ಫೆಬ್ರುವರಿ ತಿಂಗಳ ಒಂದು ಸಂಜೆ. ಇತ್ಲಾಗ ಬ್ಯಾಸಗಿನು ಅಲ್ಲ, ಅತ್ಲಾಗ ಚಳಿಗಾಲನು ಅಲ್ಲಾ ಅಂಥ ದಿನಗಳವು. ಒಂಥರಾ ನಸುಸೆಖೆ ಬರೆತ ತಂಪಿನ ವಾತಾವರಣ. ಹುಣ್ಣಿವಿ ಇತ್ತಂತ ಕಾಣಸ್ತದ ಸಂಜಿ ಸರಿಧಂಗ ಬೆಳದಿಂಗಳ ಹೂವು ಹಾಸಲಿಕತ್ತಿತ್ತು. ಊರ ಹೊರಗಿನ ಸುಡಗಾಡಿನ್ಯಾಗ ಒಂದ ನಮೂನಿ ಅತೃಪ್ತಭಾವದ ತಂಗಾಳಿಯೊಂದು ಮಂದವಾಗಿ ಬಿಸಲಿಕ್ಕೆ ಶೂರುವಾತು. ಮಸಣದೊಳಗ ಹರಡಿದ್ದ ತರಗೆಲಿಗೊಳು ಹವರಗ ಸರಿದಾಡಲಿಕತ್ವು. ಸೂಂಯ್ಯನ್ನೊ ಸುಳಿಗಾಳಿ ಮಲಗಿದ ಆತ್ಮಗಳನ್ನ ಎಬ್ಬಿಸೊ ಅಲಾರಾಂನಂಗ ಅನಿಸ್ತಿತ್ತು. ಅದಕ್ಕಾಗಿನ ಕಾಯ್ಲಿಕತ್ತಿತ್ತು ಅನ್ನೊಹಂಗ ಸುಡಗಾಡಿನ ನಡುವಿದ್ದ ಸಮಾಧಿಯಿಂದ ಒಂದು ಆಕೃತಿ ಆಕಳಿಸಿ ಎದ್ಧಂಗನಿಸಿ, ಸುತ್ತಲ ಜಾಲಿ ಮರದಾಗಿನ ಬಾವಲಿಗೊಳು ಎದ್ದು ಪರ ಪರ ರೆಕ್ಕಿಬಡದು ಸ್ವಾಗತ ಬಯಸಿಧಂಗ ಅನಿಸ್ಲಿಕತ್ತಿತ್ತು.
ಎಚ್ಚರಾದ ಆಕೃತಿ ತನ್ನಷ್ಟಕ್ಕ ತಾನ ಅಂದಕೊಳ್ಳಿಕತ್ತಿತ್ತು, “ ಪ್ರತಿ ವರ್ಷ ಈ ದಿನಕ್ಕ ಎಚ್ಚರಾಗ್ತದ ಅಂದ್ರ, ಇವತ್ತ ಆ ದಿನಾನ ಅದ. ಪ್ರತಿಸಲ ಚಿರನಿದ್ರೆಗೆ ಹೋಗಬೇಕಾದ್ರ ಈ ದಿನಕ್ಕಾಗಿ ಏಳುವ ಆಸೆ ಹೊತ್ತ ಮಲಗಿರತೇನಿ. ಏನೊ ಅತೃಪ್ತ ಅಸಮಾಧಾನ ಭಾವ. ಈ ಅಂತರ್ ಭಾವಕ್ಕ ಮುಕ್ತಿ ಯಾವಾಗ ಸಿಗ್ತದೊ ಏನೊ.” ಹಿಂಗ ಯೋಚಿಸ್ಲಿಕತ್ತಾಗ ಸುಡಗಾಡಿನ ಅಂಚಿಗೆ ಇದ್ದ ಗುಡಿಸಿಲಿನ್ಯಾಗಿಂದ ಕೂಸಿನ ಅಳೊ ಧ್ವನಿ ಕೇಳಿ ಆ ಆಕೃತಿ ತೇಲ್ಕೊತ ಕಿಡಕಿಯ ಹತ್ರ ಸುಳಿದಾಗ ಕಂಡದ್ದು, ಹಸುಗೂಸಿನ ಎತ್ಕೊಂಡು ಒಲಿಮುಂದ ಕೂತು ಅಡುಗೆ ಮಾಡಲಿಕತ್ತ ಒಬ್ಬ ಹೆಂಗಸು. ಅದನ್ನ ನೊಡಿ ಆಕೃತಿ ಮುಗಳ್ನಗಲಿಕತ್ತದ ಅನ್ನಿಸಿತು. ಹಿಂದ ಒಂದು ವಿಷಾದ ಭಾವ ಸುಳಿಧಂಗ ಅನಿಸಿತು.
“ ಒಂದು ವರ್ಷದಾಗ ಎಷ್ಟು ಬದಲಾಗೆದ, ಸುಡಗಾಡು ಕಾಯಾಂವಾ ಮದವಿ ಮಾಡ್ಕೊಂಡ ಒಂದ ಮಗುನು ಆಗೇದ” ಅನ್ಕೊಂಡ ಆ ಆಕೃತಿ ಭಾಳ ದಿವಸದಿಮದ ಜಡಗಟ್ಟಿದ ಭಾವಗಳನ್ನ ಸಡಿಲ ಮಾಡ್ಕೊಳ್ಳಿಕ್ಕೆ ಹಂಗ ಸುಡಗಾಡಿನ ತುಂಬೆಲ್ಲಾ ಮಂದವಾಗಿ ತೇಲಾಡಲಿಕತ್ತ ಆ ಮನಸಿನೊಳಗ ನೆನಪುಗಳ ಸುರಳಿ ಬಿಚ್ಚಿ ಹರಡಲಿಕತ್ತಿದ್ವು. ಪ್ರತಿಸಲ ತೀರದ ಆಸೆ ಹೊತ್ತು ಮಲಗುವುದು ಮತ್ತ ಅದೇ ದಾಹದಿಂದ ಎಳುವುದು. ಈ ಅತಂತ್ರತೆಯ ಹಿಂದಿನ ಪುಟಗಳು ಬಿಸುವ ಮಂದ ಗಾಳಿಗೆ ತನ್ನಷ್ಟಕ್ಕ ತಾನ ತಿರುವಿ ಹಾಕಲಿಕತ್ತುವು. “ ಎಂಥಾ ಮಧುರವಾದ ದಿನಗಳವು, ಆಕಿಯ ಕುಡಿನೋಟದ ಸನ್ನೆ, ಮುಗುಳ್ನಗೆಯ ಕಣ್ಣಾಮುಚ್ಚಾಲೆಯಾಟದೊಳಗ ದಿನಾ ಹೆಂಗ ಕಳಿತಿದ್ವು ಗೊತ್ತಾಗ್ತೆಯಿದ್ದಿಲ್ಲಾ. ಆಕಿಯ ಪ್ರೀತಿಯ ಪರಿನ ಬ್ಯಾರೆ ಇತ್ತು. ಅದಕ್ಕ ಪ್ರೀತಿ ಅನ್ನೊಕಿಂತಾ ಅಂತಃಕರಣ, ಅಚ್ಛಾ, ಕಾಳಜಿ ಅನ್ನಬಹುದಿತ್ತು. ಎಂದು ಮುಗಿಯದ ಮಮತೆಯ ಸೆಲೆ ಆಕಿಯ ಮಡಿಲಿನ್ಯಾಗ ಇತ್ತು. ಆಕಿ ಮುದ್ದಿಸಿ ಬೈಯ್ಯುವ ಪರಿಯೊಳಗ ಸ್ವರ್ಗಾನ ಇರತಿತ್ತು. ಆಕಿ ಕಡೆಯಿಂದ ಬೈಸಿಕೊಳ್ಳಲಿಕ್ಕೆ ಬೇಕಂತನ ಮುದ್ದಾಮ ತಪ್ಪುಗಳನ್ನ ಮಾಡಬೇಕಂತನಿಸ್ತಿತ್ತು, ಮಾಡತಿದ್ದೆ. ಅದು ಆಕಿಗೆ ಗೊತ್ತರತಿತ್ತು ಅದಕ್ಕ ಆಕಿ ಇನ್ನು ಮುದ್ದಿಸಿ ಬೈತಿದ್ಲು. ಇಬ್ಬರ ಮನೆಯೊಳಗನು ಗೊತ್ತಿತ್ತು ನಮ್ಮ ಪ್ರೀತಿಯ ಬಗ್ಗೆ. ಓದು ಮುಗಿದಮ್ಯಾಲೆ ಮದುವೆ ಮಾಡೋಣ ಅಂತ ಹಿರಿಯರ ನಿಶ್ಚಯ ಆಗಿತ್ತು.
ಅದೆಷ್ಟು ಬೆಳದಿಂಗಳ ರಾತ್ರಿಗಳನ್ನ ಒಬ್ಬರಿಗೊಬ್ಬರು ಕೈ ಹಿಡಿದು ಚಂದ್ರನ ನೋಡಕೋತ ಕಳೆದಿದ್ವಿ. ನಮ್ಮಿಬ್ಬರಲ್ಲೆ ಒಂದು ಒಪ್ಪಂದ ಆಗಿತ್ತು. ಹುಣ್ಣಿಮಿ ಚಂದಿರನ್ನ ಇಬ್ಬರೂ ಕೂಡೆ ಕೈ ಕೈ ಹಿಡಿದು ನೋಡೊದು ಅಂತ. ಒಂದು ವೇಳೆ ನಾವು ಬೇರೆ ಬೇರೆ ಊರಾಗ ಇದ್ರುನು ಚಂದ್ರನ ನೋಡಕೋತ ಫೋನ್ ನ್ಯಾಗ ಮಾತಾಡೊದು ಅಂತ. ಎಂಥಾ ಸೊಗಸು ಸಂಭ್ರಮ ಇತ್ತು. ಸಣ್ಣ ಸಣ್ಣ ಕ್ಷಣಗಳನ್ನ, ಆಸೆಗಳನ್ನ ಮನಸತೃಪ್ತಿಯಾಗಿ ಸವಿಯುವ ಆಕ್ಷಣಗಳಿಗೆ ದೃಷ್ಟಿ ತಾಗಿತೇನೊ ಅನ್ನೊಹಂಗ ಒಂದ ಕ್ಷಣದಾಗ ಎಲ್ಲ ನುಚ್ಚನೂರಾಗಿ ಹೋಗಿತ್ತು.
ಪ್ರೇಮಿಗಳ ದಿನದ ಆ ಸಂಜೆ ಆಕಿನ್ನ ನೋಡಲಿಕ್ಕೆ ಬರುವ ವೇಗದೊಳಗ ಎದುರಿಗೆ ಬಂದ ಮಾರಿಯಂಥ ಲಾರಿಯನ್ನ ನೋಡದೆ ಆದ ಅಪಘಾತ ಆಕಿಯಿಂದ ದೂರ ಒಯ್ದಿತ್ತು. ಆ ನಿರ್ಜನ ಪ್ರದೇಶದೊಳಗ ಆದ ಅಪಘಾತದ ಅರಿವು ಇನ್ನು ಜಗತ್ತಿಗೆ ಇರಲಿಲ್ಲಾ. ಯಾವುದೊ ಒಂದು ಹಿಡಿತದಿಂದ ಹೊರಬಂದ ಹಗುರವಾದ ಅನುಭವ. ಸುತ್ತಲು ಕಣ್ಣಾಡಿಸಿ ನೋಡಿದೆ, ನನ್ನ ನಿರ್ಜೀವ ಶರೀರ ಅಲ್ಲೆ ರಸ್ತೆದ ಬಾಜು ಕಂಟಿಯೊಳಗ ಬಿದ್ದಿತ್ತು. ಯಾರನ್ನ ಕರೆಯಲಿ, ಯಾರಿಗೆ ಹೇಳಲಿ ಒಂಥರಾ ಸಂಕಟ, ತಳಮಳ. ಸಂಜಿಮಬ್ಬು ಸರದು ಕತ್ತಲಾಗಲಿಕತ್ತಿತ್ತು. ಒಮ್ಮೆಲೆ ಆಕಿಯ ನೆನಪಾತು. “ ಹೌದು ಆಕಿ ನನಗಾಗಿ ಕಾಯ್ತಿರತಾಳ. ಎದ್ದು ಓಡಲಿಕ್ಕೆ ಹೋದ್ರ, ಓಡಲಾಗಲಿಲ್ಲ. ಗಾಳಿಯೊಳಗ ತೇಲಿದ ಅನುಭವ. ಹಂಗ ಪ್ರಯಾಸಬಟ್ಟು ತೇಲ್ಕೊತ ಹೋದೆ. ಆಕಿ ಟೆರೆಸ್ಸ ಮ್ಯಾಲೆ ನಿಂತಿದ್ಲು. ತಂಪು ಗಾಳಿಗೆ ಮುಂಗುರುಳು ಹಾರ್ಯಾಡಲಿಕತ್ತಿದ್ವು. ಸುಂದರ ಚಂಚಲ ಕಣ್ಣೊಳಗ ನನಗಾಗಿ ಹೆಪ್ಪುಗಟ್ಟಿದ ಕಾಯುವಿಕೆ ಇತ್ತು. ಹೊತ್ತು ಸರಿಧಾಂಗ ಆಕಿಯ ಕಣ್ಣಿಂದ ಹನಿ ಹನಿ ಕಣ್ಣಿರಿನ ಸಿಂಚನ ಶೂರುವಾತು. ಹೆಂಗ ಹೇಳಲಿ ನಾ ಅಕಿಗೆ. ಅತೃಪ್ತ ಆತ್ಮದ ಸಂಕಟಗಳನ್ನ ಕಥೆ ಕಾದಂಬರಿಗಳೊಳಗ ಓದಿದ್ದೆ. ಆದ್ರ ಈಗ ಅದರ ಅನುಭವ ಆಗಲಿಕತ್ತತ್ತು. ರಾತ್ರಿ ಮೆಲ್ಲನೆ ಜಾರಲಿಕತ್ತಿತ್ತು. ಯಾವುದೊ ಒಂದು ಸುಪ್ತ ಮಾಯೆ ನನ್ನ ಎಳಕೊಂಡು ಹೋಗಲಿಕತ್ತದ ಅನಿಸ್ತು. ಯಾಕೊ ನಿದ್ದಿ ಬಂಧಂಗ ಅನ್ನಿಸಿ, ಸೋತ ಭಾವನೆಯಿಂದ ಸುಪ್ತತೆಗೆ ಶರಣಾದ ಅನುಭವ.
ಹೋದ ವರ್ಷ ಇದೇ ದಿನ ಎಚ್ಚರಾದಾಗ ಆಕಿನ್ನ ಹುಡುಕಿಕೊಂಡು ಹೋಗಿದ್ದೆ. ಹುಚ್ಚಿ ಹಂಗಾಗಿದ್ಲು ಆಕಿ. ಅವಳ ಮೂಕವೇದನೆ ನೋಡಲಾರದ ತಿರುಗಿ ಬಂದು ಬಿಟ್ಟಿದ್ದೆ.
ಆದ್ರ ಯಾಕೋ ಈ ವರ್ಷ ಆಕಿನ್ನ ನೋಡೊ ಧೈರ್ಯನ ಇಲ್ಲಂತನಿಸ್ಲಿಕತ್ತದ. ಮುಗಿಯದ ಈ ಬಂಧುರದೊಳಗಿಂದ ಹೆಂಗ ಪಾರಾಗೋದು. ಯೋಚನೆಗಳ ಪರಿ ಹರಿಯುವಂಥ ರೋದನಗಳ ಧ್ವನಿ ಕೇಳಿ ಬರತೊಡಗಿದವು. ಯಾರೊ ಇಹಲೋಕದ ಯಾತ್ರೆ ಮುಗಿಸಿರಬೇಕು. ಸತ್ತಮ್ಯಾಲೆ ಎಲ್ಲರಿಗೂ ಈ ರುದ್ರಭೂಮಿಯ ಬಿಟ್ರ ಗತಿ ಇರಂಗಿಲ್ಲಾ. ಆದ್ರು ಇದು ಅಸ್ಪೃಷ್ಯ, ಅಮಂಗಲ, ಊರಿನಿಂದ ಹೊರಗ. ಕೆಲವು ಚದುರಗಳಷ್ಟಿನ ಈ ಜಾಗಾ ಯಾವ ಆಸ್ತ್ರ, ಆಯುಧಗಳಿಲ್ಲದನ ಮನುಷ್ಯನ್ನ ತನ್ನನ ಹೆದರಿಕೆಯ ಅಂಕೆಯೊಳಗ ಇಟ್ಕೊಂಡದ್ದ ನೋಡಿದ್ರ ವಿಚಿತ್ರ ಅನಿಸ್ತದ.
ಸಮಾಧಿಯಿಂದೆದ್ದ ಆ ಆಕೃತಿಯ ಧ್ಯಾನ ಎಲ್ಲ ಆಕಿ ಸುತ್ತನ ಸುತ್ತುತ್ತಿತ್ತು. ಮಸಣದೊಳಗೊಂದು ಸೂಂಯ್ಯನೆಯ ತಂಗಾಳಿಯೊಂದು ಆ ಆಕೃತಿಯ ಹತ್ರ ಬೀಸಿ ಬಂಧಗಾತು. ಯಾವುದೊ ಅನುಭೂತಿಯಿಂದ ಆ ಆಕೃತಿ ಹಿತವಾಗಿ ಮಿಸುಕಿಧಂಗ ಅನಿಸ್ತು. “ ಇದೇನಿದು ಆಕಿ ಹತ್ತಿರ ಸುಳಿಧಂತ ಅನುಭೂತಿ ಅಂತ ಅನ್ಕೊಳ್ಳುವಷ್ಟರೊಳಗ ಶೀತಲ ತಂಗಾಳಿಯೊಂದು ನವಿರಾಗಿ ಸ್ಪರ್ಷಿಸಿದ ಅನುಭವ. ಭಾವ ಸಮಾಧಿಯಿಂದೆದ್ದು ನೋಡಿದ್ರ ಅಲ್ಲೆ ಆಕಿ ನಿಂತಿದ್ಲು. ಸುಂದರ ಆಕೃತಿಯ ರೂಪದೊಳಗ. ಆಶ್ಚರ್ಯ, ಹಂಗಿದ್ರ ಸ್ವಲ್ಪ ಹೊತ್ತಿನ ಮುಂಚೆ ಕೇಳಿಸಿದ ರೋದನ ಇವಳ ಸಲುವಾಗಿನಾ?!.. ಪ್ರೇಮಿಗಳ ದಿನದಂದು ವಿಧಿ ನನ್ನನ್ನ ಆಕಿಯಿಂದ ದೂರ ಮಾಡಿತ್ತು. ಆದ್ರ ಆಕಿ ತನ್ನ ಬದುಕಿನಧ್ಯಾಯಗಳನ್ನ ಮೊಟಕುಗೊಳಿಸಿ, ಅದೇ ದಿನ ನನ್ನ ಸಲುವಾಗಿ ತೇಲಿ ಬಂದಿದ್ಲು.
ಏನೂ ತೋಚದ ಆಶ್ಚರ್ಯದಿಂದ ನೋಡ ನೋಡತಿದ್ಧಂಗ ಆಕಿ ಬಂದು ನನ್ನ ಕೈಹಿಡಿದು ಆಕಾಶದ ಕಡೆಗೆ ನೋಡಂತ ಹೇಳಿದ್ಲು. ಅಲ್ಲಿ ನೋಡಿದ್ರ , “ ಹುಣ್ಣಿಮೆಯ ಚಂದ್ರ , ಇಬ್ಬರು ಪ್ರೇಮಿಗಳ ಆತ್ಮಗಳ “ ಮಸಣದಲ್ಲಿ ಮಿಲನೊತ್ಸವ “ ಕಂಡು ನಗುತ ನಲಿಯುತಿದ್ದ……
******
ಒಳ್ಳೇ ಕಲ್ಪನೆ, ಇಷ್ಟ ಆಯ್ತು.
ಇಷ್ಟವಾಯಿತು…ಮೇಡಂ…..ಚೆನ್ನಾಗಿದೆ.
ಛ೦ದ ಆಗೇದ ಲೇಖನ….
ಬರಿಯೊ ಶೈಲಿ ಛೊಲೊ ಅದ ತಮ್ಮದು,,
ಮು೦ದುವರೆಯಲಿ…
ನೆನಪಿನ ಬುತ್ತಿ,,,,