವರು. ನಾವುಗಳು ಕೂಡ ಅಹುದಹುದು ಅಂತ ತಲೆ ಅಲ್ಲಾಡಿಸುತ್ತಾ ಬೇರೆಯವರಿಂದ ಇದೇ ಮಾತನ್ನು ನಿರೀಕ್ಷಿಸುತ್ತೇವೆ. ಆದರೆ ನಮ್ಮ ಮಾತು ಮೇರೆ ಮೀರಿ ಉಕ್ಕಿ ಹರಿದರೂ ತೊಂದರೆಯಿಲ್ಲ, ಆದರೂ ಮಾತೇ ಮಾಣಿಕ್ಯ ಅಂತ ಉಪದೇಶ ಕೊಡುವುದರಲ್ಲಿ ನಾವ್ಯಾರೂ ಹಿಂದೆ ಬಿದ್ದಿಲ್ಲ. ಜಂಗಮವಾಣಿ ಅವತ್ತು ಮನೆಯಲ್ಲಿ ಕುಳಿತ್ತಿದ್ದ ಸಮಯದಲ್ಲಿ ಅದರ ಮುಖೇನಾ ಉಭಯ ಕುಶಲೋಪರಿ ಮಾಡುತ್ತಾ ಸ್ಟೌವಿನ ಮೇಲೆ ಹಾಲು ಉಕ್ಕಿ ಹರಿದ್ದದ್ದೇನು?ಸಾರು ಪಲ್ಯ ಸೀದು ಹೋದದ್ದೇನು?ಮಾತಿನ ಭರಾಟೆಯಲ್ಲಿ ಬೆಂಕಿಯೇ ನಂದಿ ಹೋಗಿ, ಮಧ್ಯಾಹ್ನದ ಹೊತ್ತಿಗಾಗುವಾಗ ಅಡುಗೆ ತಯಾರಾಗದೆ ಹೊಟ್ಟೆಯೊಳಗೆ ಬೆಂಕಿ ಹತ್ತಿದ್ದೇನು?. ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು ಅನ್ನೋ ಗಾದೆ ಮಾತು ಚಲನವಾಣಿ ಬಂದ ಮೇಲೆ ಮಾತ್ರ ಸುಳ್ಳಾಗಿ ಬಿಟ್ಟಿತು. ಚಲನವಾಣಿಯ ವಯರನ್ನು ಕಿವಿಯ ತೂತಿನೊಳಗೆ ತೂರಿಸಿಕೊಂಡು ನಮ್ಮ ಸಮಸ್ತ ಕೆಲಸಗಳನ್ನು ಏಕಕಾಲದಲ್ಲಿ ಪೂರೈಸಿಕೊಳ್ಳುವಾಗ. . ಮಾತು ಮನೆ ಕೆಡಿಸುತ್ತದೆಯೇನೋ ಗೊತ್ತಿಲ್ಲ. ಆದರೆ ತೂತು ಒಲೆಯನ್ನು ಕೆಡಿಸಲಾರದಷ್ಟು ನಿಗಾ ವಹಿಸಲು ಮಾತ್ರ ಸಾಧ್ಯವಾಗುತ್ತದೆ.
ಮೊನ್ನೆ ಬಾಲ್ಯ ಕಾಲದ ಸಖಿಯೊಬ್ಬಳು ಸುದ್ದಿಯಿಲ್ಲದೆ ದುತ್ತನೆ ಮನೆಯೊಳಗೆ ಬಂದಿಳಿದಿದ್ದಳು. ಬರುವಾಗ ಮಾತಿನ ಮೂಟೆಯನ್ನೇ ಅದೃಶ್ಯವಾಗಿ ಬೆನ್ನಲ್ಲಿ ಹೇರಿ ಕೊಂಡು ಬಂದಿದ್ದಳೇನೋ. ಹಗಲಿಡೀ ಮಾತನಾಡಿದೆವು. ಆದರೂ ಮುಗಿಯಲಿಲ್ಲ. ರಾತ್ರೆ ನಿದ್ದೆ ಮರೆತು ಕಣ್ಣು ತೂಕಡಿಸುವವರೆಗೂ ಮಾತನಾಡುತ್ತಾ ಮಾತನಾಡುತ್ತಾ ನಡು ನಡುವೆ ಎಚ್ಚರವಾದಾಗ ಕನಸಿನಲ್ಲೋ ಎಂಬಂತೆ ಎದ್ದು ಕುಳಿತು ಮಾತನಾಡತೊಡಗಿದೆವು. ಆಡಿದಷ್ಟೂ ಮುಗಿಯದ ಮಾತು ಅದು ಎಲ್ಲಿಂದ ಪುತಪುತನೇ ಹೊರ ಬೀಳುತ್ತದೋ ?ವಾಗ್ಧೇವಿಗಷ್ಟೇ ಗೊತ್ತಿರುವ ಸತ್ಯ. ತದನಂತರ ನಾವಾಡಿದ ಮಾತನ್ನ ಪುನರ್ ಅವಲೋಕಿಸಿದರೆ ಯಾವುದೂ ನೆನಪಿನಲ್ಲಿ ಉಳಿಯುವಂತ ಮಾತೇ ಇರುವುದಿಲ್ಲ. ಅಂತೂ ಇಂತೂ ಬಾಯಿ ಬಿಟ್ಟರೆ ಪುಂಖಾನುಪುಂಖ ವಸ್ತು ವಿಷಯಗಳ ಮಾತುಗಳಿಗೆ ನಮ್ಮವರಲ್ಲಿ ಬರವೇನಿಲ್ಲ. ಅದಕ್ಕೇ ಮಾತಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ ಅಂತ ಎಲ್ಲೆಯಿರದ ಮಾತಿಗೂ ಕೊನೆಯಿರದ ಆಸೆಗೂ ಬಂಧ ಬೆಸೆದು ನಮ್ಮ ಗೀತ ರಚನಾಕಾರರು ಸೊಗಸಾದ ಪದ್ಯವನ್ನೇ ಹೊಸೆದು ಬಿಟ್ಟಿರುವರು. ಮಾತನಾಡದೆ ಮುಗುಮ್ಮಾಗಿ ಕುಳಿತ ಚೆಲುವೆಗೂ ಕೂಡ ಮಾತಡ್ ಮಾತಡ್ ಮಲ್ಲಿಗೆ. . ಸಂಪಿಗೆ. . ಸೇವಂತಿಗೆ. . ಗುಂಪಿನಲ್ಲಿ ಕೇದಗೆ ಅಂತ ಮೌನವಾಗಿ ಅರಳುವ ಹೂವಿಗೆ ಹೋಲಿಸುತ್ತಾ ಚೆಲುವೆಯ ಮೌನವನ್ನು ನಮ್ಮ ಜಾನಪದರು ಮಾತಾಗಿಸಲು ಪ್ರಯತ್ನಿಸಿದ್ದಾರೆ. ಮಾತಾಗು ಮನವೇ ಅಂತ ಕಾಡುವ ಮೌನದೊಂದಿಗೆ ಕವಿ ಆರ್ಧ್ರವಾಗಿ ಅವಲತ್ತಿಕೊಳ್ಳುತ್ತಾನೆ. ಮಾತಿಲ್ಲದೇ ನಾವ್ಯಾರೂ ಬದುಕಲು ಸಾಧ್ಯವಿಲ್ಲ ಅಂತ ಬಡ ಬಡಿಸುತ್ತಿರುವಾಗ , ಸರಿಯಾದ ಸಮಯದಲ್ಲಿ, ಸರಿಯಾದವರ ಜೊತೆಗೆ ನಾವು ಆಡಲೇ ಬೇಕಾದ ಮಾತನ್ನು ಆಡುತ್ತಿದ್ದೇವಾ. . ಅಂತ ನೆನೆದುಕೊಂಡರೆ ಮಾತ್ರ ದಿಗಿಲಾಗುತ್ತದೆ. ಇವತ್ತು ಉದ್ಯೋಗಸ್ಥ ದಂಪತಿಗಳ ಕುಟುಂಬಗಳಲ್ಲಿ ಗಂಡನಿಗೆ ರಾತ್ರೆ ಪಾಳಿಯಾದರೆ ಹೆಂಡತಿಗೆ ಹಗಲು. ಈ ನಡುವೆ ಅವರು ಮಾತನಾಡುವುದು ಒತ್ತಟ್ಟಿಗಿರಲಿ, ಒಬ್ಬರಿಗೊಬ್ಬರ ದರ್ಶನ ಭಾಗ್ಯವೇ ಕಷ್ಟ ಸಾಧ್ಯ. ವಾರದ ಕೊನೆಯಲ್ಲಿ ಒಟ್ಟಾದರೂ ದುಡಿದು ಹೈರಾಣಾದ ಜೀವಿಗಳಿಗೆ ಸಂಯಮದಿಂದ ಮಾತನಾಡುವ ವ್ಯವಧಾನ ಕೂಡ ಇರುವುದಿಲ್ಲ. ಇವತ್ತು ಜಾಗತೀಕರಣ, ಔದ್ಯೋಗಿಕರಣದ ಭರಾಟೆಯಲ್ಲಿ ನಮ್ಮ ಮಾತು ಮೂರಾಬಟ್ಟೆಯಾಗುತ್ತಿದೆ. ಮಾತನಾಡ ಬೇಕಾದವರೊಂದಿಗಿನ ಮಾತಿನ ಸಮಯವನ್ನ ಅದು ಕಸಿದು ಕೊಳ್ಳುತ್ತಿರುವುದು ನಮ್ಮ ದೊಡ್ಡ ವಿಪರ್ಯಾಸ. ಇನ್ನು ಎಷ್ಟೋ ಸಲ ನಮ್ಮ ಮಾತುಗಳು ಕಟ್ಟು ಕತೆಯಾಗಿ ಅವರಿವರ ಬಾಯಿಯ ಹುರಿಕಡಲೆ ಕಾಳಾಗಿ , ಮುಗಿಯದ ಕಥೆಯಾಗಿ ಕೊನೆಗೆ ವ್ಯಥೆಯಾಗಿ ಪರಿಣಮಿಸುವುದ ಕಂಡಾಗ ಮಾತ್ರ ವಿಷಾದವೆನ್ನಿಸಿ , ಇನ್ನು ಯಾವೊತ್ತೂ ತೂಕದ ಮಾತೇ ಆಡಬೇಕು, ಸಿಕ್ಕಾಪಟ್ಟೆ ಮಾತನಾಡಿ ಸಮಯವನ್ನು ಪೆÇೀಲು ಮಾಡಬಾರದು ಅಂತಾನೋ ಅಥವಾ ನಮ್ಮ ಮಾತು ಹಗುರವಾಗಬಾರದು ಅಂತ ಮಗುಮಾಗಿ ಕುಳಿತುಕೊಳ್ಳುವ ಪ್ರಯತ್ನ ಸಾಮಾನ್ಯ ಒಂದಲ್ಲ ಒಂದು ಹಂತದಲ್ಲಿ ಎಲ್ಲರೂ ಈ ತೀರ್ಮಾನಕ್ಕೆ ಬಂದೇ ಬಿಟ್ಟಿರುತ್ತಾರೆ. ಮತ್ತೆ ಎದೆ ಭಾರವಾಗಿ ಮತ್ತೆ ಮಾತನಾಡಲು ಆಗದೇ ಇದ್ದರೆ ಸಾಧ್ಯವೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬಂದು, ನಂತರ ಲಬ ಲಬ ಅಂತ ಮಾತನಾಡಿ ಹಗುರವಾಗಿಬಿಡುತ್ತೇವೆ. ಇದೇ ಮಾತಿನ ನಡುವಿನ ಸೂಕ್ಷ್ಮ ವ್ಯತ್ಯಾಸ. ಕೆಲವೊಮ್ಮೆ ಮಾತು ನಮ್ಮನ್ನು ಹಗುರವಾಗಿಸುವ, ಸರಳವಾಗಿಸುವ ಸಾಧನ ಕೂಡ ಆಗಬಲ್ಲದು. ಹಾಗಾಗಿ ಮಾತು ಮಾಗಬೇಕು. ಮಾಗಿ ಬೀಳಬೇಕು. ಆಗ ಮಾತು ಕತೆಯಾಗುವುದಿಲ್ಲ. ಬದಲು ಕವಿತೆಯಾಗಬಲ್ಲದು ಅಂತ ವೇದಾಂತಿಯಂತೆ ತರ್ಕಿಸಿ, ಮಾತಿನ ಅಡ್ಡಪರಿಣಾಮ, ಉದ್ದ ಪರಿಣಾಮಗಳ ಬಗ್ಗೆ ಪರಾಮರ್ಶಿಸಿ, ಇನ್ನು ನಾನು ಕೂಡ ಅನಗತ್ಯ ಮಾತಿನ ಸಂತೆಯೊಳಗೆ ಬೀಳಬಾರದು, ಎಲ್ಲವನ್ನೂ ಮೌನವಾಗಿ ಬಿಳಿಯ ಹಾಳೆಗಳ ಮೇಲಿಳಿಸಿ ನಿರಾಳವಾಗಬೇಕು ಅಂತ ನಿರ್ಧರಿಸಿಕೊಂಡು ಕುಳಿತಿರುವಾಗ, ಪ್ರತೀ ಸಾರಿ ಮಿಸ್ಡ್ ಕಾಲ್ ಕೊಟ್ಟು ಸಂಭಾಷಣೆಗೆ ತೊಡಗುವ ಪರಮ ಪಿಟ್ಟಾಸಿ ಪರಿಚಯದವರೊಬ್ಬರು ಅಚಾನಕ್ ಎಂಬಂತೆ ಎಡೆಬಿಡದೆ ಉದ್ದುದ್ದ ರಿಂಗ್ ಕೊಡುವಾಗ ವಿಷಯ ಏನೋ ಗಹನವಾದದ್ದೇ ಇರಬೇಕು. ಇನ್ನು ಅವಳ ಜೊತೆ ನಾನು ಉದ್ದುದ್ದ ಮಾತನಾಡಿ ಸ್ವಲ್ಪ ಹೊತ್ತು ಅನಗತ್ಯ ಕೊರೆದು ಮಾತಿನ ಉದಾರತೆ ತೋರದಿದ್ದರೆ ಏನು ಚೆಂದ?. ಆಕೆಯ ಜೊತೆ ಕಾಲಹರಣ ಮಾಡಿ ತುಸು ಮತ್ತೆ ಮೌನವಾಗಿ ಮಾತಿನ ಬಗ್ಗೆ ಬರೆಯುವೆ. ಬರಲೇ…! .
–ಸ್ಮಿತಾ ಅಮೃತರಾಜ್. ಸಂಪಾಜೆ.
nice sir medm