ಮಾಂಸಾಹಾರ ತಪ್ಪೆಂದರೆ ಸಸ್ಯಾಹಾರ ಸರಿ! ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

somashekar-k-t

ಮಂಗನಿಂದ ಮಾನವ ಎಂದು ಹೇಳುತ್ತೇವೆ. ಯಾವುದೋ ಕಾಲಘಟ್ಟದಲ್ಲಿ ಮಂಗ ಮಾನವನಾಗಿ ಬದಲಾದ ಎಂದು ಡಾರ್ವಿನ್ ವಿಕಾಸವಾದ ಹೇಳುತ್ತದೆ. ಮಂಗನೋ ಗೋರಿಲ್ಲಾನೋ ಚಿಂಪಾಂಜಿಯೋ ವಿಕಾಸ ಹೊಂದಿ ಮಾನವನಾಗಿ ಬದಲಾದ ಎಂಬುದನ್ನು ಎಲ್ಲರೂ ಓದಿದ್ದೇವೆ. ಈಗ ಇರುವ ಮಂಗ, ಗೊರಿಲ್ಲ , ಚಿಂಪಾಂಜಿಗಳು ಯಾವಾಗ ಮಾನವರಾಗುತ್ತವೆ? ಯಾಕೆ ಇನ್ನೂ ಮಾನವರಾಗಿಲ್ಲ? ಎಂದು ಕೆಲವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳು ಮೇಲುನೋಟಕ್ಕೆ ಕಿಡಿಗೇಡಿಗಳ ಪ್ರಶ್ನೆಗಳೆನಿಸಿದರೂ ಒಮ್ಮೆ ಹೌದಲ್ಲಾ! ಈ ಮಂಗಗಳೆಲ್ಲ ಯಾವಾಗ ಮಾನವರಾಗಿ ಬದಲಾಗುತ್ತವೆ? ಯಾಕೆ ಇನ್ನೂ ಮಾನವರಾಗಿ ಬದಲಾಗಿಲ್ಲ? ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ವಿಕಾಸವಾದದ ಒಂದು ಕಾಲಘಟ್ಟದಲ್ಲಿ ಮಂಗ ಮಾನವನಾಗಿ ಬದಲಾದ ಎಂದು ವಿಕಾಸವಾದ ಹೇಳುತ್ತದೆ. ನಾವು ಹೀಗೆಂದು ಸಮಜಾಯಿಷಿ ಕೊಡುತ್ತೇವಾದರೂ ಇರುವ ಮಂಗಗಳು ಮುಂದೆ ಎಂದಾದರೂ ಮಾನವರಾಗಿ ಬದಲಾಗಬಹುದೇ? ಮತ್ತೆ ಇನ್ನೊಂದು ವಿಕಾಸವಾದ ಕಾಲಘಟ್ಟ ಬರುತ್ತದೆಯೇ? ಬಂದರೆ ಯಾವ ಯಾವ ಜೀವಿಗಳು ಯಾವ ಯಾವ ಜೀವಿಗಳಾಗಿ ಬದಲಾಗಬಹುದು?  ಇನ್ನು ಏಕೆ ಇನ್ನೊಂದು ವಿಕಾಸದ ಕಾಲಘಟ್ಟ ಬಂದಿಲ್ಲ? ಮುಂತಾದ ಪ್ರಶ್ನೆಗಳು ಕಾಡುವುದನ್ನು ತಡೆಯಲಾಗುವುದಿಲ್ಲ. 

ಮಾನವ ಎಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿಯಾದರೂ ದೊಡ್ಡ ಮೆದುಳು , ಬುದ್ಧಿ ಇರುವ ಪ್ರಾಣಿ.  ಪ್ರಯುಕ್ತ ತನ್ನ ಅನುಕೂಲಕ್ಕೆ ತಕ್ಕಂತೆ ಅತಿ ವೇಗವಾಗಿ ಪ್ರಕೃತಿಯನ್ನು ತನಗೆ ಬೇಕಾದಂತೆ ಬಳಸಿಕೊಂಡು ಬದಲಾದ ಒಂಟೆ,. ಆನೆ, ಸಿಂಹ, ಎತ್ತು , ಎಮ್ಮೆ , ಹುಲಿ ಮುಂತಾದ ಎಲ್ಲಾ ಪ್ರಾಣಿಗಳ ಮೇಲೆ ಸವಾರಿ ಮಾಡತೊಡಗಿದ. ಅವುಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ದುಡಿಸಿಕೊಳ್ಳುತೊಡಗಿದ. ತನಗೆ ಅನುಕೂಲವಾಗುವಂತಹ ಒಂದು ಸಮಾಜವನ್ನು ನಿರ್ಮಿಸಿಕೊಂಡ. ತನಗೆ ಅನುಕೂಲವಾಗುವಂತೆ ಸರಿ ತಪ್ಪುಗಳ ತೀರ್ಮಾನಿಸಿದ. ತನಗೆ ಅನುಕೂಲ ಆಗುವುದನ್ನು ಸರಿ ಎಂತಲೂ ತನಗೆ ಅನಾನುಕೂಲ ಆಗುವಂತಹುದು ತಪ್ಪು ಎಂತಲೂ ತೀರ್ಮಾನಿಸಿದ. ಓಡುವ ನದಿಗಳನ್ನು ಹಿಡಿದು ಕಟ್ಟುತಾ, ಎಷ್ಟೋ ಪರ್ವತಗಳ ಸಮ ಮಾಡುತ, ಮೋಡಗಳಿಂದ ಬೇಕಾದಲ್ಲಿ ಮಳೆಗರೆಯಿಸಿಕೊಳ್ಳುತಾ .. ಪ್ರಕೃತಿಯನ್ನೇ ತನ್ನ ಬದುಕಿಗೆ ಪೂರಕವಾಗುವಂತೆ ಮಾಡಿಕೊಂಡ! 

ಹಿಂದೆ ಅನೇಕ ಕಾರಣಗಳಿಗೆ ರಾಜರು ಕಾಡುಪ್ರಾಣಿಗಳ ಬೇಟೆಯಾಡಲು ಹೋಗುತ್ತಿದ್ದರು. ಅದರಲ್ಲಿ ಪ್ರಜೆಗಳ ರಕ್ಷಣೆ ಒಂದು ಕಾರಣವಾಗಿತ್ತು. ಅತಿವೃಷ್ಟಿ ಅನಾವೃಷ್ಟಿ ಮುಂತಾದ ಸಮಯ ಸಂದರ್ಭಗಳಲ್ಲಿ ಕಾಡು ಪ್ರಾಣಿಗಳು ನಾಡಿನ ಮೇಲೆ ದಾಳಿ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದವು. ಅವುಗಳ ಉಪಟಳ ತಡೆಯಲು ರಾಜರು ಕಾಡಿಗೆ ಹೋಗಿ ಅನೇಕ ಪ್ರಾಣಿಗಳ ಕೊಂದು ಅವುಗಳ ಸಂಖ್ಯೆ ಕಡಿಮೆ ಮಾಡಿ ಅವು ಮಾನವರ ತಂಟೆಗೆ ಬರದಂತೆ ನಿಯಂತ್ರಿಸುತ್ತಿದ್ದರು. ಅಂದರೆ ಇಲ್ಲಿ ಮಾನವನ ರಕ್ಷಣೆಗಾಗಿ ಪ್ರಾಣಿಗಳ ಕೊಲ್ಲುತ್ತಿರುವುದನ್ನು ಗಮನಿಸಿದಾಗ ಮಾನವನಿಗೆ ತನ್ನ ರಕ್ಷಣೆ ಮುಖ್ಯವಾಯಿತೇ ಹೊರತು ಪ್ರಾಣಿಗಳ ರಕ್ಷಣೆ ಮುಖ್ಯವಾಗಲಿಲ್ಲ!  ಅಂದರೆ ಮಾನವರ ರಕ್ಷಣೆಗಾಗಿ ಪ್ರಾಣಿಗಳ ಕೊಲ್ಲುವುದು ಸರಿ ಎಂದಾಯಿತಲ್ಲ?  ಹೌದು!  ಅದನ್ನು ಒಪ್ಪಿಕೊಂಡಾಗ ಪ್ರಾಣಿಗಳನ್ನು ಕೊಲೆ ಮಾಡುವುದು ತಪ್ಪು ಎಂದು ಹೇಗೆ ತೀರ್ಮಾನಿಸಲು ಸಾಧ್ಯ?  ಹೀಗೆ ಮಾನವ ತನಗೆ ಅನುಕೂಲವಾಗುವುದನ್ನು ಸರಿ ಎಂದು ತೀರ್ಮಾನಿಸುತ್ತಾ ಬಂದ. 

ಇಂದಿಗೂ ಈ ಆಧುನಿಕ ಯುಗದಲ್ಲೂ ಬುದ್ಧಿವಂತನೂ ವಿಚಾರವಂತನೂ ವಿವೇಕವಂತನೂ ಆದ ಮಾನವ ಸಹ ತನಗೆ ಅನುಕೂಲವಾಗುವುದನ್ನು ಸರಿ ಎಂತಲೂ ಅನಾನುಕೂಲ ಆಗುವುದನ್ನು ತಪ್ಪು ಎಂತಲೂ ತೀರ್ಮಾನಿಸುತ್ತಿರುವುದು ಅಚ್ಚರಿ! ಆದರೂ ಸತ್ಯ! ಉದಾಹರಣೆಗೆ ಯಾರನ್ನಾದರೂ ಕೊಲೆ ಮಾಡಿದವರನ್ನು ಕೊಲೆಗಾರ ಎಂದು ಕರೆಯುತ್ತೇವೆ. ಭಾರತೀಯ ಕಾನೂನು ದಂಡ ಸಂಹಿತೆ ಅವನನ್ನು ಅಪರಾಧಿಯೆಂದು ತೀರ್ಮಾನಿಸಿ ಶಿಕ್ಷೆ ವಿಧಿಸುತ್ತದೆ. ಪ್ರತಿನಿತ್ಯ ನೂರಾರು ಕುರಿ, ಕೋಳಿ, ದನ, ಒಂಟೆ, ಕುದುರೆ, ಹಂದಿ, ಗಿಡ ಮರ ಮುಂತಾದವುಗಳನ್ನು ಕೊಲ್ಲುವವರನ್ನು ಕೊಲೆಗಾರ ಎಂದು ಕರೆಯುವುದಿಲ್ಲ. ಅವನಿಗೆ ಭಾರತೀಯ ಅಂತ ಅಲ್ಲ ವಿಶ್ವದ ಯಾವುದೇ ಕಾನೂನು ದಂಡ ಸಂಹಿತೆಯು ಅದು ಅಪರಾಧವೆಂದು ತೀರ್ಮಾನಿಸಿ ಶಿಕ್ಷೆ ವಿಧಿಸುವುದಿಲ್ಲ! ಅವು ತಪ್ಪಲ್ಲ ಎಂದು ಆ ಕಾನೂನುಗಳು ಅಂದುಕೊಂಡಿರಬೇಕು. ಕಾನೂನುಗಳ ರಚಿಸಿರುವವನು ಮಾನವನೇ ಅಲ್ಲವೇ? ಆದರೂ ಮಾನವನಿಗಿರುವಂತೆ ಅವುಗಳಿಗೆ ಜೀವವಿಲ್ಲವೇ?  ಅವುಗಳಿಗೂ ಬದುಕಬೇಕೆಂಬ ಆಸೆ ಇರುವುದಿಲ್ಲವೇ? ಅವುಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಮಾನವರಿಗೆ ಕೊಟ್ಟವರಾರು? ಆ ಕೊಲೆಗಳು ಏಕೆ ಅಪರಾಧಗಳಲ್ಲ ಎಂಬ ಪ್ರಶ್ನೆಗಳು ಕಾಡುತ್ತವೆ. ಅವು ಮಾನವನ ಆಹಾರದ ಮೂಲಗಳು. ಅವುಗಳಿಲ್ಲದೆ ಮಾನವ ಬದುಕಲಾರ ಅದಕ್ಕಾಗಿ ಅವುಗಳನ್ನು ಕೊಲ್ಲುವುದು ತಪ್ಪಲ್ಲ ಎಂದು ತೀರ್ಮಾನಿಸಿದ್ದಾನೆ. ಅಂದರೆ ಮಾನವ ತನಗೆ ಅನುಕೂಲ ಆಗುವುದನ್ನು ಸರಿ ಎಂತಲೂ ಅನಾನುಕೂಲವಾಗುವುದನ್ನು ತಪ್ಪು ಎಂತಲೂ ತೀರ್ಮಾನಿಸಿದ! ಹಾಗೇ ಇಂದು ಕೆಲವರು ಮಾನವರಿಗೆ ಮತ್ತು ಪ್ರಕೃತಿಗೆ ಗೋವಿನಿಂದ ತುಂಬ ಅನುಕೂಲ ಇರುವುದರಿಂದ ಗೋಹತ್ಯೆ ನಿಷೇಧಿಸಬೇಕೆಂದು ಹೋರಾಡುತ್ತಿದ್ದಾರೆ. ಹಾಗಾದರೆ ಇತರ ಪ್ರಾಣಿಗಳ ಕೊಲ್ಲುವುದು..?

ಮಾಂಸವನ್ನು ಮಾತ್ರ ಆಹಾರವಾಗಿ ಸೇವಿಸಿ ಬದುಕುವ ಜೀವಿಗಳನ್ನು ಮಾಂಸಾಹಾರಿಗಳು ಎನ್ನುತ್ತೇವೆ. ಸಸ್ಯಗಳನ್ನು ಮಾತ್ರ ಆಹಾರವಾಗಿ ಸೇವಿಸುವ ಜೀವಿಗಳನ್ನು ಸಸ್ಯಾಹಾರಿಗಳು ಎನ್ನುತ್ತೇವೆ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಸೇವಿಸುವ ಜೀವಿಗಳನ್ನು ಮಿಶ್ರಾ ಹಾರಿಗಳು ಎನ್ನುತ್ತೇವೆ. ಹುಲಿ, ಸಿಂಹ, ಚಿರತೆ ಮುಂತಾದ ಜೀವಿಗಳನ್ನು ಮಾಂಸಾಹಾರಿಯಾಗಿ ಸೃಷ್ಟಿಸಿದ ಪ್ರಯುಕ್ತ ಅವುಗಳ ದೇಹದ ರಚನೆ ಪ್ರಾಣಿಗಳ ಬೇಟೆಯಾಡಲು, ಆಹಾರವನ್ನು ಕತ್ತರಿಸಲು, ಆಹಾರವನ್ನು ಸಿಗಿಯಲು, ಆಹಾರವನ್ನು ಸೇವಿಸಲು ಪೂರಕವಾಗುವಂತೆ ಕಾಲುಗಳು, ಪಾದ, ಪಾದದಲ್ಲಿನ ಉಗುರುಗಳು, ಬಾಯಿ,  ಕೋರೆಹಲ್ಲು , ಗಟ್ಟಿ ದಾಡೆ ಮುಂತಾದವು ರಚನೆಯಾಗಿವೆ. ಪ್ರಕೃತಿ ಮಾನವನನ್ನು ಸಸ್ಯಾಹಾರಿಯಾಗಿ ಸೃಷ್ಟಿಸಿದೆ. ಪ್ರಯುಕ್ತ ಪ್ರಾಣಿಗಳ ಬೇಟೆಯಾಡಲು, ಓಡಿ ಹೋಗಿ ಪ್ರಾಣಿಗಳ ಹಿಡಿಯಲು, ಆ ಪ್ರಾಣಿಯ ದೇಹವನ್ನು ಬಾಯಿಯಿಂದ ಸಿಗಿಯಲು, ಆಹಾರ ಕತ್ತರಿಸಲು ಅವಶ್ಯಕವಾದ ಕಾಲು, ಪಾದಕಗಳು, ಉಗುರುಗಳು, ಕೋರೆ ಹಲ್ಲು , ಬಲಿಷ್ಠ ದಾಡೆ ಇಲ್ಲ! ಜತೆಗೆ ಆ ಯಾವ ಪ್ರಾಣಿಗಿಂತಲೂ ವೇಗವಾಗಿ ಓಡಲು ಸಾಧ್ಯವಾಗದ ದೇಹ ರಚನೆ. ಆದರೂ ಮಾನವ ತನ್ನ ಬುದ್ದಿವಂತಿಕೆ, ತಂತ್ರಗಾರಿಕೆ ಬಲೆಯಿಂದ ಪ್ರಾಣಿಗಳನ್ನು ಹಿಡಿದು ಸಸ್ಯಾಹಾರದ ಜೊತೆಗೆ ಮಾಂಸಾಹಾರ ಸೇವಿಸುವುದನ್ನು ರೂಢಿಸಿಕೊಂಡು ಮಿಶ್ರಾಹಾರಿಯಾಗಿದ್ದಾನೆ. ಇದು ಹೇಗೆ ಸಾಧ್ಯವಾಗಿರಬಹುದು ಎಂದು ಚಿಂತಿಸಲು ಆದಿಮಾನವನ ಬದುಕಿನ ರೀತಿಯನ್ನು ಅರಿಯಬೇಕಿದೆ.  

ಮಾನವ ಇದ್ದಕ್ಕಿದ್ದಂತೆ ಆಧುನಿಕ ಮಾನವನಾಗಿ ನಾಗರಿಕ ನವೀನ ಮಾನವನಾಗಿ ಹುಟ್ಟಲಿಲ್ಲ! ಮಂಗ ಎಂಬ ಪ್ರಾಣಿ ಮಾನವನಾಗಿ ವಿಕಾಸ ಹೊಂದಿತು ಎಂದು ಹೇಳುತ್ತೇವಲ್ಲ! ಮಂಗ ಕಾಡಿನಲ್ಲಿ ವಾಸಿಸುವ ಜೀವಿಯೆಂದು ತಿಳಿದಿರುತ್ತೇವೆ. ಮಾನವನಾಗಿ ಬದಲಾದಾಗ ಕಾಡಿನಲ್ಲೇ ಬದುಕುತ್ತಿದ್ದ. ಮಂಗ ಕಾಡಿನಲ್ಲಿದ್ದಾಗ ಯಾವ ಯಾವ ಆಹಾರ ಸೇವಿಸುತ್ತಿತ್ತೋ ಆ ಆಹಾರವನ್ನೇ ಮಾನವನೂ ಸೇವಿಸುತ್ತಿರಬೇಕು. ಮಂಗ, ಗೊರಿಲ್ಲಾ, ಚಿಂಪಾಂಜಿಗಳು ಮಿಶ್ರಾಹಾರಿಗಳಲ್ಲವೆ? ಅವುಗಳ ವಂಶವಾಹಿನಿಗಳು ಮಾನವನ ದೇಹದಲ್ಲೂ ಇರಲೇಬೇಕಲ್ಲ! ಆ ವಂಶವಾಹಿಗಳ ಕಾರಣದಿಂದಲೂ ಮಾನವ ಮಿಶ್ರಾಹಾರಿಯಾಗಿರಬೇಕು. ಅತಿವೃಷ್ಟಿ ಅನಾವೃಷ್ಟಿ ಪರಿಣಾಮದಿಂದ ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು ಹಂಪಲು ಸಿಗದಂತಾಗಿ ಮಿಶ್ರಾಹಾರಿ ಆಗಿರಲೂಬಹುದು. ಕಾಡಿನಲ್ಲಿ ಹುಲಿ ಸಿಂಹ ಇತರ ಕಾಡು ಪ್ರಾಣಿಗಳಂತೆ ಮಾನವ ಬದುಕುತ್ತಿರಬೇಕಾದರೆ ಇತರೆ ಪ್ರಾಣಿಗಳೊಂದಿಗೆ ಆಹಾರಕ್ಕಾಗಿ ಪ್ರತಿಸ್ಪರ್ಧಿಗಳಾದ ಕಾಡು ಮೃಗಗಳೊಂದಿಗೆ ಹೋರಾಡಿಯೇ ಇರಬೇಕು. ಸಿಂಹ, ಹುಲಿ ಮುಂತಾದವುಗಳಿಗೆ ಕಾಡು ಮಾನವ ಆಹಾರವೂ ಆಗಿರಬೇಕು. ಹಾಗೂ ಆ ಪ್ರಾಣಿಗಳು ಇತರೆ ಜೀವಿಗಳನ್ನು ಬೇಟೆಯಾಡಿ ಅವುಗಳ ಮಾಂಸ ಸೇವಿಸುವುದನ್ನು ಕಂಡು ತಾನೂ ಹಾಗೆ ಆಹಾರ ಪಡೆಯಲು ಪ್ರಾಣಿಗಳ ಬೇಟೆ ಆರಂಭಿಸಿ ಮಾಂಸ ಆಹಾರವನ್ನು ಆಹಾರವಾಗಿ ಮಾಡಿಕೊಂಡು ಮಿಶ್ರಾಹಾರಿಯಾಗಿರಬೇಕು.  

ಒಟ್ಟಾರೆ ಆದಿಮಾನವ ಮಿಶ್ರಹಾರಿಯಾಗಿದ್ದ. ಈ ಆಧುನಿಕ ಮಾನವನಿಗೆ ಆ ಮಿಶ್ರಾಹಾರಿಯಾಗಿದ್ದ ಆದಿಮಾನವನೇ ಮೂಲವಲ್ಲವೇ? ಆದಿಮಾನವ ಕಾಡು ಮನುಷ್ಯನಾಗಿ, ಶಿಲಾಯುಗದ ಮಾನವನಾಗಿ, ಲೋಹ ಯುಗದ ಮಾನವನಾಗಿ ಬದಲಾಗುತ್ತಾ ಸಂಸಾರ ಅಂತ ಮಾಡಿಕೊಂಡ. ಮನೆ ಕಟ್ಟಿಕೊಂಡ, ಉಡುಪು ಧರಿಸತೊಡಗಿದ,  ವ್ಯವಸಾಯ ಮಾಡತೊಡಗಿದ. ಊರು ನಗರ ಕಟ್ಟಿಕೊಂಡು ವ್ಯವಸ್ಥಿತವಾಗಿ ಬದುಕತೊಡಗಿದ. ಹಾಗೆ ಧರ್ಮ, ವರ್ಣ ವ್ಯವಸ್ಥೆ, ಆಶ್ರಮ ವ್ಯವಸ್ಥೆ, ನಿರ್ದಿಷ್ಟ ಕಾರ್ಯಗಳನ್ನು ಮಾಡುತ್ತಾ ಒಂದೆಡೆ ನೆಲೆ ನಿಂತು ಬದುಕುತೊಡಗಿದ. ಮಾನವನಿಗೆ ಜೀವನಾಧಾರವೂ ಅತಿ ಶಕ್ತಿಶಾಲಿಯೂ ಆಗಾಗ ಅನಾಹುತಕಾರಿಯೂ ಆದ ಪಂಚಭೂತಗಳ ಅಪರಿಮಿತ ಶಕ್ತಿ ಅರಿತು ಅವು ತನಗೆ ತೊಂದರೆ ಕೊಡದಿರಲೆಂದು, ಅವು ಜೀವನಾವಶ್ಯಕಗಳ ಯಥೇಚ್ಛವಾಗಿ ದಯಪಾಲಿಸಲೆಂದು ಅವುಗಳನ್ನು ಆರಾಧಿಸತೊಡಗಿದ. ಅವುಗಳನ್ನು ಒಲಿಸಿಕೊಳ್ಳಲು ತೃಪ್ತಿ ಪಡಿಸಿಲು ಯಾಗಯಜ್ಞಾದಿಗಳ ನಡೆಸುತ್ತಾ, ಅವು ಪ್ರಸನ್ನವಾಗಲೆಂದು ಯಾಗದ ಕೊನೆಯಲ್ಲಿ ಪಶು ಬಲಿ ಕೊಟ್ಟು ಅದನ್ನು ಪ್ರಸಾದವಾಗಿ ಎಲ್ಲರೂ ಸೇವಿಸತೊಡಗಿದರು. ಇದರಿಂದ ಋಷಿ ಮುನಿಗಳು ಮಾಂಸವನ್ನು ಆಹಾರವಾಗಿ ಸೇವಿಸುತ್ತಿದ್ದರು ಎಂಬ ಅಂಶ ತಿಳಿಯಬಹುದಾಗಿದೆ .

ಬ್ರಾಹ್ಮಣರು ಯಜ್ಞಯಾಗಾದಿಗಳಲ್ಲಿ ಪಶುಬಲಿ ಕೊಡುತ್ತಿದ್ದರಿಂದ ಹಿಂಸೆಯನ್ನು ಮಾಡಲು ಪ್ರೇರೇಪಣೆಯಾಗಿತ್ತು. ಈ ಹಿಂಸೆಯನ್ನು ವಿರೋಧಿಸಿಯೇ ಬೌದ್ಧ,  ಜೈನ ಧರ್ಮಗಳು ಉದಯಿಸಿ ಅಹಿಂಸೆಯನ್ನು ಪ್ರತಿಪಾದಿಸಿದವು. ಆದ್ದರಿಂದ ಅವು ಜನರ ಆಕರ್ಷಿಸಿ ಬಹುಬೇಗ ಬೆಳೆಯತೊಡಗಿದವು. ಅವು ಬೆಳೆದಂತೆ ವೈದಿಕ ಧರ್ಮ ಕಳೆಗುಂದತೊಡಗಿತು.  ಇದನ್ನು ಅರಿತ ಬ್ರಾಹ್ಮಣರು ಪಶು ಬಲಿಯನ್ನು ತ್ಯಜಿಸಿ ಮಾಂಸಾಹಾರವನ್ನು ತ್ಯಜಿಸಿರಬೇಕು. ಹೀಗೆ ಅಂದಿನಿಂದ ಅನೇಕರು ಸಸ್ಯಾಹಾರಿಗಳಾಗಿ ಅಹಿಂಸೆಯನ್ನು ಪ್ರತಿಪಾದಿಸುತ್ತ ವೈದಿಕ ಧರ್ಮವನ್ನು ಮೇಲೆತ್ತಲು ಪ್ರಯತ್ನಿಸಿದರು. ಇದರಿಂದ ಬ್ರಾಹ್ಮಣರು ಮಾಂಸಾಹಾರ ಸೇವಿಸುತ್ತಿದ್ದರು ನಂತರ ಅದನ್ನು ತ್ಯಜಿಸಿ ಸಸ್ಯಾಹಾರಿಗಳಾದರು. ಅವರೊಂದಿಗೆ ಇನ್ನೂ ಅನೇಕ ಗುಂಪು ಸಸ್ಯಾಹಾರಿಯಾಗಿದ್ದು ಸತ್ಯ. ಇಂದು ಸಸ್ಯಾಹಾರಿಗಳೆಂದ ಹೇಳಿಕೊಳ್ಳುವವರಲ್ಲಿ ಬಹಳಷ್ಟು ಜನ ಮಾಂಸಾಹಾರವನ್ನೂ ಸೇವಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ!     
     
ಪ್ರಕೃತಿಯಲ್ಲಿನ ಆಹಾರದ ಸರಪಳಿಯಿಂದಾಗಿ ಸೃಷ್ಟಿ ಸುಂದರವೂ ಸಮತೋಲನವು ಆಗಿದೆ. ಅಂದರೆ ಸಸ್ಯಗಳು ಎಷ್ಟು ಇರಬೇಕೋ ಅಷ್ಟು ಇರುವಂತಾಗಿ, ಸಸ್ಯಾಹಾರಿ ಎಷ್ಟು ಇರಬೇಕೋ ಅಷ್ಟು ಇರುವಂತಾಗಿ, ಮಾಂಸಾಹಾರಿಗಳು ಎಷ್ಟು ಇರಬೇಕೋ ಅಷ್ಟು ಇರುವಂತಾಗಿ ಪ್ರಕೃತಿ ಸಮತೋಲನವಾಗಿದೆ. ವಾತಾವರಣದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಳ ಪ್ರಮಾಣದಲ್ಲೂ ಸಮತೋಲನವನ್ನು ಹಸಿರು ಸಸ್ಯಗಳುಕಾಪಾಡುತ್ತವೆ. ಕಾಡಿನಲ್ಲಿ ಸಸ್ಯಾಹಾರಿಗಳೇ ಹೆಚ್ಚಾದರೆ ಕಾಡಿನಲ್ಲಿರುವ ಸಸ್ಯರಾಶಿಯನ್ನೆಲ್ಲಾ ಮುಗಿಸಿ ನಾಡಿಗೆ ನುಗ್ಗಿ ಮಾನವರು ಬೆಳೆದ ಬೆಳೆಗೆ ಲಗ್ಗೆಯಿಟ್ಟು ಅದನ್ನೆಲ್ಲ ಮುಗಿಸಿ ಆಹಾರವಿಲ್ಲದೆ ತಾವು ಸಾಯುವ ಜೊತೆಗೆ ಮಾನವರನ್ನು ಸಾಯುವಂತೆ ಮಾಡುತ್ತವೆ! ಆ ಮೂಲಕ ಮಾಂಸಾಹಾರಿಗಳನ್ನು ಸಾಯುವಂತೆ ಮಾಡುತ್ತವೆ. ಮಾಂಸಾಹಾರಿಗಳು ಹೆಚ್ಚಾದರೆ ಎಲ್ಲ ಜೀವರಾಶಗಳನ್ನು ನುಂಗಿ ನೊಣೆದು ಕೊನೆಗೆ ಆಹಾರವಿಲ್ಲದೆ ತಾವೂ ಸಾಯುತ್ತವೆ! ಅದಕ್ಕಾಗಿ ಪ್ರಕೃತಿ ಆಹಾರ ಸರಪಳಿ ಸೃಜಿಸಿ ( ಹುಲ್ಲು, ಹುಲ್ಲನ್ನು ತಿನ್ನುವ ಕೀಟಗಳು, ಕೀಟಗಳನ್ನು ತಿನ್ನುವ ಕಪ್ಪೆಗಳು, ಕಪ್ಪೆಗಳ ತಿನ್ನುವ ಹಾವುಗಳು, ಹಾವುಗಳನ್ನು ತಿನ್ನುವ ಹದ್ದುಗಳು ಇದೊಂದು ಆಹಾರ ಸರಪಳಿ)  ಸುಂದರವಾಗಿ ಸಮತೋಲನವಾಗಿದೆ. ಮಾಂಸಾಹಾರಿಗಳೆಲ್ಲಾ ಸಸ್ಯಾಹಾರಿಗಳಾದರೆ ಒಂದು ವರ್ಷಕ್ಕೆಂದು ಇರುವ ಆಹಾರ ಮೂರೇ ತಿಂಗಳಲ್ಲಿ ಮುಗಿಸಿ ಆಹಾರಕ್ಕಾಗಿ ಹಾಹಾಕಾರ ಉಂಟಾಗಿ ಪರಪರಸ್ಪರ ಕಿತ್ತಾಟ ಜಗಳ ಬಡಿದಾಟ ಮಾಡಿ ಎಲ್ಲರೂ ಸಾಯುವಂತಾಗುತ್ತದೆ! 

ಜೀವಿಗಳ ಕೊಂದು ಮಾಂಸ ಪಡೆಯುವುದರಿಂದ ಅವುಗಳಿಗೆ ಹಿಂಸೆ ಮಾಡಿದಂತೆ ಆಗುವುದಿಲ್ಲವೇ? ಆದ್ದರಿಂದ ಮಾಂಸಾಹಾರ ಸೇವನೆ ತಪ್ಪು ಎಂದಾದರೆ ಸಸ್ಯಾಹಾರ ಸೇವನೆ ಎಷ್ಟರ ಮಟ್ಟಿಗೆ ಸರಿ? ಏಕೆಂದರೆ ಸಸ್ಯಗಳು ಜೀವಿಗಳೇ ಅಲ್ಲವೇ? ಸಸ್ಯಗಳನ್ನು ಕಿತ್ತು, ಕಡಿದು, ಬೇಯಿಸಿ ತಿನ್ನುತ್ತೇವಲ್ಲ ಅವುಗಳಿಗೆ ಹಿಂಸೆಯಾಗುವುದಿಲ್ಲವೇ? ಸಸ್ಯದ ಭಾಗಗಳನ್ನು ಮಾಂಸ ಎಂದು ಕರೆಯದೇ ಇರಬಹುದು. ಕೆಲವು ಹಣ್ಣಿನ ಭಾಗಗಳನ್ನು ಖಂಡ, ಮಾಂಸಲ ಎಂದು ಕರೆಯುತ್ತೇವೆ. ಸಸ್ಯಾಹಾರ ಮಾಂಸಾಹಾರ ಅಲ್ಲ! ಮಾಂಸ ಸೃಷ್ಟಿಯಾಗುವುದು ಸಸ್ಯಾಹಾರದಿಂದನೆ.  ಆದ್ದರಿಂದ ಯಾವ ಆಹಾರ ಸೇವನೆ ಸರಿ? ಯಾವ‌ ಆಹಾರ ಸೇವನೆ ತಪ್ಪು? ಯಾವ ಆಹಾರ ಸೇವನೆಯಿಂದ ಬೇರೆ ಜೀವಿಗಳಿಗೆ ಹಿಂಸೆಯಾಗುವುದಿಲ್ಲ? ಎರಡೂ ತರದ ಆಹಾರ ಸೇವನೆಯಿಂದ ಜೀವಿಗಳಿಗೆ ಹಿಂಸೆಯಾಗುತ್ತದೆ! ಉತ್ತರ ಕೊರಿಯಾದಲ್ಲಿ ಮಾಂಸಾಹಾರದ ಕೊರತೆಯಿಂದಾಗಿ ಸಸ್ಯಯೋತ್ಪನ್ನಗಳಿಂದ ಕೃತಕ ಮಾಂಸವನ್ನು ತಯಾರಿಸಿ ಸೇವಿಸುತ್ತಿದ್ದಾರೆ. ಅಂದರೆ ಸಸ್ಯೋತ್ಪನ್ನಗಳನ್ನು ಮಾಂಸವಾಗಿ ಪರಿವರ್ತಿಸಿ ಸೇವಿಸುತ್ತಿದ್ದಾರೆ. ಅವರವರ ಆಹಾರ ಪದ್ಧತಿಗಳು ಅವರವರಿಗೆ ಹೆಚ್ಚು. ಬೇರೆಯವರ ಆಹಾರ ಸೇವನೆಯನ್ನು ಪುರಸ್ಕರಿಸದಿದ್ದರೂ,  ಸೇವಿಸದಿದ್ದರೂ ಬೇರೆಯವರ ಸೇವನೆಯನ್ನು ವಿರೋಧಿಸಬಾರದು! ಸ್ವಾಮಿವಿವೇಕಾನಂದರು ಮಾಂಸಾಹಾರ ಸೇವಿಸುತ್ತಿದ್ದರು! ಎಷ್ಟೋ ವಿದ್ಯಾವಂತರೂ ಸತ್ಪುರುಷರೂ ಪರೋಪಕರಿಗಳೂ ಮಾಂಸಾಹಾರ ಸೇವಿಸುತ್ತಿದ್ದರು. ಸೇವಿಸುತ್ತಿದ್ದಾರೆ!

ನಾಡಿನ ಕೆಲವು ಗಣ್ಯರು ಮಾಂಸಾಹಾರ ಸರಿಯೋ ತಪ್ಪೋ ? ಬ್ರಾಹ್ಮಣರು ಹಿಂದೆ ಮಾಂಸಾಹಾರಿಯಾಗಿರಲಿಲ್ಲವೇ? ಎಂಬ ವಿಚಾರಗಳನ್ನು ಚರ್ಚೆಗೆ ತಂದು, ನಾಡಿನಾದ್ಯಂತ ಹರಿಬಿಟ್ಟು ನಾಡಿನ ಜನರನ್ನು ಗೊಂದಲದಲ್ಲಿ ಬೀಳುವಂತೆ ಮಾಡಿ ಈಗಾಗಲೇ ಜಾತಿ ಧರ್ಮಗಳ ವಿಚಾರಗಳಲ್ಲಿ ಒಡೆದು ಹೋಗಿರುವ ಸಮಾಜವನ್ನು ಮತ್ತೂ ಆಹಾರ ಸೇವಿಸುವುದರ ಆಧಾರದ ಮೇಲೆ ಒಡೆಯುತ್ತಿರುವುದು ಎಷ್ಟು ಸರಿ? ಗಣ್ಯರು ಎನಿಸಿಕೊಂಡಿರುವವರು ಸಮಾಜದ ಸ್ವಾಸ್ಥ್ಯ ಕಾಪಾಡುವಂತಾಗಬೇಕು ವಿನಾ ಸಮಾಜದ ಆರೋಗ್ಯ ಕೆಡಿಸಬಾರದು! ಜೊತೆಗೆ ಸಮಾಜ ಸೌಹಾರ್ದಯುತ ಬಾಳಿಗೆ ಆದರ್ಶವಾಗಿರಬೇಕು .

-ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x