ಮಳೆ, ಕೆರೆ ಮತ್ತು ಕ್ಯಾಬು: ಚೀಮನಹಳ್ಳಿ ರಮೇಶಬಾಬು


ಅದೊಂದು ಜಲಪ್ರಳಯ. ಸಂಜೆ ನಾಲ್ಕು ಗಂಟೆಗೆಲ್ಲಾ ಅಕ್ಷರಶಃ ಕತ್ತಲಾಗಿಬಿಟ್ಟಿತ್ತು. ಸುತ್ತಲೂ ಒತ್ತರಿಸಿ ನಿಂತಿದ್ದ ಕಪ್ಪು ಮೋಡಗಳು ಒಂದು ಗುಹೆಯನ್ನೆ ಸೃಷ್ಟಿಸಿಬಿಟ್ಟಿದ್ದವು. ಬೋರೆಂದು ಸುರಿಯ ಹತ್ತಿದ ಮಳೆಯ ಹನಿಗಳು ಒಂದೇ ಸಮ ರಾತ್ರಿಯೆಲ್ಲಾ ಮುಂದುವರೆಯತೊಡಗಿದವು. ಮಳೆಯ ರಭಸಕ್ಕೆ ವಿದ್ಯುತ್ ಕಡಿತವಾಗಿ ಮಳೆಯ ರೌದ್ರ ನರ್ತನದ ಭೀಕರತೆಯು ಮತ್ತಷ್ಟು ಹೆಚ್ಚಾಗಿ ಇಡೀ ಹಳ್ಳಿ ರಾತ್ರಿ ಏಳು ಗಂಟೆಗೆಲ್ಲಾ ಇದ್ದದ್ದನ್ನು ಉಂಡು ಮುಸುಕೆಳೆದು ಮಲಗಿಬಿಟ್ಟಿತ್ತು. ಅಪ್ಪ “ಈ ಪಾಟಿ ಉಯ್ಯಾಕತ್ತಿದೆ… ಬೆಳಿಗ್ಗೆ ರೋಡಿಗಾಕಿದ ತೆನೇನ ಶಿವನೇ ಕಾಪಾಡ್ಬೇಕು” ಎನ್ನುತ್ತಾ ಮಗ್ಗುಲು ಬದಲಿಸಿದ. ಸ್ವಲ್ಪ ಹೊತ್ತಿನ ನಂತರ ದೀರ್ಘವಾದ ನಿಟ್ಟುಸಿರೊಂದನ್ನು ಹೊರಚೆಲ್ಲಿ ನಿಧಾನವಾಗಿ ನಿದ್ದೆಗೆ ಜಾರಿದ. ನನಗೆ ನಿದ್ದೆ ಹತ್ತಲಿಲ್ಲ. ನನ್ನೂರ ಕೆರೆ ತುಂಬಿ ಎಷ್ಟು ವರ್ಷಗಳಾದವು!? ಬಹುಶಃ ಹದಿನೆಂಟು ವರ್ಷಗಳ ಹಿಂದೆ ಅಂತ ಕಾಣುತ್ತೆ. ಆಗ ನಾನು ಪ್ರಥಮ ಪಿಯುಸಿಗೆ ಆಗ ತಾನೇ ಕಾಲಿಟ್ಟಿದ್ದೆ. ಕನ್ನಡ ಮಾಧ್ಯಮದಲ್ಲಿ ಹೈಸ್ಕೂಲ್ ಮುಗಿಸಿದ್ದ ನನಗೆ ಪಿಯುಸಿಯಲ್ಲಿ ಪಿ.ಸಿ.ಎಂ.ಬಿ ತೆಗೆದುಕೊಂಡದ್ದರಿಂದ ಇಂಗ್ಲೀಷ್‍ನಲ್ಲೇ ಓದಿ ಅರಗಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿತ್ತು. ಆ ವರ್ಷ ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದ ನನಗೆ ನನ್ನೂರ ಕೆರೆ ತುಂಬಿ ಕೋಡಿ ಬಿದ್ದದ್ದರಿಂದ ಕೆರೆಯ ನೀರಿನ ಜತೆ ನಾನು ನೀರಾಗಿ ಅಲೆ ಅಲೆಯಾಗಿ ತೇಲಿ ಕೋಡಿಯಿಂದ ಕೆಳಗೆ ಜಿಗಿದು ವಿವರಿಸಲು ಸಾಧ್ಯವಾಗದಷ್ಟು ಖುಷಿ ಪಟ್ಟಿದ್ದೆ. ನನ್ನ ಹಾಗೂ ಕೆರೆಯ ನಡುವಿನ ಸಂಬಂಧವೇ ಅಂತಹದ್ದು. ಕೆರೆ, ಕೋಡಿ, ಪಾತ್ರ, ಮುಸ್ಸಂಜೆ ಹೊಳೆಯುವ ಅಲೆ ಎಲ್ಲವೂ ನನ್ನೊಳಗಿನ ಪಾತ್ರಗಳೇ ಆಗಿ ಅಥವಾ ಅವೇ ನಾನಾಗಿ ಕೆರೆಯಲ್ಲಿ ಲೀನವಾಗಿ ಹೋಗಿದ್ದೆ. ಈ ರಾತ್ರಿಯಲ್ಲಿ ಎದ್ದು ಹೋಗಿ ಕೆರೆಯನ್ನು ನೋಡಿಕೊಂಡು ಬರಲೇ ಎಂದೆನಿಸಿತು. ಅಥವಾ ಕೆರೆಯೇ ನನ್ನೆದೆಗೆ ಗಾಳ ಹಾಕಿ ಎಳೆಯ ತೊಡಗಿತು. ನಿಧಾನಕ್ಕೆ ಮೇಲೆ ಎದ್ದೆ. ಅಪ್ಪ ಗೊರಕೆ ಹೊಡೆಯುತ್ತಿದ್ದ. ಅಮ್ಮ ತಂಪು ನಿದ್ದೆಯಲ್ಲಿರುವಂತೆ ಕಂಡಿತು.

ಎದ್ದವನೇ ಚಿಲಕ ತೆಗೆದು ಬಾಗಿಲನ್ನು ಹಿಂದಕ್ಕೆಳೆದೆ. ರಪ್ಪೆಂದು ಮಳೆಯ ತುಂತುರು ಮೈ ಪೂರ ನೆಕ್ಕಿ ಬಿಟ್ಟಿತು. ನಮ್ಮ ಮನೆಯ ಮುಂದೆ ಚೌಕಕಾರದ ಒಂದಷ್ಟು ತೆರೆದ ಜಾಗವಿರುವುದರಿಂದ ಮಳೆಯ ರಭಸ ಗಾಳಿಯೊಡನೆ ಸೇರಿ ಗಿರಕಿ ಹೊಡೆದು ಹನಿಗಳು ಒಡೆದು ಚೂರಾಗಿ ತುಂತುರು ರೂಪ ಪಡೆದು ನಾನು ಬಾಗಿಲು ತೆಗೆದ ತಕ್ಷಣ ನನಗೆ ಅಪ್ಪಳಿಸಿದವು. ನೀರಲ್ಲದ್ದಿದ ಕಪ್ಪು ಸುಂದರಿಯ ಕೈ ಬೆರಳುಗಳಿಂದ ನನ್ನ ಮುಖಕ್ಕೆ ಚುಮುಕಿಸಿದಷ್ಟು ಹಿತವಾಗಿತ್ತು. ಆ ಕ್ರಿಯೆ ಮಳೆಯ ರಭಸ ನನ್ನೆದೆಯನ್ನೊಮ್ಮೆ ನಡುಗಿಸಿತು. ಇಷ್ಟು ಹೊತ್ತು ತಣ್ಣಗೆ ಒಂದೇ ಸಮ ಸುರಿಯುತ್ತಿದ್ದ ಮೋಡಗಳು ಏಕಾ-ಏಕಿ ಗುಡುಗ ತೊಡಗಿದವು. ಮಿಂಚಿನ ತೀಕ್ಷ್ಣ ಬೆಳಕು ಕಣ್ಣಿಗೆ ಅಪ್ಪಳಿಸಿ ನನ್ನ ಮೈ ಮತ್ತಷ್ಟು ಕಂಪಿಸತೊಡಗಿತು. ಮನಸ್ಸು ಹೋಗುವುದು ಬೇಡ ಎನ್ನುತ್ತಿರುವಂತೆಯೇ ಕಾಲುಗಳು ಮೊದಲ ಬಾರಿಗೆ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳದೆ ಸ್ವಯಂ ನಿರ್ಧಾರವನ್ನು ತೆಗೆದುಕೊಂಡು ಬಿಟ್ಟವು. ಎರಡು ಕಾಲ್ಗಳು ನಿಧಾನಕ್ಕೆ ಆಚೆ ಬಂದು ನನ್ನನ್ನು ಮಳೆಯ ರಭಸಕ್ಕೆ ಒಡ್ಡಿದವು. ಹಿತ ಅನಿಸಿತು. ಮೈಯೆಲ್ಲಾ ತಂಪಗಾಗಿ ಮನಸಿಗೂ ಒಂದು ರೀತಿಯ ಉಲ್ಲಾಸ ಬಂದಂತಾಗಿ ಕಾಲುಗಳಿಗೆ ಕೆರೆಯ ಕಡೆಗೆ ನಡಿ ಎಂದು ಆದೇಶಿಸಿತು. ಇನ್ನೇನು ಒಂದು ಹೆಜ್ಜೆ ಮುಂದೆ ಇಡಬೇಕು ಎನ್ನುವಷ್ಟರಲ್ಲಿ ನನ್ನ ದೇಹ ನಿಧಾನಕ್ಕೆ ಹಿಮದಂತೆ ಕರಗತೊಡಗಿತು. ಕೇವಲ ಒಂದೆ ನಿಮಿಷದಲ್ಲಿ ನನ್ನ ಇಡೀ ದೇಹ ಕರಗಿ ನೀರಾಗಿ ಕೆಳಗೆ ಹರಿಯುತ್ತಿದ್ದ ಮಳೆಯ ನೀರಿನ ಜತೆ ಬೆರೆತು ಹೋಯಿತು. ನೀರಿನ ಜತೆ ನೀರಾಗಿ ಹರಿಯ ತೊಡಗಿದೆ. ನಮ್ಮ ಮನೆಯ ಮುಂದಿನ ಚರಂಡಿಗೆ ಸೇರಿದೆ. ಸಂಜೆಯಿಂದಲು ಮಳೆ ಬಿಡದೆ ಹೊಡೆದದ್ದರಿಂದ ಚರಂಡಿ ಸ್ವಚ್ಛವಾಗಿತ್ತು. ಚರಂಡಿಯಿಂದ ನೇರ ಹಳ್ಳಿಯ ಪಕ್ಕದಲ್ಲೇ ಚೌಡಿ ಗುಡಿಗೆ ಹೊಂದಿಕೊಂಡಂತೆ ಇರುವ ಕುಂಟೆ ಅಥವಾ ಪಾಳು ಬಿದ್ದ ಕಲ್ಯಾಣಿಗೆ ಸೇರಿದೆ. ಅದೇ ಸಮಯಕ್ಕೆ ಆಕಾಶ ಮಿಂಚಿದ್ದರಿಂದ ಚೌಡಿಯ ದರ್ಶನವಾಯಿತು. ಅವಳು ಎಂದಿನಂತೆ ನಾಲಿಗೆಯನ್ನು ಹೊರ ಚಾಚಿ ಸಿಂಹದ ಮೇಲೆ ಕುಳಿತಿದ್ದಳು. ಇಷ್ಟು ದಿವಸ ಧೂಳು ಮೆತ್ತೆ ಮಂಕಾಗಿದ್ದ ಅವಳ ಮನೆ ಮಳೆಯ ಕೃಪೆಯಿಂದ ಸ್ವಲ್ಪ ಹೊಳಪು ಪಡೆದುಕೊಂಡಿತ್ತು. ಪಾಳು ಬಿದ್ದ ಕಲ್ಯಾಣಿ ತುಂಬಿ ಹರಿಯುತ್ತಿತ್ತು. ನಾನು ಹಾಗೆ ಹರಿದು ದೊಡ್ಡ ಹಳ್ಳ ಸೇರಿ ಹುಣಸೆ ತೋಪನ್ನು ದಾಟಿ ಇನ್ನೇನು ಕೆರೆಯ ಮಡಿಲಿಗೆ ಬೀಳಬೇಕು ಎನ್ನುವಷ್ಟರಲ್ಲಿ ದೊಡ್ಡದೊಂದು ಬಂಡೆ ಎದುರಾಯಿತು. ಬಂಡೆಗೆ ಡಿಕ್ಕಿ ಹೊಡೆದ ನಾನು ಅಲ್ಲೆ ಸ್ವಲ್ಪ ಹೊತ್ತು ಗಿರಕಿ ಹೊಡೆದು ನಂತರ ಪ್ರಜ್ಞೆ ಕಳೆದುಕೊಂಡು ಅಲ್ಲೆ ಅಂಗಾತ ಬಿದ್ದು ಬಿಟ್ಟೆ.

* * *

ನಾನು ಕುಳಿತು ಚಲಿಸುತ್ತಿದ್ದ ನಮ್ಮ ಕಂಪನಿಯ ಸ್ವರಾಜ್ ಮಜ್ದಾ ಕ್ಯಾಬ್‍ನ ಚಾಲಕ ರವಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ನನ್ನ ತಲೆ ಡ್ರೈವರ್ ಸೀಟಿನ ಹಿಂಬದಿಗೆ ಬಡಿದು ಎಚ್ಚರಗೊಂಡೆ. ಮುಂದಕ್ಕೆ ಅಷ್ಟುದ್ದಕ್ಕೂ ಒತ್ತರಿಸಿಕೊಂಡು ನಿಂತಿದ್ದ ವಾಹನ ದಟ್ಟಣೆ ಕಣ್ಣಿಗೆ ಕಂಡಿತು. ನನ್ನ ಹಿಂದೆ ಕುಳಿತಿದ್ದ ಕಲೀಗ್ ಮಂಜು ‘ಏನ್ ಆಕಾಶ್ ಒಳ್ಳೆ ನಿದ್ದೆ… ಏನು ಬಾಸ್ ರಾತ್ರಿ ನಿದ್ದೆ ಖೋತಾನ’ ಎನ್ನುತ್ತಾ ಮೀಸೆಯ ಕೆಳಗೆ ತುಂಟ ನಗೆ ಚೆಲ್ಲಿದ. ಅವನ ತುಂಟತನದ ಅರಿವಿದ್ದ ನನಗೆ ಅವನಿಗೆ ಪ್ರತ್ಯುತ್ತರವಾಗಿ ತುಸುವೇ ತುಟಿಯನ್ನು ಅರಳಿಸಿ ಸುಮ್ಮನಾದೆ. ನಮ್ಮ ಕಂಪನಿಯಲ್ಲಿ ಎಚ್.ಆರ್ ಆಗಿರುವ ರಾಣಿ ‘ಆಲ್‍ಮೋಸ್ಟ್ ಎರಡು ಕಿಲೋಮೀಟರ್‍ವರೆಗೂ ಜಾಮ್ ಆಗಿದೆಯಂತೆ… ಇಟ್ ವಿಲ್ ಟೇಕ್ ಮೋರ್ ದೆನ್ ಒನ್ ಹವರ್ ಟು ರೀಚ್ ಯುವರ್ ಸ್ಟಾಪ್… ಇನ್ನು ಸ್ವಲ್ಪ ಹೊತ್ತು ಆರಾಮಾಗಿ ನಿದ್ದೆ ಮಾಡಿ’ ಎಂದಳು. ವಾಹನಗಳ ದಟ್ಟಣೆ ನೋಡಿ ನನಗೂ ಹಾಗೇ ಅನಿಸಿತು. ನಮ್ಮ ಕ್ಯಾಬ್‍ನ ಪಕ್ಕದಲ್ಲೆ ಆಂಬುಲೆನ್ಸ್‍ನ ಸದ್ದು ಮುಗಿಲು ಮಟ್ಟಿತು. ‘ಈ ಟ್ರಾಫಿಕ್‍ನಲ್ಲಿ ಎಲ್ಲಿ ಹೋಗ್ತಾನಿವನು ಸುಮ್ನೆ ನಮಗೆಲ್ಲಾ ಹಿಂಸೆ ಕೊಡೋ ಬದಲು ಆಫ್ ಮಾಡಿ ತೆಪ್ಪಗೆ ಕೂತ್ಕೋಬಾರ್ದೆ’ ಮಂಜು ಕುಳಿತಲ್ಲೆ ವಟಗುಟ್ಟಿದ.

‘ಯಾರಿಗೆ ಏನ್ ಹೆಚ್ಚು ಕಮ್ಮಿಯಾಗಿದೆಯೋ ಏನ್ ಅರ್ಜೆಂಟ್ ಇದೆಯೋ ನಿನಗೇನು ಗೊತ್ತು ಸುಮ್ನೆ ಕುತ್ಕೊಳೋ… ಇವನೊಳ್ಳೆ ಒಂದೋ… ಇನ್ನೊಬ್ಬರಿಗೆ ಕಿರಿಕಿರಿ ಮಾಡ್ತಾನೆ ಇಲ್ಲಾ ತಾನ್ ಕಿರಿಕಿರಿ ಅನುಭವಿಸ್ತಾನೆ… ನಿನ್ನ ಜೀವನ ಪೂರ್ತಿ ಇದೆ ಆಗೋಯ್ತಲ್ಲೋ’ ಎಂದ ರಾಣಿ ಮಂಜನ ಮೇಲೆ ಹರಿ ಹಾಯ್ದಳು.

ಮಂಜನು ತುಸು ಕೆರಳಿ ‘ನಿನಗೇನ್ ಗೊತ್ತೆ ಮಾರಾಯ್ತಿ. ಈ ನನ್ಮಕ್ಕಳು ಸುಮ್ಸುಮ್ನೆ ಸೈರನ್ ಹಾಕ್ಕೊಂಡು ಓಡಾಡ್ತಾರೆ. ಒಂಚೂರು ಕಾಮನ್‍ಸೆನ್ಸ್ ಇಲ್ಲ… ಇಷ್ಟು ಟ್ರಾಫಿಕ್ ಇದೆಯಲ್ಲ ಎಲ್ಲಾನ ಹೋಗಕ್ಕಾಗುತ್ತ!?… ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ಬೇಕು. ನೀನು ಅವರ್ತರಾನೆ… ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಲ್ಲ, ಜೊತೆಗೆ ಕಾಮನ್‍ಸೆನ್ಸ್ ಇಲ್ಲ’ ಎಂದು ಛೇಡಿಸಿದ.

ತುಸು ಗಲಿಬಿಲಿಗೊಂಡ ರಾಣಿ ‘ಓಹೋ ಕಮಾನ್ ಮಂಜು’ ಎನ್ನುತ್ತಾ ಪಕ್ಕದಲ್ಲೇ ಕುಳಿತಿದ್ದ ಸಂತೋಷನ ಕಡೆ ದೃಷ್ಟಿ ನೆಟ್ಟು ‘ಮಂಜು ಈಸ್ ಟೀಚಿಂಗ್ ಕಾಮನ್‍ಸೆನ್ಸ್ ಅಂಡ್ ಪ್ರಾಕ್ಟಿಕಾಲಿಟಿ ಟು ಎಚ್.ಆರ್’ ಎಂದು ನುಡಿದು ಹ್ಹ…ಹ್ಹ…ಹ್ಹ ಎಂದು ತುಸು ವ್ಯಂಗ್ಯವಾಗಿ ನಗ ತೊಡಗಿದಳು.

ಸಂತೋಷ ‘ವಾಟ್… ಎಚ್.ಆರ್ ಶುಡ್ ನೊ ಆಲ್‍ದೀಸ್!?’ ಎಂದು ಅಷ್ಟೇ ವ್ಯಂಗ್ಯವಾಗಿ ನುಡಿದ. ರಾಣಿಯ ಮುಖ ಸಪ್ಪಗಾಯಿತು. ತಲೆ ತಗ್ಗಿಸಿ ಕಣ್ಣುಮುಚ್ಚಿ ನಿದ್ದೆ ಮಾಡುವ ಭಂಗಿಯನ್ನು ಆವಾಹಿಸಿಕೊಂಡು ಸುಮ್ಮನಾದಳು. ಇದರಿಂದ ಮಂಜನ ಅಹಂ ನೆಟ್ಟಗೆ ನಿಗುರಿ ನಿಂತು ‘ರೂಟ್ ನಂಬರ್ ನಾಲ್ಕರಲ್ಲಿರೋರ್ನೇ ನಿನ್ನ ಕೈಲ್ಲಿ ಮ್ಯಾನೇಜ್ ಮಾಡಕ್ಕೆ ಆಗ್ತಿಲ್ಲ ಇನ್ನು… ಇಡೀ ಕಂಪನಿಯ ಎಂಪ್ಲಾಯ್ಸ್‍ನ ಏನ್ ಮ್ಯಾನೇಜ್ ಮಾಡ್ತೀಯ’ ಮತ್ತೆ ಚುಡಾಯಿಸಿದ. ರಾಣಿ ಕಣ್ಣು ಮುಚ್ಚಿಕೊಂಡೆ ‘ನೋ ಕಮೆಂಟ್ಸ್’ ಎಂದು ನುಡಿದು ಸುಮ್ಮನಾದಳು. ಇವರು ಯಾವಾಗಲೂ ಹೀಗೆ. ಸಂಜೆ ಮನೆಗೆ ಹೋಗುವಾಗ ಒಬ್ಬರಿಗೊಬ್ಬರು ಛೇಡಿಸಿಕೊಂಡು ಅಥವಾ ಬೈದುಕೊಂಡೋ ಕಾಲ ತಳ್ಳಿದರೆ ಬೆಳಗ್ಗೆ ವಾಪಸ್ಸು ಬರುವಾಗ ಒಬ್ಬರಿಗೊಬ್ಬರು ಮೆತ್ತಿಕೊಂಡು ಆತ್ಮೀಯವಾಗಿ ಮಾತನಾಡುತ್ತ ಯಾರೋ ಒಬ್ಬರು ತಂದ ತಿಂಡಿಯನ್ನು ಎಲ್ಲರೂ ಹಂಚಿಕೊಂಡು ತಿನ್ನುವ ಬಗೆ ಇದೆಯಲ್ಲ… ಅದು ನಿಜವಾಗಲೂ ಸೋಜಿಗವೆ. ಶೃಂಗಾರವೆಂದರೆ ಅಶ್ಲೀಲವೆಂದೇ ಭಾವಿಸಿರುವ ಮಂಜು ಕ್ಯಾಬಿನ್‍ನಲ್ಲಿರುವ ಬಹುತೇಕರ ಮನಸ್ಸಿನೊಳಗೆ ಬೆಚ್ಚಗೆ ಅಡಗಿ ಕುಳಿತಿರುವ ಶೃಂಗಾರ ಧರಿಸಿರುವ ಬಟ್ಟೆಗಳನ್ನು ಕಳಚಿ ಅಶ್ಲೀಲವೆನಿಸುವಂತೆ ಮಾಡಿ ಬಿಟ್ಟಿದ್ದ. ಅವನ ಹಸಿ ಬಿಸಿ ಜೋಕುಗಳನ್ನು ಹುಡುಗರು ಗಹಗಹಿಸಿ ನಕ್ಕು ಎಂಜಾಯ್ ಮಾಡಿದರೆ, ಹೆಣ್ಣು ಮಕ್ಕಳು ತುಸು ನಾಚುತ್ತಲೋ ಅಥವಾ ದರ್ಟಿ ಮಂಜ ಎಂದು ಕುಡಿನೋಟ ಬೀರಿ ಬಯ್ಯುತ್ತಲೋ ಎಂಜಾಯ್ ಮಾಡುವುದುಂಟು.

ಕಿಟಕಿಯ ಗಾಜನ್ನು ತೆಗೆದು ಆಚೆ ಇಣುಕಿದೆ. ಇಳಿ ಸಂಜೆಯಲ್ಲಿ ಮೋಡಗಳ ದಟ್ಟಣೆ ವಾಹನಗಳ ದಟ್ಟಣೆಯಂತೆ ಜೋರಾಗಿತ್ತು. ಪಕ್ಕದಲ್ಲೇ ಜೆ.ಸಿ.ಬಿಯೊಂದು ಅಂಡರ್‍ಪಾಸ್‍ನ ಕೆಲಸದಲ್ಲಿ ತಲ್ಲೀನವಾಗಿತ್ತು. ರಿಂಗ್ ರೋಡ್‍ನ ಎಲ್ಲಾ ಸಿಗ್ನಲ್‍ಗಳಲ್ಲೂ ಒಂದೋ ಅಂಡರ್‍ಪಾಸ್ ಅಥವಾ ಪ್ಲೈಓವರ್‍ಗಳ ಕೆಲಸ ನಡೆಯುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಮನೆ ತಲುಪುವುದು  ತಡವಾಗುವ ವಿಷಯ ಸಾಮಾನ್ಯವಾಗಿಬಿಟ್ಟಿದೆ. ಐದೂವರೆಗೆ ಕಂಪನಿ ಬಿಟ್ಟರೆ ಮನೆ ತಲುಪುವುದು ಏಳು ದಾಟಿದ ಮೇಲೆಯೆ. ಅಂದರೆ ಹದಿಮೂರು ಕಿ.ಮೀ. ಕ್ರಮಿಸಲು ಬರೋಬ್ಬರಿ ಒಂದೂವರೆ ಗಂಟೆ. ಕೆಲವು ಸಲ ಎರಡು ಗಂಟೆ ದಾಟುವುದೂ ಉಂಟು. ಕ್ಯಾಬಿನೊಳಗಿನ ಸದ್ದು ತಣ್ಣಗಾಗಿ ಎಫ್.ಎಂನ ಸದ್ದು ಪ್ರತಿಧ್ವನಿಸತೊಡಗಿತು. ರೇಡಿಯೋ ಜಾಕಿ ಶ್ರೀರಾಮ್ ‘ಮೆಜೆಸ್ಟಿಕ್‍ನ ದಟ್ಟಣೆಯಲ್ಲಿ ಐ ಕ್ಯಾನ್ ರಿಮೂವ್ ಮೈ ಟೀ ಶರ್ಟ್. ಅದೂ ನನ್ನದೇ ಸ್ಟೈಲಲ್ಲಿ… ಸೋ ಹುಡುಗೀರೆ ಕ್ಯಾನ್ ಯು ಪೀಪಲ್ ಡೂ ಇಟ್… ಐ ಮೀನ್ ಕ್ಯಾನ್ ಯು ಡೂ ಇಟ್ ಬೆಟರ್ ದೆನ್ ಮಿ… ನೀವು ನನಗಿಂತ ಬೆಟರ್ ಅಂತ ಹೇಗೇ ಪ್ರೂವ್ ಮಾಡ್ತೀರಿ…? ಕಾಲ್ ಮಾಡಿ ಆನ್ಸರಿಸಿ ಅಂಡ್ ಗೆಲ್ಲಿ ಆಕರ್ಷಕ ಬಹುಮಾನ’ ಎಂದು ಮಾಡರ್ನ್ ಹುಡುಗಿಯರಿಗೆಲ್ಲಾ ತನ್ನದೇ ಸ್ಟೈಲಿನಲ್ಲಿ ಕಂಗ್ಲೀಷನ್ನು ಉಚ್ಚರಿಸುತ್ತಾ ಸವಾಲು ಹಾಕುತ್ತಿದ್ದ. ವಾಹನಗಳು ಸ್ವಲ್ಪ ಸ್ವಲ್ಪವೆ ಮುಂದಕ್ಕೆ ಚಲಿಸತೊಡಗಿದವು. ನಮ್ಮ ಕ್ಯಾಬ್‍ನ ಡ್ರೈವರ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ಬಲಗೈಯನ್ನು ಮುಂದಕ್ಕೆ ತೋರಿಸಿ ಯಾರನ್ನೊ ಗುದ್ದುವಂತೆ ಕೈಯಾಡಿಸುತ್ತಾ ‘ಥೂ… ಲೋಫರ್ ಸೂಳೆ ಮಗ್ನೆ… ಏನ್ ತಿಂತೀಯ ಹೊಟ್ಟೇಗೆ’ ಎನ್ನುತ್ತಾ ಬುಸುಗುಡತೊಡಗಿದ. ನಾನು ತುಸು ಬಾಗಿ ಮುಂದಕ್ಕೆ  ನೋಡಿ ‘ಯಾಕೆ ರವಿ … ಏನಾಯ್ತು’ ಎಂದು ಕೇಳಿದೆ.

ಅವನ ಸಿಡಿ ಮಿಡಿ ಇನ್ನೂ ಹಾಗೆ ಇತ್ತು. ನನ್ನ ಕಡೆ ತಿರುಗಿ ‘ಈ ಟು ವ್ಹೀಲರ್‍ನವರಿಗೆ ಕೊಬ್ಬು ಜಾಸ್ತಿ ಸಾರ್… ನೋಡಿ ಹೇಗ್ ನುಗ್ತಾರೆ. ಏನಾನ ಹೆಚ್ಚು ಕಮ್ಮಿ ಆದ್ರೆ ಮತ್ತೆ ಸಿಕ್ಕಾಕಿಕೊಳ್ಳೋದು ನಾವೇನೆ… ನೋಡಿ ಸರ್ ಹೆಂಗೆ ಅಡ್ಡಡ್ಡ ನಿಲ್ಸಿದ್ದಾನೆ’ ಎಂದ. ಇಷ್ಟು ಹೊತ್ತು ಸುಮ್ಮನಿದ್ದ ಮಂಜ ‘ಹೋಗ್ಲಿ ಬಿಡು ರವಿ… ಬಿಟಿಎಸ್‍ನವನು ನಿಮ್ಮನ್ನ ನೀವು ಟಿವ್ಹೀಲರ್‍ನವರ್ನ ಅವರು ಸೈಕಲ್‍ನವರನ್ನ ಮತ್ತವರು ನಡಕೊಂಡು ಹೋಗೋರ್ನ ಬೈಕೊಳ್ಳೋದು ಕಾಮನ್ನು’ ಎಂದ. ಅವನ ದನಿಯಲ್ಲಿ ಎಂದಿನ ವ್ಯಂಗ್ಯ ಅಡಗಿತ್ತು.

ರಾಣಿ ‘ವ್ಹಾಟ್ ಮಂಜು… ಯು ಆಲ್ವೇಸ್ ಟಾಕ್ ನೆಗೆಟೀವ್’ ಎಂದು ಚುಡಾಯಿಸಿದಳು. ಮಂಜ ‘ಇದು ನೆಗೆಟೀವ್ ಅಲ್ವೆ ನನ್‍ರಾಣಿ… ಪ್ಯಾಕ್ಟ್. ನಾನು ಯಾವಾಗ್ಲೂ ಪ್ಯಾಕ್ಟ್ಸ್ ಬಗ್ಗೇನೆ ಫ್ಯಾ ಮಾತಾಡೋದು…’ ಎನ್ನುತ್ತಿದ್ದಂತೆ  ರೇಡಿಯೋ ಜಾಕಿ ಶ್ರೀರಾಮ್‍ನ ಸವಾಲಿಗೆ ಉತ್ತರ ನೀಡಲು ಒಂದು ಹುಡುಗಿ ತಯಾರಾಗಿದ್ದಳು. ಮಂಜ ಎಲ್ಲರಿಗೂ ಸುಮ್ಮನಿರುವಂತೆ ಸನ್ನೆ ಮಾಡಿದ. ಅವಳು ‘ಮಿಸ್ಟರ್ ಶ್ರೀರಾಮ್… ಐ ಕ್ಯಾನ್ ರಿಮೂವ್ ಮೈ ಟೀ ಶರ್ಟ್ ಇನ್ ದ ಮೆಜೆಸ್ಟಿಕ್ ಕ್ರೌಡ್. ಇಫ್ ಯು ರಿಮೂವ್… ನಿಮ್ಮ ಕಡೆ ನಾಲ್ಕೈದು ಜನ ನೋಡಬಹುದಷ್ಟೆ. ಇಫ್ ಐ ಡೂ ಇಟ್… ನನ್ನ ಕಡೆ ಸಾವಿರಾರು ಜನ ನೋಡ್ತಾರೆ. ಸೋ… ಐ ಕ್ಯಾನ್ ಅಟ್ರಾಕ್ಟ್ ಕ್ರೌಡ್ಸ್ ಅಟೆನ್ಷನ್ ಬೆಟರ್ ದೆನ್ ಯು… ಸೋ ನಾನೆ ನಿಮಗಿಂತ ಬೆಟರ್’ ಎಂದು ನುಡಿಯುತ್ತಿದ್ದಂತೆ ಮಂಜ ‘ಐ ಲೈಕ್ ಇಟ್… ಐ ಲೈಕ್ ಇಟ್… ಹುಡುಗೀರು ಅಂದ್ರೆ ಹೀಗಿರ್ಬೇಕು… ನಮ್ಮ ಕ್ಯಾಬಲ್ಲೂ ಇದ್ದಾರೆ ಗೌರಮ್ಮಗೋಳು’ ಎಂದು ನುಡಿಯುತ್ತಿದಂತೆ ರಾಣಿ ಅವನ ತಲೆಯ ಹಿಂಬದಿಗೆ ಒಂದು ಏಟು ಕೊಟ್ಟು ‘ಕಾಯ್ತಾ ಇರ್ತಾನೆ… ಪುಣ್ಯಾತ್ಮ’ ಎಂದು ನುಡಿದಳು.

ಸಂತೋಷ ‘ಲೇ ಮಂಜ ಆ ತರಾ ಆಸೆ ಏನೂ ಇಟ್ಕೋಬೇಡ್ವೋ… ನಿನ್ನ ಆಸೆ ಈಡೇರಿಲ್ಲಾ ಅಂದ್ರೆ ಸತ್ಮೇಲೆ ಅಂತರಾತ್ಮ ಆಗ್ಬಿಡ್ತೀಯ’ ಎಂದು ದನಿ ಕೂಡಿಸಿದ. ಆ ಕ್ಯಾಬಿನಲ್ಲಿ ಎಂದಿನ ಗಲಾಟೆ ಮತ್ತೆ ಶುರುವಾಯಿತು. ಮಳೆ ಮೋಡಗಳು ಇದ್ದದ್ದರಿಂದ ಗಾಳಿಯ ರಭಸ ಜಾಸ್ತಿಯಾಗಿ ಪಕ್ಕದಲ್ಲೆ ಅಂಡರ್‍ಪಾಸ್‍ನ ಕೆಲಸ ನಡೆಯುತ್ತಿರುವುದರಿಂದ ಮಣ್ಣಿನ ಕಣಗಳು ಗಾಳಿಯಲ್ಲಿ ಬೆರೆತು ಕ್ಯಾಬಿನೊಳಗೆ ನುಗ್ಗತೊಡಗಿದವು. ತೆರೆದಿದ್ದ ಕಿಟಕಿಯ ಗಾಜನ್ನು ಎಳೆದು ಮುಚ್ಚಿದೆ. ಸ್ವಲ್ಪ ಹೊತ್ತಿಗೆ ತುಸುವೆ ತೂಕಡಿಕೆ ಬಂದ ಹಾಗಾಯಿತು. ನಿಧಾನಕ್ಕೆ ಕಣ್ಣು ಮುಚ್ಚಿದೆ.

* * *

ನಿದ್ದೆಯಿಂದ ಎದ್ದು ಹೊರಬಂದೆ. ಬೆಳಕಾಗಿತ್ತು. ಇನ್ನೂ ಬಲಿಯದ ಬಿಸಿಲು ರಾತ್ರಿಯ ಮಳೆಯಲ್ಲಿ ತೊಯ್ದಿದ್ದ ಮನೆಯ ಗೋಡೆಗಳನ್ನು ಬೆಚ್ಚಗಿರಿಸಲು ಯತ್ನಿಸುತ್ತಿತ್ತು. ಹಳ್ಳಿಯ ಪೂರ ಮಳೆನೀರು ಚರಂಡಿಗಳಲ್ಲಿ ಇನ್ನೂ ಭೋರ್ಗರೆದು ಹರಿಯುತ್ತಿತ್ತು. ನಮ್ಮ ಮನೆಯ ಮೇಲೆ ಸಾಕಷ್ಟು ನೀರು ನಿಂತಿದ್ದರಿಂದ ಒಳಗೆ ಎರಡು ಮೂರು ಕಡೆ ತೊಟ್ಟಿಕ್ಕುತ್ತಿತ್ತು. ಅಪ್ಪ ಆಗಲೆ ಮನೆಯ ಮೇಲೆ ಇದ್ದ. ಮನೆಯ ಮೇಲೆ ಬಿದ್ದ ನೀರು ಹರಿಯಲು ಇದ್ದ ಒಂದೂವರೆ ಅಡಿಯಷ್ಟು ಉದ್ದದ ಕೊಳವೆಗೆ ಏನೋ ಸಿಕ್ಕಿಹಾಕಿಕೊಂಡಿರಬಹುದು. ಅದನ್ನು ತೆಗೆಯಲು ಪ್ರಯತ್ನಿಸುತ್ತಿದ್ದ. ಮುಂದಿನ ಮನೆ ವೆಂಕಣ್ಣ ‘ಅಯ್ಯೋ… ನೆನ್ನೆ ಅರ್ಜೆಂಟಲ್ಲಿ ಅರ್ಧಂಬರ್ದ ಆದ ರಾಗೀನ ಗುಡ್ಡೆ ಹಾಕಿ ಕವರ್ ಎಳೆದು ಬಂದಿದ್ರೂ ಎಲ್ಲಾ ಕೊಚ್ಕೊಂಡು ಹೋಗಿದೆ’ ಎನ್ನುತ್ತಾ ಅವರ ಮನೆಯ ಒಳಗೆ ನಡೆದ. ರಾಗಿಯ ತೆನೆಗಳು ಊರನಡುವಿನ ದಾರಿಗಳಲ್ಲಿ ಅಲ್ಲಲ್ಲಿ ಹರಡಿಕೊಂಡು ಬಿದ್ದಿದ್ದವು. ಅದರೊಳಗೆ ನಮ್ಮವೂ ಇರಬಹುದಲ್ಲವೆ ಎಂದು ಯೋಚಿಸುತ್ತಿರುವಂತೆಯೇ ಮನೆಯ ಮೇಲಿಂದ ಕೊಳವೆಯ ಮುಖೇನ ನೀರು ಬರ್ರನೆ ಸುರಿಯತೊಡಗಿತು. ಮಳೆಯ ಬಿರುಸಿಗೆ ಒಂದೆರಡು ಮನೆಯ ಗೋಡೆಗಳು ಉರುಳಿ ಬಿದ್ದಿದ್ದವು. ಹಾಗೇ ಊರಿಂದ ಆಚೆ ನಡೆದೆ. ಡಾಂಬರು ರಸ್ತೆ ಮುಕ್ಕಾಲು ಪಾಲು ಕೊಚ್ಚಿಕೊಂಡು ಹೋಗಿತ್ತು. ಕಟಾವು ಮಾಡದ ಹೊಲಗಳು ಮಕಾಡೆಮಲಗಿಕೊಂಡು ನಿಂತ ನೀರನಲ್ಲಿ ಮುಳುಗಿ ಹೋಗಿದ್ದವು. ಅಲಲ್ಲಿ ಒಂದೆರಡು ಇಲಿಗಳು ಈಜುತ್ತಾ ಸಾಗಿ ರಸ್ತೆ ಅಥವಾ ದಿಣ್ಣೆ ಸಿಕ್ಕಿದ ತಕ್ಷಣ ಮೈ ವದರಿಕೊಂಡು ಓಡುತ್ತಲಿದ್ದವು ಕೆಲವು ಕಡೆ ರಸ್ತೆಯೇ ಕಾಣದಾಗಿ ನೀರಿನಲ್ಲಿ ಮುಳುಗಿ ಹೋಗಿತ್ತು. ಇಷ್ಟು ಮಳೆ ಹೊಡೆದಿದೆ ಎಂದ ಮೇಲೆ ಇನ್ನು ಕೆರೆ ಅದೆಷ್ಟು ಕೋಡಿಬಿದ್ದಿದೆಯೋ ಎಂದು ಯೋಚಿಸುತ್ತಾ ಕೆರೆಯ ಕಡೆಗೆ ನಡೆಯ ತೊಡಗಿದೆ. ಕೆಲವು ಕಡೆ ರಸ್ತೆಯ ಮೇಲೆ ಮೊಣಕಾಲಿನವರೆಗೂ ನೀರು ನಿಂತಿದ್ದರಿಂದ ನನ್ನ ನಡಿಗೆಯ ವೇಗ ನಾನು ಅಂದುಕೊಂಡ ಹಾಗೆ ಆಗುತ್ತಿರಲಿಲ್ಲ. ಬರೋಬ್ಬರಿ ಹದಿನೆಂಟು ವರ್ಷಗಳ ನಂತರ ಕೆರೆ ಕೋಡಿ ಬಿದ್ದಿರೋದು. ಈ ಸಾರಿ ಊರವರು ಭರ್ಜರಿ ಹಬ್ಬವನ್ನೆ ಮಾಡಿಯಾರು ಎಂದು ಯೋಚಿಸುತ್ತಾ ನಡೆಯುವಷ್ಟರಲ್ಲಿ ಕೆರೆ ಬಂದು ಬಿಟ್ಟಿತ್ತು.

ಅರೆ! ಕೆರೆಯನ್ನೊಮ್ಮೆ ನೋಡಿ ದಂಗಾಗಿ ಹೋದೆ. ಕೆರೆಯ ಪಾತ್ರದಲ್ಲಿ ಒಂದು ಚೂರೂ ನೀರಿರÀಲಿಲ್ಲ. ಅಕ್ಷರಶಃ ಬಣಗುಡುತ್ತಿತ್ತು. ಸರ್ಕಾರದವರು ಕೆರೆಯ ಪಾತ್ರದಲ್ಲಿ ಹಾಕಿಸಿದ್ದ ಜಾಲಿಮರಗಳು ಬಲಿಯುತ್ತಿರುವ ಬಿಸಿಲಿನಲ್ಲಿ ಹೊಳೆಯುತ್ತಿದ್ದವು. ಒಂದು ಮೂಲೆಯಲ್ಲಿ ಎಂಟ್ಹತ್ತು ಜನ ಜಾಲಿಮರಗಳನ್ನು ಕತ್ತರಿಸಿ ನೆಲಕ್ಕೆ ಉರುಳಿಸುತ್ತಿದ್ದುದು ಕಂಡಿತು. ಹತ್ತಿರ ಹೋಗಿ ವಿಚಾರಿಸಿದೆ. ಸರ್ಕಾರದವರು ಇತ್ತೀಚೆಗೆ ತಿರ್ಮಾನ ತೆಗೆದುಕೊಂಡ ಕೆರೆಗಳ ಹೂಳೆತ್ತುವ ಕಾರ್ಯಕ್ರಮದ ಮೊದಲನೆಯ ಕೆಲಸವಾಗಿ ಜಾಲಿಮರಗಳನ್ನು ಹೊಡೆಯುತ್ತಿರುವುದಾಗಿ ತಿಳಿಸಿದರು. ನೀರು ಭೋರ್ಗರೆಯುವ ಸದ್ದು ಇನ್ನೂ ನನ್ನ ಕಿವಿಗೆ ಅಪ್ಪಳಿಸುತ್ತಲೇ ಇದೆ. ಆದರೆ ಕೆರೆ ಬಣಗುಡುತ್ತಿದೆ. ಒಂದು ಕಾಲದಲ್ಲಿ ನನ್ನನ್ನೇ ಕೆರೆಗೆ ಹೋಲಿಸಿಕೊಂಡು ಖುಷಿ ಪಟ್ಟಿದ್ದೆನಲ್ಲ. ಬೀಗಿದ್ದೆನಲ್ಲ! ಏನೂ ಮಾತು ಹೊರಡದೆ ಹಿಂದಡಿ ಇಟ್ಟೆ. ಜಾಲಿ ಮುಳ್ಳು ಅಂಗಾಲಿಗೆ ಚುಚ್ಚಿಕೊಂಡಿತು. ಕೆರೆಯ ತನಕ ಮಳೆನೀರಿನಲ್ಲಿ ತೇವಗೊಂಡು ನೆನೆದಿದ್ದ ಅಂಗಾಲಿನೊಳಗೆ ಜಾಲಿ ಮುಳ್ಳು ಸಲೀಸಾಗಿ ತೂರಿಕೊಂಡಿತು. ನೋವಿನಿಂದ ಚೀರಿದೆ…

* * *

ಕ್ಯಾಬ್‍ನ ಬ್ರೇಕ್ ಹಾಕಿದ  ಹಾಗಾಯ್ತು. ‘ಡ್ರೈವರ್ ಸರ್ ಸ್ಟಾಪ್ ಬಂತು… ಇಳೀರಿ’ ಎಂದ. ಆಚೆ ಮಳೆ ಬಿರುಸಾಗಿ ಬೀಳತೊಡಗಿತು. ಸಂತೋಷ ‘ಇನ್ನೂ ಸ್ವಲ್ಪ ಮುಂದೆ ಹೋಗಿ ನಿಲ್ಸು ರವಿ… ಅಲ್ಲಿ ಶೆಲ್ಟರ್ ಇದೆ ಅಲ್ಲೆ ಇಳ್ಕೊತೀವಿ’ ಎಂದ.

ರಾಣಿ ‘ಏ ಮಂಜು ಆಕಾಶನಿಗೆ ವಿಷಯ ತಿಳಿಸ್ರೋ…’ ಎಂದಳು.

‘ಹೇ… ಅವನ್ಯಾಕ್ ಕರೆಯೋದು ಸುಮ್ನೆ… ವೇಸ್ಟು. ಒಂದು ಪೆಗ್ ಹಾಕಲ್ಲ ಎಂಜಾಯ್ ಮಾಡೋಕೆ ಬರೋಲ್ಲ…’ ಎಂದು ಮಂಜ ನುಡಿಯುತ್ತಿದ್ದಂತೆ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ನಿರ್ಮಲ ‘ಮಂಜು… ನಿಮ್ಮ ದೃಷ್ಟೀಲಿ ಎಂಜಾಯ್ ಮಾಡೋದು ಅಂದ್ರೆ ಏನು .. ಕ್ಯಾನ್ ಯು ಎಕ್ಸ್‍ಪ್ಲೆಯಿನ್ ಇಟ್’ ತುಸು ತಲೆ ಮೇಲೆ ಎತ್ತಿ ಮಂಜನ ಕಡೆಗೆ ದೃಷ್ಟಿನೆಟ್ಟು ನುಡಿದಳು. ಮಂಜ ‘ಇಷ್ಟೊತ್ತೂ ಸುಮ್ಮನಿದ್ದೋಳು ಈವಾಗ …’ ಎಂದು ಏನೋ ಹೇಳಲು ಯತ್ನಿಸುತ್ತಿದಂತೆ ಮಂಜನ ಮಾತನ್ನು ತುಂಡರಿಸಿ ‘ಆಕಾಶ್ ದಿಸ್ ವೀಕೆಂಡ್ ವಿ ಆರ್ ಗೋಯಿಂಗ್ ಟು ಕ್ಲಬ್ ಕಮಾನ… ಪರ್ ಹೆಡ್ ಥೌಸಂಡ್ ಫೈವ್ ಹಂಡ್ರೆಡ್ ರುಪೀಸ್… ಓಕೆ’ ಎನ್ನುತ್ತಾ ‘ಇಳ್ಕೊಳ್ಳಿ… ಇಳ್ಕೊಳಿ ಸ್ಟಾಪ್ ಬಂತು. ಮಳೆ ಬೀಳ್ತಿದೆ ಮನೇಗೆ ಹೇಗ್ ಹೋಗ್ತೀರಿ… ಆಟೋ ಹಿಡ್ಕೊಂಡು ಶೇರ್ ಮಾಡ್ಕೊಳಿ’ ಎಂದು ಪಟಪಟನೆ ನುಡಿಯ ತೊಡಗಿದಳು. ಕ್ಯಾಬ್ ಶೆಲ್ಟರ್‍ನ ಹತ್ತಿರ ನಿಂತಿತು. ಸಂತೋಷ’ ‘ಎಸ್… ವಿ ಆಲ್ವೇಸ್ ಡು ದಟ್’ ಎಂದು ಇಳಿಯ ತೊಡಗಿದ. ಇಬ್ಬರೂ ಇಳಿದು ಶೆಲ್ಟರ್‍ನ ಒಳಹೊಕ್ಕು ಆಟೋಗಾಗಿ ಕಾಯತೊಡಗಿದೆವು. ಬೀದಿ ದೀಪದ ಬೆಳಕಿನಲ್ಲಿ ಮಳೆಹನಿಗಳು ಹೊಳೆಯುತ್ತಾ ನರ್ತಿಸುತ್ತಾ ಬಿದ್ದರೆ ಇಲ್ಲೇ ಬೀಳಬೇಕು ಎಂಬಂತೆ ಡಾಂಬರು ರಸ್ತೆಯ ಮೇಲೆ ಬಿದ್ದು ವಯ್ಯಾರದಲ್ಲಿ ಹರಿಯ ತೊಡಗಿದವು. ನನ್ನ ಕಿವಿಯಲ್ಲಿ ಮಾತ್ರ ಅಪ್ಪ ಯಾವಾಗಲೂ ನುಡಿಯುವ ‘ಅದೇನ್ ಬೆಳೀತಾರೇಂತ ಅಲ್ಲಿ ಮಳೆ ಬೀಳುತ್ತೋ’ ಎಂಬ ಮಾತು ರಿಂಗಣಿಸತೊಡಗಿತು.

*****ಚೀಮನಹಳ್ಳಿ ರಮೇಶಬಾಬು

ಹುಟ್ಟಿದ್ದು 10-7-1974, ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಚೀಮನಹಳ್ಳಿಯಲ್ಲಿ. ಹೆಬ್ಬರಿ, ಬೂರಗಮಾಕಲಹಳ್ಳಿ, ಚಿಂತಾಮಣಿ ಮತ್ತು ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. ‘ಪ್ರಶ್ನೆ ಮತ್ತು ದೇವರು’ ಹಾಗೂ ‘ಎರಡು ಲೋಟಗಳು’ ಪ್ರಕಟಿತ ಕವನಸಂಕಲನಗಳು. ಪ್ರಜಾವಾಣಿ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆಗಳಲ್ಲಿ ಬಹುಮಾನ. ‘ಪ್ರಶ್ನೆ ಮತ್ತು ದೇವರು’ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಅರಳು ಸಾಹಿತ್ಯ ಪ್ರಶಸ್ತಿ’ ಹಾಗೂ ಮಂಡ್ಯದ ಯುವ ಬಳಗದ ‘ಕೆಎಸ್‍ನ ಕಾವ್ಯ ಪ್ರಶಸ್ತಿ’ಗಳು ಸಂದಿವೆ. ಸದ್ಯ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
prashasti
10 years ago

ಸಖತ್ತಾಗಿದೆ ರಮೇಶಣ್ಣ…
ಕ್ಯಾಬ್ ಪ್ರಸಂಗ ನಿಜಜೀವನದಲ್ಲೇ ನಡೀತಿದ್ಯೇನೋ ಅನ್ನಿಸಿತು..
ಒಂದು ಪ್ರಸಂಗ ಎಷ್ಟನ್ನೆಲ್ಲಾ ನೆನಪಿಸುತ್ತೆ ಸಾರ್..
ಇದನ್ನೋದ್ತಾ ಓದ್ತಾ ನಾನು ಈ ತಿಂಗಳ ಮೊದಲ ವಾರದ ದಾಖಲೆ ಮಳೆಯಲ್ಲಿ ಬಿಎಮ್ಟೀಸಿ ಬಸ್ಸಲ್ಲಿ ಸಿಕ್ಕಾಕೋಂಡಿದ್ದು ನೆನ್ಪಾಯ್ತು. ಕೆರೆ ಕೋಡಿ ಅಂದಾಕ್ಷಣ ನಮ್ಮೂರ ಕೋಡಿ ನೆನ್ಪಾಯ್ತು..ಕೆರೆ ಬಣಗುಡ್ತಿದ್ದು ಸರಿ. ಬಿದ್ದ ಮಳೆ ನೀರೆಲ್ಲಾ ಹೋಗಿದ್ದೆಲ್ಲಿಗೆ ಅನೋ ಅಂಶ ಇನ್ನೊಂದು ಸ್ವಲ್ಪ ಇದ್ರೆ ಚೆನ್ನಾಗಿರ್ತಿತ್ತು ಅನಿಸ್ತು ಸಾರ್.. ನಿಮ್ಮ ಸಂಕಲನಗಳ ಸುದ್ದಿ ಓದಿ ಖುಷಿ ಆಯ್ತು.. ಅಭಿನಂದನೆಗಳು ಸಾರ್ 🙂

cheemanahalli
cheemanahalli
10 years ago
Reply to  prashasti

thanks ri

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಬಯಲು ಸೀಮೆಯ ನಮ್ಮಂಥವರಿಗೆ ಮಳೆಯೆಂಬುದೇ ಅಪರೂಪದ ವಿದ್ಯಮಾನ ! ನಿಮ್ಮ ಕಥೆಯನ್ನೋದಿದಾಗ ಹೊಸ ಅನುಭವವಾಯಿತು. ಶುಭದಿನ!

cheemanahalli
cheemanahalli
10 years ago

thank u hipparagi

Venkatesh
Venkatesh
10 years ago

ತುಂಬಾ ಚೆನ್ನಾಗಿದೆ !  ಒಂದು ಶಾರ್ಟ್ ಮೂವಿ ನೋಡಿದಂತಾಯಿತು 

Gaviswamy
10 years ago

ಕಥೆ ಇಷ್ಟವಾಯಿತು . ಪರಸ್ಪರ ವೈರುದ್ಧ್ಯಗಳ ದರ್ಶನ ಮಾಡಿಸುತ್ತದೆ. ಗ್ರಾಮೀಣ ಜನರ ನೋವು, ಆತಂಕಗಳನ್ನು ಮಾರ್ಮಿಕವಾ
ಗಿ ತೆರೆದಿಡುತ್ತದೆ. ಕ್ಯಾಬಿನೊಳಗೆ ಬರುವ ಮಂಜನ ಪಾತ್ರ ಬದುಕಿನ ಸತ್ಯವನ್ನು ಹೇಳುತ್ತಿದೆ ಅನ್ನಿಸುತ್ತದೆ .
ಧನ್ಯವಾದಗಳು.
 

Santhoshkumar LM
10 years ago

good one!

Raghunandan K
10 years ago

Nice…

shanthi k a
shanthi k a
10 years ago

chennaagide

9
0
Would love your thoughts, please comment.x
()
x