ಪಂಜು-ವಿಶೇಷ

ಮಹಿಳಾ ದಿನ’ ಅರ್ಥ ಕಳೆದುಕೊಳ್ಳುತ್ತಿರುವಾಗ: ವೀಣಾ ಅನಂತ್

ಮಾರ್ಚ್ ೮,  ಮತ್ತೊಮ್ಮೆ ವಿಶ್ವ ಮಹಿಳಾ ದಿನ ಬಂದಿದೆ. ಮತ್ತೊಮ್ಮೆ ಕನವರಿಕೆಗಳು, ಹೊಸ ಆಶಯಗಳು… ಭಾರತೀಯ ಮಹಿಳೆ ಇಂದು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದಾಳೆ… ಎಲ್ಲಾ ಕಡೆ ಮಹಿಳೆಯರದೇ ಮೇಲುಗೈ…ಇವೆಲ್ಲಾ ಕೇಳಿ ಬರುವ ಮಾತುಗಳು. ಆದರೆ ನಿಜ ಪರಿಸ್ಥಿತಿ ಬೇರೆಯೇ ಇದೆ. ಹಳೆ ಕನಸುಗಳೆಲ್ಲಾ ದುಃಸ್ವಪ್ನವಾಗಿ ಕಾಡುತ್ತಿರಲು ಹೊಸ ಕನಸುಗಳನ್ನು ಹೆಣೆಯಲು ಯಾಕೋ ಮನಸ್ಸೇ ಬರುತ್ತಿಲ್ಲ. ಇತ್ತೀಚಿಗಿನ ಘಟನೆಗಳನ್ನು ಗಮನಿಸಿದಾಗ ಯಾಕೋ ’ ಮಹಿಳಾ ದಿನ’ ಅರ್ಥ ಕಳೆದುಕೊಂಡಂತೆ ಅನಿಸುತ್ತಿದೆ. ಇತ್ತೀಚೆಗೆ ಅತ್ಯಾಚಾರ, ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿವೆ. ಮೊದಲು ಹೆಚ್ಚಾಗಿ ಇಂತಹ ಪ್ರಕರಣಗಳು ವರದಿಯಾಗುತ್ತಿರಲಿಲ್ಲ.ಮಾನ ಭಯದಿಂದ ಯಾರೂ ಹೇಳುತ್ತಿರಲಿಲ್ಲ. ಈಗೀಗ ತನ್ನ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಗೂ ಅರಿವು ಮೂಡುತ್ತಿದೆ. ಮೇಲ್ನೋಟಕ್ಕೆ ನಗರಗಳಲ್ಲಿ ತುಂಬ ಬದಲಾವಣೆಗಳಾಗಿವೆ ಅನ್ನಿಸಿದರೂ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳ ಬದುಕಿನಲ್ಲಿ ಹೆಚ್ಚೇನು ಬದಲಾವಣೆಗಳಾಗಿಲ್ಲ. ಈಗಲೂ ಹೆಣ್ಣುಮಕ್ಕಳಿಗೆ ಸರಿಯಾಗಿ ಶಿಕ್ಷಣ ಕೊಡದೇ ಹೊಲದ ಕೆಲಸ, ಮನೆಕೆಲಸಗಳಿಗೆ ತಯಾರು ಮಾಡುತ್ತಾರೆ. ಒಂದು ವೇಳೆ ವಿದ್ಯಾವಂತಳಾಗಿದ್ದರೂ ಆಕೆಗೆ ಅವಕಾಶಗಳ ಅಭಾವ, ಮನೆಯಲ್ಲಿ ಪ್ರೋತ್ಸಾಹ ಇಲ್ಲದೆ ಇರುವುದು ಇಂತಹ ಸಮಸ್ಯೆಗಳಿರುತ್ತವೆ.

ಮನೆಯಲ್ಲೇ ಆರಂಭವಾಗುವ ಹಿಂಸೆಯನ್ನು ತಡೆಯುವುದು ಹೇಗೆ, ಮನೆಯ ಹೊರಗಾಗುವ ದೌರ್ಜನ್ಯವನ್ನು ತಡೆಯುವುದು ಹೇಗೆ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವುದು ಹೇಗೆ, ಹೆಣ್ಣುಮಕ್ಕಳ ಮಾರಾಟವನ್ನು ತಡೆಯುವುದು ಹೇಗೆ. ಇವೆಲ್ಲಾ ಪ್ರಸ್ತುತ ನಾವು ಎದುರಿಸುತ್ತಿರುವ ಸಮಸ್ಯೆಗಳು.. ಇವುಗಳ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಲೇ ಇವೆ.

ಇವುಗಳು ಕಾರ್ಯರೂಪಕ್ಕೆ ಬರಬೇಕು. ಇದಕ್ಕೆ ಪೂರಕವಾದ ಕೆಲವು ಅಂಶಗಳು–
೧. ಹೆಣ್ಣು ಮಗುವಿಗೆ ಶಿಕ್ಷಣ –
 ಹೆಣ್ಣು ಮಗುವಿಗೆ ಶಿಕ್ಷಣ ಕಡ್ಡಾಯವಾದರೂ ಎಷ್ಟೊಂದು ಹೆಣ್ಣು ಮಕ್ಕಳು ಶಿಕ್ಷಣದಿಂದ ಈಗಲೂ ವಂಚಿತರಾಗುತ್ತಿದ್ದಾರೆ. ಹೆಣ್ಣು ಮಕ್ಕಳಿರುವ ಅನಕ್ಷರಸ್ಥ ತಂದೆ ತಾಯಂದಿರಿಗೆ ಇದನ್ನು ಮನವರಿಕೆ ಮಾಡಿಸಬೇಕು. ನಮ್ಮ ಸಮಾಜ ಅಂದರೆ  ಕುಟುಂಬ. ಆರೋಗ್ಯಕರ ಕುಟುಂಬಗಳು ಸೇರಿ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ಅಕ್ಷರಸ್ಥ ಸ್ತ್ರೀ ಮುಂದೆ  ಆರೋಗ್ಯಕರ ಕುಟುಂಬಕ್ಕೆ ಕಾರಣಳಾಗುತ್ತಾಳೆ. ಈಕೆ ಸ್ವಾವಲಂಬಿ ಆಗಿರುವುದಲ್ಲದೆ ಸ್ವಂತ ನಿರ್ಧಾರ
ಕೈಗೊಳ್ಳುವ ಆತ್ಮವಿಶ್ವಾಸ ಹೊಂದಿರುತ್ತಾಳೆ. ಮುಂದೆ ಯಾವುದೇ ತೊಂದರೆ ಬಂದಾಗ ತನ್ನ ಕುಟುಂಬದ ಜವಾಬ್ದಾರಿ ಹೊರಬಲ್ಲ ಸಾಮರ್ಥ್ಯ ಹೊಂದಿರುತ್ತಾಳೆ.

೨. ಹೆಣ್ಣು ಭ್ರೂಣ ಹತ್ಯೆ-
ಹೆಣ್ಣು ಭ್ರೂಣ ಹತ್ಯೆಗೆ ನಮ್ಮ ಪುರುಷ ಪ್ರಧಾನ ಸಮಾಜ ಮತ್ತು ಮೂಢತನ ಕಾರಣ. ಮಗ ದೊಡ್ಡವನಾಗಿ ನಮ್ಮನ್ನು ನೋಡಿಕೊಳ್ಳುತ್ತಾನೆ, ಮಗಳು ಹೇಗಿದ್ದರೂ ಮದುವೆಯಾಗಿ ಬೇರೆ ಮನೆಗೆ ಹೋಗುವವಳು, ಅವಳ ಮೇಲೆ ಮಾಡುವ ಖರ್ಚು ವ್ಯರ್ಥ ಎಂಬ ಭಾವನೆ ಹಲವು ತಂದೆ-ತಾಯಿಯರಲ್ಲಿ ಇದೆ. ಗಂಡುಮಕ್ಕಳಿಲ್ಲದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳೇ ತಂದೆ-ತಾಯಿಯರನ್ನು ನೋಡಿಕೊಳ್ಳುತ್ತಾಳೆ. ಇಂತಹ ನಿದರ್ಶನಗಳು ಹಲವಾರು ಇವೆ. ಹೆಣ್ಣು ಮಗು ಜನಿಸಿದಾಗ ಬೇಸರಿಸುವ ತಂದೆ-ತಾಯಂದಿರು ಈಗಲೂ ಇದ್ದಾರೆ. ಬಡಕುಟುಂಬಗಳಲ್ಲಿ ಇಂತಹ ಯೋಚನೆಗಳೇ ದೊಡ್ದದಾಗಿ ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗುತ್ತವೆ.  ಮಗ -ಮಗಳು ಸಮಾನ ಎಂದು ತಿಳಿಯಬೇಕು. ಈ ರೀತಿಯ ಅರಿವು ಸಮಾಜದಲ್ಲಿ ಮೂಡುವುದು ಅತೀ ಮುಖ್ಯವಾಗಿದೆ.

೩. ಸ್ತ್ರೀ ಶಕ್ತಿ ದೇವತೆ-
ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಗೆ ಪೂಜ್ಯ ಸ್ಥಾನವಿದೆ. ತಾಯಿಯನ್ನು ದೇವರಾಗಿ, ಹೆಂಡತಿಯನ್ನು ಮನದೊಡತಿಯಾಗಿ, ಪರ ಸ್ತ್ರೀಯನ್ನು ಗೌರವದಿಂದ ನೋಡುವುದು ನಮ್ಮ ಸಂಸ್ಕೃತಿ. ಆದರೆ, ನಮ್ಮ ಸಮಾಜ  ಒಂದು ಕಡೆ  ಹೆಣ್ಣನ್ನು ತಾಯಿಯ ಸ್ಥಾನದಲ್ಲಿ ವೈಭವೀಕರಿಸುತ್ತ ,ಬೇರೆ ಹೆಣ್ಣನ್ನು ಬೇರೆ ದೃಷ್ಟಿಯಿಂದ ನೋಡುತ್ತದೆ. ಹೆಣ್ಣನ್ನು ಗೌರವಿಸುವ ಸಂಸ್ಕೃತಿ ಮನೆಯಲ್ಲೇ ಆರಂಭವಾಗಬೇಕು. ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರನ್ನೂ ಸಮಾನವಾಗಿ ಬೆಳೆಸುವುದು ಮುಖ್ಯ.

೪. ಜಾಹಿರಾತುಗಳು-
ಜಾಹಿರಾತುಗಳಲ್ಲಿ ಹೆಣ್ಣನ್ನು ಅತಿಯಾಗಿ ಶೋಷಿಸಲಾಗುತ್ತಿದೆ. ನೀವು ಹೀಗಿದ್ದರೆ ಮಾತ್ರ ಸೂಪರ್ ಅಮ್ಮ ಆಗುತ್ತೀರಿ , ಬಿಳಿ ಬಣ್ಣವೇ ಸುಂದರ , ನಿಮ್ಮ ತೂಕ ಇಷ್ಟೇ ಇರಬೇಕು -ಇಂತಹ ತಪ್ಪು ಸಂದೇಶ ಸಾರುವ ಜಾಹೀರಾತುಗಳಿಗೆ ಕಡಿವಾಣ ಹಾಕಲೇಬೇಕು. ಗಂಡಸರು ಬಳಸುವ ಸಾಮಾನುಗಳಲ್ಲಿ ಹೆಂಗಸರನ್ನು ಅನಾವಶ್ಯಕ ಅಶ್ಲೀಲವಾಗಿ ತೋರಿಸುವುದು,ಗಂಡಸನ್ನು ಸೆಳೆಯುವುದೇ ಹೆಂಗಸರ ಮುಖ್ಯ ಉದ್ದೇಶ ಅನ್ನುವಂತೆ ಬಿಂಬಿಸುವುದು …ಇವುಗಳೆಲ್ಲಾ ಯುವ ಮನಸ್ಸುಗಳನ್ನು ಪ್ರಚೋದಿಸುತ್ತವೆ.

೫. ಸಿನೆಮಾಗಳಲ್ಲಿ ಸ್ತ್ರೀ-
ಸಿನೆಮಾಗಳಲ್ಲಿ ಸ್ತ್ರೀಯನ್ನು ಅತಿಯಾಗಿ ವೈಭವೀಕರಿಸಲಾಗುತ್ತದೆ. ತಾಯಿಯನ್ನು ಅತಿಯಾಗಿ ಗೌರವಿಸುವ ಹೀರೋ ತುಂಡು ಉಡುಗೆಯ ನಾಯಕಿಯೊಂದಿಗೆ ಡ್ಯಾನ್ಸ್ ಮಾಡುತ್ತಾನೆ. ಖಳನಾಯಕನಿಗೆ ಯಾವಾಗಲೂ ನಾಯಕಿಯ ಮೇಲೆ ಕೆಟ್ಟ ದೃಷ್ಟಿ. ಹೆಚ್ಚಿನ ಸಿನೆಮಾಗಳಲ್ಲಿ ಇದೇ ಕತೆ. ಯಾವ ಒಳ್ಳೆಯ ಸಂದೇಶವೂ ಇರೋದಿಲ್ಲ. ಅದರ ಜೊತೆ ಸಿನೆಮಾ ಹೆಚ್ಚು ದಿನ ನಡೆಯೋದಕ್ಕೆ ಬೇಡದ ಅಶ್ಲೀಲ ನೃತ್ಯಗಳನ್ನು ಸೇರಿಸಿ ಅದರ ಪೋಸ್ಟರ್ ಗಳನ್ನು ಬೀದಿ ಬೀದಿ ಹಾಕಿರುತ್ತಾರೆ. ಅತ್ಯಾಚಾರದ ದೃಶ್ಯ, ಲೈಂಗಿಕ ಕಿರುಕುಳ ,ಐಟಮ್ ಸಾಂಗ್ ಇಂತಹವುಗಳನ್ನು ಸಿನೆಮಾಗಳಲ್ಲಿ ನಿಷೇಧಿಸಬೇಕು.

೬. ಮಹಿಳಾ ಸಂಘಟನೆಗಳು-
ಮಹಿಳಾ ಸಂಘಟನೆಗಳ ಬಗ್ಗೆ ಅನೇಕರಿಗೆ ಒಳ್ಳೆಯ ಅಭಿಪ್ರಾಯಗಳಿರುವುದಿಲ್ಲ. ಇವರು ಪುರುಷ ವಿರೋಧಿಗಳು ಅನ್ನೋ ಭಾವನೆ ಹಲವರಲ್ಲಿದೆ. ಇದು ತಪ್ಪು ಕಲ್ಪನೆ. ಮಹಿಳೆಯರು ಒಟ್ಟು ಸೇರಿ ಹೋರಾಡುವಂತಹ  ಪರಿಸ್ಥಿತಿ ನಾವೇ ಉಂಟು ಮಾಡಿದ್ದೇವೆ ಅನ್ನೋದನ್ನು ಮರೆಯುವಂತಿಲ್ಲ. ಈ ಸಂಘಟನೆಗಳ ಮುಖ್ಯ ಉದ್ದೇಶ ಅಂದರೆ -ಯಾವುದೇ ಸ್ತ್ರೀಗೆ ಅನ್ಯಾಯವಾದಾಗ ಅವಳಿಗೆ ಬೆಂಬಲವಾಗಿ ನಿಲ್ಲುವುದು ಮತ್ತು ಅವಳಿಗೆ ನ್ಯಾಯ ಒದಗಿಸುವುದು. ಇವರ ಕಳಕಳಿ,ಕಾರ್ಯ ಚಟುವಟಿಕೆಗಳಿಗೆ ಸರಕಾರವೂ ಪ್ರೋತ್ಸಾಹ ನೀಡಿ ಅಗತ್ಯವಾದಲ್ಲಿ ತಾನೂ ಕೂಡಾ ಸಕ್ರಿಯವಾಗಿ ಭಾಗವಹಿಸಬೇಕು.

೭. ಸ್ವೇಚ್ಛಾಚಾರ –
ಆಧುನಿಕತೆ ಮಹಿಳೆಯರ ಜೀವನದ ಮೇಲೆ ಕೆಟ್ಟ ರೀತಿಯಲ್ಲೂ ಪ್ರಭಾವ ಬೀರಿದೆ. ಪುರುಷನಿಗೆ ನಾನು ಏನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಪುರುಷರಂತೆ ಮದ್ಯಪಾನ,ಸಿಗರೇಟು ಸೇದುವುದು, ಸ್ವೇಚ್ಛಾಚಾರಕ್ಕೆ ಇಳಿಯುವ ತಪ್ಪು ಕೆಲವು ಸ್ತ್ರೀಯರಿಂದಾಗುತ್ತಿದೆ. ಇದು ಸ್ತ್ರೀಯನ್ನು ಮಾನಸಿಕವಾಗಿ ದುರ್ಬಲಳನ್ನಾಗಿಸುವುದಲ್ಲದೆ ಆಕೆಯ ಅರೋಗ್ಯಕ್ಕೂ ಹಾನಿಕರ.ಈ ರೀತಿ ಇರುವುದೇ ಸ್ತ್ರೀ ಸ್ವಾತಂತ್ರ್ಯ ಎಂಬ ಭ್ರಮೆಯಿಂದ ಸ್ತ್ರೀಯರು ಹೊರಬರಬೇಕು. ಸ್ತ್ರೀ ಸ್ವಾತಂತ್ರ್ಯವೆಂದರೆ ಸ್ತ್ರೀಗೆ ಪುರುಷ ನೀಡುವ ಗೌರವ, ಪ್ರೀತಿ. ಆಕೆಯ ವ್ಯಕ್ತಿತ್ವವನ್ನು ಗೌರವಿಸುವುದು. ಪುರುಷ ಕೂಡಾ ಸ್ತ್ರೀಯ ಬಾಹ್ಯ ಸೌಂದರ್ಯಕ್ಕೆ
ಅತಿಯಾಗಿ ಮಹತ್ವ ಕೊಡದೆ ಆಕೆಯ ವ್ಯಕ್ತಿತ್ವವನ್ನು ಆದರಿಸಬೇಕು.

೮. ಸ್ವ ರಕ್ಷಣೆ-
ಯಾವುದೇ ಸಮಾಜವನ್ನು ಏಕಾಏಕಿ ಬದಲಾಯಿಸಲು ಸಾಧ್ಯವಿಲ್ಲ. ಸ್ತ್ರೀ ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳುವ ಬಗ್ಗೆ ಅರಿವು ಹೊಂದಿರಬೇಕು. ಆಪಾಯದ ಸನ್ನಿವೇಶಗಳನ್ನು ನಿಭಾಯಿಸಲು ಮಾನಸಿಕವಾಗಿ ಸಿದ್ಧರಾಗಿರಬೇಕು. ಆಪ್ತರ ಫೋನ್ ನಂಬರ್ ಯಾವಾಗಲೂ ಜೊತೆಗಿರಲಿ. ಬೇರೆಯವರ ಸಹಾಯ ಪಡೆಯುವ ಸಂದರ್ಭ ಬಂದಾಗ ನಾಚಿಕೆ ಬೇಡ. ಕಾನೂನು ಮತ್ತು ಪೋಲೀಸರು ಕೂಡಾ ಈ ನಿಟ್ಟಿನಲ್ಲಿ ಸಹಕರಿಸಬೇಕು.

೯. ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಹಿಳೆ-
 ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಬೇಡ. ಜಾಗತೀಕರಣದ ಫಲವಾಗಿ ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುವುದು ಈಗ ಫ್ಯಾಶನ್ ಆಗಿದೆ. ಲಿವ್ ಇನ್ ರಿಲೇಶನ್ ಶಿಪ್ ನಮ್ಮ ದೇಶದ ಯುವಕ-ಯುವತಿಯರಲ್ಲಿ ಹೆಚ್ಚುತ್ತಿದೆ. ಇದು ಮೇಲ್ನೋಟಕ್ಕೆ ಸ್ತ್ರೀ ಪರ ಅನಿಸಿದರೂ ಇಲ್ಲಿ ಹೆಚ್ಚು ಶೋಷಣೆಗೆ ಒಳಗಾಗುವವಳು ಮಹಿಳೆಯೇ. ಇದನ್ನು ತಂದೆ -ತಾಯಿ ಕೂಡಾ ಪ್ರೋತ್ಸಾಹಿಸಬಾರದು. ಕುಟುಂಬ ವ್ಯವಸ್ಥೆ ನೀಡುವ ಭದ್ರತೆ, ಪ್ರೀತಿ ವಿಶ್ವಾಸಗಳನ್ನು ಇಂತಹ ಸಂಬಂಧಗಳು ಕೊಡಲಾರವು.

೧೦. ಕಾನೂನು-
ಸ್ತ್ರೀ ಪರ ಕಾನೂನುಗಳು ಸ್ತ್ರೀಯರಿಗೆ ರಕ್ಷಣೆಯ ಜೊತೆಗೆ ನೊಂದ ಸ್ತ್ರೀಯರಿಗೆ ನ್ಯಾಯವನ್ನು ಒದಗಿಸುವುದರಲ್ಲಿ ಸಹಾಯ ಮಾಡುತ್ತವೆ. ವಿಚ್ಛೇದನ ಕಾಯ್ದೆ, ಜೀವನಾಂಶ, ವರದಕ್ಷಿಣೆ ತಡೆಕಾಯ್ದೆ, ಆಸ್ತಿ ಸಮಪಾಲು, ಬಾಲ್ಯ ವಿವಾಹ ತಡೆಕಾಯ್ದೆ-ಹೀಗೆ ಮಹಿಳೆಯರ ಪರ ಕಾನೂನುಗಳು ಮಹಿಳೆಯರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಶೀಘ್ರ ನ್ಯಾಯ ಸಿಗದಿರುವುದೇ ದೊಡ್ದ ಸಮಸ್ಯೆಯಾಗಿದೆ. ನ್ಯಾಯ ಸಿಗೋದರಲ್ಲಿ ಆಗುವ ಅತಿಯಾದ ವಿಳಂಬದಿಂದ ಬೇರೆ ರೀತಿಯ ತೊಂದರೆಗಳಾಗುತ್ತವೆ.ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ನೈತಿಕ ಬೆಂಬಲ ಯಾರಿಂದಲೂ ಸಿಗುವುದಿಲ್ಲ. ಕಾನೂನು ಪ್ರಕ್ರಿಯೆಯನ್ನು ಶೀಘ್ರಗೊಳಿಸಬೇಕು.

*******

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮಹಿಳಾ ದಿನ’ ಅರ್ಥ ಕಳೆದುಕೊಳ್ಳುತ್ತಿರುವಾಗ: ವೀಣಾ ಅನಂತ್

    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಮಹೇಶ್ ಅವರೆ….

  1. ವೀಣ,
    ನಿಮ್ಮ ಲೇಖನ ಇಷ್ಟವಾಯ್ತು :)…. ಬಹಳ ಸುವಿವರವಾಗಿ ಬರೆದಿದ್ದೀರಿ……
     

Leave a Reply

Your email address will not be published. Required fields are marked *