ಮಹತ್ವ ಕಳೆದುಕೊಳ್ಳುತ್ತಿರುವ ಮಹಾತ್ಮರ ಜಯಂತಿಗಳು:  ಕೆ ಟಿ ಸೋಮಶೇಖರ ಹೊಳಲ್ಕೆರೆ.

somashekar-k-t

ರಾಮನ ಆದರ್ಶ, ಹನುಮನ ಸೇವಾನಿಷ್ಟೆ, ಮಹಾವೀರನ ಅಹಿಂಸೆ, ಪ್ರಾಣಿದಯೆ, ಅಂಬೇಡ್ಕರವರ ಸ್ವಾಭಿಮಾನ, ಯೋಗ್ಯವಾದುದಕ್ಕಾಗಿ ಅಸದೃಶ ಹೋರಾಟ, ಅಕ್ಕನ ಸ್ವಾತಂತ್ರ್ಯಕ್ಕಾಗಿ ಅರಸೊತ್ತಿಗೆಯನ್ನು ದಿಕ್ಕರಿಸಿದ ದಿಟ್ಟತನ … ಆನುಭಾವ,  ಸ್ವಾಭಿಮಾನ, ಗಾಂಧೀಜಿಯ ಸತ್ಯ –  ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ? 

ಮಹಾತ್ಮರು ಯಾರು? ಎಂಬ ಪ್ರಶ್ನೆಯನ್ನು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಚರ್ಚಿಸತೊಡಗಿದಾಗ ಸಂಕೀರ್ಣ ಅನ್ನಿಸುತ್ತದೆ! ಚರ್ಚೆ ಕೊನೆಗೊಳ್ಳದಂತಾಗುತ್ತದೆ! ಒಂದು ಮಾತಿನಲ್ಲಿ ಹೇಳಬೇಕೆಂದರೆ  ಯಾರ ಜೀವನ ಉತ್ತಮ, ಮಾನವೀಯ ಸಮಾಜ ಸೃಷ್ಟಿಗೆ ಕಾರಣವಾಗುತ್ತದೋ ಅವರೇ ಮಹಾತ್ಮರು. ಎಂದು ಹೇಳ ಬೇಕಾಗುತ್ತದೆ.

"  ಕರ್ಮಣ್ಯೇಕಂ ಮನಸ್ಯೇಕಂ ವಚನ್ಯೇಕಂ ಮಹಾತ್ಮನಾಂ! "

ನಡವಳಿಕೆಯಲ್ಲೂ, ಮಾತಿನಲ್ಲೂ, ಮನಸ್ಸಿನ ಭಾವ ಉದ್ದೇಶಗಳಲ್ಲೂ ಒಂದೇ ವಿಧವಾಗಿರುವ ಧೀರನನ್ನು ಮಹಾತ್ಮರೆನ್ನುತ್ತಾರೆ. ಎಂದು ಮಹಾಭಾರತದಲ್ಲಿ ಹೇಳಿದೆ.

ದಾರ್ಶನಿಕರಿಗೆ, ಮಹಾತ್ಮರಿಗೆ ಗೌರವ ಸಮರ್ಪಿಸಲು ಅವರಿಗೆ ಕೃತಜ್ಞರಾಗಿರಲು ಅವರ ಜಯಂತಿಗಳನ್ನು ಆಚರಿಸುವುದು ಬಹಳ ಹಿಂದಿನಿಂದ ರೂಢಿಯಲ್ಲಿದೆ . ಅಂದು ಎಲ್ಲೆಡೆ ಪ್ರಮುಖರಾದವರು ಆ ಮಹಾತ್ಮರ ಮೌಲ್ಯಯುತವಾದ, ಆದರ್ಶವಾದ, ಗೌರವಯುತವಾದ ಬದುಕ, ಅವರ ಅಮೂಲ್ಯ ಸಾಧನೆಯ, ಉದಾತ್ತ ನಡವಳಿಕೆಗಳ ಅನಾವರಣಗೊಳಿಸುತ್ತಾರೆ. ಇದು ಮಕ್ಕಳಾದಿ ಎಲ್ಲರೂ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು, ಉತ್ತಮ ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು, ದೇಶ ಪ್ರೇಮ ಹೆಚ್ಚಿಸಿಕೊಂಡು ದೇಶ ಅಭಿವೃದ್ದಿಯಾಗಲು ಪ್ರೇರಣೆಯಾಗುವುದರಿಂದ ಮಹಾತ್ಮರ ಜಯಂತಿ ಆಚರಣೆಗಳು ಅರ್ಥಪೂರ್ಣವಾಗುತ್ತವೆ!

ಇಂದು ಭ್ರಷ್ಟರು, ದುಷ್ಟರು, ಅನೀತಿವಂತರು ಹೆಚ್ಚಿ , ಪ್ರಮುಖರೆಲ್ಲಾ ಭ್ರಷ್ಟ ವ್ಯವಸ್ಥೆಯಲ್ಲಿ ಮುಳುಗಿ, ಅಧಿಕಾರ, ಹಣದ ಲಾಲಸಿಗಳಾಗಿ, ಭ್ರಷ್ಟರ ಕೈಯಲ್ಲೇ ಇತ್ತೀಚಿನ ಆಡಳಿತ ವ್ಯವಸ್ಥೆಗಳು ಇರುವಂತಾಗಿ ಸಮಾಜ ಅಧೋಗತಿಗೆ ಹೋಗುತ್ತಿದೆ. ಯಥಾ ರಾಜಾ ತಥಾ ಪ್ರಜಾ. ಆದ್ದರಿಂದ ಅಡ್ಡ ದಾರಿಗಳನ್ನು, ದುರ್ಮಾರ್ಗಗಳನ್ನು  ರಾಜಮಾರ್ಗಗಳೆಂದು ಪ್ರಜೆಗಳೆಲ್ಲಾ ಹಿಡಿಯುವಂತಾಗಿದೆ! ಯಾರ ಜಯಂತಿ ಆಚರಣೆಗಳು ಇವರ ಮೇಲೆ ಪ್ರಭಾವ ಬೀರದಿರುವುದರಿಂದ ಅವರು ಭ್ರಷ್ಟರು, ದುಷ್ಟರು ಆಗೇ ಇರುವುದರಿಂದ ಮಹಾತ್ಮರ ಜಯಂತಿಗಳು ಅರ್ಥ ಕಳೆದುಕೊಳ್ಳುವಂತಾಗಿ  ಅನಾವಶ್ಯಕವೆನ್ನುವಂತಾಗಿರುವುದು ದುರದೃಷ್ಟಕರ !

ಮಹಾತ್ಮರ ಜಯಂತಿಗಳ ಆಚರಿಸುವ ಸಭೆಗಳಲ್ಲಿ ಅಧ್ಯಕ್ಷ ಮುಖ್ಯ ಅತಿಥಿ ಭಾಷಣಕಾರರಾಧಿಯಾಗಿ ಭ್ರಷ್ಟರಿಂದಲೇ ತುಂಬಿ ಹೋಗಿರುತ್ತದೆ. ಇವರು ಮಹಾತ್ಮರ ಬದುಕ ಅನಾವರಣಗೊಳಿಸಲು ಹೋಗುವಂತಹದ್ದು " ಭೂತದ ಬಾಯಿಯಿಂದ ಭಗವದ್ಗೀತೆ ಹೊರ ಬಂದಂತಾಗುತ್ತದೆ " ಇದನ್ನರಿತ ನೀತಿವಂತರು, ಪ್ರಾಮಾಣಿಕರು, ಆದರ್ಶ ವ್ಯಕ್ತಿಗಳು ಇಂತಹ ಸಭೆಗಳನ್ನು ಬಹಿಷ್ಕರಿಸುವುದು ಸಾಮಾನ್ಯವಾಗಿದೆ! ಈ ಭ್ರಷ್ಟರು, ದುಷ್ಟರು … ಮಹಾತ್ಮರ ಕೊಂಡಾಡಿ,  ಅವರ ಆದರ್ಶ ಬದುಕನ್ನು ನೀವೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮಹಾತ್ಮರಂತೆ ಜನತೆಗೆ ಕರೆಕೊಡುತ್ತಾರೆ! ಅವರ ಮಾತು ಮಾತಿಗೆ ಚಪ್ಪಾಳೆ, ಗೌರವ, ಸನ್ಮಾನಗಳಾಗುತ್ತವೆ. ನಾವು ಅವರ ಆದರ್ಶ ಪಾಲಿಸುವವರಲ್ಲ! ನಾವು ಬೋಧಿಸುವವರು. ನೀವು ಪಾಲಿಸಬೇಕಾದವರು.   ್ ಎಂಬ ದೋರಣೆ ಅವರಲ್ಲಿ ಕಾಣುತ್ತೇವೆ. ಹಾಗೂ ವೇದಿಕೆಗಳನ್ನು ಭ್ರಷ್ಟ,  ದುಷ್ಟ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ!  ಭ್ರಹ್ಮಾಂಡ ಭ್ರಷ್ಟರ ಈ ಸಭೆ ' ಭ್ರಷ್ಟರು, ದುಷ್ಟರು, ಅನೀತಿವಂತರು … ಆದರೆ ಇಂಥಾ ಸಭೆಗಳಲ್ಲಿ ಅಧ್ಯಕ್ಷರು, ಮುಖ್ಯ ಅತಿಥಿಗಳು ಆಗುವ ಗೌರವ ದೊರೆಯುತ್ತದೆ. ಅವರ ಪ್ರತಿ ಮಾತಿಗೂ ಬೆಲೆ ಬರುತ್ತದೆ. ಐಎಎಸ್ ಅಧಿಕಾರಿಗಳಾದಿಯಾಗಿ ಪ್ರಮುಖರೆಲ್ಲಾ ಗೌರವ ಕೊಡುವಂತಾಗುತ್ತದೆ. ಆದ್ದರಿಂದ ಎಲ್ಲರೂ ಅವರಂತೆ ಭ್ರಷ್ಟರೂ, ದುಷ್ಟರೂ … ಆಗಬೇಕು' ಎಂಬ ಸಂದೇಶ ಕೊಡುತ್ತದೆ! ಬೇಟೆಗಾರ ಮುನಿಯಾಗಿ ಬದಲಾದ ಎಂಬ ಇವರ ನಡೆ ನುಡಿಗಳು, ಮುನಿಯನ್ನು ಬೇಟೆಗಾರನಾಗಿ ಬದಲಾಗುವಂತೆ ಮಾಡುವ ಸಂದೇಶ ಕೊಡುತ್ತವೆ! ' ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ ' ಎಂಬಂತಿರುತ್ತವೆ ಅವರ ನಡೆ ನುಡಿ! ಅವುಗಳಿಗೆ ಬೆಲೆ ಬರುತ್ತಿರುವುದರಿಂದ ಜನ ಅವರಂತಾಗಲು ಪ್ರಯತ್ನಿಸುವುದರಿಂದ ಕೆಟ್ಟ, ದುಷ್ಟ, ಭ್ರಷ್ಟ ಸಮಾಜ ಸೃಷ್ಟಿಯಾಗುವಂತಾಗಿದೆ! ಹೀಗೆ ಮಹಾತ್ಮರ ಜಯಂತಿ ಆಚರಣೆಗಳು ಇಂದು ಅರ್ಥ ಕಳೆದುಕೊಂಡು ಕೆಟ್ಟ ಸಂದೇಶ ಕೊಡುವಂತಾಗಿವೆ!

ಮಹಾತ್ಮರು ಜಾತಿ, ಧರ್ಮ, ಸಮಾಜ, ಭಾಷೆ, ದೇಶ … ಗಡಿಗಳ ಮೀರಿ ವ್ಯಕ್ತಿತ್ವ ಬೆಳೆಯಿಸಿಕೊಂಡುದರಿಂದ, ವಿಶಾಲ ಹೃದಯ, ಉದಾರ ಮಾನವೀಯ ನಿಲುವುಗಳ ಹೊಂದಿರುವುದರಿಂದ  ' ಮಹಾತ್ಮ ' ರಾಗಿರುತ್ತಾರೆ. ಆದರೆ ಇಂದು ಅನೇಕ ಕಾರಣಗಳಿಗಾಗಿ ಅವರನ್ನು ಒಂದು ಜಾತಿ, ಒಂದು ಧರ್ಮ, ಒಂದು ಸಮಾಜ, ಒಂದು ಭಾಷೆ, ಒಂದು ದೇಶಕ್ಕೆ ಸೀಮಿತಗೊಳಿಸಿ ಈ ಯಾವ ಎಲ್ಲೆಯನ್ನೂ ಮೀರದಂತೆ ಒಂದು ಚೌಕಟ್ಟಿನಲ್ಲಿ ಬಂಧಿಸಿರುವುದು ' ಮಹಾತ್ಮ ' ಪದದ ಅರ್ಥಕ್ಕೆ, ಮಹಾತ್ಮನಿಗೆ ಅವಮಾನವಲ್ಲವೆ? ಹೀಗೆ ಸೀಮಿತಗೊಳಿಸಿ ಮಹಾತ್ಮರ ಜಯಂತಿಗಳ ಆಚರಿಸುವುದು ಅವು ಅರ್ಥ ಕಳೆದುಕೊಂಡು ಸಂಕುಚಿತಾರ್ಥ ಬರಲು ಕಾರಣವಾಗುತ್ತಿವೆ! ಹಾಗೂ ಮಹಾತ್ಮರ ತತ್ವಗಳ ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಸಮಾಜ ಸೃಷ್ಟಿಗೆ ಕಾರಣವಾಗದೆ ಯಾವುದೋ ಒಂದು ಜಾತಿ, ಒಂದು ಧರ್ಮ, ಒಂದು ಸಮಾಜದ ಬಲ ಪ್ರದರ್ಶಿಸಲು ಈ ಮಹಾತ್ಮರ ಜಯಂತಿಗಳನ್ನು ಆಚರಿಸುವಂತಾಗಿ ಅರ್ಥ ಕಳೆದುಕೊಳ್ಳುವಂತಾಗಿವೆ!

ಕೆಲವು ಜಾತಿ, ಸಮಾಜ … ಗಳಲ್ಲಿ  ' ಮಹಾತ್ಮ ' ಅಂತಹ ವ್ಯಕ್ತಿ ಇರಲಿಕ್ಕಿಲ್ಲ. ಇರಬೇಕೆಂದೇನೂ ಇಲ್ಲವಲ್ಲ! ಆದರೂ ಆ ಜಾತಿ, ಸಮಾಜಕ್ಕೆ ' ಮಹಾತ್ಮ ' ನ ಗುಣಗಳಿಲ್ಲದವನನ್ನು  ' ಮಹಾತ್ಮ ' ಎಂದು ಘೋಷಿಸಿ, ಮಹಾತ್ಮರ ಸಾಲಿನಲ್ಲಿ ಮಹಾತ್ಮನಲ್ಲದವನಿಗೆ ಮಹಾತ್ಮನ ಸ್ಥಾನ ಮಾನ ಕಲ್ಪಿಸಿರುವುದು ಆ ಮಹಾತ್ಮರಿಗೆಲ್ಲಾ ಅವಮಾನ ಮಾಡಿದಂತಾಗಲಿಲ್ಲವೆ? ಇಂಥಾ ವಿವಾದಕ್ಕೆ ಮಹಾತ್ಮ ಒಳಗಾಗಬಾರದು. ಎಲ್ಲರಲ್ಲೂ ಮಹಾತ್ಮನ ಬಗ್ಗೆ ಪೂಜ್ಯ ಭಾವನೆ ಬರುವಂತಿರಬೇಕು. ಎಲ್ಲರೂ ಅವರ ತತ್ವಾದರ್ಶಗಳ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಆಗ ಅವರ ಜಯಂತಿಗಳು ಅರ್ಥಪೂರ್ಣವಾಗುತ್ತವೆ!

ಈಗ ಇರುವ ಹಬ್ಬ ಹರಿದಿನ, ಜಯಂತಿಗಳ ಆಚರಣೆಗಳು ಮಿತಿಮೀರಿ ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿವೆ! ಇಂದು ಯಾರೂ ಭಕ್ತಿ, ಶ್ರದ್ಧೆ, ಪೂಜ್ಯ ಭಾವನೆಗಳಿಂದ ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಿಲ್ಲ! ಅಂದಮೇಲೆ ಅವರ ತತ್ವಾದರ್ಶ ಆಲಿಸುವುದು, ಪಾಲಿಸುವುದು, ಜೀವನದಲ್ಲಿ ಅಳವಡಿಸಿಕೊಳ್ಳುವುದು ಕನಸಿನ ಮಾತು! ಬಹುತೇಕ ರಾಜಕೀಯದವರು ಸ್ವಾರ್ಥಕ್ಕಾಗಿ ಆಚರಿಸಿದರೆ, ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖರೆನ್ನಿಸಿಕೊಂಡವರು ಕೀರ್ತಿಗಾಗಿ, ಜನಪ್ರಿಯತೆಗಾಗಿ ಆಚರಿಸಿದರೆ, ಸರ್ಕಾರಿ ನೌಕರರು ಕಾನೂನಿಗೆ ಹೆದರಿ ಆಚರಿಸಿದರೆ! ಕೆಲವು ಕೋಮು, ಸಮಾಜ, ಜಾತಿಯವರು ತಮ್ಮ ಬಲ ಪ್ರದರ್ಶಿಸಲು ಆಚರಿಸಿದರೆ, ಉಳಿದವರು ಅವರು ಆಚರಿಸುತ್ತಾರೆ ನಾವೂ ಆಚರಿಸಬೇಕು ಅಂತ ಆಚರಿಸುವಂತಾಗಿ, ಅಥವಾ ಸರಕಾರ ಇದಕ್ಕೆ ಅನುದಾನ ಕೊಡುತ್ತದೆ ಅದನ್ನು ಪಡೆಯುವ ಸಲುವಾಗಿ ಆಚರಿಸುವಂತಾಗಿ ಮಹಾತ್ಮರ ಜಯಂತಿ ಆಚರಣೆಗಳು ಅರ್ಥ ಕಳೆದುಕೊಳ್ಳುವಂತಾಗಿವೆ! ಹೀಗಿರುವಾಗ ಹೊಸ ಹೊಸ ಜಯಂತಿಗಳ ಆಚರಣೆಗೆ ತರುವುದರಲ್ಲಿ ಅರ್ಥವಿದೆಯೇ? ಇಂದು ಜಯಂತಿ ಆಚರಣೆಗಳ ಉದ್ಧೇಶ, ಅರ್ಥ ಯಾರಿಗೂ ಬೇಕಿಲ್ಲ! ಬೌತಿಕ ಆಚರಣೆ ಎಲ್ಲರಿಗೂ ಬೇಕಿದೆ! ಇದರಿಂದ ಉತ್ತಮ ಸಮಾಜದ ನಿರ್ಮಾಣ ಕನಸಾಗಿದೆ!

ಒಮ್ಮೊಮ್ಮೆ ಕೆಲವು ಜಯಂತಿ ಆಚರಣೆಗಳು ಕೋಮು ಸೌಹಾರ್ಧಕ್ಕೆ ಭಂಗ ಉಂಟುಮಾಡಿ ಹಿಂಸೆ, ಕೊಲೆ, ಸಾಮಾಜಿಕ ಪ್ರಕ್ಷುಬ್ದತೆ ಪ್ರತಿಫಲವಾಗಿ ಸರ್ಕಾರಕ್ಕೆ ಸಮಾಜದ ನೆಮ್ಮಧಿ ಕಾಪಾಡುವುದು ಸವಾಲಾಗಿಬಿಡುತ್ತದೆ. ಹೀಗೆ ಅನಾಹುತಕ್ಕೆ ಎಡೆಮಾಡಿಕೊಟ್ಟು ಅನರ್ಥವಾಗುತ್ತಿವೆ!

ಮಹಾತ್ಮರ ಜಯಂತಿ ಆಚರಿಸುವುದೆಂದರೆ ಅವರ ಜೀವನದ ತತ್ವಾದರ್ಶಗಳ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದು! ಆದರೆ ಇಂದು ಎಲ್ಲರೂ " ಬರುಸಟೆಗನ ಭಕ್ತಿ ದಿಟವೆಂದು ನಚ್ಚಲು ಬೇಡ ….. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟ ನೆಗೆದಂತಾಗಿತ್ತು ಕಾಣಾ ರಾಮ ನಾಥ! ಎಂಬಂತಾಗಿ ಮಹಾತ್ಮರ ಜಯಂತಿ ಆಚರಣೆಗಳು ಅರ್ಥ ಕಳೆದುಕೊಳ್ಳುತ್ತಿವೆ! ಅಂದರೆ ಭ್ರಷ್ಟರು ಪ್ರಾಮಾಣಿಕನಂತೆ ಕಾಣುವುದು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಲು ಹಾಕಿದ ವೇಷ! ಅದನ್ನು ನಂಬಬಾರದು. ಇಂದು ಮಹಾತ್ಮರ ತತ್ವಾದರ್ಶಗಳ ಪಾಲಿಸದೆ ಭೌತಿಕ ಆಚರಣೆಗಳು ವಿಜೃಂಭಿಸುವಂತಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವಂತಾಗಿರುವುದು ಖೇದಕರ! 

ಮಹಾತ್ಮರ ಜಯಂತಿ ಆಚರಣೆಗಳಿಗೆ ಸ್ವಲ್ಪವಾದರೂ  ಬೆಲೆ ಬರಬೇಕೆಂದರೆ, ಅವುಗಳ ಸದುಪಯೋಗವಾಗಬೇಕೆಂದರೆ ಅಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬಾರದು! ಬೌತಿಕ ಆಚರಣೆಗಳಿಗಿಂತ ಅವರ ತತ್ವ ಆದರ್ಶಗಳ ಅಳವಡಿಸಿಕೊಳ್ಳುವುದಕ್ಕೆ ಮಹತ್ವ  ಬರುವಂತಾಗಬೇಕು. ಆದರ್ಶ ವ್ಯಕ್ತಿಗಳನ್ನು ಅಂದು ಗೌರವಿಸುವಂತಾಗಿ, ನಿಜ ಜೀವನದಲ್ಲಿ ಅವರಿಗೆ ಗೌರವ ದೊರೆಯುವಂತಾಗಬೇಕು, ಅವರ ಮಾತಿಗೆ ಬೆಲೆ ಬರುವಂತಾಗಬೇಕು,  ಯಾರು ಜೀವನದಲ್ಲಿ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಂಡಿದ್ದಾರೋ ಅವರಿಂದ ಮಾತ್ರ ಉಪನ್ಯಾಸಗಳು ನಡೆಯಬೇಕು! ಕನಿಷ್ಟ ಎರಡು ಗಂಟೆ ಅವಧಿಯಲ್ಲಿ ಆಚರಣೆ ಮುಗಿಯುವಂತಾಗಬೇಕು! ಅಂದು ಪ್ರತಿ ದಿನಕ್ಕಿಂತಾ ಕನಿಷ್ಟ ಎರಡು ಗಂಟೆ ಹೆಚ್ಚು ದುಡಿಯುವಂತಾಗಬೇಕು. ಆ ದಿನದ ದುಡಿಮೆಯನ್ನು ವಿಕಲ ಚೇತನರಿಗೋ, ಹಣದ ಅವಶ್ಯಕತೆ ಇರುವವರಿಗೋ, ರೋಗಿಗಳಿಗೋ ವಿಕೋಪ ಪರಿಹಾರ ನಿಧಿಗಳಿಗೋ ಜಮಾ ಆಗುವಂತಾಗಬೇಕು. ಆಗ ಸ್ವಲ್ಪವಾದರೂ ಅರ್ಥಪೂರ್ಣವಾದೀತು!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x