ಪಂಜು-ವಿಶೇಷ

ಮಹಿಳೆ ಮತ್ತು ಸಂಗೀತ: ಅನುರಾಧ ಸಾಮಗ

 

ಗೇಯತೆಗೊಳಪಡುವ ಕವನವೊಂದು ಗೀತೆಯಾಗುತ್ತದೆ. ಗೇಯತೆ ಆ ರಚನೆ ಬಿಂಬಿಸುವ ಭಾವವನ್ನು ತೀವ್ರಗೊಳಿಸುತ್ತದೆ. ಆ ಗೀತೆ ಸ್ವರ-ಲಯ, ರಾಗ-ತಾಳಗಳೆಂಬ ನಿರ್ದಿಷ್ಟತೆಗೊಳಪಟ್ಟಾಗ ಅದು ಸಂಗೀತವಾಗುತ್ತದೆ. ಇದು ಭಾವ ಬಿಂಬಿಸುವುದರೊಂದಿಗೆ, ಕೆಲವು ಕಟ್ಟುನಿಟ್ಟಿನ ನಿಯಮಗಳಿಗೊಳಪಡುವ ಶಿಸ್ತಿನೊಡನೆ ಪಾಂಡಿತ್ಯಪೂರ್ಣವೆನಿಸುತ್ತದೆ.

ಮನುಷ್ಯ ಹುಟ್ಟಿನಿಂದಲೇ ಭಾವಜೀವಿ.  ಆದಿಮಾನವನ ಕಾಲದಿಂದಲೂ ಮಾತು ಎನ್ನುವುದು ಸಂಜ್ಞೆಗಳ ಮುಂದುವರಿಕೆಯಾಗಿ ಹುಟ್ಟಿದರೆ, ಹಾಡು ಅದೇ ಮಾತಿನ ಮುಂದುವರಿಕೆಯಾಗಿ ಆಂಗಿಕಸಂಜ್ಞೆಗಳು ಕುಣಿತವಾದಾಗ ಅದಕ್ಕೆ ಪೂರಕವಾಗಿ ಹುಟ್ಟಿರುವುದಾಗಿದೆ. ಬಹುಶಃ ಹಾಡು ಮತ್ತು ಕುಣಿತ ದಿನದ ಬೇಟೆಯೇ ಮೊದಲಾದ ಜೀವನೋಪಾಯದ ಕೆಲಸಗಳ ದಣಿವನ್ನು ಕಡಿಮೆಯಾಗಿಸುವ ಕೆಲಸ ಮಾಡುತ್ತಿದ್ದವು. ಹೀಗೆ ಗೇಯತೆಯ ಮಹತ್ವ ಅಂದಿನ ದಿನಗಳಲ್ಲೇ ಗುರುತಿಸಲ್ಪಟ್ಟಿತ್ತು.

ಸಹಜವಾಗಿ ಹೆಣ್ಣು ಗಂಡಿಗಿಂತ ಹೆಚ್ಚು ಸಂವೇದನಾಶೀಲಳು. ಭಾವನೆಗಳನ್ನು ತೀವ್ರವಾಗಿ ಗುರುತಿಸಿ, ಮೌಲೀಕರಣಕ್ಕೊಳಪಡಿಸಿ ಮತ್ತು ಆ ಮೂಲಕ ತನ್ನವನ್ನು ಹೆಚ್ಚು ಪ್ರಭಾವಶಾಲಿಯಾಗಿ ವ್ಯಕ್ತಪಡಿಸಬಲ್ಲಳು. ಮೌಖಿಕಸಾಹಿತ್ಯ, ಮತ್ತು ಅದರ ಹಾಡುವಿಕೆ ಈ ನಿಟ್ಟಿನಲ್ಲಿ ಹೆಣ್ಣಿಗೆ ಸುಲಭಸಾಧ್ಯವಾದ ಅಭಿವ್ಯಕ್ತಿ ಮಾಧ್ಯಮಗಳಾಗಿದ್ದವು. ಅಂದಿನ ದಿನಗಳಲ್ಲಿ ಹೆಣ್ಣು ಇಂದಿನಂತೆ ತನ್ನ ರಚನೆಗಳನ್ನು ಹೊರಗೆ ಹಂಚಿಕೊಳ್ಳುವ ಸಾಧ್ಯತೆಗಳಿರಲಿಲ್ಲವಾದರೂ ತನ್ನ ದೈನಂದಿನ ಕೆಲಸಗಳ ಜೊತೆಜೊತೆಗೆ ತೋಚಿದ್ದನ್ನು ಗುನುಗುತ್ತಾ ಕೆಲಸಮಾಡುತ್ತಿದ್ದಳು. ಆ ಮೂಲಕ ದಣಿವು ನಿವಾರಣೆ ಹಾಗೂ ಕೆಲಸದ ನಿರಂತರತೆ ಬಾಧಿಸದಂತೆ ನೋಡಿಕೊಳ್ಳುತ್ತಿದ್ದಳು. ಹೀಗೆ ರಾಗಿಬೀಸುವ, ಅಕ್ಕಿ ಕುಟ್ಟುವ, ನೀರು ಸೇದುವ ಹಾಡುಗಳು ಹುಟ್ಟಿದವು. ಇವೇ ಅಲ್ಲದೆ ಹೊರಗೆ ವ್ಯವಸಾಯದ ಕೆಲಸಗಳಾದ ನಾಟಿ ಮಾಡುವುದು, ಬತ್ತ ತೂರುವುದು, ಕಳೆಕೀಳುವುದು ಇವೇ ಮುಂತಾದ ಸಂದರ್ಭಗಳಿಗೆ ತಕ್ಕಂತೆ ಹಾಡು ಕಟ್ಟಿ ಹಾಡುವ ಪರಿಪಾಠವೂ ಬೆಳೆದು ಬಂದಿತು. ಇವುಗಳು ದೇವರ ಸ್ತುತಿಗಳು, ದೇವರಿಗೆ ಧನ್ಯವಾದ ಅರ್ಪಿಸುವ ಮಾತುಗಳು ತುಂಬಿರುವ ಸುಂದರ ರಚನೆಗಳಾಗಿವೆ. ಅದಲ್ಲದೇ ಮನೆಯಲ್ಲಿ ತನ್ನ ಮಗುವನ್ನು ಮಲಗಿಸುವಾಗ  ಹಾಡುವ ಲಾಲಿಹಾಡುಗಳೂ ಅದ್ಭುತ ರಚನೆಗಳಾಗಿ ಮೂಡಿ ಬಂದಿವೆ. ಹೀಗೆ ಹೆಣ್ಣಿನ ಜೀವನದಲ್ಲಿ ಅಂದಿನಿಂದಲೂ ಸಂಗೀತ ಹಾಸುಹೊಕ್ಕಾಗಿಯೇ ಇತ್ತು. ಸ್ವಲ್ಪ ಮುಂದುವರೆದು ಹಾಡುವಿಕೆಯಲ್ಲಿ ಹೆಣ್ಣಿನ ಸೃಜನಶೀಲತೆಯು ಗುರುತಿಸಲ್ಪಟ್ಟಿತು ಎನ್ನುವುದಕ್ಕೆ ಒಂದು ಉದಾಹರಣೆಯೋ ಎಂಬಂತೆ ದಕ್ಷಿಣಕನ್ನಡದ ಜನಪದಲೋಕದ ಪ್ರಮುಖ ಆಚರಣೆಯಾದ ಭೂತದ ಕೋಲದಲ್ಲಿ ದರ್ಶನಪಾತ್ರಿಯ ತೆಂಬರದ ದನಿಗೆ ಸಾರ್ವಜನಿಕವಾಗಿ ದನಿಗೂಡಿಸುವುದು ಆತನ ಪತ್ನಿಯದೇ ಮೊದಲ ಹಕ್ಕಾಗಿತ್ತು ಮತ್ತು ಅದು ಇಂದಿಗೂ ಹಾಗೆಯೇ ನಡೆದುಕೊಂಡು ಬಂದಿದೆ.

ಮುಂದೆ ಹೆಣ್ಣಿಗೆ ಹೆಚ್ಚು ಹೆಚ್ಚು ಪ್ರಪಂಚಕ್ಕೆ ತೆರೆದುಕೊಳ್ಳುವಿಕೆ ಸಾಧ್ಯವಾದಂತೆ, ಸಂಗೀತದೊಂದಿಗಿನ ಅವಳ ನಂಟು ದೃಢವಾಗುತ್ತಲೇ ಬಂತು. ಮೊದಲು ಹಾಡುವಿಕೆ ಸಾರ್ವಜನಿಕವಾಗಿ ತೆರೆದುಕೊಂಡದ್ದು ಬಹುಶಃ ನಾಟಕಗಳ ಮೂಲಕ. ಅಲ್ಲಿ ಹೆಣ್ಣಿನ ಪಾತ್ರವನ್ನೂ ಗಂಡಸರೇ ನಿರ್ವಹಿಸಿ, ಆ ಪಾತ್ರದ ಹಾಡುಗಳನ್ನು ಅವರೇ ಹಾಡುತ್ತಿದ್ದ ಕಾಲ ಕಳೆದು ಹೆಣ್ಣುಮಕ್ಕಳೂ ಆ ರಂಗಕ್ಕೆ ಪ್ರವೇಶ ಪಡೆದ ಕಾಲದಲ್ಲಿ ರಂಗಗೀತೆಗಳು ಹೆಣ್ಣಿನ ಧ್ವನಿಯಲ್ಲಿ ಜಗತ್ತು ಸಾರ್ವಜನಿಕವಾಗಿ ಕೇಳಿಸಿಕೊಂಡ ಮೊದಲ ಸಂಗೀತವಾಗಿತ್ತು. ಕಾಲ ಮುಂದುವರೆಯುತ್ತಾ ಶಾಸ್ತ್ರೀಯಸಂಗೀತದ ಅಭ್ಯಾಸಕ್ಕೂ ಹೆಣ್ಣುಮಕ್ಕಳು ತೆರೆದುಕೊಂಡರು ಮತ್ತು ಸಮರ್ಥವಾಗಿ ನಿಭಾಯಿಸಿದರು. ವಾದ್ಯಸಂಗೀತಗಳ ನುಡಿಸುವಿಕೆಯಲ್ಲೂ ಪಳಗಿದರು. ಈಗ ಹೆಣ್ಣು ಅಭ್ಯಸಿಸದ, ಸಾಧನೆ ಮಾಡದ ಸಂಗೀತದ ಪ್ರಕಾರವೇ ಇಲ್ಲ.

ನಮ್ಮಲ್ಲಿ ಉತ್ತರಭಾರತ ಮತ್ತು ದಕ್ಷಿಣಭಾರತದಲ್ಲಿ ಕ್ರಮವಾಗಿ ಉತ್ತರಾದಿ ಮತ್ತು ದಕ್ಷಿಣಾದಿ ಎಂಬ ಎರಡು ಸಂಗೀತದ ಪ್ರಕಾರಗಳು. ಕರ್ನಾಟಕದಲ್ಲಿ ದಕ್ಷಿಣಾದಿಸಂಗೀತ ಹೆಚ್ಚು ಪ್ರಚಲಿತ. ಉತ್ತರಕರ್ನಾಟಕದಲ್ಲಿ ಉತ್ತರಾದಿ ಪ್ರಕಾರವೂ ಕಂಡುಬರುತ್ತದೆ. ಉತ್ತರಾದಿ ಸಂಗೀತದಲ್ಲಿ ಶ್ರೀಮತಿ ಗಂಗೂಬಾಯಿ ಹಾನಗಲ್, ಶ್ರೀಮತಿ ಪರ್ವೀನ ಸುಲ್ತಾನ,  ಶ್ರೀಮತಿ ಕಿಶೊರಿ ಅಮೋಲ್ಕರ್, ಶ್ರೀಮತಿ ಪ್ರಭಾ ಆತ್ರೆ ಹೀಗೆ ಸಾಧನೆಯ ಶಿಖರಕ್ಕೇರಿದ ಹಲವಾರು ಗಾಯಕಿಯರಿದ್ದಾರೆ. ದಿವಂಗತ ಶ್ರೀಮತಿ ಗಂಗೂಬಾಯಿ ಹಾನಗಲ್ ರವರ ಸಾಧನೆಯನ್ನು ಗುರುತಿಸಿ ಅವರ ಹೆಸರಿನಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವನ್ನು ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಹಾಗೆಯೇ ದಕ್ಷಿಣಾದಿ ಸಂಗೀತದಲ್ಲಿ ಶ್ರೀಮತಿ ಡಿ.ಕೆ ಪಟ್ಟಮ್ಮಾಳ್, ಶ್ರೀಮತಿ ಎಮ್.ಎಸ್. ಸುಬ್ಬುಲಕ್ಷ್ಮಿ, ಶ್ರೀಮತಿ ಎಮ್.ಎಲ್.ವಸಂತಕುಮಾರಿ ಮುಂತಾದ ಹಲವು ಮಹಿಳಾ ದಿಗ್ಗಜರಿದ್ದಾರೆ.

ಇವರಲ್ಲಿ ಶ್ರೀಮತಿ ಎಮ್.ಎಸ್.ಎಸ್ ರವರು ಪದ್ಮಭೂಷಣ ಪ್ರಶಸ್ತಿ ಮತ್ತು ಭಾರತರತ್ನ ಪಡೆದ ಮೊದಲ ಭಾರತೀಯ ಸಂಗೀತಗಾರ್ತಿಯಾಗಿದ್ದಾರೆ. ಅದಲ್ಲದೆ ಇನ್ನೂ ಹಲವು ಭಾರತದ ಮೊದಲ ಸ್ಥಾನದ ಗರಿಗಳು ನಮ್ಮ ಸಂಗೀತಸಾಧಕಿಯರ ಮುಡಿಗೇರಿವೆ. ಗಾಯಕಿ ಆಲಿಶಾ ಚಿನಾಯ್ ಯವರ ಬೇಬಿ ಡಾಲ್ ಎಂಬುವುದು ಭಾರತದ ಮೊದಲ ಗಣಕೀಕೃತ ಆಲ್ಬಮ್ ಆದರೆ, ಮೊದಲ ಜಾನಪದ ಅಗೀತೆಗಳ ಆಲ್ಬಮ್ ನ್ನು ಶ್ರೀಮತಿ ಇಳಾ ಅರುಣ್ ಅವರು ಬಂಜಾರನ್ ಎಂಬ ಹೆಸರಿನಲ್ಲಿ ತಂದರು..ಶ್ರೀಮತಿ ಭಾಗೇಶ್ವರಿ ಯವರು ಪಾಂಡಿತ್ಯ ಗಳಿಸಿದ ಮೊದಲ ಶೆಹೆನಾಯ್ ವಾದಕರಾದರೆ, ಗಾನಕೋಗಿಲೆ ಲತಾ ಮಂಗೇಷ್ಕರ್ ಅವರು ಮೊದಲ ಬಾರಿಗೆ ಅತಿ ಹೆಚ್ಚು ಹಾಡುಗಳನ್ನು ಧ್ವನಿಮುದ್ರಿಸಿದ ದಾಖಲೆಗಾಗಿ ಗಿನ್ನೆಸ್ ಪುಸ್ತಕದಲ್ಲಿ ಪ್ರವೇಶ ಪಡೆದರೂ ಕಾರಣಾಂತರದಿಂದ ಮುಂದೆ ೧೯೯೧ ರಲ್ಲಿ ಆ ದಾಖಲೆಯನ್ನು ತೆಗೆಯಲಾಯಿತು. ಶ್ರೀಮತಿ ಶರನ್ ರಾನಿ ಪಾಂಡಿತ್ಯ ಪಡೆದ ಮೊದಲ ಮಹಿಳಾ ಸರೋದವಾದಕಿಯಾಗಿದ್ದಾರೆ

ಹೀಗೆ ಬದಲಾದ ಕಾಲದ ನಡೆ ತಂದುಕೊಟ್ಟ ಮಹಿಳಾ ಸ್ವಾತಂತ್ರ್ಯದಿಂದ ಸಂಗೀತ ಕ್ಷೇತ್ರದಲ್ಲಿ ಮಹಿಳೆ ಹೆಚ್ಚುಹೆಚ್ಚು ಸಕ್ರಿಯಳಾಗಿ ತೊಡಗಿಕೊಂಡು ಅದನ್ನು ಸಮೃಧ್ಧವಾಗಿಸುತ್ತಿದ್ದಾಳೆ ಎಂದರೆ  ಅದು ಅತಿಶಯೋಕ್ತಿಯಲ್ಲ.

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಮಹಿಳೆ ಮತ್ತು ಸಂಗೀತ: ಅನುರಾಧ ಸಾಮಗ

 1. ಮಹಿಳೆ ಮತ್ತು ಸಂಗೀತಕ್ಕಿರುವ ನಂಟನ್ನು ತುಂಬಾ ಸುಂದರವಾಗಿ ವಿವರಿಸಿದ್ದೀರಾ ಅಕ್ಕ. ಅಲ್ಲದೇ ಮಾಹಿತಿಯನ್ನೊಳಗೊಂಡ ಬರಹ. ಧನ್ಯವಾದಗಳು ಇಂತಹ ಒಂದು ಬರಹ ನಾಮ ಕೈಗೆಟುಕುವಂತೆ ಮಾಡಿದ್ದಕ್ಕೆ…

 2.  ಈಗ ಹೆಣ್ಣು ಅಭ್ಯಸಿಸದ, ಸಾಧನೆ ಮಾಡದ ಸಂಗೀತದ ಪ್ರಕಾರವೇ ಇಲ್ಲ.
  I liked this line.
  Now a days women are capable of doing ll the things that can be done by a man.
  Even they are  good at controlling full domestic affairs.
  so hats off to ladies

 3. ಉತ್ತಮ ಸಂಗ್ರಹ ಯೋಗ್ಯ ಬರಹ. ಜೊತೆಗೆ ಲಘು ಸಂಗೀತದಲ್ಲಿ ಒಳ್ಳೆಯ ಹೆಸರು ಮಾಡಿರುವ ಶ್ರೀಮತಿ. ಬಿ.ಕೆ.ಸುಮಿತ್ರ, ರತ್ನಮಾಲಾ ಪ್ರಕಾಶ ಮುಂತಾದವರೂ ತಮ್ಮ ಸಂಗೀತ ಪ್ರಭೆಯಿಂದಲೇ ಸ್ಥಾನ ಪಡೆದಿದ್ದಾರೆ. ಅನು ಮೇಡಂ ಒಳ್ಳೆಯ ಲೇಖನ.

Leave a Reply

Your email address will not be published. Required fields are marked *