ವಿಜ್ಞಾನ-ಪರಿಸರ

ಮಳೆ-ಮಳೆ: ಅಖಿಲೇಶ್ ಚಿಪ್ಪಳಿ

ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಭಾರಿ ಮಳೆಯನ್ನು ನೋಡದಿರುವ ಈಗಿನ ಯುವಕರು ಇದೇನು ಮಳೆ ಎಂದು ಒಂಥರಾ ತಾತ್ಸಾರ ಮಾಡುತ್ತಾರೆ. ಕಳೆದ ಬಿರುಬೇಸಿಗೆಯಲ್ಲಿ ನೀರಿಗಾಗಿ ಅನುಭವಿಸಿದ ಎಲ್ಲಾ ಕಷ್ಟಗಳನ್ನು ಆರಿದ್ರಾ ಮತ್ತು ಪುನರ್ವಸು ಮಳೆಗಳು ಮರೆಸಿವೆ. ಹೂಳು ತುಂಬಿದ ಡ್ಯಾಂಗಳು ತುಂಬಿದರೆ ನಮಗೆ ಬೊನಸ್ಸು ಸಿಗುತ್ತದೆ ಎಂದು ಕೆ.ಪಿ.ಸಿಯವರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದಾರೆ. ಹೈಸ್ಕೂಲು ಓದಲು 80ರ ದಶಕದಲ್ಲಿ ನಮ್ಮ ಊರಿನಿಂದ ಸಾಗರಕ್ಕೆ ಬರಬೇಕಾಗಿತ್ತು. ಗ್ರಾಮಾಂತರ ಬಸ್ಸುಗಳು ಇರದಿದ್ದ ಆ ಕಾಲದಲ್ಲಿ, ಸೈಕಲ್ಲಿನ ಭಾಗ್ಯವಿಲ್ಲದ ನಾವು ನಡದೇ ಸ್ಕೂಲಿಗೆ ಬರಬೇಕಾಗಿತ್ತು. ಬೇಸಿಗೆಯಲ್ಲಿ 6 ಕಿ.ಮಿ.ಗಳ ದಾರಿ ಸವೆಸಲು 40 ನಿಮಿಷ ಸಾಕಾಗುತ್ತಿತ್ತು. ಅದೇ ಮಳೆಗಾಲ ಬಂತೆಂದರೆ, 60-70 ನಿಮಿಷಗಳು ಬೇಕಾಗುತ್ತಿತ್ತು. ಜಿಂಕೆ ಮಾರ್ಕಿನ ದೊಡ್ಡ ಕೊಡೆಯೂ ಕೂಡ ಮಳೆ ನೀರನ್ನು ತಡೆಯಲು ವಿಫಲವಾಗುತ್ತಿತ್ತು. ದಪ್ಪ ಬಟ್ಟೆಯ ಒಳಗೂ ಜಿಮಿರಿದಂತೆ ನೀರು ಬರುತ್ತಿತ್ತು.

ಎತ್ತ ಕಡೆಯಿಂದ ಗಾಳಿ ಬೀಸುತ್ತದೆ ಎಂದು ನೋಡಿ ಅದರ ವಿರುದ್ದವಾಗಿ ಕೊಡೆ ಹಿಡಿಯಬೇಕಿತ್ತು. ಈ ತರಹದ ಸರ್ಕಸ್ ಮಾಡುವಷ್ಟರಲ್ಲಿ ಮೈ ಪೂರಾ ನೆನೆದು ಹೋಗುತ್ತಿತ್ತು. ಶಾಲೆಗೆ ಬಂದು ಪಾಠ ಕೇಳುವುದೋ ಅಥವಾ ಚಳಿಯಿಂದ ನಡುಗುವುದೋ ಅಥವಾ ಎರಡನ್ನೂ ಒಟ್ಟಿಗೆ ಮಾಡಬೇಕಾಗುತ್ತಿತ್ತು. ನೆನೆದ ಮೈ ಜೊತೆಗೆ ಕಿಟಕಿಯಿಂದ ಬರುವ ಚಳಿಗಾಳಿ, ಹಲ್ಲುಗಳು ಕಟ-ಕಟ ಶಬ್ಧ ಮಾಡುತ್ತಿದ್ದವು. ಇಂತಹ ಸ್ಥಿತಿಯಲ್ಲಿ ಸಹಜವಾಗಿ ಪಾಠ ತಲೆಗೆ ಹತ್ತುತ್ತಿರಲಿಲ್ಲ. ಮಾಡಿಕೊಂಡ ಹೋಂವರ್ಕ್‍ಗಳು ತೋಯ್ದು ತೊಪ್ಪೆಯಾಗಿ ಇಂಗ್ಲೀಷ್ ನೋಟ್ಸ್ ಯಾವುದು? ಹಿಸ್ಟರಿ ನೋಟ್ಸ್ ಯಾವುದು ಗೊತ್ತಾಗುತ್ತಿರಲಿಲ್ಲ. ಸಿಟ್ಟಾದ ಮೇಷ್ಟ್ರಗಳು ದೇವರಾಣೆ ನೀವು ಉದ್ದಾರವಾಗಲ್ಲ ಎಂದು ಹಂಗಿಸುವುದು ಮಾಮೂಲಾಗಿತ್ತು. ಮಧ್ಯಾಹ್ನದ ಊಟದ ಡಬ್ಬಿ ಐಸ್‍ನಷ್ಟು ತಣ್ಣಗಾಗಿ, ಒಳಗಿದ್ದ ಅನ್ನವೋ-ಉಪ್ಪಿಟ್ಟೋ ಜಿಗಿತುಕೊಂಡು ತಿನ್ನಲು ಬಾರದ ಸ್ಥಿತಿಗೆ ತಲುಪಿರುತ್ತಿದ್ದವು. ಆದರೂ ಹಸಿದ ಹೊಟ್ಟೆಗೊಂದಿಷ್ಟು ಬೇಕಲ್ಲ ಅಂತ ಒಂದಿಷ್ಟು ತಿಂದು, ಉಳಿದಿದ್ದನ್ನು ಕಾಗೆ-ಪಾಗೆ ತಿನ್ನಲಿ ಎಂದು ಎಸೆಯುತ್ತಿದ್ದೆವು. ಮಳೆಗೆ ಹೆದರಿ ಕುಳಿತ ಕಾಗೆಯೂ ತಕ್ಷಣ ಬಂದು ಎಸೆದ ತಿಂಡಿಯನ್ನು ತಿನ್ನುತ್ತಿರಲಿಲ್ಲ. ಮಳೆ ಕಡಿಮೆಯಾಗಲಿ ಎಂದು ಕಾಯುತ್ತಿದ್ದವು.

ಮೊನ್ನೆ ಸಿದ್ಧಾಪುರದ ಗಂಗಾ ಭಟ್ಟರು ಅದೇನೋ ಕೆಲಸದ ನಿಮಿತ್ತ ಸಾಗರಕ್ಕೆ ಬಂದವರು ಮಾತಿಗೆ ಸಿಕ್ಕಿದರು. ಅವರೀಗೀಗ ಸುಮಾರು ಎಪ್ಪತ್ತರ ಆಸು-ಪಾಸು. ಕುಳ್ಳನೆಯ ದೇಹವಾದರೂ, ತೋಟ-ಗದ್ದೆ ಕೆಲಸ ಮಾಡಿದ್ದರಿಂದಲೋ ಅಥವಾ ರಾಸಾಯನಿಕರಹಿತ ಅಕ್ಕಿ ತಿಂದಿದ್ದರಿಂದಲೋ ಹೋಲಿಸಿದರೆ ನಮಗಿಂತ ಗಟ್ಟಿಯಾಗಿದ್ದರು. ಸಾಗರದಿಂದ ಸಿದ್ಧಾಪುರಕ್ಕೆ ಬರೀ 30 ಕಿ.ಮಿ. ದೂರ. ನಿಮ್ಮಲ್ಲಿ ಮಳೆ ಹೆಂಗ್ರೋ ಅಂದೆ. ಇಲ್ಲಿಗಿಂತ ಹೆಚ್ಚು ಎಂದರು. ನಿಮ್ಮ ಪ್ರಾಯ ಕಾಲದಲ್ಲಿ ಬರುತ್ತಿದ್ದ ಮಳೆ ಈಗಲೂ ಬರುತ್ತಿದೆಯಾ? ಇಲ್ಲ ಎಂದು ಗೊತ್ತಿದ್ದರೂ ಕೇಳಿದೆ. ಅವರ ಅನುಭವದ ಉತ್ತರ ಬೇಕಾಗಿತ್ತು. ತಮಾಷೆ ಮಾಡ್ತ್ರ ಹೆಂಗೆ? ಆ ಮಳೆ ಈಗೆಲ್ಲಿದ್ದು? ನಮ್ಮ ಕಾಲ್ದಗೆ ಮಳೆ ಬಂದಂಗೆ ಈಗ ಬಂದ್ರೆ ಅರ್ಧ ಜನ ಸತ್ತೇ ಹೋಗ್ತ್ರು ಎಂದು ನಗೆಯಾಡಿದರು, ಇಳಿವಯಸ್ಸಿನ ನೆರಿಗೆಗಟ್ಟಿದ ಅವರ ಮುಖದ ನಗೆಯ ಹಿಂದೆ ವಿಷಾದವೂ ಇತ್ತು. ಅವರ ಕಾಲದಲ್ಲಿ ಮಳೆಯನ್ನು ಅಳೆಯುವ ವೈಜ್ಞಾನಿಕ ಸಾಧನಗಳಿರಲಿಲ್ಲ. ಈ ವರ್ಷ ಎಷ್ಟು ಮಳೆ ಬಿತ್ತು ಎಂಬ ಲೆಕ್ಕಾಚಾರ ಅವರ ವಿಧದಲ್ಲೇ ಮಾಡಿಕೊಳ್ಳುತ್ತಿದ್ದರು. ಒಂದು ಕಂಬಳಿ ಮಳೆ, ಎರೆಡು ಕಂಬಳಿ ಮಳೆ ಹೀಗೆ. ಆಗಿನ ಕಾಲದಲ್ಲಿ ಪ್ಲಾಸ್ಟಿಕ್ ಇರಲಿಲ್ಲ. ಕೃಷಿ ಮತ್ತು ಕೂಲಿ ಕಾರ್ಮಿಕರು ಕಂಬಳಿಯನ್ನು ಸೂಡಿಕೊಂಡು ಕೆಲಸ ಮಾಡುತ್ತಿದ್ದರು. ಮಳೆಯಿಂದ ರಕ್ಷಣೆ ಮತ್ತು ಬೆಚ್ಚಗಿನ ಅನುಭವ ನೀಡುವ ಕಂಬಳಿ ಟೂ-ಇನ್-ವನ್ ಸಾಧನವಾಗಿತ್ತು. ಸಾಧಾರಣ ಮಳೆಯಾದರೆ ನೀರು ಕಂಬಳಿಯ ಒಳಗೆ ಬರುತ್ತಿರಲಿಲ್ಲ. ಸ್ವಲ್ಪ ಜೋರಾದ ಮಳೆಯಾದರೆ ಒಂದು ಸ್ವಲ್ಪ ನೀರು ಒಳಗೆ ಬರುತ್ತಿತ್ತು.

ಕಂಬಳಿಯನ್ನು ತೆಗೆದು ಒಂದು ಸಾರಿ ಜೋರಾಗಿ ಕೊಡವಿದಾಗ ನೀರೆಲ್ಲಾ ಬಸಿದು ಹೋಗುತ್ತಿತ್ತು. ಇನ್ನು ಎರೆಡು ಕಂಬಳಿ ಮಳೆಯೆಂದರೆ ಸರಿ-ಸುಮಾರು ಉತ್ತರಾಖಂಡದಲ್ಲಾದ ಮೇಘಸ್ಫೋಟದ ಮಳೆಗೆ ಹೋಲಿಸಬಹುದು. ಸಾಮಾನ್ಯವಾಗಿ ಪುನರ್ವಸು-ಪುಷ್ಯ ಮಳೆಗಳು ಜೋರು. ಈ ಮಳೆಗಳಿಗೆ 2 ಕಂಬಳಿ ಬೇಕಾಗುತ್ತಿತ್ತು. ಆದರೂ ನೀರು ಒಳ ಬರುತ್ತಿತ್ತು. ಆದರೂ ಬದುಕಿಗಾಗಿ ಜನ ಮಳೆಯಲ್ಲಿ ಕೆಲಸ ಮಾಡುತ್ತಿದ್ದರು. ಅಡಿಕೆ ತೋಟಗಳಿಗೆ ಕೊಳೆರೋಗ ಮಾಮೂಲು. ಆಗ ಬೋರ್ಡೋ ಮಿಶ್ರಣದ ಔಷಧಿಯ ಆವಿಷ್ಕಾರ ಇನ್ನೂ ಆಗಿರಲಿಲ್ಲ. ಅಡಿಕೆ ಹಾಳೆಯಿಂದಲೇ ಕೊಟ್ಟೆ ಮಾಡಿ ಬೆಳೆಯುತ್ತಿರುವ ಅಡಿಕೆ ಗೊನೆಯ ಮೇಲೆ ನೀರು ಬೀಳದಂತೆ ಕಟ್ಟುತ್ತಿದ್ದರು. ಈ ಕೆಲಸಕ್ಕೆ ಹೊನ್ನಾವರದ ಕಡೆಯ ಗಂಜಿಗೌಡರು ಬರುತ್ತಿದ್ದರು. ಅಡಿಕೆ ಹಾಳೆಯ ಕೊಟ್ಟೆ ಖಾಲಿಯಾದರೆ ಮರದ ಮೇಲಿನಿಂದ ಕೆಳಗಿನವರಿಗೆ ಹೇಳುವುದು ಹೇಗೆ? ಮಳೆಯಿಂದಾಗಿ ಮೇಲಿನವ ಕೆಳಗಿನವನಿಗೆ ಕಾಣುತ್ತಿರಲಿಲ್ಲ. ಕೂಗಿದರೂ ಮಳೆಯ ಶಬ್ಧದಲ್ಲಿ ಕೇಳುತ್ತಿರಲಿಲ್ಲ. ಸೊಂಟಕ್ಕೆ ಕಟ್ಟಿಕೊಂಡ ಉದ್ದದ ಹಗ್ಗವನ್ನು ಮರದ ಮೇಲಿನವನು ಜೋರಾಗಿ ಎಳೆದರೆ ಕೊಟ್ಟೆ ಖಾಲಿಯಾಗಿದೆ ಎಂದು ಅರ್ಥ. ಕೆಳಗಿನಿಂದ ಮತ್ತಷ್ಟು ಕೊಟ್ಟೆಗಳನ್ನು ಅದೇ ಹಗ್ಗಕ್ಕೆ ಕಟ್ಟಿ ಮೇಲೆ ಕಳುಹಿಸುವುದು. ಇದು ಸುಮಾರು 50 ವರ್ಷಗಳ ಹಿಂದಿನ ಕತೆ.

ಇದೀಗ ಹೇಳ ಹೊರಟಿರುವುದು ಸುಮಾರು 75 ವರ್ಷಗಳ ಹಿಂದಿನದ್ದು, ಹಿರಿಯರಿಂದ ಕೇಳಿದ್ದು. ಸೊರಬ ತಾಲ್ಲೂಕಿನಲ್ಲಿ ಅತ್ಯಂತ ಹೇರಳವಾದ ಕಾಡು ಇತ್ತಂತೆ. ಕೃಷಿ ಕೆಲಸಕ್ಕೆ, ಹಾಲು ಮತ್ತು ಗೊಬ್ಬರಕ್ಕಾಗಿ ಪ್ರತಿಯೊಬ್ಬರು ಜಾನುವಾರುಗಳನ್ನು ಸಾಕುತ್ತಿದ್ದರು. ಆಗ ಊರಿನ ಎಲ್ಲರ ಮನೆಯ ದನಗಳನ್ನು ಕಾಯಲು ಒಬ್ಬನನ್ನು ನೇಮಿಸುತ್ತಿದ್ದರು. ಅವನಿಗೆ ಸಂಬಳ, ಕಾಳು-ಕಡಿ, ಅಕ್ಕಿ ನೀಡುವ ಜವಾಬ್ದಾರಿ ಊರಿನ ಎಲ್ಲರದು ಆಗಿತ್ತು. ಆಗ ದನ ಕಾಯುತ್ತಿದ್ದವನ ಹೆಸರು ಓಟೂರು ಬಂಗಾರಿ. ಆಗಲೇ ಅವನಿಗೆ ಸಾಕಷ್ಟು ವಯಸ್ಸಾಗಿತ್ತು. ಬೇರೆ ಕೆಲಸ ಮಾಡುವುದು ಕಷ್ಟ ಎಂದು ಅವನಿಗೂ ಅನಿಸಿತ್ತು. ಹಾಗಾಗಿ ದನ ಕಾಯುವ ಕೆಲಸವನ್ನು ಆಯ್ದುಕೊಂಡಿದ್ದ. ಬೇಸಿಗೆ ಕಾಲದಲ್ಲಿ ದನ ಕಾಯುವ ಕೆಲಸ ಕಷ್ಟ. ಹಸಿರು ಕಂಡ ಕೂಡಲೇ ದನಗಳು ಅತ್ತಿತ್ತ ನೋಡದೆ ಬೇಲಿ ನುಗ್ಗುತ್ತವೆ. ಮಳೆಗಾಲದಲ್ಲಿ ದನ ಕಾಯುವುದು ಸುಲಭ. ಸಾಮಾನ್ಯವಾಗಿ ದನಗಳು ನೀರಿಗೆ ಅಂಜುತ್ತವೆ. ಬೆಚ್ಚನೆಯ ಸ್ಥಳದಲ್ಲಿರಲು ಇಷ್ಟ ಪಡುತ್ತವೆ. ಜೋರು ಮಳೆಗಾಲದಲ್ಲಿ ಬೆಟ್ಟಕ್ಕೆ ಹೋದ ದನಗಳು ಮೇಯುವುದೇ ಇಲ್ಲ. ಯಾವುದಾದರೂ ದೊಡ್ಡ ಮರದಡಿಯಲ್ಲಿ ಒತ್ತೊತ್ತಾಗಿ ನಿಂತು ಬಿಡುತ್ತವೆ. ಮಳೆ ಕಡಿಮೆಯಾಗುವ ಹಾಗಿಲ್ಲ. ದನ ಮೇಯಲು ಹೋಗುವ ಹಾಗಿಲ್ಲ.

ಈ ಸಮಯದಲ್ಲಿ ಎರೆಡು ಕಂಬಳಿ ಹೊದ್ದ ಬಂಗಾರಿಗೂ ಬಿಡುವು. ಬಿಡುವೆಂದರೆ ದನ ಕಾಯಲು ಮಾತ್ರ ಬಿಡುವು. ಆ ಇನ್ನೊಂದು ಕೆಲಸದಲ್ಲಿ ನಿರತನಾಗಿರುತ್ತಿದ್ದ. ಹೊಟ್ಟೆ ಹಸಿದ ಹಕ್ಕಿಗಳು ಮರದಿಂದ ಆಹಾರ ಹುಡುಕಿಕೊಂಡು ಹಾರುತ್ತಿದ್ದವು. ನಾಲ್ಕು ಮಾರು ದೂರ ಹೋಗುವಷ್ಟರಲ್ಲಿ ರೆಕ್ಕೆ ಬಡಿಯಲು ಸಾಧ್ಯವಾಗದೆ ಒದ್ದಾಡುತ್ತಿದ್ದವು. ರೆಕ್ಕೆ ಸೋತು ಬಂದು ಕೆಳಗೆ ಬೀಳುತ್ತಿದ್ದವು. ದನಕ್ಕೆ ಹೊಡೆಯುವ ಸಣ್ಣ ಬಿದಿರಿನ ಕೋಲಿನಿಂದ ಆ ಹಕ್ಕಿಗಳ ಮಂಡೆಯ ಮೇಲೊಂದು ಹೊಡೆತ ಕೊಡುತ್ತಿದ್ದ ಬಂಗಾರಿ. ಹಕ್ಕಿಗಳು ಹಾರಾಡಲು ಪ್ರಯಾಸಪಡುವಷ್ಟು ಭಾರಿ ಗಾತ್ರದ ಮಳೆಯನ್ನು ಈಗ ಕಲ್ಪಿಸಿಕೊಳ್ಳಲು ಸಾಧ್ಯವೆ? ಜೋರು ಮಳೆಯಲ್ಲಿ ಬಂಗಾರಿಗೆ ನಿತ್ಯ ಹಬ್ಬ. ಪುಗಸಟ್ಟೆ ಹಕ್ಕಿ ಮಾಂಸ. ಒಂದೊಂದು ಬಾರಿ ಚೀಲ ತುಂಬಿದ್ದು ಉಂಟು. ಮಾಂಸ ಹೆಚ್ಚಾಗಿ ಅವರಿವರಿಗೆ ಹಂಚಿದ್ದೂ ಉಂಟು. ಮುಸಲಧಾರೆಯ ಮಳೆಯೂ ಈಗಿಲ್ಲ. ದನ ಕಾಯಲು ದನಗಳಿಲ್ಲ. ಸರ್ಕಾರಿ ಗೊಬ್ಬರ ಬಂದ ಮೇಲೆ ಜಮೀನು ಹಟ್ಟಿ ಗೊಬ್ಬರ ಕಾಣಲಿಲ್ಲ. ದನ ಕಾಯುವವರು ಈಗಿಲ್ಲ. ಈಗಿರುವುದು ಸಣ್ಣ ಮಳೆಗೇನೆ ದರಿದ್ರ ಮಳೆ ಚಿರಿ-ಚಿರಿ ಎನ್ನುವ ಜನ ಸಮೂಹ ಮತ್ತು ಮಳೆಯಿಂದ ರಕ್ಷಣೆ ಪಡೆಯಲು ರೈನ್ ಕೋಟು, ಪ್ಲಾಸ್ಟಿಕ್ಕು, ಮುಟ್ಟಿದರೆ ಮುರಿಯುವ ತ್ರಿಬಲ್ ಫೋಲ್ಡ್ ಛತ್ರಿಗಳಷ್ಟೆ. ಜಡಿಮಳೆಯಲ್ಲಿ ತೋಯ್ದು ಹಾರಲಾರದ ಹಕ್ಕಿಗಳ ಸಂಖ್ಯೆಯೂ ಈಗಿಲ್ಲ.

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ಮಳೆ-ಮಳೆ: ಅಖಿಲೇಶ್ ಚಿಪ್ಪಳಿ

 1. ನಿಮ್ಮ ಲೇಖನ ಇಷ್ಟ ಆಯಿತು ಸರ್, ಬಹಳಷ್ಟು ಜನರಿಗೆ ಅದೂ ನಗರವಸಿಗಳಿಗೆ ಮಳೆ, ಮಣ್ಣು ಮತ್ತು ತಾವು ಉಣ್ಣುವ ಅನ್ನಕ್ಕೂ ಇರುವ ಸಂಬಂಧ ಎಂತಹದ್ದು ಅಂತ ಗೊತ್ತಿಲ್ಲ. ಮೇಕಪ್ ಕಟ್ಟು ಹೋಗ್ತದೆ ಈ ಹಾಳಾದ ಮಳೆಗೆ ಅಂತ ಗೊಣಗುವವರಿಗೆ ಏನು ಹೇಳಬೇಕು? ಪರಿಸರದ ಬಗ್ಗೆ ನಮ್ಮಲ್ಲಿ ಪೂರ್ಣ ಪ್ರಮಾಣದ ಪ್ರಜ್ನೆಯನ್ನು ಜಾಗೃತಗೊಳಿಸಬೇಕಾದ ಅಗತ್ಯವಿದೆ…. 

 2. ಮಳೆಯೆಂಬುದು ಮುಂಗಾರಿನ ಕೊಡುಗೆ…ಬರೆದಷ್ಟೂ ಮುಗಿಯದ ಅನುಭವ ಕಥನ… 

 3. ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮಳೆ-ಮಳೆ ಲೇಖನ. ಮಳೆಗಾಲದಲ್ಲಿ ಗಡ ಗಡ ನಡುಗುತ ಶಾಲೆಗೆ ಹೋದ ಅನುಭವ ನನಗೂ ಇದೆ. ಆದರೆ ನೀವು ಕಂಡಷ್ಟು ಮಳೆಯನ್ನು ನಾನು ಕಂಡಿಲ್ಲ. ನಿಜಕ್ಕೂ ಆ ಹಿಂದಿನ ಮಳೆ ಈಗೊಮ್ಮೆ ಆದರೆ ನಾನು ಸತ್ತೇ ಬಿಡುತ್ತೇನೆ. ಚಳಿ ಗಾಳಿಗೂ ಚಳಿ ಜ್ವರ ಬರುತ್ತೆ ನನಗೆ.
  ಒಂದು ಸುಂದರ ಅನುಭವ ನಮಗೂ ಹಂಚಿದ್ದಕ್ಕಾಗಿ ಧನ್ಯವಾದಗಳು ಸರ್. ಹೀಗೆಯೇ ಬರೆದು ನಮ್ಮನ್ನು ಓಡಿಸುತ್ತಾ ಇರಿ.
   

 4. ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮಳೆ-ಮಳೆ ಲೇಖನ. 

 5. ಸಖತ್ತಾಗಿ ಬರದ್ದಿ ಅಖಿಲೇಶ್ ಅವ್ರೆ 🙂
  ಕೊನೆ ಪ್ಯಾರಾ ಹೌದು.. ಇವತ್ತಿನ ವಿಪರ್ಯಾಸ 🙁

Leave a Reply

Your email address will not be published. Required fields are marked *