ಪಂಜು-ವಿಶೇಷ

ಮಹಿಳೆ, ಮಗು , ಕಾನೂನು..: ಮಮತಾ ದೇವ

ಮಹಿಳೆಯರಿಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿ ಗತಿ ಸಮಾಜದ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶಗಳಲ್ಲೂ ಸುಧಾರಣೆಯನ್ನು ಕಂಡಿಲ್ಲ.ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೂ ದೌರ್ಜನ್ಯ ಹೆಚ್ಚುತ್ತಿರುವುದು  ಅಪಾಯಕಾರಿಯೆನಿಸುತ್ತಿದೆ. ಮಹಿಳೆ ಇನ್ನೂ ಎರಡನೇ ದರ್ಜೆ ಪ್ರಜೆಯಾಗಿಯೇ ಉಳಿದಿದ್ದಾಳೆ. ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಪುರುಷನಿಗೆ ಸಮಾನಳಾಗಿದ್ದರೂ, ಮಹಿಳೆಗೆ ಸುರಕ್ಷತೆಯ ವಾತಾವರಣ ಎಲ್ಲೆಲ್ಲೂ ಇಲ್ಲ.ಇಂದಿನ 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳು ಭದ್ರತೆ, ಸುರಕ್ಷತೆಗಳಿಂದ ವಂಚಿತರಾಗುತ್ತಿದ್ದಾರೆ.ಕಾನೂನು ಎಲ್ಲ ದೇಶದಲ್ಲೂ ಒಂದೇ ಆಗಿಲ್ಲ. ಕೆಲವು ದೇಶಗಳಲ್ಲಿ  ಮಹಿಳೆಯರಿಗೆ ಹಕ್ಕುಗಳೇ ಇಲ್ಲ. ಕೆಲವೊಂದು ದೇಶಗಳಲ್ಲಿ, ಸಮುದಾಯದಲ್ಲಿ, ಮಗುವನ್ನು ಹೆರುವ ಮತ್ತು ಹೆರದೇ ಇರುವ ಆಯ್ಕೆ ಕೂಡಾ ಅವಳ ಮಿತಿಯಲ್ಲಿ ಇಲ್ಲ. ಒಂದು ವೇಳೆ ಹಕ್ಕುಗಳಿದ್ದರೂ ಅದನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ.ಹೀಗೆ ಕಾನೂನು ಭಂಗಗೊಳಿಸಿ ಮಹಿಳೆಯರನ್ನು ಅಬಲೆಯರನ್ನಾಗಿಸುತ್ತಿರುವುದು ಶೋಚನೀಯ. ಕೆಲವೊಮ್ಮೆ ಕಾನೂನಿನ ತೊಡಕಿನಿಂದಾಗಿ,ಕೆಲವೊಮ್ಮೆ ಸರಿಯಾದ ಕಾನೂನಿನ,ಹಕ್ಕುಗಳ ಅರಿವಿಲ್ಲದೆ ಮಹಿಳೆಯರು ತಮ್ಮ ಮಕ್ಕಳನ್ನೂ ರಕ್ಷಿಸಲು, ಬೆಂಬಲಿಸಲು ಸಾಧ್ಯವಾಗದೆ ತೊಳಲಾಡುತ್ತಾರೆ.ಇಂತಹ ಸಂದರ್ಭಗಳಲ್ಲಿ ಸಮಾಜ ಸೇವಾ ಸಂಸ್ಥೆಗಳು, ಮಹಿಳಾಪರ ಸಂಘಟನೆಗಳು ಮೌನ ವಹಿಸದೆ, ವಿಶ್ವದಾದ್ಯಂತ ಮಹಿಳೆಯರಿಗೆ ಅರಿವು ಮೂಡಿಸಿ,ತಮ್ಮ ಹಕ್ಕುಗಳನ್ನು ತಿಳಿಸಿ, ನೊಂದ ಹೆಣ್ಣು ಮಕ್ಕಳ ಮೌನದ ಕಣ್ಣೀರಿಗೆ ಧ್ವನಿಯಾಗಬೇಕು, ಚೆನ್ನಾಗಿ ಬದುಕಲು ನೆರವನ್ನೀಯಬೇಕು.

ಹುಡುಗಿ, ಸ್ತ್ರೀ ಎಂದರೆ ಕೆಟ್ಟದಾಗಿ ನೋಡುವ ಜನರನ್ನು ಪರಿವರ್ತಿಸಿ ಭದ್ರತೆ ಒದಗಿಸಲು ಸಾಧ್ಯವಾದಾಗ ಮಾತ್ರ ಇನ್ನೂ ದಿಟ್ಟತನದಿಂದ ಕರ್ತವ್ಯ ನಿರ್ವಹಿಸಿ ಉತ್ತಮ ನಾಯಕಿಯೂ ಆಗಬಲ್ಲಳು ಎಂಬುದು ಎಲ್ಲರಿಗೂ ತಿಳಿದಿದೆ. ಸಮಾಜದಲ್ಲಿ ಕೀಳರಿಮೆ ಇಲ್ಲದೆ,ಸ್ವಾಭಿಮಾನದಿಂದ ಸುರಕ್ಷಿತವಾಗಿ ಮಹಿಳೆ ಬದುಕುವಂತಾಗಬೇಕು.ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳಿಂದ ಸಶಕ್ತಳಾಗಿದ್ದರೂ ಸ್ತ್ರೀಗೆ  ಕಾನೂನು,ಹಕ್ಕು ಮತ್ತು ಕರ್ತವ್ಯಗಳ  ಅರಿವಿರಬೇಕು. ಮಹಿಳೆಯರು ಸಂಘಟಿತರಾಗಿ ತಮ್ಮ ಎಲ್ಲಾ  ಹಕ್ಕುಗಳಿಗೆ ಹೋರಾಡುವ  ಅವಶ್ಯಕತೆ ಇದೆ.ನಾಯಕತ್ವ ಗುಣ ಯಾರೂ ಕೊಡಬೇಕಿಲ್ಲ.  ಅದು ಪ್ರತಿಯೊಬ್ಬ ಹೆಣ್ಣಿಗೂ ಸ್ವಾಭಾವಿಕವಾಗಿ ಇರುವಂತದ್ದೇ. ತನಗೆ ತಾನೇ ನಾಯಕಿಯಾಗಬೇಕು. 

ಮಕ್ಕಳನ್ನು ಹಡೆದರಾಯಿತೇ? ಅವರನ್ನು ಪಾಲಿಸಿ ಪೋಷಿಸಿ ರಕ್ಷಣೆ ನೀಡುವುದು ಹೆತ್ತವರ  ಕರ್ತವ್ಯ. ಆಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು 18 ವರುಷದವರೆಗಿನವರೆಲ್ಲರೂ “ಮಗು” ಎಂಬ ವ್ಯಾಪ್ತಿಯಲ್ಲಿ ಬರುವವರು. ಮಗು ಅಸಹಾಯಕ ಸ್ಥಿತಿಯಲ್ಲಿರುವ ಕಾರಣ ಸಮಾಜದಲ್ಲಿ ಎಲ್ಲೆಂದರಲ್ಲಿ ಮಗುವಿನ ದುರ್ಬಳಕೆ ನಡೆಯುತ್ತಿದೆ. ಕುಟುಂಬದಲ್ಲಿ, ಶಾಲೆಯಲ್ಲಿ,ನೆರೆಮನೆಯಲ್ಲಿ ಇಂತಹ ಮಂದಿ ಮಕ್ಕಳನ್ನು ಬೇಕಾದಂತೆ ಬಳಸಿಕೊಂಡು ಅವರ ಬದುಕನ್ನು ಚಿವುಟುತ್ತಿರುವುದು ನಿತ್ಯ ಸುದ್ಧಿಯಾಗುತ್ತಿರುವುದು ನಾಗರಿಕ ಸಮಾಜದ ದುರಂತ. ಮಕ್ಕಳು ಸ್ವತಂತ್ರವಾಗಿ ಬೆಳೆಯುವಲ್ಲಿ ಸಮಾಜದ ಪಾತ್ರ ಹಿರಿದು. ನೈತಿಕ ಪ್ರಜ್ಞೆ ಪ್ರತಿಯೊಬ್ಬರಲ್ಲ್ಲೂ ಮೂಡಿಸುವ ಪ್ರಯತ್ನ ಪ್ರತಿ ಮನೆಯಲ್ಲೂ ಆಗಬೇಕು.  ಮಗುವಿಗೆ ತಿಳುವಳಿಕೆ ಹೇಳುವುದು,ಏಕಾಂಗಿಯಾಗಿ ಬೇರೆಯವರೊಡನೆ ಬಿಡದಿರುವುದು, ಕೆಟ್ಟ ಸ್ವರ್ಶದ ಎಚ್ಚರಿಕೆ ನೀಡುವುದು ಎಲ್ಲರ ಕರ್ತವ್ಯ. ಮಕ್ಕಳನ್ನು ಶೋಷಿಸುವುದು, ದುರ್ಬಳಕೆ ಮಾಡಿಕೊಳ್ಳುವುದು, ಹಿಂಸೆ ನೀಡುವುದು ನಿಲ್ಲಲೇ ಬೇಕು ಪ್ರತಿಯೊಂದು ಮಗುವನ್ನೂ ಗೌರವಿಸಬೇಕು. 

ಪೋಷಕರು ಉತ್ತಮ ಶಾಲೆಗೆ ಸೇರಿಸಿದ ಮಾತ್ರಕ್ಕೆ ಅವರ ಕರ್ತವ್ಯ ಮುಗಿಯುವುದಿಲ್ಲ. ಮಕ್ಕಳು ವ್ಯಸನಿಗಳಾಗದಂತೆ,ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಇಂದು ಯುವ ಜನತೆಯನ್ನು ಹಾದಿ ತಪ್ಪಿಸುವ  ಅನೇಕ ಜನರಿದ್ದಾರೆ. ಹಾಗಾಗಿ ಮಕ್ಕಳಿಗೆ ಸರಿಯಾದ ತಿಳುವಳಿಕೆ, ಮಾರ್ಗದರ್ಶನವೂ ಅಗತ್ಯ. 

ಆಧುನಿಕ ಜಗತ್ತಿನಲ್ಲಿ ಮಹಿಳೆಯ ಜವಾಬ್ದಾರಿ ಹೆಚ್ಚಿದಂತೆ ದಿನೇ ದಿನೇ ಹಲವಾರು ಸವಾಲುಗಳು ಅವಳನ್ನು ಆತಂಕಕ್ಕೀಡು ಮಾಡುತ್ತಿವೆ. ಇನ್ನೂ ಬಾಲ್ಯ ವಿವಾಹಗಳು, ಶಿಶು ಬಲಿ,  ಹೆಣ್ಣು ಭ್ರೂಣ ಹತ್ಯೆ, ಹುಡ್ಡಿದ ನಂತರ ಹೆಣ್ನು ಮಗುವಾದರೆ ಕ್ರೂರವಾಗಿ ಭತ್ತ ತುಂಬಿಸಿ, ಹಾಲಿನಲ್ಲಿ ಮುಳುಗಿಸಿ ಕೊಲ್ಲುವ ಪದ್ಧತಿ…(ಮಹೇಶ್ ದತ್ತಾನಿಯವರ “ತಾರಾ “ನಾಟಕದಲ್ಲಿರುವಂತೆ ಇನ್ನಿತರ ಸಮಾಜದ ಸ್ವಾಸ್ಥ್ಯ ಕೆಡಿಸುವ ಕ್ರೂರ ಪದ್ಧತಿಗಳು ನಮ್ಮ ನಾಗರಿಕ ಸಮಾಜಕ್ಕೆ ಕಳಂಕವಾಗಿವೆ. ವಿದೇಶೀಯರು ನಮ್ಮತ್ತ ಬೊಟ್ಟು ಮಾಡುವಂತಾಗಿರುವುದು ಅವಮಾನಕರ. ಬೇರೆ ದೇಶದಲ್ಲಿ ನಡುರಾತ್ರಿ ಓರ್ವ ಹೆಣ್ಣು ಮಗಳು ಟ್ಯಾಕ್ಸಿಯಲ್ಲಿ ವಿಮಾನ ನಿಲ್ಧಾಣಕ್ಕೋ, ಬೇರೆ ಕೆಲಸ ನಿಮಿತ್ತವೋ ಸುರಕ್ಷಿತವಾಗಿ ತೆರಳಲು ಸಾಧ್ಯ.ಆದರೆ ನಾವು ನಮ್ಮ ಊರುಗಳಲ್ಲಿ ಸುರಕ್ಷಿತವಾಗಿಲ್ಲ. ರಾತ್ರಿ ಬಸ್ ನಲ್ಲಿ ಸಂಚರಿಸುವುದಿರಲಿ, ಹಗಲು ಏಕಾಂಗಿಯಾಗಿ ಸಂಚರಿಸಲೂ ಹೆದರುವ ಪರಿಸ್ಥಿತಿ. ಮೊದಲೆಲ್ಲ ಶಾಲೆ-ಕಾಲೇಜಿಗೆ ನಿರ್ಜನ ದಾರಿಯಲ್ಲಿ ನಡೆದು ಹೋಗುತ್ತಿದ್ದರೂ ಅಪಾಯವಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಎಷ್ಟೋ ಹೆಣ್ಣು ಮಕ್ಕಳು ನಮ್ಮನ್ನು ಯಾರೂ ಕೆಟ್ಟ ದೃಷ್ಟಿಯಿಂದ ನೋಡದಿರಲಿ ಎಂದುಕೊಳ್ಳುತ್ತಿರುತ್ತಾರೆ. ಹದಿಹರೆಯದ  ಅಪಕ್ವ ಸ್ಥಿತಿಯಲ್ಲಿ ಗೊಂದಲಕ್ಕೀಡಾಗಿ ಇನ್ನೊಬ್ಬರಲ್ಲೂ ಹೇಳಿಕೊಳ್ಳದೆ ಡಿಪ್ರೆಷನ್ಗೊಳಗಾಗುವವರೂ ಇಲ್ಲದಿಲ್ಲ. ಹಿಂದೆ ತಾಯಿ (ಅವಿಭಕ್ತ ಕುಟುಂಬಗಳಲ್ಲಿ )ತನ್ನ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಂತೆ, ಈಗಿನ ಪರಿಸ್ಥಿತಿಯಲ್ಲಿ,ಧಾವಂತದ ಬದುಕಿನಲ್ಲಿ ಸಾಧ್ಯವಾಗದಿರುವುದು ಮಗುವಿನ ದುರುಪಯೋಗಕ್ಕೆ ಒಂದು ಕಾರಣ. 

ಅಸಹಾಯಕವಾದ ಸ್ಥಿತಿಯಲ್ಲಿರುವ ಮುಗ್ಧ ಮಕ್ಕಳ ಬದುಕು ಮುದುಡದಂತೆ,ಒಟ್ಟಿನಲ್ಲಿ ಸಮರ್ಥ ಸ್ತ್ರೀ ಸಂಕುಲಕ್ಕೇ ಜೀವನದಲ್ಲಿ  ರಕ್ಷಣೆ ಒದಗುವಂತೆ ಸಮರ್ಥ ಕಾನೂನು ಜಾರಿಯಾಗಬೇಕು. ಕ್ರೂರ ವರ್ತನೆಗೆ ಕಾರಣರಾದವರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಲೇಬೇಕು. ಸಾಮಾಜಿಕವಾಗಿ ಹೆಣ್ಣು ಮಕ್ಕಳ ಬಗ್ಗೆ ಗೌರವ ಮೂಡುವಂತಹ  ಅನಿವಾರ್ಯತೆ ಇದೆ. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಇಂಥ ಬದಲಾವಣೆ ಸಾಧ್ಯವೇ?  ಉತ್ತಮ ಸಂಸ್ಕಾರಗಳಿಗಿರುವ ನಮ್ಮ ದೇಶದಲ್ಲಿ, ಸಮಾಜದಲ್ಲಿ ಸಣ್ಣ ಮಗುವಿಗೂ ಗೌರವ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮಹಿಳೆ, ಮಗು , ಕಾನೂನು..: ಮಮತಾ ದೇವ

Leave a Reply

Your email address will not be published. Required fields are marked *