ಕವನ ಸಂಕಲನ: ಮಳೆಬಿಲ್ಲು
ಲೇಖಕರು: ಶಿವಶಂಕರ ಕಡದಿನ್ನಿ
ಪ್ರಕಾಶಕರು: ತಾಯಿ ಪ್ರಕಾಶನ, ಮಾನ್ವಿ
ಮೊ.ನಂ: 7899211759
ಪುಸ್ತಕಾವಲೋಕನ: ಯಲ್ಲಪ್ಪ ಎಮ್ ಮರ್ಚೇಡ್
ಕನ್ನಡ ಸಾಹಿತ್ಯ ಪರಂಪರೆಯನ್ನು ಗತಕಾಲದಲ್ಲೂ ಬರೆದು ಪೋಷಿಸಿಕೊಂಡು ಬಂದ ಕವಿ ಗಣವನ್ನೇ ಕಾಣಬಹುದು. ಆಧುನಿಕ ಯುಗದಲ್ಲಿಯೋ ಕಾಣಬಹುದು, ಸಾಹಿತ್ಯ ರಚಿಸುವ ಕವಿ ಬಳಗಕ್ಕೆ ಕೊರತೆ ಇಲ್ಲ, ಕನ್ನಡ ಸಾಹಿತ್ಯ ಕೃಷಿಯಲ್ಲಿ ಅನೇಕ ಸಾಹಿತಿಗಳು ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ, ಮತ್ತು ಬೆಳೆಯುತ್ತಲಿದ್ದಾರೆ, ಆ ಸಾಲಿನಲ್ಲಿ ಬೆಳೆಯುವ ಸಿರಿ ಮೊಳೆಕೆಯಲ್ಲಿ ಕಾಣುವಂತೆ ಯುವಕವಿ “ಶಿವಶಂಕರ ಕಡದಿನ್ನಿ” ಹೆದ್ದೊರೆ ನಾಡೆಂದೆ ಖ್ಯಾತಿ ಗಳಿಸಿದ ರಾಯಚೂರು ಜಿಲ್ಲೆಯು ಕಂಡ ಅಪ್ಪಟ ಗ್ರಾಮೀಣ ಪ್ರತಿಭೆ, ಪಕ್ಕ ಗ್ರಾಮೀಣ ನೈಜ ನೆಲದ ಸೊಗಡಿನ ಮಡಿಲಲ್ಲಿರುವ ಕಡದಿನ್ನಿ ಗ್ರಾಮದ ಯುವಕವಿ.
ಯುವಕವಿ ಶಿವಶಂಕರ ಕಡದಿನ್ನಿ ಅವರು “ಮಳೆಬಿಲ್ಲು” ಎಂಬ ಚೊಚ್ಚಲ ಕವನ ಸಂಕಲನವನ್ನು ಪ್ರಕಟಿಸುವುದರ ಮೂಲಕ ಕನ್ನಡ ಸಾಹಿತ್ಯ ಲೋಕದೊಳಗೆ ಪಾದರ್ಪಣೆ ಮಾಡಿದ್ದಾರೆ, ಯುವಕವಿ “ವಿದ್ಯಾರ್ಥಿಯಾಗಿ ಓದುವಾಗ ಸನ್ನಿವೇಶಕ್ಕೆ ಹೊಳೆದ ವಿಚಾರ, ಭವಾನೆಗಳಿಗೆ ಅಕ್ಷರ ರೂಪ ಕೊಟ್ಟಿದ್ದೆನೆಂದು” ಕವಿನುಡಿಯಲ್ಲಿ ತಾನೇ ಹೇಳಿಕೊಂಡಿದ್ದಾನೆ.
ಮಳೆಬಿಲ್ಲು ಸಂಕಲನವನ್ನು ಪೂರ್ಣ ಓದಿದಾಗ ನಮಗೂ ಕವಿತೆಗಳಲ್ಲಿ ಆಯಾ ಸನ್ನಿವೇಶದಲ್ಲಿ ಕಂಡುಬಂದ ದೋರಣೆಗಳಿಗೆ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾನೆ, ಸಮಾಜದ ಸಮಸ್ಯೆಗಳಿಗೆ ತುರ್ತು/ತೊರಿತ ಪ್ರತಿಕ್ರೀಯೆ ನೀಡಿರುವ ಪದ್ಯಗಳು ಸಂಕಲದಲ್ಲಿವೆ.
ಮಳೆಬಿಲ್ಲು ಪುಸ್ತಕದಲ್ಲಿ ಭವಿಷ್ಯಕ್ಕಾಗಿ ತುಡಿತ, ತಲ್ಲಣಗಳ ಸಾಲುಗಳಿವೆ, ಸಮಾಜದ ಸಮಸ್ಯೆಗಳಿಗೆ ಪರಿಹಾರದ ಕೂಗು ಇದೆ. ಪರಿಸರದ ಜಾಗೃತಿಯ ಕಾಳಜಿ ಇದೆ, ನಾಡು ನುಡಿಯ ಬಗ್ಗೆ ಅಭಿಮಾನದ ಚಿಲುಮೆ ಇದೆ, ಮಾನವನ ಸಂಬಂಧಗಳ ಸಾರವಿದೆ, ಸಾಮಾಜಿಕ ಚಿಂತನೆಗಳಿಗೆ ಧ್ವನಿ ಎತ್ತಿದ ಒಡಲ ಕಿಚ್ಚಿನಂತ ಕವಿತೆಗಳು ಪ್ರತಿಬಿಂಬಗಳಾಗಿವೆ.
ಯುವಕವಿ ಶಿವಶಂಕರ ಕಡದಿನ್ನಿ ರವರ “ಮಳೆಬಿಲ್ಲು” ಸಂಕಲನಕ್ಕೆ ಮುನ್ನುಡಿ ಬರೆದ ರಾಯಚೂರಿನ ಹಿರಿಯ ಸಾಹಿತಿಗಳಾದ ಶ್ರೀ ವೀರಹನುಮಾನ ಸರ್ ಅವರು “ಕವಿಯ ಸುತ್ತಲಿನ ಸಾಮಾಜಿಕ ಜೀವನದ ಮೌಲ್ಲಗಳು ಎತ್ತಿ ಹಿಡಿಯುವ ಭರವಸೆಯ ಕವಿಯಾಗುವುದರಲ್ಲಿ ನಂಬಿಕೆ” ಇದೆಂದು ಹಾರೈಸಿದ್ದಾರೆ. ಅದೇ ರೀತಿಯಲ್ಲಿ ಕೃತಿಯ ಕತೃವಿಗೆ ಮಾರ್ಗದರ್ಶಕರಾಗಿ,ಬೆನ್ನುಡಿಯ ಮಾತುಗಳ ಮೂಲಕ ಬೆನ್ನನ ತಟ್ಟಿ “ಸುತ್ತಲಿನ ವಿಧ್ಯಮಾನಗಳೆಡೆ ಕಣ್ಣಾಯಿಸಿ ಸ್ಪಂಧಿಸಿದರೆ ಕವಿ ಕಡದಿನ್ನಿಯವರಿಗೆ ಉತ್ತಮ ಭವಿಷ್ಯವಿದೆಂದು” ಆಶಯ ವ್ಯಕ್ತವಾಗಿದೆ. ಹಳ್ಳಿಯ ಸೊಗಡಿನ ರಾಶಿ ಮಾಡುವ ಸುಂದರ ಮುಖ ಪುಟ.
ಸಂಕಲನದಲ್ಲಿ ೪೮ ಕವಿತೆಗಳಿಂದ ಕೂಡಿದ ಮಳೆಬಿಲ್ಲು ಬಣ್ಣದ ಭಾವನೆಗಳ ಗುಚ್ಚ. ಸಂಕಲನದಲ್ಲಿ ತುಂಬಾ ಅರ್ಥಗರ್ಬಿತವಾಗಿ ಗುರುವಿನ ಮಹತ್ವವನ್ನು ‘ಗುರು’ ಕವಿತೆಯಲ್ಲಿ…
“ಗುರು ಇಲ್ಲದ ಮನೆಯು
ಆತ್ಮವು ಇಲ್ಲದ ದೇಹದಂತೆ”
–ಒಬ್ಬ ವ್ಯಕ್ತಿಯು ಯಶಸ್ವಿಯ ಹಾದಿ ಸಾಧಿಸಿದ್ದಾನೆಂದರೆ ಅವನಿಗೆ ಗುರುವಿನ ಮಾರ್ಗದರ್ಶನವಿದೆಂರ್ಥ. ಗುರುವಿಲ್ಲದೇ ಇರುವ ವ್ಯಕ್ತಿ/ಮನೆ ಅದು ಉಸಿರು/ಆತ್ಮ ಇಲ್ಲದ ಪಂಜರದಂತೆ, ಜೀವನವು ಸುಗಮವಾಗಿ ಸಾಗಲು ಗುರುವು ಅಗತ್ಯವಾಗಿ ಬೇಕು, ಗುರುವಿನ ಆಸರೆ ಅಗತ್ಯವೆಂದು ಈ ಕವಿತೆಯಲ್ಲಿ ತಿಳಿಯಬಹುದು.
ಶಿವಶಂಕರ ಅವರು “ಚಿಗುರು ಎಲೆ” ಎನ್ನುವ ಕವಿತೆಯಲ್ಲಿ ಅರಣ್ಯ ರಕ್ಷಣೆ ಬಗ್ಗೆ ಮಾರ್ಮಿಕವಾಗಿ ಹೇಳುತ್ತಾರೆ,
“ಚಿಲುಮೆ ಚಿಗುರುತ್ತಿದೆ ಎಲೆಯ
ಚೂಟಾದೆ ಇರಿ ಪರ ಜನರೆ|
ಚಿಗುರುತ್ತಿರುವ ಎಲೆಯ ಮೇಲೆ
ತುಸು ನೀರು ಎರೆದು ಬೆಳೆಸಿ”
— ಎಂದು ಕವಿ ಪ್ರಕೃತಿ ರಕ್ಷಣೆ ಬಗ್ಗೆ ಕಾಳಜಿ ತೋರಿದ್ದಾರೆ, ಇದೀಗ ಕಾಡೆಲ್ಲ ಕಡಿದು ಕಾಂಕ್ರೇಟ್ ಕಟ್ಟಡಗಳ ಎತ್ತೆಚ್ಚವಾಗಿ ಹುಟ್ಟಿಕೊಂಡು ಗಿಡಮರಗಳ ನಾಶವಾಗುವುದನ್ನು ಮನಗೊಂಡು ಕವಿ ಶಿವಶಂಕರ ಕಡದಿನ್ನಿ ದುಃಖ ವ್ಯಕ್ತಪಡಿಸಿ, ಪರಿಸರ ರಕ್ಷಣೆಗೆ ಧ್ವನಿ ಗೂಡಿಸಿದ್ದಾರೆ.
ಭೂಮಿ ತಾಯಿಯನ್ನು ನಂಬಿ ಜೀವನದೂಡುವ ರೈತನ ಬದುಕು ಮಳೆಯೊಂದಿಗೆ ಆಡುವ ಜೂಜಾಟವಾಗಿರುವುದನ್ನು ಕವಿ ಮಳೆರಾಯನಲ್ಲಿ ತನ್ನ ಧ್ವನಿಯಾಗಿಸಿದ್ದಾನೆ. “ಕೃಪೆ ತೋರು ವರುಣ” ಕವಿತೆಯಲ್ಲಿ ಹೇಳುತ್ತಾನೆ–
“ಕೃಪೆ ತೋರು ವರುಣ ನಮ್ಮಲ್ಲಿ
ಜಪಿಸ್ಯಾರ ದೇವರ ಮಂದಿರದಲ್ಲಿ
ಮಡಿಸ್ನಾನ ಮಾಡ್ಯಾರ ಎಳೆ ಮಕ್ಕಳಲ್ಲಿ
ಸಪ್ತ ಭಜನದ ಸಂಗೀತ ನಾದದಲ್ಲಿ”
-ರೈತರು ವರುಣನ ನಂಬಿ ಜಮೀನಿನಲ್ಲಿ ಬೀಜ ಸುರಿದು ಕುಳಿತಾಗ, ಮಳೆ ಬಾರದೇ ಇದ್ದಾಗ ಮುಗ್ಧ ಜನತೆ ದೇವ ಮಂದಿರದಲ್ಲಿ ಮಡಿ ಸ್ನಾನಗೈದು, ಎಳೆ ಮಕ್ಕಳು ಸಪ್ತ ಭಜನೆ ಕ್ಷಣ ಬಿಡದೇ ಒಂದೇ ನಾದದಲ್ಲಿ ತಪ ಮಾಡಿ ವರುಣನನ್ನು ಬೇಡುತ್ತಿರುವುದನ್ನು ಕವಿ ಹೇಳುತ್ತಿದ್ದಾನೆ.
ಮತ್ತೊಂದು ಕಡೆ ಕವಿ ಸಾಮಾಜಿಕ ಕಳಕಳಿಯನ್ನು ಬಿಂಬಿಸಿದ್ದಾರೆ, ಹೆಣ್ಣಿನ ಮಹತ್ವ ಸಾರಿದ್ದಾರೆ, ಹೆಣ್ಣು ಶಿಶುವೆಂದು ಭ್ರೂಣ ಪತ್ತೆ ಮಾಡಿ, ಜಗವ ಕಾಣುವ ಮುಂಚೆ ಭ್ರೂಣದೊಳಗೆ ಚೂಟಿ ಹಾಕುವ ಜನತೆಗೆ ಚಾಟಿ ಬೀಸಿದ್ದಾರೆ, “ಹೆಣ್ಣು” ಕವಿತೆಯಲ್ಲಿ –
“ಹೆಣ್ಣು ಮನಿಗೆ ಕಣ್ಣು
ಸೃಷ್ಠಿ ಪ್ರತಿಸೃಷ್ಠಿಗೆ ಹೆಣ್ಣು
ಮನೆಗೆ ಆಧಾರವಾಗಿರುವಳು
ಮುನಿದರೆ ಮಾರಿಯಾಗಿರುವಳು
ಬದುಕಿಗೆ ಬೆಳಕು ಆದವಳು
ಸಂಬಂಧಗಳು ಬೆಳೆಸುವವಳು
ಹಾಲು ಜೇನಿನಂತೆ ಇವಳು”
–ಈ ಕವಿತೆಯಲ್ಲಿ ಹೆಣ್ಣಿನಿಂದಲೆ ಜಗವು, ಸೃಷ್ಠಿ, ಬದುಕು, ಸಂಬಂಧ , ಎಲ್ಲಾ ಅವಳೆ ಮಾಯೆ ಎಂಬ ಸತ್ಯದ ಮಾತನ್ನು ಕವಿ ಶಿವಶಂಕರ ಹೇಳಿದ್ದಾರೆ.
ಮತ್ತೊಂದು ಕವಿತೆಯಲ್ಲಿ ಕವಿ ಕಡದಿನ್ನಿಯವರಿಗೆ ವರಕವಿ ಬೇಂದ್ರೆ ರಚನೆಯ “ಕುರುಡು ಕಾಂಚಾಣ ಕುಣಿಯುತ್ತಲಿತ್ತು…’ ಕವಿತೆ ಪ್ರಭಾವ ಬೀರಿದಂತೆ ಇದೆ, ಆ ಪದ್ಯ –
“ಕುರುಡು ಕಾಂಚಾಣ…
ಕುಣಿಯುತ್ತಲಿತ್ತು….
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು…”
ಇದೇ ದಾಟಿಯಲ್ಲಿಯೇ “ಜೋಕುಮಾರ” ಕವಿತೆ ರಚಿಸಿದ್ದಾರೆ ನಮ್ಮ ಕವಿ,
“ಬಂದವಾನೆ ಜೋಕುಮಾರ
ತಲೆಮ್ಯಾಲೆ ಬೇವು ಎಲೆ
ಕೊರಳಾಗ ಹಸಿರ ಸರಮಾಲೆ
ಧರೆಗೆ ಇಳಿದು ಹಸಿರು
ಮೂಡಿಸ್ಯಾನ ಜೋಕುಮಾರ”
– ಎಂಬ ಕವಿತೆಯಲ್ಲಿ ಅರ್ಥಪೂರ್ಣ ಸಾಲುಗಳಿಂದ ಮನಸೆಳೆಯುವ ಕವಿ ಶಿವಶಂಕರ ಕಡದಿನ್ನಿ ರವರು ಗ್ರಾಮೀಣ ಪ್ರದೇಶದಲ್ಲಿ ಕಣ್ಣಾರೆ ಕಂಡು ಅನುಭವಿಸಿದ್ದನ್ನು ಈ ಕವಿತೆಯಲ್ಲಿ ಜೋಕುಮಾರನು ತಲೆಮ್ಯಾಲೆ ಬೇವುನ ಎಲೆ ಹೊತ್ತು, ಕೊರಳಿನಲ್ಲಿ ಹಸಿರು ಮಣಿಗಳಿಂದ ಪೋಣಿಸಿದ ಸರ ಹಾಕಿಕೊಂಡು ಮನೆ-ಮನೆಗೆ ಹೊತ್ತು ತಿರುಗುವ ಜೋಕುಮಾರನ ಭಕ್ತಿಗೆ ಆಗ ವರುಣ ದೇವನು ಧರೆಗೆ ನೀರುಣಿಸಿ ಭೂಮಿ ಮ್ಯಾಲೆ ಹಸಿರು ಮೂಡಿಸ್ಯಾನ, ರೈತರೆಲ್ಲರ ಮನಸ್ಸು ಸಂತದಲ್ಲಿ ತೇಲಾಡುತ್ತವಾ, ಆದಕೆ ಜೋಕುಮಾರ ಬಂದವನೆ ದವಸಕ್ಕಿ ನೀಡ್ರವ್ವ ಎಂದು ಬೇಡುವ ಪದ್ಧತಿಯನ್ನು ಕಣ್ಣಾರೆ ಕಂಡು ಅಕ್ಷರ ರೂಪ ನೀಡಿದ್ದಾರೆ.
“ಬತ್ತಿದ ಜೀವ ಮಣ್ಣಲಿ”, “ಅಮ್ಮನ ನೆನಪು” ಈ ಕವಿತೆಗಳು ಆಪ್ತವೆನಿಸುತ್ತವೆ, ಸಂಕಲನದಲ್ಲಿ ನಾಡು-ನುಡಿ,ಯುವಶಕ್ತಿ, ಗುರುಭಕ್ತಿ, ಹೆಣ್ಣು, ತಾಯಿ-ಮಗಳು, ಪ್ರಕೃತಿ, ವಿದ್ಯಾರ್ಥಿ, ಜೀವನ, ಪ್ರೀತಿಪ್ರೇಮ, ಮಳೆ, ಗಾಳಿಪಟ, ಬುಗುರಿ, ಮತ್ತು ಚಿಟ್ಟೆ ಮುಂತಾದ ಕವನಗಳು ಓದಿಸಿಕೊಂಡು ಹೋಗದೇ, ಕೆಲಕ್ಷಣ ಯೋಚಿಸುವಂತೆ ಮಾಡುತ್ತಾವೆ,ಸಂಕಲನದಲ್ಲಿ ಇನ್ನೂ ಗಂಭೀರ ಅನಿಸುವ, ಗಟ್ಟಿ ಕವಿತೆಗಳು ಕವಿ ಕಟ್ಟಬಹುದಿತ್ತು, ಆ ಬಗ್ಗೆ ಮುಂದಿನ ಕೃತಿಯಲ್ಲಿ ಗಟ್ಟಟಿ ತನ ಮೂಡಿ ಬರಲಿ.
ಹಿರಿಯ ಸಾಹಿತಿಗಳು ದಸ್ತಗಿರಿ ಸಾಬ್ ದಿನ್ನಿ ಸರ್ ಹೇಳುವಂತೆ -“ಕಾವ್ಯ ಪರಂಪರೆಯನ್ನು ಓದುವ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುವ ರೂಪಕಗಳು ತಳುಕು ಹಾಕಬೇಕಾಗಿದೆಂದು ಹೇಳಿದ್ದಾರೆ.” ಕವಿ ಶಿವಶಂಕರ ಕಡದಿನ್ನಿ ರವರು ಮುಂದಿನ ಕೃತಿಯಲ್ಲಿ ಬಲಗೊಂಡ ಗಟ್ಟಿ ಸಾಹಿತ್ಯದೊಂದಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಬರಲೆಂದು ಸದಾಶಯದೊಂದಿಗೆ….
— ಯಲ್ಲಪ್ಪ ಎಮ್ ಮರ್ಚೇಡ್
ಧನ್ಯವಾದಗಳು ಸಾರ್
ಶಿವಶಂಕರ ಕಡದಿನ್ನಿ…..