ಮಳೆ ಎನ್ನುವುದು ಒಂಥರಾ ಆಕ್ಸಿಡೆಂಟ್!: ಹೃದಯಶಿವ ಅಂಕಣ

 
ತುಂಟ ಕವಿಯ ಗಾಂಭೀರ್ಯತೆ
 
ನವ್ಯ ಕಾಲದಲ್ಲಿ ಹೊಸಕಾವ್ಯವೆಂದರೆ ಕೇವಲ ದುರಂತಮಯವಾದದ್ದು, ಕ್ಲಿಷ್ಟವಾದದ್ದು, ಸಿನಿಕತನದ್ದು ಎಂಬಂತಹ ತಿಳುವಳಿಕೆ ರೂಢಿಯಲ್ಲಿತ್ತು. ಉತ್ಸಾಹದಿಂದ ಜೀವಂತ ಕಾವ್ಯ ರಚಿಸಿದ ಬಿ. ಆರ್. ಲಕ್ಷ್ಮಣ್ ರಾವ್ ಕಳೆದ ಮೂರು ದಶಕಗಳಲ್ಲಿ ತಮ್ಮದೇ ಶೈಲಿಯ ಕಾವ್ಯ ರಚಿಸಿದವರು ಎಂದು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಮ್ಯಂ ಪ್ರಸ್ತಾಪಿಸಿರುತ್ತಾರೆ.
 
ಹೌದು, ಬಿ.ಆರ್.ಎಲ್. ಮೇರೆಗಳನ್ನು ದಾಟಿ ನಿಂತವರು. ಸಾಹಿತ್ಯ ಸರೋವರದಲ್ಲಿ ತಮ್ಮದೇ ವಿನೂತನ ಶೈಲಿಯ ತರಂಗಗಳನ್ನು ಸೃಷ್ಟಿಸಿದವರು. ಗಂಭೀರ ವಿಷಯಗಳನ್ನು ಸರಳವಾಗಿ ಕಾವ್ಯಕ್ಕೆ ಇಳಿಸಿ ಗಮನ ಸೆಳೆದವರು. ತುಸು ಪೋಲಿತನದ ಸಾಹಿತ್ಯದಿಂದ ಕಚಗುಳಿ ಇಡುವ ನೀಡುವ ಮೂಲಕ ಯುವಪೀಳೆಗೆಯ ಅಚ್ಚುಮೆಚ್ಚಿನ ಕವಿಯಾದಂತವರು. ತಮ್ಮ ಗಂಭೀರ ಕಾವ್ಯಕೃಷಿಯ ಜೊತೆಗೆ ನೈಜಭಾವನೆಗಳುಳ್ಳ ಭಾವಗೀತೆಗಳನ್ನು ರಚಿಸಿ ಪ್ರೇಮಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸಿದವರು. 'ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು' ಎಂಬ ಸಾಲುಗಳ ಮೂಲಕ ಮಾತೃಪ್ರೇಮವನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿದವರು. ಕೋಲಾರ ಸಮೀಪದ ಚಿಂತಾಮಣಿಯಲ್ಲಿ ಜನಿಸಿದ ಇವರಿಗೆ ಕಾವ್ಯದ ನಂಟು ತೀರಾ ಆಕಸ್ಮಿಕ. 
 
 
ಜೀವನೋಪಾಯಕ್ಕಾಗಿ ತನ್ನ ತಂದೆಯವರ ಮಾರುತಿ ಡಿಜಿಟಲ್ ಸ್ಟುಡಿಯೋದಲ್ಲಿ ಕ್ಯಾಮರಾ ಹಿಡಿದರಾದರೂ, ಆ ಕ್ಯಾಮರಾ ಕಣ್ಣು ಹರಿದಿದ್ದು ಮನುಷ್ಯ ಸಂಬಂಧಿ ಭಾವನೆಗಳ ಸುತ್ತಮುತ್ತ. ಜೊತೆಗೆ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶೈಕ್ಷಣಿಕ ಆಂದೋಲನ ಉಂಟು ಮಾಡಿದ ಹಿರಿಮೆ ಇವರದು. ಓದಿದ್ದು ಇಂಗ್ಲೀಷ್, ಹಿಂದಿ ಮತ್ತು ಸಂಸ್ಕೃತ. ಪಾಶ್ಚಾತ್ಯ, ಭಾರತೀಯ ಸಾಹಿತ್ಯವನ್ನು ಅರಗಿಸಿಕೊಂಡು ತಮ್ಮದೇ ಲೇಖನಿಯಿಂದ ಕಾವ್ಯಧಾರೆಯನ್ನು ಹರಿಸಲು ಶುರು ಮಾಡಿದರು.
 
ತಂದೆಯವರ ಇಚ್ಛೆಗೆ ಬಗ್ಗದ ಬಿ.ಆರ್.ಎಲ್. ನಡೆದದ್ದೇ ದಾರಿ, ಹಿಡಿದದ್ದೇ ಹಠ. ಪುಂಡ ಗೆಳೆಯರ ತಂಡ ಕಟ್ಟಿಕೊಂಡು ಚಿಂತಾಮಣಿಯ ಸಂದಿಗೊಂದಿಗಳಲ್ಲಿ ಗುಂಡು ಹಾಕುತ್ತ, ಸಿಗರೇಟು ಸೇದುತ್ತಾ, ಜಾಲಿ ಬಾರಿನಲ್ಲಿ ಗಾಂಡಲೀನಳ ಕಂಡು ಬೆರಗಾಗುತ್ತ ತನ್ನ ಸಾಂಪ್ರದಾಯಕ ಜಗತ್ತಿನಲ್ಲಿ ಇದ್ದುಕೊಂಡೇ ಹಸಿ ಹಸಿ ಕಚ್ಚಾ ಲೋಕದ ಒಳಹೊರಗನ್ನು ಅವಲೋಕಿಸುತ್ತಾ ಮುನ್ನಡೆದವರು. ಇವೆಲ್ಲದರ ಪರಿಣಾಮವೇ ೧೯೭೧ ರಲ್ಲಿ ಹೊರತಂದ 'ಗೋಪಿ ಮತ್ತು ಗಾಂಡಲೀನ' ಪದ್ಯಗಳ ಗುಚ್ಛ. ಬಿ.ಆರ್.ಎಲ್. ರವರ ಗೋಪಿ ಮತ್ತು ಗಾಂಡಲೀನ ಕೂಸಿಗೆ ಕುಲಾವಿ ಹಾಕುವ ನಿಟ್ಟಿನಲ್ಲಿ ಪಿ. ಲಂಕೇಶ್ ಮುನ್ನುಡಿ ಬರೆದಿರುತ್ತಾರೆ. ಮುನ್ನುಡಿ ಎನ್ನುವುದು ಪುಸ್ತಕಕ್ಕೆ ಹಿಡಿದ ಕನ್ನಡಿಯಾಗಬೇಕು ಎಂಬ ಉದ್ಗಾರ ಎಲ್ಲೆಡೆಯೂ ಕಂಡು ಬಂದರೂ ಪಿ. ಲಂಕೇಶ್‌ರವರು ತಮ್ಮ ಮುನ್ನುಡಿಯಲ್ಲಿ ಪುಸ್ತಕಕ್ಕೆ ಬದಲಾಗಿ ಲಕ್ಷ್ಮಣರಾಯರ ಒಳಮನಸ್ಸಿಗೆ, ತಪನೆಗಳಿಗೆ, ಪೋಲಿತನಕ್ಕೆ ಕನ್ನಡಿ ಹಿಡಿದಿದ್ದಾರೆ. "ಕುವೆಂಪು ಮತ್ತು ಪುಟ್ಟಪ್ಪ ಇಬ್ರೂ ಒಬ್ರೇನಾ ಸಾರ್? ಎನ್ನುತ್ತಿದ್ದ ನಿಮಗೆ ನಾನು ಏನು ಹೇಳಬೇಕು, ಎಲ್ಲೆಂದರಲ್ಲಿ ಸಿಕ್ಕಾಗಲೆಲ್ಲ ಮುನ್ನುಡಿ ಬರೆದುಕೊಡುವಂತೆ ಪೀಡಿಸುತ್ತಿದ್ದ ನಿಮಗೆ ಯಾವ ರೀತಿ ಉತ್ತರಿಸಬೇಕಿತ್ತೊ ನಾ ಕಾಣೆ" ಎಂಬಿತ್ಯಾದಿ ಮಾತುಗಳನ್ನು ಲಂಕೇಶ್ ರವರು ತಾವು ಬರೆದ ಮುನ್ನುಡಿಯಲ್ಲಿ ಜಾಹೀರುಗೊಳಿಸಿದ್ದಾರೆ. ಬಿ.ಆರ್.ಎಲ್. ಅವರೇ ಹೇಳುವಂತೆ ಪಿ. ಲಂಕೇಶ್ ಮತ್ತು ವೈಯೆನ್ಕೆ ಅವರಿಗಿಷ್ಟದ ಲೇಖಕರಂತೆ. ಹೀಗೆ ತಾನು ಒಬ್ಬ ಕವಿಯಾಗಬೇಕು ತನ್ನ ಲೇಖನಿಯ ಮೂಲಕ ಅಂತರಾಳದ ಪ್ರಶ್ನೋತ್ತರಗಳಿಗೆ ಕಾವ್ಯರೂಪ ಕೊಟ್ಟು ಕನ್ನಡಿಗರೊಂದಿಗೆ ಸಂವಹಿಸಿಬೇಕೆಂಬ ತುಡಿತ ಯುವ ಲಕ್ಷ್ಮಣರಾಯರಿಗೆ ಇದ್ದಂತಹ ಅಂಶ, ಉತ್ಸಾಹ ಇಂದಿಗೂ ಕಾಣುತ್ತದೆ. ಗೋಪಿ ಮತ್ತು ಗಾಂಡಲೀನ ನೋಡಿ ಲಂಕೇಶರು ಯಾವಾಗ ಬೈದು, ಹೊಗಳಿ ಮುನ್ನುಡಿ ಬರೆದುಕೊಟ್ಟರೋ ಅಲ್ಲಿಂದ ಶುರುವಾಯಿತು ನೋಡಿ ಲಕ್ಷ್ಮಣ ರಾಯರ ಸರಣಿ ಕಾವ್ಯೋತ್ಸವ!
 
ಟುವಟಾರ, ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೋ, ಭಾರತ ಸಿಂಧು ರಶ್ಮಿ (ಹನಿಗವಿತೆಗಳು), ನನ್ನಗೀತೆ, ಎಡೆ, ಇವಳು ನದಿಯಲ್ಲ, ನನಗ್ಯಾಕೋ ಡೌಟು – ಹೀಗೆ ನಿರಂತರವಾಗಿ ಕಾವ್ಯಝರಿ ಹರಿಯುತ್ತ ಹೋಯಿತು. ಕೇವಲ ಪದ್ಯದಗಾಳಕ್ಕೆ ಸಿಕ್ಕ ಮೀನಾಗದೆ ಗದ್ಯ, ಪ್ರಬಂಧ, ಕಾದಂಬರಿ, ಸಣ್ಣ ಕತೆ, ನಾಟಕಗಳಲ್ಲು ಕೈಯಾಡಿಸಿದ್ದಾರೆ. ಇವರ ಬಹುತೇಕ ಕವಿತೆಗಳು ಇತರ ಭಾಷೆಗಳಿಗೂ ತರ್ಜುಮೆಗೊಂಡು ಮೆಚ್ಚುಗೆ ಗಳಿಸಿವೆ. ಇವರ ಸಾಧನೆಗೆ ತಲೆದೂಗಿ 'ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಒಳಗೊಂಡಂತೆ ಅನೇಕ ಬಹುಮಾನಗಳು ಬಂದಿವೆ. 
 
ಮೊನ್ನೆ ಚಿಂತಾಮಣಿಯ ಅವರ ಮನೆಗೆ ನಾನು ಹೋಗಿದ್ದಾಗ ಮನೆಯ ತುಂಬಾ ಪ್ರಶಸ್ತಿ-ಫಲಕಗಳ ಹಬ್ಬ. ಅವೆಲ್ಲವನ್ನು ನೋಡಿ ಮುಗುಳ್ನಗುತಿತ್ತು ಗೋಡೆಗಂಟಿಕೊಂಡಿದ್ದ ಬಿ.ಆರ್.ಎಲ್. ಭಾವಚಿತ್ರ. ಪ್ರತ್ಯಕ್ಷ ಮೂರ್ತಿ ಲಕ್ಷ್ಮಣರಾಯರು ದೋಸೆಗೆ ಚಟ್ನಿ ತರಲೆಂದು ಅಡುಗೆ ಕೋಣೆಗೆ ಹೋಗಿದ್ದರು. ಆ ದೋಸೆಯನ್ನು ನನ್ನ ತಟ್ಟೆಗೆ ಹಾಕಿದ್ದವರು ಗಿರಿಜಾ ಲಕ್ಷ್ಮಣರಾಯರು ಎಂದು ಹೇಳುವುದನ್ನು ಮರೆಯಲು ಸಾಧ್ಯವೇ? ಎಷ್ಟು ಸರಳ ವ್ಯಕ್ತಿ ಅವರು ಗೊತ್ತ? ಎಷ್ಟು ನೇರವಂತಿಕೆ ಅವರದು ಗೊತ್ತ? 'ಬಿಡಲಾರೆ ನಾ ಸಿಗರೇಟು, ಹುಡುಗಿ ನಿನ್ನಂತೆಯೇ ಅದು ಥೇಟು' ಎಂದು ಬರೆದ ಬಿ.ಆರ್. ಎಲ್. ಜೊತೆ ಸಿಗರೆಟು ಸುಡುವ ದೃಶ್ಯವನ್ನು ಕಾಣುವ ಭಾಗ್ಯ ನೇರವಾಗಿ ಲಭ್ಯಸಿದ್ದು ಒಂದು ಬಗೆಯ ವಿಚಿತ್ರ ಆನಂದ ನೀಡಿದ್ದರಲ್ಲಿ ಅಚ್ಚರಿ ಪಡಬೇಕಿಲ್ಲ. ೬೫ರ ಪ್ರಾಯದಲ್ಲೂ ಲಕ್ಷ್ಮಣರಾಯರು ಗುಂಡು ಹಾಕಲು ಕೂತರೆ ಇವತ್ತಿನ ಪಡ್ಡೆ ಹುಡುಗರು ನಿಬ್ಬೆರಾಗಬೇಕು. ವಿಸ್ಕಿಯನ್ನು ಗುಟುಕಿಸುತ್ತಾ, ಸಿಗರೇಟನ್ನು ಸುಡುತ್ತಾ ತಾವೇ ರಚಿಸಿದ ಭಾವಗೀತೆಗಳನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಗುಂಡಿನ ನಶೆಗಿಂತ ನನಗೆ ಅವರ ಹಾಡುಗಳ ನಶೆಯೇ ಜಾಸ್ತಿಯಾಯಿತು. ಅಂತಹ ಮಾದಕತೆ, ಆರ್ಧ್ರತೆ, ಆತ್ಮೀಯತೆ ಅವರ ಹಾಡುಗಳಲ್ಲಿ ಇತ್ತು. 'ದೇವರೇ ಆಗಾಧ ನಿನ್ನ ಕರುಣೆಯ ಕಡಲು' ಹಾಡನ್ನು ಅವರ ಕಂಠದಲ್ಲಿ ಕೇಳಿದಾಗಲ್ಲಂತು ಅರಿವಿಲ್ಲದಂತೆ ರೆಪ್ಪೆ ತೇವಗೊಂಡಿತ್ತು. ಆ ಹಾಡಿನಲ್ಲಿ ಇರುವ ಒಂದು ಬಹುಮುಖ್ಯ ಸಾಲಾದ 'ನರನಿಗೆ ನರನ್ನನ್ನೆ ಬಿಟ್ಟೆ ಬೇಟೆಯಾಡಲು' ಎಂಬುದನ್ನು ಅವರು ಹಾಡುತ್ತಿದ್ದಂತೆಯೇ ಅವರ ಜೀವನಾನುಭವವನ್ನು ಅವರ ಕನ್ನಡಕದೊಳಗಿನ ಕಣ್ಣು ಹೊರಚೆಲ್ಲಿತತ್ತು. ನಿಜವಾಗಲೂ ಅದೊಂದು ಮರೆಯಲಾಗದ ಭೇಟಿ, ಪಾನಗೋಷ್ಠಿ ಅರ್ಥಾತ್ ಕಾವ್ಯಗೋಷ್ಠಿ! 
 
ಲಕ್ಷ್ಮಣರಾಯರ ಒಂದು ಗೀತೆ 'ಬಾ ಮಳೆಯೇ ಬಾ' ರಮೇಶ್ ಅರವಿಂದ ನಿರ್ದೇಶನದ 'ಆಕ್ಸಿಡೆಂಟ್' ಚಿತ್ರದಲ್ಲಿ ರಿಕ್ಕಿಕೇಜ್ ಸಂಗೀತದಲ್ಲಿ ಸೋನು ನಿಗಮ್ ಕಂಠದ ಮೂಲಕ ಚಿತ್ರೆಗೀತೆಯಾಗಿದ್ದು, ಹಾಡು ಹಿಟ್ ಆಗಿದ್ದು ಸಂತೋಷ ತರದೇ ಇರುತ್ತದೆಯೇ? 
 
 
ರಮೇಶ್ ಎಂಬ ಬಹುಮುಖ ಪ್ರತಿಭೆ
 
ರಮೇಶ್ ಅರವಿಂದ್ ಕನ್ನಡದ ಕಮಲ್‌ಹಾಸನ್ ಎಂದು ಕೆಲವರು ಹೇಳುವುದುಂಟು. ಅಬ್ಬರವಿಲ್ಲದ ಅಭಿನಯ, ನಾಲ್ಕು ಪುಟ ಸಂಭಾಷಣೆಯನ್ನು ಒಮ್ಮೆಲೇ ನಿವಾಳಿಸಿ ಬಿಸಾಡುವ ಒಂದು ರಿಯಾಕ್ಷನ್, ಎದುರಿಗಿರುವ ಪಾತ್ರಧಾರಿಯ ಸಂಭಾಷಣೆಗೆ, ಭಾವನೆಗೆ ಪ್ರತಿಯಾಗಿ ಚುರುಕಾಗಿ ಸ್ಪಂದಿಸುವ ಕಲಾವಂತಿಕೆ ರಮೇಶ್ ಅವರಿಗೆ ಹುಟ್ಟಿನಿಂದಲೇ ಬಂದಿದೆ. ಕ್ಯಾಮರಾ ಎದುರಿಗೆ ನಟಿಸಿದರೂ ಪಾತ್ರದ ಕಳೆಯನ್ನು ನೈಜವಾಗಿ ಕಟ್ಟಿಕೊಡಬಲ್ಲ ಸಹಜ ಅಭಿನಯ ಅವರದು. ನಿರ್ದೇಶಕರ ತುಡಿತ ಮಿಡಿತಗಳನ್ನು ಅರ್ಥ ಮಾಡಿಕೊಂಡು ಸಲೀಸಾಗಿ ಸೂಕ್ತ ನ್ಯಾಯ ಒದಗಿಸಿಬಲ್ಲ ಜಾಣ್ಮೆಯ ರಹಸ್ಯ ಅವರ ನಿರ್ದೇಶಕನಾದ ನಂತರ ಬಯಲಾಗಿದೆ. ಅವರೊಳಗೊಬ್ಬ ನಿರ್ದೇಶಕನಿರುವ ಸತ್ಯ ಕನ್ನಡಿಗರಿಗೆ ಗೊತ್ತಾಗಿದೆ. ಒಬ್ಬ ನಟ, ನಿರ್ದೇಶಕನ ಕಲ್ಪನೆಯ ಪಾತ್ರಕ್ಕೆ ಜೀವ ತುಂಬುವವನಾದರೆ, ಒಬ್ಬ ನಿರ್ದೇಶಕ ಪಾತ್ರಗಳನ್ನು ಸೃಷ್ಟಿ ಮಾಡಿ ಆ ಪಾತ್ರದ ಭಾವನೆಗಳನ್ನು ನಟನೊಬ್ಬನಿಂದ ಹೊರತೆಗೆಯಲು ಶತಾಯ ಗತಾಯ ಪ್ರಯತ್ನಿಸುತ್ತಾನೆ. ಈ ನಿಟ್ಟಿನಲ್ಲಿ ರಮೇಶ್ ಒಳ್ಳೆಯ ನಟರಷ್ಟೇ ಅಲ್ಲ ಒಳ್ಳೆಯ ನಿರ್ದೇಶಕರೆಂದು ಸಾಬೀತುಗೊಳಿಸಿದ್ದಾರೆ. 
 
 
ಒಂದು ಕಾಲದಲ್ಲಿ ದಿ|| ಶಂಕರ್‌ನಾಗ್ ರವರು ನಟಿಸಿ, ನಿರ್ದೇಶಿಸಿದ್ದ ಆಕ್ಸಿಡೆಂಟ್ ಪ್ರೇಕ್ಷಕರ ಮನ ಗೆದ್ದಿತ್ತು. ಅದರಲ್ಲಿನ ಚಿತ್ರಕತೆ, ಚಿತ್ರಕತೆಯಲ್ಲಿನ ಕೂತುಹಲ, ಕೂತುಹಲದಲ್ಲಿನ ಹೃದಯ ಬಡಿತ ಯಾರೂ ಮರೆಯಲು ಸಾಧ್ಯವಿಲ್ಲ. ಅಂತಹ ಯಶಸ್ವಿಚಿತ್ರದ ಶೀಷಿಕೆಯನ್ನು ಇಟ್ಟುಕೊಂಡೇ ರಮೇಶ್ ಅರವಿಂದರವರು ಆಕ್ಸಿಡೆಂಟ್ ಚಿತ್ರವನ್ನು ನಿರ್ದೇಶಿಸಿದರು. ತಮ್ಮ ಚಿತ್ರದಲ್ಲಿ ಬಿ.ಆರ್.ಎಲ್. ರವರ 'ಬಾ ಮಳೆಯೇ ಬಾ' ಗೀತೆಯನ್ನು ಬಳಸಿಕೊಂಡರು. ಹಾಡು ಸೂಪರ್ ಹಿಟ್ ಆಯಿತು. ಸಾವಿರಾರು ಮೊಬೈಲ್‌ಗಳಲ್ಲಿ ರಿಂಗ್ ಟೋನ್ ರೂಪ ಪಡೆಯಿತು. ಆ ಗೀತೆಯನ್ನು ಚಿತ್ರಕ್ಕೆ ಬಳಸಿಕೊಂಡ ಸಾರ್ಥಕತೆಯ ಖುಷಿ ರಮೇಶ್ ಅವರಿಗೂ ಇದ್ದೇ ಇರುತ್ತದೆ ಅಲ್ಲವೇ?  
 
ಬಾ ಮಳೆಯೇ ಬಾ ಹಾಡು ಚಿತ್ರಗೀತೆಯಾದ ಇಂದಿನ ಕತೆಯನ್ನು ಲಕ್ಷ್ಮಣ ರಾಯರ ಹತ್ತಿರವೇ ಕೇಳಿದೆ. ಅವರ ಉತ್ತರ ಹೀಗಿತ್ತು : ರಮೇಶ್ ನನಗೆ ಫೋನ್ ಮಾಡಿ "ಸಾರ್ ನಿಮ್ಮ ಬಾ ಮಳೆಯೇ ಬಾ ಗೀತೆಯನ್ನು ನಮ್ಮ ಆಕ್ಸಿಡೆಂಟ್ ಚಿತ್ರಕ್ಕೆ ಬಳಸಿಕೊಳ್ಳುತ್ತೇವೆ. ನಿಮ್ಮ ಅನುಮತಿ ಬೇಕಿತ್ತು" ನಾನು ಹೇಳಿದೆ, "ಸಂತೋಷ. ಆದರೆ, ಸಾಹಿತ್ಯದ ಯಾವ ಸಾಲುಗಳನ್ನು ಬದಲಾಯಿಸದೆ ಯಥಾ ರೀತಿ ಬಳಸಿಕೊಳ್ಳಬೇಕು"- ಹೀಗೆ ಉತ್ತರಿಸಿದಾಗ ಇನ್ನೊಂದು ಪ್ರಶ್ನೆ ಎಸೆದೆ, "ಗುರುಗಳೇ, ಮುಂದಿನ ದಿನಗಳಲ್ಲಿ ನಿಮ್ಮ ಹಾಡುಗಳನ್ನು ಇತರ ನಿರ್ದೇಶಕರು ತಮ್ಮ ಚಿತ್ರಗಳಿಗಾಗಿ ಬಳಸಿಕೊಳ್ಳಲು ಇಚ್ಛಿಸಿದರೆ?". ಅವರ ಉತ್ತರ ಹೀಗಿತ್ತು, "ನನಗೆ ಯಾವ ಅಭ್ಯಂತರವು ಇಲ್ಲ. ಒಳ್ಳೆಯ ಕತೆಯಾಗಿರಬೇಕು, ಆ ಕತೆಯ ಸನ್ನಿವೇಶಕ್ಕೆ ನನ್ನ ಗೀತೆ ಹೊಂದಬೇಕು". ನಂತರ ಮತ್ತೊಂದು ಮಾತನ್ನು ಸೇರಿಸಿದರು. ಅದೇನೆಂದರೆ, "ಸಂಗೀತ ನಿರ್ದೇಶಕರ ಟ್ಯೂನಿಗೆ ಹಾಡು ಬರೀರಿ ಅಂದ್ರೆ ನನ್ಗೆ ಆಗಲ್ಲ. ಇಷ್ಟವೂ ಇಲ್ಲ. ಬೇಕಾದರೆ ನನ್ನ ಸಾಹಿತ್ಯದ ಬಾವಕ್ಕೆ ಧಕ್ಕೆ ಬರದಂತೆ ರಾಗಸಂಯೋಜನೆ ಮಾಡಿಕೊಳ್ಳಲಿ" ಎಂದು. ಆ ಸಂದರ್ಭದಲ್ಲಿ ತಮಗೂ, ಸಿ. ಅಶ್ವಥ್ ಮತ್ತು ಮೈಸೂರು ಅನಂತ ಸ್ವಾಮಿ ಅವರಿಗೂ ಇದ್ದ ಸ್ನೇಹ ಸಂಬಂಧವನ್ನು, ಅಭಿರುಚಿ ಹೊಂದಾಣಿಕೆಯನ್ನು ಹಂಚಿಕೊಂಡರು. ಅವರ ಮಾತು ನಿಜವೆನಿಸಿತು. ನಮ್ಮ ಚಿತ್ರನಿರ್ಮಾಣದ ವ್ಯವಸ್ಥೆ ದಿನೇ ದಿನೆ ಯಾಂತ್ರಿಕವಾಗುತ್ತ ಸಾಗುತ್ತಿದ್ದಂತೆಯೇ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆಯೇನೋ ಎಂಬ ಶಂಕೆ ನನ್ನನ್ನೂ ಕಾಡಿತು. ಕವಿಯೊಬ್ಬ ಬರೆದ ಗೀತೆಗೆ ರಾಗಸಂಯೋಜನೆ ಮಾಡಿದರೆ ಕವಿತೆಯ ಸಮೃದ್ಧ ಭಾವ ಶೇಕಡಾ ೧೦೦ ರಷ್ಟು ಉಸಿರಾಡುತ್ತದೆ. 
 
 
ಲಕ್ಷ್ಮಣರಾಯರ ಮಳೆಗಾಲ
 
ಕವಿ ಹೃದಯ ಸದಾ ಆರ್ದ್ರವಾಗಿರುತ್ತದೆ. ನಮ್ಮ ಸುತ್ತಮುತ್ತಲಿನ ಚಿಕ್ಕಚಿಕ್ಕ ವಸ್ತುಗಳೂ, ಚಿಕ್ಕಚಿಕ್ಕ ಘಟನೆಗಳೂ ಅಕ್ಷರ ರೂಪ ಪಡೆದು ಕಾವ್ಯವಾಗುವುದರಲ್ಲಿ ಆ ಹೃದಯ ನೆರವಾಗುತ್ತದೆ. ಅದರಲ್ಲೂ ಪ್ರೀತಿ, ಪ್ರೇಮ, ವಿರಹ, ಕಾಯುವಿಕೆ ಇಂತಹ ವಿಚಾರಗಳಂತೂ ಕವಿಯನ್ನು ತೆಕ್ಕೆಗೆಳೆದುಕೊಂಡು ಭಾವಗಳ ರಸದೌತಣವನ್ನೇ ಉಣಬಡಿಸುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ 'ಬಾ ಮಳೆಯೇ ಬಾ' ಗೀತೆ. ತಾನು ತನ್ನ ನಲ್ಲೆಯನ್ನು ಎಷ್ಟು ಸಿರಿಯಸ್ಸಾಗಿ ಪ್ರೀತಿಸುತ್ತಾನೆಂದು, ಆ ಪ್ರೀತಿಗೆ ಪ್ರಕೃತಿಯು ಹೇಗೆ ಸಹಕರಿಸಬೇಕೆಂದು ಕೇಳಿಕೊಳ್ಳುವ ಒಬ್ಬ ನಿರ್ಮಲ ಮನಸ್ಸಿನ ಪ್ರೇಮಿಯ ಬೇಡಿಕೆಗಳು ಈ ಗೀತೆಯಲ್ಲಿ ತುಂಬಿಕೊಂಡಿದೆ.
 
ತನ್ನವಳು ಬರುವಾಗ ಮಳೆ ಬಿರುಸಾಗಿ ಬಾರದಿರೆಂದೂ, ಅವಳು ಬಂದೊಡನೆ ಬಿರುಸಾಗಿ ಸುರಿಯಬೇಕೆಂದು ಕೇಳಿಕೊಳ್ಳುತ್ತಾನೆ. ಆ ಬಿರುಸನ್ನು ಕಂಡು ಹಿಂತಿರುಗಿ ಹೋಗಬಾರದು ಎಂಬ ಹಪಾಹಪಿ ಕವಿಯದ್ದು. ತನ್ನ ನಲ್ಲೆಯ ಬರುವಿಗಾಗಿ ಕಾದು ಕುಳಿತ ಕವಿಯು 'ಓಡು ಕಾಲವೇ ಓಡು' ಎಂದು ಬೇಡಿಕೊಳ್ಳುತ್ತಾನೆ. ಹಾಗೆಯೇ ಅವಳು ಬಂದ ನಂತರ 'ನಿಲ್ಲು ಕಾಲವೇ ನಿಲ್ಲು' ಎನ್ನುತ್ತಾನೆ. ಇದರ ಹಿಂದಿನ ಆಶಯ ಸದಾ ಅವಳು ತೆಕ್ಕೆಯಲ್ಲೇ ಇರಬೇಕು ಎಂಬುದು. ತನ್ನದೆಯ ಆಸೆಗಳ ತನ್ನವಳ ಹೃದಯಕ್ಕೆ ತಲುಪಿಸೆಂದು ಕವಿ ಗಾಳಿಯಲ್ಲಿ ಕೇಳಿಕೊಳ್ಳುತ್ತಾನೆ. ಅವಳ ಮೃದುವಾದ ಪಾದಗಳು ಕಲ್ಲುಗಳ ತಾಕದಂತೆ, ತಾಕಿ ನೋವಾಗದಂತೆ, ಹೂವುಗಳನ್ನು ಹಾಸು ಅವಳು ಬರುವ ದಾರಿಯಲ್ಲಿ ಎಂದು ಪ್ರಕೃತಿ ಮಾತೆಯಲ್ಲಿ ವಿನಂತಿಸಿಕೊಳ್ಳುತ್ತಾನೆ. ಹಾಗೆಯೇ ಮುಂದುವರಿದರೆ, ತನ್ನ ನಲ್ಲೆಯ ರೂಪವನ್ನು ನೋಡಬಯಸಿದ ಕವಿ ದೀಪದ ಮೊರೆ ಹೋಗುತ್ತಾನೆ. ಆ ಬೆಳಕಿನಲ್ಲಿ ತನ್ನ ನಲ್ಲೆಯ ರೂಪದೈಸಿರಿಯನ್ನು ನೋಡಿ, ಆ ಸೌಂದರ್ಯಕ್ಕೆ ಮಾರುಹೋಗಬಯಸುತ್ತಾನೆ. ಅಷ್ಟು ಮಾತ್ರವಲ್ಲ; ಅವಳ ರೂಪವನ್ನು ಕಂಡೊಡನೆ 'ಆರು ದೀಪವೇ ಆರು' ಎಂದು ಒತ್ತಾಯಿಸುತ್ತಾನೆ. ಕಾರಣವಿಷ್ಟೇ, ಅವಳ ತೋಳುಗಳಲ್ಲಿ ಕಾಲ ಕಳೆವ ಆಸೆ. ಬೆಳಕಿದ್ದರೆ ತಾನೆಲ್ಲಿ ನಾಚಿಕೊಳ್ಳುತ್ತಾಳೊ ಎಂಬ ಅನುಮಾನ. ಕವಿ ಮತ್ತು ಪ್ರಕೃತಿಯ ನಡುವಣ ಮಾತುಕತೆ ಇಷ್ಟಕ್ಕೆ ನಿಲ್ಲುವುದಿಲ್ಲ. ಪ್ರೇಮಿಗಳ ಸೀಮೆಯಲ್ಲಿ ನಿದ್ದೆಗೆ ಅವಕಾಶವಿಲ್ಲ. ನೀನು ಹೊರಟು ಹೋಗು ನಿದ್ದೆಯೇ, ನಮ್ಮ ಮಿಲನ ಗಂದರ್ವ ವೈಭೋಗದಂತೆ ಎಂದು ಆರ್ಭಟಿಸುತ್ತಾನೆ.
 
ಈ ಮೇಲಿನ ಬಾವಗಳಲ್ಲಿ ಕವಿಯ ತನ್ನವಳ ಮೇಲಿನ ಒಲವಿನ ಉತ್ತುಂಗ, ರಸಿಕತೆಯ ಉನ್ಮಾದ ಕಾಣುತ್ತದೆ. ಕವಿ ಬಿ.ಆರ್. ಲಕ್ಷ್ಮಣ ರಾಯರು ಈ ಗೀತೆಯನ್ನು ಬರೆದಾಗ ಎಷ್ಟು ಭಾವುಕರಾಗಿದ್ದಾರೆ ಎಂದು ಊಹಿಸಿಕೊಳ್ಳಿ. 
 
ಇಷ್ಟಕ್ಕೂ ಇಷ್ಟು ಅಗಾಧವಾದ ಭಾವನೆಗಳನ್ನುಳ್ಳ ಈ ಗೀತೆಯ ಸಾಹಿತ್ಯ ಅನುವಾದಿತ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಒಂದು ಅದ್ಭುತ ಶಾಯರಿಯ ಪ್ರೇರಣೆಯಿಂದ ಮೂಡಿ ಬಂದ ಸಾಲುಗಳಿವು. ಈ ಗೀತೆಯ ಮೂಲಸಾಹಿತ್ಯದ ಕೆಲವು ಸಾಲುಗಳು ಇಲ್ಲಿವೆ ನೋಡಿ:
 
ಆಯೆ ಬಾರೀಶ್ ಜರ ಥಾಮ್  ಕೆ ಬರಸ್ 
ಜಬ್ ಮೇರ ಯಾರ್ ಆ ಜಾಯೇ ತೋ
ಜಮ್ ಕೆ ಬರಸ್ 
ಪೆಹಲೆ ನ ಬರಸ್ ಕಿ ವೋ ಆನಾ ಸಾಕೆ 
ಫಿರ್ ಇತನಾ ಬರಸ್ ಕಿ ವೋ ಜನಾ ಸಾಕೆ 
 
ಇಷ್ಟಾಗಿಯೂ ಇಂಥದೊಂದು ಗೀತೆಯನ್ನು ಕನ್ನಡಿಗರಿಗೆ ಕೇಳಿಸಿದ, ಓದಿಸಿದ ಬಿ ಆರ್ ಲಕ್ಷ್ಮಣರಾಯರಿಗೆ ಅಭಿನಂದನೆ ಸಲ್ಲಿಸಲೇಬೇಕಾಗುತ್ತದೆ. 
 
ಇತ್ತೀಚಿಗೆ ಹೆಚ್ಚಾಗಿ ಬರೆಯದಿರುವ ಬಿ ಆರ್ ಎಲ್ ರಿಂದ ಸಾಧ್ಯವಾದಷ್ಟು ಹೊಸ ಹೊಸ ಕವನಸಂಕಲನಗಳು, ಭಾವಗೀತೆಗಳು ಹೊರಬರಬೇಕಾಗಿದೆ. ಮಾಗಿದ ಕವಿಯ ಕಾವ್ಯ, ಎಳೆಯ ಕವಿಗಳಿಗೆ ಆಮ್ಲಜನಕವಿದ್ದಂತೆ ಅನ್ನುವ ಸತ್ಯ ಅವರಿಗೂ ಗೊತ್ತಿರುತ್ತದೆ ಎಂದು ಭಾವಿಸುತ್ತೇನೆ. ಈ ಮೂಲಕ ಗುರುಗಳು ನಮ್ಮಂಥ ಯುವಕವಿಗಳಿಗೆ ಹೊಸದೊಂದು ಕಾವ್ಯಮಾರ್ಗವನ್ನು ತೋರಿಸಬೇಕಾಗಿದೆ. ಲಂಕೇಶರ ಮಾರ್ಗದರ್ಶನದಲ್ಲಿ ಬೆಳೆದ ಬಿ ಆರ್ ಎಲ್ ರವರ ಮಾರ್ಗದರ್ಶನ ಇವತ್ತಿನ ಯುವಕವಿಗಳಿಗೆ ತುರ್ತಾಗಿ ಬೇಕಾಗಿದೆ. 
 
ಇವತ್ತಿನ ಸಂದರ್ಭಕ್ಕೆ ಎಂತಹ ಕಾವ್ಯವನ್ನು ಸೃಷ್ಟಿಸಬೇಕು ಅನ್ನುವುದರ ಕುರಿತು ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ನಿರಂತರವಾಗಿ ಅಂಕಣಗಳನ್ನು ಬರೆಯುವುದರ ಮೂಲಕ ಈ ಕೆಲಸ ಇಂಥವರಿಂದ ಜರುಗಬೇಕಿದೆ. ಲಕ್ಷ್ಮಣರಾಯರಲ್ಲಿದು ನನ್ನ ಆತ್ಮೀಯ ಕೋರಿಕೆ. ಪ್ರಶಸ್ತಿಗಳು, ಸಮಗ್ರಕಾವ್ಯ, ಅಭಿನಂದನಾ ಗ್ರಂಥಗಳು ಬಂದ ನಂತರ ಹಿರಿಯಸಾಹಿತಿಗಳು ಯಾವಾಗಲೂ ಸಭೆ, ಸಮಾರಂಭ, ಸನ್ಮಾನ, ಪಾರ್ಟಿ – ಇಂಥವುಗಳಲ್ಲೇ ಮುಳುಗಿ ಹೋಗಿರುತ್ತಾರೆಂಬ ಆರೋಪ ಬಿ ಆರ್ ಎಲ್ ಮೂಲಕ ಸುಳ್ಳಾಗಲಿ ಎಂದು ಆಶಿಸುತ್ತೇನೆ. ನನ್ನ ಪ್ರಿಯಕವಿಗಳು ನನ್ನ ನಿರೀಕ್ಷೆಯನ್ನು ಹುಸಿಗೊಳಿಸಲಾರರೂ ಎಂಬ ನಂಬಿಕೆ ನನಗಿದೆ. ಅವರ ಹೊಸ ಕಾವ್ಯದ ನಿರೀಕ್ಷೆಯಲ್ಲಿ ನಾನೂ ಸೇರಿದಂತೆ ನನ್ನಂಥ ಅನೇಕರಿದ್ದೇವೆ.ಬನ್ನಿ ಗೀತೆಗೆ ಹೋಗೋಣ:
 
'ಬಾ ಮಳೆಯೇ ಬಾ'
 
ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ 
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ 
ನಲ್ಲೆ, ಹಿಂತಿರುಗಿ ಹೋಗದಂತೆ
 
ಓಡು, ಕಾಲವೇ, ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೆ ನಿಲ್ಲು
ತೆಕ್ಕೆ ಸಡಿಲಾಗದಂತೆ 
ನಮ್ಮ ತೆಕ್ಕೆ ಸಡಿಲಾಗದಂತೆ
 
ಬೀಸು, ಗಾಳಿಯೆ, ಬೀಸು, ನನ್ನೆದೆಯ ಆಸೆಗಳ 
ನಲ್ಲೆ ಹೃದಯಕೆ ತಲುಪಿಸು
ಹಾಸು, ಹೂಗಳ ಹಾಸು, ಸಖಿ ಬರುವ ದಾರಿಯಲಿ
ಕಲ್ಲುಗಳ ತಾಗದಂತೆ
ಪಾದ ಕಲ್ಲುಗಳ ತಾಗದಂತೆ
 
ಬೀರು, ದೀಪವೆ, ಬೀರು, ನಿನ್ನ ಹೊಂಬೆಳಕಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ 
ನಲ್ಲೆ ನಾಚಿ ನೀರಾಗದಂತೆ
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Shiva Shankar J
10 years ago

HI super neevu bareda ondhondhu sahithigalu namage ista agide

Santhoshkumar LM
10 years ago

ಹೌದು, ಅವರ "ನರನಿಗೇ ನರನನ್ನೆ ಬಿಟ್ಟೆ ಬೇಟೆಯಾಡಲು" ಹಾಗೂ "ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗೆಳೆಯಲು" ಸಾಲುಗಳು ಬಹಳ ಇಷ್ಟ.
 
ಲೇಖನ ಇಷ್ಟವಾಯಿತು thank you

Praveen
Praveen
10 years ago
ಹೃದಯಶಿವ
ಹೃದಯಶಿವ
10 years ago

ಎಲ್ಲರಿಗೂ ಧನ್ಯವಾದಗಳು…

cheemanahalli
cheemanahalli
10 years ago

nangyako doutu kaavya alla adu nataka. matte neevu e lekhana baredu estu varsha aitu/? BRL eegirodu bengaluralli

K.M.Vishwanath
10 years ago

ಆ ಮಾತು , ಆಗಿನ ಸಾಲುಗಳು , ಅಂದಿನ ಭಾವನೆ ಯಾವತ್ತು ಮರಳಿ ಬರುವುದಿಲ್ಲಾ ಅನಿಸುತ್ತದೆ. ಹಿರಿಯರು ಕೊಡುವ ಆ ಆಹ್ಲಾದ ಈಗಿನವರಿಂದ ಸಾಧ್ಯವಿಲ್ಲಾ ಅನಿಸುತ್ತದೆ. ನೀವು ಆರಿಸಿಕೊಂಡ ಕವಿಗಳಲ್ಲಿ ಅವರ ಪದ್ಯಗಳ ಭಾವದಲ್ಲಿ ಅನುಭವವಿದೆ. ಅವರು ಸಿಗರೇಟ್ ಹಾನಿಕಾರಕ ಎಂದು ಅನುಭವಿಸಿ ಹೇಳಿದವರು ಈಗಿನ ನವಸಾಹಿತಿಗಳು ತಿಳಿಯಬೇಕಾದ ಸಂಗತಿಗಳನ್ನು ಬರೆದಿರುವಿರಿ. ಇನ್ನು ರಮೇಶ ಅರವಿಂದ ರವರ ಬಗ್ಗೆ ಉತ್ತಮ ಮಾಹಿತಿ ಇದೆ 
ಧನ್ಯವಾದಗಳು 

ಹೃದಯಶಿವ
ಹೃದಯಶಿವ
10 years ago

ಹೌದು.ಅವರೀಗ ಪದ್ಮನಾಭನಗರದಲ್ಲಿ ವಾಸಿಸುತ್ತಿದ್ದಾರೆ.ಈ ಲೇಖನ ಸುಮಾರು ಹಿಂದೆ ಬರೆದಿದ್ದು.'ನನಗ್ಯಾಕೋ ಡೌಟು' ನಾಟಕವಹುದು;ಪ್ರತ್ಯೇಕವಾಗಿ ಹೇಳಬೇಕಿತ್ತು. ನಿರಂತರವನ್ನೂ ಸೇರಿಸಬೇಕಿತ್ತು ಮಿಸ್ ಆಗಿದೆ ಕ್ಷಮಿಸಿ.

Rajendra B. Shetty
10 years ago

ವಾಹ್ ಅನ್ನಲೇ? ತುಂಬಾ ಸುಂದರ ಲೇಖನ. ಒಬ್ಬ ಕವಿಯನ್ನು, ಅವರ ಕವನದ ಪರಿಚಯವನ್ನು ಬಹು ಚೆನ್ನಾಗಿ ಬರೆದಿದ್ದೀರಿ. ಯಾಕೋ ಈ ಸಲ ಪಂಜು ನೋಡುವುದು ಬೇಡ ಅಂದು ಕೊಂಡಿದ್ದೆ. ಹಾಗೇನಾದರೂ ಮಾಡಿದ್ದರೆ, ಒಂದು ಉತ್ತಮ ಲೇಖನ "ಮಿಸ್" ಮಾಡಿಕೊಳ್ಳುತ್ತಿದ್ದೆ. ಒಂದು ಕವನವನ್ನು ಯಾವ ಯಾವ ದೃಷ್ಟಿಯಿಂದ ಕಾಣಬಹುದು ಎಂದು ಈ ಲೇಖನದಿಂದ ಕಲಿತೆ. ಧನ್ಯವಾದಗಳು. (ನನಗೆ ಗೊತ್ತಾಗದಂತೇ ನಾನು ನಿಮ್ಮ "ಫ್ಯಾನ್" ಆಗುತ್ತಿದ್ದೇನೆ, ಹೃದಯ ಶಿವರವರೆ)

8
0
Would love your thoughts, please comment.x
()
x