ಭಾರತೀಯ ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿದೆ. ಅದರಲ್ಲೂ ಮಹಿಳೆಯರಿಗೆ ವಿಶೇಷವಾದ ಸಂಸ್ಕೃತಿ ಆಚರಣೆಗಳಿವೆ. “ಗೃಹಿಣಿ ಗೃಹಮುಚ್ಯತೆ ಎಂಬಂತೆ ಒಂದು ಮನೆಯಲ್ಲಿ ಒಬ್ಬ ಸ್ತ್ರೀ ಆಚರಿಸುವ ಧಾರ್ಮಿಕ, ಪೂಜೆ ಪುನಸ್ಕಾರಗಳು ಆ ಇಡೀ ಕುಟುಂಬವನ್ನೇ ಉನ್ನತ ಮಟ್ಟಕ್ಕೆ ಒಯ್ಯುತ್ತವೆ. ಅಂತಹ ಸ್ತ್ರೀಗೆ ಪಂಚರೀತಿಯ ಮಂಗಲದ್ರವ್ಯಗಳು ಭೂಷಣಪ್ರದವಾಗಿರುತ್ತವೆ.
ಆ ಮಂಗಲ ದ್ರವ್ಯಗಳೆಂದರೆ . .
“ಕುಂಕುಮಂ ಕವಚಂ ದಿವ್ಯಂ
ಕಜ್ಜಲಂ ಕಂಠಸೂತ್ರತಾ ಕಂಕಣಂಚತು ಪಂಚೈತೆ ಕಕಾರಂ ಮಂಗಲಪ್ರದಾ” ಈ ಶ್ಲೋಕದ ಮೂಲಕ ಆ ಐದು ಮಂಗಲದ್ರವ್ಯಗಳು ತಿಳಿಯುತ್ತವೆ.
ಕುಂಕುಮ, ಕವಚ(ವಸ್ತು), ಕಜ್ಜಲ(ಕಾಡಿಗೆ), ಕಂಠಸೂತ್ರ(ಕರಿಮಣಿ ಸರ), ಕಂಕಣ(ಬಳೆ) ಹೀಗೆ ಕಕಾರದಿಂದ ಪ್ರಾರಂಭವಾಗುವ ಈ ಐದು ಮಂಗಲದ್ರವ್ಯಗಳು ತುಂಬಾ ಮಂಗಲಕಾರಕವೆನಿಸಿವೆ.
- ಕುಂಕುಮ- ಸ್ತ್ರೀಯರಿಗೆ ಕುಂಕುಮವು ಇಚ್ಛಾಶಕ್ತಿ ಮತ್ತು ಜ್ಞಾನಶಕ್ತಿಯನ್ನು ವದ್ಧಿಸುತ್ತದೆ. ಅರಿಶಿನಬೇರುಗಳನ್ನು ನೀರಿನಲ್ಲಿ ನೆನೆಸಿಟ್ಟು ಒಣಗಿಸಿ ಕುಟ್ಟಿ ಪುಡಿ ಮಾಡಿದರೆ ಕುಂಕುಮ ಸಿದ್ಧವಾಗುತ್ತದೆ. ಅರಿಷಿಣ ದೇಹಕ್ಕೆ ಬೇಕಾದ ತಂಪನ್ನು ನೀಡಿದರೆ ಕುಂಕುಮ ಉಷ್ಣತೆ ನೀಡುತ್ತದೆ. ಹೀಗೆ ಕುಂಕುಮದ ಬಳಕೆ ಕೇವಲ ಸಾಂಕೇತಿಕ ವಾಗಿರದೇ ವೈಜ್ಞಾನಿಕವೂ ಆಗಿದೆ.
“ಕುಂಕುಮಂ ಕಾಮದಂ ದಿವ್ಯಂ ಕಾಮಿನಿ ಕಾಮ ಸಂಭವಂ” ಎಂಬಂತೆ ಕುಂಕುಮವು ದಿವ್ಯವಾಗಿದ್ದು ಸೌಭಾಗ್ಯವತಿಯರಲ್ಲಿ ಸತ್ಕಾಮವನ್ನು ವರ್ಧಿಸುತ್ತದೆ. ಆಕೆಗೆ ಪತಿಯ ಮನೋನೂಕೂಲ ವರ್ತನೆಯನ್ನು, ಆಕರ್ಷಕ ಮನೋಭಾವವನ್ನು ಒದಗಿಸುತ್ತದೆ. ಭ್ರೂಮಧ್ಯ , ಬ್ರಹ್ಮರಂಧ್ರಗಳೆರಡಕ್ಕೆ ಕೇಶರದ (ಕುಂಕುಮ) ಸ್ಪರ್ಶವಾದಾಗ ಮನಸ್ಸು ಆಹ್ಲಾದಕರವೂ, ದೇಹವೂ ಲವಲವಿಕೆಯುಳ್ಳದ್ದೂ ಆಗುವದು. ಈ ಕಾರಣದಿಂದಲೇ ಸುಮಂಗಲೆಯರು ಹಣೆಯ ಮೇಲೂ, ಬೈತಲೆಯಲ್ಲೂ ಕುಂಕುಮವನ್ನು ಧರಿಸುವರು.
ಸರ್ವ ಸೌಭಾಗ್ಯಗಳ ಪ್ರತೀಕವಾದ ಈ ಕುಂಕುಮವನ್ನು ದೇವಿಗೆ ಅರ್ಪಿಸಿದರೆ ದೇವಿಯು ಸಂಪ್ರೀತಳಾಗಿ ನಮ್ಮ ಅಭೀಷ್ಟೆಗಳನ್ನು ಈಡೇರಿಸುವಳು ಎಂಬ ಪರಂಪರಾಗತ ನಂಬಿಕೆ ಇದೆ. ಭಾರತೀಯ ಸಂಸ್ಕ್ರತಿಯು ಈ ಕುಂಕುಮ ಪ್ರಭಾವದಿಂದ ಸುರಕ್ಷಿತವಾಗಿದೆ. ಆದರೆ ಇತ್ತೀಚೆಗೆ ಕುಂಕುಮದ ಬದಲು ಇತರೆ ಕೃತಕ ಸಾಮಗ್ರಿಗಳನ್ನು ಬಳಸುವದರಿಂದ ಮನಸ್ಸು ಶ್ರೇಯೋಭಾವದಿಂದ ದೂರಾಗಿ ಸಾಮಾನ್ಯ ಅಭಿರುಚಿಯ ಕಡೆಗೆ ತಿರುಗುವದರಿಂದ ಎಲ್ಲೆಡೆ ಅಶಾಂತಿ, ಉದ್ರೇಕಕಾರಿ ವಿಕಾರಗಳನ್ನು ಕಾಣುತ್ತಿದ್ದೇವೆ. ಆದಕಾರಣ ಸ್ತ್ರೀಯಾದವಳು ಕುಂಕುಮದ ಮಹತ್ವ ತಿಳಿಯುವದು ಸಮರ್ಪಕವಾದುದು.
2- ಕಂಚುಕ(ವಸ್ತ್ರ):
” ದಕೂಲ ದ್ವಿತಯಂ ದಿವ್ಯಂ ಕುಂಚುಕಂ ಚ ಮನೋಹರ” ಎಂಬಂತೆ ಸ್ತ್ರೀಯಾದವಳಿಗೆ ಉಡುಗೆ-ತೊಡುಗೆಗಳು ಭೂಷಣಪ್ರದವಾಗಿರಬೇಕು. ಇಂತಹ ಮನೋಹರವಾದ ದಿವ್ಯ ವಸ್ತ್ರವನ್ನು ಆ ದೇವಿಗೆ ಉಡಿ ತುಂಬುವದರಿಂದ ಸಂತೃಪ್ತಳಾದ ದೇವಿ ನಮಗೆ ಅನುಗ್ರಹಿಸುತ್ತಾಳೆ. ಮನೆಗೆ ಸಮಾರಂಭಗಳಲ್ಲಿ ಬಂದ ಮುತ್ತೈದೆಯರಿಗೆ ಕುಪ್ಪಸದ ವಸ್ತ್ರವನ್ನು ಉಡಿ ತುಂಬಬೇಕು. ಆಗ ಅವರಲ್ಲಿ ದೈವತ್ವವನ್ನು ಕಂಡಂತಾಗುತ್ತದೆ. ಜೊತೆಗೆ ಮನಸ್ಸಿಗೆ ಹಿತ ಹಾಗೂ ಆನಂದ ಲಭಿಸುತ್ತದೆ.
3- ಕಜ್ಜಲ(ಕಾಡಿಗೆ):
ಕಾಡಿಗೆಯು ಕೂಡ ಒಂದು ಮಂಗಲದ್ರವ್ಯ. ಇದು ಹೆಣ್ಣುಮಕ್ಕಳಿಗೆ ಲಕ್ಷಣವನ್ನು ನೀಡುತ್ತದೆ ಹಾಗೂ ತಂಪು ಒದಗಿಸುತ್ತದೆ. ಬೆಣ್ಢೆ ಹಾಗೂ ಕರ್ಪೂರದ ಮಿಶ್ರಣದಿಂದ ಕಾಡಿಗೆ ಸಿದ್ಧವಾಗಿರುತ್ತದೆ. ಆದ್ದರಿಂದ ಹೆಣ್ಣಿನ ಉಷ್ಣತೆಯನ್ನು ಸಮತೋಲನಕ್ಕೆ ತರುವ ಗುಣವನ್ನು ಹೊಂದಿದೆ. ಇಂತಹ ಮಂಗಲಪ್ರದವಾದ ಕಾಡಿಗೆಯನ್ನು ದಾನ ಮಾಡುವದರಿಂದ ಒಳ್ಳೆಯದಾಗುತ್ತದೆ. ಮುತ್ತೈದೆಯರು ಬಾಗಿನ ಅರ್ಪಿಸುವಾಗ ಇದನ್ನು ಮರೆಯದೆ ದಾನಮಾಡುತ್ತಾರೆ.
4- ಕಂಠಸೂತ್ರ(ಕರಿಮಣಿ ಸರ):
ಒಬ್ಬ ಹೆಣ್ಣುಮಗಳು ಗೃಹಿಣಿ ಎನಿಸಿಕೊಳ್ಳುವ ಸಂಕೇತವೇ ಕಂಠಸೂತ್ರ, ಅಂದರೆ ಮಂಗಳಸೂತ್ರ. ಇದರಲ್ಲಿರುವ ತಾಳಿಗಿಂತ ಕರಿಮಣಿಗಳಿಗೆ ಹೆಚ್ಚಿನ ಮಹತ್ವವಿದೆ, ಕೊರಳಲ್ಲಿ ಕರಿಮಣಿ ಇದ್ದರೆ ಅದರ ಶೋಭೆಯೇ ಬೇರೆ. ಯಾವ ದುಷ್ಟರ, ಕಾಮುಕರ ದೃಷ್ಟಿಯೂ ಬೀಳುವದಿಲ್ಲ. ಅದು ಹೆಣ್ಢಿಗೆ ರಕ್ಷಾಕವಚವಿದ್ದಂತೆ. ಅಷ್ಟೆ ಅಲ್ಲ ವೈಜ್ಞಾನಿಕವಾಗಿಯೂ ಕರಿಮಣಿ ಮಹಿಳೆಯರನ್ನು ಉಷ್ಣತೆಯಿಂದ ಕಾಪಾಡುತ್ತದೆ.
ಆದರೆ ಇಂದಿನ ಸ್ತ್ರೀಯರು ಈ ಮಂಗಳಸೂತ್ರದ ಮಹತ್ವವನ್ನು ಮರೆತಿದ್ದಾರೆ. ದಿನಕ್ಕೊಂದು ರೀತಿಯ ಮಂಗಳಸೂತ್ರವನ್ನು ಬಳಸುವವರು ಹೆಚ್ಚಾಗಿದ್ದಾರೆ. ಮನೆಯಲ್ಲೊಂದು, ಮದುವೆ ಸಮಾರಂಭಕ್ಕೊಂದು ಹೀಗೆ ಬೇರೆ ಬೇರೆ ರೀತಿಯ ಮಂಗಲ ಸೂತ್ರಗಳ ಬಳಕೆ ಇಂದು ಶೋಕಿ ಆಗಿಬಿಟ್ಟಿದೆ. ಹಿಂದಿನ ಕಾಲದಲ್ಲಿ ಸ್ತ್ರೀಯರ ತಾಳಿ ಪರಪುರುಷನ ಕಣ್ಣಿಗೆ ಕಾಣುತಿರಲಿಲ್ಲವಂತೆ ಕೇವಲ ಪತಿಗೆ ಕಾಣುತ್ತಿತ್ತಂತೆ. ಈಗ ಬಂಗಾರದಲ್ಲಿಯ ತಾಳಿಚೈನ ಎಲ್ಲರಿಗೂ ಕಾಣುವಂತೆಯೇ ಧರಿಸುತ್ತಾರೆ. ನಮೂನೆಯ ತಾಳಿಚೈನಗಳನ್ನು ಬಳಸುತ್ತಾರೆ. ಮಹತ್ವಪೂರ್ಣವಾದ ಕರಿಮಣಿಯನ್ನು ಕೊರಳಲ್ಲಿ ಧರಿಸಿದರೆ ಅದರ ಲಕ್ಷಣವೇ ಬೇರೆ.
5- “ಕಾಚೇನ ನಿರ್ಮಿತಂ ದಿವ್ಯಂ ಕಂಕಣಂ” ಎಂಬಂತೆ ಕಂಕಣವು ಸ್ತ್ರೀಯ ಕೈಗಳಿಗೆ ಲಕ್ಷಣವನ್ನು ಒದಗಿಸುತ್ತದೆ. ಮನೆಯಲ್ಲಿ ಸ್ತ್ರೀಯ ಕೈ ಬಳೆಗಳ ನಾದವಾಗುತ್ತಿದ್ದರೆ ಅದರ ಲಕ್ಷಣವೇ ಬೇರೆ ಎಂದು ಹಿರಿಯರು ಹೇಳುವ ಮಾತುಗಳನ್ನು ಕೇಳಿರುತ್ತೇವೆ. ಸ್ತ್ರೀಯಾದವಳು ಕೈತುಂಬ ಬಳೆ ಹಾಕಬೇಕು. ಇದರಿಂದ ಅವಳ ನಾಡಿಮಿಡಿತ ಸಮತೋಲನ ಸ್ಥಿತಿಯಲ್ಲಿರುತ್ತದೆ ಎಂಬ ವೈಜ್ಞಾನಿಕ ಕಾರಣವೂ ಇದೆ. ಇಂತಹ ಮಹತ್ವ ಹೊಂದಿದ ಬಳೆಗಳನ್ನು ಈಗೀನ ಮಹಿಳೆಯರು ಧರಿಸುವದನ್ನೆ ಬಿಟ್ಟಿದ್ದಾರೆ. ಶುಭಸಮಾರಂಭಗಳಲ್ಲಿ ಬಂಗಾರದ ಬಳೆಗಳೊಂದಿಗೆ ಗಾಜಿನ ಬಳೆಗಳನ್ನು ಧರಿಸುತ್ತಾರೆ. ಬಳೆಗಳು ಹೆಣ್ಣಿನ ಜೀವನದ ಅಮೂಲ್ಯ ಕೊಡುಗೆ. ಕೈಗಳಿಗೆ ರಕ್ತ ಸಂಚಲನ ನೀಡುತ್ತವೆ. ಸುಂದರ ಸೇಪ ನೀಡುತ್ತವೆ. ಅಲಂಕಾರದಲ್ಲಿ ಹಾಗೂ ಶುಭಸಮಾರಂಭಗಳಲ್ಲಿ ಕೈತುಂಬ ಬಳೆಗಳನ್ನು ಧರಿಸಿದರೆ ಅದರ ಶ್ರೇಯಸ್ಸೆ ಅಮೋಘವಾದದು. . ಗೌರವದ ಕುರುಹು ಈ ಬಳೆಗಳು ಇಂದು ಎಲ್ಲ ಬಣ್ಣಗಳಲ್ಲಿ ಸಿಗುತ್ತವೆ.
ಹೀಗೆ ಈ ಮಂಗಲದ್ರವ್ಯಗಳಿಂದ ಸುಶೋಭಿತವಾದ ಸ್ತ್ರಿ ನಿಜಕ್ಕೂ ಧನ್ಯಳು. ಅವಳ ಜೀವನ ಪಾವನವೇ ಸರಿ. ಇಂದಿನ ನಮ್ಮ ಆಧುನಿಕ ನಾರಿಯರು ಈ ಎಲ್ ಮಂಗಲದ್ರವ್ಯಗಳನ್ನು ಸದಾ ಬಳಸುವಂತಾಗಲಿ ಎಂಬುದೆ ಸದಾಶಯ.
–ಜಯಶ್ರೀ ಭ. ಭಂಡಾರಿ.