ದೇಶದ ಅಭಿವೃದ್ಧಿ ಸಾಧನೆಯಲ್ಲಿ ಮಹಿಳಾ ಸಶಕ್ತೀಕರಣದಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ. ಮಹಿಳೆಯರ ಸಾಮಥ್ರ್ಯವನ್ನು ಇದಕ್ಕಿಂತ ಸರಿಯಾಗಿ ಬಣ್ಣಿಸುವ ಹೇಳಿಕೆ ಬೇರೊಂದಿಲ್ಲ ಎನ್ನಬಹುದು. ಇದು ಸಾಂಪ್ರದಾಯಿಕ ಕ್ಷೇತ್ರವಾಗಿರಲಿ ಅಥವಾ ಆಧುನಿಕ ರಂಗವಿರಲಿ, ಮಹಿಳೆ ತನ್ನ ಛಾಪು ಮೂಡಿಸದ ಕ್ಷೇತ್ರವೇ ಇಲ್ಲ. ಮಕ್ಕಳನ್ನು ಹೆತ್ತು, ಹೊತ್ತು ಭವಿಷ್ಯದ ಭವ್ಯ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಪ್ರಾಥಮಿಕ ಜವಾಬ್ದಾರಿ ಯಾವಾಗಲೂ ಅಮ್ಮನದೇ ಆಗಿದೆ. ನಾರಿ, ಮಗಳು, ಅಕ್ಕ, ತಂಗಿ, ಹೆಂಡತಿಯಾಗಿಯೂ ಪುರುಷರ ಬೆನ್ನೆಲುಬಾಗಿದ್ದಾಳೆ. ಆಧುನಿಕ ರಂಗದಲ್ಲಿ ಪ್ರಶಿಕ್ಷಕರಾಗಿ, ಪ್ರಬಂಧಕರಾಗಿ, ರಾಜಕೀಯ ಧುರೀಣೆಯಾಗಿ ಪ್ರಮುಖ ಪಾತ್ರ ಹಾಗೂ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಳೆ. ಪುರುಷರಿಗೆ ಸೀಮಿತವೆನಿಸಿದ್ದ ಚಟುವಟಿಕಟಗಳ ಸಂಕೋಲೆಯನ್ನು ಮುರಿದು ಪರ್ವತಾರೋಹಿಯಾಗಿದ್ದಾಳೆ. ವಿಮಾನ ನಡೆಸುತ್ತಿದ್ದಾಳೆ; ಅಷ್ಟೇ ಏಕೆ ಸಶಸ್ತ್ರ ಪಡೆಯಲ್ಲಿ ಯುದ್ಧ ಮಾಡುವ ಮುಂಚೂಣಿ ದಳದಲ್ಲಿದ್ದಾಳೆ.
ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಹಿಂದಿನಿಂದಲೂ ಇದೇ ರೀತಿಯಲ್ಲಿರಲಿಲ್ಲ. ಹಿಂದೆ ಪುರುಷನಿಲ್ಲದೇ ಮಹಿಳೆ ಇಲ್ಲ ಎನ್ನುವ ಭಾವನೆ ಇತ್ತು. ಸ್ತ್ರಿ ಎಂದರೆ, ಆಕೆಯ ಪಾತ್ರ, ಮಗಳು, ಹೆಂಡತಿ, ತಾಯಿಗೆ ಮಾತ್ರ ಸೀಮಿತವಾಗಿತ್ತು. ಆಕೆಗೆ ಜೀವನದಲ್ಲಿ ತಂದೆ, ಮಗ, ಅಥವಾ ಗಂಡನ ಅಧಿಪತ್ಯದಿಂದಾಗಿ ಯಾವುದೇ ನಾಯಕತ್ವ ವಹಿಸುವುದು ಸಾಧ್ಯವಿರಲಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳಬಹುದಾದ ಪಾತ್ರ ಆಕೆಯದಾಗಿರಲಿಲ್ಲ. ಬಿಗುವಿನ ವಾತಾವರಣ ಪಾಶ್ಚಿಮಾತ್ಯ ಸಮಾಜದಲ್ಲೂ ಇತ್ತು. ನಂತರ ಬಿಗುವು ಸಡಿಲಗೊಂಡಿತು. ಶತಮಾನಗಳ ಹೋರಾಟದ ನಂತರವೇ ಮಹಿಳೆಯರಿಗೆ ಆಸ್ತಿ ಹಕ್ಕು, ಮತದಾನದ ಹಕ್ಕು, ಮದುವೆ ಮತ್ತು ಉದ್ಯೋಗ ವಿಷಯಗಳಲ್ಲಿ ಕಾನೂನಿನ ಎದುರು ಪುರುಷರಿಗೆ ಸಮಾನವಾದ ನಾಗರಿಕ ಹಕ್ಕು, ಬಂದೊದಗಿದೆ. ಭಾರತದಲ್ಲಿ ಸ್ವಾತಂತ್ರ್ಯಾನಂತರ, ಸಂವಿಧಾನ ನಿರೂಪಕರು ಮತ್ತು ರಾಷ್ಟ್ರೀಯ ನಾಯಕರು ಮಹಿಳೆಗೆ ಪುರುಷನ ಸಮಾನ ಸಾಮಾಜಿಕ ಸ್ಥಾನಮಾನ ಒದಗಿಸಲು ಅನೇಕ ಕ್ರಮಗಳನ್ನು ಕೈಗೊಂಡರು. ಇದರಿಂದ ಮಹಿಳೆಗೆ ತನ್ನ ಪ್ರತಿಭೆ ತೋರಿಸಲು ಅವಕಾಶ ದೊರೆತವು. ರಾಷ್ಟ್ರೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ, ಮುಕ್ತವಾಗಿ ಭಾಗವಹಿಸಲು ಸಾಧ್ಯವಾಯಿತು. ದಶಕಗಳಿಂದೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಸತ್ತು ವಿಧಾನ ಸಭೆಗಳ ಮೂಲಕ ಶಾಸನಾತ್ಮಕ ಕ್ರಮಗಳನ್ನು ಕೈಗೊಂಡು ಮಹಿಳೆಯರ ಶಾಸನತ್ಮಕ, ರಾಜಕೀಯ ಮತ್ತು ಸಾಮಾಜಿಕ ಉನ್ನತೀಕರಣಕ್ಕೆ ಶ್ರಮಿಸುತ್ತಿವೆ.
ಶಿಕ್ಷಣ, ಮಹಿಳೆಯನ್ನು ಸಬಲಗೊಳಿಸಿದೆ, ಪ್ರಭಲಗೊಳಿಸಿದೆ. ವನಿತೆಯನ್ನು ತ್ವರಿತವಾಗಿ ಸಶಕ್ತಗೊಳಿಸಬಲ್ಲ ಸಾಧನವೂ ಆಗಿದೆ. ವಿವಾಹ, ತಾಯ್ತನ, ವೃತ್ತಿ ನಿರ್ಧಾರ ಮೊದಲಾದವುಗಳನ್ನು ಜವಾಬ್ದಾರಿಯಿಂದ ತೆಗೆದುಕೊಳ್ಳಲು ನೆರವಾಗಿದೆ. ಭವಿಷ್ಯಕ್ಕೆ ಆರ್ಥಿಕ ಸ್ವಾವಲಂಬನೆ ತರುವುದು. ಜೀವನದುದ್ದಕ್ಕೂ ತಂದೆ ಅಥವಾ ಗಂಡನ ಆಸರೆ ಅರಸುವ ಅವಲಂಬನೆಯನ್ನು ಕಡಿಮೆ ಮಾಡಿದೆ. ಮನೆಗಳಲ್ಲಿನ ಕೌಟುಂಬಿಕ ದೈಹಿಕ ಹಿಂಸೆ, ಮಾನಸಿಕ ಹಿಂಸೆ, ಯಾತನೆಯನ್ನು ನಾರಿಯು ಸಹಿಸಬೇಕಿಲ್ಲ. ಈಗ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲು ಸ್ವತಂತ್ರಳಾಗಿದ್ದಾಳೆ.
ಆರೋಗ್ಯ ಮಹಿಳೆಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಬಹುತೇಕ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಲಕ್ಷ ವಹಿಸಲು ಸಮಯ ಸಿಗುವುದಿಲ್ಲ. ಮನಸ್ಥಿತಿ ಇರುವುದಿಲ್ಲ. ಅಥವಾ ಸೌಲಭ್ಯವಿರುವುದಿಲ್ಲ. ಬಹುತೇಕ ಗ್ರಾಮೀಣ ಮಹಿಳೆಯರಿಗೆ ಮನೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳಿರುವುದಿಲ್ಲ. ಹೀಗಾಗಿ ಸರ್ಕಾರ ನೀತಿ, ನಿರೂಪಣೆಗಳಲ್ಲಿ ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಿದೆ. ಶೌಚಾಲಯದ ನಿರ್ಮಾಣ, ಬೇಟಿ ಬಚಾವೋ-ಬೇಟಿ ಪಡಾವೋ, ಜನನಿ ಶಿಶು ಸುರಕ್ಷಾ, ಉಜ್ವಲಾ ಕಾರ್ಯಕ್ರಮಗಳಂತಹ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿದೆ.
ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಜೀವನದ ಪ್ರತಿ ರಂಗದಲ್ಲಿ ಪುರುಷರಿಗೆ ಸಮಾನವಾದ ಸ್ಥಾನ ಪಡೆಯುವ ಹಕ್ಕಿದೆ. ಎಂಟನೇ ಸಹಸ್ರಮಾನದ ಅಭಿವೃದ್ದಿ ಗುರಿಗಳಲ್ಲಿ ಪ್ರಮುಖ ಗುರಿಯಾಗಿ ಮಹಿಳಾ ಸಶಕ್ತೀಕರಣವು ಸೇರಿರುವುದು ಇದಕ್ಕೆ ನೀಡಲಾಗುತ್ತಿರುವ ಮಹತ್ವದ ಸಂಕೇತವಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ “ಮಹಿಳೆಯ ಪರಿಸ್ಥಿತಿ ಸುಧಾರಿಸದ ಹೊರತು ವಿಶ್ವದ ಕಲ್ಯಾಣಕ್ಕೆ ಅವಕಾಶವೇ ಇಲ್ಲ. ಯಾವುದೇ ಹಕ್ಕಿಗೆ ಒಂದು ರೆಕ್ಕೆಯಿಂದ ಹಾರಲಾಗುವುದಿಲ್ಲ. ಮಹಿಳೆ ಕುಟುಂಬವನ್ನಷ್ಟೇ ಅಲ್ಲ, ದೇಶ-ಜಗತ್ತನ್ನು ಸಶಕ್ತಳಾಗಿ ನಿರ್ವಹಿಸಬಲ್ಲಳು.” ಎಂದು ಹೇಳಿದ್ದು ಮಹಿಳಾ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. “ತೊಟ್ಟಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಎಂಬುದರ ಸಂಕ್ಷಿಪ್ತ ತಾತ್ಪರ್ಯ ಇದಾಗಿದೆ. ಮಹಿಳಾ ಸಬಲೀಕರಣ ಏಕಮುಖವಲ್ಲ ಇದು ಎರಡು ಮುಖ ಸಂಚಾರ ವಿಧಾನವಾಗಿದ್ದು ಬೇರೆಯವರನ್ನು ಸಬಲಗೊಳಿಸುವುದರ ಜೊತೆಗೆ ತಾವೂ ಸಬಲರಾಗಬೇಕು. ಇದೊಂದು ನಿರಂತರ ಪಯಣವಾಗಬೇಕು.
ಇಂದಿನ ದಿನಗಳಲ್ಲಿ ಪುರುಷ ಲಿಂಗಾನುಪಾತವೇ ಹೆಚ್ಚಾಗಿದೆ. ಹೀಗಾಗಿ ಮಹಿಳೆಯನ್ನು ಎಲ್ಲ ರಂಗದಲ್ಲಿ ಮುಂದೆ ಬರುವಂತೆ ಪ್ರೇರೇಪಿಸಲು ಪ್ರಮುಖವಾಗಿ ಅವಳಿಗೆ ಶಿಕ್ಷಣವನ್ನು ಒದಗಿಸಬೇಕು. ಅಲ್ಲದೇ ಅವರಿಗಾಗಿ ವಿಶೇಷ ಶಾಲೆ, ಕಾಲೇಜು, ಹಾಸ್ಟೇಲ್, ವಿಶ್ವವಿದ್ಯಾಲಯ, ಮೊದಲಾದವುಗಳನ್ನು ಸ್ಥಾಪಿಸಿ ಅಲ್ಲಿ ಶಿಕ್ಷಣ ಕೊಡಿಸುವಂತೆ ಪಾಲಕರ ಮನ ಒಲಿಸುವುದು ಅತ್ಯವಶ್ಯಕವಾಗಿದೆ. ನಮ್ಮಲ್ಲಿ ಮೊದಲಿನಿಂದಲೂ ಬಂದಿರುವ ಪೌರೋಹಿತ್ಯ ಯಜಮಾನಿಕೆ ಪದ್ದತಿಯನ್ನು ಬದಲಾಯಿಸಿ, ಸಮಾಜದಲ್ಲಿ ಎಲ್ಲಾ ಪುರುಷ ಮತ್ತು ಮಹಿಳೆಯರಿಗೆ ಜೀವಿಸಲು ಸಮಾನ ಅವಕಾಶಗಳನ್ನು ನೀಡಿ ಮಹಿಳೆಯರ ದೃಷ್ಟಿಕೋನವನ್ನು ಶಕ್ತಿಯುತವಾಗಿಸುವ ಅವಶ್ಯಕತೆಯಿದೆ.
-ನಸ್ರೀನ್. ಮೈ. ಕಾಖಂಡಕಿ